ಬಾಬಾ ರಾಮ್‌ದೇವ್‌ ಕುರಿತ ಪುಸ್ತಕದಲ್ಲಿ ನಾವು ಓದಿ ತಿಳಿಯಬಾರದಂಥದ್ದು ಏನಿದೆ?

ಸಣ್ಣದೊಂದು ಆಶ್ರಮದಿಂದ ಬಂದ ರಾಮ್‌ದೇವ್‌, ಯೋಗದ ಮೂಲಕ ಜನಪ್ರಿಯತೆ ಗಳಿಸಿಕೊಂಡರು. ಪತಂಜಲಿಯಂಥ ಉದ್ಯಮದ ಮೂಲಕ ಖಾವಿ ತೊಟ್ಟ ಪ್ರಮುಖ ಉದ್ಯಮಿಯಾಗಿ ಬೆಳೆದರು. ಈ ವಿಷಯಗಳನ್ನು ಪ್ರಸ್ತಾಪಿಸುವ ಪ್ರಿಯಾಂಕಾ ಅವರ ಕೃತಿ ಈಗ ನಿಷೇಧ ಎದುರಿಸುತ್ತಿದೆ

ಜಗರ್‌ನಾಟ್‌ ಪ್ರಕಾಶನ, ಕಳೆದ ವರ್ಷ ಪ್ರಿಯಾಂಕ ಪಾಠಕ್‌-ನರೇನ್‌ ಬರೆದ 'ಗಾಡ್‌ಮ್ಯಾನ್‌ ಟು ಟೈಕೂನ್‌' ಹೆಸರಿನ ಪುಸ್ತಕ ಹೊರತಂದಿತ್ತು. ಈ ಪುಸ್ತಕ ಬಾಬಾ ರಾಮ್‌ದೇವ್‌ ವ್ಯಕ್ತಿತ್ವಕ್ಕೆ ಹಾನಿ ಉಂಟುಮಾಡುತ್ತದೆ ಎಂದು ನಿಷೇಧ ಹೇರಲಾಯಿತು. ಗುರುವಾರ ಕೂಡ ದೆಹಲಿ ಹೈಕೋರ್ಟ್‌ ನಿಷೇಧವನ್ನು ಎತ್ತಿಹಿಡಿದಿದೆ.

"ಭಾರತೀಯ ಸಂವಿಧಾನದ ಅನುಚ್ಛೇದ ೨೧ರ ಅಡಿ ಯಾವುದೇ ಜೀವಂತ ವ್ಯಕ್ತಿಯ ವರ್ಚಸ್ಸನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಬಲಿಕೊಡಲಾಗದು,'' ಎಂದು ತೀರ್ಪು ನೀಡಿರುವ ನ್ಯಾಯಮೂರ್ತಿ ಅನು ಮಲ್ಹೋತ್ರ ಹೇಳಿದ್ದಾರೆ. ಕೋರ್ಟ್‌ ತೀರ್ಪನ್ನು ಪ್ರಶ್ನಿಸಲು ಆಗುವುದಿಲ್ಲವಾದರೂ ಸಾರ್ವಜನಿಕ ವ್ಯಕ್ತಿಗಳು ಪ್ರಶ್ನಾತೀತರಾ, ಪುಸ್ತಕಗಳನ್ನು ನಿಷೇಧಿಸುವುದು ಸರಿಯಾ ಎಂಬ ಪ್ರಶ್ನೆಗಳಿಗಂತೂ ಅವಕಾಶ ಮಾಡಿಕೊಟ್ಟಿದೆ.

'ಗಾಡ್‌ಮ್ಯಾನ್‌ ಟು ಟೈಕೂನ್‌: ದಿ ಅನ್‌ಟೋಲ್ಡ್‌ ಸ್ಟೋರಿ ಅಫ್‌ ಬಾಬಾ ರಾಮ್‌ದೇವ್' ಪುಸ್ತಕ ಪ್ರಕಟವಾಗಿದ್ದು ೨೦೧೭ರ ಜು.೩೧ರಂದು. ಬಿಡುಗಡೆಯಾದ ಒಂದೇ ವಾರದಲ್ಲಿ, ಅಂದರೆ, ಆ.೪ರಂದು ದೆಹಲಿಯ ಕರ್‌ಕರ್‌ಡೂಮ್‌ ಟ್ರಯಲ್‌ ಕೋರ್ಟ್‌ ತಡೆಯಾಜ್ಞೆ ನೀಡಿತು. ೨೦೧೮ರ ಏ.೨೮ರಲ್ಲಿ ಪ್ರಕಾಶಕರ ಕಾನೂನು ಸಮರದ ಫಲವಾಗಿ ದೆಹಲಿಯ ಕೆಳಹಂತದ ಕೋರ್ಟ್‌ ತಡೆಯಾಜ್ಞೆ ತೆರವುಗೊಳಿಸಿತು. ರಾಮ್‌ದೇವ್‌ ದೆಹಲಿ ಹೈಕೋರ್ಟ್‌ ಮೆಟ್ಟಿಲು ಹತ್ತಿದ್ದರಿಂದ ೨೦೧೮ರ ಮೇ ೧೦ರಂದು ವಿಚಾರಣೆ ನಡೆಸಿದ ನ್ಯಾ.ಆರ್ ಕೆ ಗೌಬ, ಪುನಃ ಪುಸ್ತಕದ ಮೇಲೆ ತಡೆಯಾಜ್ಞೆ ಹೇರಿದರು. ಈಗ ಅ.೫ರಂದು ದೆಹಲಿ ಹೈಕೋರ್ಟ್‌ ಈ ಕುರಿತು ಮತ್ತೆ ತೀರ್ಪು ನೀಡಿದ್ದು, ನಿಷೇಧವನ್ನು ಎತ್ತಿಹಿಡಿದಿದೆ.

ಪತ್ರಕರ್ತೆ ಪ್ರಿಯಾಂಕಾ ಪಾಠಕ್‌ ಅವರು ‘ಮಿಂಟ್‌’ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸುತ್ತ, ಧರ್ಮ, ಧಾರ್ಮಿಕ ವಿಷಯಗಳನ್ನು ಕುರಿತು ವರದಿ ಮಾಡುತ್ತಿದ್ದರು. ಈ ಅವಧಿಯಲ್ಲಿ ಹಲವು ಬಾರಿ ಬಾಬಾ ರಾಮ್‌ ದೇವ್‌ ಅವರ ಸಂದರ್ಶನಗಳನ್ನು ಮಾಡಿದ್ದರು. ತಮ್ಮ ಅನುಭವ, ಸಂಶೋಧನೆಗಳನ್ನು ಆಧರಿಸಿ, ಯೋಗ ಗುರು ಎನಿಸಿಕೊಂಡ ಬಾಬಾ ರಾಮ್‌ದೇವ್, ಉದ್ಯಮಿಯಾಗಿ ಬೆಳೆದ ಬಗೆಯನ್ನು ಈ ಪುಸ್ತಕದಲ್ಲಿ ಅನಾವರಣಗೊಳಿಸಿದ್ದಾರೆ.

ಸ್ವಾಮಿ ಯೋಗಾನಂದ ಅವರ ಸಾವು, ರಾಮ್‌ ದೇವರ ಗುರು ಶಂಕರ ದೇವ ಅವರ ಕಣ್ಮರೆ, ದಿನೇದಿನೇ ಶಕ್ತಿಶಾಲಿ ಹಾಗೂ ಪ್ರಭಾವಶಾಲಿಯಾಗಿ ಬೆಳೆಯುತ್ತಿದ್ದ ರಾಮ್‌ದೇವ್‌, ರಾಮ್‌ಲೀಲಾ ಮೈದಾನದಲ್ಲಿ ಮಹಿಳೆಯರ ಉಡುಪಿನಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ ಪ್ರಸಂಗ, ಸಲಿಂಗಪ್ರೇಮ ಮತ್ತು ಏಡ್ಸ್‌ನಂತಹ ಗಂಭೀರ ಸಮಸ್ಯೆಗಳ ಬಗ್ಗೆ ನೀಡಿದ ಹಾಸ್ಯಾಸ್ಪದ ಹೇಳಿಕೆಗಳು, ಪತಂಜಲಿ ಹೆಸರಿನ ಕೋಟ್ಯಂತರ ಮೌಲ್ಯದ ಉದ್ಯಮವನ್ನು ದೇಶಾದ್ಯಂತ ವ್ಯಾಪಿಸುವಂತೆ ಬೆಳೆಸಿದ್ದು... ಹೀಗೆ ರಾಮ್‌ದೇವ್‌ ರಾಷ್ಟ್ರದ ಆಕರ್ಷಕ ಸಾರ್ವಜನಿಕ ವ್ಯಕ್ತಿಯಾಗಿ ಬೆಳೆದ ಬಗೆಯನ್ನು ಪುಸ್ತಕ ಕಟ್ಟಿಕೊಡುತ್ತದೆ.

ಹಾಗಾಗಿಯೇ, ಇದು ತೇಜೋವಧೆಗೆಂದೇ ಬರೆದ ಪುಸ್ತಕ ಎಂಬುದು ರಾಮ್‌ದೇವ್‌ ವಾದ. "ಪುಸ್ತಕ ಪ್ರಕಟಣೆ, ಪ್ರಸರಣೆ, ಮಾರಾಟ ಕುರಿತು ದೆಹಲಿ ಹೈಕೋರ್ಟ್‌ ತೀರ್ಪನ್ನು ಒಪ್ಪಿಕೊಳ್ಳುತ್ತೇವೆ. ಪುಸ್ತಕ ಪರಿಷ್ಕರಿಸಲು ಇಷ್ಟವಿಲ್ಲ. ನಮ್ಮ ಪ್ರಕಟಣೆಗೆ ನಾವು ಬದ್ಧವಾಗಿದ್ದು, ಸುಪ್ರೀಂ ಕೋರ್ಟ್‌ ಮೊರೆಹೋಗುತ್ತೇವೆ,” ಎನ್ನುತ್ತಾರೆ ಪ್ರಕಾಶಕಿ ಚಿಕಿ ಸರ್ಕಾರ್.

ಇದನ್ನೂ ಓದಿ : ಪತಂಜಲಿಯನ್ನು ಎನ್‌ಜಿಒ ಮಾಡುತ್ತೇನೆಂದ ಬಾಬಾ ರಾಮ್‌ದೇವ್ ಹೇಳದ ಗುಟ್ಟುಗಳು!

“ಪುಸ್ತಕದಲ್ಲಿರುವ ಹಲವು ಅಂಶಗಳು ೨೦೦೭ರಿಂದಲೇ ಸಾರ್ವಜನಿಕವಾಗಿ ಲಭ್ಯ ಇವೆ. ಪುಸ್ತಕದಲ್ಲಿ ಉಲ್ಲೇಖಿಸಲಾಗಿರುವ ಹಲವು ಅಂಶಗಳು ದೇಶದ ೩೩ ಪ್ರತಿಷ್ಠಿತ ಮಾಧ್ಯಮ ಸಂಸ್ಥೆಗಳು ಪ್ರಕಟಿಸಿದ್ದು, ಅವು ಇಂದಿಗೂ ಸಾರ್ವಜನಿಕವಾಗಿ ಲಭ್ಯ ಇವೆ. ಆದರೆ ರಾಮ್‌ದೇವ್‌ ಅವರಿಗೆ ಅವುಗಳ ಬಗ್ಗೆ ಯಾವುದೇ ತಕರಾರು ಯಾಕಿಲ್ಲ?” ಎಂದು ಕೇಳುತ್ತಾರೆ ಲೇಖಕಿ ಪ್ರಿಯಾಂಕ.

ಪ್ರಧಾನಿ ನರೇಂದ್ರ ಮೋದಿ ಮುಂದಿರುವ ಅತಿದೊಡ್ಡ ಸವಾಲು ಯಾವುದು ಗೊತ್ತೇ?
ಶ್ರೀಸಾಮಾನ್ಯರ ಸ್ವಾಮೀಜಿ ಎಂದೆನಿಸಿಕೊಂಡ ತೋಂಟದಾರ್ಯ ಶ್ರೀಗಳು ಇನ್ನಿಲ್ಲ
ಸೂಪರ್ಟೆಕ್ ₹600 ಕೋಟಿ ಸಾಲ ಮರುಪಾವತಿ ವೈಫಲ್ಯ; ಕಾದಿದೆ ಮತ್ತಷ್ಟು ಸಂಕಷ್ಟ?
Editor’s Pick More