ಎರಡು ತ್ರೈಮಾಸಿಕಗಳ ಉದ್ಯೋಗ ಮಾಹಿತಿ ಬಹಿರಂಗಪಡಿಸದ ಕೇಂದ್ರ ಸರ್ಕಾರ

ಉದ್ಯೋಗ ಸೃಷ್ಟಿ ಕುರಿತು ಕೇಂದ್ರ ಸಚಿವರು ತರಹೇವಾರಿ ಹೇಳಿಕೆಗಳನ್ನು ನೀಡಿದರು. ಆದರೆ, ಯಾವುದು ವಾಸ್ತವ ಎಂಬ ಸಂಗತಿ ಸ್ಪಷ್ಟವಾಗಲಿಲ್ಲ. ‘ದಿ ಟೆಲಿಗ್ರಾಫ್‌’ ಈ ಕುರಿತು ವಿಶೇಷ ವರದಿ ಪ್ರಕಟಿಸಿದ್ದು, ಕೇಂದ್ರ ಸರ್ಕಾರ ತ್ರೈ ಮಾಸಿಕ ಸಮೀಕ್ಷೆ ಮಾಹಿತಿ ಇನ್ನು ಗೌಪ್ಯವಾಗಿಟ್ಟಿದೆ ಎಂದಿದೆ!

ಅಧಿಕಾರಕ್ಕೆ ಬರುವ ಮುನ್ನ ೧ ಕೋಟಿ ಉದ್ಯೋಗ ಸೃಷ್ಟಿಯ ಆಶ್ವಾಸನೆ ನೀಡಿದ್ದು ನರೇಂದ್ರ ಮೋದಿಯವರು. ಅವಧಿ ಪೂರೈಸುವುದಕ್ಕೆ ಇನ್ನು ಕೆಲವೇ ತಿಂಗಳು ಬಾಕಿ ಇವೆ. ಆದರೆ, ತಮ್ಮ ಭರವಸೆಯಲ್ಲಿ ಅರ್ಧದಷ್ಟನ್ನೂ ಪೂರೈಸಿಲ್ಲ ಎಂಬ ಆರೋಪಗಳು ಕೇಳಿಬರುತ್ತಲೇ ಇವೆ.

ಸೋಮವಾರ ವಿಶೇಷ ವರದಿಯೊಂದನ್ನು ಪ್ರಕಟಿಸಿರುವ 'ದಿ ಟೆಲಿಗ್ರಾಫ್‌’, ಕೇಂದ್ರ ಸರ್ಕಾರ ಕಳೆದ ಎರಡು ತ್ರೈಮಾಸಿಕಗಳ ಉದ್ಯೋಗ ಸಮೀಕ್ಷೆಯ ಅಂಕಿ-ಅಂಶಗಳನ್ನೇ ಬಿಡುಗಡೆ ಮಾಡಿಲ್ಲ ಎಂದು ಹೇಳಿದೆ. ತ್ರೈಮಾಸಿಕ ಉದ್ಯೋಗ ಸಮೀಕ್ಷೆಯ ಅಂಕಿ-ಅಂಶಗಳು ದೇಶದಲ್ಲಿ ಉದ್ಯೋಗದ ಸ್ಥಿತಿಗತಿ ಕುರಿತು ಖಚಿತವಾದ ಚಿತ್ರಣವನ್ನು ನೀಡುತ್ತದೆ. ಆದರೆ, ಈ ವರ್ಷ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿಲ್ಲ; ಜೊತೆಗೆ, ಸಮೀಕ್ಷೆಯನ್ನೇ ಕೈಬಿಡುವ ಬಗ್ಗೆ ಚಿಂತನೆ ನಡೆದಿದೆ ಎಂದು ವರದಿಯಲ್ಲಿ ತಿಳಿಸಿದೆ.

ತ್ರೈಮಾಸಿಕ ಸಮೀಕ್ಷೆಯು ಹಿಂದಿನ ಮೂರು ತಿಂಗಳ ಉದ್ಯೋಗ ಮಾಹಿತಿಯನ್ನು ಸಂಗ್ರಹಿಸಿ ನೀಡುತ್ತದೆ. ಆದರೆ, ಕಳೆದ ಎರಡು ತ್ರೈಮಾಸಿಕಗಳ ವರದಿಯನ್ನು ಕೇಂದ್ರ ಸರ್ಕಾರ ಬಹಿರಂಗಗೊಳಿಸಿಲ್ಲ. ಒಂದು ವೇಳೆ, ಶೀಘ್ರದಲ್ಲಿ ಸಮೀಕ್ಷೆಯ ಮಾಹಿತಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡದೆ ಹೋದಲ್ಲಿ, ಸಮೀಕ್ಷೆಯನ್ನೇ ರದ್ದು ಮಾಡುವ ಬಗ್ಗೆ ಟೀಕಾಕಾರರು ವ್ಯಕ್ತಪಡಿಸುತ್ತಿರುವ ಆತಂಕ ಸತ್ಯವಾಗುತ್ತದೆ. ಏಕೆಂದರೆ, ಕಳೆದ ಎರಡು ತ್ರೈಮಾಸಿಕಗಳಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಗಣನೀಯ ಕುಸಿತ ಕಂಡಿರುವ ಅಂಶ ದಾಖಲಾಗಿದೆ ಎಂದು ವರದಿ ವಿವರಿಸಿದೆ.

ಅಲ್ಲದೆ, ಉದ್ಯೋಗ-ನಿರುದ್ಯೋಗ ವಾರ್ಷಿಕ ಸಮೀಕ್ಷೆಯ ೨೦೧೬-೧೭ರ ವರದಿಯನ್ನೂ ಕೇಂದ್ರ ಸರ್ಕಾರ ಬಿಡುಗಡೆಯಾಗಿಲ್ಲ. ಹದಿನೆಂಟು ತಿಂಗಳು ಕಳೆದಿದ್ದು, ಹಿಂದಿನ ಅವಧಿಯ ಅಂದರೆ, ೨೦೧೫-೧೬ರ ವರದಿ ಸೆಪ್ಟೆಂಬರ್‌ ೧೬ರಲ್ಲೇ ಬಿಡುಗಡೆಯಾಗಿತ್ತು. ಈ ಅವಧಿಯಲ್ಲಿ ನಿರುದ್ಯೋಗ ಪ್ರಮಾಣದಲ್ಲಿ ಶೇ. ೪.೯ರಿಂದ ಶೇ.೧೫ಕ್ಕೆ ಏರಿತ್ತು. ಈ ಕುರಿತು ಮಾಧ್ಯಮಗಳ ಪ್ರಶ್ನೆಗೆ ಸರ್ಕಾರ ೨೦೧೬-೧೭ರ ಮಾಹಿತಿಯನ್ನು ಇನ್ನೂ ಸಂಸ್ಕರಣೆ ಆಗುತ್ತಿದೆ ಎಂದು ತಿಳಿಸಿದೆ. ತ್ರೈಮಾಸಿಕ ಹಾಗೂ ವಾರ್ಷಿಕ ವರದಿಗಳ ಅಂಕಿ-ಅಂಶಗಳ ಸಂಸ್ಕರಣೆಯ ಹೊಣೆಯನ್ನು ಕಾರ್ಮಿಕ ಇಲಾಖೆ ಹೊತ್ತಿದೆ.

ಜೂನ್‌ ತಿಂಗಳ ೧೧ಕ್ಕೆ ಜನವರಿ-ಮಾರ್ಚ್‌ ಅವಧಿಯ ತ್ರೈ ಮಾಸಿಕ ಉದ್ಯೋಗ ಸಮೀಕ್ಷೆ ಇನ್ನು ಬಾಕಿ ಇದ್ದು, ಈ ಕುರಿತು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದು, ಸಮೀಕ್ಷೆಯಲ್ಲಿರುವ ಮಿತಿಗಳನ್ನು ಸಮಿತಿಯೊಂದು ಪರಿಶೀಲಿಸುತ್ತಿದೆ ಎಂದು ತಿಳಿಸಿದೆ.

ಭಾರತೀಯ ಸಾಂಖ್ಯಿಕ ಸಂಸ್ಥೆಯ ಮಾಜಿ ಮುಖ್ಯಸ್ಥ ಟಿಸಿಎ ಅನಂತ್‌ ಅವರ ನೇತೃತ್ವದ ಸಮಿತಿ ಪರಿಶೀಲನೆ ನಡೆಸುತ್ತಿದ್ದು, ಒಂದು ತಿಂಗಳಲ್ಲಿ ವರದಿ ಸಲ್ಲಿಸಲು ಸೂಚಿಸಲಾಗಿತ್ತು. ಅದರೆ, ಈವರೆಗೂ ಯಾವುದೇ ಬೆಳವಣಿಗೆಗಳಾಗಿಲ್ಲ. ಏಪ್ರಿಲ್‌-ಜೂನ್‌ ಅವಧಿಯ ತ್ರೈಮಾಸಿಕ ಸಮೀಕ್ಷೆಯೂ ಬಾಕಿ ಇದೆ.

ಸಮೀಕ್ಷೆ ಹೇಗೆ ನಡೆಯುತ್ತದೆ?

ಉದ್ಯೋಗ ಸಮೀಕ್ಷೆಗೆ ಮಾದರಿ ಸಂಖ್ಯೆಯನ್ನು ೨೦೧೬ರ ಏಪ್ರಿಲ್‌ ೧ರಂದು ಪರಿಷ್ಕರಿಸಿ, ೧೦ ಸಂಸ್ಥೆಗಳನ್ನಾಗಿ ಮಾಡಿತು. ಈ ಬದಲಾವಣೆಯ ಬಳಿಕ ಇದುವರೆಗೆ ಏಳು ತ್ರೈಮಾಸಿಕ ವರದಿಗಳು ಹೊರಬಂದಿವೆ. ಕಡೆಯ ವರದಿ ಬಿಡುಗಡೆಯಾಗಿದ್ದು, ೨೦೧೭ರ ಅಕ್ಟೋಬರ್‌-ಡಿಸೆಂಬರ್‌ ಅವಧಿಯ ವರದಿ, ೨೦೧೮ರ ಮಾರ್ಚ್‌ನಲ್ಲಿ ಬಿಡುಗಡೆಯಾಯಿತು.

ಈ ಏಳೂ ವರದಿಗಳಲ್ಲಿ ಉದ್ಯೋಗ ಸೃಷ್ಟಿಯ ಸಂಖ್ಯೆಯಲ್ಲಿ ಏರಿಕೆ ದಾಖಲಾಗಿತ್ತು. ಆದರೆ, ಹೆಚ್ಚುವರಿ ಉದ್ಯೋಗಗಳ ಪ್ರಮಾಣದಲ್ಲಿ ೦.೩೨ ಲಕ್ಷದಿಂದ (ಜುಲೈ-ಸೆಪ್ಟೆಂಬರ್‌ ೨೦೧೬) ೧.೮೫ ಲಕ್ಷ (ಜನವರಿ-ಮಾರ್ಚ್‌ ೨೦೧೭) ಏರಿಕೆಯಾಗಿದ್ದು ಕಂಡುಬಂದಿತ್ತು. ಪ್ರತ್ಯೇಕವಾಗಿ ನೋಡಿದಾಗ ಉತ್ಪಾದನೆ, ಕಟ್ಟಡ ನಿರ್ಮಾಣದಂತಹ ವಲಯಗಳಲ್ಲಿ ಉದ್ಯೋಗ ಸೃಷ್ಟಿಯಾಗಿದ್ದು ಶೂನ್ಯ!

ಇನ್ನಷ್ಟು ಸ್ಪಷ್ಟವಾಗಿ ಹೇಳಬಹುದಾದರೆ, ೨೦೧೬ರ ಏಪ್ರಿಲ್‌- ಜೂನ್‌ ಅವಧಿ ಸಮೀಕ್ಷೆಯಲ್ಲಿ ಉತ್ಪಾದನಾ ವಲಯದ ಉದ್ಯೋಗ ಪ್ರಮಾಣ ೧೦೧.೧೭ ಲಕ್ಷದಿಂದ ೦.೧೨ಕ್ಕೆ ಕುಸಿದಿತ್ತು. ಇನ್ನು, ಕಟ್ಟಡ ನಿರ್ಮಾಣ ವಲಯದಲ್ಲಿ ಕಳೆದ ಆರು ವರದಿಗಳ ಪೈಕಿ ನಾಲ್ಕರಲ್ಲಿ ಕುಸಿತವನ್ನೇ ಕಂಡಿದೆ.

ಇದನ್ನೂ ಓದಿ : 10 ಹುದ್ದೆ ನೆಪದಲ್ಲಿ 10 ಮಿಲಿಯನ್‌ ಉದ್ಯೋಗ ಸೃಷ್ಟಿ ವೈಫಲ್ಯ ಮರೆಸಹೊರಟ ಮೋದಿ

ಸರ್ಕಾರದ ತೇಪೆ ಕೆಲಸ

ಪ್ರತಿ ವರದಿಯೂ ಸರ್ಕಾರದ ವೈಫಲ್ಯವನ್ನು ಎತ್ತಿಹಿಡಿಯುತ್ತಿರುವುದರಿಂದ ವಾಸ್ತವಾಂಶ ಮರೆಮಾಚಲು ಪ್ರಯತ್ನ ಮಾಡುತ್ತಲೇ ಇದೆ. "ಸಮೀಕ್ಷೆ ಕೇವಲ ಎಂಟು ವಲಯಗಳ ಮಾದರಿಗಳನ್ನು ಸಂಗ್ರಹಿಸುತ್ತದೆ. ಅಲ್ಲದೆ, ಹತ್ತು ಅಥವಾ ಅದಕ್ಕಿಂತ ಹೆಚ್ಚು ಕಾರ್ಮಿಕರು ಇರುವ ಸಂಸ್ಥೆಗಳನ್ನು ಪರಿಗಣಿಸುತ್ತದೆ. ಒಟ್ಟು ಕಾರ್ಮಿಕ ಬಲ ೪೭ ಕೋಟಿ ಇದೆ. ಈ ಪೈಕಿ, ಕೇವಲ ೨.೪ ಕೋಟಿ ಜನರನ್ನು ಸಮೀಕ್ಷೆ ಪರಿಗಣಿಸುತ್ತದೆ,” ಎನ್ನುತ್ತದೆ.

ಒಟ್ಟಾರೆ, ಹೊಸದಾಗಿ ಉದ್ಯೋಗ-ನಿರುದ್ಯೋಗ ಸಮೀಕ್ಷೆಯನ್ನು ನಡೆಸುವುದಿಲ್ಲ ಎಂದಿದೆ. ಈಗಾಗಲೇ ನ್ಯಾಷನಲ್‌ ಸ್ಯಾಂಪಲ್‌ ಸರ್ವೆ ಸಂಸ್ಥೆಯು ೨೦೧೭-೧೮ರ ಪಿರಿಯಾಡಿಕ್‌ ಲೇಬರ್‌ ಫೋರ್ಸ್‌ ಸರ್ವೆಯು ಈಗಾಗಲೇ ನಡೆಸಿದೆ. ಇದರ ವರದಿ ಯಾವ ಹೊತ್ತಿಗೆ ಬಿಡುಗಡೆಯಾಗಬಹುದು ಎಂಬ ಕುತೂಹಲವಿದೆ ಎಂಬ 'ದಿ ಟೆಲಿಗ್ರಾಫ್‌' ವರದಿ ಮಾಡಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More