ಇಡೀ ದೇಶಕ್ಕೆ ರಜೆ ಇದ್ದರೂ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಗೆ ಇರಲಿಲ್ಲ ರಜೆ!

ಪೆಟ್ರೋಲ್, ಡಿಸೇಲ್ ದರ ಯಾವ ಪರಿ ಜಿಗಿಯುತ್ತಿದೆ ನೋಡಿ. ಇಡೀ ದೇಶ ಗಾಂಧಿ ಜಯಂತಿಯ ರಜೆ ಮೂಡಿನಲ್ಲಿದ್ದರೂ ದರ ಏರಿಕೆಗೆ ಮಾತ್ರ ರಜೆ ಸಿಕ್ಕಿಲ್ಲ! ಕೇಂದ್ರ ಸರ್ಕಾರ ಗ್ರಾಹಕರನ್ನು ಲೂಟಿ ಮಾಡುವ ಹೊಸ ವಿಧಾನ ಇದು. ಅ.2ರಂದು ಡಿಸೇಲ್, ಪೆಟ್ರೋಲ್ ದರ ಮತ್ತೊಂದು ಗರಿಷ್ಠ ಮಟ್ಟ ಮುಟ್ಟಿವೆ

ರಜೆಯ ದಿನವಾದರೂ ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆಗೆ ರಜೆ ಇರಬಹುದು ಎಂದು ಅಂದುಕೊಂಡಿದ್ದರೆ ಅದು ತಪ್ಪು. ಕೇಂದ್ರ ಸರ್ಕಾರ ಗಾಂಧಿ ಜಯಂತಿಯ ದಿನವೂ ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಸಿದೆ. ಪರಿಣಾಮವಾಗಿ, ಅಕ್ಟೋಬರ್ 2ರಂದು ಪೆಟ್ರೋಲ್ ಮತ್ತು ಡಿಸೇಲ್ ಮತ್ತೊಂದು ಸಾರ್ವಕಾಲಿಕ ಗರಿಷ್ಠ ಮಟ್ಟ ಮುಚ್ಚಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕ್ರೂಡ್ 85 ಡಾಲರ್ ಮತ್ತು ಡಬ್ಲ್ಯೂಟಿಐ ಕ್ರೂಡ್ 76 ಡಾಲರ್ ಮುಟ್ಟಿದ್ದು, ಪ್ರಧಾನಿ ಮೋದಿ ಸರ್ಕಾರಕ್ಕೆ ಹೊಸ ಸವಾಲು ಎದುರಾಗಿದೆ. ಇದುವರೆಗೂ ಮೋದಿ ಸರ್ಕಾರದ ವಿವಿಧ ಸಚಿವಾಲಯಗಳ ಕಾರ್ಯದರ್ಶಿಗಳು ಕಚ್ಚಾ ತೈಲ 80 ಡಾಲರ್ ದಾಟುವುದಿಲ್ಲ ಮತ್ತು ರುಪಾಯಿ ಡಾಲರ್ ವಿರುದ್ಧ 70 ಡಾಲರ್ ದಾಟುವುದಿಲ್ಲ ಎಂಬ ಲೆಕ್ಕಚಾರ ಹಾಕುತ್ತ, ಅದನ್ನೇ ಪ್ರತಿಪಾದಿಸುತ್ತಾ ಕಾಲ ಕಳೆದಿದ್ದಾರೆ. ಇಂತಹ ಪರಿಸ್ಥಿತಿ ಬಂದರೆ ನಿಭಾಯಿಸುವುದು ಹೇಗೆಂಬ ಬಗ್ಗೆ ಕಾರ್ಯಯೋಜನೆ ರೂಪಿಸುವ ಬದಲು, ಪ್ರಧಾನಿ ಮೋದಿ ಅವನ್ನು ತುಷ್ಠೀಕರಿಸುವ ಮಾತುಗಳನ್ನಾಡುತ್ತಲೇ ಕಾಲ ಕಳೆದಿದ್ದಾರೆ. ಈಗ ನಿಜವಾದ ಸವಾಲು ಎದುರಾಗಿದೆ. ಅಂದರೆ, ಬ್ರೆಂಟ್ ಕ್ರೂಡ್ 85 ಡಾಲರ್ ದಾಟಿದೆ ಎಂದರೆ, ಕೇಂದ್ರ ಹಣಕಾಸು ಸಚಿವಾಲಯದ ಕಾರ್ಯದರ್ಶಿಗಳು ಲೆಕ್ಕಹಾಕಿದ್ದಕ್ಕಿಂತ 5 ಡಾಲರ್ ಹೆಚ್ಚಿದೆ.

ಮುಖ್ಯ ಸಮಸ್ಯೆ ಅದಲ್ಲ. 2017 ಅಕ್ಟೋಬರ್ 3ರಂದು 56 ಡಾಲರ್ ಇದ್ದ ಬ್ರೆಂಟ್ ಕ್ರೂಡ್ ಈಗ 85 ಡಾಲರಿಗೆ ಏರಿದೆ. ಇದೇ ವೇಳೆ, ಡಾಲರ್ ವಿರುದ್ಧ 65.30 ಇದ್ದ ರುಪಾಯಿ ಮೌಲ್ಯವು 72.91ಕ್ಕೆ ಕುಸಿದಿದೆ.

ಮೋದಿ ಸರ್ಕಾರ ಕಚ್ಚಾ ತೈಲ ದರ ಏರಿಕೆಯ ಸವಾಲಿನ ಜತೆ ಕುಸಿಯುತ್ತಿರುವ ರುಪಾಯಿ ಮೌಲ್ಯದ ಸವಾಲನ್ನು ನಿಭಾಯಿಸಬೇಕಿದೆ. ಈಗಾಗಲೇ ಚಾಲ್ತಿ ಖಾತೆ ಕೊರತೆಯು ನಿಗದಿತ ಮಿತಿ ದಾಟಿದೆ. ವಿತ್ತೀಯ ಕೊರತೆಯನ್ನು ಶೇ.3.3ರ ಮಿತಿ ಕಾಯ್ದುಕೊಳ್ಳುವುದಾಗಿ ವಿತ್ತ ಸಚಿವರು, ವಿತ್ತ ಸಚಿವಾಲಯದ ಕಾರ್ಯದರ್ಶಿಗಳು ಪದೇಪದೇ ಹೇಳುತ್ತಿದ್ದಾರೆ. ಅವರು ಪದೇಪದೇ ಹೇಳುತ್ತಿರುವುದರಲ್ಲೇ ವಿತ್ತೀಯ ಕೊರತೆ ಮತ್ತೆ 3.5ನ್ನು ದಾಟುವ ಅಪಾಯದ ಮುನ್ಸೂಚನೆ ಇದೆ.

ವರ್ಷದ ಹಿಂದೆ 56 ಡಾಲರ್ ಇದ್ದ ಕಚ್ಚಾ ತೈಲ ಅಕ್ಟೋಬರ್ 1ರ ದರಕ್ಕೆ ಹೋಲಿಸಿದರೆ 29 ಡಾಲರ್ ಹೆಚ್ಚಿದೆ. ಅಂದರೆ, ಒಂದೇ ವರ್ಷದಲ್ಲಿ ಶೇ.51ರಷ್ಟು ಜಿಗಿದಿದೆ. ಇದೇ ವೇಳೆ, ಡಾಲರ್ ವಿರುದ್ಧ ರುಪಾಯಿ ಶೇ.12ರಷ್ಟು ಅಪಮೌಲ್ಯಗೊಂಡಿದೆ.

ಈ ನಡುವೆ, ದೇಶದ ಆಮದು ಪ್ರಮಾಣ ಹಿಗ್ಗಿದ್ದು ರಫ್ತು ಪ್ರಮಾಣ ತಗ್ಗಿದೆ. ಇದು ಚಾಲ್ತಿ ಖಾತೆ ಕೊರತೆ ಹಿಗ್ಗಲು ಕಾರಣವಾಗಿದೆ. ಇಂತಹ ಸಂದರ್ಭಗಳಲ್ಲಿ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಬೇಕಾದ ಕೇಂದ್ರ ಸರ್ಕಾರ ಅಂತಹ ಯಾವುದೇ ಪ್ರಯತ್ನಕ್ಕೆ ಮುಂದಾಗಿಲ್ಲ. ರುಪಾಯಿಯು ಡಾಲರ್ ವಿರುದ್ಧ 72ರ ಮಟ್ಟಕ್ಕೆ ಕುಸಿಯುವವರೆಗೂ ಏನೂ ಆಗಿಯೇ ಇಲ್ಲವೆಂಬಂತೆ ಕೈಕಟ್ಟಿ ಕುಳಿತಿತ್ತು. ಅಪಾಯದ ಗಂಟೆ ಬಾರಿಸಿದ ನಂತರವಷ್ಟೇ ಅನಗತ್ಯ ಮತ್ತು ಐಷಾರಾಮಿ ವಸ್ತುಗಳ ಆಮದು ಮೇಲೆ ನಿರ್ಬಂಧ ಹೇರಿದೆ.

ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದ ಕಾರಣ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ರುಪಾಯಿ ಕುಸಿತಕ್ಕೂ ಅಸಹಾಯಕತೆ ವ್ಯಕ್ತಪಡಿಸುತ್ತಿದೆ, ಕಚ್ಚಾ ತೈಲ ಏರಿಕೆಗೂ ಅಸಹಾಯಕತೆ ವ್ಯಕ್ತಪಡಿಸುತ್ತಿದೆ. ಆದರೆ, ದೇಶೀಯ ಮಾರುಕಟ್ಟೆಯಲ್ಲಿ ಸತತವಾಗಿ ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಸುತ್ತಲೇ ಬಂದು ಜನಸಾಮಾನ್ಯರನ್ನು ಅಸಹಾಯಕರನ್ನಾಗಿ ಮಾಡಿದೆ.

ಇದನ್ನೂ ಓದಿ : ಮೋದಿ ಮ್ಯಾಜಿಕ್: ಈ ವರ್ಷ ಡಿಸೇಲ್ ₹15.15, ಪೆಟ್ರೋಲ್ ₹13.24 ದರ ಏರಿಕೆ

ಬೆಂಗಳೂರಿನಲ್ಲಿ ಡಿಸೇಲ್ 76ರ ಸಮೀಪಕ್ಕೆ, ಪೆಟ್ರೋಲ್ 85ರ ಸಮೀಪಕ್ಕೆ ಬಂದಿದೆ. ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು, ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ರಾಜ್ಯ ಸರ್ಕಾರ ವಿಧಿಸುತ್ತಿರುವ ತೆರಿಗೆಯಲ್ಲಿ ಸುಮಾರು 2 ರುಪಾಯಿ ಕಡಿತ ಮಾಡದೆ ಹೋಗಿದ್ದರೆ ಪೆಟ್ರೋಲ್ 87 ಮತ್ತು ಡಿಸೇಲ್ 79 ರುಪಾಯಿ ಸಮೀಪಕ್ಕೆ ಬಂದಿರುತ್ತಿತ್ತು.

ಮುಂಬೈನಲ್ಲಿ ಪೆಟ್ರೋಲ್ 92ರ ಸಮೀಪಕ್ಕೆ, ಡಿಸೇಲ್ 80ರ ಸಮೀಪಕ್ಕೆ ಬಂದಿದೆ. ಈ ದರ ಬೆಂಗಳೂರು ಮತ್ತು ಕರ್ನಾಟಕಕ್ಕೂ ಬರುವ ದಿನ ದೂರ ಇಲ್ಲ. ಈ ವರ್ಷಾಂತ್ಯಕ್ಕೆ ಪೆಟ್ರೋಲ್ ಮುಂಬೈ ಮತ್ತಿತರ ನಗರಗಳಲ್ಲಿ ಶತಕ ಬಾರಿಸುವ ಸಾಧ್ಯತೆ ಇದೆ. ಕಚ್ಚಾ ತೈಲ ಜಿಗಿಯುತ್ತಿರುವ ವೇಗ ನೋಡಿದರೆ, ವರ್ಷಾಂತ್ಯಕ್ಕೂ ಮುನ್ನವೇ ಶತಕದ ಸಾಧನೆ ಆಗುವ ಸಾಧ್ಯತೆ ಹೆಚ್ಚಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More