ಗಾಂಧಿ ಹತ್ಯೆ ಸಂಚು | ೧೮| ಗಾಂಧಿಗೆ ಗುಂಡಿಕ್ಕುವ ಮುನ್ನ 2 ಬಾರಿ ಸಾವರ್ಕರ್ ಭೇಟಿ ಮಾಡಿದ್ದ ಗೋಡ್ಸೆ!

ಗಾಂಧಿ ಹತ್ಯೆ ತಯಾರಿಯಲ್ಲಿದ್ದ ಗೋಡ್ಸೆ, ಆಪ್ಟೆ, ಭಾಡ್ಗೆ ಮತ್ತು ಶಂಕರ್, ೧೯೪೮ರ ಜ.೧೭ರಂದು ಮತ್ತೊಮ್ಮೆ ಸಾವರ್ಕರ್ ಮನೆಗೆ ಹೋಗಿ, ಅವರನ್ನು ಖುದ್ದು ಭೇಟಿ ಮಾಡುತ್ತಾರೆ. ಆ ಮಾತುಕತೆಯ ಬಳಿಕ ಅಂದೇ ಗೋಡ್ಸೆ ಮತ್ತು ಆಪ್ಟೆ ದೆಹಲಿಗೆ ಹೊರಡುತ್ತಾರೆ ಎಂಬ ವಿಚಾರ ವರದಿಯಲ್ಲಿ ಉಲ್ಲೇಖವಾಗಿದೆ

ಆಯೋಗದ ತನಿಖೆಯ ವ್ಯಾಪ್ತಿಯನ್ನು ಪುನರ್ ವ್ಯಾಖ್ಯಾನಿಸಲಾಯಿತು ಮತ್ತು ಆ ಮೂಲಕ ಗಾಂಧಿ ಹತ್ಯೆಯ ಸಂಚು ಮಾತ್ರವಲ್ಲ, ಯಾವುದೇ ಒಬ್ಬ ವ್ಯಕ್ತಿ ಅಥವಾ ಹಲವರಿಂದ ಗಾಂಧಿಯ ಹತ್ಯೆ ಅಥವಾ ಜೀವಕ್ಕೆ ಅಪಾಯ ತರುವ ಯಾವುದೇ ಬಗೆಯ ಉದ್ದೇಶ, ಯೋಜನೆ ಕುರಿತ ಮಾಹಿತಿ ಕೂಡ ವಿಚಾರಣಾ ವ್ಯಾಪ್ತಿಗೆ ಸೇರಿಸಲಾಯಿತು. ಹಾಗಾಗಿ, ಗಾಂಧಿ ಜೀವಕ್ಕೆ ಅಪಾಯವಿರುವ ಬಗ್ಗೆ ಜಿ ವಿ ಕೇತ್ಕರ್, ಬಾಲುಕಾಕಾ ಕಾನಿಟ್ಕರ್, ಎಸ್‌ ಆರ್ ಭಾಗವತ್, ಕೇಶವರಾವ್ ಜಢೆ, ಆರ್ ಕೆ ಖಾಂಡಿಲ್ಕರ್ ಮತ್ತು ಎನ್‌ ವಿ ಗಾಡ್ಗೀಳ್ ಅವರಿಗೆ ಇದ್ದ ಮಾಹಿತಿ ಕೂಡ ಆಯೋಗದ ವ್ಯಾಪ್ತಿಗೆ ಸೇರಿತು. ಆ ಹಿನ್ನೆಲೆಯಲ್ಲಿಯೇ ಕೇತ್ಕರ್ ಅವರನ್ನು ಒಂದನೇ ಸಾಕ್ಷಿಯಾಗಿ ಹೆಸರಿಸಲಾಯಿತು ಮತ್ತು ಆ ಒಂದನೇ ಸಾಕ್ಷಿ ನೀಡಿದ ದಾಖಲೆ, ಹೇಳಿಕೆ ಮತ್ತು ಸಾಂದರ್ಭಿಕ ಸಾಕ್ಷ್ಯಗಳ ಹಿನ್ನೆಲೆಯಲ್ಲಿ ಆಯೋಗದ ಮುಂದಿನ ಅವರ ಹೇಳಿಕೆಯನ್ನು ವಿಶ್ಲೇಷಿಸಲಾಯಿತು.

-ಹೀಗೆ ತನ್ನ ವಿಚಾರಣೆಯ ವಿಷಯ, ವ್ಯಾಪ್ತಿ ಮತ್ತು ಮಿತಿಗಳನ್ನು ವ್ಯಾಖ್ಯಾನಿಸಿಕೊಂಡು ನ್ಯಾ.ಕಪೂರ್ ಆಯೋಗ, ತನ್ನ ವರದಿಯಲ್ಲಿ, ಬಳಿಕ ಗಾಂಧಿ ಹತ್ಯೆ ಮತ್ತು ಸಂಚಿನ ರೂವಾರಿಗಳ ಹಿನ್ನೆಲೆಯನ್ನು ವಿವರಿಸಿದೆ.

ಗೋಡ್ಸೆ, ರಾಷ್ಟ್ರ ದಳದ ಮೂಲ ಸಂಸ್ಥಾಪಕರಲ್ಲಿ ಒಬ್ಬ. ರಾಷ್ಟ್ರ ದಳ ೧೯೪೨ರ ಮೇನಲ್ಲಿ ಪೂನಾದಲ್ಲಿ ತನ್ನ ಮೊದಲ ಶಿಬಿರ ನಡೆಸಿತ್ತು. ೧೯೪೪ರ ಜನವರಿ ೧೬ರಂದು ಆತ ಆಪ್ಟೆಯೊಂದಿಗೆ ಸೇರಿ ಒಂದು ವೃತ್ತಪತ್ರಿಕೆಯನ್ನು ಆರಂಭಿಸಲು ನಿರ್ಧರಿಸಿದ ಮತ್ತು ಅದೇ ವರ್ಷದ ಮಾರ್ಚ್ ೧ರಂದು ‘ದ ಅಗ್ರಣಿ’ ಪತ್ರಿಕೆಯನ್ನು ಆರಂಭಿಸಿದ.

೧೯೪೮ರ ಜನವರಿ ೨ ಅಥವಾ ೩ರಂದು ಗೋಡ್ಸೆ ಮತ್ತು ಆಪ್ಟೆ ಅಹಮದ್‌ ನಗರಕ್ಕೆ ಹೋಗಿ ಅಲ್ಲಿ ಕರ್ಕರೆಯನ್ನು ಭೇಟಿ ಮಾಡಿದರು. ಜನವರಿ ೧೦ರಂದು, ಬಾಂಬೆಯ ಹಿಂದೂ ಮಹಾಸಭಾ ಕಚೇರಿಯಲ್ಲಿ ಬಾಡ್ಗೆ, ಅಸ್ತ್ರ (ಸರಕು ಎಂಬ ಪದ ಬಳಕೆಯಾಗಿತ್ತು!) ಒದಗಿಸುವುದಾಗಿ ಗೋಡ್ಸೆ ಮತ್ತು ಅಪ್ಟೆಗೆ ಭರವಸೆ ನೀಡಿದ್ದ. ಬಳಿಕ ೧೯೪೮ರ ಜನವರಿ ೧೪ರಂದು ಗೋಡ್ಸೆ ಮತ್ತು ಆಪ್ಟೆ ಜೊತೆಯಾಗಿ ಸಾವರ್ಕರ್ ಭೇಟಿ ಮಾಡುತ್ತಾರೆ. ಭಾಡ್ಗೆ ತಾನು ಹೇಳಿದಂತೆ ಅಸ್ತ್ರ ತರುತ್ತಾನೆ. ನಂತರ ಗೋಡ್ಸೆ, ಆಪ್ಟೆ, ಭಾಡ್ಗೆ ಮತ್ತು ಶಂಕರ್ ದೀಕ್ಷಿತ್ ಮಹರಾಜ್ ಅವರ ನಿವಾಸಕ್ಕೆ ಹೋಗಿ, ಅಸ್ತ್ರಗಳನ್ನು ಅವರ ಮನೆಯಲ್ಲಿಯೇ ಇಡುತ್ತಾರೆ. ಅಸ್ತ್ರವನ್ನು ಸ್ವತಃ ದೀಕ್ಷಿತ್ ಮಹರಾಜ್‌ ಅವರಿಗೇ ಕೊಡುತ್ತಾರೆಯೇ ಅಥವಾ ಅವರ ಸೇವಕರಿಗೆ ಕೊಡುತ್ತಾರೆಯೇ ಎಂಬುದು ಸ್ಟಷ್ಟವಾಗಿಲ್ಲ.

ಬಳಿಕ ೧೯೪೮ರ ಜನವರಿ ೧೫ರಂದು ಗೋಡ್ಸೆ, ಆಪ್ಟೆ, ಭಾಡ್ಗೆ, ಕರ್ಕರೆ ಮತ್ತು ಮದನ್‌ಲಾಲ್ ಅವರುಗಳು ಹಿಂದೂ ಮಹಾಸಭಾ ಕಚೇರಿಯಲ್ಲಿ ಸಭೆ ನಡೆಸುತ್ತಾರೆ. ಆ ಬಳಿಕ ಅವರೆಲ್ಲ ದೀಕ್ಷಿತ್ ಮಹರಾಜ್ ಅವರ ಮನೆಗೆ ಹೋಗಿ, ಅಲ್ಲಿಂದ ಅಸ್ತ್ರಗಳನ್ನು ವಾಪಸು ಪಡೆಯುತ್ತಾರೆ. ಕರ್ಕರೆ ಮತ್ತು ಮದನ್‌ಲಾಲ್‌ಗೆ ಕೂಡಲೇ ದೆಹಲಿಗೆ ಹೊರಡಲು ಹೇಳಲಾಗುತ್ತದೆ. ಬಳಿಕ ಗೋಡ್ಸೆ ಪೂನಾಕ್ಕೆ ಮರಳುತ್ತಾನೆ. ಭಾಡ್ಗೆ, ತಾನೂ ದೆಹಲಿಗೆ ಹೋಗುವುದಾಗಿ ಭರವಸೆ ನೀಡುತ್ತಾನೆ.

ಇದನ್ನೂ ಓದಿ : ಗಾಂಧಿ ಹತ್ಯೆ ಸಂಚು | ೧೭ | ಸಂಚಿನ ಮಾಹಿತಿ ಕೊನೆಗೂ ಜಯಪ್ರಕಾಶರಿಗೆ ತಲುಪಲಿಲ್ಲ

ನಂತರ ೧೯೪೮ರ ಜನವರಿ ೧೭ರಂದು ಗೋಡ್ಸೆ, ಆಪ್ಟೆ, ಭಾಡ್ಗೆ ಮತ್ತು ಶಂಕರ್ ಸೇರಿ ಮತ್ತೊಮ್ಮೆ ಸಾವರ್ಕರ್ ಮನೆಗೆ ಹೋಗಿ, ಅವರನ್ನು ಖುದ್ದು ಭೇಟಿ ಮಾಡುತ್ತಾರೆ. ಆ ಮಾತುಕತೆಯ ಬಳಿಕ ಕೂಡಲೇ ಗೋಡ್ಸೆ ಮತ್ತು ಆಪ್ಟೆ ದೆಹಲಿಗೆ ಹೊರಡುತ್ತಾರೆ. ಬಾಂಬೆಯಲ್ಲಿ ಮಧ್ಯಾಹ್ನದ ೨ ಗಂಟೆಯ ವಿಮಾನವೇರಿ ಸಂಜೆ ೭.೩೦ಕ್ಕೆ ದೆಹಲಿಗೆ ತಲುಪುತ್ತಾರೆ. ದೆಹಲಿಯ ಮರೀನಾ ಹೋಟೆಲಿನಲ್ಲಿ ಜನವರಿ ೧೭ರಿಂದ ೨೦ರವರೆಗೆ ತಂಗುತ್ತಾರೆ. ಆ ನಡುವೆ, ಜನವರಿ ೧೯ರಂದು ಅವರಿಬ್ಬರು ಹಿಂದೂ ಮಹಾಸಭಾ ದೆಹಲಿ ಕಚೇರಿಯಲ್ಲಿ ಭಾಡ್ಗೆಯನ್ನು ಭೇಟಿ ಮಾಡುತ್ತಾರೆ. ಅಲ್ಲದೆ, ಅಶುತೋಷ್‌ ಲಹಿರಿ ಮತ್ತು ಡಾ ಸತ್ಯಪ್ರಕಾಶ್ ಅವರನ್ನೂ ಹಿಂದೂ ಮಹಾಸಭಾ ಭವನದಲ್ಲಿ ಅವರು ಭೇಟಿ ಮಾಡುತ್ತಾರೆ. ಜನವರಿ ೨೦ರಂದು ಮರೀನಾ ಹೋಟೆಲಿನಲ್ಲಿ ನಾಥೂರಾಂ ಗೋಡ್ಸೆ, ಆಪ್ಟೆ, ಕರ್ಕರೆ, ಮದನ್‌ಲಾಲ್‌, ಶಂಕರ್, ಗೋಪಾಲ ಗೋಡ್ಸೆ ಮತ್ತು ಭಾಡ್ಗೆ ಸಭೆ ಸೇರುತ್ತಾರೆ. ಅಂದೇ ಸಂಜೆ, ಮಹಾತ್ಮನ ಪ್ರಾರ್ಥನಾ ಸಭೆಯ ಹೊತ್ತಿಗೆ, ನಾಥೂರಾಂ ಗೋಡ್ಸೆಯ ಉಸ್ತುವಾರಿಯಲ್ಲಿ ಮದನ್‌ ಲಾಲ್ ಕೈಬಾಂಬ್ ಸ್ಪೋಟಿಸುತ್ತಾನೆ. ಸ್ಫೋಟ ಸಂಭವಿಸುತ್ತಲೇ ಗೋಡ್ಸೆ ಮತ್ತು ಆಪ್ಟೆ ಅಲ್ಲಿಂದ ಕಾಲು ಕೀಳುತ್ತಾರೆ. ಕೂಡಲೇ ಹೋಟೆಲ್ ಕೊಠಡಿ ಖಾಲಿ ಮಾಡಿಕೊಂಡು ಕಾನ್ಪುರಕ್ಕೆ ರಾತ್ರಿ ರೈಲಿನಲ್ಲಿ ಪರಾರಿಯಾಗುತ್ತಾರೆ.

ಬೆಳಗಿನ ಜಾವ ಕಾನ್ಪುರಕ್ಕೆ ತಲುಪುವ ಅವರು, ಅಂದು ಇಡೀ ದಿನ ರೈಲು ನಿಲ್ದಾಣದ ವಿಶ್ರಾಂತಿ ಕೊಠಡಿಯಲ್ಲೇ ಕಾಲ ಕಳೆಯುತ್ತಾರೆ. ಮಾರನೇ ದಿನ, ಅಂದರೆ, ಜನವರಿ ೨೨ರಂದು ಕಾನ್ಪುರದಿಂದ ಬಾಂಬೆಗೆ ಪಂಜಾಬ್ ಮೇಲ್ ರೈಲಿನಲ್ಲಿ ಪ್ರಯಾಣಿಸುತ್ತಾರೆ. ಜನವರಿ ೨೩ರಂದು ಬಾಂಬೆ ತಲುಪುತ್ತಾರೆ. ಬಾಂಬೆಯ ಆರ್ಯ ಪಥಿಕ್ ಆಶ್ರಮದಲ್ಲಿ ಒಂದು ದಿನ ಮತ್ತು ಒಂದು ರಾತ್ರಿ ಕಳೆಯುವ ಅವರು, ಜನವರಿ ೨೪ರಂದು ಎಲ್ಫಿನ್‌ಸ್ಟೋನ್ ಹೋಟೆಲ್ ಅನೆಕ್ಸ್‌ಗೆ ಸ್ಥಳಾಂತರಗೊಳ್ಳುತ್ತಾರೆ. ಜನವರಿ ೨೫ರಂದು ವಿಲ್ಲಾ ಪಾರ್ಲೆಯಲ್ಲಿ ಗೋಡ್ಸೆ, ಆಪ್ಟೆ ಇಬ್ಬರೂ, ಕರ್ಕರೆ ಮತ್ತು ಗೋಪಾಲ್ ಗೋಡ್ಸೆಯನ್ನು ಭೇಟಿ ಮಾಡುತ್ತಾರೆ. ಅದೇ ದಿನ ಸುಳ್ಳು ಹೆಸರುಗಳನ್ನು ನೀಡಿ, ಜನವರಿ ೨೭ರ ದಿನಾಂಕಕ್ಕೆ ದೆಹಲಿಗೆ ಏರ್ ಇಂಡಿಯಾ ವಿಮಾನದಲ್ಲಿ ಸೀಟು ಕಾಯ್ದಿರಿಸಿದರು.

ಅಲ್ಲದೆ, ಅದೇ ದಿನ, ಜನವರಿ ೨೫ರಂದೇ, ಗೋಡ್ಸೆ ಮತ್ತು ಆಪ್ಟೆ ಬಾಂಬೆಯ ಬ್ಯಾಂಕ್ ಸಿಲ್ವರ್ ಕಂಪನಿಯ ಪರಾಂಜಪೆ ಎಂಬುವರಿಂದ ಹತ್ತು ಸಾವಿರ ರು. ಸಾಲ ಪಡೆದರು. ಮಾರನೇ ದಿನ ಸಾಲದ ಹಣದಲ್ಲಿ ಎಂಟು ಸಾವಿರವನ್ನು ಚೆಕ್‌ ಮೂಲಕವೂ, ಉಳಿದ ಎರಡು ಸಾವಿರ ರು.ಗಳನ್ನು ನಗದಾಗಿಯೂ ಪರಾಂಜಪೆ ಗೋಡ್ಸೆಗೆ ನೀಡಿದ್ದ. ಆ ಹಣ ‘ಹಿಂದೂ ರಾಷ್ಟ್ರ’ಕ್ಕಾಗಿ ಎಂದು ಪಡೆಯಲಾಗಿತ್ತು. ಜನವರಿ ೨೭ರಂದು ಗೋಡ್ಸೆ ಮತ್ತು ಆಪ್ಟೆ ವಿಮಾನದ ಮೂಲಕ ದೆಹಲಿಗೆ ತಲುಪುತ್ತಾರೆ ಮತ್ತು ಅದೇ ದಿನ ಮಧ್ಯಾಹ್ನ ಗ್ರಾಂಡ್ ಟ್ರಂಕ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಗ್ವಾಲಿಯರ್‌ಗೆ ಹೋಗಿ, ಅಲ್ಲಿ ಡಾ.ಪಾರ್ಚುರೆ ನಿವಾಸದಲ್ಲಿ ತಂಗುತ್ತಾರೆ. ಮಾರನೇ ದಿನ ಗೋಯಲ್ ಅವರಿಗಾಗಿ ಒಂದು ರಿವಾಲ್ವರ್ ತರುತ್ತಾನೆ. ಆದರೆ, ಅದು ಸರಿಯಾಗಿ ಕೆಲಸ ಮಾಡುತ್ತಿರುವುದಿಲ್ಲ. ದಂಡವತೆ ಮತ್ತೊಂದು ರಿವಾಲ್ವರ್ ತರುತ್ತಾನೆ. ಆ ರಿವಾಲ್ವರನ್ನು ಗೋಡ್ಸೆ ೩೦೦ ರುಪಾಯಿ ನೀಡಿ ಖರೀದಿಸುತ್ತಾನೆ. ಅಂದೇ ಗ್ವಾಲಿಯರ್ ತೊರೆಯುವ ಅವರು, ಮಾರನೇ ದಿನ, ಅಂದರೆ, ಜನವರಿ ೨೯ರಂದು ದೆಹಲಿಗೆ ತಲುಪುತ್ತಾರೆ. ಅಂದು ಅವರು ದೆಹಲಿ ಮುಖ್ಯ ರೈಲು ನಿಲ್ದಾಣದ ವಿಶ್ರಾಂತಿ ಕೊಠಡಿಯೊಂದರಲ್ಲಿ (ಕೊಠಡಿ ಸಂಖ್ಯೆ ೬) ತಂಗುತ್ತಾರೆ. ಅಂದು ಅವರೊಂದಿಗೆ ಕರ್ಕರೆ ಕೂಡ ತಂಗುತ್ತಾನೆ.

ಈ ನಡುವೆ, ಹಣಕಾಸಿನ ವಿಷಯದಲ್ಲಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದ ಗೋಡ್ಸೆ, ೧೯೪೮ರ ಜನವರಿ ೧೭ರಂದು ಕಾಳೆ ಎಂಬುವನಿಂದ ಒಂದು ಸಾವಿರ ರು. ಹಾಗೂ ಲಾಲ್‌ ಬಾಗ್‌ನಲ್ಲಿ ಚಂದ್ರದಾಸ್ ಎಂಬುವನನ್ನು ಭೇಟಿ ಮಾಡಿ ಐದು ಸಾವಿರ ರು. ವಂತಿಗೆ ಪಡೆದುಕೊಂಡಿದ್ದ.

ಈ ಎಲ್ಲ ಚಟುವಟಿಕೆ, ಪೂರ್ವತಯಾರಿಗಳ ಪೈಕಿ, ಮುಖ್ಯವಾಗಿ ಜನವರಿ ೨೯ ಮತ್ತು ೩೦ರ ಅವರ ಚಲನವಲನಗಳು ಮಹತ್ವದ್ದು. ಹಾಗಾಗಿ ಆ ವಿವರಗಳು ಇಂತಿವೆ:

ಜನವರಿ ೨೯ರಂದು ಬೆಳಗ್ಗೆ ಕರ್ಕರೆ ಬಿರ್ಲಾ ಧರ್ಮಶಾಲೆಗೆ ಭೇಟಿ ನೀಡುತ್ತಾನೆ. ಅಲ್ಲಿಯೇ ಗೋಡ್ಸೆ ಮತ್ತು ಆಪ್ಟೆ ಆತನನ್ನು ಭೇಟಿಯಾಗುತ್ತಾರೆ. ಮಧ್ಯಾಹ್ನ ಸುಮಾರು ೧ ಗಂಟೆಯ ಹೊತ್ತಿಗೆ, ಆಪ್ಟೆ, ಗೋಡ್ಸೆ ಮತ್ತು ಕರ್ಕರೆ ದೆಹಲಿ ಹಳೆಯ ರೈಲು ನಿಲ್ದಾಣಕ್ಕೆ ಹೋಗಿ ವಿಶ್ರಾಂತಿ ಕೊಠಡಿ ೬ರಲ್ಲಿ ಜಾಗ ಕಾಯ್ದಿರಿಸುತ್ತಾರೆ. ಆ ವೇಳೆ, ಗೋಡ್ಸೆ ತನ್ನ ಹೆಸರನ್ನು ವಿನಾಯಕ ರಾವ್ ಎಂದು ಬರೆಸುತ್ತಾನೆ. ನಂತರ ಮೂವರೂ ‘ಮೈದಾನ’ಕ್ಕೆ ತೆರಳಿ, ಅಲ್ಲಿ ಕೂತು ಕೆಲವು ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳುತ್ತಾರೆ. ಬಳಿಕ ಸಂಜೆ ೪ಕ್ಕೆ ಮೂವರೂ (ಗೋಡ್ಸೆ, ಆಪ್ಟೆ ಮತ್ತು ಕರ್ಕರೆ) ಬಿರ್ಲಾ ಹೌಸ್‌ಗೆ ಹೋಗುತ್ತಾರೆ. ಅಲ್ಲಿನ ಪ್ರಾರ್ಥನಾ ಸಭೆಯಲ್ಲಿ ಸುಮಾರು ೪೦೦ಕ್ಕೂ ಹೆಚ್ಚು ಮಂದಿ ಭಾಗಿಯಾಗಿರುವುದನ್ನು ಗಮನಿಸುತ್ತಾರೆ. ಬಳಿಕ ಹಳೆಯ ರೈಲು ನಿಲ್ದಾಣಕ್ಕೆ ವಾಪಸಾಗುತ್ತಾರೆ. ಬಳಿಕ ಆಪ್ಟೆ ಮತ್ತು ಕರ್ಕರೆ ದೆಹಲಿಯ ಸಿನಿಮಾ ಮಂದಿರವೊಂದಕ್ಕೆ ಸಿನಿಮಾ ವೀಕ್ಷಣೆಗೆ ಹೋಗುತ್ತಾರೆ. ಸುಮಾರು ಮಧ್ಯರಾತ್ರಿಯ ಹೊತ್ತಿಗೆ ಆ ಇಬ್ಬರು ಸಿನಿಮಾದಿಂದ ವಾಪಸಾಗುತ್ತಾರೆ. ಈ ನಡುವೆ ಆ ದಿನ ಮಧ್ಯಾಹ್ನದ ಹೊತ್ತಿಗೆ ಆಪ್ಟೆ, ಗೋಡ್ಸೆ ಮತ್ತು ಕರ್ಕರೆ ಮೂವರೂ ಬಿರ್ಲಾ ಮಂದಿರ್‌ ಹಿಂದಿನ ಕಾಡಿಗೆ ತೆರಳಿದ್ದರು ಮತ್ತು ಅಲ್ಲಿ ಗೋಡ್ಸೆ ತನ್ನ ಮೂರು ಅಥವಾ ನಾಲ್ಕು ಬಾರಿ ಗುಂಡು ಹಾರಿಸಿ ತನ್ನ ಪಿಸ್ತೂಲಿನ ಪರೀಕ್ಷೆ ನಡೆಸುತ್ತಾನೆ. ಬಳಿಕ ಕೈಬಾಂಬುಗಳನ್ನು ಅಲ್ಲಿ ಹೂತು ವಾಪಸಾಗುತ್ತಾರೆ.

ಮಾರನೇ ದಿನ, ಜನವರಿ ೩೦ರ ದುರ್ದಿನ. ಗೋಡ್ಸೆ, ಅಪ್ಟೆ ಮತ್ತು ಕರ್ಕರೆ ರೈಲು ನಿಲ್ದಾಣದ ಹೋಟೆಲಿನಲ್ಲಿ ತಿಂಡಿ ತಿಂದು ಬಿರ್ಲಾ ಮಂದಿರದತ್ತ ಹೊರಡುತ್ತಾರೆ. ಬಿರ್ಲಾ ಮಂದಿರದ ಹಿಂದಿನ ಕಾಡಿನಲ್ಲಿ ಗೋಡ್ಸೆ ಮತ್ತೆ ಮೂರ್ನಾಲ್ಕು ಬಾರಿ ಗುಂಡು ಹಾರಿಸಿ ಪಿಸ್ತೂಲಿನಲ್ಲಿ ಅಭ್ಯಾಸ ನಡೆಸುತ್ತಾನೆ. ಬೆಳಗ್ಗೆ ೧೧.೩೦ರ ಹೊತ್ತಿಗೆ ಗೋಡ್ಸೆ ಹಳೆಯ ರೈಲು ನಿಲ್ದಾಣಕ್ಕೆ ವಾಪಸ್ಸಾದರೆ, ಕರ್ಕರೆ ಮದ್ರಾಸ್‌ ಹೋಟೆಲ್‌ಗೆ ಹೋಗುತ್ತಾನೆ. ಅಲ್ಲಿಂದ ಕರ್ಕರೆ ಮಧ್ಯಾಹ್ನ ೨ರ ಹೊತ್ತಿಗೆ ಹಳೆಯ ರೈಲು ನಿಲ್ದಾಣಕ್ಕೆ ವಾಪಸಾಗಿ ಗೋಡ್ಸೆ ಮತ್ತು ಆಪ್ಟೆಯನ್ನು ಸೇರಿಕೊಳ್ಳುತ್ತಾನೆ. ನಂತರ ಸಂಜೆ ೪.೩೦ಕ್ಕೆ ರೈಲು ನಿಲ್ದಾಣದಿಂದ ಹೊರಟ ಮೂವರೂ, ಟಾಂಗಾ ಗಾಡಿಯಲ್ಲಿ ಬಿರ್ಲಾ ಮಂದಿರ ತಲುಪುತ್ತಾರೆ. ಗೋಡ್ಸೆ ಬಿರ್ಲಾ ಮಂದಿರದ ದೇವರ ದರ್ಶನ ಪಡೆಯುತ್ತಾನೆ. ಆಪ್ಟೆ ಮತ್ತು ಕರ್ಕರೆ ಬಿರ್ಲಾ ಹೌಸಿನ ಕಡೆ ಪ್ರಯಾಣಿಸುತ್ತಾರೆ. ಬಳಿಕ ಸಂಜೆ ೫ರ ಹೊತ್ತಿಗೆ ನಾಥೂರಾಂ ಗೋಡ್ಸೆ ಮಹಾತ್ಮ ಗಾಂಧಿಗೆ ಗುಂಡಿಕ್ಕುತ್ತಾನೆ!

ಗಾಂಧಿ ಹತ್ಯೆ ಕುರಿತ ನ್ಯಾ.ಕಪೂರ್ ಆಯೋಗದ ವರದಿಯ ಆಯ್ದ ಭಾಗದ ಭಾವಾನುವಾದ ಸರಣಿ ಇದು

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More