ಬಡ್ಡಿದರ ಏರಿಕೆ ಭೀತಿ; ಷೇರುಪೇಟೆ ತೀವ್ರ ಕುಸಿತ, ರುಪಾಯಿ ಮೌಲ್ಯ ಮತ್ತಷ್ಟು ಇಳಿಕೆ

ಕಚ್ಚಾ ತೈಲ ದರ ಏರಿಕೆ, ರುಪಾಯಿ ಮೌಲ್ಯ ಕುಸಿತದ ಜತೆಗೆ ಆರ್ಬಿಐ ಬಡ್ಡಿದರ ಏರಿಕೆ ಮಾಡುವ ಮುನ್ಸೂಚನೆ ಹಿನ್ನೆಲೆಯಲ್ಲಿ ಷೇರುಪೇಟೆಯಲ್ಲಿ ಗುರುವಾರ ರಕ್ತದೋಕುಳಿ ನಡೆದಿದೆ. ಸೆನ್ಸೆಕ್ಸ್ ದಿನದ ವಹಿವಾಟಿನಲ್ಲಿ 900 ಅಂಶ, ನಿಫ್ಟಿ 300 ಅಂಶ ಕುಸಿದಿವೆ. ರುಪಾಯಿ ಮತ್ತೊಂದು ಸಾರ್ವಕಾಲಿಕ ಕನಿಷ್ಠ ಮಟ್ಟ ಮುಟ್ಟಿದೆ

ರುಪಾಯಿ ಮೌಲ್ಯ ಕುಸಿತ, ಕಚ್ಚಾ ತೈಲ ದರ ಏರಿಕೆಯಿಂದ ಸತತ ಕುಸಿಯುತ್ತಿರುವ ಷೇರುಪೇಟೆಯಲ್ಲಿ ಗುರುವಾರ ರಕ್ತದೋಕುಳಿ ನಡೆದಿದೆ. ಸೆನ್ಸೆಕ್ಸ್ 900 ಅಂಶ, ನಿಫ್ಟಿ 300 ಅಂಶ ಕುಸಿದಿವೆ. ವಿಸ್ತೃತ ಮಾರುಕಟ್ಟೆಯ ಬಹುತೇಕ ಸೂಚ್ಯಂಕಗಳು ಕುಸಿದಿವೆ. ಸೂಚ್ಯಂಕ ದೈತ್ಯಗಳಾದ ರಿಲಯನ್ಸ್ ಇಂಡಸ್ಟ್ರೀಸ್, ಟಿಸಿಎಸ್, ಎಚ್ಡಿಎಫ್ಸಿ, ಎಚ್ಡಿಎಫ್ಸಿ ಬ್ಯಾಂಕ್, ಹಿರೋ ಮೋಟೊಕಾರ್ಪ್, ಅದಾನಿ ಪೋರ್ಟ್ಸ್ ಶೇ.5-7ರಷ್ಟು ಕುಸಿದಿವೆ. ರಿಲಯನ್ಸ್ ಇಂಡಸ್ಟ್ರೀಸ್ ಶೇ.7ಕ್ಕಿಂತಲೂ ಕುಸಿದಿರುವುದು ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲು. ಸೆನ್ಸೆಕ್ಸ್ ಇತಿಹಾಸದಲ್ಲಿ ಇದು 13ನೇ ಗರಿಷ್ಠ ಮಟ್ಟದ ಕುಸಿತವಾಗಿದೆ. ಈವರ್ಷ ಫೆಬ್ರವರಿ 2ರಂದು 839 ಅಂಶ ಕುಸಿದಿತ್ತು. ಅದು ಇತಿಹಾಸದ 9ನೇ ಗರಿಷ್ಠ ಮಟ್ಟದ ಕುಸಿತವಾಗಿತ್ತು.

ಅತಿ ಹೆಚ್ಚಿನ ಹಾನಿ ಅನುಭವಿಸಿದ್ದು ತೈಲ ಮಾರುಕಟ್ಟೆ ಕಂಪನಿಗಳಲ್ಲಿ ಹೂಡಿಕೆ ಮಾಡಿರುವವರು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆ ಪರಿಣಾಮವಾಗಿ ಹಿಂದೂಸ್ತಾನ್ ಪೆಟ್ರೋಲಿಯಂ ಕಂಪನಿ, ಬ್ರಿಟಿಷ್ ಪೆಟ್ರೋಲಿಯಂ ಕಂಪನಿ, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಶೇ.12ರಿಂದ 14ರಷ್ಟು ಕುಸಿದವು. ಟೆಕ್ ಮಹಿಂದ್ರ, ಟಿಸಿಎಸ್, ಡಾ.ರೆಡ್ಡಿಲ್ಯಾಬ್, ಐಷರ್ ಮೊಟಾರ್ಸ್ ಶೇ.5-6ರಷ್ಟು ಕುಸಿದಿವೆ. ಚಂದಾಕೊಚ್ಚಾರ್ ಸಿಇಒ ಹುದ್ದೆ ತೊರೆದ ಸುದ್ದಿ ಹೊರಬೀಳತ್ತಿದ್ದಂತೆ ಕುಸಿಯುತ್ತಿರುವ ಪೇಟೆಯಲ್ಲೂ ಐಸಿಐಸಿಐ ಬ್ಯಾಂಕ್ ಷೇರು ಶೇ.5 ರಷ್ಟು ಜಿಗಿದಿದೆ. ಆ್ಯಕ್ಸಿಸ್ ಬ್ಯಾಂಕ್ ಅಲ್ಟ್ರಾಟೆಕ್ ಸಿಮೆಂಟ್, ಭಾರತಿ ಇನ್ಫ್ರಾಟೆಲ್, ಯೆಸ್ ಬ್ಯಾಂಕ್, ಎಲ್ ಅಂಡ್ ಟಿ ಶೇ.1ರಿಂದ 4ರಷ್ಟು ಏರಿವೆ.

ವಿಸ್ತೃತ ಮಾರುಕಟ್ಟೆಯ ಎಲ್ಲಾ ಸೂಚ್ಯಂಕಗಳು ಇಳಿಜಾರಿಗೆ ಸರಿದು ವಹಿವಾಟು ನಡೆಸಿವೆ. ನಿಫ್ಟಿ ಸಿಪಿಎಸ್ಇ ಶೇ.5ರಷ್ಟು ಕುಸಿದಿದೆ. ನಿಫ್ಟಿ ಪಿಎಸ್ಇ ಶೇ.4, ನಿಫ್ಟಿ ಆಲ್ಪಾ, ನಿಫ್ಟಿ ಫಾರ್ಮಾ, ನಿಫ್ಟಿ ಐಟಿ ಶೇ.3ರಷ್ಟು ಕುಸಿತ ದಾಖಲಿಸಿವೆ. ನಿಫ್ಟಿ ಎಫ್ಎಂಸಿಜಿ, ನಿಪ್ಟಿ ಕಮಾಡಿಟೀಸ್, ನಿಪ್ಟಿ ಕ್ವಾಲಿಟಿ 30, ನಿಫ್ಟಿ ವ್ಯಾಲ್ಯೂ 20, ನಿಫ್ಟಿ ಮಿಡ್ ಕ್ಯಾಪ್, ನಿಫ್ಟಿ 100, ನಿಫ್ಟಿ ಸ್ಮಾಲ್ ಕ್ಯಾಪ್ ಸೂಚ್ಯಂಕಗಳು ಶೇ.2-3ರಷ್ಟು ಕುಸಿದಿವೆ.

ಅತ್ತ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಬುಧವಾರ ನಾಲ್ಕುವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿತ್ತು. ಗುರುವಾರ ಏರಿಕೆ ಆಗದಿದ್ದರೂ, ಬ್ರೆಂಟ್ ಕ್ರೂಡ್ ಪ್ರತಿ ಬ್ಯಾರೆಲ್ ಗೆ 90 ಡಾಲರ್ ಮತ್ತು ಡಬ್ಲ್ಯೂಟಿಐ ಕ್ರೂಡ್ ಪ್ರತಿ ಬ್ಯಾರೆಲ್ ಗೆ 80 ಡಾಲರ್ ಗೆ ಏರುವ ಸಾಧ್ಯತೆ ನಿಚ್ಚಳವಾಗಿರುವ ಬಗ್ಗೆ ಮಾರುಕಟ್ಟೆಯಲ್ಲಿ ಚರ್ಚೆ ಆರಂಭವಾಗುತ್ತಿದ್ದಂತೆ ಇತ್ತ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರುಪಾಯಿ ಮತ್ತಷ್ಟು ಕುಸಿಯಿತು.

ದಿನದ ವಹಿವಾಟಿನಲ್ಲಿ ಡಾಲರ್ ವಿರುದ್ಧ 73.82ಕ್ಕೆ ಕುಸಿದ ರುಪಾಯಿ ವಹಿವಾಟಿನ ಅಂತ್ಯಕ್ಕೆ 73.70ಕ್ಕೆ ಸ್ಥಿರಗೊಂಡಿತ್ತು. ರುಪಾಯಿ ಕುಸಿತ ಮುಂದುವರೆದಂತೆ ಪೇಟೆಯಲ್ಲಿ ತೀವ್ರ ಮಾರಾಟ ಒತ್ತಡ ಕಂಡುಬಂತು. ನೋಡುನೋಡುತ್ತಿದ್ದಂತೆಯೇ ಸೆನ್ಸೆಕ್ಸ್ 900 ಅಂಶ ಕುಸಿಯಿತು. ಕೊಂಚ ಚೇತರಿಸಿಕೊಂಡಿತಾದರೂ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿತ್ತು. ಒಂದೇ ದಿನದಲ್ಲಿ ಹೂಡಿಕೆದಾರರ 2 ಲಕ್ಷ ಕೋಟಿ ರುಪಾಯಿ ಮೌಲ್ಯದ ಸಂಪತ್ತು ನಾಶವಾಗಿತ್ತು.

ರುಪಾಯಿ ಕುಸಿತ, ಕಚ್ಚಾ ತೈಲ ದರ ಏರಿಕೆ ಜತೆಜತೆಗೆ ಆರ್ಬಿಐ ಬಡ್ಡಿದರ ಏರಿಕೆ ಮಾಡುತ್ತದೆಂಬ ನಿರೀಕ್ಷೆಯು ಪೇಟೆಯಲ್ಲಿ ಆತಂಕ ಮೂಡಿಸಿದೆ. ಗುರುವಾರ ಆರ್ಬಿಐ ಹಣಕಾಸು ನೀತಿ ಪರಾಮರ್ಶೆ ಸಭೆ ಆರಂಭವಾಗಿದ್ದು ಶುಕ್ರವಾರ ಮಧ್ಯಾಹ್ನ ಬಡ್ಡಿದರವನ್ನು ಪ್ರಕಟಿಸಲಿದೆ. ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಸಾರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟಿದ್ದು, ಅದಕ್ಕೆ ಪೂರಕವಾದ ಸರಕು ಮತ್ತು ಸೇವೆಗಳ ದರವೂ ಜಿಗಿಯುತ್ತಿದೆ. ಈ ಹಿನ್ನೆಲೆಯಲ್ಲಿ ಹಣದುಬ್ಬರ ಹೆಚ್ಚಳವಾಗುವುದು ನಿಚ್ಛಳವಾಗಿರುವ ಕಾರಣ ಬಡ್ಡಿದರ ಏರಿಕೆ ಅನಿವಾರ್ಯವಾಗಿದೆ. ಈ ಹಿಂದಿನ ಎರಡು ದ್ವೈಮಾಸಿಕ ಹಣಕಾಸು ನೀತಿ ಸಭೆಗಳಲ್ಲಿ ತಲಾ 25 ಮೂಲ ಅಂಶದಷ್ಟು ಬಡ್ಡಿದರ ಏರಿಸಲಾಗಿದೆ. ಅಂದರೆ, ಕಳೆದ ನಾಲ್ಕು ತಿಂಗಳಲ್ಲಿ ಶೇ.0..50ರಷ್ಟು ಬಡ್ಡಿದರ ಏರಿದೆ. ಈಗ ಆರ್ಬಿಐ ಶೇ.0.25 ಅಥವಾ ಶೇ.0.50ರಷ್ಟು ಬಡ್ಡಿದರ ಏರಿಸುವುದು ಖಚಿತವಾಗಿದೆ. ಶೇ.0.50ರಷ್ಟು ಬಡ್ಡಿದರ ಏರಿಸಿದರೆ ಮಾರುಕಟ್ಟೆ ಮತ್ತಷ್ಟು ಕುಸಿತದ ಹಾದಿಯಲ್ಲಿ ಸಾಗಲಿದೆ.

ಇದುವರೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕ್ರೂಡ್ 80 ಡಾಲರ್ ಆಜುಬಾಜಿನಲ್ಲಿ ಸ್ಥಿರವಾಗುತ್ತದೆಂಬ ಲೆಕ್ಕಾಚಾರ ಇತ್ತು. ಈಗ 90-100 ಡಾಲರ್ ಮಟ್ಟಕ್ಕೆ ಏರುವ ಬಗ್ಗೆ ಲೆಕ್ಕಾಚಾರಗಳು ನಡೆದಿವೆ. ಒಂದು ವೇಳೆ ಬ್ರೆಂಟ್ ಕ್ರೂಡ್ 90 ಡಾಲರ್ ಮಟ್ಟ ದಾಟಿದರೆ ಭಾರತದ ಪಾಲಿಗೆ ದೊಡ್ಡ ಸಂಕಷ್ಟ ಎದುರಾಗುತ್ತದೆ. ಒಂದು ವೇಳೆ 100 ಮಟ್ಟಕ್ಕೇರಿದರೆ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಡಿಸೇಲ್ 100 ರುಪಾಯಿ ದಾಟಲೂ ಬಹುದು. ಅದು ಆರ್ಥಿಕ ಬಿಕ್ಕಟ್ಟಿಗೆ ಮುನ್ನಡಿ ಬರೆಯಬಹುದು.

ಇದನ್ನೂ ಓದಿ : ಕೇಂದ್ರದ ಮಧ್ಯಪ್ರವೇಶದಿಂದಲೂ ಸ್ಥಿರಗೊಳ್ಳದ ರುಪಾಯಿ; ಪೇಟೆಯಲ್ಲಿ ರಕ್ತದೋಕುಳಿ

ರುಪಾಯಿ ಮೌಲ್ಯ ಕುಸಿತ ಮತ್ತು ಷೇರುಪೇಟೆ ಕುಸಿತದ ಹಿನ್ನೆಲೆಯಲ್ಲಿ ಹೂಡಿಕೆದಾರರು ಚಿನಿವಾರ ಪೇಟೆಯತ್ತ ಮುಖ ಮಾಡಿದ್ದಾರೆ. ಚಿನ್ನ ದಿನದ ವಹಿವಾಟಿನಲ್ಲಿ 500 ರುಪಾಯಿ ಜಿಗಿದು 31000ಕ್ಕೆ ಸಮೀಪಿಸಿದೆ. ಬೆಳ್ಳಿದರವೂ ಏರುತ್ತಿದ್ದು ಪ್ರತಿ ಕೆಜಿಗೆ 40000 ಗಡಿದಾಟುವ ಸಮೀಪಕ್ಕೆ ಬಂದಿದೆ.

ಶುಕ್ರವಾರ ಆರ್ಬಿಐ ಪ್ರಕಟಿಸಲಿರುವ ಬಡ್ಡಿದರ ನಿರ್ಣಾಯಕವಾಗಿದ್ದು ಪೇಟೆ ಸಾಗುವ ಹಾದಿಗೆ ದಿಕ್ಸೂಚಿಯಾಗಲಿದೆ. ಸೆನ್ಸೆಕ್ಸ್ , ನಿಫ್ಟಿ ಮತ್ತಿತರ ಸೂಚ್ಯಂಕಗಳು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೇರಿ ಈಗ ಇಳಿಜಾರಿನಲ್ಲಿವೆ. ಗರಿಷ್ಠ ಮಟ್ಟದಿಂದ ಶೇ.10ರಷ್ಟು ಕುಸಿತ ದಾಖಲಾಗಿದೆ. ಇನ್ನೂ ಶೇ.10ರಷ್ಟು ಕುಸಿತ ನಿರೀಕ್ಷಿಸಲಾಗಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More