ಟ್ವಿಟರ್ ಸ್ಟೇಟ್ | ಮೋದಿ ಸರ್ಕಾರಕ್ಕೆ ಹೊಸ ತಲೆನೋವು ತಂದ ಐಎಲ್‌ & ಎಫ್‌ಎಸ್‌

ಐಎಲ್‌ & ಎಫ್‌ಎಸ್‌ ಸಮೂಹವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಮುಂಬೈನ ನ್ಯಾಷನಲ್ ಕಂಪನಿ ಲಾ ಟ್ರಿಬ್ಯುನಲ್ ವಾಣಿಜ್ಯ ವ್ಯವಹಾರಗಳ ಸಚಿವಾಲಯಕ್ಕೆ ಅವಕಾಶ ನೀಡಿದೆ. ಈ ತ್ವರಿತ ನಡೆಯ ಹಿನ್ನೆಲೆಯಲ್ಲಿಯೇ, ಹಳೇ ಐಎಲ್‌ & ಎಫ್‌ಎಸ್‌ ನಿರ್ದೇಶಕ ಮಂಡಳಿ ಸಂಪೂರ್ಣ ಬದಲಾಗಿದೆ

ಲೆಹ್ಮನ್ ಬ್ರದರ್ಸ್ ಸಂಸ್ಥೆ ಕುಸಿದು ಜಾಗತಿಕ ಮಾರುಕಟ್ಟೆಗಳಲ್ಲಿ ಬಿಕ್ಕಟ್ಟು ಕಾಣಿಸಿಕೊಂಡು ಸುಮಾರು ಹತ್ತು ವರ್ಷಗಳೇ ಸಂದಿವೆ. ಈ ಸಂದರ್ಭದಲ್ಲಿ ಭಾರತದ ಪ್ರಮುಖ ಇನ್‌ಫ್ರಾಸ್ಟ್ರಕ್ಚರ್ ಲೀಸಿಂಗ್ ಆಂಡ್ ಫೈನಾನ್ಷಿಯಲ್ ಸರ್ವಿಸಸ್‌ (ಮೂಲಸೌಕರ್ಯಕ್ಕಾಗಿ ಹಣಕಾಸು ಒದಗಿಸುವ ಸಂಸ್ಥೆ) ಐಎಲ್‌ & ಎಫ್‌ಎಸ್‌ ಸುಸ್ತಿದಾರನಾಗಿ ಸಾಲ ನೀಡಿದವರಿಗೆ ಪಾವತಿ ಮಾಡದೆ ಇರುವುದು ಮಾರುಕಟ್ಟೆಯಲ್ಲಿ ಆತಂಕವನ್ನು ಸೃಷ್ಟಿಸಿದೆ. ಹಲವರು ಈ ಬಿಕ್ಕಟ್ಟನ್ನು ಲೆಹ್ಮನ್ ಬ್ರದರ್ಸ್ ಮಾದರಿಯ ಬಿಕ್ಕಟ್ಟು ಎಂದು ವಿಶ್ಲೇಷಿಸುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಉದ್ಯಮ ವಲಯಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲೂ ಇದೇ ವಿಚಾರ ಚರ್ಚೆಯಾಗುತ್ತಿದೆ.

ಸೋಮವಾರ ಈ ವಿಚಾರದಲ್ಲಿ ನಡೆದ ಹೊಸ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರವು ಐಎಲ್‌ & ಎಫ್‌ಎಸ್‌ ಸಂಸ್ಥೆಯ ನಿಯಂತ್ರಣವನ್ನು ತನ್ನ ಕೈಗೆ ತೆಗೆದುಕೊಳ್ಳಲು ಪ್ರಯತ್ನಿಸಿದೆ. ಐಎಲ್‌ & ಎಫ್‌ಎಸ್‌ ಸಮೂಹವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಮುಂಬೈನ ನ್ಯಾಷನಲ್ ಕಂಪನಿ ಲಾ ಟ್ರಿಬ್ಯುನಲ್ (ರಾಷ್ಟ್ರೀಯ ಕಂಪನಿಗಳ ಕಾನೂನು ಮಂಡಳಿ) ವಾಣಿಜ್ಯ ವ್ಯವಹಾರಗಳ ಸಚಿವಾಲಯಕ್ಕೆ ಅವಕಾಶ ನೀಡಿದೆ. ಈ ತ್ವರಿತ ನಡೆಯ ಹಿನ್ನೆಲೆಯಲ್ಲಿಯೇ, ಹಳೇ ಐಎಲ್‌ & ಎಫ್‌ಎಸ್‌ ನಿರ್ದೇಶಕ ಮಂಡಳಿಯನ್ನು ಸಂಪೂರ್ಣವಾಗಿ ಬದಲಿಸಲಾಗಿದೆ. ಆರು ಸದಸ್ಯರ ಹೊಸ ಮಂಡಳಿ ರಚನೆಯಾಗಿದೆ. ಕೋಟಕ್ ಮಹೀಂದ್ರ ಬ್ಯಾಂಕ್ ನಿರ್ದೇಶಕ ಉದಯ್ ಕೋಟಕ್, ಮಾಜಿ ಐಎಎಸ್ ಅಧಿಕಾರಿ ಮತ್ತು ಟೆಕ್ ಮಹೀಂದ್ರ ಮುಖ್ಯಸ್ಥ ವಿನೀತ್ ನಯ್ಯರ್, ಮಾಜಿ ಸೆಬಿ ಮುಖ್ಯಸ್ಥ ಜಿ ಎನ್ ಬಾಜಪೇಯಿ, ಮಾಜಿ ಐಸಿಐಸಿಐ ಬ್ಯಾಂಕ್ ಅಧ್ಯಕ್ಷ ಜಿ ಸಿ ಚತುರ್ವೇದಿ, ಮಾಜಿ ಐಎಎಸ್ ಅಧಿಕಾರಿಗಳಾದ ಮಾಲಿನಿ ಶಂಕರ್ ಮತ್ತು ನಂದ ಕಿಶೋರ್ ಈ ಹೊಸ ಮಂಡಳಿಯಲ್ಲಿದ್ದಾರೆ.

ಇದನ್ನೂ ಓದಿ : ಪೇಟೆಯಲ್ಲಿ ತಲ್ಲಣ ಮೂಡಿಸಿರುವ ಐಎಲ್ & ಎಫ್ಎಸ್ ಬಿಕ್ಕಟ್ಟಿಗೆ ಕಾರಣಗಳೇನು?

ಈಗಾಗಲೇ ದೇಶದ ಅರ್ಥವ್ಯವಸ್ಥೆಯನ್ನು ಸೂಕ್ತವಾಗಿ ನಿಭಾಯಿಸಿಲ್ಲ ಎನ್ನುವ ಆರೋಪ ಕೇಂದ್ರ ಸರ್ಕಾರದ ಮೇಲಿದೆ. ಹಲವು ಇಚ್ಛಾವರ್ತಿ ಸುಸ್ತಿದಾರರು ದೇಶ ಬಿಟ್ಟು ಪಲಾಯನ ಮಾಡಿರುವುದು, ಬ್ಯಾಂಕ್‌ಗಳಲ್ಲಿ ಎನ್‌ಪಿಎ ಪ್ರಮಾಣ ಏರಿರುವುದು, ನೋಟು ಅಮಾನ್ಯದಿಂದಾದ ಆರ್ಥಿಕ ಸಮಸ್ಯೆಗಳು, ಸರಕು ಮತ್ತು ಸೇವಾ ತೆರಿಗೆಯ ಅನುಷ್ಠಾನದ ಸಮಸ್ಯೆಗಳಿಂದಾಗಿ ದೇಶದ ಅರ್ಥವ್ಯವಸ್ಥೆಯ ಅಚ್ಚುಕಟ್ಟುತನವನ್ನು ಮೋದಿ ಸರ್ಕಾರ ಹಾಳುಗೆಡವಿರುವ ಆರೋಪವನ್ನು ವಿರೋಧಪಕ್ಷಗಳು ಮಾಡುತ್ತಿವೆ. ಹೀಗಾಗಿ, ವಿರೋಧ ಪಕ್ಷಗಳಿಗೆ ಕೇಂದ್ರ ಸರ್ಕಾರವನ್ನು ಟೀಕಿಸಲು ಐಎಲ್‌ & ಎಫ್‌ಎಸ್‌ ಪ್ರಕರಣ ಬಹುದೊಡ್ಡ ಅಸ್ತ್ರದಂತಾಗಿದೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ವಿಟರ್ ಮೂಲಕ ಈ ವಿಚಾರದಲ್ಲಿ ಮೋದಿ ಸರ್ಕಾರವನ್ನು ಟೀಕಿಸಿದ್ದಾರೆ. “ಕೇಂದ್ರ ಸರ್ಕಾರವು ನಿಯಮಗಳನ್ನು ಸಡಿಲಿಸಿ ಜೀವ ವಿಮಾ ಸಂಸ್ಥೆಯಲ್ಲಿ (ಎಲ್‌ಐಸಿ) ಜನರು ಕಷ್ಟಪಟ್ಟು ಕೂಡಿಟ್ಟ ಹಣವನ್ನು ಬಳಸಿಕೊಳ್ಳಲು ಅವಕಾಶ ನೀಡುತ್ತಿದೆ,” ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಈ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿಯವರು ‘ಹಣಕಾಸು ಹಗರಣಪ್ರಿಯರು’ ಎನ್ನುವ ನೇರ ಆರೋಪ ಹೊರಿಸಿರುವ ರಾಹುಲ್, “ಪ್ರಧಾನಿ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಐಎಲ್‌ & ಎಫ್‌ಎಸ್‌ಗೆ ೨೦೦೭ರಲ್ಲಿ ೭೦,೦೦೦ ಕೋಟಿ ರು. ಯೋಜನೆ ಕೊಟ್ಟಿದ್ದರು. ಈಗ ೯೧,೦೦೦ ಕೋಟಿ ರು. ಸುಸ್ತಿಸಾಲದಿಂದ ಸಂಸ್ಥೆಯನ್ನು ಪಾರು ಮಾಡಲು ನೆರವಾಗುತ್ತಿದ್ದಾರೆ,” ಎಂದು ಟ್ವೀಟ್ ಮಾಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಅವರ ಟ್ವೀಟ್‌ ದಾಳಿಗೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಸರಣಿ ಟ್ವೀಟ್‌ಗಳ ಮೂಲಕ ಉತ್ತರಿಸಿದ್ದಾರೆ. “ಹಣಕಾಸು ಸಂಸ್ಥೆಗಳು ಯಾವುದೇ ಕಂಪನಿಯಲ್ಲಿ ಹೂಡಿಕೆ ಮಾಡುವುದು ರಾಹುಲ್ ಗಾಂಧಿ ಪ್ರಕಾರ ಹಗರಣ. ೧೯೮೭ರಲ್ಲಿ ಐಎಲ್‌ & ಎಫ್‌ಎಸ್‌ ಅನ್ನು ಶೇ.೫೦.೫ರಷ್ಟು ಷೇರುಗಳಿರುವ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಶೇ.೩೦.೫ ಷೇರುಗಳಿರುವ ಯುಟಿಐ ಜೊತೆಗೆ ಪ್ರೋತ್ಸಾಹಿಸಿದಾಗ ಹಗರಣವಾಗಿತ್ತೇ? ೨೦೦೫ರಲ್ಲಿ ಎಲ್‌ಐಸಿ ಸಂಸ್ಥೆಯು ಐಎಲ್‌ & ಎಫ್‌ಎಸ್‌ ಸಮೂಹದ ಶೇ.೧೫ರಷ್ಟು ಷೇರುಗಳನ್ನು ಪಡೆದದ್ದು ಮತ್ತು ೨೦೦೬ರ ಮಾರ್ಚ್‌ನಲ್ಲಿ ಶೇ.೧೧.೧೦ರಷ್ಟು ಷೇರುಗಳನ್ನು ಪಡೆದಿರುವುದು ಹಗರಣವೇ?” ಎಂದು ಟ್ವೀಟ್‌ಗಳ ಮೂಲಕ ಅರುಣ್ ಜೇಟ್ಲಿ ಪ್ರಶ್ನಿಸಿದ್ದಾರೆ. ಕೇಂದ್ರ ಸರ್ಕಾರ ಈ ಬಿಕ್ಕಟ್ಟನ್ನು ಸೂಕ್ತವಾಗಿ ನಿಭಾಯಿಸುತ್ತಿದೆ ಎಂದು ಸಮರ್ಥಿಸಿಕೊಂಡಿರುವ ಅರುಣ್ ಜೇಟ್ಲಿ, ಆರ್ಥಿಕ ಸಮಸ್ಯೆಗಳೆಲ್ಲವೂ ಯುಪಿಎ ಅವಧಿಯಲ್ಲಿ ಸೃಷ್ಟಿಯಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಈ ವಿಚಾರವಾಗಿ ಕಾಂಗ್ರೆಸ್ ನಾಯಕರು ಮತ್ತು ಕಾಂಗ್ರೆಸ್ಸೇತರ ನಾಯಕರು ಟ್ವಿಟರ್ ಮೂಲಕ ಕೇಂದ್ರ ಸರ್ಕಾರದ ಆರ್ಥಿಕ ನಿರ್ವಹಣೆಯನ್ನು ಟೀಕಿಸಿದ್ದಾರೆ. “ಲಾಭಗಳನ್ನು ಖಾಸಗೀಕರಣಗೊಳಿಸುವುದು ಮತ್ತು ನಷ್ಟಗಳನ್ನು ರಾಷ್ಟ್ರೀಕರಣಗೊಳಿಸುವುದು ನರೇಂದ್ರ ಮೋದಿಯವರ ಮಂತ್ರ. ಈ ನಡುವೆ, ಬಡವರ ಸಂಕಷ್ಟವನ್ನು ಕೇಳುವವರೇ ಇಲ್ಲ,” ಎಂದು ಸಿಪಿಐ(ಎಂ) ಮುಖಂಡ ಸೀತಾರಾಂ ಯೆಚೂರಿ ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸ್ ಮುಖಂಡ ಮನೀಷ್ ತಿವಾರಿ ಅವರು ಸರಣಿ ಟ್ವೀಟ್‌ಗಳ ಮೂಲಕ ಐಎಲ್‌ & ಎಫ್‌ಎಸ್‌ ಹಣದ ಹಂಚಿಕೆ ವಿಚಾರದಲ್ಲಿ ಶಿಸ್ತು ನಿರ್ವಹಿಸಿಲ್ಲ ಎನ್ನುವುದಕ್ಕೆ ಪುರಾವೆಗಳನ್ನು ನೀಡಿದ್ದಾರೆ. “ಸರ್ಕಾರದ ಉಳಿತಾಯ ವ್ಯವಸ್ಥೆ ಆತಂಕವನ್ನು ಎದುರಿಸುತ್ತಿರುವುದಕ್ಕೆ ಯಾರು ಹೊಣೆ? ಈಗ ಸಂಸ್ಥೆಯನ್ನು ಸರ್ಕಾರ ಸ್ವಾಧೀನ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಇದು ಸ್ವಾಧೀನವೇ ಅಥವಾ ಮುಚ್ಚಿಡುವ ಪ್ರಯತ್ನವೇ?” ಎಂದು ಮನೀಷ್ ತಿವಾರಿ ಪ್ರಶ್ನಿಸಿದ್ದಾರೆ.

ನಾನ್ ಎಕ್ಸಿಕ್ಯೂಟಿವ್ ನಿರ್ದೇಶಕರಾಗಿರುವ ಉದಯ್ ಕೋಟಕ್ ಐಎಲ್‌ & ಎಫ್‌ಎಸ್‌ನ ಹೊಸ ನಿರ್ದೇಶಕ ಮಂಡಳಿಯ ಅಧ್ಯಕ್ಷರು. ಹೂಡಿಕೆದಾರರು ಈ ಹೊಸ ಬದಲಾವಣೆಗಳಿಂದ ಸಂಸ್ಥೆ ಚೇತರಿಸಿಕೊಳ್ಳುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ ಅವರು. ಆದರೆ, ಕೆಲವು ಟ್ವೀಟಿಗರು ಸರ್ಕಾರ ಬಹಳ ತಡವಾಗಿ ಕ್ರಮ ಕೈಗೊಂಡಿರುವುದನ್ನೂ ಟೀಕಿಸಿದ್ದಾರೆ. ಕೇಂದ್ರ ಸರ್ಕಾರ ಸದ್ಯದ ಮಟ್ಟಿಗೆ ಬಿಕ್ಕಟ್ಟನ್ನು ನಿಭಾಯಿಸಿ ವಿವಾದವನ್ನು ತಣ್ಣಗಾಗಿಸಿದೆ.

ಈ ನಡುವೆ, ಬಹಳಷ್ಟು ಟ್ವೀಟಿಗರು ಐಎಲ್‌ & ಎಫ್‌ಎಸ್‌ ಸುಸ್ತಿದಾರನಾಗಿ ಬದಲಾಗಿರುವುದನ್ನು ೨೦೦೯ರ ಸತ್ಯಂ ಹಗರಣಕ್ಕೆ ಹೋಲಿಸುತ್ತಿದ್ದಾರೆ. “೨೦೦೯ರಲ್ಲಿ ಸತ್ಯಂ ಹಗರಣದಲ್ಲಿ ೫೦,೦೦೦ ಮಂದಿ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದರು. ಆದರೆ, ಆ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಸತ್ಯಂ ಕಂಪನಿಯನ್ನು ಖರೀದಿಸಲು ವ್ಯವಸ್ಥೆ ಮಾಡಿ ತೆರಿಗೆದಾರರ ಹಣವನ್ನು ಬಳಸದೆ ಸಮಸ್ಯೆಯನ್ನು ಇತ್ಯರ್ಥಗೊಳಿಸಿತ್ತು. ಆದರೆ, ಮೋದಿ ಸರ್ಕಾರ ಐಎಲ್‌ & ಎಫ್‌ಎಸ್‌ ಉಳಿಸಲು ಎಲ್‌ಐಸಿ ಅಥವಾ ಒಎನ್‌ಜಿಸಿ ಮಾದರಿಯ ರಕ್ಷಣೆಯ ದಾರಿ ಹುಡುಕುತ್ತಿದೆ,” ಎಂದು ನ್ಯಾಯವಾದಿ ಸಿದ್ ಟ್ವೀಟ್ ಮಾಡಿದ್ದಾರೆ.

ಚಿತ್ರ: ಉದಯ್ ಕೋಟಕ್‌

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More