ರಷ್ಯಾದಿಂದ ಎಸ್400 ಕ್ಷಿಪಣಿ ಖರೀದಿ ಒಪ್ಪಂದ; ಟ್ರಂಪ್ ಕೆಂಗಣ್ಣಿಗೆ ಗುರಿಯಾಗಲಿದೆ ಭಾರತ

ಇರಾನ್ ಮತ್ತು ರಷ್ಯಾ ವಿರುದ್ಧ ಅಮೆರಿಕ ಘೋಷಿಸಿರುವ ನಿರ್ಬಂಧಗಳು ಕ್ರಮೇಣ ವಿಶ್ವವಾಣಿಜ್ಯ ವ್ಯವಹಾರದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ. ಅಮೆರಿಕದ ವಿರೋಧದ ನಡುವೆಯೂ ರಕ್ಷಣಾ ಕ್ಷಿಪಣಿ ಸೇರಿದಂತೆ ಯುದ್ಧಾಸ್ತ್ರ ಕೊಳ್ಳುವ ಸಂಬಂಧ ರಷ್ಯಾ ಜೊತೆ ಭಾರತ ಒಪ್ಪಂದ ಮಾಡಿಕೊಂಡಿದೆ

ಇರಾನ್ ಮತ್ತು ರಷ್ಯಾದ ವಿರುದ್ಧ ಅಮೆರಿಕ ಘೋಷಿಸಿರುವ ನಿರ್ಬಂಧಗಳು ಕ್ರಮೇಣ ವಿಶ್ವ ವಾಣಿಜ್ಯ ವ್ಯವಹಾರದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ. ಕ್ರೈಮಿಯಾ ಅತಿಕ್ರಮಣ, ಅಮೆರಿಕದ ಹಿಂದಿನ ಅಧ್ಯಕ್ಷ ಚುನಾವಣೆಯಲ್ಲಿ ಹಸ್ತಕ್ಷೇಪ, ಬ್ರಿಟನ್‍ನಲ್ಲಿ ಇಬ್ಬರ ಮೇಲೆ ರಾಸಾಯನಿಕ ದಾಳಿ ಆರೋಪಗಳಿಗಾಗಿ ರಷ್ಯಾದ ಮೇಲೆ ಆರ್ಥಿಕ ನಿರ್ಬಂಧಗಳನ್ನು ಹೇರಲಾಗಿದೆ. ಪರಮಾಣು ತಂತ್ರಜ್ಞಾನ ಅಭಿವೃದ್ಧಿ ಮತ್ತು ಅರಬ್ ಪ್ರದೇಶದಲ್ಲಿ ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವ ಆರೋಪದ ಮೇಲೆ ಇರಾನ್ ವಿರುದ್ಧ ವಾಣಿಜ್ಯ ನಿರ್ಬಂಧವನ್ನು ಅಮೆರಿಕ ಹೇರಿದೆ. ಇದೀಗ ನಿರ್ಬಂಧಗಳನ್ನು ಅಮೆರಿಕ ಕಠಿಣಗೊಳಿಸಿದ್ದು ಆ ದೇಶಗಳ ಜೊತೆ ವ್ಯವಹಾರ ಮುಂದುವರಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂಬ ಎಚ್ಚರಿಕೆಯನ್ನೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದಾರೆ. ರಷ್ಯಾದ ಜೊತೆಗೆ ನಿರ್ಬಂಧಗಳು ಈಗಾಗಲೇ ಜಾರಿಯಲ್ಲಿದ್ದು, ಇರಾನ್‍ಗೆ ಸಂಬಂಧಿಸಿದ ಎರಡನೆಯ ಹಂತದ ಕಠಿಣ ನಿರ್ಬಂಧಗಳು ಮುಂದಿನ ತಿಂಗಳ 4ರಿಂದ ಜಾರಿಗೊಳ್ಳಲಿವೆ.

ರಷ್ಯಾ ಮತ್ತು ಇರಾನ್ ಜೊತೆಗಿನ ಭಾರತದ ಬಾಂಧವ್ಯ ಹಳೆಯದು. ವಾಣಿಜ್ಯ ಮತ್ತು ಇತರ ಸಂಬಂಧಗಳು ಸದಾ ಮುಂದುವರಿಯುವಂಥವು. ಈಗ ಅಮೆರಿಕ ಬೇಡ ಎಂದ ತಕ್ಷಣ ಸಂಬಂಧ ಕಡಿಯುವಂಥದ್ದಲ್ಲ. ಈ ಹಿನ್ನೆಲೆಯನ್ನು ಅಮೆರಿಕದ ನಾಯಕರಿಗೆ ಭಾರತ ವಿವರಿಸುತ್ತಲೇ ಇದೆ. ಅದೇ ಕಾರಣಕ್ಕೆ ವಿಶೇಷ ಪ್ರಕರಣವಾಗಿ ಪರಿಗಣಿಸಿ ನಿರ್ಬಂಧಗಳಿಂದ ವಿನಾಯ್ತಿ ಕೊಡಬೇಕೆಂದು ಭಾರತ ಒತ್ತಾಯಿಸುತ್ತಿದೆ. ಈ ಎರಡೂ ದೇಶಗಳ ನಡುವಣ ವಾಣಿಜ್ಯ ವಹಿವಾಟನ್ನು ಕ್ರಮೇಣ ತಗ್ಗಿಸಲಾಗುವುದು ಎಂಬ ಭರವಸೆ ಆಧಾರದ ಮೇಲೆ ಅಮೆರಿಕದ ಹಿಂದಿನ ಬರಾಕ್ ಒಬಾಮಾ ಸರ್ಕಾರ ನಿರ್ಬಂಧಗಳನ್ನು ಸಡಿಲಿಸಿತ್ತು. ಈಗಲೂ ಅಂಥದೇ ರಿಯಾಯ್ತಿ ಬೇಕೆಂಬುದು ಭಾರತದ ಆಗ್ರಹ. ಆದರೆ, ಇದುವರೆಗೆ ಟ್ರಂಪ್ ಸರ್ಕಾರ ರಿಯಾಯ್ತಿಗೆ ಒಪ್ಪಿಲ್ಲ.

ಅಮೆರಿಕ ನಿರ್ಬಂಧಗಳ ವಿಚಾರದಲ್ಲಿ ಕಠಿಣ ನಿಲುವು ತಳೆದರೆ ಭಾರತ ಸಂಕಷ್ಟಕ್ಕೆ ಒಳಗಾಗುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ. ಭಾರತ ಎಷ್ಟೇ ಅಲ್ಲ, ಹಲವು ದೇಶಗಳು ಬಿಕ್ಕಟ್ಟನ್ನು ಎದುರಿಸುತ್ತಿವೆ. ಈ ಸಮಸ್ಯೆಗೆ ಏನಾದರೊಂದು ಪರಿಹಾರ ಸಿಗುತ್ತದೆ ಎನ್ನುವ ನಂಬಿಕೆಯ ಮೇಲೆ ಭಾರತ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ, ರಷ್ಯಾದಿಂದ ಅತ್ಯಾಧುನಿಕ ರಕ್ಷಣಾ ಕ್ಷಿಪಣಿ ಕೊಳ್ಳುವ ಒಪ್ಪಂದ ಮಾಡಿಕೊಂಡಿದೆ. ಭಾರತದ ಜೊತೆಗಿನ ಬಾಂಧವ್ಯವನ್ನು ಮುಂದುವರಿಸುವ ಭಾಗವಾಗಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಉಪಪ್ರಧಾನಿ ಯೂರಿ ಬೋರಿಸೋವ್, ವಿದೇಶಾಂಗ ಸಚಿವ ಸರ್ಜಿ ಲಾವರೋವ್, ವಾಣಿಜ್ಯ ಸಚಿವ ದೆನಿಸ್ ಮಾಂಟರೊವ್ ಸೇರಿದಂತೆ ಉನ್ನತ ಮಟ್ಟದ ನಿಯೋಗವೇ ಭಾರತಕ್ಕೆ ಬಂದಿರುವುದು ವಿಶೇಷ. ಐದು ಬಿಲಿಯನ್ ಡಾಲರ್ ಮೌಲ್ಯದಲ್ಲಿ ಐದು ಎಸ್-400 ರಕ್ಷಣಾ ಕ್ಷಿಪಣಿಗಳ ಜೊತೆ ನಾಲ್ಕು ಯುದ್ಧ ಸಾಮಗ್ರಿ ಸಾಗಣೆ ಹಡಗುಗಳು, ಯುದ್ಧದ ಸಂದರ್ಭದಲ್ಲಿ ಬೇಕಾಗುವ 200 ಲಘು ಹೆಲಿಕಾಪ್ಟರ್‌ಗಳು (60 ಹೆಲಿಕಾಪ್ಟರ್‌ಗಳು ರಷ್ಯಾದಿಂದಲೇ ಬರುತ್ತವೆ, ಉಳಿದವು ಭಾರತದಲ್ಲಿಯೇ ನಿರ್ಮಾಣವಾಗುತ್ತವೆ) ಸೇರಿದಂತೆ ಐದು ಬಿಲಿಯನ್ ಡಾಲರ್ ಮೌಲ್ಯದ ಒಪ್ಪಂದವಾಗಿದೆ. ಎರಡೂ ದೇಶಗಳ ನಡುವಣ ಬಾಂಧವ್ಯ ಪರಸ್ಪರ ಭದ್ರ ವಿಶ್ವಾಸದ ಮೇಲೆ ನೀಂತಿದೆ ಎಂದು ಒಪ್ಪಂದದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಆದರೆ, ಅಂತಾರಾಷ್ಟ್ರೀಯ ಸಂಬಂಧಗಳು ಏರುಪೇರಾದಂತೆ ಈ ಬಾಂಧವ್ಯದಲ್ಲಿಯೂ ವ್ಯತ್ಯಾಸ ಈ ಹಿಂದೆ ಕಂಡುಬಂದಿರುವುದನ್ನು ಗಮನಿಸಬಹುದು.

ಇದನ್ನೂ ಓದಿ : ತಾರಕಕ್ಕೇರಿದ ಅಮೆರಿಕ-ಚೀನಾ ಶೀತಲ ಸಮರ; ಪರಸ್ಪರ ಎಚ್ಚರಿಕೆ ರವಾನೆ

ಭಾರತ ಮತ್ತು ಅಮೆರಿಕದ ನಡುವೆ ಮೈತ್ರಿ ಹೆಚ್ಚಿದಂತೆ ರಷ್ಯಾ ದೂರ ಸರಿದ ನಿದರ್ಶನಗಳೂ ಇವೆ. ಆದರೆ, ಭಾರತ ಹಲವು ಬಾರಿ ಅಮೆರಿಕದ ಜೊತೆ ಮೈತ್ರಿ ಹೆಚ್ಚಿಸಿಕೊಳ್ಳಲು ಹೋಗಿ ಸಫಲವಾಗದೆ ಮತ್ತೆ ರಷ್ಯಾದತ್ತ ಹೊರಳಿದ ನಿದರ್ಶನವೂ ಇದೆ. ಈಗ ಆಗಿರುವುದೂ ಅದೇ. ಒಪ್ಪಂದವೇನೋ ಆಗಿದೆ. ಆದರೆ, ರಷ್ಯಾದಿಂದ ಸರಬರಾಜಾಗುವ ಕ್ಷಿಪಣಿಗಳು, ಯುದ್ಧದ ಹಡಗುಗಳು, ಹೆಲಿಕಾಪ್ಟರ್‌ಗಳಿಗೆ ತಗಲುವ ಹಣ ಕೊಡುವುದು ಹೇಗೆ ಎಂಬ ಸಮಸ್ಯೆ ಇತ್ಯರ್ಥವಾಗಿಲ್ಲ. ಡಾಲರ್ ಮುಖಾಂತರ ಹಣ ನೀಡಲು ಅಮೆರಿಕದ ನಿರ್ಬಂಧಗಳು ಅವಕಾಶ ನೀಡುವುದಿಲ್ಲ. ಸದ್ಯಕ್ಕೆ ಯೂರೋ ಮತ್ತು ರೂಬೆಲ್ ಮೂಲಕ ಹಣ ಪಾವತಿಸುವ ವ್ಯವಸ್ಥೆ ಅಧಿಕೃತಗೊಂಡಿಲ್ಲ. ರೂಬೆಲ್ ಮೂಲಕ ಹಣ ಕೊಡುವ ವಿಚಾರದ ಬಗ್ಗೆ ರಷ್ಯಾದ ಜೊತೆ ಚರ್ಚೆ ಇನ್ನೂ ನಡೆಯುತ್ತಿದೆ. ಈ ಹಿಂದೆ, ರಷ್ಯಾ ಪೂರೈಸಿದ ಯುದ್ಧಾಸ್ತ್ರಗಳಿಗೆ ಸಂಬಂಧಿಸಿದಂತೆ ಕೊಡಬೇಕಾದ ಬಾಕಿ ಹಣ ಸುಮಾರು ನೂರು ಮಿಲಿಯನ್ ಡಾಲರ್ ಚೆಕ್‍ಗಳಿಗೆ ಬ್ಯಾಂಕುಗಳು ಒಪ್ಪಿಗೆ ನೀಡುತ್ತಿಲ್ಲ. ಅಮೆರಿಕದ ನಿರ್ಬಂಧಗಳಿಂದಾಗಿ ಹಣ ಕೊಡಲಾಗುತ್ತಿಲ್ಲ ಎಂದು ಅಂತಾರಾಷ್ಟ್ರೀಯ ಬ್ಯಾಂಕ್‍ಗಳು ಹೇಳುತ್ತಿವೆ. ಇದಲ್ಲದೆ, ಇನ್ನೂ ಸುಮಾರು ಎರಡು ಬಿಲಿಯನ್ ಡಾಲರ್‌ನಷ್ಟು ಸಂದಾಯವಾಗಬೇಕಿರುವ ಹಣದ ಭವಿಷ್ಯ ಡೋಲಾಯಮಾನವಾಗಿದೆ. ಈಗ ಇನ್ನೂ ಹತ್ತು ಮಿಲಿಯನ್ ಡಾಲರ್ ಮೊತ್ತದ ಒಪ್ಪಂದ ಆಗಿದ್ದು ಹಣ ಕೊಡುವುದು ಹೇಗೆ ಎಂಬುದು ಊಹೆಗೆ ನಿಲುಕದ್ದು. ರಷ್ಯಾಕ್ಕೆ ಸದ್ಯಕ್ಕೆ ಹಣ ಬೇಕಿಲ್ಲದಿರಬಹುದು. ನಿರ್ಬಂಧಗಳ ನಡುವೆಯೂ ಒಪ್ಪಂದ ಮಾಡಿಕೊಂಡು ಅಮೆರಿಕಕ್ಕೆ ಮುಜುಗರ ಉಂಟುಮಾಡುವುದು ರಷ್ಯಾದ ಉದ್ದೇಶ ಇದ್ದಂತಿದೆ.

ಇರಾನ್ ಮೇಲೆ ಅಮೆರಿಕ ವಿಧಿಸಿರುವ ನಿರ್ಬಂಧಗಳು ಭಾರತದ ಮೇಲೆ ತೀರಾ ಕೆಟ್ಟಪರಿಣಾಮ ಬೀರುವುದರಲ್ಲಿ ಅನುಮಾನವಿಲ್ಲ. ತೈಲ ಬೆಲೆ ಏರಿಕೆಯಿಂದ ಜನರು ತತ್ತರಿಸಬಹುದು. ಭಾರತದಲ್ಲಿ ಬಳಸಲಾಗುವ ಮುಕ್ಕಾಲು ಭಾಗ ತೈಲ ಬರುವುದೇ ಇರಾನ್‍ನಿಂದ. ಇತರ ದೇಶಗಳ ತೈಲಕ್ಕೆ ಕೊಡುವ ರೇಟಿಗೆ ಹೋಲಿಸಿದರೆ ಇರಾನ್ ತೈಲ ಸ್ವಲ್ಪ ಅಗ್ಗ. ಇರಾನ್‍ನಿಂದ ತೈಲ ಸಾಗಣೆಯೂ ಸುಲಭ. ವ್ಯಾಪಾರ ವಹಿವಾಟಿನಲ್ಲಿ ಎರಡೂ ದೇಶಗಳ ನಡುವೆ ಉತ್ತಮ ಹೊಂದಾಣಿಕೆ ಇರುವುದರಿಂದ ಸಮಸ್ಯೆಯೇ ಸೃಷ್ಟಿಯಾಗಿರಲಿಲ್ಲ. ಅಮೆರಿಕದ ಹಿಂದಿನ ಅಧ್ಯಕ್ಷ ಒಬಾಮಾ ಅಧಿಕಾರದ ಅವಧಿಯಲ್ಲಿಯೂ ಸಮಸ್ಯೆಗಳಿದ್ದವು; ಆದರೆ ಈಗಿನಷ್ಟಲ್ಲ. ಇರಾನ್ ದೇಶವನ್ನು ಒಂಟಿಯನ್ನಾಗಿ ಮಾಡಿ, ಅಲ್ಲಿನ ಆಡಳಿತಾರೂಢರನ್ನು ತಾವು ಹೇಳಿದಂತೆ ಕೇಳುವಂತೆ ಮಾಡುವುದು ಟ್ರಂಪ್ ಉದ್ದೇಶ. ಅದಕ್ಕಾಗಿಯೇ ಇರಾನ್ ಒಳಗೆ ಹೋಗುವ ಮತ್ತು ಹೊರಗೆ ಹೋಗುವ ಎಲ್ಲ ವಸ್ತುಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ. ಅಮೆರಿಕಕ್ಕೆ ಸಂಬಂಧಿಸಿದಂತೆ ಟ್ರಂಪ್ ಹಾಗೆ ಮಾಡಿದ್ದರೆ ಬೇರೆಯವರಿಗೆ ಅಷ್ಟು ತೊಂದರೆ ಆಗುತ್ತಿರಲಿಲ್ಲ. ಆದರೆ, ಯಾವ ದೇಶವೂ ಇರಾನ್ ಜೊತೆ ಬಾಂಧವ್ಯ ಇಟ್ಟುಕೊಳ್ಳುವಂತಿಲ್ಲ ಎಂಬುದು ಟ್ರಂಪ್ ನಿರ್ಬಂಧ.

ಈ ನಿರ್ಬಂಧಗಳಿಗೆ ಯೂರೋಪ್ ದೇಶಗಳು ಅಷ್ಟು ತಲೆಕೆಡಿಸಿಕೊಂಡಿಲ್ಲ. ಏಕೆಂದರೆ, ಇರಾನ್ ಮತ್ತು ಅವುಗಳ ನಡುವೆ ಅಂಥ ವಾಣಿಜ್ಯ ಸಂಬಂಧ ಇರಲಿಲ್ಲ. ಆದರೆ, ಏಷ್ಯಾದ ದೇಶಗಳಿಗೂ ಇರಾನ್‍ಗೂ ಉತ್ತಮ ವಾಣಿಜ್ಯ ಬಾಂಧವ್ಯ ಇತ್ತು. ಹೀಗಾಗಿಯೇ ಸಮಸ್ಯೆ ಉದ್ಭವವಾಗಿದೆ. ನ.4ರ ವೇಳೆಗೆ ಇರಾನ್ ಜೊತೆಗಿನ ಎಲ್ಲ ವಾಣಿಜ್ಯ ಬಾಂಧವ್ಯ ಕಟ್ ಆಗಬೇಕೆಂಬುದು ಅಮೆರಿಕದ ಲೆಕ್ಕಾಚಾರ. ಇರಾನ್‍ನಿಂದ ತರಿಸಿಕೊಳ್ಳುತ್ತಿದ್ದ ತೈಲಕ್ಕೆ ಬದಲಾಗಿ ಬೇರೆ ಮೂಲಗಳಿಂದ ಪೂರೈಸಲು ಎಲ್ಲ ಪ್ರಯತ್ನ ನಡೆಸುವುದಾಗಿ ಅಮೆರಿಕವು ಭಾರತಕ್ಕೆ ಭರವಸೆ ನೀಡಿದೆ. ಆದರೆ, ಅದನ್ನು ನಂಬುವುದು ಹೇಗೆ? ಅಷ್ಟಕ್ಕೂ ಜಾಗತಿಕ ತೈಲ ಸಂಪನ್ಮೂಲ ಅಮೆರಿಕದ ಹಿಡಿತದಲ್ಲಿಲ್ಲ. ಇರಾನ್‍ನಿಂದ ತೈಲ ಪೂರೈಕೆ ಕಡಿಮೆ ಆಗಿರುವುದರಿಂದ ಈಗಾಗಲೇ ತೈಲ ಬಿಕ್ಕಟ್ಟು ತಲೆದೋರಿದೆ. ತೈಲ ಬೆಲೆಗಳು ಏರುತ್ತಲೇ ಇವೆ. ಆದರೂ ತೈಲ ಉತ್ಪಾದನೆ ಹೆಚ್ಚಿಸಲು ತೈಲ ರಾಷ್ಟ್ರಗಳ ಒಕ್ಕೂಟ (ಒಪೆಕ್) ಒಪ್ಪಿಲ್ಲ. ಈ ಸ್ಥಿತಿಯಲ್ಲಿ ಜಗತ್ತಿನಾದ್ಯಂತ ಒಂದು ರೀತಿಯಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗುತ್ತಿದೆ.

ಇರಾನ್‍ನಿಂದ ಭಾರತ ನಿತ್ಯ ಆರು ಲಕ್ಷ ಬ್ಯಾರಲ್ ತೈಲ ಆಮದು ಮಾಡಿಕೊಳ್ಳುತ್ತಿತ್ತು. ಇಷ್ಟು ತೈಲವನ್ನು ಅಮೆರಿಕ ಎಲ್ಲಿಂದ ತಾನೇ ಪೂರೈಸಲು ಸಾಧ್ಯ ಎನ್ನುವ ಪ್ರಶ್ನೆ ಎದ್ದಿದೆ. ಅಮೆರಿಕದ ನಿರ್ಬಂಧಗಳ ಹಿನ್ನೆಲೆಯಲ್ಲಿ ಈಗಾಗಲೇ ದಕ್ಷಿಣ ಕೊರಿಯಾವು ಇರಾನ್‍ನಿಂದ ತೈಲ ಕೊಳ್ಳುವುದನ್ನು ನಿಲ್ಲಿಸಿದೆ. ಭಾರತದಂತೆ ಚೀನಾ ಕೂಡ ಅತಿ ಹೆಚ್ಚು ತೈಲವನ್ನು ಇರಾನ್‍ನಿಂದ ಕೊಳ್ಳುತ್ತಿದೆ. ಅಮೆರಿಕ ಮತ್ತು ಚೀನಾದ ನಡುವೆ ಈಗ ಬಾಂಧವ್ಯ ಹಳಸಿದೆ. ಈ ಸಂದರ್ಭದಲ್ಲಿ ಇರಾನ್ ಅನ್ನು ಅದು ದೂರ ಇಡುವ ಸಾಧ್ಯತೆ ಇಲ್ಲ. ತೈಲ ಕೊಳ್ಳುವುದನ್ನು ನಿಲ್ಲಿಸದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಅಮೆರಿಕ ಬೆದರಿಕೆ ಹಾಕಿದೆ. ಇಂಥ ಸನ್ನಿವೇಶದಲ್ಲಿ ನಿರ್ಬಂಧಗಳನ್ನು ಉಲ್ಲಂಘಿಸುವ ಸಾಧ್ಯತೆಯೇ ಹೆಚ್ಚು.

ಇಂಥ ಬೆಳವಣಿಗೆಗಳಾದರೆ ಜಗತ್ತು ಬಿಕ್ಕಟ್ಟಿಗೆ ಒಳಗಾಗುತ್ತದೆ. ಅದನ್ನು ಪರಿಹರಿಸುವುದು ಹೇಗೆ? ಇದೊಂದು ಸದ್ಯಕ್ಕೆ ಉತ್ತರ ಸಿಗದ ಪ್ರಶ್ನೆಯಾಗಿದೆ. ಪ್ರಜಾತಂತ್ರ ಮಾರ್ಗಗಳನ್ನು ಅನುಸರಿಸದ, ಸರ್ವಾಧಿಕಾರಿ ಮತ್ತು ರಾಷ್ಟ್ರೀಯವಾದಿ ಟ್ರಂಪ್ ಅಮೆರಿಕದ ಅಧ್ಯಕ್ಷರಾದದ್ದೇ ಈ ಬಿಕ್ಕಟ್ಟಿಗೆ ಕಾರಣ. ಅವರಿಂದ ಜಗತ್ತಿನ ಬಿಡುಗಡೆ ಸಾಧ್ಯವೇ?

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More