ಚುನಾವಣೆ ವರ್ಷದಲ್ಲಿ ಸಿದ್ದರಾಮಯ್ಯ ಅವರ ಹೆಲಿಕಾಪ್ಟರ್‌ ವೆಚ್ಚ ೧೯ ಕೋಟಿ ರು.!

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದ ಹೊಸತರಲ್ಲಿ ಹೆಲಿಕಾಪ್ಟರ್‌ ಪ್ರಯಾಣ ವೆಚ್ಚದಲ್ಲಿ ಮಿತವ್ಯಯ ಸಾಧಿಸಿದ್ದರು. ಆದರೆ ಕಳೆದ ಒಂದೇ ವರ್ಷದಲ್ಲಿ ಹೆಲಿಕಾಪ್ಟರ್‌ ಪ್ರಯಾಣಕ್ಕೆ ಮಾಡಿರುವ ಖರ್ಚು, ಈ ಹಿಂದಿನ ವರ್ಷಗಳ ಖರ್ಚನ್ನೂ ಮೀರಿದೆ. ಹಾಗಾದರೆ ಕಳೆದ ವರ್ಷದಲ್ಲಿ ಆಗಿರುವ ಖರ್ಚೆಷ್ಟು? ವಿವರ ಇಲ್ಲಿದೆ.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಆರಂಭದ ವರ್ಷದಲ್ಲಿ ಹೆಲಿಕಾಪ್ಟರ್‌ ಪ್ರಯಾಣಕ್ಕೆ ಕನಿಷ್ಠ ವೆಚ್ಚವಾಗಿತ್ತು. ಈ ವಿಚಾರದಲ್ಲಿ ಮಿತವ್ಯಯ ಸಾಧಿಸಿದ್ದ ಸಿದ್ದರಾಮಯ್ಯ ಅವರು, ಅಧಿಕಾರದ ಕೊನೆಯ ವರ್ಷದಲ್ಲಿ ತಮ್ಮ ಹಿಂದಿನ ವರ್ಷಗಳ ಹೆಲಿಕಾಪ್ಟರ್‌ ಪ್ರಯಾಣದ ವೆಚ್ಚವನ್ನೂ ಮೀರಿಸಿದ್ದಾರೆ.

೨೦೧೩-೧೪ರಿಂದ ೨೦೧೬-೧೭ರಲ್ಲಿ ವರ್ಷವಾರು ಲೆಕ್ಕಚಾರ ಹಾಕಿದರೆ ಸಿದ್ದರಾಮಯ್ಯ ಅವರ ಹೆಲಿಕಾಪ್ಟರ್ ಪ್ರಯಾಣದ ವೆಚ್ಚ ೧೦ ಕೋಟಿ ರು. ಮೀರಿರಲಿಲ್ಲ. ಆದರೆ ೨೦೧೭ ಏಪ್ರಿಲ್‌ ನಿಂದ ೨೦೧೮ ಮಾರ್ಚ್ ಅಂತ್ಯದವರೆಗಿನ ಒಂದೇ ವರ್ಷದಲ್ಲಿ ೧೯ ಕೋಟಿ ೭೫ ಲಕ್ಷ ರು ಖರ್ಚಾಗಿರುವುದು ದಾಖಲೆ ನಿರ್ಮಿಸಿದಂತಾಗಿದೆ.

ಹೆಲಿಕಾಪ್ಟರ್ ಪ್ರಯಾಣಕ್ಕೆ ಆಗಿರುವ ಖರ್ಚಿನ ಮೊತ್ತದ ಕುರಿತು ಲೋಕೋಪಯೋಗಿ, ಬಂದರು, ಒಳನಾಡು ಜಲ ಸಾರಿಗೆ ಇಲಾಖೆಯ(ಕಟ್ಟಡಗಳ ವಿಭಾಗ)ದ ಹಿರಿಯ ಅಧಿಕಾರಿಯೊಬ್ಬರು ‘ದಿ ಸ್ಟೇಟ್‌’ಗೆ ಖಚಿತಪಡಿಸಿದ್ದಾರೆ. ಮುಖ್ಯಮಂತ್ರಿಗಳ ಹೆಲಿಕಾಪ್ಟರ್‌ ಪ್ರಯಾಣಕ್ಕೆ ಸಂಬಂಧಿಸಿದಂತೆ ೨೬ ಕೋಟಿ ರು.ಗಳ ಅನುದಾನ ಹಂಚಿಕೆಯಾಗಿತ್ತು. ಈ ಪೈಕಿ ೧೯.೭೫ ಕೋಟಿ ರು.ಖರ್ಚಾಗಿದ್ದು, ಉಳಿದ ೬.೨೫ ಕೋಟಿ ರು. ವಾಪಸ್‌ ಮಾಡಲಾಗಿದೆ ಎಂದು ಇಲಾಖೆಯ ವಿಶ್ವಸನೀಯ ಮೂಲಗಳು ತಿಳಿಸಿವೆ. ಒಟ್ಟು ೫ ವರ್ಷಗಳ ಅವಧಿಯಲ್ಲಿ ಸಿದ್ದರಾಮಯ್ಯ ಅವರ ಹೆಲಿಕಾಪ್ಟರ್ ಪ್ರಯಾಣಕ್ಕೆ ಒಟ್ಟಾರೆ ೪೮.೦೬ ಕೋಟಿ ರು.ವೆಚ್ಚವಾಗಿದೆ.

೨೦೧೩-೧೪ರಲ್ಲಿ ೯.೬೧ ಕೋಟಿ ರು., ೨೦೧೪-೧೫ರಲ್ಲಿ ೫.೮೬ ಕೋಟಿ ರು., ೨೦೧೫-೧೬ರಲ್ಲಿ ೬.೧೯ ಕೋಟಿ ರು., ೨೦೧೬-೧೭ರಲ್ಲಿ ೭ ಕೋಟಿ ರು.ವೆಚ್ಚ ಮಾಡಿ ಮಿತವ್ಯಯ ಸಾಧಿಸಿದ್ದರು. ಆದರೆ ೨೦೧೭-೧೮ರ ಒಂದೇ ವರ್ಷದಲ್ಲಿ ೧೯ ಕೋಟಿ ರು.ವೆಚ್ಚವಾಗಿರುವುದು ಅಚ್ಚರಿ ಮೂಡಿಸಿದೆ. ಚುನಾವಣೆ ವರ್ಷವಾಗಿದ್ದರಿಂದ ಹೆಲಿಕಾಪ್ಟರ್‌ನ್ನು ಹೆಚ್ಚು ಬಳಸಿರುವುದೇ ವೆಚ್ಚದಲ್ಲಿ ಏರಿಕೆಯಾಗಲು ಕಾರಣ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ : ಮುಖ್ಯಮಂತ್ರಿಗಳ ಜೀವವೆಂದರೆ ಅವರದೇ ಸರ್ಕಾರಕ್ಕೆ ಇಷ್ಟೊಂದು ತಾತ್ಸಾರವೇ?

ಈ ಹಿಂದಿನ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ (ಮೇ ೩೦,೨೦೦೮ರಿಂದ ಜುಲೈ ೩೧,೨೦೧೧) ಅವರು ೪೨.೨೬ ಕೋಟಿ ರು. ಖರ್ಚು ಮಾಡಿದ್ದರೆ, ಡಿ ವಿ ಸದಾನಂದಗೌಡ ಅವರು(ಆಗಸ್ಟ್‌ ೦೪,೨೦೧೧ರಿಂದ ಜುಲೈ ೧೧,೨೦೧೨) ೧೩.೭೭ ಕೋಟಿ ರು., ಜಗದೀಶ್‌ ಶೆಟ್ಟರ್‌ ಅವರ ಹೆಲಿಕಾಪ್ಟರ್ ಪ್ರಯಾಣಕ್ಕೆ (ಜುಲೈ ೧೨,೨೦೧೨ರಿಂದ ಮೇ ೧೨,೨೦೧೩ರವರೆಗೆ) ೧೨.೭೮ ಕೋಟಿ ರು. ಖರ್ಚಾಗಿದೆ. ಹಿಂದಿನ ಮೂರು ಮುಖ್ಯಮಂತ್ರಿಗಳಿಗೆ ಹೋಲಿಸಿದರೆ ಸಿದ್ದರಾಮಯ್ಯ ಅವರು ೫ ವರ್ಷದಲ್ಲಿ ಇವರೆಲ್ಲರಿಗಿಂತಲೂ ಹೆಚ್ಚಿನ ಖರ್ಚು ಮಾಡಿರುವುದು ತಿಳಿದು ಬಂದಿದೆ.

ಈ ಹಿಂದೆ ಹೆಲಿಕಾಪ್ಟರ್‌ ನ್ನು ಮಾಸಿಕ ಬಾಡಿಗೆ ಆಧಾರದ ಮೇಲೆ ಪಡೆಯಲಾಗುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಅಗತ್ಯ ಮತ್ತು ಅವಶ್ಯಕತೆ ಇದ್ದಾಗ ಮಾತ್ರ ಗಂಟೆ ಲೆಕ್ಕದಲ್ಲಿ ಹೆಲಿಕಾಪ್ಟರ್‌ ಸೇವೆ ಪಡೆಯಲಾಗುತ್ತಿದೆ. ಗಂಟೆಗೆ ಸುಮಾರು ೧.೬೦ ಲಕ್ಷ ರು.ಗಳಿಂದ ೧.೭೦ ಲಕ್ಷ ದವರೆಗೆ ಬಾಡಿಗೆ ಪಾವತಿಸಲಾಗುತ್ತಿದೆ.

ಒಂದು ವೇಳೆ ಮುಖ್ಯಮಂತ್ರಿಗಳಿಗೆ ಅಗತ್ಯ ಬಿದ್ದ ಸಂದರ್ಭದಲ್ಲಿ ಏಜೆನ್ಸಿ ಬಳಿ ಬೆಂಗಳೂರಿನಲ್ಲಿ ಹೆಲಿಕಾಪ್ಟರ್‌ ಲಭ್ಯತೆ ಇಲ್ಲದೇ ಇದ್ದಲ್ಲಿ, ಹೈದರಾಬಾದ್‌ ಅಥವಾ ಇನ್ನಿತರೆ ಕಡೆಗಳಲ್ಲಿ ಲಭ್ಯ ಇರುವ ಹೆಲಿಕಾಪ್ಟರ್‌ ನ್ನು ಕರೆಸಲಾಗುತ್ತದೆ. ಉದಾರಹಣೆಗೆ ಹೈದರಾಬಾದ್‌ ನಿಂದ ಬೆಂಗಳೂರಿಗೆ ಬರುವ ಹೆಲಿಕಾಪ್ಟರ್‌ ಖಾಲಿ ಬಂದರೂ ಹಣ ಪಾವತಿಸಬೇಕು. ಹಾಗೆಯೇ ನಿಗದಿತ ಪ್ರವಾಸದಿಂದ ಬೆಂಗಳೂರಿಗೆ ತಲುಪುವ ಹೆಲಿಕಾಪ್ಟರ್‌, ಹೈದರಬಾದ್‌ ಗೆ ಖಾಲಿ ಹೋದರೂ ಹಣ ಪಾವತಿಸಬೇಕು. ಅಲ್ಲಿಗೆ ಗಂಟೆ ಲೆಕ್ಕದಲ್ಲಿ ಅಂದಾಜು ೪.೫೦ ಲಕ್ಷ ರು. ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ ಎಂದು ಅಧಿಕಾರಿಯೊಬ್ಬರು ವಿವರಿಸಿದರು.

“ಮುಖ್ಯಮಂತ್ರಿಗಳ ಹಾರಾಟಕ್ಕೆ ಖರ್ಚಾಗುತ್ತಿರುವ ಕೋಟ್ಯಂತರ ರು.ಬದಲಿಗೆ ಸರ್ಕಾರವೇ ಹೊಸ ಹೆಲಿಕಾಪ್ಟರ್‌ ನ್ನು ಖರೀದಿಸಬಹುದಿತ್ತು. ಈಗ ಖರ್ಚಾಗಿರುವ ಹಣದ ಲೆಕ್ಕವನ್ನು ನೋಡಿದರೆ ಕನಿಷ್ಠ ೩ ಹೆಲಿಕಾಪ್ಟರ್‌ಗಳನ್ನು ರಾಜ್ಯ ಸರ್ಕಾರ ಖರೀದಿಸಿ, ಖಾಸಗಿ ಏಜೆನ್ಸಿಗಳಿಗೆ ಪಾಲಾಗುತ್ತಿರುವ ಹಣಕ್ಕೆ ಕಡಿವಾಣ ಹಾಕಬಹುದಿತ್ತು,” ಎನ್ನುತ್ತಾರೆ ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು.

ಇನ್ನು, ಮುಖ್ಯಮಂತ್ರಿಗಳ ಹೆಲಿಕಾಪ್ಟರ್‌ ಪ್ರಯಾಣದ ಉಸ್ತುವಾರಿ ನೋಡಿಕೊಳ್ಳಲು ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ ಇದುವರೆಗೂ ತಾಂತ್ರಿಕ ತಜ್ಞರ ನೇಮಕವಾಗಿಲ್ಲ. ತಾಂತ್ರಿಕ ನಿಪುಣರಲ್ಲದ ಅಧಿಕಾರಿಯೊಬ್ಬರು ಹೆಲಿಕಾಪ್ಟರ್‌ ಪ್ರಯಾಣದ ಉಸ್ತುವಾರಿ ಹೊತ್ತಿದ್ದಾರೆ. ಪ್ರತ್ಯೇಕ ವೈಮಾನಿಕ ವಿಭಾಗ ತೆರೆಯಬೇಕು ಎಂದು ಗುಪ್ತಚರ ಇಲಾಖೆ ಹಲವು ಬಾರಿ ಮುಖ್ಯಮಂತ್ರಿಗಳ ಸಚಿವಾಲಯದ ಗಮನಕ್ಕೆ ತಂದಿದ್ದರೂ ಈವರೆಗೂ ಪ್ರತ್ಯೇಕ ವಿಭಾಗ ತೆರೆದಿಲ್ಲ.

ಹಾಗೆಯೇ ‘ ವೈಮಾನಿಕ ಪರಿಣಿತರನ್ನೊಳಗೊಂಡ ಪ್ರತ್ಯೇಕ ವಿಭಾಗ ತೆರೆದು ಮುಖ್ಯಮಂತ್ರಿ, ರಾಜ್ಯಪಾಲರ ಹೆಲಿಕಾಪ್ಟರ್‌ ಪ್ರಯಾಣ ಕುರಿತು ನಿರ್ವಹಣೆ ಮಾಡುವುದು ಅತ್ಯಗತ್ಯ. ವಿವಿಐಪಿಗಳ ಭದ್ರತೆ ದೃಷ್ಟಿಯಿಂದ ತಕ್ಷಣವೇ ಪ್ರತ್ಯೇಕ ವಿಭಾಗ ತೆರೆಯಬೇಕು’ ಎಂದು ನಾಗರೀಕ ವಿಮಾನಯಾನ ವಿಭಾಗದ ಕೇಂದ್ರ ನಿರ್ದೇಶಕರು(ಡಿಜಿಸಿಎ) ನೀಡಿದ್ದ ಸಲಹೆಯನ್ನು ರಾಜ್ಯ ಸರ್ಕಾರ ಇದುವರೆಗೂ ಪಾಲಿಸಿಲ್ಲ ಎಂದು ಮುಖ್ಯಮಂತ್ರಿ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ‘ದಿ ಸ್ಟೇಟ್‌’ಗೆ ತಿಳಿಸಿದರು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More