ಮಾರ್ನಿಂಗ್ ಡೈಜೆಸ್ಟ್ | ಇಂದು ನೀವು ಗಮನಿಸಬೇಕಾದ 4 ಪ್ರಮುಖ ಸುದ್ದಿಗಳು

ಇಂದು ನೀವು ಗಮನಿಸಬೇಕಾದ ಪ್ರಮುಖ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಸುದ್ದಿಗಳು

ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ವಿಶ್ವಸಂಸ್ಥೆ ಮಹಾಪ್ರಧಾನ ಕಾರ್ಯದರ್ಶಿ ಗುಟೆರೆಸ್

ಮೂರು ದಿನಗಳ ಭಾರತ ಪ್ರವಾಸ ಕೈಗೊಂಡಿರುವ ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಅಂಟೊನಿಯೋ ಗುಟೆರೆಸ್, ಮಂಗಳವಾರ ಮಹಾತ್ಮ ಗಾಂಧಿ ಅವರ ೧೫೦ನೇ ಜಯಂತಿ ಹಿನ್ನೆಲೆಯಲ್ಲಿ ಆಯೋಜಿಸಿರುವ ಅಂತಾರಾಷ್ಟ್ರೀಯ ನೈರ್ಮಲ್ಯ ಸಮಾವೇಶ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಜತೆ ಮಾತುಕತೆ ನಡೆಸಲಿದ್ದು, ಜಾಗತಿಕ ಸಮಸ್ಯೆಗಳಾದ ಭಯೋತ್ಪಾದನೆ ಹಾಗೂ ಪರಿಸರ ಬದಲಾವಣೆ ಕುರಿತಾಗಿ ವಿಶ್ವಸಂಸ್ಥೆ ಹಾಗೂ ಭಾರತದ ಸಹಕಾರವನ್ನು ಇನ್ನಷ್ಟು ಗಟ್ಟಿಗೊಳಿಸಲಿದ್ದಾರೆ.

ಮಹಾರಾಷ್ಟ್ರದ ವಾರ್ಧಾದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಭೆ

ಮಹಾತ್ಮ ಗಾಂಧಿಯವರ ಸೇವಾಗ್ರಾಮವಾದ ಮಹಾರಾಷ್ಟ್ರದ ವಾರ್ಧಾದಲ್ಲಿ ಮಂಗಳವಾರ ಕಾಂಗ್ರೆಸ್ ಕಾರ್ಯಕಾರಿ ಸಭೆ ನಡೆಯಲಿದೆ. ಅಧ್ಯಕ್ಷ ರಾಹುಲ್ ಗಾಂಧಿ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸಭೆಯಲ್ಲಿ ಭಾಗವಹಿಸಲಿದ್ದಾರೆ. ದೇಶದ ಸದ್ಯದ ಸಾಮಾಜಿಕ, ರಾಜಕೀಯ ಪರಿಸ್ಥಿತಿ ಕುರಿತು ಗಹನ ಚರ್ಚೆ ನಡೆಯಲಿದೆ.

ಗಾಂಧಿ ಜಯಂತಿ ದಿನದಂದೇ ಲೋಕಪಾಲ ಮಸೂದೆಗೆ ಒತ್ತಾಯಿಸಿ ಹಜಾರೆ ಉಪವಾಸ ಸತ್ಯಾಗ್ರಹ

ಲೋಕಪಾಲ ಮಸೂದೆಗೆ ಆಗ್ರಹಿಸಿ ಗಾಂಧಿ ಜಯಂತಿ ದಿನವಾದ ಇಂದಿನಿಂದಲೇ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ದೆಹಲಿಯಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಲಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಅಣ್ಣಾ ಹಜಾರೆ ಪ್ರಧಾನಿ ಮೋದಿಗೆ ಪತ್ರ ಬರೆದು ಭ್ರಷ್ಟಾಚಾರ ನಿಯಂತ್ರಿಸುವ ಲೋಕಪಾಲ ಮಸೂದೆ ಮಂಡಿಸದಿದ್ದರೆ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಎಚ್ಚರಿಸಿದ್ದರು. ಈವರೆಗೂ ಕೇಂದ್ರದಿಂದ ಯಾವುದೇ ಉತ್ತರ ಬಾರದ ಹಿನ್ನೆಲೆಯಲ್ಲಿ ಹಾಗೂ ಭ್ರಷ್ಟಾಚಾರ ನಿರ್ಮೂಲನೆ ಹೆಸರಲ್ಲೇ ಅಧಿಕರಾಕ್ಕೇರಿದ ಬಿಜೆಪಿ ಸರ್ಕಾರದ ವಿಳಂಬ ಧೋರಣೆ ವಿರುದ್ಧ ಅಣ್ಣಾ ಹಜಾರೆ ಇಂದಿನಿಂದ ಉಪವಾಸ ಸತ್ಯಾಗ್ರಹ ಆರಂಭಿಸಲಿದ್ದಾರೆ.

ಅಜಯ್ ಜಯರಾಮ್, ಸೌರಭ್‌ಗೆ ಪ್ರಶಸ್ತಿ ಗುರಿ

ಚೀನಾ ತೈಪೆ ವಿಶ್ವ ಟೂರ್ ಸೂಪರ್ ೩೦೦ ಬ್ಯಾಡ್ಮಿಂಟನ್ ಪಂದ್ಯಾವಳಿಯು ಇಂದಿನಿಂದ ಶುರುವಾಗುತ್ತಿದ್ದು, ಯುವ ಆಟಗಾರರಾದ ಅಜಯ್ ಜಯರಾಮ್ ಮತ್ತು ಸೌರಭ್ ವರ್ಮಾ ಪ್ರಶಸ್ತಿ ಗೆಲ್ಲುವ ಗುರಿ ಹೊತ್ತಿದ್ದಾರೆ. ಇದೇ ಅಕ್ಟೋಬರ್ ೧೬ರಿಂದ ೨೧ರವರೆಗೆ ಮತ್ತು ಅ. ೨೩ರಿಂದ ೨೮ರವರೆಗೆ ನಡೆಯಲಿರುವ ಡೆನ್ಮಾರ್ಕ್ ಮತ್ತು ಫ್ರೆಂಚ್ ಓಪನ್ ಪಂದ್ಯಾವಳಿಗಳಿಗೆ ಸೂಕ್ತ ತಯಾರಿ ನಡೆಸಲು ಪಿ ವಿ ಸಿಂಧು, ಕಿಡಾಂಬಿ ಶ್ರೀಕಾಂತ್ ಮತ್ತು ಸೈನಾ ನೆಹ್ವಾಲ್ ಪ್ರಸಕ್ತ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ವಿಯೆಟ್ನಾಂ ಮತ್ತು ವೈಟ್ ನೈಟ್ಸ್ ಪಂದ್ಯಾವಳಿಗಳಲ್ಲಿ ಪ್ರಶಸ್ತಿ ಸುತ್ತು ತಲುಪಿದ್ದ ಅಜಯ್ ಜಯರಾಮ್, ಚೀನಾ ತೈಪೆ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಭರವಸೆ ಮೂಡಿಸಿದ್ದಾರೆ. ಮೊದಲ ಸುತ್ತಿನಲ್ಲಿ ಅವರು ಜಪಾನ್‌ನ ಹಾಶಿರೊ ಶಿಮೊನೊ ವಿರುದ್ಧ ಸೆಣಸಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮುಂದಿರುವ ಅತಿದೊಡ್ಡ ಸವಾಲು ಯಾವುದು ಗೊತ್ತೇ?
ಶ್ರೀಸಾಮಾನ್ಯರ ಸ್ವಾಮೀಜಿ ಎಂದೆನಿಸಿಕೊಂಡ ತೋಂಟದಾರ್ಯ ಶ್ರೀಗಳು ಇನ್ನಿಲ್ಲ
ಸೂಪರ್ಟೆಕ್ ₹600 ಕೋಟಿ ಸಾಲ ಮರುಪಾವತಿ ವೈಫಲ್ಯ; ಕಾದಿದೆ ಮತ್ತಷ್ಟು ಸಂಕಷ್ಟ?
Editor’s Pick More