ಸಾರಿಗೆ ಸಿಗದೆ ಗೋಧ್ರಾ ಗಲಭೆ ಹೆಚ್ಚಿತು; ಸೇನಾಧಿಕಾರಿ ಬಿಚ್ಚಿಟ್ಟ ಸತ್ಯಗಳು!

ಗುಜರಾತ್‌ನಲ್ಲಿ ೨೦೦೨ ಫೆಬ್ರವರಿಯಲ್ಲಿ ನಡೆದ ಗಲಭೆ ನಿಯಂತ್ರಿಸಲು ಆಗಿನ ಮುಖ್ಯಮಂತ್ರಿ ಆಗಿದ್ದ ನರೇಂದ್ರ ಮೋದಿಯವರು ನಿಜಕ್ಕೂ ಏನೂ ಮಾಡಲಿಲ್ಲವೇ? ಸೇನಾ ತುಕಡಿಯೊಂದಿಗೆ ಗುಜರಾತ್‌ಗೆ ತೆರಳಿದ್ದ ಸೇನಾಧಿಕಾರಿ ತಮ್ಮ ಅನುಭವಗಳನ್ನು ಈಗ ಪುಸ್ತಕ ರೂಪದಲ್ಲಿ ಹಂಚಿಕೊಂಡಿದ್ದಾರೆ

ಗುಜರಾತ್‌ ೨೦೦೨ರ ಫೆಬ್ರವರಿ ೨೮ ಮತ್ತು ಮಾರ್ಚ್‌ ೧ರ ರಾತ್ರಿ ಕಂಡ ಕರಾಳತೆ ಇಂದಿಗೂ ಬೆಚ್ಚಿಬೀಳಿಸುತ್ತದೆ. ಗುಜರಾತಿನ ಪ್ರಮುಖ ನಗರಗಳು ಹೊತ್ತಿ ಉರಿದಿದ್ದವು. ಅನೇಕರು ಜೀವ ಕಳೆದುಕೊಂಡಿದ್ದರು. ರಾಜ್ಯದಲ್ಲಿ ನಿರ್ಮಾಣವಾದ ತುರ್ತು ಪರಿಸ್ಥಿತಿ ನಿಯಂತ್ರಣಕ್ಕೆ ಆಗಿನ ರಕ್ಷಣಾ ಮಂತ್ರಿ ಜಾರ್ಜ್‌ ಫರ್ನಾಂಡಿಸ್‌ ಕೂಡಲೇ ೩,೦೦೦ ಸೈನಿಕರ ತುಕಡಿಯೊಂದನ್ನು ಅಹಮದಾಬಾದ್‌ಗೆ ಕಳಿಸಿದರು.

ಮಾರ್ಚ್‌ ೧ರ ಬೆಳಗ್ಗೆ ೭ ಗಂಟೆಗೆ ಅಹಮದಾಬಾದ್‌ ಏರ್‌ಫೀಲ್ಡ್‌ನಲ್ಲಿ ಇಳಿದ ತುಕಡಿಗೆ ಜಿಲ್ಲಾಡಳಿತ ಕೂಡಲೇ ಸಾರಿಗೆ ವ್ಯವಸ್ಥೆ ಮಾಡಬೇಕಿತ್ತು. ಗಲಭೆಪೀಡಿತ ಪ್ರದೇಶಗಳಿಗೆ ಸೈನಿಕರು ತಲುಪುವುದಕ್ಕೆ ವಾಹನಗಳನ್ನು ಒದಗಿಸಬೇಕಿತ್ತು. ಆದರೆ, ಜಿಲ್ಲಾಡಳಿತ ಇಡೀ ದಿನ ತಡ ಮಾಡಿತು. ಅಷ್ಟರಲ್ಲಿ ಹೊತ್ತಿದ್ದ ಗಲಭೆಯ ಬೆಂಕಿ ಇನ್ನಷ್ಟು ವ್ಯಾಪಿಸಿತು.

ನಿವೃತ್ತ ಸೇನಾಧಿಕಾರಿ ಜಮೀರ್‌ ಉದ್ದೀನ್‌ ಶಾ ಅವರ 'ದಿ ಸರ್ಕಾರಿ ಮುಸಲ್ಮಾನ್‌' ಕೃತಿ ಗುಜರಾತ್‌ ಗಲಭೆಗೆ ಸಂಬಂಧಿಸಿದ ಇಂಥ ಹಲವು ಬೆಚ್ಚಿಬೀಳಿಸುವ ಅಂಶಗಳನ್ನು ಬಿಚ್ಚಿಡುತ್ತದೆ. ಅಕ್ಟೋಬರ್‌ ೧೩ರಂದು ಮಾಜಿ ಉಪ ರಾಷ್ಟ್ರಪತಿ ಹಮೀದ್‌ ಅನ್ಸಾರಿಯವರಿಂದ ಈ ಕೃತಿ ಬಿಡುಗಡೆಯಾಗುತ್ತಿದೆ.

ಪದ್ಮವಿಶಿಷ್ಟ ಸೇವಾ ಪದಕ, ವಿಶಿಷ್ಟ ಸೇವಾ ಪದಕ ಮತ್ತು ಸೇನಾ ಪದಕವನ್ನು ಪಡೆದಿರುವ ಶಾ ಅವರು, ವೃತ್ತಿಜೀವನದ ನೆನಪುಗಳನ್ನು ಈ ಕೃತಿಯಲ್ಲಿ ದಾಖಲಿಸಿದ್ದು, ಗುಜರಾತ್‌ ಗಲಭೆ ಕುರಿತು ಮಹತ್ವದ ಅಂಶಗಳನ್ನು ಬಿಚ್ಚಿಡಲಿದೆ ಎಂಬ ಕುತೂಹಲವನ್ನು ಹುಟ್ಟಿಸಿದೆ. ‘ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌’ ಈ ಕುರಿತು ವರದಿ ಪ್ರಕಟಿಸಿದ್ದು, ಈ ಕುರಿತು ಐಎಎನ್‌ಎಸ್‌ ಸುದ್ದಿಸಂಸ್ಥೆ ಮಾಡಿರುವ ವಿಶೇಷ ವರದಿಯನ್ನು ಉಲ್ಲೇಖಿಸಿದೆ.

ಗಲಭೆ ಶುರುವಾದ ಹಿನ್ನೆಲೆಯಲ್ಲಿ ಫೆಬ್ರವರಿ ೨೮ರಂದು ರಾಜ್ಯ ಸರ್ಕಾರ, ಕೇಂದ್ರ ಗೃಹ ಖಾತೆ ಮತ್ತು ರಕ್ಷಣಾ ಖಾತೆ ಸೇನೆ ನಿಯುಕ್ತಿಗೊಳಿಸುವುದಕ್ಕೆ ಮನವಿ ಮಾಡಿತು. ಆಗ ಸೇನಾ ಮುಖ್ಯಸ್ಥರಾಗಿದ್ದ ಜನರಲ್‌ ಎಸ್‌ ಪದ್ಮನಾಭನ್‌, ಶಾ ಅವರಿಗೆ, "ಇಂದು ರಾತ್ರಿ ಗುಜರಾತ್‌ನಲ್ಲಿ ಕಾರ್ಯಪ್ರವೃತ್ತರಾಗಿ, ಗಲಭೆಯನ್ನು ನಿಯಂತ್ರಿಸಿ,” ಎಂದು ಸೂಚಿಸಿದರಂತೆ. ಆಗ ಶಾ, "ರಸ್ತೆ ಮೂಲಕ ಅಲ್ಲಿಗೆ ತಲುಪಲು ಎರಡು ದಿನಗಳು ಬೇಕಾಗುವುದು,'' ಎಂದಾಗ, “ನಿಮ್ಮನ್ನು ಜೋಧಪುರದಿಂದ ಗುಜರಾತ್‌ಗೆ ಕರೆದೊಯ್ಯುವ ಜವಾಬ್ದಾರಿ ವಾಯುಸೇನೆಯದ್ದು. ಎಷ್ಟು ಗರಿಷ್ಠ ಸಂಖ್ಯೆಯಲ್ಲಿ ಸೈನಿಕರನ್ನು ಕರೆದೊಯ್ಯಲು ಸಾಧ್ಯವೋ ಅಷ್ಟೂ ಮಂದಿಯನ್ನು ಏರ್‌ಫೀಲ್ಡ್‌ಗೆ ಕರೆದೊಯ್ಯಿರಿ. ವೇಗವಾಗಿ ಮತ್ತು ದೃಢನಿಶ್ಚಯದೊಂದಿಗೆ ಕಾರ್ಯಶೀಲರಾಗಬೇಕಾದ ಸಂದರ್ಭ,'' ಎಂದು ಸೇನಾ ಮುಖ್ಯಸ್ಥ ಪದ್ಮನಾಭನ್‌ ಹುರಿದುಂಬಿಸಿದ್ದರು.

"ಅಂದು ರಾತ್ರಿ ಅಹಮದಾಬಾದಿನ ಏರ್‌ಫೀಲ್ಡ್‌ನಲ್ಲಿ ಇಳಿದಾಗ, ಕತ್ತಲು ಮತ್ತು ನಿರ್ಜನವಾಗಿತ್ತು,'' ಎಂದು ಆ ದಿನದ ಅನುಭವವನ್ನು ದಾಖಲಿಸಿರುವ ಶಾ, ಆಶ್ವಾಸನೆ ನೀಡಿದಂತೆ ತಮಗೆ ಸಾರಿಗೆ ವ್ಯವಸ್ಥೆಯನ್ನು ಮಾಡಿರಲಿಲ್ಲ ಎಂಬ ಅಚ್ಚರಿಯ ಅಂಶವನ್ನು ವಿವರಿಸುತ್ತಾರೆ.

"ಫೆಬ್ರವರಿ ೨೮-ಮಾರ್ಚ್‌ ೧ರ ರಾತ್ರಿ ಬಹಳ ಮುಖ್ಯವಾದದ್ದಾಗಿತ್ತು. ಇದೇ ಅವಧಿಯಲ್ಲಿ ಭಾರಿ ಪ್ರಮಾಣದ ಹಾನಿಯಾಗಿದ್ದು. ರಾತ್ರಿ ೨ ಗಂಟೆಗೆ ಮುಖ್ಯಮಂತ್ರಿಯವರನ್ನು ಕಂಡೆ. ಏರ್‌ಫೀಲ್ಡ್‌ನಲ್ಲಿ ಇಡೀ ಟ್ರೂಪ್‌ ಮಾರ್ಚ್‌ ೧ರಂದು ಯಾವುದೇ ಕೆಲಸ ಮಾಡದೆ ಕಳೆಯಿತು. ಮಾರ್ಚ್‌ ೨ರಂದು ನಮಗೆ ಸಾರಿಗೆ ವ್ಯವಸ್ಥೆಯಾಯಿತು. ಆ ಹೊತ್ತಿಗೆ ದೊಡ್ಡ ಪ್ರಮಾಣದ ಹಾನಿಯೇ ಆಗಿಹೋಗಿತ್ತು,'' ಎನ್ನುತ್ತಾರೆ.

ಮುಖ್ಯಮಂತ್ರಿ ಮೋದಿಯವರನ್ನು ಭೇಟಿಯಾದಾಗ, ಕೇಳಿದ ಸ್ವಾತಂತ್ರ್ಯ ಮತ್ತು ಅಗತ್ಯ ಸೌಲಭ್ಯಗಳನ್ನು ಒದಗಿಸಿದ್ದರೆ ಹಾನಿ ಕಡಿಮೆಯಾಗುತ್ತಿತ್ತೇ ಎಂಬ ಪ್ರಶ್ನೆಗೆ ಶಾ ಅವರ ನೀಡುವ ಉತ್ತರವಿದು: "ಸರಿಯಾದ ಸಮಯಕ್ಕೆ ನಮಗೆ ವಾಹನಗಳನ್ನು ಸಿಕ್ಕಿದ್ದರೆ, ಹಾನಿಯ ಪ್ರಮಾಣ ತುಂಬಾ ಕಡಿಮೆಯಾಗಿರುತ್ತಿತ್ತು. ಅಷ್ಟಾಗಿಯೂ ಪೊಲೀಸರು ಆರು ದಿನಗಳ ಕಾಲ ಮಾಡಲಾಗದ್ದನ್ನು ನಾವು ೪೮ ದಿನಗಳಲ್ಲಿ ಮಾಡಿ ಮುಗಿಸಿದೆವು. ಪೊಲೀಸರ ಸಂಖ್ಯೆಗೆ ಹೋಲಿಸಿದರೆ ನಮ್ಮ ತುಕಡಿಯು ಆರು ಪಟ್ಟು ಚಿಕ್ಕದಾಗಿತ್ತು. ನಾವು ಎಲ್ಲವನ್ನೂ ನಿಯಂತ್ರಣಕ್ಕೆ ತರಲು ಸಾಧ್ಯವಾಗಿದ್ದು ಮಾರ್ಚ್‌ ೪ಕ್ಕೆ. ಆದರೆ, ನಮಗೆ ಸೂಕ್ತ ರೀತಿಯಲ್ಲಿ ಸೂಕ್ತ ಸಮಯಕ್ಕೆ ನೆರವು ದೊರೆತಿದ್ದರೆ, ಮಾರ್ಚ್‌ ೨ಕ್ಕೆ ನಿಯಂತ್ರಿಸಬಹುದಾಗಿತ್ತು. ಮುಖ್ಯವಾಗಿದ್ದ ಸಂದರ್ಭವನ್ನೇ ನಾವು ಕಳೆದುಕೊಂಡಿದ್ದೆವು,'' ಎಂದು ಪರಿಸ್ಥಿತಿ ನಿಯಂತ್ರಿಸಿದ ಸಂದರ್ಭವನ್ನು ವಿವರಿಸುತ್ತಾರೆ.

ಯಾರನ್ನೂ ನಿರ್ದಿಷ್ಟವಾಗಿ ದೂಷಿಸುವ ಗೋಜಿಗೆ ಹೋಗದ ಶಾ, ಸಾರಿಗೆ ಕಲ್ಪಿಸುವ ಕಾರ್ಯವನ್ನು ಹೆಚ್ಚು ಕ್ಷಿಪ್ರವಾಗಿ ಮಾಡುವ ಪ್ರಯತ್ನವಾಗಿದ್ದರೆ, ಎಲ್ಲವೂ ಸಕಾಲದಲ್ಲಿ ಸಾಧ್ಯವಾಗುತ್ತಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಆದರೆ, ಪೊಲೀಸರ ನಿಷ್ಕ್ರಿಯತೆಯನ್ನು ಟೀಕಿಸಲು ಹಿಂಜರಿಯುವುದಿಲ್ಲ. "ಗುಂಪುಗಳು ಬೀದಿಗಳಲ್ಲಿ ಬೆಂಕಿ ಹಚ್ಚುತ್ತಿದ್ದಾಗ, ಮನೆಗಳಿಗೆ ಬೆಂಕಿಗೆ ಹಚ್ಚುತ್ತಿದ್ದಾಗ ಪೊಲೀಸರು ನಿಂತು ನೋಡುತ್ತಿದ್ದರು. ಅದನ್ನು ನಿಯಂತ್ರಿಸುವ ಯಾವುದೇ ಕ್ರಮ ಅವರು ತೆಗೆದುಕೊಳ್ಳಲಿಲ್ಲ,'' ಎನ್ನುತ್ತಾರೆ.

"ಬಹಳಷ್ಟು ಬಹುಸಂಖ್ಯಾತ ಸಮುದಾಯಕ್ಕೆ ಸೇರಿದ ಶಾಸಕರು ಪೊಲೀಸ್‌ ಸ್ಟೇಷನ್‌ನಲ್ಲಿ ಕೂತಿರುತ್ತಿದ್ದರು. ಅಲ್ಲಿ ಅವರಿಗೇನೂ ಕೆಲಸವಿರಲಿಲ್ಲ. ಇತ್ತ ಪೊಲೀಸರಿಗೆ ನಿಷೇಧಾಜ್ಞೆ ಹೇರಿ ಎಂದು ಬಹಳಷ್ಟು ಸಾರಿ ಹೇಳಿದರೂ ಪೊಲೀಸರು ಸಲಹೆಯನ್ನು ಪರಿಗಣಿಸಲೇ ಇಲ್ಲ. ಆ ಸಂದರ್ಭವನ್ನು ನಿಯಂತ್ರಿಸಿದ ರೀತಿ ನಿಜಕ್ಕೂ ಪೂರ್ವಗ್ರಹ ಪೀಡಿತವಾಗಿತ್ತು,'' ಎಂದು ಪೊಲೀಸರ ನಡೆಯನ್ನು ವಿವರಿಸುತ್ತಾರೆ.

ಇದನ್ನೂ ಓದಿ : ದೊಂಬಿ ಹತ್ಯೆಗಳ ಬಗ್ಗೆ ಪ್ರಧಾನಿ ಮೋದಿಯವರ ಮೌನವನ್ನು ಪ್ರಶ್ನಿಸಿದ ಸ್ವಾಮಿ ಅಗ್ನಿವೇಶ್‌

“ಈ ಘಟನೆಯನ್ನು ಮರೆಯುವುದಕ್ಕೂ ಮೂರು ತಲೆಮಾರು ಬೇಕು. ನನಗೆ ಹಳೆಯ ಗಾಯಗಳನ್ನು ಮತ್ತೆ ಕೆದಕಲು ಇಷ್ಟವಿಲ್ಲ. ಆದರೆ, ೨೦೦೨ರ ಗುಜರಾತ್‌ನಲ್ಲಿ ಏನು ನಡೆಯುವುದು ಎಂಬುದರ ವಾಸ್ತವಾಂಶವನ್ನು ಬಿಚ್ಚಿಡುವುದಕ್ಕಾಗಿ ನನ್ನ ನೆನಪುಗಳನ್ನು ದಾಖಲಿಸಿದ್ದೇನೆ,” ಎಂದು ಹೇಳಿಕೊಂಡಿದ್ದಾರೆ.

“ಗುಜರಾತ್‌ ಸರ್ಕಾರ ೨೦೦೫ರಲ್ಲಿ ಕೇಂದ್ರ ಸರ್ಕಾರಕ್ಕೆ ನೀಡಿದ ಅಂಕಿ-ಅಂಶಗಳ ಪ್ರಕಾರ, ಗಲಭೆಯಲ್ಲಿ ೭೯೦ ಮುಸ್ಲಿಮರು, ೨೫೪ ಹಿಂದೂಗಳ ಹತ್ಯೆಯಾಯಿತು. ೨೨೩ ಮಂದಿ ಕಣ್ಮರೆಯಾಗಿದ್ದರು. ೨೫೦೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಆದರೆ, ಈ ಅಂಕಿ-ಅಂಶಗಳು ವಾಸ್ತವ ಚಿತ್ರಣವನ್ನು ಕಟ್ಟಿಕೊಡುವುದಿಲ್ಲ,” ಎನ್ನುತ್ತಾರೆ ಶಾ.

ಈ ಕೃತಿಗೆ ಟಿಪ್ಪಣಿ ಬರೆದಿರುವ, ಆಗಿನ ಸೇನಾ ಮುಖ್ಯಸ್ಥರಾದ ಎಸ್‌ ಪದ್ಮನಾಭನ್‌, "ಗುಜರಾತ್‌ ಗಲಭೆ ನಿಯಂತ್ರಣಕ್ಕೆ ನಿಯುಕ್ತವಾದ ಝೂಮ್‌ ಪಡೆಯ ನೇತೃತ್ವವನ್ನು ಶಾ ಅವರಿಗೆ ವಹಿಸಿದಾಗ ಸೇನೆಯಲ್ಲಿದ್ದ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದರು. ಹಿರಿಯ ಅಧಿಕಾರಿಗಳು ತಮ್ಮ ಸಂದೇಹ ಹೇಳಿಕೊಂಡಿದ್ದರು. ಆಗ ನಾನು ತಂಡ ಮತ್ತು ಅದರ ನಾಯಕನ ಆಯ್ಕೆ ಸೇನೆಯ ನಿರ್ಧಾರವಾಗಿದ್ದು, ಈ ಚರ್ಚೆಗೆ ಅವಕಾಶವಿಲ್ಲ ಎಂದಿದ್ದೆ. ಝೂಮ್‌ ತುಕಡಿ ಗುಜರಾತ್‌ ತಲುಪಿತು; ತಮ್ಮ ಸಾಮರ್ಥ್ಯ, ನಿಷ್ಪಕ್ಷಪಾತತೆ, ವಿವೇಚನೆಯ ನಿರ್ಧಾರಗಳಿಂದ ಶಾ ಅವರು ಕಡಿಮೆ ಅವಧಿಯಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಿದರು,'' ಎಂಬ ಮೆಚ್ಚುಗೆಯ ನುಡಿಗಳನ್ನು ಬರೆದಿದ್ದಾರೆ.

ಶಾ ಅವರು ತಮ್ಮ ಪುಸ್ತಕದಲ್ಲಿ ಸೈನಿಕರಾಗಿ ಹಾಗೂ ಒಬ್ಬ ಮುಸ್ಲಿಮರಾಗಿ ತಮ್ಮ ಅನುಭವಗಳನ್ನು ದಾಖಲಿಸಿದ್ದಾರೆ.

ಚಿತ್ರ: ನಿವೃತ್ತ ಸೇನಾಧಿಕಾರಿ ಜಮೀರ್‌ ಉದ್ದೀನ್‌ ಶಾ

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More