ಇಂದಿನ ಡೈಜೆಸ್ಟ್‌ | ನೀವು ಗಮನಿಸಲೇಬೇಕಾದ 9 ಪ್ರಮುಖ ಸುದ್ದಿಗಳು

ನೀವು ಗಮನಿಸಲೇಬೇಕಾದ ಇಂದಿನ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ನೋಟ

ಕಾಂಗ್ರೆಸ್ ಜೊತೆ ಅಭಿವೃದ್ಧಿಯ ಮುಕ್ತ ಚರ್ಚೆಗೆ ಶಾ ಸವಾಲು

ಕೇಂದ್ರದಲ್ಲಿ ಪ್ರಧಾನಿ ಮೋದಿಯವರ ಐದು ವರ್ಷದ ಆಡಳಿತ, ಚತ್ತೀಸ್‌ಗಢದ ರಮಣ್ ಸಿಂಗ್ ಅವರ ೧೫ ವರ್ಷದ ಆಡಳಿತ ಹಾಗೂ ಕಾಂಗ್ರೆಸ್ ಸರ್ಕಾರ ೫೫ ವರ್ಷಗಳ ಅಭಿವೃದ್ಧಿ ಸಾಧನೆಯ ಪರಾಮರ್ಶೆಗೆ ಕಾಂಗ್ರೆಸ್‌ ಅನ್ನು ಮುಕ್ತ ಚರ್ಚೆಗೆ ಕರೆಯುತ್ತೇನೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೊಸ ಸವಾಲು ಹಾಕಿದ್ದಾರೆ. ಶುಕ್ರವಾರ ಚತ್ತೀಸ್‌ಗಢದಲ್ಲಿ ಆಯೋಜಿಸಿಜಿದ್ದ ಅಟಲ್ ವಿಕಾಸ್ ಯೋಜನಾ ರ್ಯಾಲಿಯನ್ನು ಉದ್ದೇಶಿಸಿ ಅಮಿತ್ ಶಾ ಹೀಗೆ ಮಾತಾಡಿದ್ದಾರೆ.

ರಾಜನಾಥ್‌ ಸಿಂಗ್‌, ನಿತಿನ್‌ ಗಡ್ಕರಿ ಭೇಟಿ ಮಾಡಿದ ಸಿಎಂ ಎಚ್‌ಡಿಕೆ

ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರು, ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್, ರಾಷ್ಟ್ರೀಯ ಹೆದ್ದಾರಿ ಹಾಗೂ ಜಲ ಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರನ್ನು ಶುಕ್ರವಾರ ಭೇಟಿ ಮಾತುಕತೆ ನಡೆಸಿದರು. ಕೊಡಗಿನಲ್ಲಿ ಅತಿವೃಷ್ಟಿಯಿಂದ ಉಂಟಾದ ನಷ್ಟದ ವಿವರಗಳನ್ನು ರಾಜನಾಥ್‌ ಸಿಂಗ್‌ ಅವರ ಗಮನಕ್ಕೆ ತಂದಿರುವ ಕುಮಾರಸ್ವಾಮಿ, ಮೇಕೆದಾಟು ಯೋಜನೆ ಹಾಗೂ ಮಳೆಯಿಂದ ಹಾಳಾಗಿರುವ ರಾಜ್ಯದ ರಸ್ತೆಗಳ ಮರುನಿರ್ಮಾಣಕ್ಕೆ ಅಗತ್ಯ ನೆರವು ನೀಡುವಂತೆ ಗಡ್ಕರಿ ಅವರಿಗೆ ಮನವಿ ಮಾಡಿದ್ದಾರೆ. ರಾಜನಾಥ್ ಸಿಂಗ್‌ ಭೇಟಿ ಸಂದರ್ಭದಲ್ಲಿ ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡ ಸಹ ಉಪಸ್ಥಿತರಿದ್ದರು.

ಅಮೆರಿಕ ನಿರ್ಬಂಧದ ನಡುವೆಯೂ ಇರಾನ್‌ನಿಂದ ತೈಲ ಆಮದು ಮುಂದುವರಿಕೆ

ಇರಾನ್ ದೇಶದ ವಿರುದ್ಧ ಅಮೆರಿಕ ನಿರ್ಬಂಧ ಹೇರಿದ್ದರೂ ಭಾರತವು ತೈಲ ಆಮದು ಮುಂದುವರಿಸಲು ನಿರ್ಧರಿಸಿದೆ. ಆದರೆ, ತೈಲದ ಬಿಲ್ ಡಾಲರ್ ಬದಲಿಗೆ ರುಪಾಯಿ ಮೂಲಕ ಪಾವತಿ ಮಾಡಲಿದೆ. ಮಂಗಳೂರು ರಿಫೈನರೀಸ್ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಡೆಟ್ (ಎಂಆರ್ಪಿಎಲ್) ನವೆಂಬರ್ ತಿಂಗಳಲ್ಲಿ 1.25 ದಶಲಕ್ಷ ಟನ್ ಕಚ್ಚಾ ತೈಲ ಆಮದು ಮಾಡಿಕೊಳ್ಳಲು ಒಪ್ಪಂದ ಮಾಡಿಕೊಂಡಿದೆ. ಅಮೆರಿಕ ಹೇರಿರುವ ನಿರ್ಬಂಧವು ನ.4ರಿಂದ ಜಾರಿಯಾಗುತ್ತಿದೆ.

ಬೆಂಗಳೂರು ಮೆಟ್ರೋದಲ್ಲಿ ಆಂಬ್ಯುಲೆನ್ಸ್ ಸೌಲಭ್ಯ

ನಮ್ಮ ಮೆಟ್ರೋ ಪ್ರಯಾಣಿಕರ ಆರೋಗ್ಯ ದೃಷ್ಟಿಯಿಂದ ಮೆಟ್ರೋನಲ್ಲಿ ಆಂಬ್ಯುಲೆನ್ಸ್ ಸೇವೆ ಆರಂಭಗೊಂಡಿದ್ದು, ಪ್ರಸ್ತುತ ಮೆಜೆಸ್ಟಿಕ್‌ನ ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ ವ್ಯಾನ್ ಮತ್ತು ಬೈಕ್ ಆಂಬ್ಯುಲೆನ್ಸ್ ಸೇವೆ ಜಾರಿಯಲ್ಲಿದೆ. “ಪ್ರತಿನಿತ್ಯ ಲಕ್ಷಕ್ಕೂ ಅಧಿಕ ಸಾರ್ವಜನಿಕರು ಮೆಟ್ರೋ ರೈಲಿನಲ್ಲಿ ಸಂಚರಿಸುತ್ತಿದ್ದು, ಈವರೆಗೆ ಆರೋಗ್ಯ ತುರ್ತು ಪರಿಸ್ಥಿತಿಗೆ ಸಂಬಂಧಿಸಿದಂತೆ ಹಲವು ಘಟನೆಗಳು ನಗರದ ಕೆಲವು ನಿಲ್ದಾಣಗಳಲ್ಲಿ ಉಂಟಾಗಿವೆ. ಇಂತಹ ಕ್ಷಣಗಳಲ್ಲಿ ನಾವು 108 ಆಂಬ್ಯುಲೆನ್ಸ್ ಮೊರೆಹೋದರೆ ಆ ಆಂಬ್ಯುಲೆನ್ಸ್‌ಗಳು ಸ್ಥಳ ತಲುಪವಲ್ಲಿ ಹೆಚ್ಚು ಸಮಯವಾಗುತ್ತದೆ. ಪ್ರಯಾಣಿಕರ ಹಿತದೃಷ್ಟಿಯಿಂದ ಆಂಬ್ಯುಲೆನ್ಸ್ ಸೇವೆ ಕಲ್ಪಿಸಲಾಗಿದೆ,” ಎಂದು ನಮ್ಮ ಮೆಟ್ರೋ ಉನ್ನತ ಅಧಿಕಾರಿಗಳು ಹೇಳಿದ್ದಾರೆ.

ಶಬರಿಮಲೆ ದೇವಾಲಯಕ್ಕೆ 500 ಮಹಿಳಾ ಪೊಲೀಸರ ನಿಯೋಜನೆಗೆ ಚಿಂತನೆ

ಶಬರಿಮಲೆ ದೇವಾಲಯಕ್ಕೆ ಎಲ್ಲ ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸಿರುವ ಸುಪ್ರೀಂ ಕೋರ್ಟ್ ಆದೇಶದ ಬೆನ್ನಲ್ಲೇ ಕೇರಳ ಸರ್ಕಾರ, ಮಹಿಳೆಯರಿಗೆ ಸೂಕ್ತ ಭದ್ರತೆ ಕಲ್ಪಿಸುವ ಉದ್ದೇಶದಿಂದ 500 ಮಹಿಳಾ ಪೊಲೀಸರನ್ನು ನಿಯೋಜಿಸಲು ನಿರ್ಧರಿಸಿದೆ. ಈ ಕುರಿತಂತೆ ಮಾಹಿತಿ ನೀಡಿರುವ ಕೇರಳ ಪೊಲೀಸ್ ಮಹಾನಿರ್ದೇಶಕ ಲೋಕನಾಥ್ ಬೆಹ್ರಾ, “ಶಬರಿಮಲೆಯಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿ ನಿಯೋಜಿಸಲು ಸಿದ್ಧತೆ ನಡೆಸಿದ್ದು, ಯಾವುದೇ ಜಾತಿ, ಧರ್ಮ, ರಾಜಕೀಯವಿಲ್ಲದೆ ಪ್ರತಿಯೊಬ್ಬರೂ ತಮ್ಮ ಕರ್ತವ್ಯ ನಿರ್ವಹಿಸಬೇಕಿದೆ,” ಎಂದಿದ್ದಾರೆ.

ರಜನೀಕಾಂತ್‌ ‘ಪೆಟ್ಟಾ’ ನೂತನ ಪೋಸ್ಟರ್‌

ಕಾರ್ತಿಕ್ ಸುಬ್ಬರಾಜ್‌ ನಿರ್ದೇಶನದಲ್ಲಿ ರಜನೀಕಾಂತ್‌ ನಟಿಸುತ್ತಿರುವ ‘ಪೆಟ್ಟಾ’ ತಮಿಳು ಚಿತ್ರದ ನೂತನ ಪೋಸ್ಟರ್ ಬಿಡುಗಡೆಯಾಗಿದೆ. ಸಾಂಪ್ರದಾಯಿಕ ಲುಕ್‌ನಲ್ಲಿ ರಜನೀಕಾಂತ್‌ ಗಮನ ಸೆಳೆಯುತ್ತಿದ್ದು, ಇದು ಅವರ 165ನೇ ಸಿನಿಮಾ. ಸನ್‌ ಪಿಕ್ಚರ್ಸ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ವಿಜಯ್ ಸೇತುಪತಿ, ಬಾಬ್ಬಿ ಸಿಂಹ, ನವಾಜುದ್ದೀನ್‌ ಸಿದ್ದಿಕಿ, ಸಿಮ್ರನ್‌, ತ್ರಿಷಾ ನಟಿಸುತ್ತಿದ್ದಾರೆ. ಸಂಗೀತ ಸಂಯೋಜನೆ ಅನಿರುದ್ಧ ರವಿಚಂದ್ರನ್‌ ಅವರದು. ‘ಪೆಟ್ಟಾ’ ಚಿತ್ರಕ್ಕೂ ಮುನ್ನ ರಜನೀಕಾಂತ್‌ರ ‘2.0’ ನವೆಂಬರ್ 29ರಂದು‌ ತೆರೆಕಾಣಲಿದೆ. ಶಂಕರ್ ನಿರ್ದೇಶನದ ಈ ಸಿನಿಮಾ 2010ರ ಬ್ಲಾಕ್‌ಬಸ್ಟರ್‌ ‘ಎಂಧಿರನ್‌’ ಸರಣಿ ಚಿತ್ರ.

ನ್ಯಾಯಮೂರ್ತಿ ಕ್ಯಾವನಾವ್ ಪ್ರಕರಣ; ಶನಿವಾರ ವಿಶ್ವಾಸಮತ

ಖಾಲಿ ಆಗಲಿರುವ ಅಮೆರಿಕದ ಸುಪ್ರೀಂ ಕೋರ್ಟ್‍ನ ನ್ಯಾಯಮೂರ್ತಿಯ ಒಂದು ಸ್ಥಾನಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೂಚಿಸಿರುವ ಬ್ರೆಟ್ ಕ್ಯಾವನಾವ್ ಅವರನ್ನು ಆಯ್ಕೆ ಮಾಡುವ ಕುರಿತಾಗಿ ಹಾಗೂ ಅವರ ವಿರುದ್ಧದ ಆರೋಪಗಳಿಗೆ ಕೊನೆ ಹಾಡಲು ಶನಿವಾರ ಸೆನೆಟ್‌ನಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. ಅವರ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪವನ್ನು ಈಚೆಗೆ ಎಫ್‍ಬಿಐ ತನಿಖೆಗೆ ಒಪ್ಪಿಸಲಾಗಿತ್ತು. ಎಫ್‌ಬಿಐ ಕೂಡ ಕ್ಯಾವನಾವ್ ಅವರ ವಿರುದ್ಧವೇ ಆರೋಪ ಪಟ್ಟಿ ಸಲ್ಲಿಸಿದೆ. ಎಲ್ಲರ ಕಣ್ಣು ಈಗ ಶನಿವಾರ ನಡೆಯಲಿರುವ ಮತದಾನದತ್ತ ಕಣ್ಣು ಹೊರಳಿದೆ.

ಜಪಾನ್ ಓಪನ್ ಸೆಮಿಫೈನಲ್‌ಗೆ ಕೀ ನಿಶಿಕೊರಿ

ಪ್ರಶಸ್ತಿ ಫೇವರಿಟ್ ಕೀ ನಿಶಿಕೊರಿ ತವರಿನಲ್ಲಿ ನಡೆಯುತ್ತಿರುವ ಜಪಾನ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಸೆಮಿಫೈನಲ್ ತಲುಪಿದ್ದಾರೆ. ಇಂದು ನಡೆದ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ನಿಶಿಕೊರಿ ಸ್ಟೆಫಾನಸ್ ಸಿಸಿಪಾಸ್ ವಿರುದ್ಧ ೬-೩, ೬-೩ ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಅಪಾಯಿಕಾರಿ ಗ್ರೀಕ್ ಆಟಗಾರನ ವಿರುದ್ಧ ಆಕ್ರಮಣಕಾರಿ ಆಟವಾಡಿದ ನಿಶಿಕೊರಿ, ಕೇವಲ ೮೨ ನಿಮಿಷಗಳಲ್ಲೇ ಗೆಲುವು ಸಾಧಿಸಿದರು. ೨೦೧೨, ೨೦೧೪ರ ಜಪಾನ್ ಓಪನ್ ಚಾಂಪಿಯನ್ ಇದೀಗ ಮುಂದಿನ ಸುತ್ತಿನಲ್ಲಿ ರಿಚರ್ಡ್ ಗ್ಯಾಸ್ಕೆಟ್ ವಿರುದ್ಧ ಸೆಣಸಲಿದ್ದು, ಅವರನ್ನು ಮಣಿಸುವ ಮೂಲಕ ಫೈನಲ್‌ಗೆ ಅರ್ಹತೆ ಪಡೆಯಬೇಕಿದೆ. ಫ್ರಾನ್ಸ್‌ನ ಗ್ಯಾಸ್ಕೆಟ್ ಮತ್ತೊಂದು ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಕೆವಿನ್ ಆಂಡರ್ಸನ್ ವಿರುದ್ಧ ೭-೬ (೮/೬), ೭-೬ (೭/೪) ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು.

ನಾಲ್ಕರ ಘಟ್ಟಕ್ಕೆ ಧಾವಿಸಿದ ವೋಜ್ನಿಯಾಕಿ

ಈ ಋತುವಿನ ಆಸ್ಟ್ರೇಲಿಯಾ ಓಪನ್ ಚಾಂಪಿಯನ್ ಕರೋಲಿನ್ ವೋಜ್ನಿಯಾಕಿ ಚೀನಾ ಓಪನ್ ಪಂದ್ಯಾವಳಿಯಲ್ಲಿ ನಾಲ್ಕರ ಘಟ್ಟಕ್ಕೆ ಧಾವಿಸಿದರು. ಇಂದು ನಡೆದ ವನಿತೆಯರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ವೋಜ್ನಿಯಾಕಿ ಜೆಕ್ ಆಟಗಾರ್ತಿ ಕಟರಿನಾ ಸಿನಿಯಕೋವಾ ವಿರುದ್ಧ ೬-೨, ೬-೨ ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಸಂಪೂರ್ಣ ಆಕ್ರಮಣಕಾರಿ ಆಟವಾಡಿದ ವೋಜ್ನಿಯಾಕಿ ಸಿನಿಯಕೋವಾ ವಿರುದ್ಧ ಸುಲಭ ಜಯ ದಾಖಲಿಸಿದರು. ಮೂರು ಡಬಲ್ ಫಾಲ್ಟ್ ಎಸಗಿದ ಜೆಕ್ ಆಟಗಾರ್ತಿ ವೋಜ್ನಿಯಾಕಿಗೆ ಸುಲಭ ಗೆಲುವಿನ ರಹದಾರಿ ತೆರೆದಿಟ್ಟರು. ನಾಲ್ಕು ಬ್ರೇಕ್ ಪಾಯಿಂಟ್ಸ್ ಗಳಿಸಿದ ವೋಜ್ನಿಯಾಕಿಗೆ ಪ್ರತಿಯಾಗಿ ಸಿನಿಯಕೋವಾ ಕೇವಲ ಒಂದು ಪಾಯಿಂಟ್ಸ್ ಪಡೆಯಲೂ ವಿಫಲವಾದರು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More