ಐಸಿಐಸಿಐ ಬ್ಯಾಂಕ್ ನಲ್ಲಿ ಚಂದಾ ದಶಕ ಅಂತ್ಯ; ಈಗ ಸಂದೀಪ್ ಭಕ್ಷಿ ಯುಗ ಆರಂಭ

ವಿಡಿಯೋಕಾನ್ ಸಂಸ್ಥೆಗೆ ಸಾಲ ನೀಡಿದ ಪ್ರಕರಣದಲ್ಲಿ ಹಿತಾಸಕ್ತಿ ಸಂಘರ್ಷ ಆರೋಪ ಎದುರಿಸುತ್ತಿರುವ ಚಂದಾ ಕೊಚ್ಚಾರ್ ತಕ್ಷಣದಿಂದೇ  ಐಸಿಐಸಿಐ ಬ್ಯಾಂಕ್ ಸಿಇಒ ಹುದ್ದೆ ತೊರೆದಿದ್ದಾರೆ. ಸಂದೀಪ್ ಭಕ್ಷಿ ನೂತನ ಎಂಡಿ ಮತ್ತು ಸಿಇಒ ಆಗಿ ಬ್ಯಾಂಕ್ ಚುಕ್ಕಾಣಿ ಹಿಡಿದಿದ್ದಾರೆ. ಐಸಿಐಸಿಐ ಬ್ಯಾಂಕಿನಲ್ಲಿ ಈಗ ಸಂದೀಪ ಪರ್ವ

ಒಂದು ದಶಕ ಕಾಲ ಐಸಿಐಸಿಐ ಬ್ಯಾಂಕ್ ಮುನ್ನಡೆಸಿದ ಚಂದಾ ಕೊಚ್ಚಾರ್ ತಮ್ಮ ಹುದ್ದೆಯನ್ನು ತೊರೆದಿದ್ದಾರೆ. 2009ರಲ್ಲಿ ಐಸಿಐಸಿಐ ಬ್ಯಾಂಕ್ ಚುಕ್ಕಾಣಿ ಹಿಡಿದು ಮನ್ನಡೆಸಿದ್ದ ಚಂದಾ 2019ರವರೆಗೂ ಸಿಇಒ ಆಗಿ ನಿಯುಕ್ತಿಗೊಂಡಿದ್ದರು.

ವಿಡಿಯೋಕಾನ್ ಸಂಸ್ಥೆಗೆ 3,250 ಕೋಟಿ ರೂ., ಸಾಲ ನೀಡುವ ವಿಷಯದಲ್ಲಿ ಸ್ವಜನ ಪಕ್ಷಪಾತ ಮತ್ತು ಹಿತಾಸಕ್ತಿ ಸಂಘರ್ಷ ಆರೋಪ ಎದುರಿಸುತ್ತಿದ್ದ ಸಿಇಒ ಚಂದಾ ಕೊಚ್ಚಾರ್ ಅವರ ಐಸಿಐಸಿಐ ಬ್ಯಾಂಕ್ ಸುಧೀರ್ಘ ಪ್ರಯಾಣ ಇದೀಗ ಅಂತ್ಯಗೊಂಡಿದೆ.

ಐಸಿಐಸಿಐ ಪ್ರುಡೆನ್ಷಿಯಲ್ ಲೈಫ್ ಸಿಇಒ ಸಂದೀಪ್ ಭಕ್ಷಿ ಅವರನ್ನು ಚೀಫ್ ಆಪರೇಟಿಂಗ್ ಆಫಿಸರ್ (ಸಿಒಒ) ಆಗಿ ಜೂನ್ ತಿಂಗಳಲ್ಲಿ ಐಸಿಐಸಿಐ ಆಡಳಿತ ಮಂಡಳಿ ನಿಯೋಜಿಸಿತ್ತು. ಚಂದಾ ಹುದ್ದೆ ತೊರೆದ ಹಿನ್ನೆಲೆಯಲ್ಲಿ ಸಂದೀಪ್ ಭಕ್ಷಿ ಅವರು ನೂತನ ಎಂಡಿ ಮತ್ತು ಸಿಇಒ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಚೀಫ್ ಆಪರೇಟಿಂಗ್ ಆಫಿಸರ್ ಹುದ್ದೆಯನ್ನು ಸಂದೀಪ್ ಭಕ್ಷಿ ಅವರಿಗಾಗಿಯೇ ಜೂನ್ ತಿಂಗಳಲ್ಲಿ ಸೃಷ್ಟಿಸಲಾಗಿತ್ತು.

ವಿಡಿಯೋಕಾನ್ ಹಗರಣದ ಹಿನ್ನೆಲೆಯಲ್ಲಿ ಚಂದಾ ಕೊಚ್ಚಾರ್ ರಜೆ ಮೇಲಿದ್ದರು. ಸೆಬಿ ಮತ್ತು ನ್ಯಾಯಮೂರ್ತಿ ಶ್ರೀಕೃಷ್ಣ ಸಮಿತಿಯಿಂದ ಪ್ರತ್ಯೇಕ ತನಿಖೆ ನಡೆಯುತ್ತಿರುವುದರಿಂದ ರಜೆ ಅವಧಿ ವಿಸ್ತರಿಸಿಕೊಳ್ಳುವಂತೆ ಐಸಿಐಸಿಐ ಬ್ಯಾಂಕ್ ಆಡಳಿತ ಮಂಡಳಿ ಚಂದಾ ಕೊಚ್ಚಾರ್ ಅವರಿಗೆ ಸೂಚಿಸಿತ್ತು. ಆಗಲೇ ಚಂದಾ ಅವರು ಹುದ್ದೆ ತೊರೆಯುವುದು ಖಚಿತವಾಗಿತ್ತು.

ಜೂನ್ ತಿಂಗಳಿಂದಲೇ ಸಂದೀಪ್ ಭಕ್ಷಿ ನಿಯಮಾನುಸಾರ ಇಡೀ ಬ್ಯಾಂಕಿನ ಸರ್ವವಹಿವಾಟು ಮೇಲ್ವಿಚಾರಣೆಯ ಜವಾಬ್ದಾರಿ ವಹಿಸಿಕೊಂಡಿದ್ದರು. ಆದರೆ ಇದುರವೆಗೂ ಸಿಇಒ ಹುದ್ದೆಯಲ್ಲಿ ಮುಂದುವರೆದಿದ್ದ ಚಂದಾ ಕೊಚ್ಚಾರ್ ಅವರಿಗೆ ವರದಿ ಮಾಡಿಕೊಳ್ಳಬೇಕಿತ್ತು. ಆದರೆ, ಚಂದಾ ಕೊಚ್ಚಾರ್ ಅವರು ರಜೆ ಮೇಲಿದ್ದರಿಂದ ನೇರವಾಗಿ ಐಸಿಐಸಿಐ ಆಡಳಿತ ಮಂಡಳಿಗೆ ವರದಿ ಮಾಡಿಕೊಳ್ಳುತ್ತಿದ್ದರು.

ಹೊಸ ಹುದ್ದೆ ಸೃಷ್ಟಿಯ ಮೂಲಕ ಚಂದಾ ಕೊಚ್ಚಾರ್ ಅವರು ಗೌರವಯುತವಾಗಿ ಹುದ್ದೆ ತೊರೆಯಲು ಅವಕಾಶ ನೀಡಿರುವ ಐಸಿಐಸಿಐ ಆಡಳಿತ ಮಂಡಳಿಯು, ಭಕ್ಷಿ ಅವರ ನೇಮಕ ಮಾಡುವ ಮೂಲಕ ಬ್ಯಾಂಕ್ ಬಗ್ಗೆ ಗ್ರಾಹಕರಲ್ಲಿರುವ ಸದ್ಭಾವನೆ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದೀಗ ಚಂದಾ ಕೊಚ್ಚಾರ್ ಹುದ್ದೆ ತೊರೆದಿದ್ದಾರೆ. ಚಂದಾ ಕೊಚ್ಚಾರ್ ಅವರ ಕೋರಿಕೆ ಮೇರೆಗೆ ಅವರನ್ನು ಸಿಇಒ ಹೂದ್ದೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಐಸಿಐಸಿಐ ಬ್ಯಾಂಕ್ ಆಡಳಿತ ಮಂಡಳಿ ತಿಳಿಸಿದೆ.

ಐಸಿಐಸಿಐ ಸಮೂಹಕ್ಕೆ ಸಂದೀಪ್ ಭಕ್ಷಿ ಹೊಸನರೇನಲ್ಲ. ಕಳೆದ ಎಂಟು ವರ್ಷಗಳಿಂದ ಐಸಿಐಸಿಐ ಪ್ರುಡೆನ್ಷಿಯಲ್ ಲೈಫ್ ಕಂಪನಿಯನ್ನು ಯಶಸ್ವಿಯಾಗಿ ಪ್ರಗತಿಯತ್ತ ಒಯ್ದ ಹೆಗ್ಗಳಿಕೆ ಅವರದು. 1986ರಲ್ಲಿ ಐಸಿಐಸಿಐ ಲಿಮಿಟೆಡ್‌ನಲ್ಲಿ ತಮ್ಮ ವೃತ್ತಿ ಆರಂಭಿಸಿದ ಸಂದೀಪ್ ಭಕ್ಷಿ, ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಸುರೆನ್ಸ್ ಕಂಪನಿಯನ್ನು 2007ರಿಂದ 2009ರವರೆಗೆ ಮುನ್ನಡೆಸಿದರು. ನಂತರ ಐಸಿಐಸಿ ಬ್ಯಾಂಕ್‌ನ ರಿಟೇಲ್ ವಿಭಾಗದ ಡೆಪ್ಯುಟಿ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ನೇಮಕವಾದರು. 2010ರಲ್ಲಿ ಐಸಿಐಸಿಐ ಪ್ರುಡೆನ್ಷಿಯಲ್ ಲೈಫ್ ಚುಕ್ಕಾಣಿ ಹಿಡಿದರು. ಪ್ರಾಜೆಕ್ಟ್ ಫೈನಾನ್ಸಿಂಗ್, ರಿಸ್ಕ್ ಮ್ಯಾನೇಜ್ಮೆಂಟ್ ಮತ್ತು ಕಾರ್ಪೊರೆಟ್ ಬ್ಯಾಂಕಿಂಗ್ ನಲ್ಲಿ ಪಳಗಿದ್ದ ಸಂದೀಪ್ ಭಕ್ಷಿ ನೇತೃತ್ವದಲ್ಲಿ ಇನ್ಸುರೆನ್ಸ್ ಕಂಪನಿ ತ್ವರಿತಗತಿಯಲ್ಲಿ ಬೆಳೆಯಿತು.

ಸತತ ಎಂಟು ವರ್ಷ ಐಸಿಐಸಿಐ ಪ್ರುಡೆನ್ಷಿಯಲ್ ಲೈಫ್ ಎಂಡಿ ಮತ್ತು ಸಿಇಒ ಆಗಿಯಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ ನಂತರ ಮತ್ತೆ ಐಸಿಐಸಿ ಬ್ಯಾಂಕ್ ಗೆ ಹೊಸ ಸಿಒಒ ಹುದ್ದೆಯೊಂದಿಗೆ ವಾಪಸಾಗಿದ್ದರು. ಈಗ ಬ್ಯಾಂಕ್ ನ ಅತ್ಯುನ್ನತ ಹುದ್ದೆಯಾದ ಎಂಡಿ ಮತ್ತು ಸಿಇಒ ಆಗಿದ್ದಾರೆ. ಐಸಿಐಸಿಐ ಬ್ಯಾಂಕಿನಲ್ಲೀಗ ಚಂದಾ ಕೊಚ್ಚಾರ್ ಬಿಟ್ಟರೆ ಇವರೇ ಅತ್ಯಂತ ಅನುಭವಿ ಮತ್ತು ಹಿರಿಯ.

ಭಕ್ಷಿ ಅವರ ಮುಂದಿರುವ ದೊಡ್ಡ ಸವಾಲು ಎಂದರೆ ವಿಡಿಯೋಕಾನ್ ಸಾಲದ ಹಗರಣದಿಂದಾಗಿ ಬ್ಯಾಂಕ್ ಬಗ್ಗೆ ಬಂದಿರುವ ಕಳಂಕವನ್ನು ತೊಡೆದುಹಾಕುವುದು. ಹೂಡಿಕೆದಾರರು, ಷೇರುದಾರರು ಮತ್ತು ನಿಯಂತ್ರಕರಿಗಿರುವ ಆಂತಕವನ್ನು ನಿವಾರಿಸುವುದಾಗಿದೆ. ಜೊತೆಗೆ ಕಳೆದ ಮೂರ್ನಾಲ್ಕು ತ್ರೈಮಾಸಿಕಗಳಲ್ಲಿ ಬ್ಯಾಂಕ್ ಲಾಭದ ಮೇಲೆ ಭಾರಿ ಒತ್ತಡಕ್ಕೆ ಕಾರಣವಾಗಿರುವ ನಿಷ್ಕ್ರಿಯ ಸಾಲ ವಿಲೇವಾರಿಯೂ ಪ್ರಮುಖ ಸವಾಲಾಗಿದೆ.

ಇದನ್ನೂ ಓದಿ : ಹಿತಾಸಕ್ತಿ ಸಂಘರ್ಷದ ಸಂಕೋಲೆಯಲ್ಲಿ ಐಸಿಐಸಿಐ ಬ್ಯಾಂಕ್ ಸಿಇಒ ಚಂದಾ ಕೊಚ್ಚಾರ್

ನಿಷ್ಕ್ರಿಯ ಸಾಲದ ಒತ್ತಡದಿಂದಾಗಿ ಐಸಿಐಸಿಐ ಬ್ಯಾಂಕ್ ಷೇರು ದರ ಉಳಿದ ಖಾಸಗಿ ಬ್ಯಾಂಕುಗಳಿಗೆ ಹೋಲಿಸಿದರೆ, ಕಡಿಮೆ ಇದೆ. ಹಗರಣ ಹೊರಬಿದ್ದ ನಂತರ ಸತತ ಕುಸಿದು ವರ್ಷದ ಕನಿಷ್ಠ ಮಟ್ಟ240ರುಪಾಯಿಗೆ ಕುಸಿದಿತ್ತು. ಇನ್ನೂ ಷೇರು ದರ ಸ್ಥಿರವಾಗಿಲ್ಲ. ಏರಿಳಿತ ಭಾರಿ ಪ್ರಮಾಣದಲ್ಲಿದೆ. ಸಂದೀಪ್ ಭಕ್ಷಿ ನೇಮಕದ ನಂತರ ಷೇರುದರ ಸ್ಥಿರಗೊಂಡು ಏರುಹಾದಿಯಲ್ಲಿ ಸಾಗುವ ನಿರೀಕ್ಷೆ ಪೇಟೆಯಲ್ಲಿದೆ.

ತನಿಖೆ ಮುಗಿದ ನಂತರವಷ್ಟೇ ಚಂದಾ ಕೊಚ್ಚಾರ್ ಸಿಇಒ ಹುದ್ದೆ ತೊರೆಯುತ್ತಾರೆಂಬ ಅಂದಾಜಿತ್ತು. ಆದರೆ, ತನಿಖೆ ವೇಳೆ ಆರೋಪ ಸಾಬೀತಾದರೆ ಚಂದಾಕೊಚ್ಚಾರ್ ಜತೆಗೆ ಐಸಿಐಸಿಐ ಬ್ಯಾಂಕ್ ಆಡಳಿತ ಮಂಡಳಿಯೂ ಮುಜುಗರ ಅನುಭವಿಸಬೇಕಾಗುತ್ತದೆ ಎಂಬ ಕಾರಣಕ್ಕೆ ತನಿಖೆ ಪೂರ್ಣಗೊಳ್ಳುವ ಮುನ್ನವೇ ಹುದ್ದೆ ತೊರೆಯುವಂತೆ ಆಡಳಿತ ಮಂಡಳಿ ಮನವೊಲಿಸಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More