ಪೀಠೋಪಕರಣ ಖರೀದಿ ಅಕ್ರಮ; ಸಂಸದ ಮುನಿಯಪ್ಪ ಅಳಿಯನ ವಿರುದ್ಧ ಚಾರ್ಜ್‌ಶೀಟ್

ಶಾಸಕರ ಭವನದಲ್ಲಿ ನಡೆದಿದೆ ಎನ್ನಲಾಗಿರುವ ಪೀಠೋಪಕರಣ ಖರೀದಿಗೆ ಸಂಬಂಧಿಸಿದಂತೆ ಮತ್ತೊಬ್ಬ ಉನ್ನತ ಅಧಿಕಾರಿಯ ಕರ್ತವ್ಯಲೋಪ ಬಹಿರಂಗಗೊಂಡಿದೆ. ಸರಬರಾಜು ಆಗದಿದ್ದರೂ ಮೊತ್ತ ಪಾವತಿಗೆ ಅನುಮೋದಿಸಿರುವ ದೋಷಾರೋಪಣೆ ಈ ಅಧಿಕಾರಿಯ ಮೇಲಿದೆ

ಬೆಂಗಳೂರಿನ ಶಾಸಕರ ಭವನಕ್ಕೆ ಪೀಠೋಪಕರಣಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ ವಿಧಾನಸಭೆ ಸಚಿವಾಲಯದ ಗಣಕ ಕೇಂದ್ರದ ನಿರ್ದೇಶಕ ಜೆ ಈ ಶಶಿಧರ್‌ ಅವರ ವಿರುದ್ಧ ದೋಷಾರೋಪಣೆ ಪಟ್ಟಿ ಜಾರಿಗೊಂಡಿದೆ. ಸ್ಪೀಕರ್ ಕೆ ಆರ್‌ ರಮೇಶ್‌ ಕುಮಾರ್‌ ಅವರ ಆದೇಶದಂತೆ ವಿಧಾನಸಭೆ ಸಚಿವಾಲಯದ ಆಡಳಿತ ಶಾಖೆ ದೋಷಾರೋಪಣೆ ಪಟ್ಟಿ ಜಾರಿಗೊಳಿಸಿದೆ.

ಜೆ ಈ ಶಶಿಧರ್ ಅವರು ಸಂಸದ ಕೆ ಎಚ್ ಮುನಿಯಪ್ಪ ಅವರ ಅಳಿಯ ಮತ್ತು ಕೆಜಿಎಫ್‌ ಶಾಸಕಿ ರೂಪ ಅವರ ಪತಿಯೂ ಹೌದು. ೨೦೧೮ರ ಸೆ.೫ರಂದು ಶೋಕಾಸ್‌ ನೋಟಿಸ್‌ ಜಾರಿಗೊಳಿಸಲಾಗಿದೆಯಲ್ಲದೆ, ಇದೇ ದಿನದಂದು ದೋಷಾರೋಪಣೆ ಪಟ್ಟಿ ಮತ್ತು ಅದನ್ನು ಸಮರ್ಥಿಸುವ ಪಟ್ಟಿಯನ್ನೂ ಹೊರಡಿಸಲಾಗಿದೆ. ಈ ಸಂಬಂಧ ವಿಧಾನಸಭೆ ಸಚಿವಾಲಯದ ವಿಶ್ವಸನೀಯ ಮೂಲಗಳು ‘ದಿ ಸ್ಟೇಟ್‌’ಗೆ ಖಚಿತಪಡಿಸಿವೆ.

ಶಾಸಕರ ಭವನದ ಹೋಮಿಯೋಪತಿ ಚಿಕಿತ್ಸಾಲಯಕ್ಕೆ ಖರೀದಿಯಾಗಿದ್ದ ಪೀಠೋಪಕರಣಗಳು ಸರಬರಾಜು ಆಗಿದೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳದೆಯೇ ಶಾಸಕರ ಭವನದ ಕ್ಷೇತ್ರಾಧಿಕಾರಿ ಸಲ್ಲಿಸಿದ್ದ ೮೪,೬೦೮ ರು. ಬಿಲ್ ಪಾವತಿಸಲು ಅನುಮೋದಿಸಲು ಶಿಫಾರಸು ಮಾಡಿದ್ದಾರೆ ಎಂಬ ಆರೋಪವನ್ನು ಜೆ ಈ ಶಶಿಧರ್‌ ಅವರ ಮೇಲೆ ಹೊರಿಸಲಾಗಿದೆ. ಕರ್ನಾಟಕ ಸಿವಿಲ್ ಸೇವಾ ನಿಯಮಗಳು (ನಡತೆ)-೧೯೬೬ರಂತೆ ಈ ಆರೋಪಕ್ಕೆ ಗುರಿ ಮಾಡಲಾಗಿದೆ ಎಂದು ತಿಳಿದುಬಂದಿದೆ.

“ಕೊಹಿನೂರ್‌ ಫರ್ನಿಚರ್ಸ್‌ ಸಂಸ್ಥೆ ಸಲ್ಲಿಸಿರುವ ಬಿಲ್‌ನಲ್ಲಿ ಸಂಸ್ಥೆಯ ಮೊಹರು ಇಲ್ಲದಿರುವುದನ್ನು ಮತ್ತು ಬಿಲ್‌ನಲ್ಲಿ ನಮೂದಿಸಿರುವ ಪೀಠೋಪಕರಣಗಳ ದಾಸ್ತಾನಿಗೆ ತೆಗೆದುಕೊಂಡಿರುವುದನ್ನು ಖಚಿತಪಡಿಸಿಕೊಳ್ಳದಿರುವುದು ಮತ್ತು ಕಡತದಲ್ಲಿ ಈ ಕುರಿತು ಮಾಹಿತಿ ದಾಖಲಿಸದಿರುವುದನ್ನು ಗಮನಿಸದೆ, ಬಿಲ್‌ ಮೊತ್ತ ೮೪,೬೦೮ ರು.ಗಳನ್ನು ಸಂಸ್ಥೆಗೆ ಪಾವತಿಸಲು ಶಿಫಾರಸು ಮಾಡಿರುತ್ತೀರಿ. ಇದರಿಂದಾಗಿ ಪೀಠೋಪಕರಣಗಳ ಖರೀದಿ ಅವ್ಯವಹಾರದಲ್ಲಿ ತಾವು ಶಾಮೀಲಾಗಿರುತ್ತೀರಿ. ಈ ಸಂಸ್ಥೆಗೆ ಹಣ ಪಾವತಿ ಸಂಬಂಧದ ಪ್ರಸ್ತಾವನೆಯನ್ನು ಕರ್ನಾಟಕ ಆರ್ಥಿಕ ಸಂಹಿತೆ ಅನುಚ್ಛೇದ ೧೬ರ ರೀತಿ ಸೂಕ್ತ ಪರಿಶೀಲನೆ ಮಾಡದೆ ಬೇಜವಾಬ್ದರಿತನ, ಅಪ್ರಾಮಾಣಿಕತೆ, ತೀವ್ರತರನಾದ ಕರ್ತವ್ಯ ಲೋಪ ಎಸಗಿರುವುದು ದೃಢಪಟ್ಟಿದೆ,” ಎಂದು ದೋಷಾರೋಪಣೆಯ ಪಟ್ಟಿಯಲ್ಲಿ ಹೇಳಲಾಗಿದೆ ಎಂದು ಗೊತ್ತಾಗಿದೆ.

ಇದನ್ನೂ ಓದಿ : ಪೀಠೋಪಕರಣಗಳ ಖರೀದಿ ಅವ್ಯವಹಾರ ಸಾಬೀತು; ಅಧೀನ ಕಾರ್ಯದರ್ಶಿ ಅಮಾನತು

ಅಲ್ಲದೆ, ಇದೇ ಪ್ರಕರಣದಲ್ಲಿ ಶಶಿಧರ್‌ ವಿರುದ್ಧ ಇಲಾಖೆ ವಿಚಾರಣೆ ನಡೆಸಲು ಸಚಿವಾಲಯ ಮುಂದಾಗಿದೆ. ಈಗಾಗಲೇ ಜಾರಿಗೊಳಿಸಿರುವ ನೋಟಿಸ್‌ಗೆ ೧೫ ದಿನದೊಳಗೆ ಸಮಜಾಯಿಷಿಯನ್ನು ಲಿಖಿತವಾಗಿ ನೀಡಬೇಕು ಎಂದು ಸಚಿವಾಲಯ ಸೂಚಿಸಿದೆ. ಒಂದು ವೇಳೆ ನಿಗದಿತ ಅವಧಿಯಲ್ಲಿ ಸಮಜಾಯಿಷಿ ಅಥವಾ ಪ್ರತಿ ರಕ್ಷಣಾ ಹೇಳಿಕೆಗಳನ್ನು ಸಲ್ಲಿಸದೆ ಇದ್ದಲ್ಲಿ, ೧೯೫೭ರ ಕರ್ನಾಟಕ ನಾಗರಿಕ ನಿಯಮಾವಳಿಗಳ ಅನ್ವಯ ಸಚಿವಾಲಯ ಮುಂದಿನ ಕ್ರಮ ಜರುಗಿಸಲಿದೆ ಎಂದು ಹೇಳಲಾಗಿದೆ.

ಏನಿದು ಪ್ರಕರಣ?: ಹೋಮಿಯೋಪತಿ ಚಿಕಿತ್ಸಾಲಯಕ್ಕೆ ಪೀಠೋಪಕರಣ ಖರೀದಿ ಸಂಬಂಧ ೩ ಸಂಸ್ಥೆಗಳಿಂದ ಕಡಿಮೆ ದರ ಪಟ್ಟಿ ತರಿಸಿ, ಆ ಪೈಕಿ ಕಡಿಮೆ ದರ ನಮೂದಿಸಿದ್ದ ಕೊಹಿನೂರ್‌ ಫರ್ನಿಚರ್ಸ್‌ನಿಂದ ಪೀಠೋಪಕರಣಗಳನ್ನು ಖರೀದಿಸಲಾಗಿತ್ತು. ಆದರೆ, ಸಲ್ಲಿಸಿದ್ದ ಬಿಲ್‌ನಲ್ಲಿ ಸರಬರಾಜು ಮಾಡಿದ ಸಂಸ್ಥೆಯ ಮೊಹರು ಇರಲಿಲ್ಲ. ಹಾಗೆಯೇ, ಸಂಸ್ಥೆ ಸರಬರಾಜು ಮಾಡಿರುವ ಪೀಠೋಪಕರಣಗಳನ್ನು ದಾಸ್ತಾನಿಗೆ ತೆಗೆದುಕೊಳ್ಳಲಾಗಿದೆ ಎಂದು ಕಡತದಲ್ಲಿ ನಮೂದಿಸಿರಲಿಲ್ಲ. ಆದರೂ ಬಿಲ್‌ ಹಿಂಬದಿ ಪೀಠೋಪಕರಣ ಸರಬರಾಜು ಮಾಡಲಾಗಿದೆ ಎಂದು ನಮೂದಿಸಿ ಅದನ್ನು ದೃಢೀಕರಿಸಲಾಗಿತ್ತು. ಶಾಸಕರ ಭವನದ ಕ್ಷೇತ್ರಾಧಿಕಾರಿ ಸಲ್ಲಿಸಿದ್ದ ಪ್ರಸ್ತಾವನೆಯನ್ನು ನೈಜತೆಗೆ ಒಳಪಡಿಸದೆ ಮೊತ್ತವನ್ನು ಪಾವತಿ ಮಾಡುವ ಪ್ರಸ್ತಾವನೆಯನ್ನು ಅನುಮೋದಿಸಬಹುದು ಎಂದು ಕಾರ್ಯದರ್ಶಿಗೆ ಶಿಫಾರಸು ಮಾಡಿ ಕಡತವನ್ನು ಸಲ್ಲಿಸಲಾಗಿತ್ತು.

ಶಾಸಕರ ಭವನದ ಹೋಮಿಯೋಪಥಿ ಚಿಕಿತ್ಸಾಲಯಕ್ಕೆ ಪೀಠೋಪಕರಣಗಳನ್ನು ಒದಗಿಸಿರುವ ಸಂಬಂಧ ಸಚಿವಾಲಯ ಅಧಿಕಾರಿಗಳ ತನಿಖಾ ತಂಡ ಭೌತಿಕವಾಗಿ ಪರಿಶೀಲನೆ ನಡೆಸಿತ್ತು. ಪೀಠೋಪಕರಣಗಳು ಸರಬರಾಜು ಆಗದೆ ಇದ್ದದ್ದನ್ನು ವೈದ್ಯಾಧಿಕಾರಿಗಳು ೨೦೧೮ರ ಸೆ.೧೭ರಂದು ದೃಢೀಕರಿಸಿದ್ದರು. ಅಲ್ಲದೆ, ದಾಸ್ತಾನು ಪುಸ್ತಕದಲ್ಲಿಯೂ ಈ ಸಂಬಂಧ ಯಾವುದೇ ಮಾಹಿತಿ, ನಮೂದುಗಳು ಇರಲಿಲ್ಲ. ಹೀಗಾಗಿ ಪೀಠೋಪಕರಣಗಳು ಖರೀದಿಸದೆ ಇರುವುದನ್ನು ತನಿಖಾ ತಂಡ ದೃಢಪಡಿಸಿತ್ತು. ಇದೇ ಪ್ರಕರಣದಲ್ಲಿ ಶಾಸಕರ ಭವನದ ಖರೀದಿ ಮತ್ತು ನಿರ್ವಹಣೆ ಶಾಖೆಯ ಅದೀನ ಕಾರ್ಯದರ್ಶಿ‌ ಪುಟ್ಟ ಓಬಳ ರೆಡ್ಡಿ ಎಂಬುವರನ್ನು ಅಮಾನತುಗೊಳಿಸಲಾಗಿದ್ದನ್ನು ಸ್ಮರಿಸಿಕೊಳ್ಳಬಹುದು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More