ಐದು ರಾಜ್ಯಗಳ ವಿಧಾನಸಭಾ ಚುನಾವಣೆ, ರಾಜ್ಯದ ಉಪ ಚುನಾವಣೆ ದಿನಾಂಕ ಪ್ರಕಟ

ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ, ಮಿಜೋರಾಂಗಳಲ್ಲಿ ಒಂದು ಹಂತದಲ್ಲಿ ಮತದಾನ ನಡೆಯಲಿದ್ದು, ಚತ್ತೀಸ್‌ಗಢದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಜೊತೆಗೆ, ರಾಜ್ಯದ ಮೂರು ಲೋಕಸಭಾ, ಎರಡು ವಿಧಾನಸಭಾ ಸ್ಥಾನಗಳಿಗೆ ನವೆಂಬರ್ 3ರಂದು ಉಪ ಚುನಾವಣೆ ನಡೆಯಲಿದೆ

ಕರ್ನಾಟಕದ ಮೂರು ಲೋಕಸಭಾ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಸೇರಿದಂತೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ದಿನಾಂಕಗಳನ್ನು ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದೆ. ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ, ಮಿಜೋರಾಂ ರಾಜ್ಯಗಳಲ್ಲಿ ಒಂದು ಹಂತದಲ್ಲಿ ಮತದಾನ ನಡೆಯಲಿದ್ದು, ಚತ್ತೀಸ್‌ಗಢದಲ್ಲಿ ಮಾತ್ರ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ ಎಂದು ಮುಖ್ಯ ಚುನಾವಾಣಾ ಆಯುಕ್ತ ಒ ಪಿ ರಾವತ್‌ ಶನಿವಾರ ತಿಳಿಸಿದ್ದಾರೆ. ಇದೇ ವೇಳೆ, ಕರ್ನಾಟಕದ ಮೂರು ಲೋಕಸಭಾ ಮತ್ತು ಎರಡು ವಿಧಾನಸಭಾ ಸ್ಥಾನಗಳಿಗೆ ನವೆಂಬರ್‌ 3ರಂದು ಚುನಾವಣೆ ನಡೆಯಲಿದೆ ಎಂದೂ ಹೇಳಿದ್ದಾರೆ.

ನವೆಂಬರ್‌ 28ರಂದು ಮಧ್ಯಪ್ರದೇಶ ಮತ್ತು ಮಿಜೋರಾಂ ವಿಧಾನಸಭಾ ಚುನಾವಣೆ ನಡೆಯಲಿದ್ದು, ರಾಜಸ್ಥಾನ ಹಾಗೂ ತೆಲಂಗಾಣ ರಾಜ್ಯಗಳ ವಿಧಾನಸಭಾ ಚುಣಾವಣೆ ದಿನಾಂಕ ಡಿಸೆಂಬರ್‌ 07ರಂದು ನಿಗದಿಯಾಗಿದೆ. ಚತ್ತೀಸ್‌ಗಢ ವಿಧಾನಸಭೆಗೆ ಎರಡು ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೊದಲ ಹಂತದ ಚುನಾವಣೆ ನವೆಂಬರ್‌ 12, ಎರಡನೇ ಹಂತದ ಚುನಾವಣೆ ನವೆಂಬರ್‌ 20ರಂದು ನಡೆಯಲಿದೆ. ಈ ಎಲ್ಲ ಚುನಾವಣೆಗಳ ಫಲಿತಾಂಶ ಡಿಸೆಂಬರ್‌ 11 ರಂದು ಹೊರಬೀಳಲಿದೆ ಎಂದು ರಾವತ್‌ ತಿಳಿಸಿದ್ದಾರೆ.

ಮಧ್ಯಪ್ರದೇಶ (230 ವಿಧಾನಸಭಾ ಕ್ಷೇತ್ರ) ಮತ್ತು ಮಿಜೋರಾಂ(40) ರಾಜ್ಯಗಳಲ್ಲಿ ನ.7ರಂದು ನಾಮಪತ್ರ ಸಲ್ಲಿಕೆ ಶುರುವಾಗಲಿದ್ದು, ನಾಮಪತ್ರ ಹಿಂಪಡೆಯಲು ನ.‌14 ಅಂತಿಮ ದಿನವಾಗಿದೆ. ರಾಜಸ್ಥಾನ (200) ಮತ್ತು ತೆಲಂಗಾಣ (119) ರಾಜ್ಯಗಳಲ್ಲಿ ನಾಮಪತ್ರ ಸಲ್ಲಿಕೆಯು ನ.12ರಂದು ಆರಂಭವಾಗಲಿದ್ದು, ನಾಮಪತ್ರ ಹಿಂಪಡೆಯಲು ನ.22 ಕೊನೆಯ ದಿನವಾಗಿದೆ. ಎರಡು ಹಂತದಲ್ಲಿ ಚುನಾವಣೆ ನಡೆಯಲಿರುವ ಚತ್ತೀಸ್‌ಗಢದಲ್ಲಿ (90) ಅ.13, 16ರಂದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ನಾಮಪತ್ರ ಹಿಂಪಡೆಯಲು ಅ.26 ಕೊನೆಯ ದಿನವಾಗಿದೆ.

ಕರ್ನಾಟಕ ಉಪಚುನಾವಣೆ ದಿನಾಂಕ

ರಾಜ್ಯದ ಮೂರು ಲೋಕಸಭಾ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನ.3ರಂದು ಉಪಚುನಾವಣೆ ನಡೆಯಲಿದ್ದು, ನ.06 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ರಾಜಿನಾಮೆಯಿಂದ ತೆರವಾಗಿದ್ದ ಶಿವಮೊಗ್ಗ ಲೋಕಸಭಾ ಕ್ಷೇತ್ರ, ಹಾಲಿ ಸಚಿವ ಸಿ ಎಸ್‌ ಪುಟ್ಟರಾಜು ರಾಜಿನಾಮೆಯಿಂದ ತೆರವಾಗಿದ್ದ ಮಂಡ್ಯ ಕ್ಷೇತ್ರ ಹಾಗೂ ಮಾಜಿ ಸಚಿವ ಶ್ರೀರಾಮುಲು ರಾಜಿನಾಮೆಯಿಂದ ತೆರವಾಗಿದ್ದ ಬಳ್ಳಾರಿ ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಸಿಎಂ ಕುಮಾರಸ್ವಾಮಿ ಅವರ ರಾಜಿನಾಮೆಯಿಂದ ತೆರವಾಗಿದ್ದ ರಾಮನಗರ ಹಾಗೂ ಮಾಜಿ ಸಚಿವ ಸಿದ್ದು ನ್ಯಾಮಗೌಡರ ಅಕಾಲಿಕ ಮರಣದಿಂದ ತೆರವಾಗಿದ್ದ ಜಮಖಂಡಿ ವಿಧಾನಸಭಾ ಕ್ಷೇತ್ರಗಳಿಗೆ ನ.3ರಂದು ಚುಣಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಪ್ರಕಟಿಸಿದೆ.

ಸುದ್ದಿಗೋಷ್ಠಿ ಮುಂದೂಡಿದ ಚುನಾವಣಾ ಆಯೋಗ; ಕಾಂಗ್ರೆಸ್‌ ಆಕ್ರೋಶ

ಇದೇ ವೇಳೆ, ಚುನಾವಣಾ ದಿನಾಂಕ ಘೋಷಣೆ ಮಾಡಲು ಆಯೋಗ ಕರೆದಿದ್ದ ಸುದ್ದಿಗೋಷ್ಠಿ ಮುಂದೂಡಿದ್ದಕ್ಕೆ ಕಾಂಗ್ರೆಸ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶನಿವಾರ ಮಧ್ಯಾಹ್ನ 12:30ಕ್ಕೆ ಚುನಾವಣಾ ಆಯೋಗ ಕರೆಯಲಾಗಿದ್ದ ಸುದ್ದಿಗೋಷ್ಠಿಯನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಲಾಗಿತ್ತು. “ರಾಜಸ್ಥಾನದ ಅಜ್ಮಿರ್‌ನಲ್ಲಿ ಮಧ್ಯಾಹ್ನ ಒಂದು ಗಂಟೆಗೆ ಪ್ರಧಾನಿ ಮೋದಿ ರ್ಯಾಲಿ ಇತ್ತು. ಇದಕ್ಕೂ ಮೊದಲು ಚುನಾವಣೆ ದಿನಾಂಕ ಪ್ರಕಟವಾದರೆ, ನೀತಿಸಂಹಿತೆ ಜಾರಿಯಾಗುತ್ತದೆ. ಆಗ ಮೋದಿ ಅವರ ರ್ಯಾಲಿ ನಡೆಸುವಂತಿಲ್ಲ. ಆ ಕಾರಣಕ್ಕಾಗಿಯೇ ಸುದ್ದಿಗೋಷ್ಠಿ ಮುಂದೂಡಲಾಗಿದೆ. ಇದರಿಂದ ಚುನಾವಣಾ ಆಯೋಗವೂ ಕೇಂದ್ರ ಸರ್ಕಾರದ ಕೈಗೊಂಬೆ ಎಂಬುದು ಸಾಬೀತಾಗಿದೆ,” ಎಂದು ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೇವಾಲ ಆರೋಪಿಸಿದ್ದಾರೆ.

ಪ್ರಧಾನಿ ಮೋದಿಯವರ ಭಾಷಣಕ್ಕೆ ಅಡ್ಡಿಯಾಗಬಾರದೆಂದು ಚುನಾವಣಾ ಆಯೋಗವು ಸುದ್ದಿಗೋಷ್ಠಿ ಮುಂದೂಡಿರುವುದು ದುರದೃಷ್ಟಕರ ಎಂದು ಕೇಂದ್ರದ ಮಾಜಿ ಹಣಕಾಸು ಸಚಿವ ಯಶವಂತ ಸಿನ್ಹಾ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುದ್ದಿಗೋ‍‍‍ಷ್ಠಿ ಮುಂದೂಡಿದ್ದಕ್ಕೆ ಚುನಾವಣಾ ಆಯೂಕ್ತ ಒ ಪಿ ರಾವತ್‌ ಅವರು ಕ್ಷೆಮೆ ಕೋರಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More