ರೆಪೊದರ ಯಥಾಸ್ಥಿತಿ; ಅಚ್ಚರಿ ಮೂಡಿಸಿದ ಆರ್ಬಿಐಗೆ ಆಘಾತ ನೀಡಿದ ಮಾರುಕಟ್ಟೆ

ಎಲ್ಲರ ಲೆಕ್ಕಾಚಾರ ತಲೆಕೆಳಗು ಮಾಡಿದ ಆರ್ಬಿಐ, ರೆಪೊದರವನ್ನು ಯಥಾಸ್ಥಿತಿ ಕಾಯ್ದುಕೊಂಡಿದೆ. ಈ ಅಚ್ಚರಿಯ ನಡೆಗೆ ಷೇರುಪೇಟೆ, ಬಂಡವಾಳ ಪೇಟೆಗಳು ಆಘಾತ ನೀಡಿವೆ. ರುಪಾಯಿ 74ರ ಗಡಿ ದಾಟಿದರೆ, ಷೇರುಪೇಟೆಯಲ್ಲಿ ರಕ್ತದೋಕುಳಿ ನಡೆದಿದೆ. ಆರ್ಬಿಐ ನಡೆಗೆ ಕಾರಣವೇನು?

ಭಾರತೀಯ ರಿಸರ್ವ್ ಬ್ಯಾಂಕ್ ರೆಪೋದರ ಯಥಾಸ್ಥಿತ ಕಾಯ್ದುಕೊಂಡಿದೆ. ಹಿಂದಿನ ಎರಡು ದ್ವೈಮಾಸಿಕ ಹಣಕಾಸು ಪರಾಮರ್ಶೆ ವೇಳೆ ತಲಾ ಶೇ.0.25ರಷ್ಟು ರೆಪೋದರ ಏರಿಸಿತ್ತು. ಪ್ರಸ್ತುತ ರೆಪೋದರ ಶೇ.6.50ರಷ್ಟಿದೆ. ರೆಪೋದರ (ಬ್ಯಾಂಕುಗಳು ಆರ್ಬಿಐನಿಂದ ಪಡೆಯುವ ಸಾಲಕ್ಕೆ ವಿಧಿಸುವ ಬಡ್ಡಿದರ) ಯಥಾಸ್ಥಿತಿ ಕಾಯ್ದುಕೊಳ್ಳುವ ನಿರ್ಧಾರ ಇಡೀ ಪೇಟೆಯಲ್ಲಿ ಅಚ್ಚರಿ ಮತ್ತು ಆಘಾತ ಮೂಡಿಸಿದೆ.

ಬಹುತೇಕ ಆರ್ಥಿಕತಜ್ಞರು ರೆಪೋದರ ಶೇ.0.25-0.50 ರಷ್ಟು ಏರಿಕೆ ಆಗುವ ನಿರೀಕ್ಷೆಯಲ್ಲಿದ್ದರು. ಈ ಹಂತದಲ್ಲಿ ರೆಪೋದರ ಏರಿಕೆ ಮಾಡುವುದು ಅತ್ಯಗತ್ಯವೂ ಆಗಿತ್ತು. ಆದರೆ, ಸತತ ಮೂರನೇ ಬಾರಿಗೆ ಬಡ್ಡಿದರ ಏರಿಕೆ ಮಾಡಿದರೆ ಆರ್ಥಿಕತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ.

ಆದರೆ, ಹಣಕಾಸು ನೀತಿ ಸಮಿತಿ ಸಭೆ ನಂತರ ನಿರ್ಧಾರ ಪ್ರಕಟಿಸಿದ ಆರ್ಬಿಐ ಗವರ್ನರ್ ಊರ್ಜಿತ್ ಪಟೇಲ್, “ಬಡ್ಡಿದರ ಕುರಿತಂತೆ ಆರ್ಬಿಐ ತನ್ನ ನಿಲವು ಬದಲಿಸಿದೆ. ಸದ್ಯಕ್ಕೆ ತಟಸ್ಥ ನಿಲವು ಬಿಟ್ಟು, ಮಾರುಕಟ್ಟೆ ಏರಿಳಿತಗಳ ಮಾಪನಕ್ಕನುಗುಣವಾಗಿ ನಗದು ಹರಿವು ಬಿಗಿಗೊಳಿಸುವ ನಿಲವು ತಳೆಯಲಾಗಿದೆ. ಅಗತ್ಯ ಬಿದ್ದರೆ ಬಡ್ಡಿದರ ಕಡಿತ ಮಾಡಲೂಬಹುದು,” ಎಂದು ಹೇಳಿದ್ದಾರೆ.

ಆದರೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರುತ್ತಿರುವ ಕಚ್ಚಾತೈಲ ದರ, ತತ್ಪರಿಣಾಮ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಗಳ ಸಾರ್ವಕಾಲಿಕ ಏರಿಕೆ, ಈ ಏರಿಕೆಯಿಂದಾಗಿ ಪೂರಕ ಸರುಕು ಸೇವೆಗಳ ದರವೂ ಏರಿದೆ. ಇದು ಹಣದುಬ್ಬರ ಹೆಚ್ಚಲು ಕಾರಣವಾಗಬಹುದು. ಅಲ್ಲದೆ, ರುಪಾಯಿ ಸತತ ಕುಸಿಯುತ್ತಿದೆ. ಈ ಹಂತದಲ್ಲಿ ನಗದು ಹರಿವು ನಿಯಂತ್ರಿಸದಿದ್ದರೆ ಮತ್ತಷ್ಟು ಹಣದುಬ್ಬರ ಏರಬಹುದು, ಏರಿದ ಹಣದುಬ್ಬರವು ಅಲ್ಪಾವಧಿ ಮತ್ತು ದೀರ್ಘಾವಧಿಯಲ್ಲಿ ಬೇರೆ-ಬೇರೆ ರೂಪದಲ್ಲಿ ಆರ್ಥಿಕ ಅಭಿವೃದ್ಧಿಗೆ ಅಡ್ಡಿಯಾಗಬಹುದು. ಈ ಕಾರಣಗಳ ಹಿನ್ನೆಲೆಯಲ್ಲಿ ಬಹುತೇಕ ಆರ್ಥಿಕ ತಜ್ಞರು ರೆಪೋದರ ಏರಿಕೆ ಮಾಡುವ ನಿರೀಕ್ಷೆಯಲ್ಲಿದ್ದರು. ಷೇರು ಪೇಟೆ ಮತ್ತು ಬಂಡವಾಳ ಪೇಟೆಯೂ ರೆಪೋದರ ಏರಿಕೆಯ ನಿರೀಕ್ಷೆಯಲ್ಲಿದ್ದವು. ನಿರೀಕ್ಷೆ ಹುಸಿಯಾಗುತ್ತಿದ್ದಂತೆ ಷೇರುಪೇಟೆಯಲ್ಲಿ ತೀವ್ರ ಕುಸಿತವಾಗಿದೆ. ರುಪಾಯಿ ತ್ವರಿತವಾಗಿ ಕುಸಿದು 74ರ ಗಡಿ ದಾಟಿದೆ.

ಗವರ್ನರ್ ಊರ್ಜಿತ್ ಪಟೇಲ್ ಹೇಳಿದ್ದೇನು?: “ಹಣದುಬ್ಬರವು ಆತಂಕಪಡುವ ಮಟ್ಟದಲ್ಲಿಲ್ಲ. ಆಗಸ್ಟ್ ತಿಂಗಳಲ್ಲಿ ಹಣದುಬ್ಬರ ತಗ್ಗಿದೆ. ಹೀಗಾಗಿ ಬಡ್ಡಿದರ ಯಥಾಸ್ಥಿತಿ ಕಾಯ್ದುಕೊಳ್ಳುವ ನಿರ್ಧಾರ ಕೈಗೊಳ್ಳಲಾಗಿದೆ. ಜಾಗತಿಕ ರಾಜಕೀಯ ಮತ್ತು ಆರ್ಥಿಕ ಅಸ್ಥಿರತೆಗಳ ಹಿನ್ನೆಲೆಯಲ್ಲಿ ಕಚ್ಚಾ ತೈಲ ದರ ಏರಿಕೆ ಆಗಬಹುದು. ಹೀಗಾಗಿ, ತಟಸ್ಥ ನಿಲವು ಬದಲಾಯಿಸಲಾಗಿದೆ,” ಎಂದು ಗವರ್ನರ್ ಊರ್ಜಿತ್ ಪಟೇಲ್ ಹಣಕಾಸು ನೀತಿ ಸಮಿತಿ ನಿಲವನ್ನು ಸಮರ್ಥಿಸಿಕೊಂಡರು.

ಪ್ರಸಕ್ತ ವಿತ್ತೀಯ ವರ್ಷದ ಎರಡನೇ ತ್ರೈಮಾಸಿಕದ ಹಣದುಬ್ಬರ ಅಂದಾಜನ್ನು ಶೇ.4ಕ್ಕೆ ಮತ್ತು ಪ್ರಸಕ್ತ ವಿತ್ತೀಯ ವರ್ಷದ ಉತ್ತರಾರ್ಧದಲ್ಲಿನ ಹಣದುಬ್ಬರ ಅಂದಾಜನ್ನು ಶೇ.3.9-4.5ಕ್ಕೆ ತಗ್ಗಿಸಿದೆ. 2019-20ನೇ ಸಾಲಿನ ವಿತ್ತೀಯ ವರ್ಷದ ಮೊದಲ ತ್ರೈಮಾಸಿಕದ ಹಣದುಬ್ಬರವನ್ನು ಶೇ.4.8ರಷ್ಟೆಂದು ಅಂದಾಜು ಮಾಡಿದ್ದು, ಏರುಹಾದಿಯಲ್ಲಿ ಸಾಗುವ ಹೆಚ್ಚಿನ ಸಾಧ್ಯತೆಯನ್ನಿಟ್ಟುಕೊಂಡಿದೆ. ಆಗಸ್ಟ್ ತಿಂಗಳ ಹಣಕಾಸು ನೀತಿ ಪರಾಮರ್ಶೆ ವೇಳೆ ಎರಡನೇ ತ್ರೈಮಾಸಿಕದ ಚಿಲ್ಲರೆ ದರ ಹಣದುಬ್ಬರ ಶೇ.4.2 ಮತ್ತು ಪ್ರಸಕ್ತ ವಿತ್ತೀಯ ವರ್ಷದ ಉತ್ತರಾರ್ಧದಲ್ಲಿ ಶೇ.4.8 ಮತ್ತು ಮುಂದಿನ ವರ್ಷದ ಮೊದಲ ತ್ರೈಮಾಸಿಕದ ಹಣದುಬ್ಬರ ಶೇ.5ರಷ್ಟು ಎಂದು ಅಂದಾಜು ಮಾಡಿತ್ತು.

ಪ್ರಸಕ್ತ ವಿತ್ತೀಯ ವರ್ಷದ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಅಭಿವೃದ್ಧಿ ಶೇ.7.4ರಷ್ಟರ ಗುರಿಯನ್ನು, ಪ್ರಸಕ್ತ ವರ್ಷದ ವಿತ್ತೀಯ ಕೊರತೆಯ ಶೇ.3.3ರ ಮಿತಿಯನ್ನು ಯಥಾಸ್ಥಿತಿ ಕಾಯ್ದುಕೊಂಡಿದೆ. ಜುಲೈ ತಿಂಗಳಲ್ಲಿ ಶೇ.4.17ರಷ್ಟಿದ್ದ ಚಿಲ್ಲರೆದರ ಹಣದುಬ್ಬರವು ಆಗಸ್ಟ್‌ನಲ್ಲಿ ಶೇ.3.69ಕ್ಕೆ ತಗ್ಗಿತ್ತು.

ಆರ್ಬಿಐ ರೆಪೋದರ ಪ್ರಕಟಿಸುತ್ತಿದ್ದಂತೆ ರುಪಾಯಿ 50 ಪೈಸೆ ಕುಸಿಯಿತು. ಅಲ್ಲದೆ, ನಿರ್ಣಾಯಕ ಮಟ್ಟವಾದ 74ರ ಗಡಿ ದಾಟಿ ಮತ್ತೊಂದು ಸಾರ್ವಕಾಲಿಕ ಕನಿಷ್ಠ ಮಟ್ಟ ದಾಖಲಿಸಿತು.

ಅತ್ತ, ಷೇರುಪೇಟೆಯಲ್ಲಿ ರಕ್ತದೋಕುಳಿಯೇ ನಡೆಯಿತು. ದಿನದ ವಹಿವಾಟಿನಲ್ಲಿ 300 ಅಂಶ ಕುಸಿತದೊಂದಿಗೆ ವಹಿವಾಟು ನಡೆಸುತ್ತಿದ್ದ ಸೆನ್ಸೆಕ್ಸ್ ರೆಪೋದರ ಪ್ರಕಟಿಸಿದ ತಕ್ಷಣ 600 ಅಂಶ ಕುಸಿದು ದಿನದ ವಹಿವಾಟಿನಲ್ಲಿ 900 ಅಂಶ ಕುಸಿತ ದಾಖಲಿಸಿತು. ನಿಫ್ಟಿ 300 ಅಂಶಗಳಷ್ಟು ಕುಸಿಯಿತು. ಬಾಂಡ್ ಮಾರುಕಟ್ಟೆಯಲ್ಲೂ 10 ವರ್ಷಗಳ ಬಾಂಡ್‌ಗಳ ಗಳಿಕೆಯು ಶೇ.1.3ರಷ್ಟು ಕುಸಿದು ಶೇ.8.05ಕ್ಕೆ ಸ್ಥಿರಗೊಂಡಿತು.

ಇದನ್ನೂ ಓದಿ : ಬಡ್ಡಿದರ ತಗ್ಗಿಸಲು ಆರ್‌ಬಿಐ ಮೇಲೆ ಒತ್ತಡ ಹೇರುತ್ತಿದೆಯೇ ಕೇಂದ್ರ ಸರ್ಕಾರ?

ಪ್ರಕಟಿತ ಅಂದಾಜುಗಳ ಮೇಲೆ, ಪರಿಷ್ಕೃತ ಕನಿಷ್ಠ ಬೆಂಬಲ ಬೆಲೆ ಜಾರಿಯಿಂದಾಗುವ ಪರಿಣಾಮ, ಆಹಾರ ದರ ಏರಿಕೆ ಪ್ರಮಾಣ, ತೈಲ ಬೆಲೆಯಲ್ಲಿನ ಅಸ್ಥಿರತೆ, ಪೆಟ್ರೋಲ್, ಡಿಸೇಲ್ ಮೇಲೆ ಎಕ್ಸೈಜ್ ಸುಂಕ ಕಡಿತ ಮಾಡಿದ್ದರ ಪರಿಣಾಮ, ಜಾಗತಿಕ ಬಂಡವಾಳ ಪೇಟೆಯಲ್ಲಿನ ಏರಿಳಿತ ಮತ್ತು ಉತ್ಪಾದನಾ ವೆಚ್ಚ ತ್ವರಿತ ಜಿಗಿತ ಸೇರಿದಂತೆ ಹಲವು ಅಸ್ಥಿರತೆಗಳ ಕರಿಛಾಯೆ ಇದೆ ಎಂದು ಆರ್ಬಿಐ ನೀತಿಯಲ್ಲಿ ಉಲ್ಲೇಖಿಸಲಾಗಿದೆ.

ಜಾಗತಿಕ ವ್ಯಾಪಾರ ಸಮರ, ಏರುತ್ತಿರುವ ತೈಲ ಬೆಲೆ, ಬಿಗಿಗೊಳ್ಳುತ್ತಿರುವ ಜಾಗತಿಕ ಹಣಕಾಸು ಪರಿಸ್ಥಿತಿ ಸೇರಿದಂತೆ ಜಾಗತಿಕ ಅಡೆತಡೆಗಳು ನಮ್ಮ ಹಣದುಬ್ಬರ ಮತ್ತು ಅಭಿವೃದ್ಧಿ ಮೇಲೆ ಪರಿಣಾಮ ಬೀರುತ್ತವೆ. ಹೀಗಾಗಿ, ನಮ್ಮ ದೇಶೀಯ ಬೃಹದಾರ್ಥಿಕತೆಯ ತಳಹದಿಯನ್ನುಮತ್ತಷ್ಟು ಪ್ರಬಲಗೊಳಿಸಲೇಬೇಕಿದೆ ಎಂದೂ ಹೇಳಿದೆ.

ರೆಪೋದರ ಯಥಾಸ್ಥಿ ಕಾಯ್ದುಕೊಳ್ಳುವ ನಿರ್ಧಾರಕ್ಕೆ ಹಣಕಾಸು ನೀತಿ ಸಮಿತಿಯ ಆರು ಸದಸ್ಯರ ಪೈಕಿ ಐವರು ಸಮ್ಮತಿ ಸೂಚಿಸಿದ್ದಾರೆ. ಗವರ್ನರ್ ಊರ್ಜಿತ್ ಪಟೇಲ್, ಪಾಮಿ ದುವಾ, ಚೇತನ್ ಘಾಟೆ, ಮೆಕೇಲ್ ದೇಬಬ್ರತ ಪಾತ್ರ, ವಿರಾಲ್ ಆಚಾರ್ಯ ನಿರ್ಧಾರದ ಪರ ಇದ್ದರೆ, ಮತ್ತೊಬ್ಬ ಸದಸ್ಯರಾದ ರವೀಂದ್ರ ದಲೋಕಿಯಾ ಶೇ.0.25ರಷ್ಟು ಬಡ್ಡಿದರ ಏರಿಸುವ ಮತ್ತು ತಟಸ್ಥ ನಿಲವು ಮುಂದುವರಿಸಬೇಕೆಂಬುದರ ಪರವಾಗಿದ್ದರು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More