ಅನಿಲ್ ಅಂಬಾನಿ ದೇಶಬಿಟ್ಟು ತೆರಳದಂತೆ ಸುಪ್ರೀಂಕೋರ್ಟ್ ಆದೇಶ ಕೋರಿದ ಎರಿಕ್ಸನ್

ರಿಲಯನ್ಸ್ ಕಮ್ಯುನಿಕೇಷನ್ಸ್ ಮುಖ್ಯಸ್ಥ ಅನಿಲ್ ಅಂಬಾನಿ ಅವರು ದೇಶಬಿಟ್ಟು ತೆರಳದಂತೆ ಆದೇಶ ನೀಡಬೇಕು ಎಂದು ಕೋರಿ ಎರಿಕ್ಸನ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ ಅನಿಲ್ ಅಂಬಾನಿ ಎರಿಕ್ಸನ್ ಕಂಪನಿಗೆ 550 ಕೋಟಿ ರುಪಾಯಿಗಳನ್ನು ಸಕಾಲದಲ್ಲಿ ಪಾವತಿ ಮಾಡಿಲ್ಲ

ರಿಲಯನ್ಸ್ ಕಮ್ಯುನಿಕೇಷನ್ಸ್ ಮುಖ್ಯಸ್ಥ ಅನಿಲ್ ಅಂಬಾನಿ ದೇಶಬಿಟ್ಟು ತೆರಳದಂತೆ ಆದೇಶ ನೀಡಬೇಕು ಎಂದು ಕೋರಿ ಸ್ವಿಡನ್ ದೇಶದ ಎರಿಕ್ಸನ್ ಕಂಪನಿ ಸುಪ್ರೀಂಕೋರ್ಟ್ ಮೆಟ್ಟಿಲು ಏರಿದೆ.

ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಕಮ್ಯುನಿಕೇಷನ್ಸ್ ಕಂಪನಿಯು 550 ಕೋಟಿ ರುಪಾಯಿಗಳನ್ನು ಸಕಾಲದಲ್ಲಿ ಪಾವತಿ ಮಾಡದೇ ಸುಸ್ತಿಯಾಗಿದ್ದಾರೆ ಎಂಬುದು ಎರಿಕ್ಸನ್ ಕಂಪನಿ ಆರೋಪ. ಅನಿಲ್ ಅಂಬಾನಿ ಅಲ್ಲದೇ ರಿಲಯನ್ಸ್ ಕಮ್ಯುನಿಕೇಷನ್ಸ್ ಕಂಪನಿಯ ಇಬ್ಬರು ಉನ್ನತ ಅಧಿಕಾರಿಗಳ ವಿರುದ್ಧವೂ ವಿದೇಶಕ್ಕೆ ತೆರಳದಂತೆ ಆದೇಶಿಸುವಂತೆ ಮನವಿ ಮಾಡಿದೆ.

ಹಿಂದೆ ಭರವಸೆ ನೀಡದಂತೆ 550 ಕೋಟಿ ರುಪಾಯಿಗಳನ್ನು ಸಕಾಲದಲ್ಲಿ ಪಾವತಿಸುತ್ತಿಲ್ಲ. ಬೇಕೆಂದೇ ಬಾಕಿ ಪಾವತಿ ಮಾಡದೇ ಸತಾಯಿಸುತ್ತಿದ್ದಾರೆ. ಕಾನೂನುಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಆದ್ದರಿಂದ ಅವರು ದೇಶ ಬಿಟ್ಟು ತೆರಳದಂತೆ ಆದೇಶ ನೀಡಬೇಕು ಎಂದು ಎರಿಕ್ಸನ್ ಸಲ್ಲಿಸಿರುವ ಮನವಿಯಲ್ಲಿ ವಿವರಿಸಲಾಗಿದೆ.

ರಿಲಯನ್ಸ್ ಕಂಪನಿಯು ಎರಿಕ್ಸನ್ ಕಂಪನಿಗೆ 1600 ಕೋಟಿ ರುಪಾಯಿಗಳನ್ನು ಪಾವತಿಸಬೇಕಿತ್ತು. ಆದರೆ, ಎರಿಕ್ಸನ್ ಕಂಪನಿಯು ನ್ಯಾಯಾಲಯದಲ್ಲಿ ಈ ಮೊತ್ತವನ್ನು 550 ಕೋಟಿ ರುಪಾಯಿಗೆ ತಗ್ಗಿಸಲು ಒಪ್ಪಿತ್ತು. ರಿಲಯನ್ಸ್ ಕಮ್ಯುನಿಕೇಷನ್ಸ್ ಕಂಪನಿಯು ಸೆಪ್ಟೆಂಬರ್ 30ರಂದು 550 ಕೋಟಿ ರುಪಾಯಿಗಳನ್ನು ನ್ಯಾಯಾಲಯದಲ್ಲಿ ಒಪ್ಪಿದಂತೆ ಪಾವತಿಸಬೇಕಿತ್ತು. ಆದರೆ, ಅಂದು ಪಾವತಿ ಮಾಡದೇ ಸುಸ್ತಿಯಾಗಿದೆ.

ಮೊತ್ತವನ್ನು ತಗ್ಗಿಸಿದರೂ ಸಕಾಲದಲ್ಲಿ ಪಾವತಿ ಮಾಡದೇ ಇರುವುದರಿಂದ ಎರಿಕ್ಸನ್ ಕಂಪನಿ ಮತ್ತೆ ನ್ಯಾಯಾಲಯದ ಮೊರೆ ಹೋಗಿದೆ. ಈ ದೇಶದ ಕಾನೂನಿಗೆ ಅವರು (ಅನಿಲ್ ಅಂಬಾನಿ) ಗೌರವ ನೀಡುತ್ತಿಲ್ಲ. ಕಾನೂನು ಪ್ರಕ್ರಿಯೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಿರುವ ಮನವಿಯಲ್ಲಿ ಹೇಳಿದೆ.

ಅನಿಲ್ ಅಂಬಾನಿ ಮತ್ತು ಇತರ ಇಬ್ಬರು ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಮುಂದಾಗಿರುವ ಎರಿಕ್ಸನ್ ಕಂಪನಿಯು ಈ ಮೂವರು ನ್ಯಾಯಾಲಯದ ಅನುಮತಿ ಇಲ್ಲದೇ ದೇಶ ತೊರೆಯದಂತೆ ಆದೇಶ ನೀಡಬೇಕು ಎಂದು ಕೋರಿದೆ. ನಾವು ನ್ಯಾಯವನ್ನು ಪಡೆಯಲು ನ್ಯಾಯಾಲಯವು ಇಂತಹ ಆದೇಶ ನೀಡುವುದು ಅತ್ಯಗತ್ಯವಾಗಿದೆ ಎಂದು ಹೇಳಿದೆ.

ಇದನ್ನೂ ಓದಿ : ಪೇಟೆಯಲ್ಲಿ ಲಾಭ ನಗದೀಕರಣ ಅಬಾಧಿತ, ಅನಿಲ್ ಅಂಬಾನಿ ಕಂಪನಿ ಷೇರು ಕುಸಿತ

ರಿಲಯನ್ಸ್ ಕಮ್ಯುನಿಕೇಷನ್ಸ್ ಕಂಪನಿಯು 44000 ಕೋಟಿ ಸಾಲದ ಹೊರೆ ಹೊತ್ತಿದೆ. ಅನಿಲ್ ಅಂಬಾನಿಯು ತಮ್ಮ ಕಂಪನಿಯನ್ನು ತಮ್ಮ ಹಿರಿಯ ಸಹೋದರ ಮುಖೇಶ್ ಅಂಬಾನಿ ಅವರಿಗೆ ಮಾರಾಟ ಮಾಡಲು ಮುಂದಾಗಿದ್ದಾರೆ. ಟವರ್, ಸ್ಪೆಕ್ಟಂ ಮತ್ತು ಫೈಬರ್ ನಿಂದ 25000 ಕೋಟಿ ರುಪಾಯಿ ದೊರೆಯುವ ಅಂದಾಜಿದೆ. ಆದರೆ, ಈ ವಹಿವಾಟು ನಡೆಯುವ ಮುನ್ನ ಸ್ಪೆಕ್ಟ್ರಂ ಬಳಕೆ ಮಾಡಿರುವ ವೆಚ್ಚಕ್ಕಾಗಿ 2900 ಕೋಟಿ ರುಪಾಯಿಗಳ ಗ್ಯಾರಂಟಿ ನೀಡುವಂತೆ ದೂರಸಂಪರ್ಕ ಇಲಾಖೆ ಅನಿಲ್ ಅಂಬಾನಿ ಅವರಿಗೆ ಸೂಚಿಸಿದೆ. ಹೀಗಾಗಿ ರಿಲಯನ್ಸ್ ಮೊಬೈಲ್ ಕಂಪನಿ ಆಸ್ತಿ ಮಾರಾಟ ಪ್ರಕ್ರಿಯೆ ವಿಳಂಬವಾಗಿದೆ.

ಎರಿಕ್ಸನ್ ಕಂಪನಿಯು ಸುಪ್ರೀಂ ಕೋರ್ಟ್ ಮೊರೆ ಹೋಗಿರುವುದರ ಬಗ್ಗೆ ರಿಲಯನ್ಸ್ ಕಮ್ಯುನಿಕೇಶನ್ಸ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಎರಿಕ್ಸನ್ ಕ್ರಮವು ಅನಪೇಕ್ಷಿತವಾದದು. ನಾವು 60 ದಿನಗಳ ಕಾಲಾವಕಾಶವನ್ನು ಕೇಳಿದ್ದೇವೆ. ಹೀಗಿದ್ದರೂ ನ್ಯಾಯಾಲಯಕ್ಕೆ ಹೋಗಿದ್ದಾರೆ ಎಂದು ಆಕ್ಷೇಪಿಸಿದೆ.

ಪ್ರಧಾನಿ ನರೇಂದ್ರ ಮೋದಿ ಮುಂದಿರುವ ಅತಿದೊಡ್ಡ ಸವಾಲು ಯಾವುದು ಗೊತ್ತೇ?
ಶ್ರೀಸಾಮಾನ್ಯರ ಸ್ವಾಮೀಜಿ ಎಂದೆನಿಸಿಕೊಂಡ ತೋಂಟದಾರ್ಯ ಶ್ರೀಗಳು ಇನ್ನಿಲ್ಲ
ಸೂಪರ್ಟೆಕ್ ₹600 ಕೋಟಿ ಸಾಲ ಮರುಪಾವತಿ ವೈಫಲ್ಯ; ಕಾದಿದೆ ಮತ್ತಷ್ಟು ಸಂಕಷ್ಟ?
Editor’s Pick More