ಕೃಷ್ಣಾ ಜಲಾನಯನ ಅಭಿವೃದ್ಧಿ ಪ್ರಾಧಿಕಾರ ರಚನೆ ಪ್ರಸ್ತಾಪ; ಜಲ ನಿಗಮಗಳ ವಿಲೀನ?

ಕೃಷ್ಣಾ ಜಲಾನಯನ ನೀರಾವರಿ ಯೋಜನೆಗಳ ಕಾಮಗಾರಿ ಇನ್ನೂ ನಿರೀಕ್ಷಿತ ಮಟ್ಟದಲ್ಲಿ ಪೂರ್ಣಗೊಳ್ಳುತ್ತಿಲ್ಲ. ಎರಡು ಜಲ ನಿಗಮಗಳ ಕಾರ್ಯವೈಖರಿಯೂ ಸಮಾಧಾನಕರವಾಗಿಲ್ಲ. ಈ ನಡುವೆ ಸಿಎಂ ತಾಂತ್ರಿಕ ಸಲಹೆಗಾರರು ೨೬ ವರ್ಷಗಳ ಹಿಂದಿನ ಮಸೂದೆಗೆ ದಿಢೀರ್ ಮರು ಜೀವ ನೀಡಿದ್ದಾರೆ. ಏನದು ಮಸೂದೆ?

ಕೃಷ್ಣಾ ಜಲಾನಯನ ನೀರಾವರಿ ಯೋಜನೆಗಳ ನಿರ್ಮಾಣ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ‘ಕರ್ನಾಟಕ ಕೃಷ್ಣಾ ಜಲಾನಯನ ಅಭಿವೃದ್ಧಿ ಪ್ರಾಧಿಕಾರ’ ರಚನೆ ವಿಚಾರ ದಿಢೀರ್‌ ಮುನ್ನೆಲೆಗೆ ಬಂದಿದೆ. ಈ ಪ್ರಾಧಿಕಾರದಲ್ಲಿ ಕೃಷ್ಣ ಭಾಗ್ಯ ಜಲ ನಿಗಮ ಮತ್ತು ಕರ್ನಾಟಕ ನೀರಾವರಿ ನಿಗಮವನ್ನು ವಿಲೀನಗೊಳಿಸುವ ಪ್ರಸ್ತಾಪವೂ ಸರ್ಕಾರದ ಮುಂದಿದೆ. ನೀರಾವರಿ ಯೋಜನೆಗಳ ಅನುಷ್ಠಾನವನ್ನು ವಿಕೇಂದ್ರೀಕರಿಸುವ ಉದ್ದೇಶದಿಂದ ೨೪ ವರ್ಷಗಳ ಹಿಂದೆ ಸ್ಥಾಪನೆಯಾಗಿರುವ ಜಲ ನಿಗಮಗಳಿಗೆ ಅಸ್ತಿತ್ವದ ಪ್ರಶ್ನೆ ಎದುರಾಗಿದೆ.

ಪ್ರಾಧಿಕಾರ ರಚಿಸುವ ಸಂಬಂಧ ೨೬ ವರ್ಷಗಳ ಹಿಂದೆಯೇ ಅಂದರೆ ೧೯೯೨ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಸ್ ಬಂಗಾರಪ್ಪ ಅವರ ಅವಧಿಯಲ್ಲಿ ಕರ್ನಾಟಕ ಕೃಷ್ಣಾ ಜಲಾನಯನ ಅಭಿವೃದ್ಧಿ ಪ್ರಾಧಿಕಾರ ಮಸೂದೆ ಮಂಡನೆಯಾಗಿತ್ತು. ಎಚ್‌ ಡಿ ದೇವೇಗೌಡ ಮತ್ತು ವೀರಪ್ಪ ಮೊಯಿಲಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅಂದಿನ ರಾಷ್ಟ್ರಪತಿಗಳು ಈ ಮಸೂದೆಗೆ ಅಂಕಿತ ಹಾಕಿದ್ದರು. ೨೬ ವರ್ಷಗಳ ಹಿಂದಿನ ಮಸೂದೆಗೀಗ ಹಾಲಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರ ತಾಂತ್ರಿಕ ಸಲಹೆಗಾರ ಎಂ ಕೆ ವೆಂಕಟರಾಮ್‌ ಅವರು ಮರು ಜೀವ ನೀಡಿದ್ದಾರೆ.

ಮಸೂದೆ ಅನ್ವಯ ಕೃಷ್ಣಾ ಜಲಾನಯನ ಅಭಿವೃದ್ಧಿ ಪ್ರಾಧಿಕಾರ ರಚಿಸಲು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಮಿತ ವ್ಯಯ ಸಾಧಿಸುವ ನಿಟ್ಟಿನಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮ ಮತ್ತು ಕರ್ನಾಟಕ ನೀರಾವರಿ ನಿಗಮಗಳನ್ನು ಪ್ರಾಧಿಕಾರದಲ್ಲಿ ವಿಲೀನಗೊಳಿಸುವ ಕುರಿತು ಸಲಹೆಯಲ್ಲಿ ಪ್ರಧಾನವಾಗಿ ಪ್ರಸ್ತಾಪಿಸಿದ್ದಾರೆ. ಈ ಕುರಿತು ೨೦೧೮ರ ಸೆ.೧೦ರಂದು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿ ‘ದಿ ಸ್ಟೇಟ್‌’ಗೆ ಲಭ್ಯವಾಗಿದೆ. ಈ ಪತ್ರ ಆಧರಿಸಿ ಏನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳು ಸಮಾಲೋಚನೆ ಆರಂಭಿಸಿದ್ದಾರೆ.

ಮುಖ್ಯಮಂತ್ರಿಗಳ ತಾಂತ್ರಿಕ ಸಲಹೆಗಾರ ವೆಂಕಟರಾಮ್ ಅವರು ಬರೆದಿರುವ ಪತ್ರದ ಪ್ರತಿ

“ಎರಡೂ ನಿಗಮಗಳ ಬದಲಿಗೆ ಒಂದೇ ಪ್ರಾಧಿಕಾರವಿದ್ದಲ್ಲಿ ಸರ್ಕಾರವು ಸಾಕಷ್ಟು ಮಿತವ್ಯಯ ಸಾಧಿಸಬಹುದು. ಪ್ರಾಧಿಕಾರವು ಒಂದು ಶಾಸನಬದ್ಧ ಅಧಿಕಾರವುಳ್ಳ ಅಂಗ ಸಂಸ್ಥೆಯಾಗಿದೆಯಲ್ಲದೆ, ಅಪಾರ ಅಧಿಕಾರ ಹೊಂದಿದೆ. ಕಾಯ್ದೆಯ ಸೆಕ್ಷನ್‌ ೪(೩)ರ ಪ್ರಕಾರ ತನ್ನ ವ್ಯಾಪ್ತಿಗೆ ಮೀರಿದ ಪ್ರದೇಶಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಅಧಿಕಾರ ಚಲಾಯಿಸುವ ಅವಕಾಶವಿದೆ. ಇದೇ ಕಾಯ್ದೆಯ ಸೆಕ್ಷನ್‌ ೩೧ರ ಅಡಿಯಲ್ಲಿ ವಿಶೇಷ ಕೋರ್ಟ್‌ ಗಳನ್ನು ಸ್ಥಾಪಿಸಲು ಅವಕಾಶವಿದೆ. ಈ ಅನುಕೂಲಗಳನ್ನು ಗಣನೆಗೆ ತೆಗೆದುಕೊಂಡು ಕೃಷ್ಣಾ ಭಾಗ್ಯ ಜಲ ನಿಗಮ ಮತ್ತು ಕರ್ನಾಟಕ ನೀರಾವರಿ ನಿಗಮಗಳ ಬದಲಿಗೆ ಕರ್ನಾಟಕ ಕೃಷ್ಣಾ ಜಲಾನಯನ ಪ್ರಾಧಿಕಾರ ರಚಿಸುವ ಕುರಿತು ಸರ್ಕಾರ ಚಿಂತನೆ ನಡೆಸಬಹುದು,” ಎಂದು ತಾಂತ್ರಿಕ ಸಲಹೆಗಾರ ವೆಂಕಟರಾಮು ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಕೃಷ್ಣಾ ಜಲಾನಯನದ ನೀರಾವರಿ ಯೋಜನೆಗಳ ತ್ವರಿತ ನಿರ್ಮಾಣ ಮತ್ತು ನಿರ್ವಹಣೆಗೆ ೧೯೯೨ರಲ್ಲಿ ಪ್ರಾಧಿಕಾರ ರಚಿಸಲು ಕಾಯ್ದೆ ರೂಪಿಸಲಾಗಿತ್ತು. ಈ ಕುರಿತು ೧೯೯೬ರ ಜುಲೈ ೧೯ರಂದು ಅಧಿಸೂಚನೆ ಪ್ರಕಟಿಸಿತ್ತಲ್ಲದೆ, ಅಧಿನಿಯಮಗಳನ್ನೂ ಹೊರಡಿಸಿತ್ತು. ಕಾಯ್ದೆ ಕೂಡ ರದ್ದುಗೊಂಡಿಲ್ಲದ ಕಾರಣ ಈಗಲೂ ಚಾಲ್ತಿಯಲ್ಲಿದೆ. ಆದರೆ ೧೯೯೬ರ ನಂತರ ಬಂದ ಸರ್ಕಾರಗಳು ಕಾಯ್ದೆಯನ್ನು ಜಾರಿಗೊಳಿಸಲಿಲ್ಲ.

ವೀರಪ್ಪ ಮೊಯಿಲಿ, ಎಚ್ ಡಿ ದೇವೇಗೌಡ, ಜೆ ಎಚ್ ಪಟೇಲ್, ಎಸ್ ಎಂ ಕೃಷ್ಣ, ಧರ್ಮಸಿಂಗ್, ಎಚ್ ಡಿ ಕುಮಾರಸ್ವಾಮಿ, ಬಿ ಎಸ್ ಯಡಿಯೂರಪ್ಪ, ಡಿ ವಿ ಸದಾನಂದಗೌಡ, ಜಗದೀಶ್ ಶೆಟ್ಟರ್, ಸಿದ್ದರಾಮಯ್ಯ ಅವರು ಈ ಅವಧಿಯಲ್ಲಿ ಮುಖ್ಯಮಂತ್ರಿ ಮತ್ತು ಜಲ ನಿಗಮಗಳಿಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಆದರೆ ಇವರ್ಯಾರು ಕಾಯ್ದೆಯನ್ನು ಅನುಷ್ಠಾನಗೊಳಿಸಲು ಒಲವು ತೋರಿರಲಿಲ್ಲ. ಪ್ರಾಧಿಕಾರ ಬದಲಿಗೆ ಕೃಷ್ಣಾ ಜಲಭಾಗ್ಯ ನಿಗಮ ಮತ್ತು ಕರ್ನಾಟಕ ನೀರಾವರಿ ನಿಗಮಗಳು ಸ್ಥಾಪನೆಯಾಗಿದ್ದವು. ಈಗ ಪುನಃ ಎಚ್‌ ಡಿ ಕುಮಾರಸ್ವಾಮಿ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾದ ನಂತರ ಪ್ರಾಧಿಕಾರ ರಚನೆ ಚಾಲ್ತಿಗೆ ಬಂದಿದೆ.

ಈ ಎರಡೂ ನಿಗಮಗಳು ಕೃಷ್ಣಾ ಮೇಲ್ದಂಡೆ ಯೋಜನೆ ವ್ಯಾಪ್ತಿಯ ಎಲ್ಲಾ ನೀರಾವರಿ ಯೋಜನೆಗಳ ರಚನಾಕ್ರಮ, ತನಿಖೆ, ಅಂದಾಜು ವೆಚ್ಚ ತಯಾರಿಸುವುದು, ಕಾಯಾಚರಣೆ ಮತ್ತು ನಿರ್ವಹಿಸುತ್ತಿವೆ. ನೀರಾವರಿ ನಿಗಮವೊಂದರಲ್ಲೇ ೧೦೦ ಯೋಜನೆಗಳಿವೆ.

ಕೃಷ್ಣಾ ಯೋಜನೆಗಳ ನಿರ್ಮಾಣ ಮತ್ತು ನಿರ್ವಹಣೆಗೆ ಸ್ಥಾಪಿಸಲಾಗಿರುವ ಎರಡು ಕಂಪನಿಗಳ ನೋಂದಾಯಿತ ಕಚೇರಿಗಳು ಬೆಂಗಳೂರಿನಲ್ಲಿವೆ. ಆಲಮಟ್ಟಿ ಮತ್ತು ಧಾರವಾಡ ಜಿಲ್ಲೆಯಲ್ಲಿ ಕಾರ್ಪೋರೇಟ್‌ ಕಚೇರಿಗಳಿವೆ. ಈ ಎರಡೂ ನಿಗಮಗಳಿಗೆ ಪ್ರತ್ಯೇಕವಾಗಿ ನಿರ್ದೇಶಕರ ಮಂಡಳಿಗಳಿವೆ. ಹಾಗೆಯೇ ಪ್ರತ್ಯೇಕವಾಗಿ ತಾಂತ್ರಿಕ ಉಪ ಸಮಿತಿ, ಅಂದಾಜು ಸಮಿತಿ ಮತ್ತು ಟೆಂಡರ್‌ ಪರಿಶೀಲನಾ ಸಮಿತಿಗಳಿವೆ. ಇದರಿಂದ ಆರ್ಥಿಕ ಹೊರೆ ಹೆಚ್ಚಾಗಿದೆ ಎಂಬುದು ತಾಂತ್ರಿಕ ಸಲಹೆಗಾರರ ವಾದ.

“ಈ ಕಾಯ್ದೆ ೧೯೯೨ರಲ್ಲಿ ರೂಪುಗೊಂಡಿರುವುದರಿಂದ ೧೮೯೪ರ ಭೂ ಸ್ವಾಧೀನ ಕಾಯ್ದೆ ಅಂಶಗಳು ಉಲ್ಲೇಖಗೊಂಡಿವೆ. ೨೦೧೩ರ ನೂತನ ಭೂ ಸ್ವಾಧೀನ ಕಾಯ್ದೆ ಅಂಶಗಳನ್ನು ಅಳವಡಿಸಿ ಪ್ರಾಧಿಕಾರವನ್ನು ಈಗಿನ ಸಂದರ್ಭಕ್ಕೆ ತಕ್ಕಂತೆ ಪುನರ್‌ ರಚಿಸಿ ಕಾಯ್ದೆ ಸೂಕ್ತ ಮಾರ್ಪಾಟು ಮಾಡಿದಲ್ಲಿ ೨೦೧೩ರ ಕಾಯ್ದೆಯ ಸೆಕ್ಷನ್‌ ೧೦೪ರಲ್ಲಿ ಇರುವಂತೆ ಲೀಸ್‌ ಆಧಾರದ ಮೇಲೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬಹುದು. ಅಲ್ಲದೆ, ಉದ್ಭವಿಸಬಹುದಾದ ಸಮಸ್ಯೆಗಳನ್ನು ಶೀಘ್ರವಾಗಿ ಪ್ರಾಧಿಕಾರದ ಮಟ್ಟದಲ್ಲಿಯೇ ಬಗೆಹರಿಸಬಹುದಾಗಿದೆ,” ಎಂದು ತಾಂತ್ರಿಕ ಸಲಹೆಗಾರ ವೆಂಕಟರಾಮ್‌ ಅವರು ಪತ್ರದಲ್ಲಿ ಸಲಹೆ ನೀಡಿದ್ದಾರೆ.

ಇದನ್ನೂ ಓದಿ : ಕೇವಲ ೧೦೧ ರುಪಾಯಿ ವೇತನ ಸಾಕೆಂದ ಮುಖ್ಯಮಂತ್ರಿ ತಾಂತ್ರಿಕ ಸಲಹೆಗಾರ!

ಬೆಂಗಳೂರಿನಲ್ಲಿರುವ ಈ ಎರಡೂ ನಿಗಮಗಳ ಆಡಳಿತ ಕಚೇರಿಗಳನ್ನು ಉತ್ತರ ಕರ್ನಾಟಕ ಭಾಗಕ್ಕೆ ಸ್ಥಳಾಂತರಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದಾರೆ. ಈ ಹೊತ್ತಿನಲ್ಲೇ, ಎರಡೂ ನಿಗಮಗಳನ್ನು ಪ್ರಾಧಿಕಾರದಲ್ಲಿ ವಿಲೀನಗೊಳಿಸುವ ಸಲಹೆಗೆ ನಿಗಮಗಳ ಅಧಿಕಾರಿ ವರ್ಗ ಅಸಮಾಧಾನ ವ್ಯಕ್ತಪಡಿಸಿದೆ.

“ಈಗಾಗಲೇ ಪ್ರಾಧಿಕಾರ ಹಂತವನ್ನು ದಾಟಿ ಕಂಪನಿ ನಿಯಮಗಳ ಅಡಿಯಲ್ಲಿ ನೀರಾವರಿ ನಿಗಮಗಳನ್ನು ಸ್ಥಾಪಿಸಲಾಗಿದೆ. ನೀರಾವರಿ ಯೋಜನೆಗಳ ಅನುಷ್ಠಾನವನ್ನು ವಿಕೇಂದ್ರೀಕರಣಗೊಳಿಸಿರುವಾಗ, ಪ್ರಾಧಿಕಾರ ರಚಿಸಿ ಅದರಲ್ಲಿ ನಿಗಮಗಳನ್ನು ವಿಲೀನಗೊಳಿಸುವ ಪ್ರಸ್ತಾಪವೇ ಈಗ ಅಪ್ರಸ್ತುತ. ವಿಲೀನಗೊಳಿಸಲು ಸರ್ಕಾರ ತೀರ್ಮಾನ ಕೈಗೊಂಡಿದ್ದೇ ಆದಲ್ಲಿ ಯೋಜನೆಗಳ ಅನುಷ್ಠಾನ ಪುನಃ ಕೇಂದ್ರೀಕೃತವಾಗುತ್ತವೆ,” ಎಂದು ನೀರಾವರಿ ನಿಗಮದ ಅಧಿಕಾರಿಯೊಬ್ಬರು ‘ದಿ ಸ್ಟೇಟ್‌’ಗೆ ತಿಳಿಸಿದ್ದಾರೆ.

ನೀರಾವರಿ ನಿಗಮಗಳ ಅಧಿಕಾರ ವ್ಯಾಪ್ತಿ ಮತ್ತು ಪ್ರಾಧಿಕಾರದ ಅಧಿಕಾರ ವ್ಯಾಪ್ತಿ ಎರಡೂ ಒಂದೇ ತೆರನಾಗಿವೆ. ಐಪಿಸಿ ಸಂಹಿತೆ ಅಡಿಯಲ್ಲಿ ವಿಶೇಷ ನ್ಯಾಯಾಲಯಗಳ ಸ್ಥಾಪನೆ ಹೊರತುಪಡಿಸಿದರೆ ಪ್ರಾಧಿಕಾರದಲ್ಲಿ ವಿಶೇಷತೆಗಳೇನೂ ಇಲ್ಲ ಎಂಬ ವಾದವೂ ನಿಗಮಗಳ ಅಧಿಕಾರಿ ವರ್ಗದಿಂದ ಕೇಳಿ ಬಂದಿದೆ.

ಈ ಎರಡೂ ನಿಗಮಗಳಿಗೆ ಮುಖ್ಯಮಂತ್ರಿ ನಿಗಮದ ಅಧ್ಯಕ್ಷರಾಗಿದ್ದರೆ, ಜಲ ಸಂಪನ್ಮೂಲ ಸಚಿವರು ಉಪಾಧ್ಯಕ್ಷರಾಗಿರುತ್ತಾರೆ. ಆದರೆ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಲ್ಲಿ ಮುಖ್ಯಮಂತ್ರಿ, ಜಲ ಸಂಪನ್ಮೂಲ ಸಚಿವರ ಜತೆಯಲ್ಲೇ ಸಣ್ಣ ನೀರಾವರಿ, ಕೃಷಿ, ಕಂದಾಯ ಮತ್ತು ಇಂಧನ ಸಚಿವರೂ ಸದಸ್ಯರಾಗಿ ನೇಮಕಗೊಳ್ಳುತ್ತಾರೆ. ಜತೆಗೆ ಈ ಇಲಾಖೆಗಳ ಕಾರ್ಯದರ್ಶಿಗಳೂ ಮತ್ತು ಇಲಾಖೆಗಳ ಅಧೀನದಲ್ಲಿರುವ ಮಂಡಳಿಗಳ ವ್ಯವಸ್ಥಾಪಕ ನಿರ್ದೇಶಕರು ಸದಸ್ಯರಾಗಿರುತ್ತಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More