ಭಾರತದಿಂದ ಮ್ಯಾನ್ಮಾರ್‌ಗೆ ರೊಹಿಂಗ್ಯಾಗಳ ಗಡಿಪಾರು, ವಿಶ್ವಸಂಸ್ಥೆ ಕಟು ಟೀಕೆ

ಅಕ್ರಮವಾಗಿ ದೇಶದಲ್ಲಿದ್ದ ಏಳುಮಂದಿ ರೊಹಿಂಗ್ಯಾ ಮುಸ್ಲಿಮರನ್ನು ಮ್ಯಾನ್ಮಾರ್‌ಗೆ ಗಡಿಪಾರು ಮಾಡುವ ಮೂಲಕ ಭಾರತ ಅಂತಾರಾಷ್ಟ್ರೀಯವಾಗಿ ಮಾನವ ಹಕ್ಕುಗಳ ಉಲ್ಲಂಘನೆಯ ಆರೋಪಕ್ಕೆ ಗುರಿಯಾಗಿದೆ

ಅಕ್ರಮ ವಲಸಿಗರಾಗಿ 2012ರಿಂದ ಅಸ್ಸಾಂ ಜೈಲಿನಲ್ಲಿದ್ದ ಏಳು ಮಂದಿ ರೊಹಿಂಗ್ಯಾ ಮುಸ್ಲಿಮರನ್ನು ಮತ್ತೆ ಅವರ ದೇಶವಾದ ಮ್ಯಾನ್ಮಾರ್‌ಗೆ ಭಾರತ ಗುರುವಾರ ಗಡಿಪಾರು ಮಾಡಿದ ಪ್ರಕರಣ ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಯ ತೀವ್ರ ಟೀಕೆಗೆ ಗುರಿಯಾಗಿದೆ.

ಆ ಏಳುಮಂದಿಯನ್ನು ಮ್ಯಾನ್ಮಾರ್‌ಗೆ ಗಡಿಪಾರು ಮಾಡುವ ಕೇಂದ್ರ ಸರ್ಕಾರದ ನಿರ್ಧಾರದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಈ ಬೆಳವಣಿಗೆಯಾಗಿದೆ. ಆ ಏಳುಮಂದಿ ರೊಹಿಂಗ್ಯಾ ಮುಸ್ಲಿಮರು ಮ್ಯಾನ್ಮಾರ್ ದೇಶದ ರಾಕೀನಾ ಪ್ರಾಂತ್ಯದ ಕ್ಯಾನಕ್ ದಾ ಪಟ್ಟಣದವರು ಎಂಬುದು ಖಚಿತವಾಗಿದೆ. ಅವರನ್ನು ವಾಪಸ್ ಪಡೆಯಲು ಮ್ಯಾನ್ಮಾರ್ ಕೂಡಾ ಒಪ್ಪಿದೆ ಎಂದು ಭಾರತ ಹೇಳಿದೆ.

ಆದರೆ ಈ ವಾದವನ್ನು ವಿಶ್ವಸಂಸ್ಥೆಯಲ್ಲಿ ವಿಶೇಷ ಪ್ರತಿನಿಧಿ ( ಜನಾಂಗ ದ್ವೇಷ, ವರ್ಣಭೇದ ದೂರುಗಳನ್ನು ವರದಿಮಾಡುವ) ಪ್ರೊ.ತೆಂಡವಿ ಅಚೂಮೆ ಒಪ್ಪಿಲ್ಲ. ಯಾವುದೇ ನಿರಾಶ್ರಿತರನ್ನು ಬಲವಂತದಿಂದ ಕಳುಹಿಸಬಾರದು. ಆ ಆಯ್ಕೆಯನ್ನು ಅವರಿಗೆ ಬಿಡಬೇಕಿತ್ತು. ರಾಕೀನಾ ಪ್ರಾಂತ್ಯದಲ್ಲಿ ಅವರು ಮತ್ತೆ ಜನಾಂಗ ದೌರ್ಜನ್ಯಕ್ಕೆ ಒಳಗಾಗಬಹುದು. ಅವರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಯಾರೂ ತೆಗೆದುಕೊಳ್ಳದಂಥ ಸ್ಥಿತಿಯಲ್ಲಿಲ್ಲ. ಅವರನ್ನು ಅಲ್ಲಿಗೆ ಕಳುಹಿಸಿದ್ದು ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆ. ಗಡಿಪಾರು ಮಾಡುವ ಮೊದಲು ವಿಶ್ವಸಂಸ್ಥೆಯ ವಲಸೆ ವಿಭಾಗಕ್ಕೆ ವಿಷಯ ತಿಳಿಸಲಿಲ್ಲ ಏಕೆ ಎಂದು ಅಚೂಮೆ ಪ್ರಶ್ನಿಸಿದ್ದಾರೆ.

ಭಾರತದಲ್ಲಿ ಒಟ್ಟು ನಲ್ವತ್ತು ಸಾವಿರ ರೊಹಿಂಗ್ಯಾ ವಲಸಿಗರು ಇದ್ದಾರೆಂದು ಅಂದಾಜು ಮಾಡಲಾಗಿದೆ. ದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಕ್ರಮ ವಲಸಿಗರ ಪತ್ತೆ ಕಾರ್ಯಕ್ಕೆ ವಿಶೇಷ ಒತ್ತು ನೀಡಲಾಗಿದೆ. ( ಅಸ್ಸಾಂನಲ್ಲಿರುವ ಬಾಂಗ್ಲಾ ಮುಸ್ಲಿಮರನ್ನು ಗಡಿಪಾರು ಮಾಡುವ ಬಗ್ಗೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯ ಹಿರಿಯ ನಾಯಕರು ಮತ್ತೆ ಮತ್ತೆ ಮಾತನಾಡುತ್ತಲೇ ಇದ್ದಾರೆ) ಈ ದಿಸೆಯಲ್ಲಿ ರೊಹಿಂಗ್ಯಾ ಮುಸ್ಲಿಮರನ್ನು ಗುರುತಿಸುವ ಮತ್ತು ಅಂತಿಮವಾಗಿ ಅವರನ್ನು ದೇಶದಿಂದ ಹೊರಹಾಕುವ ದಿಸೆಯಲ್ಲಿ ಪ್ರಯತ್ನಗಳು ಆರಂಭವಾಗಿದೆ. ರೊಹಿಂಗ್ಯಾ ಅಕ್ರಮ ವಲಸಿಗರನ್ನು ಹೊರಹಾಕುವ ಮೊದಲ ಪ್ರಯತ್ನವಾಗಿ ಇದೀಗ ಏಳುಮಂದಿಯನ್ನು ಗುರುವಾರ ಗಡಿಪಾರು ಮಾಡಲಾಗಿದೆ. ರೊಹಿಂಗ್ಯಾ ಮುಸ್ಲಿಮರು ಉಗ್ರವಾದಿ ಸಂಘಟನೆಗಳ ಜೊತೆ ಸಂಪರ್ಕ ಪಡೆದಿದ್ದು ದೇಶದ ಭದ್ರತೆಗೆ ಭಂಗವಾಗಬಹುದಾದ ಸಾಧ್ಯತೆ ಇದೆ ಎಂಬ ಆರೋಪ ಅವರ ಮೇಲೆ ಹೊರಿಸಲಾಗಿದೆ.

ಮ್ಯಾನ್ಮಾರ್‌ನ ರೊಹಿಂಗ್ಯಾ ಮುಸ್ಲಿಮ್ ನಿರಾಶ್ರಿತರು ಕಳೆದ ಕೆಲವು ವರ್ಷಗಳಿಂದ ಅಂತಾರಾಷ್ಟ್ರೀಯ ಸಮಸ್ಯೆಯಾಗಿ ಪರಿವರ್ತಿತವಾಗಿದ್ದಾರೆ. ಮ್ಯಾನ್ಮಾರ್‌ನ ರಾಕೀನಾ ಪ್ರಾಂತ್ಯದಲ್ಲಿ ನೆಲೆಯೂರಿದ್ದ ಅವರನ್ನು ಆ ದೇಶದ ಮಿಲಿಟರಿ ಬಲವಂತವಾಗಿ ತೆರವು ಮಾಡಲು ಆರಂಭಿಸಿದಂದಿನಿಂದ ಈ ಸಮಸ್ಯೆ ತಲೆದೋರಿದೆ. ರೊಹಿಂಗಾ ಮುಸ್ಲಿಮ್ ಜನಾಂಗವನ್ನು ನಿರ್ನಾಮ ಮಾಡುತ್ತಿರುವ ಆರೋಪ ಮ್ಯಾನ್ಮಾರ್ ಸರ್ಕಾರ ಮತ್ತು ಮಿಲಿಟರಿ ಮೇಲೆ ಬಂದಿದೆ. ಇಂಥ ಜನಾಂಗ ಹತ್ಯೆಯನ್ನು ತಡೆಯುವಲ್ಲಿ ವಿಫಲವಾದುದಕ್ಕಾಗಿ ಆಂಗ್ ಸಾಂಗ್ ಸೂಕಿ ಅವರಿಗೆ ಈ ಮೊದಲು ನೀಡಲಾಗಿದ್ದ ನೊಬೆಲ್ ಶಾಂತಿ ಪ್ರಶಸ್ತಿಯನ್ನು ವಾಪಸ್ ಪಡೆಯಬೇಕೆಂಬ ಒತ್ತಾಯವೂ ಪ್ರಬಲವಾಗಿ ಕೇಳಿಬಂದಿದೆ.

ಜನಾಂಗ ಹತ್ಯೆ ಆರೋಪವನ್ನು ಸರ್ಕಾರ ಅಲ್ಲಗಳೆಯುತ್ತ ಬಂದಿದೆ. ಸುಮಾರು ೬. ೫೦ ಸಾವಿರ ಜನರು ವಿವಿಧ ದೇಶಗಳಿಗೆ ವಲಸೆಹೋಗಿದ್ದಾರೆ. ಸಮುದ್ರದಲ್ಲಿ ಸಣ್ಣಪುಟ್ಟ ದೋಣಿಗಳಲ್ಲಿ ಬೇರೆ ದೇಶಗಳಿಗೆ ಪ್ರಯಾಣ ಮಾಡುವಾಗ ಅಪಘಾತಗಳಿಗೆ ಒಳಗಾಗಿ ನೂರಾರು ಜನರು ಸತ್ತಿದ್ದಾರೆ. ಮ್ಯಾನ್ಮಾರ್‌ನಲ್ಲಿ ಇದ್ದಾಗಲೂ ಅವರಿಗೆ ಪೌರತ್ವ ನೀಡಿರಲಿಲ್ಲ. ಈಗ ಬೇರೆ ದೇಶಗಳಿಗೆ ವಲಸೆಹೋದವರಿಗಂತೂ ಪೌರತ್ವ ಸಿಗುವ ಸಾಧ್ಯತೆ ಇಲ್ಲವೇ ಇಲ್ಲ. ಕನಿಷ್ಠ ಸೌಲಭ್ಯಗಳಿಲ್ಲದೆ ಅನೇಕ ಕಡೆ ಅವರು ವಾಸಿಸುತ್ತಿದ್ದಾರೆ. ರೊಹಿಂಗ್ಯಾ ಮುಸ್ಲಿಮರ ಹತ್ಯಾಕಾಂಡದ ಬಗ್ಗೆ ತನಿಖಾ ವರದಿಗಳನ್ನು ಪ್ರಕಟಿಸಿದ ಇಬ್ಬರು ಪತ್ರಕರ್ತರನ್ನು ಮ್ಯಾನ್ಮಾರ್ ಸರ್ಕಾರ ಇತ್ತೀಚೆಗೆ ಜೈಲಿಗೆ ಕಳುಹಿಸಿದೆ. ದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಮಿತಿಮೀರಿದ ಹಿನ್ನೆಲೆಯಲ್ಲಿ ಆರ್ಥಿಕ ನಿರ್ಬಂಧಗಳನ್ನು ಹೇರಬೇಕೆಂದು ಹಲವು ದೇಶಗಳು ವಿಶ್ವಸಂಸ್ಥೆಯ ಮೇಲೆ ಒತ್ತಡ ಹಾಕಿವೆ.

ಇದನ್ನೂ ಓದಿ : ನೊಬೆಲ್‌ ಶಾಂತಿ ಪುರಸ್ಕೃತೆ ಸೂಕಿಗೆ ಕಳಂಕ ತರುವುದೇ ರೋಹಿಂಗ್ಯಾ ವಿವಾದ?

ರೊಹಿಂಗ್ಯಾ ಮುಸ್ಲಿಮರು ಬಾಂಗ್ಲಾ ದೇಶದಿಂದ ವಲಸೆ ಬಂದವರೆಂಬುದು ಮ್ಯಾನ್ಮಾರ್ ವಾದ. ಹಾಗೆ ನೋಡಿದರೆ ಹಿಂದೆ ಭಾರತ, ಪಾಕಿಸ್ತಾನ, ಬಾಂಗ್ಲಾ, ಹಿಂದಿನ ಬರ್ಮಾ ( ಇಂದು ಮ್ಯಾನ್ಮಾರ್ ) ಒಂದು ಪ್ರದೇಶವಾಗಿ ಬ್ರಿಟಿಷರ ಆಡಳಿತದಲ್ಲಿದ್ದವು. ಬಾಂಗ್ಲಾ ನೆರೆಯಲ್ಲಿದ್ದ ಬರ್ಮಾದ ರಾಕೀನಾ ಪ್ರಾಂತ್ಯದಲ್ಲಿ ರೊಹಿಂಗ್ಯಾ ಮುಸ್ಲಿಮರು ನೆಲೆ ಮಾಡಿಕೊಂಡಿದ್ದರು. ಬರ್ಮಾ ಪ್ರತ್ಯೇಕಗೊಂಡಾಗ ಬಾಂಗ್ಲಾ ಪ್ರದೇಶದಲ್ಲಿದ್ದ ಅನೇಕ ರೊಹಿಂಗ್ಯಾ ಮುಸ್ಲಿಮರು ರಾಕೀನಾ ಪ್ರಾಂತ್ಯಕ್ಕೆ ವಲಸೆಹೋದರು. ಬರ್ಮಾದಲ್ಲಿ ಅಧಿಕಾರಕ್ಕೆ ಬಂದ ಸರ್ಕಾರ ರೊಹಿಂಗ್ಯಾಗಳನ್ನು ತಮ್ಮ ದೇಶದ ಪ್ರಜೆಗಳೆಂದೇ ಪರಿಗಣಿಸಲಿಲ್ಲ. ಅವರಿಗೆ ಪೌರತ್ವವೂ ನೀಡಲಿಲ್ಲ. ಬಾಂಗ್ಲಾ ದೇಶಕ್ಕೆ ವಾಪಸ್ ಹೋಗುವಂತೆ ಒತ್ತಾಯ ಮಾಡುತ್ತಲೇ ಬರಲಾಯಿತು. ಸಹಜವಾಗಿ ರೊಹಿಂಗ್ಯಾ ಯುವಕರಲ್ಲಿ ಆಕ್ರೋಶ ಮೂಡಿತು. ಹೋರಾಟ ಆರಂಭವಾಯಿತು. ಅದನ್ನು ಹತ್ತಿಕ್ಕಲು ಮಿಲಿಟರಿಯನ್ನು ಬಳಸಲಾಯಿತು. ಮಿಲಿಟರಿ ದೌರ್ಜನ್ಯದಿಂದಾಗಿ ರೊಹಿಂಗ್ಯಾ ಜನರು ವಿಶ್ವದಾದ್ಯಂತ ವಲಸೆಹೋಗಿದ್ದಾರೆ. ಅವರಿಗೆ ಎಲ್ಲಿಯೂ ನೆಲೆ ಇಲ್ಲವಾಗಿದೆ. ರೊಹಿಂಗ್ಯಾ ಮುಸ್ಲಿಮರ ಸಮಸ್ಯೆ ಬಗ್ಗೆ ವಿಶ್ವದಾದ್ಯಂತ ಕಳವಳ, ಆಕ್ರೋಶ ವ್ಯಕ್ತವಾಗುತ್ತಿದ್ದರು ಮ್ಯಾನ್ಮಾರ್ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ಇಂಥ ಸ್ಥಿತಿಯಲ್ಲಿ ಭಾರತ ಏಳುಮಂದಿ ರೊಹಿಂಗ್ಯಾಗಳನ್ನು ಮತ್ತೆ ಆ ದೇಶಕ್ಕೆ ಕಳುಹಿಸಿರುವುದು ಸಹಜವಾಗಿಯೇ ಆತಂಕಕ್ಕೆ ಕಾರಣವಾಗಿದೆ. ಜೊತೆಗೆ ಭಾರತದ ಪ್ರಸ್ತುತ ಸರ್ಕಾರದ ಅಮಾನವೀಯ ಮುಖ ಬಯಲಾದಂತಾಗಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More