ಸಮ್ಮಿಶ್ರ ಸರ್ಕಾರದ ಸಂಪುಟ ವಿಸ್ತರಣೆ| ಮಾಧ್ಯಮಗಳು ನೋಡುತ್ತಿರುವುದು ಹೇಗೆ?

ಕಾಂಗ್ರೆಸ್‌ ಪಾಲಿನ ಖಾಲಿ ಇರುವ ೬ ಸಚಿವ ಸ್ಥಾನ ತುಂಬಲು ನಾಯಕರು ಸರ್ಕಸ್‌ ಮಾಡುತ್ತಿದ್ದಾರೆ. ಸಚಿವ ಸ್ಥಾನ ದೊರೆಯದ ಆಕಾಂಕ್ಷಿಗಳು ಭಿನ್ನಮತ ಸಾರಬಹುದು ಎಂಬ ಅಳುಕು ನಾಯಕರಲ್ಲಿದೆ. ಈ ಮಧ್ಯೆ, ಸಂಪುಟ ವಿಸ್ತರಣೆ ಬಗ್ಗೆ ಮಾಧ್ಯಮ ಉಹಾಪೋಹದ ವರದಿಗಳನ್ನು ಪ್ರಕಟಿಸಿದ್ದು, ಆಯ್ದ ಅಂಶಗಳು ಇಂತಿವೆ

ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಸಂಪುಟ ವಿಸ್ತರಣೆ ವಿಚಾರದ ಬಗ್ಗೆ ಕಳೆದ ಕೆಲವು ದಿನಗಳಿಂದ ವ್ಯಾಪಕ ಚರ್ಚೆಯಾಗುತ್ತಿದೆ. ಆಗಸ್ಟ್‌ ಅಂತ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದಿದ್ದ ಸಮನ್ವಯ ಸಮಿತಿ ಸಭೆಯಲ್ಲಿ ಸೆಪ್ಟೆಂಬರ್ ಮೂರನೇ ವಾರದಲ್ಲಿ ಸಂಪುಟ ರಚನೆ ಮಾಡುವ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ, ವಿಧಾನಸಭೆಯಿಂದ ವಿಧಾನ ಪರಿಷತ್‌ನ ಮೂರು ಸ್ಥಾನಗಳಿಗೆ ಉಪಚುನಾವಣೆ ನಡೆಯುತ್ತಿದ್ದರಿಂದ ಅದಕ್ಕಿಂತ ಮುಂಚೆ ಸಂಪುಟ ವಿಸ್ತರಣೆ ಮಾಡಿದರೆ ಅವಕಾಶ ವಂಚಿತರು ಬಿಜೆಪಿ ಬೆಂಬಲಕ್ಕೆ ನಿಲ್ಲುವ ಮೂಲಕ ಸರ್ಕಾರಕ್ಕೆ ಮುಜುಗರ ಉಂಟು ಮಾಡಬಹುದು ಎಂದು ಉಭಯ ಪಕ್ಷಗಳು ಸಂಪುಟ ವಿಸ್ತರಣೆ ನಿರ್ಧಾರವನ್ನು ಮುಂದೂಡಿದ್ದವು.

ಈಗ ಆಕಾಂಕ್ಷಿಗಳ ಒತ್ತಡ ಹೆಚ್ಚಾಗಿರುವುದರಿಂದ ಸಂಪುಟ ವಿಸ್ತರಣೆ ಸರ್ಕಸ್‌ ಆರಂಭವಾಗಿದೆ. ಕಾಂಗ್ರೆಸ್‌ ಪಾಲಿನಲ್ಲಿ ೬ ಸಚಿವ ಸ್ಥಾನಗಳು ಖಾಲಿಯಿವೆ. ಆದರೆ, ಸಚಿವಾಕಾಂಕ್ಷಿಗಳ ಸಂಖ್ಯೆ ಎರಡು ಡಜನ್‌ಗೂ ಹೆಚ್ಚಿದೆ. ಜೆಡಿಎಸ್‌ ಪಾಲಿನಲ್ಲಿರುವ ಒಂದು ಸ್ಥಾನಕ್ಕಾಗಿ ಹಲವರು ಲಾಬಿ ನಡೆಸುತ್ತಿದ್ದಾರೆ. ಸ್ಥಾನಮಾನ ಹಂಚಿಕೆ ವಿಚಾರದಲ್ಲಿ ಉಭಯ ಪಕ್ಷಗಳ ವರಿಷ್ಠರಿಗೆ ಇಕ್ಕಟ್ಟಿನ ಸಂದರ್ಭ ನಿರ್ಮಾಣವಾಗಿದ್ದು, ಜಾತಿ, ಧರ್ಮ ಮತ್ತು ಪ್ರಾದೇಶಿಕ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಸಂಪುಟ ವಿಸ್ತರಣೆ ನಡೆಸಬೇಕಿದೆ. ಇದೆಲ್ಲದರ ಮಧ್ಯೆ, ಮಾಧ್ಯಮಗಳು ಹಲವು ಊಹಾಪೋಹದ ಸುದ್ದಿಗಳನ್ನು ಪ್ರಕಟಿಸುತ್ತಿವೆ. ಸಂಪುಟ ವಿಸ್ತರಣೆ, ನಿಗಮ ಮತ್ತು ಮಂಡಳಿಗಳಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಸುದ್ದಿಗಳ ಪ್ರಮುಖ ಅಂಶಗಳು ಇಂತಿವೆ.

  1. ಹೊಸಬರಿಗೆ ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ಅರಣ್ಯ ಸಚಿವ ಆರ್‌ ಶಂಕರ್‌ ಹಾಗೂ ಹಿಂದುಳಿದ ವರ್ಗಗಳ ಸಚಿವ ಆರ್ ಪುಟ್ಟರಂಗ ಶೆಟ್ಟಿ ರಾಜಿನಾಮೆ ಪಡೆಯಲಾಗುತ್ತದೆ ಎನ್ನುವ ವಿಚಾರ ಕನ್ನಡ ಮತ್ತು ಇಂಗ್ಲಿಷ್‌ ಮಾಧ್ಯಮಗಳಲ್ಲಿ ವರದಿಯಾಗಿದೆ. ಕೆಲವು ಮಾಧ್ಯಮಗಳು ನಾಲ್ವರು ಹಾಲಿ ಸಚಿವರಿಗೆ ಕೊಕ್‌ ನೀಡಲು ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ನಿರ್ಧರಿಸಿದ್ದಾರೆ ಎಂದು ವರದಿ ಮಾಡಿವೆ.
  2. ಅಕ್ಟೋಬರ್ ೧೫ರ ಒಳಗೆ ಸಂಪುಟ ವಿಸ್ತರಣೆ ನಡೆಸಲಾಗುವುದು ಎಂದು ಸಿದ್ದರಾಮಯ್ಯ, ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಸೇರಿದಂತೆ ಕಾಂಗ್ರೆಸ್‌-ಜೆಡಿಎಸ್‌ನ ಪ್ರಮುಖ ನಾಯಕರು ಹೇಳುತ್ತಿದ್ದಾರೆ. ಆದರೆ. ಈ ಬಾರಿಯೂ ಸಂಪುಟ ವಿಸ್ತರಣೆ ನಡೆಯುವುದು ಅನುಮಾನ ಎಂದು ಕೆಲವು ಮಾಧ್ಯಮಗಳು ಸಂಶಯ ವ್ಯಕ್ತಪಡಿಸಿವೆ.
  3. ಕೇಂದ್ರ ಸಂಪುಟದಲ್ಲಿ ೨೦ ರಾಜ್ಯಸಭಾ ಸದಸ್ಯರಿಗೆ ಸಚಿವ ಸ್ಥಾನ ಕಲ್ಪಿಸಲಾಗಿದೆ. ಅಂತೆಯೇ ವಿಧಾನ ಪರಿಷತ್‌ ಸದಸ್ಯರಿಗೂ ಮಂತ್ರಿಸ್ಥಾನ ನೀಡಬೇಕು ಎಂದು ೧೦ಕ್ಕೂ ಹೆಚ್ಚು ವಿಧಾನ ಪರಿಷತ್‌ ಸದಸ್ಯರು ಒತ್ತಡ ಹೇರಿದ್ದಾರೆ ಎಂದು ವರದಿಯಾಗಿದೆ.
  4. ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಹೈಕಮಾಂಡ್‌ ಜೊತೆ ಚರ್ಚಿಸಲು ಕಾಂಗ್ರೆಸ್‌ ನಾಯಕರು ಎರಡನೇ ವಾರದಲ್ಲಿ ದೆಹಲಿಗೆ ತೆರಳಲಿದ್ದಾರೆ. ೮೫ ನಿಗಮ ಮತ್ತು ಮಂಡಳಿಗಳ ಪೈಕಿ ಮೊದಲ ಹಂತದಲ್ಲಿ ಕಾಂಗ್ರೆಸ್‌ಗೆ ೨೦ ಹಂಚಿಕೆಯಾಗಲಿವೆ. ಇದರಲ್ಲಿ ೧೫ ನಿಗಮ ಮತ್ತು ಮಂಡಳಿಗಳಿಗೆ ನೇಮಕ ಮಾಡಲು ಕಾಂಗ್ರೆಸ್‌ ನಾಯಕರು ನಿರ್ಧರಿಸಿದ್ದಾರೆ.
  5. ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಅವಕಾಶ ಪಡೆಯುವವರಿಗೆ ಎರಡು ವರ್ಷದ ಕಾಲಮಿತಿ ನಿಗದಿ ಮಾಡಿ, ಆಕಾಂಕ್ಷಿಗಳ ಒತ್ತಡ ಕಡಿಮೆ ಮಾಡಲು ಕಾಂಗ್ರೆಸ್‌ ನಾಯಕರ ಚಿಂತನೆ.
  6. ಸಂಪುಟ ವಿಸ್ತರಣೆಗೂ ಮುನ್ನ ತನ್ನ ಪಾಲಿನ ೨೦ ನಿಗಮ ಮತ್ತು ಮಂಡಳಿಗಳ ಪೈಕಿ ೧೫ಕ್ಕೆ ಅಧ್ಯಕ್ಷ ಉಪಾಧ್ಯಕ್ಷರನ್ನು ನೇಮಕ ಮಾಡಲು ಕಾಂಗ್ರೆಸ್‌ ನಿರ್ಧರಿಸಿದೆ. ಈ ಸಂಬಂಧ ೧೨ ಹೆಸರುಗಳನ್ನು ಅಖೈರುಗೊಳಿಸಲಾಗಿದೆ. ಬೈರತಿ ಬಸವರಾಜು, ಬಿ ಕೆ ಸಂಗಮೇಶ್‌, ಎಸ್‌ ಟಿ ಸೋಮಶೇಖರ್, ಬಿ ಸಿ ಪಾಟೀಲ್‌, ಭೀಮಾ ನಾಯಕ್‌, ರಾಮಪ್ಪ, ರಘುಮೂರ್ತಿ, ಅಖಂಡ ಶ್ರೀನಿವಾಸ, ನಾಗೇಶ್‌, ಶಿವರಾಮ್‌ ಹೆಬ್ಬಾರ್‌ ಹೆಸರುಗಳನ್ನು ಉಲ್ಲೇಖಿಸಿ ಕೆಲವು ಮಾಧ್ಯಮಗಳು ವರದಿ ಮಾಡಿದ್ದು, ಇನ್ನು ಕೆಲವು ಮಾಧ್ಯಮಗಳು ಸಂಪುಟ ವಿಸ್ತರಣೆಯ ಬಳಿಕ ನಿಗಮ ಮತ್ತು ಮಂಡಳಿಗಳಿಗೆ ನೇಮಕ ಮಾಡಲಾಗುತ್ತದೆ ಎಂದು ವರದಿ ಮಾಡಿವೆ.
  7. ರಾಮನಗರ ಮತ್ತು ಜಮಖಂಡಿ ವಿಧಾನಸಭಾ ಕ್ಷೇತ್ರಗಳಿಗೆ ಶೀಘ್ರದಲ್ಲೇ ಉಪಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಉಪಚುನಾವಣೆಯ ಬಳಿಕ ಸಂಪುಟ ವಿಸ್ತರಣೆ ನಡೆಸುವಂತೆ ಕೆಲವು ನಾಯಕರು ಹೇಳುತ್ತಿದ್ದಾರೆ. ಆದರೆ, ಸಿದ್ದರಾಮಯ್ಯ ಹಾಗೂ ದಿನೇಶ್‌ ಗುಂಡೂರಾವ್‌ ಅವರು ಸಂಪುಟ ವಿಸ್ತರಣೆಗೆ ಒಲವು ವ್ಯಕ್ತಪಡಿಸಿದ್ದಾರೆ.
ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More