ಟ್ವಿಟರ್ ಸ್ಟೇಟ್ | ವಿಶ್ವ ಅಹಿಂಸಾ ದಿನದಂದೇ ರೈತರತ್ತ ಗುಂಡು ಹಾರಿಸಿದ ಸರ್ಕಾರ, ಆಕ್ರೋಶ

ರೈತರನ್ನು ತಡೆಯಲು ಪೊಲೀಸರು ಜಲಫಿರಂಗಿ ಮತ್ತು ಅಶ್ರುವಾಯುಗಳನ್ನು ಬಳಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಚರ್ಚೆಯಾಗಿದೆ. ಗಾಂಧಿ ಜಯಂತಿಯಂದು ವಿಶ್ವ ಅಹಿಂಸಾ ದಿನ ಆಚರಿಸುತ್ತಿರುವಾಗ ರೈತರ ಮೇಲೆ ಗುಂಡು ಹೊಡೆದಿರುವ ಸರ್ಕಾರ ಟೀಕೆಗೆ ಗುರಿಯಾಗಿದೆ

ರಾಷ್ಟ್ರದ ರಾಜಧಾನಿ ದೆಹಲಿಯ ಕಡೆಗೆ ‘ಕಿಸಾನ್ ಕ್ರಾಂತಿ ಯಾತ್ರೆ’ ಪ್ರತಿಭಟನಾ ಮೆರವಣಿಗೆ ಹೊರಟಿದ್ದ ರೈತರ ಮೇಲೆ ಪೊಲೀಸರ ಬಲಪ್ರಯೋಗಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ. ಕೇಂದ್ರ ಸರ್ಕಾರ ರೈತರ ಬೇಡಿಕೆಗಳನ್ನು ಆಲಿಸಿದರೂ ಸ್ಪಷ್ಟವಾದ ಭರವಸೆ ನೀಡಲು ವಿಫಲವಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ರೈತರಿಗೆ ಹಲವು ಭರವಸೆಗಳನ್ನು ಕೊಟ್ಟ ಬಿಜೆಪಿ, ಅಧಿಕಾರಕ್ಕೆ ಬಂದು ನಾಲ್ಕು ವರ್ಷ ಕಳೆದರೂ ಈಡೇರಿಸಿಲ್ಲ ಎನ್ನುವ ಆಕ್ರೋಶ ರೈತರಲ್ಲಿದೆ. ಈ ಬಾರಿ ಮುಖ್ಯವಾಗಿ ಬೆಳೆಗಳಿಗೆ ಉತ್ತಮ ಬೆಲೆ, ಸಾಲ ಮನ್ನಾಗಳ ಬೇಡಿಕೆಗಳನ್ನು ರೈತರು ಸರ್ಕಾರದ ಮುಂದಿಟ್ಟಿದ್ದಾರೆ. “ಕೇಂದ್ರ ಸರ್ಕಾರ ಕೆಲವು ಬೇಡಿಕೆಗಳನ್ನು ಈಡೇರಿಸುವ ವಿಚಾರವಾಗಿ ನೀಡಿದ ಭರವಸೆಗಳನ್ನು ಸ್ವೀಕರಿಸಲು ಸಾಧ್ಯವಿಲ್ಲ. ನಾವು ಪ್ರತಿಭಟನೆಯನ್ನು ಮುಂದುವರಿಸಲಿದ್ದೇವೆ,” ಎಂದು ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ನರೇಶ್ ಟಿಕಾಯಿತ್‌ ಹೇಳಿದ್ದಾರೆ.

ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಮತ್ತು ಇತರ ಸಚಿವರ ಜೊತೆಗೆ ಮಾತುಕತೆ ನಡೆಸಿ ರೈತರಿಗೆ ಭರವಸೆ ನೀಡಿದ್ದರು. “ನಾವು ಸರ್ಕಾರದ ಜೊತೆಗೆ ೧೧ ಅಂಶಗಳ ಬಗ್ಗೆ ಮಾತುಕತೆ ನಡೆಸಿದ್ದೇವೆ. ಆದರೆ, ಇವು ಹಣಕಾಸು ವಿಚಾರವಾದ ಕಾರಣ ಯೋಚಿಸಿ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಸರ್ಕಾರ ಹೇಳಿದೆ,” ಎಂದು ಟಿಕಾಯಿತ್ ತಿಳಿಸಿದ್ದಾರೆ. ದೆಹಲಿಯ ಕಡೆಗೆ ಪ್ರತಿಭಟನಾ ಮೆರವಣಿಗೆ ಹೊರಟ ಸಾವಿರಾರು ರೈತರನ್ನು ಮಂಗಳವಾರ ಬೆಳಗ್ಗೆ ಪೊಲೀಸರು ದೆಹಲಿ ಮತ್ತು ಉತ್ತರ ಪ್ರದೇಶದ ಗಡಿಯಲ್ಲಿ ತಡೆದಿದ್ದರು. ಈ ಹಿನ್ನೆಲೆಯಲ್ಲಿ ಸಂಘರ್ಷ ಉಂಟಾಗಿತ್ತು.

ಪೊಲೀಸರು ರೈತರನ್ನು ತಡೆಯಲು ಜಲಫಿರಂಗಿ ಮತ್ತು ಅಶ್ರುವಾಯುಗಳನ್ನು ಬಳಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಚರ್ಚೆಯಾಗಿದೆ. ಗಾಂಧಿ ಜಯಂತಿಯಂದು ಪ್ರಧಾನಿ ನರೇಂದ್ರ ಮೋದಿಯವರು ‘ಜೈ ಜವಾನ್ ಜೈ ಕಿಸಾನ್’ ಎನ್ನುವ ಘೋಷಣೆಯನ್ನು ತಮ್ಮ ಭಾಷಣೆಯಲ್ಲಿ ಕೂಗಿದ್ದಾರೆ. ಆದರೆ, ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಪೊಲೀಸರು ಹಿಂಸಾತ್ಮಕವಾಗಿ ವರ್ತಿಸಿದ್ದಾರೆ ಎಂದು ಟ್ವಿಟರ್‌ನಲ್ಲಿ ಟೀಕೆ ವ್ಯಕ್ತವಾಗಿದೆ. ಬಹಳಷ್ಟು ಸಾಮಾನ್ಯ ಟ್ವೀಟಿಗರು ಸೇರಿದಂತೆ ಕಾಂಗ್ರೆಸ್ ಮತ್ತು ಆಪ್ ಪಕ್ಷದ ಮುಖಂಡರು ರೈತರ ಜೊತೆಗೆ ಪೊಲೀಸರ ವರ್ತನೆಯನ್ನು ಟೀಕಿಸಿದ್ದಾರೆ.

ಕನಿಷ್ಠ ಬೆಂಬಲ ಬೆಲೆಯ ಮೇಲೆ ಕಾನೂನು ತರುವುದು, ಕೃಷಿ ಉತ್ಪನ್ನಗಳ ಮೇಲಿನ ಜಿಎಸ್‌ಟಿ ಕಡಿಮೆ ಮಾಡುವುದು, ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಶೀಘ್ರವೇ ಈಡೇರಿಸುವುದು, ಎನ್‌ಜಿಟಿ ಸಮಿತಿಯನ್ನು ರಚಿಸುವುದು ಮತ್ತು ಬೆಳೆವಿಮೆಗೆ ಸಂಬಂಧಿಸಿದಂತೆ ಬದಲಾವಣೆಯ ಕೆಲವು ಭರವಸೆಗಳನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ ಎನ್ನಲಾಗಿದೆ. ಆದರೆ, ವರದಿಗಳ ಪ್ರಕಾರ, ಸಾಲ ಮನ್ನಾ ಮತ್ತು ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರುವ ಬಗ್ಗೆ ಯಾವುದೇ ಒಡಂಬಡಿಕೆಯಾಗಿಲ್ಲ. ಬಿಜೆಪಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಜಾರಿ ಮಾಡುವ ಭರವಸೆಯನ್ನು ರೈತರಿಗೆ ನೀಡಿತ್ತು.

ರೈತರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಎಂ ಎಸ್ ಸ್ವಾಮಿನಾಥನ್ ಅವರು ಟ್ವೀಟ್ ಮಾಡಿ, “ಲಾಲ್ ಬಹದ್ದೂರ್ ಶಾಸ್ತ್ರಿ ಜೈ ಜವಾನ್ ಜೈ ಕಿಸಾನ್ ಎನ್ನುವ ಘೋಷಣೆ ಕೂಗಿದ್ದರು. ಅಟಲ್ ಬಿಹಾರಿ ವಾಜಪೇಯಿ ಅವರು ಅದನ್ನು ಜೈ ವಿಜ್ಞಾನ್, ಜೈ ಜವಾನ್, ಜೈ ಕಿಸಾನ್ ಎಂದು ಬದಲಿಸಿದ್ದರು. ಆದರೆ ಇಂದಿನ ಎಲ್ಲ ಬೆಳವಣಿಗೆಗಳನ್ನು ಗಮನಿಸಿದಲ್ಲಿ ರೈತರು ತಮ್ಮ ಮೆಗಾ ಮೆರವಣಿಗೆಗೆ ಸರಿಯಾದ ದಿನವನ್ನು (ಗಾಂಧಿ ಜಯಂತಿ) ಆರಿಸಿದ್ದಾರೆ ಎನ್ನುವುದು ಖಚಿತವಾಗಿದೆ,” ಎಂದು ಟ್ವೀಟ್ ಮಾಡಿದ್ದಾರೆ. ಸ್ವಾಮಿನಾಥನ್ ಮಾತ್ರವಲ್ಲ, ಬಹಳಷ್ಟು ಮಂದಿ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪತ್ರಕರ್ತ ಸಂಜೀವ್ ಸಿಂಗ್ ಟ್ವೀಟ್ ಮಾಡಿ, “ನರೇಂದ್ರ ಮೋದಿಯವರು ಜೈ ಜವಾನ್, ಜೈ ಕಿಸಾನ್ ಎಂದು ಹೇಳುತ್ತ, ರೈತರ ಪ್ರತಿಭಟನೆಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ,” ಎಂದು ಹೇಳಿದ್ದಾರೆ. ಆಪ್ ಮುಖಂಡ ಪಂಕಜ್ ಗುಪ್ತಾ ಅವರು ಇದೇ ಅಭಿಪ್ರಾಯವನ್ನು ಟ್ವೀಟ್ ಮಾಡಿದ್ದಾರೆ.

ಬಹಳಷ್ಟು ಟ್ವೀಟಿಗರು ರೈತರ ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸರು ಜಲಫಿರಂಗಿಗಳನ್ನು ಬಳಸಿರುವುದನ್ನು ವಿರೋಧಿಸಿದ್ದಾರೆ. ಪತ್ರಕರ್ತ ಸಯಾಂತನ್ ಬೇರಾ ಟ್ವೀಟ್ ಮಾಡಿ, “ರೈತರ ಮೇಲೆ ಗುಂಡಿನ ದಾಳಿಯಾಗಿದೆ. ಗಾಂಧಿ ಜಯಂತಿಯನ್ನು ಆಚರಿಸುವ ಎಂತಹ ವಿಧಾನವಿದು?” ಎಂದು ಪ್ರಶ್ನಿಸಿದ್ದಾರೆ. ಪತ್ರಕರ್ತೆ ಸುಪ್ರಿಯಾ ಭಾರದ್ವಾಜ್ ಟ್ವೀಟ್ ಮಾಡಿ, “ವ್ಯಾಪಕವಾಗಿ ಜಲಫಿರಂಗಿ ಮತ್ತು ಅಶ್ರುವಾಯುಗಳನ್ನು ರೈತರ ಮೇಲೆ ಬಿಡಲಾಗಿದೆ. ಈ ರೈತರು ತಮ್ಮ ಧ್ವನಿಯನ್ನು ಕೇಂದ್ರ ಸರ್ಕಾರ ಆಲಿಸಬೇಕು ಎಂದಷ್ಟೇ ಬಯಸಿದ್ದರು,” ಎಂದು ಹೇಳಿದ್ದಾರೆ.

ಇದನ್ನೂ ಓದಿ : ರೈತರ ಹೆಸರಲ್ಲಿ ಕಡಿಮೆ ಬಡ್ಡಿದರಕ್ಕೆ ಕೃಷಿ ಸಾಲ ಪಡೆಯುತ್ತಿವೆ ಕಾರ್ಪೊರೆಟ್‌ ಕಂಪನಿಗಳು!

ಗಾಂಧಿ ಜಯಂತಿಯ ದಿನದಂದು ರೈತರನ್ನು ಭಯೋತ್ಪಾದಕರಂತೆ ನಡೆಸಿಕೊಳ್ಳಲಾಗಿದೆ ಎಂದು ಹಲವು ಟ್ವೀಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಗಾಂಧಿ ಜಯಂತಿಯಂದು ರೈತರ ಜೊತೆಗೆ ಭಯೋತ್ಪಾದಕರಂತೆ ವ್ಯವಹರಿಸಲಾಗಿದೆ. ಈ ರೈತರಿಗೂ ನಗರದ ನಕ್ಸಲೀಯರು ಎನ್ನುವ ಬಣ್ಣ ಕೊಡಲಿದೆಯೇ ಅಥವಾ ರಾಷ್ಟ್ರವಿರೋಧಿಗಳೆಂದು ಹೇಳಲಿದೆಯೇ ಎಂದು ಸರ್ಕಾರ ಸ್ಪಷ್ಟಪಡಿಸಲಿ,” ಎಂದು ಧ್ರುವ್ ರಾಠಿ ಟ್ವೀಟ್ ಮಾಡಿದ್ದಾರೆ. ನ್ಯಾಯವಾದಿ ಸಿದ್ ಟ್ವೀಟ್ ಮಾಡಿ, “ಗಾಂಧಿ ಜಯಂತಿಯಂದು ಈ ದೃಶ್ಯಗಳನ್ನು ನೋಡಿದರೆ ನಿಮ್ಮ ಹೃದಯ ಕಲಕದೆ ಇರದು. ‘ನಾವು ಭಯೋತ್ಪಾದಕರೇ? ನಾವು ಪಾಕಿಸ್ತಾನಕ್ಕೆ ಹೋಗಬೇಕು ಎಂದು ಸರ್ಕಾರ ಹೇಳುವುದೇ?' ಎಂದು ರೈತರು ಪ್ರಶ್ನಿಸುತ್ತಿದ್ದಾರೆ. ಈ ರಾಷ್ಟ್ರ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ವೈಯಕ್ತಿಕ ಆಸ್ತಿಯಲ್ಲ. ಇದು ಪ್ರತಿಯೊಬ್ಬರಿಗೂ ಸೇರಿದೆ. ಆರು ತಿಂಗಳಿದೆ. ಇವರನ್ನು ಕ್ಷಮಿಸಬೇಡಿ, ಇಂದಿನ ದಿನವನ್ನು ಮರೆಯಬೇಡಿ,” ಎಂದು ಹೇಳಿದ್ದಾರೆ. ಬಹಳಷ್ಟು ಪತ್ರಕರ್ತರೂ ಇದೇ ರೀತಿಯ ಟ್ವೀಟ್‌ಗಳನ್ನು ಮಾಡಿದ್ದಾರೆ. ರೈತರು ಅಮಾಯಕರಾಗಿ, “ನಾವು ಭಯೋತ್ಪಾದಕರೇ?” ಎಂದು ಪ್ರಶ್ನಿಸುವ ದೃಶ್ಯಗಳನ್ನು ಟ್ವೀಟ್ ಮೂಲಕ ಪ್ರಸಾರ ಮಾಡಿದ್ದಾರೆ.

ಮಹಾರಾಷ್ಟ್ರದಲ್ಲಿ ಕಾರ್ಯಕಾರಿಣಿ ಸಭೆಯನ್ನು ನಡೆಸುತ್ತಿರುವ ಕಾಂಗ್ರೆಸ್ ಪಕ್ಷ ಪ್ರತಿಭಟನಾ ನಿರತ ರೈತರಿಗೆ ಬೆಂಬಲ ಘೋಷಿಸಿದೆ. ವಿಶ್ವ ಅಹಿಂಸಾ ದಿನದಂದು ಕೇಂದ್ರ ಸರ್ಕಾರ ರಾಷ್ಟ್ರದ ಅನ್ನದಾತರ ಮೇಲೆ ಹಿಂಸೆಯನ್ನು ಪ್ರಯೋಗಿಸಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರೂ ದೆಹಲಿಯಲ್ಲಿ ರೈತರ ಮೇಲೆ ಪೊಲೀಸರ ಹಿಂಸೆಯನ್ನು ಟ್ವಿಟರ್ ಮೂಲಕ ಪ್ರತಿಭಟಿಸಿದ್ದಾರೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸುವ ಜೊತೆಗೆ ಗಾಂಧಿ ಜಯಂತಿಯಂದು ಕೇಂದ್ರ ಸರ್ಕಾರ ಹಿಂಸೆಗೆ ಇಳಿದಿರುವುದನ್ನು ವಿರೋಧಿಸಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More