ಇಂದಿನ ಡೈಜೆಸ್ಟ್ | ಇಂದು ಗಮನಿಸಬೇಕಾದ ಇತರ 7 ಪ್ರಮುಖ ಸುದ್ದಿಗಳು

ಇಂದು ನೀವು ಗಮನಿಸಬೇಕಾದ ಪ್ರಮುಖ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಸುದ್ದಿಗಳು

ನವೆಂಬರ್, ಡಿಸೆಂಬರಿನಲ್ಲಿ ಜಿಎಸ್ಟಿ ತೆರಿಗೆ ಸಂಗ್ರಹ 1 ಲಕ್ಷ ಕೋಟಿ ಮೀರುವ ನಿರೀಕ್ಷೆ

ಬರುವ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ ಸಂಗ್ರಹವು 1 ಲಕ್ಷ ಕೋಟಿ ರುಪಾಯಿ ದಾಟುವ ನಿರೀಕ್ಷೆ ಹಣಕಾಸು ಇಲಾಖೆಗೆ ಇದೆ. ಈ ಅವಧಿಯಲ್ಲಿ ಹೆಚ್ಚಿನ ಹಬ್ಬಗಳಿರುವುದರಿಂದ ಸರಕು ಸೇವೆಗಳಿಗೆ ಬೇಡಿಕೆ ಹೆಚ್ಚಿ ನಿರೀಕ್ಷೆ ಮೀರಿ ವಹಿವಾಟು ನಡೆಯಲಿದೆ. ಅಲ್ಲದೆ, ತೆರಿಗೆ ವಂಚನೆ ತಡೆಗೆ ಇಲಾಖೆ ಕೈಗೊಂಡಿರುವ ಕ್ರಮಗಳಿಂದಾಗಿ ತೆರಿಗೆ ಸೋರಿಕೆಯು ತಗ್ಗಲಿದೆ ಎಂದು ಹಣಕಾಸು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಸೆಪ್ಟೆಂಬರ್ ತಿಂಗಳಲ್ಲಿ ಜಿಎಸ್ಟಿ ತೆರಿಗೆ 94,442 ಕೋಟಿ ರುಪಾಯಿ ಸಂಗ್ರಹವಾಗಿದೆ. ಹಬ್ಬಗಳ ಅವಧಿಯಲ್ಲಿ ಹಿಗ್ಗುವ ವಹಿವಾಟಿನಿಂದ ತೆರಿಗೆ ಸಂಗ್ರಹ ಹೆಚ್ಚಳವಾಗುವುದರಿಂದ ನವೆಂಬರ್, ಡಿಸೆಂಬರಿನಲ್ಲಿ 1 ಲಕ್ಷ ಕೋಟಿ ದಾಟಲಿದೆ ಎಂದು ತಿಳಿಸಿದ್ದಾರೆ.

ಲೇಸರ್‌ ಬೆಳಕಿನ ಸಂಶೋಧನೆಗೆ ಮೂವರು ಭೌತಶಾಸ್ತ್ರಜ್ಞರಿಗೆ ನೊಬೆಲ್‌

ಲೇಸರ್‌ ಫಿಸಿಕ್ಸ್‌ನಲ್ಲಿ ಮಹತ್ವದ ಸಂಶೋಧನೆ ಮಾಡಿದ ಅಮೆರಿಕದ ಆರ್ಥರ್‌ ಆಶ್ಕಿನ್‌, ಫ್ರಾನ್ಸ್‌ನ ಗೆರಾರ್ಡ್‌ ಮತ್ತು ಕೆನಡಾದ ಡೋನಾ ಸ್ಟ್ರಿಕ್‌ಲ್ಯಾಂಡ್‌ ೨೦೧೮ರ ನೊಬೆಲ್‌ ಪುರಸ್ಕಾರ ಪಾತ್ರರಾಗಿದ್ದಾರೆ. ವೈದ್ಯಕೀಯ ಕ್ಷೇತ್ರಕ್ಕೆ ಲೇಸರ್‌ ಬೆಳಕಿನಿಂದ ರೂಪಿಸಿದ ಉಪಕರಣಗಳನ್ನು ಬಳಸುವ ನಿಟ್ಟಿನಲ್ಲಿ ಈ ಮೂವರು ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಸ್ವೀಡಿಷ್‌ ಅಕಾಡೆಮಿ ಪ್ರಶಸ್ತಿ ಪ್ರಕಟಣೆಯಲ್ಲಿ ತಿಳಿಸಿದೆ. ವಿಶೇಷವೆಂದರೆ, ೫೫ ವರ್ಷಗಳ ಬಳಿಕ ಭೌತಶಾಸ್ತ್ರ ವಿಭಾಗದಲ್ಲಿ ಮಹಿಳೆಯೊಬ್ಬರು ಪ್ರಶಸ್ತಿಗೆ ಭಾಜನರಾಗಿರುವುದು ವಿಶೇಷ. ಮೇರಿ ಕ್ಯೂರಿ ೧೯೦೩ರಲ್ಲಿ, ಗೆಪ್ಪರ್‌ ಮೇಯರ್‌ ೧೯೬೩ರಲ್ಲಿ ನೊಬೆಲ್‌ ಪುರಸ್ಕಾರ ಪಡೆದಿದ್ದರು.

ಕಾರ್ಯಕಾರಣಿ ಸಭೆಯಲ್ಲಿ ಕೇಂದ್ರದ ವಿರುದ್ಧ ಕಿಡಿಕಾರಿದ ಕಾಂಗ್ರೆಸ್

ಮಹಾತ್ಮ ಗಾಂಧಿಯವರ ೧೫೦ನೇ ವರ್ಷದ ಜಯಂತಿಯ ಹಿನ್ನೆಲೆಯಲ್ಲಿ ಮಂಗಳವಾರ ಕಾಂಗ್ರೆಸ್ ಪಕ್ಷ ತನ್ನ ಕಾರ್ಯಕಾರಣಿ ಸಭೆ ನಡೆಸಿದ್ದು, ಮೋದಿ ಸರ್ಕಾರದ ವಿರುದ್ಧ ಅಸಮಧಾನ ವ್ಯಕ್ತಪಡಿಸಿದೆ. ಗಾಂಧಿ ವರ್ಷಾಚರಣೆಯನ್ನು ಮೋದಿ ಸರ್ಕಾರ ವಿರುದ್ಧದ ಎರಡನೇ ಸ್ವಾತಂತ್ರ್ಯ ಹೋರಾಟವಾಗಿದೆ. ದ್ವೇಷ ಹಾಗೂ ಹಿಂಸೆಯ ಸಿದ್ದಾಂತದೆದುರು ಹೋರಾಡಬೇಕಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಮಹಾರಾಷ್ಟ್ರದ ವಾದ್ರಾ ಜಿಲ್ಲೆಯ ಗ್ರಾಮ ಸೇವಾ ಆಶ್ರಮದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷ ರಾಹುಲ್ ಗಾಂಧಿ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸಭೆಯಲ್ಲಿ ಭಾಗವಹಿದ್ದರು.

ಕೋಲ್ಕತ್ತಾದಲ್ಲಿ ಬಾಂಬ್ ಸ್ಪೋಟ; ಓರ್ವ ಬಾಲಕ ಸಾವು, ಹಲವರಿಗೆ ಗಾಯ

ಕೋಲ್ಕತ್ತಾದ ನಗೆರ್ ಬಜಾರ್ ವ್ಯಾಪ್ತಿಯ ಕಾಝಿಪುರ ಪ್ರದೇಶದಲ್ಲಿ ಬಾಂಬ್ ಸ್ಪೋಟ ಸಂಭವಿಸಿ ಎಂಟು ವರ್ಷದ ಬಾಲಕ ಸಾವನಪ್ಪಿದ್ದು, ಒಂಬತ್ತು ಮಂದಿ ಗಾಯಗೊಂಡಿದ್ದಾರೆ. ನೆಗೆರ್ ಬಜಾರಿನ ಕಟ್ಟಡವೊಂದರ ನೆಲಮಹಡಿಯಲ್ಲಿ ಈ ಸ್ಪೋಟ ಸಂಭವಿಸಿದ್ದು, ಸ್ಪೋಟ ನಡೆದ ಕಟ್ಟಡದಲ್ಲಿ ಸ್ಥಳೀಯ ನಗರ ಪಾಲಿಕೆ ಅಧ್ಯಕ್ಷ ಮತ್ತು ಟಿಎಂಸಿ ನಾಯಕ ಪಂಚು ರಾಯ್ ಕೂಡ ಇದ್ದರು. ಇವರನ್ನು ಟಾರ್ಗೆಟ್ ಮಾಡಿ ಈ ಬಾಂಬ್ ಸ್ಫೋಟಿಸಲಾಗಿದೆ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ. ಆದರೆ, ಬಿಜೆಪಿ ನಾಯಕರು ಈ ಆರೋಪ ತಳ್ಳಿಹಾಕಿದ್ದಾರೆ. ಸ್ಥಳಕ್ಕೆ ಬಾಂಬ್ ನಿಷ್ಕ್ರಿಯಾ ದಳ ಹಾಗೂ ಶ್ವಾನದಳದೊಂದಿಗೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದರು.

ಮಲಯಾಳಂ ಗಾಯಕ, ಸಂಗೀತ ಸಂಯೋಜಕ ಬಾಲಭಾಸ್ಕರ್‌ ನಿಧನ

ಮಲಯಾಳಂ ಗಾಯಕ, ಸಿನಿಮಾ ಸಂಗೀತ ಸಂಯೋಜಕ ಬಾಲಭಾಸ್ಕರ್‌ (40 ವರ್ಷ) ಸಾವನ್ನಪ್ಪಿದ್ದಾರೆ. ಸೆಪ್ಟೆಂಬರ್‌ 25ರಂದು ಕಾರು ಅಪಘಾತದಲ್ಲಿ ಅವರು ತೀವ್ರವಾಗಿ ಗಾಯಗೊಂಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು (ಅ.2) ಬೆಳಗ್ಗೆ ಅಗಲಿದ್ದಾರೆ. ಅಕ್ಟೋಬರ್‌ 25ರಂದು ಬಾಲಭಾಸ್ಕರ್ ಕುಟುಂಬ ಸಂಚರಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿತ್ತು. ಅವರ ಎರಡು ವರ್ಷದ ಮಗಳು ಸ್ಥಳದಲ್ಲೇ ಮೃತಪಟ್ಟಿದ್ದಳು. ತೀವ್ರವಾಗಿ ಗಾಯಗೊಂಡಿದ್ದ ಪತ್ನಿ ಲಕ್ಷ್ಮೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಸಂಗೀತ ಸಂಯೋಜಕರಾಗಿ ಗುರುತಿಸಿಕೊಂಡಿದ್ದ ಬಾಲಭಾಸ್ಕರ್, ಶ್ರೇಷ್ಠ ವಯೊಲಿನ್ ವಾದಕ ಹಾಗೂ ಗಾಯಕರಾಗಿಯೂ ಹೆಸರಾಗಿದ್ದರು. ಅವರ ನಿಧನಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಸೇರಿದಂತೆ ಮಲಯಾಳಂ ಚಿತ್ರರಂಗದ ಹಲವರು ಕಂಬನಿ ಮಿಡಿದಿದ್ದಾರೆ.

ತಂಗವೇಲು ಮರಿಯಪ್ಪನ್ ಏಷ್ಯಾ ಪ್ಯಾರಾ ಕ್ರೀಡಾಕೂಟದ ಧ್ವಜಧಾರಿ

ರಿಯೋ ಪ್ಯಾರಾಲಿಂಪಿಕ್ಸ್ ಸ್ವರ್ಣ ಪದಕ ವಿಜೇತ ತಂಗವೇಲು ಮರಿಯಪ್ಪನ್ ಇದೇ ತಿಂಗಳು ೬ರಿಂದ ೧೩ರವರೆಗೆ ಜಕಾರ್ತದಲ್ಲಿ ನಡೆಯಲಿರುವ ಪ್ಯಾರಾ ಏಷ್ಯಾಡ್‌ನಲ್ಲಿ ಭಾರತದ ಧ್ವಜಧಾರಿಯಾಗಿ ಆಯ್ಕೆಯಾಗಿದ್ದಾರೆ. ಅಥ್ಲೀಟ್‌ಗಳು, ತರಬೇತುದಾರರು, ಬೆಂಬಲಿತ ಸಿಬ್ಬಂದಿ, ಪದಾಧಿಕಾರಿಗಳು ಸೇರಿದಂತೆ ಒಟ್ಟಾರೆ ೩೦೨ ಸದಸ್ಯರ ನಿಯೋಗ ಜಕಾರ್ತದಲ್ಲಿ ಬೀಡುಬಿಟ್ಟಿದೆ. ೨.೫ ಲಕ್ಷ ಡಾಲರ್‌ಗಳನ್ನು ಕ್ರೀಡಾ ಸಚಿವಾಲಯ ಬಿಡುಗಡೆ ಮಾಡಿರದ ಹಿನ್ನೆಲೆಯಲ್ಲಿ ಸೋಮವಾರ (ಅ ೧) ಭಾರತದ ನಿಯೋಗವನ್ನು ಕ್ರೀಡಾ ಗ್ರಾಮಕ್ಕೆ ಬಿಟ್ಟಿರಲಿಲ್ಲ. ಆದರೆ, ಈಗ ಎಲ್ಲವೂ ಬಗೆಹರಿದಿದ್ದು ಕ್ರೀಡಾಪಟುಗಳು ಪದಕದ ಮೇಲೆ ಕಣ್ಣಿಟ್ಟಿದ್ದಾರೆ.

ಅಗ್ರಸ್ಥಾನ ಕಾಯ್ದುಕೊಂಡ ವಿರಾಟ್ ಪಡೆ

ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯ ಸರಣಿಯನ್ನು ೧-೪ರಿಂದ ಸೋತರೂ, ವಿರಾಟ್ ಕೊಹ್ಲಿ ಸಾರಥ್ಯದ ಭಾರತ ಕ್ರಿಕೆಟ್ ತಂಡ ಅಂತಾರಾಷ್ಟ್ರೀಯ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ತವರಿನಲ್ಲಿ ನಡೆಯಲಿರುವ ವೆಸ್ಟ್‌ಇಂಡೀಸ್ ವಿರುದ್ಧದ ಎರಡು ಪಂದ್ಯಗಳ ಸರಣಿಯನ್ನು ಗೆಲ್ಲುವುದರೊಂದಿಗೆ ಭಾರತ ತಂಡ ಇದೇ ಅಗ್ರಸ್ಥಾನದಲ್ಲಿ ಮುಂದುವರೆಯಲಿದೆ. ಗುರುವಾರದಿಂದ (ಅ ೪) ರಾಜ್‌ಕೋಟ್‌ನಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯವನ್ನೂ ಒಳಗೊಂಡಂತೆ ಕೊನೆಯ ಪಂದ್ಯವನ್ನು ಗೆದ್ದದ್ದೇ ಆದಲ್ಲಿ ಭಾರತ ತನ್ನ ಅಗ್ರಸ್ಥಾನವನ್ನು ಇನ್ನಷ್ಟು ಸುಭದ್ರಪಡಿಸಿಕೊಳ್ಳಲಿದೆ. ಪ್ರಸಕ್ತ ೧೧೫ ರೇಟಿಂಗ್ ಪಾಯಿಂಟ್ಸ್ ಗಳಿಸಿರುವ ಭಾರತ ತಂಡ, ವಿಂಡೀಸ್ ವಿರುದ್ಧದ ಸರಣಿಯನ್ನು ಸೋತರೆ ೧೦೮ ಪಾಯಿಂಟ್ಸ್‌ಗಳಿಗೆ ಕುಸಿಯಲಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More