ಹೆಸರಾಂತ ಆರ್ಥಿಕ ತಜ್ಞರು ಕೇಂದ್ರ ಬಿಜೆಪಿ ಸರ್ಕಾರದ ಸಾಂಗತ್ಯ ತೊರೆದಿದ್ದೇಕೆ?

ಅರವಿಂದ್‌ ಸುಬ್ರಮಣಿಯನ್‌ ಹಾಗೂ ಅರವಿಂದ್‌ ಪನಗರಿಯಾ ಅವರನ್ನು ಆರ್ಥಿಕ ಇಲಾಖೆಯ ಪ್ರಮುಖ ಸ್ಥಾನಗಳಿಗೆ ನೇಮಿಸಿದ್ದು ಕೇಂದ್ರ ಸರ್ಕಾರ. ಸ್ಟಾರ್‌ ಆರ್ಥಿಕ ತಜ್ಞರೆಂದೇ ಗುರುತಿಸಿಕೊಂಡಿದ್ದ ಈರ್ವರೂ ತಮ್ಮ ಅಧಿಕಾರ ಅವಧಿಗೂ ಮುನ್ನ ರಾಜಿನಾಮೆ ನೀಡಿದ್ದರ ಹಿಂದಿನ ಕಾರಣಗಳು ಇಲ್ಲಿವೆ

ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್‌ ಸುಬ್ರಮಣಿಯನ್‌ ಅವರು, 'ಮೋದಿ-ಜೇಟ್ಲಿ ಆರ್ಥಿಕ ನೀತಿ'ಯ ಬಗ್ಗೆ ಬರೆದಿರುವ ಪುಸ್ತಕ ನವೆಂಬರ್‌ನಲ್ಲಿ ಹೊರಬರಲಿದ್ದು, ಮುಂದಿನ ದಿನಗಳಲ್ಲಿ ಹಲವು ಚರ್ಚೆ ಹುಟ್ಟುಹಾಕುವುದರಲ್ಲಿ ಸಂದೇಹವಿಲ್ಲ. 2014ರಲ್ಲಿ ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಅರವಿಂದ್‌ ಸುಬ್ರಮಣಿಯನ್‌ ಅವರನ್ನು ಮುಖ್ಯ ಆರ್ಥಿಕ ಸಲಹೆಗಾರರನ್ನಾಗಿ ನೇಮಿಸಲಾಗಿತ್ತು. 2017ರಲ್ಲಿ ಅರವಿಂದ್‌ ಸುಬ್ರಮಣಿಯನ್‌ ಅವರ ಅಧಿಕಾರಾವಧಿಯನ್ನು ಎರಡು ವರ್ಷಗಳ ಕಾಲ ವಿಸ್ತರಿಸಲಾಗಿತ್ತು. ಆದರೆ, ಅರವಿಂದ್‌ ಅವರು ತಮ್ಮ ಕಾರ್ಯವಧಿ ಪೂರ್ಣಗೊಳ್ಳುವ ಒಂದು ವರ್ಷಕ್ಕೂ ಮುನ್ನವೇ ರಾಜಿನಾಮೆ ನೀಡಿ ಸುದ್ದಿ ಮಾಡಿದ್ದರು. ಮುಂದಿನ ತಿಂಗಳು ಹೊರಬರುತ್ತಿರುವ, 'Of Counsel: The Challenges of the Modi-Jaitley Economy' ಎಂಬ ಅವರ ಪುಸ್ತಕವು, ಮೋದಿ-ಜೇಟ್ಲಿ ಆರ್ಥಿಕ ನಿಲುವುಗಳು ದೇಶದ ಆರ್ಥಿಕತೆಯ ಮೇಲೆ ಯಾವ ರೀತಿಯ ಪರಿಣಾಮ ಬೀರಿವೆ ಎಂಬುದರ ಮೇಲೆ ಬೆಳಕು ಚೆಲ್ಲಲಿದೆ ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯ.

ಈ ಹಿನ್ನೆಲೆಯಲ್ಲಿ, ಮೋದಿ ಅಧಿಕಾರಕ್ಕೆ ಬಂದ ನಂತರ ತಮ್ಮ ಕಾರ್ಯಾವಧಿಗೂ ಮುನ್ನ ರಾಜಿನಾಮೆ ನೀಡಿ ನಿರ್ಗಮಿಸಿದವರಲ್ಲಿ ಅರವಿಂದ್‌ ಸುಬ್ರಮಣಿಯನ್‌ ಒಬ್ಬರೇ ಅಲ್ಲ; ಕೇಂದ್ರ ನೀತಿ ಆಯೋಗದ ಉಪಾಧ್ಯಕ್ಷ ಅರವಿಂದ್‌ ಪನಗರಿಯಾ ಅವರೂ ತಮ್ಮ ಕಾರ್ಯಾವಧಿ ಮುಕ್ತಾಯಕ್ಕೂ ಮುನ್ನವೇ ರಾಜಿನಾಮೆ ನೀಡಿ ಅಮೆರಿಕಕ್ಕೆ ತೆರಳಿದ್ದರು. ಹಾಗೆ ನೋಡುವುದಾದರೆ, ಅರವಿಂದ್‌ ಸುಬ್ರಮಣಿಯನ್‌ ಹಾಗೂ ಅರವಿಂದ್‌ ಪನಗರಿಯಾ ಅವರನ್ನು ಆರ್ಥಿಕ ಇಲಾಖೆಯ ಪ್ರಮುಖ ಸ್ಥಾನಗಳಗೆ ನೇಮಿಸಿದ್ದು ಮೋದಿ ಸರ್ಕಾರ. ಸ್ಟಾರ್‌ ಆರ್ಥಿಕ ತಜ್ಞರೆಂದೇ ಗುರುತಿಸಿಕೊಂಡಿದ್ದ ಈರ್ವರೂ ಅಧಿಕಾರಾವಧಿಗೂ ಮುನ್ನವೇ ರಾಜಿನಾಮೆ ನೀಡಿದ್ದು ಮೋದಿ ಸರ್ಕಾರಕ್ಕೆ ಹಿನ್ನಡೆ ಎಂದೇ ಹೇಳಬಹುದು.

ಕೇಂದ್ರ ಸರ್ಕಾರ ತೆಗೆದುಕೊಂಡ ನೋಟ್‌ ಬ್ಯಾನ್‌, ಜಿಎಸ್‌ಟಿಗಳಂಥ ವಿವಾದಾತ್ಮಕ ನಿರ್ಧಾರಗಳ ಬಗ್ಗೆ ಅರವಿಂದ್‌ ಸುಬ್ರಮಣಿಯನ್‌ ಅವರಿಗೆ ಅಸಮಾಧಾನವಿತ್ತು ಎನ್ನಲಾಗಿದೆ. ಪ್ರಧಾನಿ ಮೋದಿ ಅವರು ನೋಟು ರದ್ದತಿಯಂತಹ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೂ ಮುನ್ನ, ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾದ ತಮ್ಮನ್ನು ಸಂಪರ್ಕಿಸಲಿಲ್ಲ, ತಾವು ಜಿಎಸ್‌ಟಿ ಬಗ್ಗೆ ನೀಡಿದ ಪ್ರಮುಖ ಸಲಹೆಗಳನ್ನು ಪರಿಗಣಿಸಲಿಲ್ಲ ಎಂಬುದರ ಬಗ್ಗೆ ಅರವಿಂದ್‌ ಸುಬ್ರಮಣಿಯನ್‌ ಆಕ್ರೋಶ ಹೊಂದಿದ್ದರು ಎನ್ನಲಾಗಿತ್ತು. ನೋಟು ರದ್ದತಿ ನಂತರ ಕುಸಿತ ಕಂಡಿದ್ದ ದೇಶದ ಆರ್ಥಿಕತೆಯನ್ನು ಬಲಗೊಳಿಸಲು ಮುಂದಾಗಿದ್ದ ಅರವಿಂದ್‌ ಅವರ ಸಲಹೆಗಳಿಗೆ ಸರ್ಕಾರವಾಗಲೀ, ಆರ್ಬಿಐ ಆಗಲೀ ಕಿವಿಗೊಡಲಿಲ್ಲ ಎಂಬ ಚರ್ಚೆಗಳು ಸಹ ಮುನ್ನೆಲೆಗೆ ಬಂದಿದ್ದವು. ಆ ಎಲ್ಲ ಬೆಳವಣಿಗಳ ನಂತರ ದೇಶದ ಆರ್ಥಿಕತೆಯಲ್ಲಿನ ಕುಸಿತ ಕಂಡು, ಹಣದುಬ್ಬರ, ಬೆಲೆ ಏರಿಕೆಗಳಂತಹ ಸಮಸ್ಯೆಗಳು ಉಲ್ಬಣಗೊಂಡವು. ಅದೇ ಸಮಯದಲ್ಲಿ ಅರವಿಂದ್ ಸುಬ್ರಮಣಿಯನ್ ಅವರು ವೈಯಕ್ತಿಕ ಕಾರಣ ನೀಡಿ ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ್ದರು.

ತಮ್ಮ ಕಾರ್ಯಾವಧಿಗೂ ಮುನ್ನವೇ ರಾಜಿನಾಮೆ ನೀಡಿದ ಮತ್ತೊಬ್ಬ ಆರ್ಥಿಕ ತಜ್ಞರೆಂದರೆ, ನೀತಿ ಆಯೋಗದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಅರವಿಂದ್‌ ಪನಗರಿಯಾ. ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ಪನಗರಿಯಾ ಅವರನ್ನು ಪ್ರಧಾನಿ ಮೋದಿಯವರೇ 2015ರಲ್ಲಿ ನೀತಿ ಆಯೋಗದ ಉಪಾಧ್ಯಕ್ಷರನ್ನಾಗಿ ನೇಮಿಸಿದ್ದರು. ತಮ್ಮ ಕಾರ್ಯಾವಧಿ ಪೂರ್ಣಗೊಳ್ಳುವುದಕ್ಕೂ ಮುನ್ನವೇ ಅವರು ರಾಜಿನಾಮೆ ನೀಡಿ ಆಶ್ಚರ್ಯ ಹುಟ್ಟಿಸಿದ್ದರು.

ತಾವು ಕಾರ್ಯನಿರ್ವಹಿಸುತ್ತಿರುವ ವಿಶ್ವವಿದ್ಯಾಲಯವು ರಜೆ ವಿಸ್ತರಿಸಲು ನಿರಾಕರಿಸಿದ ಕಾರಣ ನೀತಿ ಆಯೋಗಕ್ಕೆ ರಾಜಿನಾಮೆ ನೀಡುತ್ತಿರುವುದಾಗಿ ಪನಗರಿಯಾ ಹೇಳಿಕೊಂಡಿದ್ದರು. ಆದರೆ, ಅವರ ರಾಜಿನಾಮೆಗೆ ಬೇರೆಯದೇ ಕಾರಣಗಳಿವೆ ಎಂಬುದನ್ನು ಮಾಧ್ಯಮಗಳು ಊಹಿಸಿದ್ದವು. ಪನಗರಿಯಾ ಆಯ್ಕೆ ಬಗ್ಗೆ ಆರ್‌ಎಸ್‌ಎಸ್‌ ಅಸಮಾಧಾನ ಹೊಂದಿತ್ತು ಎನ್ನುವುದು ಒಂದು ವಾದವಾಗಿತ್ತು. ತಮಗೆ ಕ್ಯಾಬಿನೆಟ್‌ ದರ್ಜೆಯ ಹುದ್ದೆ ನೀಡಿದ್ದರೂ, ಸಚಿವ ಸಂಪುಟದ ಯಾವುದೇ ಸಭೆಗಳಿಗೆ ಆಹ್ವಾನ ನೀಡಿಲ್ಲ ಎಂಬುದರ ಬಗ್ಗೆ ಪನಗರಿಯಾ ಬೇಸರ ವ್ಯಕ್ತಪಡಿಸಿದ್ದರು ಎಂಬುದು ಮತ್ತೊಂದು ವಾದವಾಗಿತ್ತು. ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ ಪನಗರಿಯಾ ಮತ್ತೆ ಅಮೆರಿಕಗೆ ತೆರಳಿ ತಮ್ಮ ವೃತ್ತಿ ಮುಂದುವರಿಸಿದರು. ಅವರದ್ದೇ ಹಾದಿ ಅನುಸರಿಸಿದ ಅರವಿಂದ್‌ ಸುಬ್ರಮಣಿಯನ್‌, ಮತ್ತೆ ಅಮೆರಿಕದಲ್ಲಿ ನೆಲೆಸಲು ತೆರಳುತ್ತಿದ್ದಾರೆ.

ಈ ಇಬ್ಬರಿಗಿಂತ ಮುಂಚೆ ಮೋದಿ ಸರ್ಕಾರದ ಸಾಂಗತ್ಯ ತೊರೆದದ್ದು ಮುಖ್ಯ ಆರ್ಥಿಕ ಸಲಹೆಗಾರರು, ಆರ್‌ಬಿಐ ಬ್ಯಾಂಕ್‌ ಮುಖ್ಯಸ್ಥರೂ ಆಗಿ ಸೇವೆ ಸಲ್ಲಿಸುತ್ತಿದ್ದ ಪ್ರಮುಖ ಆರ್ಥಿಕ ತಜ್ಞ ರಘುರಾಮ್‌ ರಾಜನ್‌. ಆರ್‌ಬಿಐ ಮುಖ್ಯಸ್ಥ ಸ್ಥಾನದಲ್ಲಿ ಮುಂದುವರಿಯಬೇಕಿದ್ದ ಅವರನ್ನು ಕೇಂದ್ರ ಸರ್ಕಾರ ಪರಿಗಣನೆಗೆ ತೆಗೆದುಕೊಳ್ಳಲಿಲ್ಲ. ರಘುರಾಮ್‌ ರಾಜನ್‌ ಅವರು ತಮ್ಮನ್ನು ಹುದ್ದೆಯಲ್ಲಿ ಮುಂದುವರಿಸುವಂತೆ ಕೇಂದ್ರ ಸರ್ಕಾರವನ್ನು ಕೋರಲು ಇಲ್ಲ ಎಂಬುದು ಗಮನಾರ್ಹ ಅಂಶ.

ಇದನ್ನೂ ಓದಿ : ಮುಖ್ಯ ಆರ್ಥಿಕ ಸಲಹೆಗಾರ ಸ್ಥಾನಕ್ಕೆ ಅರವಿಂದ್ ಸುಬ್ರಮಣಿಯನ್‌ ರಾಜಿನಾಮೆ

ಭಾರತದ ಬ್ಯಾಂಕಿಂಗ್‌ ವ್ಯವಸ್ಥೆಯ ಅಭಿವೃದ್ಧಿಗೆ ಶ್ರಮಿಸಿದ್ದ ರಾಜನ್‌ ಅವರನ್ನು ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಿರ್ಲಕ್ಷಿಸಿತ್ತು ಎಂಬ ಮಾತುಗಳು ಕೇಳಿಬಂದಿದ್ದವು. “ರಾಜನ್‌ ಥರದ ಅನಿವಾಸಿ ಭಾರತೀಯ ದೇಶದ ಆರ್ಥಿಕತೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವೇ?” ಎಂಬ ಪ್ರಶ್ನೆಯನ್ನು ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್‌ ಸ್ವಾಮಿ ಅವರು ಸಾರ್ವಜನಿಕವಾಗಿಯೇ ಎತ್ತಿದ್ದರು. ಯುಪಿಎ ಸರ್ಕಾರದ ಅವಧಿಯಲ್ಲಿ ಮುಖ್ಯ ಆರ್ಥಿಕ ಸಲಹೆಗಾರ ಮತ್ತು ಆರ್‌ಬಿಐ ಮುಖ್ಯಸ್ಥರಾಗಿ ನೇಮಗೊಂಡಿದ್ದ ರಾಜನ್‌ ಬಗ್ಗೆ ಮೋದಿ ಸರ್ಕಾರ ಒಲವು ಹೊಂದಿರಲಿಲ್ಲ ಎಂಬುದು ಮೇಲ್ನೋಟಕ್ಕೇ ಕಂಡುಬಂದಿತ್ತು.

ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ಮೂವರು ಪ್ರಮುಖ ಆರ್ಥಿಕ ತಜ್ಞರನ್ನು ಕಳೆದುಕೊಂಡ ಮೋದಿ ನೇತೃತ್ವದ ಸರ್ಕಾರ, ದೇಶವನ್ನು ಆರ್ಥಿಕವಾಗಿ ಮುನ್ನಡೆಸುವಲ್ಲಿ ಎಡವಿದ್ದು ಗೋಚರಿಸುತ್ತಿದೆ. ತಾವೇ ನೇಮಿಸಿದ್ದ ಆರ್ಥಿಕ ತಜ್ಞರು ತಮ್ಮ ಅಧಿಕಾರಾವಧಿಗೂ ಮುನ್ನ ರಾಜಿನಾಮೆ ನೀಡಿದ್ದರ ಬಗ್ಗೆ ಪ್ರಧಾನಿ ಮೋದಿ ಇಲ್ಲಿವರೆಗೆ ಯಾವುದೇ ಹೇಳಿಕೆ ನೀಡಲ್ಲವೆಂಬುದು ಮಾತ್ರ ವಿಪರ್ಯಾಸ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More