ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌

“ಗೀತಾ ಕನ್ನಡದ ಹುಡುಗಿ. ಸ್ನೇಹಿತರು ಹೆಚ್ಚಿರುವುದು ಕನ್ನಡದವರೇ. ಆಕೆಗೆ ಮಲೆಯಾಳಂ ಬರಲ್ಲ. ಅರ್ಥಶಾಸ್ತ್ರದ ಮೇಲೆ ಆಸಕ್ತಿ ಬೆಳೆಸಿಕೊಂಡವಳು, ನಂತರ ಆ ವಿಷಯದ ಮೇಲೆ ಗಮನ ಕೇಂದ್ರೀಕರಿಸಿ, ದಿನಕ್ಕೆ ೧೫ ತಾಸು ವ್ಯಾಸಂಗ ಮಾಡಿ ಮಹತ್ವದ್ದನ್ನು ಸಾಧಿಸಿದ್ದಾಳೆ,” ಎನ್ನುತ್ತಾರೆ ತಂದೆ ಗೋಪಿನಾಥ್‌

ಬಾಲ್ಯದಲ್ಲಿ ಆಕೆ ಓದಿಗಿಂತ ಆಟೋಟದಲ್ಲಿ ಚುರುಕಾಗಿದ್ದಳು. ಶಾಲಾಮಟ್ಟದ ಕ್ರೀಡಾಕೂಟದಲ್ಲಿ ಓಡಿ ಬಹುಮಾನ ಗೆದ್ದಿದ್ದಳು. ೭ನೇ ತರಗತಿಗೆ ಬಂದ ಬಳಿಕ ಕ್ರೀಡೆಯಿಂದ ದೂರ ಸರಿದು, ಓದಿನತ್ತ ಹೆಚ್ಚು ಗಮನ ಹರಿಸಿದಳು. ಆವರೆಗೆ ಪ್ರತಿಶತ ೪೦-೪೫ ಅಂಕ ಪಡೆಯುತ್ತಿದ್ದವಳು, ನಂತರ ಪ್ರತಿಶತ ೮೦-೯೦ ಅಂಕ ಪಡೆಯಲಾರಂಭಿಸಿದಳು. ಪಿಯುಸಿಯಲ್ಲಿ ವಿಜ್ಞಾನ ಓದಿ, ನಂತರ ಅರ್ಥಶಾಸ್ತ್ರವನ್ನು ಗಂಭೀರವಾಗಿ ಪರಗಣಿಸಿದಳು.

-ಅಂತಾರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್‌) ಮುಖ್ಯ ಆರ್ಥಿಕ ತಜ್ಞೆಯಾಗಿ ನೇಮಕಗೊಂಡಿರುವ ಮೈಸೂರು ಮೂಲದ ಗೀತಾ ಅವರ ತಂದೆ ಗೋಪಿನಾಥ್‌ ಅವರ ನುಡಿಗಳಿವು. ‌ಕೇರಳದ ಕಣ್ಣೂರು ಮೂಲದ ಗೋಪಿನಾಥ್‌ ಕುಟುಂಬ, ಖಾಸಗಿ ಕಂಪನಿಯ ಉದ್ಯೋಗ ನಿಮಿತ್ತ ಕೋಲ್ಕತ್ತಾ, ದೆಹಲಿ, ಹೈದರಾಬಾದ್‌ ಸುತ್ತಿ ಮೂರೂವರೆ ದಶಕದ ಹಿಂದೆ ಮೈಸೂರಿಗೆ ಬಂದು ನೆಲೆ ನಿಂತಿತು. ಸೀಲಿಂಗ್‌ ಫ್ಯಾನ್‌ ನಿರ್ಮಾಣ ಸಹಿತ ವಿವಿಧ ಕಂಪನಿ ಆರಂಭಿಸಿದ ಗೋಪಿನಾಥ್‌, ಹುಣಸೂರು ತಾಲೂಕು ಬಿಳಿಕೆರೆ ಬಳಿ ಜಮೀನು ಖರೀದಿಸಿ, ಕೃಷಿ, ಹೈನುಗಾರಿಕೆಯಲ್ಲೂ ತೊಡಗಿಸಿಕೊಂಡರು. 'ರೈತ ಮಿತ್ರ’ ಎನ್ನುವ ರೈತ ಉತ್ಪಾದಕರ ಕಂಪನಿಯಲ್ಲೂ ಸಕ್ರಿಯರು. ಪತ್ನಿ ವಿಜಯಲಕ್ಷ್ಮಿ, ೩೫ ವರ್ಷ ಕುವೆಂಪು ನಗರದಲ್ಲಿ ‘ದಿ ಪ್ಲೇ ಹೌಸ್‌’ ಎಳೆಯರ ಶಾಲೆ ನಡೆಸಿದ್ದು, ಒಂದು ವರ್ಷದಿಂದೀಚೆಗೆ ನಿಲ್ಲಿಸಿದ್ದಾರೆ. ೮೧ರ ಹರೆಯದ ಗೋಪಿನಾಥ್‌, ತಮ್ಮ ಮಗಳ ಸಾಧನೆ ಕುರಿತು 'ದಿ ಸ್ಟೇಟ್‌' ಜೊತೆ ಹೆಮ್ಮೆಯಿಂದ ಮಾತನಾಡಿದರು. ಅವರ ಮಾತಿನ ಮುಖ್ಯಾಂಶಗಳಿವು:

ಗೀತಾ ಹುಟ್ಟಿದ್ದು ( ೧೯೭೧ ಡಿ.೮) ಕೋಲ್ಕತ್ತಾದಲ್ಲಿ. ಬಾಂಗ್ಲಾ ಯುದ್ಧ ನಡೆಯುತ್ತಿದ್ದ ಸಂದರ್ಭವದು. ಉದ್ಯೋಗ ನಿಮಿತ್ತ ನಮ್ಮ ಕುಟುಂಬ ಎರಡೂವರೆ ವರ್ಷ ಅಲ್ಲಿತ್ತು. ನಂತರ ದೆಹಲಿಯಲ್ಲಿ ಎರಡೂವರೆ ವರ್ಷ. ಅಲ್ಲಿ ಜಿಎಸ್‌ಎಸ್‌ ಮೇರಿ ಸ್ಕೂಲ್‌ಗೆ ಗೀತಾಳನ್ನು ಸೇರಿಸಿದ್ದೆವು. ನಂತರ ೧ ವರ್ಷ ಹೈದರಾಬಾದ್‌ನಲ್ಲಿ.

ಅಲ್ಲಿಂದ ಮೈಸೂರಿಗೆ ಬಂದು ನೆಲೆ ನಿಂತಾಗ ಗೀತಾಗೆ ೯ ವರ್ಷ. ನಿರ್ಮಲ ಕಾನ್ವೆಂಟ್‌ಗೆ ೪ನೇ ತರಗತಿಗೆ ಸೇರಿದಳು. ಓದಿನಲ್ಲಿ ಸಾಮಾನ್ಯ ವಿದ್ಯಾರ್ಥಿ. ಆದರೆ, ಆಟೋಟದಲ್ಲಿ ಚುರುಕಾಗಿದ್ದಳು. ಶಾಲಾ ಮಟ್ಟದ ಕ್ರೀಡಾಕೂಟದಲ್ಲಿ ಓಟದಲ್ಲಿ ಮೊದಲ ಬಹುಮಾನ ಪಡೆದಿದ್ದಳು. ೭ನೇ ತರಗತಿಗೆ ಬಂದ ಬಳಿಕ ಕ್ರೀಡೆಯಿಂದ ದೂರ ಸರಿದು, ಓದಿನತ್ತ ಹೆಚ್ಚು ಗಮನ ಹರಿಸಿದಳು. ‘ಕ್ರೀಡೆ ಟ್ರಿಕ್ಕಿ ಬ್ಯುಸಿನೆಸ್‌,’ ಎಂದು ಅದಕ್ಕೆ ತನ್ನದೇ ಕಾರಣವನ್ನೂ ನೀಡಿದಳು. ಆವರೆಗೆ ಪರೀಕ್ಷೆಗಳಲ್ಲಿ ನೂರಕ್ಕೆ ೪೦ರಿಂದ ೪೫ ಅಂಕ ಪಡೆಯುತ್ತಿದ್ದವಳು, ಓದಿನೆಡೆಗೆ ಗಮನ ಕೇಂದ್ರೀಕರಿಸಿದ ನಂತ ೮೦ರಿಂದ ೯೦ ಅಂಕ ಪಡೆಯಲಾರಂಭಿಸಿದಳು.

ನಿರ್ಮಲ ಕಾನ್ವೆಂಟ್‌ನಲ್ಲಿ ಹೈಸ್ಕೂಲ್‌ ಮುಗಿದ ಬಳಿಕೆ ಆಕೆಯ ಅನೇಕ ಸ್ನೇಹಿತರು ಮಹಾಜನ ಕಾಲೇಜು ಸೇರಿದರು. ಆಕೆಯೂ ಅಲ್ಲೇ ಸೇರಿ ವಿಜ್ಞಾನ ವಿಷಯ ಆಯ್ಕೆ ಮಾಡಿಕೊಂಡಳು. ಎಲ್ಲ ವಿಷಯಗಳಲ್ಲೂ ಉತ್ತಮ ಅಂಕವೇ ಬಂದಿತ್ತು. ವೈದ್ಯಕೀಯ ಅಥವಾ ಎಂಜಿನಿಯರಿಂಗ್‌ಗೆ‌ ಸೇರಿಸುವ ಆಲೋಚನೆಯೂ ಬಂದು ಹೋಯಿತು. ಆದರೆ, ಆಕೆಯ ಅಕ್ಕ (ಅನಿತಾ) ಆಗಲೇ ಎಂಜಿನಿಯರಿಂಗ್‌ ಕಲಿಯುತ್ತಿದ್ದಳು. ಹಾಗಾಗಿ, ಗೀತಾ ಐಎಎಸ್‌ ಮಾಡಲಿ ಎನ್ನುವ ನಿರ್ಧಾರಕ್ಕೆ ಬಂದೆವು. ವಿಜ್ಞಾನಕ್ಕಿಂತ ಅರ್ಥಶಾಸ್ತ್ರವನ್ನು ಗಂಭೀರವಾಗಿ ಸ್ವೀಕರಿಸಲು ಗೀತಾ ನಿರ್ಧರಿಸಿದಳು. ಅರ್ಥಶಾಸ್ತ್ರ ವ್ಯಾಸಂಗಕ್ಕೆ ಮತ್ತು ಮುಂದೆ ಐಎಎಸ್‌ಗೆ ಅನುಕೂಲವಾಗಲಿ ಎಂದೇ ದೆಹಲಿಯ ಲೇಡಿ ಶ್ರೀರಾಮ್‌ ಕಾಲೇಜಿಗೆ ಸೇರಿಸಿದೆವು. ಬಿಎ ಆನರ್ಸ್‌ನಲ್ಲಿ ಗೀತಾ ಮೂರೂ ವರ್ಷ ದೆಹಲಿ ವಿವಿಗೇ ಟಾಪರ್. ಅಂದಿನ ಉಪರಾಷ್ಟ್ರಪತಿ ಆರ್‌ ಕೆ ನಾರಾಯಣನ್‌ ಅವರು ಗೀತಾಗೆ ಐದು ಮೆಡಲ್‌ ಪ್ರಧಾನ ಮಾಡಿದ್ದರು.

ಬಿಎ ಮುಗಿದ ತಕ್ಷಣ ಅರ್ಥಶಾಸ್ತ್ರದಲ್ಲಿ ಉನ್ನತ ವ್ಯಾಸಂಗಕ್ಕೆ ಅಮೆರಿಕಕ್ಕೆ ತೆರಳಬೇಕಿತ್ತು. ಸ್ಕಾಲರ್‌ಶಿಪ್‌ ಕೂಡ ದೊರಕಿತ್ತು. ಆದರೆ, ಭಾರತದಲ್ಲಿ ೧೬ ವರ್ಷ ವ್ಯಾಸಂಗ ಮುಗಿಸಿರಬೇಕೆನ್ನುವ ನಿಯಮ ಸಮಸ್ಯೆಯಾಯಿತು; ಹದಿನೈದು ವರ್ಷ ಅಷ್ಟೇ ಆಗಿತ್ತು. ಆದ್ದರಿಂದ ಮತ್ತೊಂದು ವರ್ಷದ ವ್ಯಾಸಂಗಕ್ಕಾಗಿ ದೆಹಲಿ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ಗೆ ಸೇರಿದಳು.

ನಂತರ ಅಮೆರಿಕಕ್ಕೆ ತೆರಳಿ ಉನ್ನತ ವ್ಯಾಸಂಗ. ಪ್ರಿನ್ಸ್‌ಟನ್‌ ವಿವಿಯಲ್ಲಿ ಪಿಎಚ್‌ಡಿ. ಗೀತಾ ಮಾರ್ಗದರ್ಶಕರು, ಪ್ರಾಧ್ಯಾಪಕರು ಆಕೆ ಅರ್ಥಶಾಸ್ತ್ರದಲ್ಲಿ ಜಗತ್ತಿನಲ್ಲೇ ಉನ್ನತ ಸಂಸ್ಥೆಯಲ್ಲಿ ಕಲಿಯಬೇಕೆಂದು ಬಯಸಿದ್ದರು. ಜಾಗತಿಕ ಮಟ್ಟದ ಅರ್ಥಶಾಸ್ತ್ರಜ್ಞರ ಮಾರ್ಗದರ್ಶನ, ಸಹಕಾರವೂ ಆಕೆಗೆ ದೊರೆಯಿತು.

೨೦೦೧ರಲ್ಲಿ ಕೋರ್ಸ್‌ ಮುಗಿಯುತ್ತಿದ್ದಂತೆ ನಡೆದ ಕ್ಯಾಂಪಸ್ ಸಂದರ್ಶನದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಆಯ್ಕೆ. ೨೦೦೫ರಲ್ಲಿ ಹಾರ್ವರ್ಡ್ ವಿವಿ ಒಂದು ವರ್ಷದ ಅವಧಿಗೆ ಸಂದರ್ಶಕ ಪ್ರಾಧ್ಯಾಪಕಿಯನ್ನಾಗಿ ಆಹ್ವಾನಿಸಿತು. ಮೊದಲ ಮೂರು ತಿಂಗಳಲ್ಲೇ, “ನೀವು ಚಿಕಾಗೋಗೆ ಯಾಕೆ ಮರಳಬೇಕು, ಇಲ್ಲೇ ಇರಬಹುದಲ್ಲ?’’ಎನ್ನುವ ಪ್ರಸ್ತಾಪನೆ ಬಂತು. ಗೀತಾ, ಹಾರ್ವರ್ಡ್‌ ಪ್ರಾಧ್ಯಾಪಕಿಯಾಗಿಯೇ ಮುಂದುವರಿದಳು. ೨೦೧೦ರಲ್ಲಿ ಆಕೆಗೆ ಜೀವಮಾನ ಪ್ರಾಧ್ಯಾಪಕಿ ಗೌರವವನ್ನು ದೊರಕಿತು.

ಬಳಿಕ, ಬೋಸ್ಟನ್ ಫೆಡರಲ್ ರಿಸರ್ವ್‌ನ ಆರ್ಥಿಕ ಸಲಹಾ ಮಂಡಳಿ ಸದಸ್ಯೆ, ಅಮೆರಿಕನ್ ಎಕನಾಮಿಕ್ ರಿವ್ಯೂ ಸಂಪಾದಕ ಮಂಡಳಿಯ ಸದಸ್ಯೆ ಮತ್ತು ಅಮೆರಿಕದ ನ್ಯಾಷನಲ್ ಬ್ಯೂರೋ ಆಫ್ ಎಕನಾಮಿಕ್ಸ್ ನಿರ್ದೇಶಕ ಮಂಡಲಿಯ ಸದಸ್ಯೆ... ಹೀಗೆ ಆರ್ಥಿಕತೆಗೆ ಸಂಬಂಧಿಸಿ ಹಲವು ಸಂಸ್ಥೆಗಳ ಸದಸ್ಯೆಯಾದಳು. ಕೇರಳ ಮುಖ್ಯಮಂತ್ರಿಯ ಆರ್ಥಿಕ ಸಲಹೆಗಾರ್ತಿಯಾಗಿಯೂ ಕಾರ್ಯನಿರ್ವಹಿಸಿದ್ದಾಳೆ. ಈಗ ದೊರಕಿರುವ ಹೊಣೆ ಈ ಎಲ್ಲವುಗಳಿಗಿಂತ ಉನ್ನತವಾದುದು.

ಈ ಮಧ್ಯೆ, ೧೯೯೯ರಲ್ಲಿ ಗೀತಾ, ದೆಹಲಿಯ ತನ್ನ ಸಹಪಾಠಿ ಇಕ್ಬಾಲ್ ಸಿಂಗ್‌ ಧಲಿವಾಲ್‌ ಜೊತೆ ವಿವಾಹವಾದಳು. ಇಕ್ಬಾಲ್‌ ತಂದೆ ಗಡಿ ಭದ್ರತಾ ಪಡೆಯ ಐಜಿ ಆಗಿದ್ದವರು. ಐಎಎಸ್‌ ೧೯೯೬ರ ಬ್ಯಾಚ್ ಟಾಪರ್‌ ಆಗಿದ್ದ ಇಕ್ಬಾಲ್, ಐದು ವರ್ಷ‌ ತಮಿಳುನಾಡು ಸರ್ಕಾರದ ಉಪಕಾರ್ಯದರ್ಶಿ ಹುದ್ದೆಯಲ್ಲಿದ್ದರು.

ಈ ಮಧ್ಯೆ, ಗೀತಾಳ ಅಮೆರಿಕದ ಮಾರ್ಗದರ್ಶಕರು, ಪ್ರಾಧ್ಯಾಪಕರು ಆಕೆಯನ್ನು ಅಲ್ಲೇ ಉಳಿಸಿಕೊಳ್ಳಲು ಬಯಸಿದ್ದರು. ಅತ್ಯುತ್ತಮ ವಿದ್ಯಾರ್ಥಿ ಎನ್ನುವುದು ಮತ್ತು ಆಕೆಯ ಆರ್ಥಿಕ ಪ್ರತಿಭೆ ಪ್ರಕಾಶಿಸಬೇಕೆಂದರೆ ಇಲ್ಲೇ ಉಳಿಯಬೇಕು ಎನ್ನುವುದು ಕಾರಣ. ಔತಣಕೂಟವೊಂದಕ್ಕೆ ಬಂದಿದ್ದ ರೋಗೋ ಎನ್ನುವವರು, “ಗೀತಾ ಭಾರತಕ್ಕೆ ಮರಳಿ ಹೋಗುವುದು ಬೇಡ. ಅಲ್ಲಿಗೆ ಹೋದರೆ ಆಕೆಯ ಸ್ಥಿತಿ ರಾಜಸ್ಥಾನದ ಮರುಭೂಮಿಯಲ್ಲಿ ಕಳೆದುಹೋದ ವಜ್ರದಂತಾಗುತ್ತದೆ. ಯಾರೂ ಗಮನಿಸುವುದಿಲ್ಲ,’’ ಎಂದು ನನ್ನ ಹಿರಿಯ ಮಗಳ ಅನಿತಾ ಜೊತೆ ಹೇಳಿದ್ದರಂತೆ. ಆದರೆ, ಇಕ್ಬಾಲ್‌ ಭಾರತದಲ್ಲಿರುವಾಗ ಗೀತಾ ಅಲ್ಲಿ ಉಳಿಯುವಂತಿರಲಿಲ್ಲ. ಒಂದೋ ಆಕೆ ಇಲ್ಲಿ ಬರಬೇಕು, ಇಲ್ಲವೇ ಇಕ್ಬಾಲ್‌ ಅಲ್ಲಿಗೆ ಹೋಗಬೇಕು. ಅಮೆರಿಕದ ಗೀತಾ ಹಿತೈಷಿಗಳು ೨ ವರ್ಷದ ಸ್ಕಾಲರ್‌ಶಿಪ್‌ (೯೦ ಸಾವಿರ ಡಾಲರ್‌) ನೀಡಿ, ಇಕ್ಬಾಲ್‌ ಅವರನ್ನೇ ಪ್ರಿನ್ಸ್‌ಟನ್‌ಗೆ ಕರೆಸಿಕೊಂಡರು. ಬಳಿಕ ಇಕ್ಬಾಲ್‌ ಐಎಎಸ್‌ ಹುದ್ದೆಗೆ ರಾಜಿನಾಮೆ ನೀಡಿದರಾದರೂ ಏಳು ವರ್ಷದ ಬಳಿಕ ಅಂಗೀಕಾರವಾಯಿತು. ಜಾಗತಿಕವಾಗಿ ಬಡವರ ಶ್ರೇಯೋಭಿವೃದ್ಧಿಗೆ ಕೆಲಸ ಮಾಡುವ ಮೆಸಾಚುಸೆಟ್ಸ್‌ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ (ಎಂಐಟಿ) ಕಾರ್ಯನಿರ್ವಾಹಕ ನಿರ್ದೇಶಕರಾಗಿ ಈಗವರು ಕೆಲಸ ಮಾಡುತ್ತಿದ್ದಾರೆ.

“ಗೀತಾ ಕನ್ನಡದ ಹುಡುಗಿ. ಸ್ನೇಹಿತರು ಹೆಚ್ಚಿರುವುದು ಕನ್ನಡದವರೇ. ಆಕೆಗೆ ಮಲೆಯಾಳಂ ಬರಲ್ಲ. ಅರ್ಥಶಾಸ್ತ್ರದ ಮೇಲೆ ಆಸಕ್ತಿ ಬೆಳೆಸಿಕೊಂಡವಳು, ಆ ವಿಷಯದ ಮೇಲೆ ಗಮನವನ್ನು ಕೇಂದ್ರೀಕರಿಸಿ, ದಿನಕ್ಕೆ ೧೫ ತಾಸು ವ್ಯಾಸಂಗ ಮಾಡಿ ಮಹತ್ವದ್ದನ್ನು ಸಾಧಿಸಿದ್ದಾಳೆ. ಸರಿಯಾದ ಸಮಯದಲ್ಲಿ ಸರಿಯಾದ ಮಾರ್ಗದರ್ಶನ ಮಾಡಿದ್ದಷ್ಟೇ ನಮ್ಮ ಕೆಲಸ,’’ ಎನ್ನುತ್ತಾರೆ ಗೋಪಿನಾಥ್‌. ಈ ಮೂರ್ನಾಲ್ಕು ದಿನದಲ್ಲಿ ನೂರಾರು ಅಭಿನಂದನೆಯ ಕರೆಗಳು ಅವರ ಕಿವಿ ತುಂಬಿವೆ. “ಆಕೆ ನಮ್ಮ ಮಗಳು ಎನ್ನುವುದು ನಮಗೆ ಹೆಮ್ಮೆ,’’ ಎಂದು ಎರಡೇ ಮಾತಿನಲ್ಲಿ ಎಲ್ಲವನ್ನೂ ಹೇಳಿದರು ಗೀತಾ ಅವರ ತಾಯಿ ವಿಜಯಲಕ್ಷ್ಮಿ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More