ಅನ್ನಭಾಗ್ಯ, ಬೆಂಬಲ ಬೆಲೆ ಯೋಜನೆಯ ಆಹಾರ ಧಾನ್ಯ ಸಂಗ್ರಹಣೆಗೆ ಉಗ್ರಾಣಗಳೇ ಇಲ್ಲ!

ವಿವಿಧ ಯೋಜನೆಗಳಡಿಯಲ್ಲಿ ಸಂಗ್ರಹವಾಗಿರುವ ಅಕ್ಕಿ, ಗೋಧಿ ಇನ್ನಿತರ ಆಹಾರಧಾನ್ಯಗಳ ಸಂರಕ್ಷಣೆ ವಿಚಾರ ಉಗ್ರಾಣ ನಿಗಮಕ್ಕೆ ದೊಡ್ಡ ತಲೆನೋವಾಗಿದೆ. ಅದರಲ್ಲೂ, ಬೆಂಗಳೂರು ನಗರ ಜಿಲ್ಲೆಯಲ್ಲಿ ಉಗ್ರಾಣ ನಿರ್ಮಾಣಕ್ಕೆ ಜಾಗದ ತೀವ್ರ ಕೊರತೆಯಾಗಿದ್ದು, ಜಿಲ್ಲಾಡಳಿತಕ್ಕೆ ಸವಾಲಾಗಿದೆ

ಅನ್ನಭಾಗ್ಯ, ಸರ್ಕಾರದ ಪಡಿತರ ಯೋಜನೆ, ಆಹಾರ ಭದ್ರತಾ ಮಸೂದೆ ಅನ್ವಯ ವಿತರಿಸುವ ಅಕ್ಕಿ, ಗೋಧಿಯನ್ನು ಸಂಗ್ರಹಿಸಿ ಹೆಚ್ಚುವರಿಯಾಗಿ ದಾಸ್ತಾನು ಮಾಡಲು ಬೆಂಗಳೂರು ನಗರ ಜಿಲ್ಲೆ ಸೇರಿದಂತೆ ರಾಜ್ಯದ ಹಲವೆಡೆ ಉಗ್ರಾಣಗಳೇ ಇಲ್ಲ! ಈಗಾಗಲೇ ಸಂಗ್ರಹಿಸಲಾಗಿರುವ ಅಕ್ಕಿ, ಗೋಧಿ ಸೇರಿದಂತೆ ಇನ್ನಿತರ ಧಾನ್ಯಗಳನ್ನು ಸಂರಕ್ಷಿಸಲು ಪೇಚಾಡುತ್ತಿದೆ.

೨೦೦೩-೦೪ರಿಂದ ೨೦೧೭-೧೮ನೇ ಸಾಲಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಮೆಕ್ಕೆಜೋಳ, ಬಿಳಿ ಜೋಳ, ಸಜ್ಜೆ, ರಾಗಿ, ಉಂಡೆ ಕೊಬ್ಬರಿ, ಎಣ್ಣೆ ಕಾಳು ಸೇರಿದಂತೆ ಇನ್ನಿತರ ಸರಕುಗಳನ್ನು ಖರೀದಿಸಿದೆ. ಆದರೆ, ಈ ಧಾನ್ಯಗಳನ್ನು ಸಂಗ್ರಹಿಸಲು ಉಗ್ರಾಣ ಸೌಲಭ್ಯ ಕೊರತೆ ಕಂಡುಬಂದಿದೆ. ಈ ಜಿಲ್ಲೆಯ ೪ ಕೇಂದ್ರಗಳಲ್ಲಿ ಉಗ್ರಾಣ ನಿಗಮಕ್ಕೆ ಜಮೀನು ಲಭ್ಯವಿಲ್ಲದಿರುವುದೇ ಇದಕ್ಕೆ ಮೂಲ ಕಾರಣ.

ಬೆಂಗಳೂರು ನಗರ ಜಿಲ್ಲಾ ಕೇಂದ್ರದ ವ್ಯಾಪ್ತಿಯಲ್ಲಿ ಹೆಚ್ಚುವರಿ ಸಾಮರ್ಥ್ಯದ ಉಗ್ರಾಣಗಳನ್ನು ನಿರ್ಮಿಸಲು ಸೂಕ್ತ ಜಾಗಕ್ಕಾಗಿ ರಾಜ್ಯ ಉಗ್ರಾಣ ನಿಗಮ ಸರ್ಕಾರದ  ಮೊರೆ ಹೊಕ್ಕಿದೆ. ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ ಎನ್ ವಿಜಯಪ್ರಕಾಶ್‌ ಅವರು ಈ ಸಂಬಂಧ ಜಿಲ್ಲಾಧಿಕಾರಿಗೆ ೨೦೧೮ರ ಸೆ.೨೨ರಂದು ಪತ್ರ ಬರೆದಿದ್ದಾರೆ.

ಉಗ್ರಾಣ ಸೌಲಭ್ಯದ ಕೊರತೆಯನ್ನು ನೀಗಿಸಲು ಬೆಂಗಳೂರು ನಗರ ಜಿಲ್ಲೆಯಲ್ಲಿ ಹೆಚ್ಚುವರಿ ಸಾಮರ್ಥ್ಯದ ಉಗ್ರಾಣಗಳನ್ನು ನಿರ್ಮಿಸಲು ಹಾಗೂ ಉಗ್ರಾಣ ಸೌಲಭ್ಯಗಳಿಲ್ಲದ ತಾಲೂಕುಗಳಲ್ಲಿ ಹೊಸದಾಗಿ ಉಗ್ರಾಣಗಳನ್ನು ನಿರ್ಮಿಸಲು ಬೇಡಿಕೆ ಇರಿಸಿದೆ.

ಇದನ್ನೂ ಓದಿ : ೬೫೦ ಕೋಟಿ ಸಾಲ ಎತ್ತಲು ೪೫೭ ಎಕರೆ ಒತ್ತೆ; ಕೈತಪ್ಪಲಿದೆಯೇ ಕೃಷಿ ಫಾರಂ ಜಮೀನು?

ಬೆಂಗಳೂರು ಉತ್ತರ, ಬೆಂಗಳೂರು ಉತ್ತರ ಹೆಚ್ಚುವರಿ, ಬೆಂಗಳೂರು ದಕ್ಷಿಣ, ಬೆಂಗಳೂರು ಪೂರ್ವ ಮತ್ತು ಆನೇಕಲ್ ತಾಲೂಕಿನಲ್ಲಿ ತಲಾ ೧೮ ಎಕರೆ ೨೦ ಗುಂಟೆ ವಿಸ್ತೀರ್ಣದಲ್ಲಿ ಒಟ್ಟು ೯೦ ಎಕರೆ ೧೦೦ ಗುಂಟೆ ಜಮೀನು ಬೇಕಿದೆ. ಆದರೆ, ಇಷ್ಟೊಂದು ಜಮೀನನ್ನು ಒದಗಿಸಿಕೊಳ್ಳುವುದು ಬೆಂಗಳೂರು ನಗರ  ಜಿಲ್ಲಾಡಳಿತಕ್ಕೆ ದೊಡ್ಡ ಸವಾಲಾಗಿದೆ.

ಬೆಂಗಳೂರು ನಗರ ಸುತ್ತಮುತ್ತ ಜಮೀನುಗಳ ಮಾರುಕಟ್ಟೆ ದರ ಹೆಚ್ಚಿರುವ ಕಾರಣ, ಜಮೀನು ಖರೀದಿಗೆ ಉಗ್ರಾಣ ನಿಗಮ ಹಿಂದೇಟು ಹಾಕಿದೆ ಎನ್ನಲಾಗುತ್ತಿದೆ. ಹೀಗಾಗಿ, ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ವಶಪಡಿಸಿಕೊಂಡಿರುವ ಒತ್ತುವರಿ ಜಮೀನು, ಗೋಮಾಳ, ಸರ್ಕಾರಿ ಭೂಮಿಯಲ್ಲೇ ಮಂಜೂರು ಮಾಡಿಕೊಡಬೇಕು ಎಂದು ಪತ್ರ ಬರೆದಿದೆ.

ಬೆಂಗಳೂರು ನಗರ ಮತ್ತು ಆನೇಕಲ್ ತಾಲೂಕಿನಲ್ಲಿ ಇರುವ ಸ್ವಂತ ಉಗ್ರಾಣಗಳಲ್ಲಿ ೫೧,೮೧೧ ಮೆಟ್ರಿಕ್ ಟನ್‌ ಪ್ರಮಾಣದಲ್ಲಿ ಆಹಾರ ಧಾನ್ಯಗಳನ್ನು ದಾಸ್ತಾನು ಮಾಡಬಹುದು. ನಿರ್ಮಾಣ ಹಂತದಲ್ಲಿರುವ ಉಗ್ರಾಣಗಳಲ್ಲಿ ೪೧,೬೯೬, ಬಾಡಿಗೆ ಮಳಿಗೆಗಳಲ್ಲಿ ೪,೧೪೪ ಸೇರಿ ಒಟ್ಟು ೧,೨೨,೨೨೫೧ ಮೆಟ್ರಿಕ್ ಟನ್‌ ಪ್ರಮಾಣದಲ್ಲಿ ಸಂಗ್ರಹಿಸಿಡಬಹುದು.  ಈ ಉಗ್ರಾಣಗಳಲ್ಲಿನ ಮಳಿಗೆಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಲಾಗಿದೆಯಾದರೂ ಹೆಚ್ಚುವರಿಯಾಗಿ ಸಂಗ್ರಹಿಸಲಾಗುತ್ತಿರುವ ಧಾನ್ಯಗಳನ್ನು ಸಂಗ್ರಹಿಸಲು ಜಾಗವಿಲ್ಲದಂತಾಗಿದೆ.

ರಾಜ್ಯ ಉಗ್ರಾಣ ನಿಗಮ ರಾಜ್ಯಾದ್ಯಂತ ೧೪೮ ಉಗ್ರಾಣ ಕೇಂದ್ರಗಳನ್ನು ಹೊಂದಿದೆ. ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿದ ಭತ್ತ, ಮೆಕ್ಕೆಜೋಳ, ಬಿಳಿ ಜೋಳ ಮಾತ್ರವಲ್ಲದೆ, ಸರ್ಕಾರದ ಲೆವಿ ಯೋಜನೆಯಡಿ ಖರೀದಿಸಿದ ಅಕ್ಕಿ ಸರಕನ್ನು ಉಗ್ರಾಣ ಮಳಿಗೆಗಳಲ್ಲಿ ಸಂಗ್ರಹಿಸುತ್ತಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More