ಇಂದಿನ ಡೈಜೆಸ್ಟ್‌ | ನೀವು ಗಮನಿಸಲೇಬೇಕಾದ ಪ್ರಮುಖ ಸುದ್ದಿಗಳು

ನೀವು ಗಮನಿಸಲೇಬೇಕಾದ ಇಂದಿನ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ನೋಟ  

ಮಹಾಮೈತ್ರಿಗೆ ಹಿನ್ನಡೆಯಾಗದು; ಎಚ್‌ ಡಿ ದೇವೇಗೌಡ

ಮಧ್ಯಪ್ರದೇಶ ಮತ್ತು ರಾಜಸ್ಥಾನ ವಿಧಾನಸಭಾ ಚುನಾವಣೆಗಳಲ್ಲಿ ಬಿಎಸ್‌ಪಿಯು ಕಾಂಗ್ರೆಸ್‌ ಜೊತೆ ಹೊಂದಾಣಿಕೆ ಮಾಡಿಳ್ಳದೇ ಇರಲು ನಿರ್ಧರಿಸಿರುವುದನ್ನು ಎಂಬ ಮಾತ್ರಕ್ಕೆ ಮಹಾಮೈತ್ರಿಗೆ ಹಿನ್ನಡೆ ಎಂದು ಭಾವಿಸಬಾರದು. ಎಲ್ಲಾ ರಾಜ್ಯಗಳಲ್ಲೂ ಪ್ರಾದೇಶಿಕ ನಾಯಕರಿದ್ದು, ಎಲ್ಲರಿಗೂ ಅವರದ್ದೇ ಆದ ಆದ್ಯತೆಗಳಿರುತ್ತವೆ ಎಂದು ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡ ಹೇಳಿದ್ದಾರೆ. ಸದ್ಯ ರಾಷ್ಟ್ರ ರಾಜಕೀಯಕ್ಕಿಂತ ನನಗೆ ರಾಜ್ಯ ರಾಜಕೀಯ ಮುಖ್ಯ ಎಂದು ಜೆಡಿಎಸ್‌ ವರಿಷ್ಠ ದೇವೇಗೌಡ ತಿಳಿಸಿದ್ದಾರೆ.

ನಾಲ್ಕು ಕಡೆ ಕೌಶಲಾಭಿವೃದ್ಧಿ ತರಬೇತಿ ಕೇಂದ್ರ ತೆರೆಯಲು ಸಂಪುಟ ನಿರ್ಧಾರ

ಹಾಸನದ ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಮೂಲಸೌಕರ್ಯ ಕಲ್ಪಿಸಲು ೫೫ ಕೋಟಿ ರುಪಾಯಿ ಹಾಗೂ ಹಾಸನದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ೫೦ ಕೋಟಿ ರುಪಾಯಿ ಹಂಚಿಕೆ ಮಾಡುವುದು ಸೇರಿದಂತೆ ಹಲವು ಮಹತ್ವದ ನಿರ್ಧಾರಗಳನ್ನು ಗುರುವಾರ ನಡೆದ ರಾಜ್ಯ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಎಸ್‌ಸಿ, ಎಸ್‌ಟಿ ನೌಕರರ ಮುಂಬಡ್ತಿ ವಿಧೇಯಕ ಜಾರಿ ವಿಚಾರವನ್ನು ಅಕ್ಟೋಬರ್ ೧೨ರ ವರೆಗೆ ತಡೆ ಹಿಡಿಯಲು ನಿರ್ಣಯಿಸಲಾಗಿದೆ. ವಿವಿಧ ಸಂಘಟನೆಗಳ ಮೇಲೆ ಹಾಕಲಾಗಿರುವ ೧೪ ಪ್ರಕರಣಗಳನ್ನು ಹಿಂಪಡೆಯಲು ಸಂಪುಟ ಒಪ್ಪಿಗೆ ನೀಡಿದೆ. ಯಾದಗಿರಿ, ಹುಮ್ನಾಬಾದ್‌, ಲಿಂಗಸಗೂರು ಮತ್ತು ಹೊಸಪೇಟೆಯಲ್ಲಿ ಕೌಶಲಾಭಿವೃದ್ಧಿ ತರಬೇತಿ ಕೇಂದ್ರ ಆರಂಭಿಸಲು ಸಂಪುಟ ನಿರ್ಧರಿಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.

ಮತ್ತೆ ಇಂಧನ ಬೆಲೆ ಇಳಿಸುವ ಮಾತಿಲ್ಲ; ಸಿ ಎಂ ಕುಮಾರಸ್ವಾಮಿ

ಪೆಟ್ರೋಲ್ ದರ ಏರಿಕೆಯ ಕುರಿತಾಗಿ ದೇಶಾದ್ಯಂತ ಭಾರತ್ ಬಂದ್ ಸೇರಿದಂತೆ ಹಲವು ಪ್ರತಿಭಟನೆಗಳ ನಂತರ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿದ್ದು, ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ದರದಲ್ಲಿ ರೂ.2.50 ಇಳಿಕೆ ಮಾಡುವ ಮೂಲಕ ತೈಲ ಬೆಲೆ ಏರಿಕೆಯಿಂದ ಬೇಸತ್ತಿದ್ದ ದೇಶದ ಜನರ ಹೊರೆಯನ್ನು ತುಸು ತಗ್ಗಿಸಿದೆ. ಈ ಹಿನ್ನೆಲೆಯಲ್ಲಿ ಇಂದು ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ತಿಂಗಳ ಹಿಂದೆಯಷ್ಟೇ ರಾಜ್ಯದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಸುಂಕವನ್ನು ಇಳಿಸಲಾಗಿದ್ದು ಮತ್ತೆ ತೈಲ ದರ ಇಳಿಕೆಯ ಮಾತಿಲ್ಲ ಎಂಬುದನ್ನ ಸ್ಪಷ್ಟಪಡಿಸಿದ್ದಾರೆ

ಐಎಲ್&ಎಫ್ಎಸ್ ಸಮಸ್ಯೆ ತ್ವರಿತ ಇತ್ಯರ್ಥಕ್ಕೆ ಕೇಂದ್ರ ಬದ್ಧ; ಅರುಣ್ ಜೇಟ್ಲಿ

ನಗದುಕೊರತೆ ಮತ್ತು ಸುಸ್ತಿಯಿಂದಾಗಿ ಬಂಡವಾಳ ಪೇಟೆಯಲ್ಲಿ ತಲ್ಲಣ ಮೂಡಿಸಿರುವ ಐಎಲ್&ಎಫ್ಎಸ್ ಕಂಪನಿ ಸಮಸ್ಯೆಯನ್ನು ತ್ವರಿತ ಇತ್ಯರ್ಥ ಪಡಿಸಲು ಕೇಂದ್ರ ಬದ್ಧವಾಗಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಐಎಲ್&ಎಫ್ಎಸ್ ಸಮಸ್ಯೆ ಇತ್ಯರ್ಥ ವಿಳಂಬವಾದಷ್ಟೂ ಅದರ ವ್ಯತಿರಿಕ್ತ ಪರಿಣಾಮ ವ್ಯಾಪಿಸುತ್ತದೆ. ಈಗಾಗಲೇ ಬಂಡವಾಳ ಮಾರುಕಟ್ಟೆ ಮೇಲೆ ಇದರ ವ್ಯತಿರಿಕ್ತ ಪರಿಣಾಮ ಗೋಚರಿಸಿದೆ. ಅದು ಮತ್ತಷ್ಟು ವ್ಯಾಪಕವಾಗಲು ಅವಕಾಶ ನೀಡುವುದಿಲ್ಲ ಎಂದೂ ಜೇಟ್ಲಿ ಹೇಳಿದ್ದಾರೆ. ಕಳೆದವಾರ ಕೇಂದ್ರ ಸರ್ಕಾರ ಐಎಲ್&ಎಫ್ಎಸ್ ಆಡಳಿತ ಮಂಡಳಿಯನ್ನು ರದ್ದು ಮಾಡಿ ಉದಯ್ ಕೋಟಕ್ ನೇತೃತ್ವದಲ್ಲಿ ಹೊಸ ಆಡಳಿತ ಮಂಡಳಿ ರಚಿಸಿತ್ತು. ಐಎಲ್&ಎಫ್ಎಸ್ 91,000 ಕೋಟಿ ಸಾಲದ ಸುಳಿಯಲ್ಲಿ ಸಿಲುಕಿದೆ.

ಲಿಂಗ ಸಮಾನತೆ ವಿಭಾಗದಲ್ಲಿ 7 ಸಿನಿಮಾ

ಮುಂಬಯಿ ಅಕಾಡೆಮಿ ಆಫ್ ಮೂವಿಂಗ್ ಇಮೇಜಸ್‌ (MAMI) ಚಿತ್ರೋತ್ಸವದ ‘ಲಿಂಗ ಸಮಾನತೆ’ ವಿಭಾಗದಲ್ಲಿ ಏಳು ಚಿತ್ರಗಳನ್ನು ಅಂತಿಮಗೊಳಿಸಲಾಗಿದೆ. ಅಕ್ಟೋಬರ್‌ 25ರಿಂದ ನವೆಂಬರ್‌ 1ರವರೆಗೆ ಚಿತ್ರೋತ್ಸವ ನಡೆಯಲಿದೆ. ಹಿಂದಿ ಚಿತ್ರಗಳಾದ ‘ಹಮೀದ್‌’ (ನಿರ್ದೇಶಕ ಅಜಿಯಾಝ್‌ ಖಾನ್‌), ‘ಸೋನಿ’ (ಇವಾನ್ ಐಯರ್‌), ‘ಜಾವೋಂ ಕಹಾ ಬತಾ ಏ ದಿಲ್‌’ (ಆದೀಶ್‌ ಕೆಲುಸ್ಕರ್‌), ಮರಾಠಿ ಸಿನಿಮಾ ‘ಇಮಾಗೊ’ (ಕರಣ್ ಚವನ್‌ ಮತ್ತು ವಿಕ್ರಂ ಪಾಟೀಲ್‌), ಮಲಯಾಳಂನ ‘ಲೈಟ್ ಇನ್‌ ದಿ ರೂಂ’ (ರಾಹುಲ್ ರಿಜಿ ನಾಯರ್‌), ಬೆಂಗಾಲಿ ಚಿತ್ರ ‘ಜಾನಕಿ’ (ಆದಿತ್ಯಾ ವಿಕ್ರಂ ಸೇನ್‌ಗುಪ್ತಾ) ಮತ್ತು ಕನ್ನಡದ ‘ಬಳೆಕೆಂಪ’ (ಈರೇಗೌಡ) ಈ ವಿಭಾಗದಲ್ಲಿ ಪ್ರದರ್ಶನಗೊಳ್ಳಲಿವೆ.

ಮಾಜಿ ಒಲಿಂಪಿಯನ್ ಹಾಕಿ ಪಟು ಬಲ್ಬೀರ್ ಸಿಂಗ್ ಸ್ಥಿತಿ ಗಂಭೀರ

ಮೂರು ಬಾರಿಯ ಒಲಿಂಪಿಕ್ಸ್ ಸ್ವರ್ಣ ಪದಕ ವಿಜೇತ ಭಾರತ ಹಾಕಿ ತಂಡದ ಸದಸ್ಯ ಬಲ್ಬೀರ್ ಸಿಂಗ್ ಸೀನಿಯರ್ ಸ್ಥಿತಿ ಗಂಭೀರವಾಗಿದೆ. ಉಸಿರಾಟದ ತೊಂದರೆಯಿಂದಾಗಿ ಅವರನ್ನು ಚಂಡೀಗಢದ ಪಿಜಿಐ ಆಸ್ಪತ್ರೆಗೆ ಸಾಗಿಸಲಾಗಿದೆ. ಉಸಿರಾಟದ ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ೯೨ರ ಹರೆಯದ ಬಲ್ಬೀರ್ ಸಿಂಗ್ ಸ್ಥಿತಿಯನ್ನು ಗಮನಿಸಿದ ವೈದ್ಯರು ಅವರು ಬದುಕುಳಿಯುವ ಸಾಧ್ಯತೆ ಕ್ಷೀಣ ಎಂದಿದ್ದಾರೆ ಎನ್ನಲಾಗಿದೆ. ೧೯೫೨ರ ಹೆಲ್ಸಿಂಕಿ ಒಲಿಂಪಿಕ್ಸ್ ಕೂಟದಲ್ಲಿ ಹಾಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಬಲ್ಬೀರ್ ಅವರಿದ್ದ ಭಾರತ ೬-೧ ಗೋಲುಗಳ ಗೆಲುವು ಸಾಧಿಸಿತ್ತು. ಭಾರತದ ಪರ ಐದು ಗೋಲುಗಳನ್ನು ಬಲ್ಬೀರ್ ದಾಖಲಿಸಿದ್ದರೆಂಬುದು ಗಮನಾರ್ಹ. ೧೯೫೭ರಲ್ಲಿ ಪದ್ಮಶ್ರೀ ಪುರಸ್ಕಾರ ಪಡೆದ ಬಲ್ಬೀರ್, ೧೯೭೫ರ ವಿಶ್ವಕಪ್ ವಿಜೇತ ಭಾರತ ತಂಡದ ಮ್ಯಾನೇಜರ್ ಆಗಿದ್ದರು.

ಸೌರವ್ ಘೋಸಲ್ ಶ್ರೇಷ್ಠ ಸಾಧನೆ

ಭಾರತದ ಅಗ್ರ ಕ್ರಮಾಂಕಿತ ಸ್ಕ್ವಾಶ್ ಆಟಗಾರ ಸೌರವ್ ಘೋಸಲ್ ಇಂದು ವಿಶ್ವ ಸ್ಕ್ವಾಶ್ ರ್ಯಾಂಕಿಂಗ್‌ನಲ್ಲಿ ಜೀವಮಾನಶ್ರೇಷ್ಠ ಸಾಧನೆಯೊಂದಿಗೆ ೧೧ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಇನ್ನು, ಜೋಶ್ನಾ ಚಿನ್ನಪ್ಪ ನಾಲ್ಕು ಸ್ಥಾನಗಳ ಜಿಗಿತದೊಂದಿಗೆ ೧೪ನೇ ಸ್ಥಾನಕ್ಕೇರಿದ್ದಾರೆ. ಘೋಸಲ್ ಕೇವಲ ಒಂದು ಸ್ಥಾನ ಜಿಗಿತ ಕಂಡಿದ್ದಾರೆ. ಎರಡು ವರ್ಷಗಳ ಹಿಂದೆ ಜೋಶ್ನಾ, ೧೦ನೇ ಸ್ಥಾನಕ್ಕೇರಿದ್ದರು. ಇನ್ನು, ದೀಪಿಕಾ ಪಳ್ಳೀಕಲ್ ನಾಲ್ಕು ಸ್ಥಾನ ಕುಸಿತ ಕಂಡು ೨೩ನೇ ಸ್ಥಾನದಲ್ಲಿದ್ದಾರೆ. ಇನ್ನುಳಿದಂತೆ ಹರೀಂದರ್ ಪಾಲ್ ಸಂಧು ೬೦ನೇ ಸ್ಥಾನದಿಂದ ೫೭ನೇ ಸ್ಥಾನಕ್ಕೆ ಜಿಗಿದರೆ, ರಮೀತ್ ಟಂಡನ್ ೬೪ನೇ ಸ್ಥಾನದಿಂದ ೫೯ನೇ ಸ್ಥಾನಕ್ಕೆ, ಮಹೇಶ್ ಮಂಗೋಂಕರ್ ೬೮ರಿಂದ ೬೪ನೇ ಸ್ಥಾನಕ್ಕೆ ಜಿಗಿದಿದ್ದಾರೆ. ವಿಕ್ರಮ್ ಮಲ್ಹೋತ್ರಾ ೮೪ನೇ ಸ್ಥಾನದಿಂದ ೭೨ನೇ ಸ್ಥಾನಕ್ಕೆ ಜಿಗಿದಿದ್ದಾರೆ.

ಪೋರ್ಚುಗಲ್ ಪಂದ್ಯಗಳಿಂದ ರೊನಾಲ್ಡೊಗೆ ಕೊಕ್!

ಅಮೆರಿಕದ ಮಹಿಳೆಯೊಬ್ಬರ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿರುವ ಜಗತ್ಪ್ರಸಿದ್ಧ ಫುಟ್ಬಾಲ್ ಆಟಗಾರ ಕ್ರಿಶ್ಚಿಯಾನೊ ರೊನಾಲ್ಡೊ ಅವರನ್ನು ಪೋರ್ಚುಗಲ್ ತಂಡದಿಂದ ಕೈಬಿಡಲಾಗಿದೆ. ೨೦೦೯ರಲ್ಲಿ ರೊನಾಲ್ಡೊ ತನ್ನ ಮೇಲೆ ಅತ್ಯಾಚಾರ ನಡೆಸಿದ್ದುದಾಗಿ ಕ್ಯಾಥರಿನ್ ಮಯೋರ್ಗಾ ನೀಡಿದ್ದ ದೂರಿನ ಮೇರೆಗೆ ಶುರುವಾಗಿರುವ ಪುನರ್ ತನಿಖೆಯಿಂದಾಗಿ ರೊನಾಲ್ಡೊ ರಾಷ್ಟ್ರೀಯ ತಂಡ ಆಡಲಿರುವ ಪಂದ್ಯಗಳಿಂದ ವಂಚಿತವಾಗುವಂತಾಗಿದೆ. ಸದ್ಯ, ಪೋರ್ಚುಗಲ್ ತಂಡ ಪೋಲೆಂಡ್‌ನಲ್ಲಿ ನಡೆಯುತ್ತಿರುವ ಯುಇಎಫ್‌ಎ ರಾಷ್ಟ್ರೀಯ ಲೀಗ್‌ನಲ್ಲಿನ ಎರಡನೇ ಪಂದ್ಯ ಮತ್ತು ಸ್ಕಾಟ್ಲೆಂಡ್‌ ವಿರುದ್ಧದ ಸೌಹಾರ್ದ ಪಂದ್ಯದಿಂದಲೂ ರೊನಾಲ್ಡೊ ವಂಚಿತರಾಗಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More