ರಫೇಲ್‌ ವಿವಾದ | ಮೋದಿ ಪರ ಭೈರಪ್ಪ ವಕಾಲತ್ತು ಏನನ್ನು ಬಿಂಬಿಸುತ್ತದೆ?

ದೇಶವನ್ನು ಕಾಡುತ್ತಿರುವುದು ಭ್ರಷ್ಟಾಚಾರವೇ ಹೊರತು ಜಾತೀಯತೆಯಲ್ಲ ಎಂದು ಹಿಂದೊಮ್ಮೆ ಅರ್ಧಸತ್ಯ ಹೇಳಿದ್ದ  ಸಾಹಿತಿ ಎಸ್‌ ಎಲ್‌ ಭೈರಪ್ಪ, ಈಗ ಭ್ರಷ್ಟಾಚಾರದ ಕೆಸರಲ್ಲಿ ಬಿದ್ದಿರುವ ಮೋದಿ ವರ್ಚಸ್ಸನ್ನು ಎತ್ತಿ ನಿಲ್ಲಿಸಲೆತ್ನಿಸುವ  ಮೂಲಕ ಆ ಅರ್ಧ ಸತ್ಯದಿಂದಲೂ ವಿಮುಖರಾದಂತೆ ಕಾಣುತ್ತಿದ್ದಾರೆ

ಕೆಲವು ವರ್ಷದ ಹಿಂದೆ ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ತಮ್ಮ ಸಾಹಿತ್ಯದಲ್ಲಿನ ಮೌಲ್ಯ ಸಂಘರ್ಷ ಕುರಿತ ವಿಚಾರ ಸಂಕಿರಣದಲ್ಲಿ ಭಾಗಹಿಸಿದ್ದ ಕಾದಂಬರಿಕಾರ ಎಸ್‌.ಎಲ್‌.ಭೈರಪ್ಪ ಅವರನ್ನು ಸಾಹಿತ್ಯಾರ್ಥಿಯೊಬ್ಬರು, “ಹಿಂದೂ ಧರ್ಮ ಮತ್ತು ಬ್ಯಾಹ್ಮಣ್ಯದ ಮೇಲ್ಮೆಯನ್ನು ಕಾದಂಬರಿಗಳಲ್ಲಿ ಎತ್ತಿ ಹಿಡಿಯುವ ನೀವು ಜಾತೀಯತೆ ಮತ್ತು ಸನಾತನ ಧರ್ಮದ ಮೌಢ್ಯಗಳ ಬಗ್ಗೆ ಯಾಕೆ ಬರೆಯುವುದಿಲ್ಲ,’’ಎಂದು ಪ್ರಶ್ನಿಸಿದರು. ಅದಕ್ಕೆ ಭೈರಪ್ಪ, “ಜಾತೀಯತೆಯ ಸೂಕ್ಷ್ಮತೆ, ಜಾತಿಯ ಬೇರುಗಳನ್ನು ‘ದಾಟು’ ಕಾದಂಬರಿಯಲ್ಲಿ ನಾನು ವಿಶ್ಲೇಷಿದಷ್ಟು ಬೇರೆ ಯಾವುದೇ ಕಾದಂಬರಿಕಾರ ಮಾಡಿಲ್ಲ. ಆದರೂ, ಜಾತೀಯತೆಯ ಎಲ್ಲ ಸಮಸ್ಯೆಗೆ ಬ್ರಾಹ್ಮಣರೇ ಕಾರಣ ಎನ್ನುವುದರಲ್ಲಿ ಅರ್ಥವಿಲ್ಲ. ದೇಶವನ್ನಿಂದು ಕಾಡುತ್ತಿರುವುದು ಭ್ರಷ್ಟಾಚಾರವೇ ಹೊರತು ಜಾತೀಯತೆಯಲ್ಲ. ರಾಜಕಾರಣಿಗಳು, ಸಾಹಿತಿಗಳಷ್ಟೆ ಜಾತೀಯತೆ ಬಗ್ಗೆ ಮಾತನಾಡುತ್ತಾರೆ,’’ಎಂದು ಪ್ರತಿಕ್ರಿಯಿಸಿದ್ದರು.

ರಫೇಲ್‌ ಯುದ್ಧ ವಿಮಾನ ಖರೀದಿಯಲ್ಲಿ ನಡೆದಿದೆ ಎನ್ನಲಾದ ಬ್ರಹ್ಮಾಂಡ ಭ್ರಷ್ಟಾಚಾರದ ವಿಷಯ ದೇಶದಲ್ಲೀಗ ಸದ್ದು, ಸುದ್ದಿ ಮಾಡುತ್ತಿದೆ. ಪ್ರತಿಪಕ್ಷ ಕಾಂಗ್ರೆಸ್ ಮಾತ್ರವಲ್ಲ ಯಶವಂಶ ಸಿನ್ಹಾ, ಅರುಣ್‌ ಶೌರಿ ಸಹಿತ ಕೆಲವು ಬಿಜೆಪಿ ಮುಖಂಡರೇ ಈ ಹಗರಣದ ವಿರುದ್ಧ ಪ್ರಖರವಾಗಿ ಧ್ವನಿ ಎತ್ತಿದ್ದಾರೆ. “ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧ ನಡೆದ ರಫೇಲ್‌ ಖರೀದಿ ಹಗರಣಕ್ಕೆ ಮೋದಿಯೇ ನೇರ ಹೊಣೆ. ಸತ್ಯಾಸತ್ಯತೆ ತಿಳಿಯಲು ಸಿಎಜಿ ತನಿಖೆ ನಡೆಸಬೇಕು,’’ ಎನ್ನುವುದು ಸಿನ್ಹಾ ಮತ್ತು ಶೌರಿ ಅವರ ಬಹಿರಂಗ ಆಗ್ರಹ. ಫ್ರಾನ್ಸ್ ಮಾಜಿ ಅಧ್ಯಕ್ಷ ಹೊಲಾಂದ್‌ ಹೇಳಿಕೆ ಕೂಡ ಹಗರಣ ಮತ್ತು ಆಡಳಿತಾರೂಢರ ಹಿತಾಸಕ್ತಿ ಸಂಘರ್ಷವನ್ನು ಎತ್ತಿ ತೋರಿಸಿದೆ. ರಾಜ್ಯಸಭಾ ಸದಸ್ಯತ್ವ ಬಳುವಳಿಯಾಗಿ ದೊರಕಿದ ಬಳಿಕವಷ್ಟೆ ಮೋದಿ ಮತ್ತು ಕೇಂದ್ರ ಸರ್ಕಾರದ ಪರ ಗರಿಷ್ಠ ವಕಾಲತ್ತು ವಹಿಸುತ್ತಿರುವ ಸುಬ್ರಮಣಿಯನ್‌ ಸ್ವಾಮಿ ೨೦೧೫ರಲ್ಲಿ, “ರಫೇಲ್‌ ಒಪ್ಪಂದದಲ್ಲಿ ವ್ಯಾಪಕ ಅವ್ಯವಹಾರ ನಡೆದಿದ್ದು, ಬಿಜೆಪಿಗೆ ಕಳಂಕ ತರಲಿದೆ. ಈ ಭ್ರಷ್ಟ ಒಪ್ಪಂದದಿಂದ ಹಿಂದೆ ಸರಿಯದಿದ್ದರೆ ನ್ಯಾಯಾಲಯಕ್ಕೆ ಹೋಗಬೇಕಾಗುತ್ತೆ,’’ಎಂದೆಲ್ಲ ಎಚ್ಚರಿಕೆಯ ಧಾಟಿಯಲ್ಲಿ ಮುಗಿಬಿದ್ದಿದ್ದರು. ಯುಪಿಎ ಆಡಳಿತಾವಧಿಯಲ್ಲಿ ನಡೆದ ಒಪ್ಪಂದ ಮತ್ತು ಮೋದಿ ರಾಜ್ಯಭಾರದಲ್ಲಿ ನಡೆದ ಪರಿಷ್ಕೃತ ಒಪ್ಪಂದಗಳಲ್ಲಿನ ಯುದ್ಧ ವಿಮಾನಗಳ ಸಂಖ್ಯೆ, ಮೊತ್ತದಲ್ಲಿನ ಫರಕು,‘ಗೌಪ್ಯತೆ’ಯನ್ನು ಕಾಯ್ದುಕೊಳ್ಳುವುದರ ಆಳದಲ್ಲಿನ ರಕ್ಷಣಾತ್ಮಕ ಆಟ,ಅದು ಸೃಷ್ಟಿಸಿರುವ ಅನುಮಾನಗಳು ಅಕ್ರಮದ ಸಾಧ್ಯತೆಯನ್ನು; ಅಧಿಕಾರಸ್ಥೆ ಹಿತಾಸಕ್ತಿ ಸಂಘರ್ಷವನ್ನು ದಟ್ಟವಾಗಿಸಿವೆ ಕೂಡ.

ಇಷ್ಟಾಗ್ಯೂ, “ದೇಶವನ್ನು ಕಾಡುತ್ತಿರುವುದು ಭ್ರಷ್ಟಾಚಾರವೇ ಹೊರತು ಜಾತೀಯತೆಯಲ್ಲ’’ಎಂದು ಹಿಂದೊಮ್ಮೆ ಪ್ರತಿಪಾದಿಸಿದ್ದ ಸರಸ್ವತಿ ಸಮ್ಮಾನ್‌ ಪ್ರಶಸ್ತಿ ಪುರಸ್ಕೃತ ಎಸ್‌.ಎಲ್‌. ಭೈರಪ್ಪ ಅವರ ದೃಷ್ಟಿಯಲ್ಲಿದು ಹಗರಣವೇ ಅಲ್ಲ. ಬದಲು, “ಪ್ರಧಾನಿ ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸಲು ನಡೆಯುತ್ತಿರುವ ರಾಜಕೀಯ ಹುನ್ನಾರ.’’ ತಮ್ಮ ಇತ್ತೀಚಿನ ‘ಉತ್ತರ ಕಾಂಡ’ ಕಾದಂಬರಿ ಕುರಿತಂತೆ ಮೈಸೂರಿನಲ್ಲಿ ಭಾನುವಾರ ಆಯೋಜನೆ ಗೊಂಡಿದ್ದ ವಿಚಾರಸಂಕಿರಣ ವೇದಿಕೆಯನ್ನು ಮೋದಿ ಪರ ವಕಾಲತ್ತಿಗೆ ಬಳಸಿಕೊಂಡ ಭೈರಪ್ಪ, “ಮೋದಿ ಅಂಬಾನಿ ಜೊತೆ ಸೇರಿ ಕೋಟ್ಯಾಂತರ ರೂ. ಹಗರಣ ಮಾಡಿದ್ದಾರೆ ಎಂದು ರಾಹುಲ್‌ ಗಾಂಧಿ ಆರೋಪಿಸುತ್ತಿದ್ದಾರೆ. ನಮ್ಮ ದೇಶದಲ್ಲಿ ಆರೋಪ ಮಾಡಿ ಹುದ್ದೆಯಿಂದ ಕೆಳಗಿಳಿಸುವುದು ಸುಲಭ. ಆದರೆ, ಆರೋಪ ಸಾಬೀತು ಪಡಿಸುವುದು ಕಷ್ಟ. ಸುಳ್ಳು ಆರೋಪ ಮಾಡಿದವರಿಗೆ ಶಿಕ್ಷೆ ಇದೆಯೇ,’’ಎಂದು ಹಳಹಳಿಸಿದ್ದಾರೆ. ತಮ್ಮ ಈಚಿನ ಕಾದಂಬರಿಯ ವಸ್ತುವಿಗೂ, ಇಂದಿರಾ ಕಾಲದ ತುರ್ತು ಪರಿಸ್ಥಿತಿ ಸಂದರ್ಭದ ಹುನ್ನಾರಗಳಿಗೂ, ವರ್ತಮಾನದ ಘಟನೆಗಳಿಗೂ ತಳುಕು ಹಾಕಿದ ಭೈರಪ್ಪ, “ದೇಶವನ್ನು ಭ್ರಷ್ಟಾಚಾರ ಕಾಡುತ್ತಿದೆ,’’ಎನ್ನುವ ಹಿಂದಿನ ವಾದವನ್ನು ಮೋದಿ ಭಕ್ತಿ ಗೆ ಸಮರ್ಪಿಸಿದ್ದಾರೆ. ನಾಲಿಗೆ ತಪ್ಪಿಯೂ ಅವರು ಸತ್ಯ ಅರಿಯಲು ಸೂಕ್ತ ತನಿಖೆ ನಡೆಯಲಿ ಎಂದು ಆಗ್ರಹಿಸಿಲ್ಲ.

ಇದನ್ನೂ ಓದಿ : ರಫೇಲ್ ಡೀಲ್ | ಈಗ ಬಿಜೆಪಿ ಸರಿ ಎನ್ನುತ್ತಿರುವ ಸ್ವಾಮಿ 3 ವರ್ಷದ ಹಿಂದೆ ಹೇಳಿದ್ದೇನು?

ಅಂದ ಹಾಗೆ, ನರೇಂದ್ರ ಮೋದಿ ಮತ್ತು ಅವರ ನೇತೃತ್ವದ ಕೇಂದ್ರ ಸರ್ಕಾರದ ಬಗ್ಗೆ ‘ಭೈರಪ್ಪ ಭಜನೆ’ ಇದೇ ಮೊದಲೇನಲ್ಲ. ೨೦೧೫ರಲ್ಲಿ ದೇಶದಲ್ಲಿ ಅಸಹಿಷ್ಣುತೆ ತಾಂಡವವಾಡುತ್ತಿದೆ ಎಂದು ದೇಶಾದ್ಯಂತದ ಅನೇಕ ಸಾಹಿತಿ, ಕಲಾವಿದರು ‘ಪ್ರಶಸ್ತಿ ವಾಪಸ್‌’ ಚಳವಳಿ ಆರಂಭಿಸಿದ್ದಾಗ ಮೋದಿ ನೇತೃತ್ವದ ಸರ್ಕಾರದ ಬೆಂಬಲಕ್ಕೆ ನಿಂತಿದ್ದ ಮೂವತ್ತಾರು ಸಾಹಿತಿ, ಲೇಖಕರ ನೇತೃತ್ವ ವಹಿಸಿದ್ದ ಭೈರಪ್ಪ, “ಲೋಕಸಭೆ ಚುನಾವಣೆ ಮತ್ತು ಕೆಲವು ರಾಜ್ಯಗಳ ಚುನಾವಣೆಯಲ್ಲಿ ಮೋದಿ ನೇತೃತ್ವದ ಬಿಜೆಪಿಗೆ ಜಯ ಸಿಕ್ಕಿರುವುದನ್ನು ಸಹಿಸಲಾಗದ ಕೆಲವು ವರ್ಗದವರು ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದ್ದಾರೆ. ಅದಕ್ಕಾಗಿಯೇ ಪ್ರಶಸ್ತಿ ವಾಪಸ್‌ ಮಾಡುತ್ತಿದ್ದಾರೆ,’’ ಎಂದು ಟೀಕಿಸಿದ್ದರು. ಆ ಮೂಲಕ, ಅಸಹಿಷ್ಣುತೆಯ ವಿರುದ್ಧ ಸಿಡಿದೆದ್ದಿದ್ದ ಸಾಹಿತಿ, ಕಲಾವಿದರನ್ನು “ಇವರೆಲ್ಲ ಮೋದಿ ವಿರೋಧಿಗಳು’’ಎಂದು ಬ್ರ್ಯಾಂಡ್‌ ಮಾಡಲೆತ್ನಿಸಿದ್ದರು. ಕರ್ನಾಟಕದಲ್ಲಿ ವಿಧಾನಸಭೆ ಪೂರ್ವದಲ್ಲಿ ಕೂಡ ಭೈರಪ್ಪನವರ ‘ಅಚಲ ಬಿಜೆಪಿ ನಿಷ್ಠೆ’ ಪ್ರಕಟವಾಗಿತ್ತು. ಲಿಂಗಾಯತ ಪ್ರತ್ಯೇಕ ಧರ್ಮದ ವಿಷಯ ರಾಜಕೀಯ ತಾಪ ಹೆಚ್ಚಿಸಿದ್ದ ಸಂದರ್ಭವದು. ಯಡಿಯೂರಪ್ಪ ನೇತೃತ್ವದ ಬಿಜೆಪಿ ಯಾವುದೇ ನಿಲುವು ತಳೆಯಲಾಗದ ‘ಧರ್ಮ ಸಂಕಟ’ಕ್ಕೆ ಸಿಲುಕಿತ್ತು. ಆಗ ಭೈರಪ್ಪ,“ಪ್ರತ್ಯೇಕ ಧರ್ಮದ ಬೇಡಿಕೆ ಶುದ್ಧ ಮನೆಹಾಳು ಕೆಲಸ. ಹಿಂದೂ ಧರ್ಮ ಎನ್ನುವ ಮನೆ ಹಾಳು ಮಾಡಲೆಂದೇ ಈ ಬೇಡಿಕೆ ಮಂಡಿಸಲಾಗಿದೆ. ಯಡಿಯೂರಪ್ಪಗೆ ವೀರಶೈವ- ಲಿಂಗಾಯತ ಧರ್ಮದವರು ನೀಡುತ್ತಿರುವ ಬೆಂಬಲ ಕಡಿಮೆಯಾಗಲಿ ಎಂದೇ ಸಿದ್ದರಾಮಯ್ಯ ಗೊಂದಲ ಸೃಷ್ಟಿಸಿದ್ದಾರೆ,’’ಎಂದು ಹರಿಹಾಯುವ ಮೂಲಕ ಬಿಜೆಪಿ ಪಾಲಿಗೆ ಆಪ್ತ ರಕ್ಷಕನಂತೆ ಕಾಣಿಸಿದ್ದರು. ಸಂಭವನೀಯ ಮತ ಬ್ಯಾಂಕ್‌ ಅಪಾಯಗಳಿಂದ ಬಿಜೆಪಿ-ಪರಿವಾರವನ್ನು ರಕ್ಷಿಸಲು ಈ ಭೈರಪ್ಪಾದಿ ಸಾಹಿತಿಗಳು ಟೊಂಕಕಟ್ಟಿ ನಿಂತಿದ್ದು ವಾದ-ವಿವಾದವನ್ನೂ ಸೃಷ್ಟಿಸಿತ್ತು.

ಮೂರ್ನಾಲ್ಕು ತಿಂಗಳ ಹಿಂದೆ ಮೈಸೂರಿನ ತಮ್ಮ ನಿವಾಸಕ್ಕೆ ಬಿಜೆಪಿ ತಂಡವೊಂದು ಬಂದು ಪಡಮಟ್ಟು; ಕೇಂದ್ರ ಸರ್ಕಾರದ ಸಾಧನೆಯ ವಿವರಗಳನ್ನು ಅರುಹಿದ ಸಂದರ್ಭದಲ್ಲಿ ಎಸ್‌.ಎಲ್‌. ಭೈರಪ್ಪ, “ ಮೋದಿಯಂತ ಪ್ರಧಾನಿಯನ್ನು ದೇಶ ಹಿಂದೆಂದೂ ಕಂಡಿರಲಿಲ್ಲ,’’ ಎಂದು ಪ್ರಮಾಣೀಕರಿಸಿದ್ದರು. “ನಾಲ್ಕು ವರ್ಷದಲ್ಲಿ ದೇಶವನ್ನು ಉತ್ತಮವಾಗಿ ಅಭಿವೃದ್ಧಿ ಪಡಿಸಿರುವ ಮೋದಿ ಇನ್ನೂ ಮೂರು ಬಾರಿ ಗೆದ್ದು ಪ್ರಧಾನಿಯಾದರಷ್ಟೆ ದೇಶಕ್ಕೆ ಉಳಿಗಾಲ. ಅಂಥವರನ್ನು ಸೋಲಿಸಿದರೆ ಅದು ನಮ್ಮ ಮೂರ್ಖತನವಾಗುತ್ತದೆ,’’ ಎಂದೂ ಬಹುಪರಾಕು ಹಾಕಿದ್ದರು. ಇಂಥ ಮಾತುಗಳ ಮೂಲಕ ಹಿಂದೊಮ್ಮೆ ತಾವೇ ಗೌರವಿಸಿದ್ದ ಅಟಲ್‌ ಬಿಹಾರಿ ವಾಜಪೇಯಿ ಅವರ ರಾಜಕೀಯ ಮುತ್ಸದ್ಧಿತನ ಮತ್ತು ಹಿರಿಮೆಯನ್ನೂ ಒರೆಸಿ ಹಾಕಿದ್ದರು. ಸ್ವೀಸ್‌ ಬ್ಯಾಂಕಿನಿಂದ ಕಪ್ಪು ಹಣವನ್ನು ತರುತ್ತೇನೆನ್ನುವ ಭರವಸೆ ಈಡೇರಿಸದೆ ಹೋದದ್ದು, ನೋಟು ಅಪನಗಧೀಕರಣ ಸೃಷ್ಟಿಸಿದ ಅನಾಹುತ ಇತ್ಯಾದಿಗಳು ಮೋದಿ ಭಕ್ತರ ಪಾಲಿಗೆ ಹೇಗೆ ಅಪಥ್ಯವೂ ಭೈರಪ್ಪ ಅವರಿಗೂ ಹಾಗೇ. “ಚುನಾವಣೆ ಸಂದರ್ಭ ನೀಡಿದ್ದ ಹೇಳಿಕೆಗಳನ್ನು ಚರ್ಚಿಸುವುದು ವ್ಯರ್ಥ’’ ಎನ್ನುವುದು ಕಪ್ಪು ಹಣ ಕುರಿತ ಅವರ ಪ್ರತಿಪಾದನೆ.

ಇವು ಕೆಲವು ನಿದರ್ಶನಗಳಷ್ಟೆ. “ನಾನು ಬಿಜೆಪಿ ಮನುಷ್ಯ’’ ಎನ್ನುವುದನ್ನು ಅವರು ಅನೇಕ ಬಾರಿ ತಮ್ಮ ನಡೆ-ನುಡಿಯಲ್ಲಿ ನಿರೂಪಿಸಿದ್ದಾರೆ. “ಬಿಜೆಪಿ ಮತ್ತು ಸಂಘ ಪರಿವಾರದ ಹಿಂದುತ್ವ ಮತ್ತು ಮನುವಾದಿ ರಾಜಕೀಯ ಅಜೆಂಡಾಗಳನ್ನು ಭೈರಪ್ಪ ತಮ್ಮ ಸಾಹಿತ್ಯ ಕೃತಿಗಳ ಮೂಲಕ ಹಲವು ಕಾಲದಿಂದ ಪ್ರತಿಪಾದಿಸುತ್ತಿದ್ದಾರೆ,’’ ಎನ್ನುವುದು ಕೆಲವು ಸಾಹಿತ್ಯ ವಿಮರ್ಶಕರ ಅಭಿಮತ. ಕಾದಂಬರಿಗೆ ಆಯ್ಕೆ ಮಾಡಿಕೊಳ್ಳುವ ವಸ್ತು-ವಿಷಯ, ಅದನ್ನು ನಿರ್ವಹಿಸುವ ಮೂಲಭೂತವಾದಿ ಧೋರಣೆಗಳ ಕಾರಣಕ್ಕೆ ಭೈರಪ್ಪ ವಿವಾದಕ್ಕೆ ತುತ್ತಾಗಿದ್ದಾರೆ. ಕಟು ಟೀಕೆ-ಟಿಪ್ಪಣಿಗಳನ್ನು ಎದುರಿಸಿದ್ದಾರೆ. “ಜಾತಿ-ಧರ್ಮದ ಆಧಾರದ ಮೇಲೆ ಜನರನ್ನು ವಿಭಜನೆ ಮಾಡುವಂತ ಅಂಶಗಳು ಅವರ ‘ಆವರಣ’ ಕಾದಂಬರಿಯಲ್ಲಿವೆ,’’ಎಂದು ಪ್ರಗತಿಪರರು, “ಹೆಣ್ಣನ್ನು ಲೈಂಗಿಕ ಅಭಿಪ್ಸೆಯ ದಾಸಿಯನ್ನಾಗಿ ಕವಲು ಕಾದಂಬರಿಯಲ್ಲಿ ಚಿತ್ರಿಸಿದ್ದಾರೆ,’’ಎಂದು ಸ್ತ್ರೀವಾದಿ ಚಿಂತಕರು ಆಕ್ಷೇಪಿಸಿದ್ದುಂಟು. ವೈಚಿತ್ರ್ಯ ಏನೆಂದರೆ ಇಂಥ ವಿವಾದಾತ್ಮಕ ಅಂಶಗಳೇ ಅವರ ಕಾದಂಬರಿ ಮಾರುಕಟ್ಟೆಯ ವಿಸ್ತರಣೆಗೆ ಕಾರಣವಾಗಿವೆ. ಅವರ ಈ ಬಗೆಯ ಚಿಂತನಾ ಕ್ರಮವನ್ನು ಆಧರಿಸುವ,ಆರಾಧಿಸುವ ದೊಡ್ಡ ಓದುಗ ಬಳಗವಿದೆ. ದೇಶ ಆರ್ಥಿಕವಾಗಿ, ಸಾಮಾಜಿಕವಾಗಿ ಹಲವು ಗಂಡಾಂತರಗಳಿಗೆ ಒಡ್ಡಿಕೊಂಡು ಘಾತುಕ ಪರಿಣಾಮಗಳನ್ನು ಸೃಷ್ಟಿಸಿದ್ದರೂ ಮೋದಿಯನ್ನು ‘ಸೂಪರ್‌ ಮ್ಯಾನ್‌’ ರೀತಿ ಬಿಂಬಿಸುವ ದೊಡ್ಡ ಭಕ್ತಗಣ ಇರುವಂತೆ, ಏನನ್ನೇ ಪ್ರತಿಪಾದಿಸಿದರೂ “ಇವರೇ ಸರಿ’’ ಎನ್ನುವಂತ ‘ಹೌದಪ್ಪ ಗಣ’ ಭೈರಪ್ಪ ಅವರಿಗೂ ಇದೆ. ಈ ಮಧ್ಯೆ, ಭೈರಪ್ಪ ಕೂಡ ಮೋದಿ ಭಕ್ತಮಂಡಳಿಯ ‘ಹೌದಪ್ಪ’ನಾಗಿ ರೂಪಾಂತರಗೊಂಡಿರುವುದು ಗಮನಾರ್ಹ. ಹಾಗಾಗಿಯೇ, ಸಾವಿರಾರು ಕೋಟಿ ರೂ.ಮೊತ್ತದ ಹಗರಣದ ಆರೋಪ ಚರ್ಚೆಯಲ್ಲಿದ್ದಾಗಲೂ,“ಇದೆಲ್ಲ ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸಲು ನಡೆದಿರುವ ಷಡ್ಯಂತ್ರ’’ ಎಂದು ಪಕ್ಕಾ ವೃತ್ತಿಪರ ರಾಜಕಾರಣಿ ಶೈಲಿಯಲ್ಲಿ ಮಾತನಾಡುತ್ತಾರೆ. ಹಿಂದಿನ ಕೆಲವು ನಿದರ್ಶನಗಳನ್ನು ತಮ್ಮ ಮೂಗಿನ ನೇರಕ್ಕೆ ತಕ್ಕಂತೆ ವಿಶ್ಲೇಷಿಸಿ, ರಫೇಲ್‌ ವಿದ್ಯಮಾನವನ್ನು ಅದಕ್ಕೆ ತಳುಕು ಹಾಕಿ ಜನರನ್ನು ನಂಬಿಸಲೆತ್ನಿಸುತ್ತಾರೆ.

ನಿಜ,ವ್ಯಕ್ತಿಯಾಗಿ ಭೈರಪ್ಪ ಅವರಿಗೆ ಅವರದ್ದೇ ಸೈದ್ಧಾಂತಿಕ ಒಲವು,ನಿಲುವುಗಳಿವೆ. ರಾಜಕಾರಣಿಗಳ ಸುತ್ತಮುತ್ತ ನಿಂತು ಹಲ್ಲು ಗಿಂಜುವುದು, ಬಹುಪರಾಕು ಹಾಕಿ ಯಾವುದಾದರೊಂದು ಬಗೆಯಲ್ಲಿ ಪ್ರತಿಫಲ ಪಡೆಯುವುದು, ತಮ್ಮ ಸಾಹಿತ್ಯ ಸಾಧನೆಯನ್ನು; ಓದಿನ ಅರಿವನ್ನು ರಾಜಕೀಯ ಮೊಗಸಾಲೆಗಳಲ್ಲಿ ಅಡವಿಟ್ಟು, ವಿರಾಜಿಸುವುದರಲ್ಲಿ ಎಡ-ಬಲ-ನಡು ಎನ್ನುವ ಸೈದ್ಧಾಂತಿಕ ಭಿನ್ನತೆಗಳೇನಿಲ್ಲ. “ಭೈರಪ್ಪ ಹಿಂದೆಲ್ಲ ಚೆಡ್ಡಿ. ಈಗ ಪ್ಯಾಂಟು. ಅಪ್ಪಟ ಮೋದಿ ಫ್ಯಾನು,’’ಎಂದೆಲ್ಲ ಟೀಕಿಸುವ ಪ್ರಗತಿಪರ ಸೋಗಿನ ಲೇಖಕರು, ಸಾಹಿತಿಗಳು ಯಾವ ರಾಜಕೀಯ ಆಸ್ಥಾನದ ಋಣ ಸಂದಾಯ ಕೈಂಕರ್ಯ ನಿರತರಾಗಿತ್ತಾರೆ; ಯಾವ ಅಂಗವಸ್ತ್ರ ತೊಟ್ಟಿರುತ್ತಾರೆ ಎನ್ನುವುದನ್ನು ಪ್ರತ್ಯೇಕ ಹೇಳಬೇಕಿಲ್ಲ. ಮಾತಿನಲ್ಲಿ ಎಲ್ಲರೂ ಅಪ್ಪಟ ಸಿದ್ಧಾಂತ ವಾದಿಗಳು.ಆ ಮಾತನ್ನು ಕೃತಿಗೆ ಇಳಿಸುವ ಸಂದರ್ಭದಲ್ಲಿ ಹೆಚ್ಚಿನವರು ಸಮಯ ಸಾಧಕರೇ. ಅವರನ್ನು ಬೈಯ್ದಾಗ ಅವರ ಭಕ್ತರು ಸಿಟ್ಟಿಗೆ ಬೀಳುವುದು,ಇವರು ಅವರನ್ನು ಹಂಗಿಸುವುದು; ಹೀಗೆ ಪರಸ್ಪರ ದೋಷಾರೋಪ ಸಾಮಾನ್ಯ. ಈ ಅರ್ಥದಲ್ಲಿ ನೋಡಿದರೆ ಭೈರಪ್ಪನವರ ‘ಮೋದಿ ಭಕ್ತಿ’ ಅಥವಾ ಮೋದಿ ಪ್ರೀತಿ ಅವರ ವೈಯಕ್ತಿಕ ರಾಜಕೀಯ ಒಲವು-ನಿಲುವಿಗೆ ಸಂಬಂಧಿಸಿದ ವಿಷಯ. ಆದರೆ,ಭ್ರಷ್ಟಾಚಾರದ ಕುರಿತ ಅವರ ಬದಲಾದ ನಿಲುವು ಪ್ರಶ್ನಾರ್ಹ. “ದೇಶವನ್ನು ಕಾಡುತ್ತಿರುವುದು ಭ್ರಷ್ಟಾಚಾರವೇ ಹೊರತು ಜಾತೀಯತೆಯಲ್ಲ,’’ ಎಂದು ಆಗ ಅರ್ಧಸತ್ಯ ಹೇಳಿದ್ದವರು, ಈಗ ಅಂಥದೇ ಭ್ರಷ್ಟಾಚಾರದ ಕೆಸರಲ್ಲಿ ಬಿದ್ದಿರುವ ಮೋದಿ ವರ್ಚಸ್ಸನ್ನು ಎತ್ತಿ ನಿಲ್ಲಿಸಲು ಸಾರ್ವಜನಿಕ ವಕಾಲತ್ತು ಹಾಕುವ ಮೂಲಕ ಆ ಅರ್ಧ ಸತ್ಯದಿಂದಲೂ ವಿಮುಖರಾದಂತೆ ಕಾಣುತ್ತಿದ್ದಾರೆ.

೨೦೧೪ರ ಧಾರವಾಡ ಸಾಹಿತ್ಯ ಸಂಭ್ರಮದಲ್ಲಿ ಸಭಿಕರೊಬ್ಬರು ಭೈರಪ್ಪ ಅವರನ್ನು,“ ನೀವೇಕೆ ರಾಜಕೀಯಕ್ಕೆ ಸೇರಬಾರದು ? ಬಿಜೆಪಿ ನಿಮಗೆ ಹೆಚ್ಚು ಸೂಕ್ತ ಪಕ್ಷದಂತೆ ಕಾಣುತ್ತದೆ,’’ ಎಂದು ನೇರವಾಗಿ ಕೇಳಿದ್ದರು. ಅದಕ್ಕವರು,“ ಸಾಹಿತಿ ರಾಜಕೀಯಕ್ಕೆ ಹೋದರೆ ಅವನೊಳಗಿನ ಲೇಖಕ ಸಾಯುತ್ತಾನೆ. ಹಾಗೆ ಸಾಯಲು ನನಗಿಷ್ಟವಿಲ್ಲ,’’ಎಂದು ಪ್ರತಿಕ್ರಿಯಿಸಿದ್ದರು. ಅದಾಗಿ ೪ ವರ್ಷ ಸಂದಿದೆ. ದೇಶದಲ್ಲಿ ಮೋದಿ ಮಾಯೆ ಆವರಿಸಿದೆ. “ಸಾಹಿತಿ ರಾಜಕೀಯಕ್ಕೆ ಹೋದರೆ ಅವನೊಳಗಿನ ಲೇಖಕ ಸಾಯುತ್ತಾನೆ,’’ ಎಂದು ಆಗ ಹೇಳಿದ್ದ ಭೈರಪ್ಪ, ರಾಜಕೀಯ ಸೇರದಿದ್ದರೂ ಇತ್ತೀಚಿನ ವರ್ಷಗಳಲ್ಲಿ ಬಿಜೆಪಿಯಲ್ಲಿರುವ ರಾಜಕಾರಣಿಗಳನ್ನೂ ಮೀರಿಸುವಂತೆ ಮೋದಿಯನ್ನು,ಅವರ ನೇತೃತ್ವದ ಕೇಂದ್ರ ಸರ್ಕಾರವನ್ನು ಹೊಗಳುತ್ತಿದ್ದಾರೆ. ಭಾನುವಾರ ಮೈಸೂರಿನಲ್ಲಿ ನಡೆದ ವಿಚಾರಸಂಕಿರಣದಲ್ಲಿ ಅವರು ಮಾಡಿದ ರಾಜಕೀಯ ಶೈಲಿಯ ಭಾಷಣ ಈ ಬಾಬ್ತಿನಲ್ಲಿ ಮತ್ತೊಂದು ಸೇರ್ಪಡೆ. ಇದೆಲ್ಲದರಿಂದ ಅವರು ಈಗಾಗಲೇ ಏನನ್ನು ಪಡೆದಿದ್ದಾರೆ; ಸದ್ಯೋಭವಿಷ್ಯದಲ್ಲಿ ಅವರಿಗೆ ಏನೆಲ್ಲ ಲಾಭಗಳು ಫಲಿಸಬಹುದು ಎಂದು ತರ್ಕಿಸಲು ಹೊರಟರೆ ಅದು ‘ಚಿಲ್ಲರೆ’ ಸಂಗತಿಯಾದೀತು. ಸದ್ಯ ರಾಜಕೀಯ ಮಾತುಗಾರಿಕೆಯಲ್ಲಿ ಸಕ್ರೀಯವಾಗಿರುವ ಭೈರಪ್ಪ ಅವರಲ್ಲಿನ ‘ಲೇಖಕ’ ಮುಂದೆ ಹೇಗಿರುತ್ತಾನೆ, ಏನಾಗುತ್ತಾನೆ ಎನ್ನುವುದು ಅವರ ಕಾದಂಬರಿ ಪ್ರೇಮಿಗಳೂ ಸಹಿತ ಎಲ್ಲರನ್ನು ಕಾಡಬಹುದಾದ ಪ್ರಶ್ನೆ. “ನೀವ್ಯಾಕೆ ಬಿಜೆಪಿ ಸೇರಬಾರದು,’’ ಎಂದು ಮತ್ತೆ ಯಾರಾದರೂ ಕೇಳಿದರೆ ಏನು ಉತ್ತರ ನೀಡಿಯಾರೆನ್ನುವುದು ಕುತೂಹಲ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More