ಇಂದಿನ ಡೈಜೆಸ್ಟ್ | ಇಂದು ಗಮನಿಸಬೇಕಾದ ಇತರ 10 ಪ್ರಮುಖ ಸುದ್ದಿಗಳು

ಇಂದು ಗಮನಿಸಬೇಕಾದ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳು  

ಗೃಹಬಂಧನದಿಂದ ನವಲಾಖಾ ಬಿಡುಗಡೆ ಪ್ರಶ್ನಿಸಿ ಸುಪ್ರೀಂ ಮೊರೆ ಹೋದ ಮಹರಾಷ್ಟ್ರ ಸರ್ಕಾರ

ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಪ್ರದೋಚನೆ ನೀಡಿದ್ದರು ಎಂಬ ಆರೋಪದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಬಂಧನವಾಗಿದ್ದ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಾಖಾ ಅವರನ್ನು ದೆಹಲಿ ಹೈಕೋರ್ಟ್ ಅ. ೧ರಂದು ಗೃಹಬಂಧನದಿಂದ ಮುಕ್ತಿಗೊಳಸಿದ್ದನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಬುಧವಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಮಹಾರಾಷ್ಟ್ರ ಸರ್ಕಾರದ ಪರ ವಕೀಲ ನಿಶಾಂತ್ ಕಾಂತೇಶ್ವರ್ ಅರ್ಜಿ ಸಲ್ಲಿಸಿದ್ದು ಪ್ರಕರಣದ ಕುರಿತಾಗಿ ಪಿಟಿಐಗೆ ಮಾಹಿತಿ ನೀಡಿದ್ದಾರೆ.

ಮೂವರಿಗೆ ರಾಸಾಯನಶಾಸ್ತ್ರ ನೊಬೆಲ್ ಪ್ರಶಸ್ತಿ

ಜೈವಿಕ ವಿಕಾಸವಾದವನ್ನು ಅನ್ವಯಿಸಿ ದೈನಂದಿನ ಉಪಯೋಗಕ್ಕೆ ಅನುಕೂಲವಾಗುವ ರೀತಿಯ ರಾಸಾಯನಿಕಗಳನ್ನು ನಿರ್ಮಿಸುವಲ್ಲಿ ಮಹತ್ವದ ಸಾಧನೆ ಮಾಡಿರುವ ಕಾರಣವಾಗಿ ಅಮೆರಿಕ ಫ್ರಾನ್ಸಿಸ್ ಅರ್ನಾಲ್ಡ್ ಮತ್ತು ಜಾರ್ಜ್ ಸ್ಮಿತ್ ಹಾಗೂ ಬ್ರಿಟ್‌ನ ಗ್ರೆಗೊರಿ ವಿಂಟರ್ ಅವರಿಗೆ ಈ ಬಾರಿಯ ರಾಸಾಯನ ಶಾಸ್ತ್ರ ನೊಬೆಲ್ ಪ್ರಶಸ್ತಿ ಲಭಿಸಿದೆ. ತೈಲ ಉತ್ಪನ್ನಗಳಿಗೆ ಪರ್ಯಾಯವಾಗಿ ಮುಂದಿನ ದಿನಗಳಲ್ಲಿ ಇಂಧನವನ್ನು ರೂಪಿಸುವ ನಿಟ್ಟಿನಲ್ಲಿ ಹಾಗೂ ವಿಕಾಸ ಸಿದ್ದಾಂತವನ್ನೇ ಬಳಸಿ ಆನುವಂಶೀಯ ಬದಲಾವಣೆ ಮತ್ತು ಗುರುತಿಸುವಿಕೆ ಮೂಲಕ ಅಗತ್ಯ ಪ್ರೋಟೀನ್ ಅಭಿವೃದ್ದಿಪಡಿಸುವದು ಹೇಗೆ ಎನ್ನುವುದನ್ನು ತೋರಿಸಿದ್ದಾರೆ.

ಶಬರಿಮಲೆ; ಸುಪ್ರೀಂಕೋರ್ಟ್ ಆದೇಶ ಪ್ರಶ್ನಿಸದೆ ಇರಲು ದೇವಸ್ವಂ ಮಂಡಳಿ ನಿರ್ಧಾರ

ಶಬರಿಮಲೆ ದೇವಾಲಯಕ್ಕೆ  ಮಹಿಳೆಯರಿಗೆ ಪ್ರವೇಶ ಕಲ್ಪಿಸಿರುವ ಸುಪ್ರೀಂಕೋರ್ಟ್ ತೀರ್ಪನ್ನು ಪ್ರಶ್ನಿಸಿ, ಮೇಲ್ಮನವಿ ಸಲ್ಲಿಸದೆ ಇರಲು ತಿರುವಾಂಕೂರು ದೇವಸ್ವಂ ಮಂಡಳಿ ಬುಧವಾರ ನಿರ್ಧರಿಸಿದೆ. ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರು ಹೋಗಬಹುದು ಎಂದು ಸುಪ್ರೀಂಕೋರ್ಟ್ ತೀರ್ಪನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಬೇಕೆ? ಎಂಬುದರ ಬಗ್ಗೆ ತೀರ್ಮಾನಿಸಲು ದೇವಸ್ವಂ ಮಂಡಳಿ ಇಂದು ಸಭೆ ಸೇರಿತ್ತು. ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ತಜ್ಞರ ಅಭಿಪ್ರಾಯ ಸ್ವೀಕರಿಸಿದ ಬಳಿಕ, ತೀರ್ಪಿನ ಕುರಿತಂತೆ ಮೇಲ್ಮನವಿ ಅರ್ಜಿ ಸಲ್ಲಿಸದೇ ಇರಲು ತೀರ್ಮಾನಿಸಲಾಗಿದೆ. 10 ರಿಂದ 50 ವರ್ಷ ಪ್ರಾಯದ ಮಹಿಳೆಯರಿಗೆ ಶಬರಿಮಲೆ ಪ್ರವೇಶಕ್ಕೆ ಇದ್ದ ನಿಷೇಧವನ್ನು ತೆರವುಗೊಳಿಸಿದ್ದ ಸುಪ್ರೀಂಕೋರ್ಟ್, ಮಹಿಳೆಯರಿಗೂ ಸಮಾನ ಅಧಿಕಾರವಿದೆ ಎಂದು ಆದೇಶ ನೀಡಿ, ದೇವಾಲಯ ಪ್ರವೇಶಕ್ಕೆ ಅವಕಾಶ ಕಲ್ಪಿಸಿತ್ತು.

ಹಿಂಗಾರು ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಳ

ರೈತರ ಉತ್ಪನ್ನಗಳಿಗೆ ಹೆಚ್ಚಿನ ಬೆಂಬಲ ಬೆಲೆ ಹಾಗೂ ಸಾಲಮನ್ನಾದಲ್ಲಿ ಒಂದೇ ಮಾನದಂಡ ಅನುಸರಿಸುವುದಕ್ಕೆ ಆಗ್ರಹಿಸಿ ಮಂಗಳವಾರ ದೆಹಲಿಯ ಹೊರವಲಯದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದ ರೈತರ ಮನವಿ ಓಗೊಟ್ಟಿರುವ ಕೇಂದ್ರ ಸರ್ಕಾರವು ಹಿಂಗಾರು ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಗೋಧಿಗೆ ಪ್ರತಿ ಕ್ವಿಂಟಾಲ್‌ಗೆ ೧೦೫ ರುಪಾಯಿ, ಕಡಲೆಗೆ ಪ್ರತಿ ಕ್ವಿಂಟಾಲ್‌ಗೆ ೨೨೫ ರುಪಾಯಿ, ಕುಸುಬೆಗೆ ೮೪೫ ರುಪಾಯಿ ಹೆಚ್ಚಿಸಲಾಗಿದೆ. ಇದರಿಂದ ರೈತರಿಗೆ ೬೨,೬೩೫ ಕೋಟಿ ರುಪಾಯಿ ಹಂಚಿಕೆಯಾಗಲಿದೆ ಎಂದು ಸರ್ಕಾರ ಹೇಳಿದೆ.

ಮಧ್ಯಪ್ರದೇಶ, ರಾಜಸ್ಥಾನ ಚುನಾವಣೆಯಲ್ಲಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಇಲ್ಲ; ಮಾಯಾವತಿ

ರಾಜಸ್ಥಾನ ಹಾಗೂ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಇಲ್ಲವೆಂದು ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಮಾಯಾವತಿ ತಿಳಿಸಿದ್ದಾರೆ. “ರಾಜಸ್ಥಾನ, ಮಧ್ಯಪ್ರದೇಶ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲಾಗುತ್ತದೆ. ಆದರೆ, ಕಾಂಗ್ರೆಸ್‌ನೊಂದಿಗೆ ಮೈತ್ರಿ ಇಲ್ಲ. ಹಳೆಯ ಪಕ್ಷವಾದ ಕಾಂಗ್ರೆಸ್‌ ಪಕ್ಷವು ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಲು ಪ್ರಯತ್ನಿಸುವುದು ಬಿಟ್ಟು, ಪ್ರಾದೇಶಿಕ ಪಕ್ಷವಾದ ಬಿಎಸ್‌ಪಿ ಶಕ್ತಿ ಕುಂದಿಸುವ ಕೆಲಸ ಮಾಡುತ್ತಿದೆ. ಇದನ್ನು ಬಹುಜನ ಸಮಾಜ ಪಕ್ಷವು ಎಂದಿಗೂ ಸಹಿಸುವುದಿಲ್ಲ,” ಎಂದು ಮಾಯಾವತಿ ಕಾಂಗ್ರೆಸ್‌ ವಿರುದ್ದ ಹರಿಹಾಯ್ದಿದ್ದಾರೆ.

ಕೇರಳದಲ್ಲಿ ಮತ್ತೆ ಚಂಡಮಾರುತದ ಭೀತಿ, ರೆಡ್ ಅಲರ್ಟ್ ಘೋಷಣೆ

ಇತ್ತೀಚೆಗಷ್ಟೇ ಪ್ರವಾಹದಿಂದ ತತ್ತರಿಸಿದ್ದ ಕೇರಳದಲ್ಲಿ ಮತ್ತೆ ಭಾರಿಮಳೆಯಾಗುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಮಳೆಯಾಗಲಿದೆ ಎದು ಹವಾಮಾನ ಇಲಾಖೆ ಸೂಚಿಸಿದೆ. ಇಡುಕ್ಕಿ, ತ್ರಿಸೂರ್ ಮತ್ತು ಪಾಲಕ್ಕಾಡ್ ಜಿಲ್ಲೆಗಳಲ್ಲಿ ಭಾನುವಾರದಾಚೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಲಕ್ಷದ್ವೀಪ ಕರಾವಳಿಯಲ್ಲಿ ವಾಯುಭಾರ ಕುಸಿತದಿಂದ ಚಂಡಮಾರುತ ಬೀಸುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿನರಾಯ್ ವಿಜಯನ್ ತಿಳಿಸಿದ್ದಾರೆ. ಮೀನುಗಾರರು ಶುಕ್ರವಾರದ ಬಳಿಕ ಸಮುದ್ರಕ್ಕಿಳಿಯಂತೆ ಸೂಚನೆ ನೀಡಲಾಗಿದೆ.

ಪೇಟೆಯಲ್ಲಿ ಕರಡಿಯ ಬಿಗಿ ಹಿಡಿತ; ಸೆನ್ಸೆಕ್ಸ್ 550 ಅಂಶ ಕುಸಿತ

ರುಪಾಯಿ ಕುಸಿತ ಮತ್ತು ಕಚ್ಚಾ ತೈಲ ದರ ಏರಿಕೆಯಿಂದ ಏರಿಳಿತದ ವಹಿವಾಟು ನಡೆಸಿದ ಷೇರುಪೇಟೆ ದಿನದ ಅಂತ್ಯಕ್ಕೆ ತೀವ್ರವಾಗಿ ಕುಸಿಯಿತು. ಸೆನ್ಸೆಕ್ಸ್ 550 ಅಂಶ ಕುಸಿದರೆ, ನಿಫ್ಟಿ 150 ಅಂಶ ಕುಸಿಯಿತು. ವಿಸ್ತೃತ ಮಾರುಕಟ್ಟೆಯ ಎಲ್ಲಾ ಸೂಚ್ಯಂಕಗಳು ಇಳಿಜಾರಿಗೆ ಸರಿದವು. ಬ್ಯಾಂಕಿಂಗ್ ಮತ್ತು ಆಟೋ ವಲಯದ ಷೇರುಗಳ ಮಾರಾಟ ಒತ್ತಡ ತೀವ್ರವಾಗಿತ್ತು. ಷೇರುಪೇಟೆ ಕುಸಿತದ ನಡುವೆ ಚಿನಿವಾರ ಪೇಟೆಯಲ್ಲಿ ಚಿನ್ನ ಬೆಳ್ಳಿಗೆ ಬೇಡಿಕೆ ಹೆಚ್ಚಿತ್ತು. ಚಿನ್ನ 350 ರುಪಾಯಿ ಏರಿ 31000ಕ್ಕೇರಿದರೆ, ಬೆಳ್ಳಿ ಕೆಜಿಗೆ 800 ರುಪಾಯಿ ಏರಿದ್ದು 40000ಕ್ಕೆ ಸಮೀಪಿಸಿದೆ.

ವೆಸ್ಟ್‌ಇಂಡೀಸ್ ವಿರುದ್ಧದ ಎರಡನೇ ಪಂದ್ಯಕ್ಕೆ ವಿಶಾಖಪಟ್ಟಣ ಆತಿಥ್ಯ

ಪ್ರವಾಸಿ ವೆಸ್ಟ್‌ಇಂಡೀಸ್ ವಿರುದ್ಧ ನಡೆಯಲಿರುವ ಎರಡನೇ ಏಕದಿನ ಪಂದ್ಯಕ್ಕೆ ವಿಶಾಖಪಟ್ಟಣ ಆತಿಥ್ಯ ಹೊತ್ತಿದೆ. ಕಾಂಪ್ಲಿಮೆಂಟರಿ ಪಾಸ್‌ಗಳಿಗೆ ಸಂಬಂಧಿಸಿ ಸರ್ವೋಚ್ಚ ನ್ಯಾಯಾಲಯ ನೇಮಿತ ಆಡಳಿತ ಸಮಿತಿ ಜತೆಗಿನ ಬಿಕ್ಕಟ್ಟಿನಿಂದಾಗಿ ಇಂದೋರ್‌ನ ಹೋಳ್ಕರ್ ಮೈದಾನದಲ್ಲಿ ಅಕ್ಟೋಬರ್ ೨೪ರಂದು ನಡೆಯಬೇಕಿದ್ದ ಪಂದ್ಯಕ್ಕೆ ಆತಿಥ್ಯ ಹೊತ್ತುಕೊಳ್ಳುವುದಿಲ್ಲ ಎಂದು ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆ ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಪಂದ್ಯವನ್ನು ವಿಶಾಖಪಟ್ಟಣಕ್ಕೆ ಸ್ಥಳಾಂತರಗೊಳಿಸಲಾಗಿದೆ ಎಂದು ಬಿಸಿಸಿಐ ಪ್ರಕಟಣೆ ಇಂದು ಖಚಿತಪಡಿಸಿದೆ. ಅಂದಹಾಗೆ, ೨೭ ಸಹಸ್ರ ಪ್ರೇಕ್ಷಕ ಸಾಮರ್ಥ್ಯದ  ಹೋಳ್ಕರ್ ಮೈದಾನದಲ್ಲಿ ೨,೭೦೦ ಕಾಂಪ್ಲಿಮೆಂಟರಿ ಪಾಸ್‌ಗಳಿಗೆ ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆ ಬೇಡಿಕೆ ಇರಿಸಿತ್ತು.

ಸಿಲ್ವೆಸ್ಟರ್‌ ಸ್ಟಾಲೋನ್‌ ‘Rambo 5’

ಜನಪ್ರಿಯ ಹಾಲಿವುಡ್‌ ಸಿನಿಮಾ ‘Rambo’ 5ನೇ ಸರಣಿಗೆ ಚಾಲನೆ ಸಿಕ್ಕಿದೆ. ನಟ ಸಿಲ್ವೆಸ್ಟರ್ ಸ್ಟಲೋನ್‌ ಇನ್‌ಸ್ಟಾಗ್ರಾಮ್‌ ಅಕೌಂಟ್‌ನಲ್ಲಿ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆ ಮಾಡಿದ್ದಾರೆ. ಚಿತ್ರದಲ್ಲಿ ಅವರು ವಿಯೆಟ್ನಾಮ್‌ ಯುದ್ಧದ ವೀರಯೋಧ John Rambo ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ 2019ರ ಮೇ ತಿಂಗಳಲ್ಲಿ ತೆರೆಕಾಣಲಿದೆ. ಹಾಲಿವುಡ್‌ ಆಕ್ಷನ್ ಸ್ಟಾರ್ ಸಿಲ್ವೆಸ್ಟರ್ ಸ್ಟಲೋನ್‌ ಅವರ ‘ಕ್ರೀಡ್‌ 2’ ಸಿನಿಮಾ ನವೆಂಬರ್‌ 21ರಂದು ಬಿಡುಗಡೆಯಾಗಲಿದೆ.

ಅಂತಿಮ ಹನ್ನೆರಡು ಆಟಗಾರರಲ್ಲಿ ಪೃಥ್ವಿಗೆ ಸ್ಥಾನ

ಗುರುವಾರದಿಂದ (ಅ. ೪) ಆರಂಭವಾಗುತ್ತಿರುವ ವೆಸ್ಟ್‌ಇಂಡೀಸ್ ವಿರುದ್ಧದ ಎರಡು ಟೆಸ್ಟ್ ಪಂದ್ಯ ಸರಣಿಯ ಮೊದಲ ಪಂದ್ಯಕ್ಕೆ ಆಯ್ಕೆಯಾಗಿರುವ ಅಂತಿಮ ಹನ್ನೆರಡು ಮಂದಿ ಆಟಗಾರರಲ್ಲಿ ಮುಂಬೈನ ಪೃಥ್ವಿ ಶಾಗೆ ಸ್ಥಾನ ಕಲ್ಪಿಸಲಾಗಿದೆ. ಕರ್ನಾಟಕದ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಬದಲಿಗೆ ಇನ್ನಿಂಗ್ಸ್ ಆರಂಭಿಸಲು ಪೃಥ್ವಿಗೆ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಆದ್ಯತೆ ನೀಡಿದೆ. ಭಾರತ ಎ ಮತ್ತು ದೇಶೀಯ ಕ್ರಿಕೆಟ್‌ನಲ್ಲಿ ಕೆಲವೊಂದು ಶತಕಗಳನ್ನು ದಾಖಲಿಸಿದ ಮಯಾಂಕ್ ಅಗರ್ವಾಲ್‌ಗೆ ಕಡೆಗೂ ಆಯ್ಕೆಸಮಿತಿ ಭಾರತ ತಂಡದಲ್ಲಿ ಸ್ಥಾನ ಕಲ್ಪಿಸಿದೆ. ಒಟ್ಟಾರೆ, ರಾಜ್‌ಕೋಟ್‌ನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಕನ್ನಡಿಗ ಕೆ ಎಲ್ ರಾಹುಲ್ ಜತೆಗೂಡಿ ಪೃಥ್ವಿ ಶಾ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ದಟ್ಟವಾಗಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More