ಮಾರ್ನಿಂಗ್ ಡೈಜೆಸ್ಟ್ | ಇಂದು ನೀವು ಗಮನಿಸಬೇಕಾದ 4 ಪ್ರಮುಖ ಸುದ್ದಿಗಳು

ಇಂದು ನೀವು ಗಮನಿಸಬೇಕಾದ ಪ್ರಮುಖ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಸುದ್ದಿಗಳು

ಮಧ್ಯಪ್ರದೇಶಕ್ಕೆ ಅಮಿತ್ ಶಾ, ರಾಹುಲ್ ಗಾಂಧಿ ಭೇಟಿ

ಮಧ್ಯಪ್ರದೇಶ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಶನಿವಾರ ಮಧ್ಯಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಅಮಿತ್ ಶಾ ಅವರು ಮಹಾ ಜನಸಂಪರ್ಕ್ ಅಭಿಯಾನ ಕೈಗೊಳ್ಳಲಿದ್ದಾರೆ. ಜಬಲ್‌ಪುರದಲ್ಲಿ ಆಯೋಜಿಸಿರುವ ಆದಿವಾಸಿ ಸಮ್ಮೇಳನ ಕಾರ್ಯಕ್ರದಲ್ಲಿ ಪಾಲ್ಗೊಂಡು, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಜೊತೆ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ. ಇನ್ನು, ರಾಹುಲ್ ಗಾಂಧಿಯವರು ಗ್ವಾಲಿಯರ್‌ಗೆ ಆಗಮಿಸಲಿದ್ದು, ಮೊರಾನಾದಲ್ಲಿ ನಡೆಯುವ ಆದಿವಾಸಿ ಏಕ್ತಾ ಪರಿಷತ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.

ರಾಜಸ್ಥಾನಕ್ಕೆ ಪ್ರಧಾನಿ ನರೇಂದ್ರ ಮೋದಿ

ಮುಂಬರುವ ರಾಜಸ್ಥಾನ ವಿಧಾನಸಭಾ ಚುನಾವಣಾ ಪ್ರಚಾರಕ್ಕಾಗಿ ರಾಜ್ಯಾದ್ಯಂತ ಮುಖ್ಯಮಂತ್ರಿ ವಸುಂಧರಾ ರಾಜೇ ಆಯೋಜಿಸಿರುವ ‘ರಾಜಸ್ಥಾನ್ ಗೌರವ್ ಯಾತ್ರಾ’ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ಪಾಲ್ಗೊಳ್ಳಲಿದ್ದಾರೆ. ಅಜ್ಮೀರದಲ್ಲಿ ನಡೆಯಲಿರುವ ರ್ಯಾಲಿಯಲ್ಲಿ ಪಾಲ್ಗೊಂಡು, ಪುಷ್ಕರ್ ನಗರದಲ್ಲಿರುವ ಬ್ರಹ್ಮ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.

ಇನ್ನಿಂಗ್ಸ್ ಸೋಲಿನಿಂದ ಪಾರಾಗುವುದೇ ವಿಂಡೀಸ್?

ರಾಜ್‌ಕೋಟ್‌ನಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್ ತಂಡ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಭಾರತದ ಬೃಹತ್ ಮೊತ್ತಕ್ಕೆ ಪ್ರತಿಯಾಗಿ ೯೪ ರನ್‌ಗಳಿಗೆ ೬ ವಿಕೆಟ್ ಕಳೆದುಕೊಂಡಿರುವ ವಿಂಡೀಸ್, ಫಾಲೋಆನ್ ಸುಳಿಯಲ್ಲಿ ಸಿಲುಕಿದ್ದು ಸಂಕಷ್ಟಕ್ಕೆ ಗುರಿಯಾಗಿದೆ. 9 ವಿಕೆಟ್‌ಗೆ ೬೪೯ ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿರುವ ಭಾರತ ಪಂದ್ಯದಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿದ್ದು, ಮೂರನೇ ದಿನದಾಟ ಕುತೂಹಲ ಮೂಡಿಸಿದೆ. ಪ್ರಸ್ತುತ ಕ್ರೀಸ್‌ನಲ್ಲಿರುವ ರೋಸ್ಟನ್ ಚೇಸ್ ಮತ್ತು ಕೀಮೊ ಪೌಲ್ ಜೋಡಿಯ ಜತೆಯಾಟ ವಿಂಡೀಸ್‌ಗೆ ನಿರ್ಣಾಯಕವಾಗಿದೆ. ಭಾರತದ ಆಕ್ರಮಣಕಾರಿ ಆಟದಿಂದಾಗಿ ಐದು ದಿನಗಳ ಪಂದ್ಯ ಮುಂಚಿತವಾಗಿಯೇ ಮುಗಿಯುವ ಎಲ್ಲ ಲಕ್ಷಣವನ್ನೂ ತೋರಿದೆ.

ಒಸಾಕ, ವೋಜ್ನಿಯಾಕಿಗೆ ಫೈನಲ್ ಗುರಿ

ಚೀನಾ ಓಪನ್ ಟೆನಿಸ್ ಪಂದ್ಯಾವಳಿಯ ವನಿತೆಯರ ಸಿಂಗಲ್ಸ್ ವಿಭಾಗದ ಎರಡು ಸಿಂಗಲ್ಸ್ ಸೆಮಿಫೈನಲ್ ಪಂದ್ಯಗಳು ಇಂದು ನಡೆಯಲಿವೆ. ಜಪಾನ್ ಆಟಗಾರ್ತಿ ನವೊಮಿ ಒಸಾಕ ಲಾಟ್ವಿಯಾದ ಅನಸ್ಟಾಸಿಯಾ ಸೆವಾಸ್ಟೋವಾ ವಿರುದ್ಧ ಇಂದು ಮಧ್ಯಾಹ್ಯನ ಸುಮಾರು ೧೨.೦೦ ಗಂಟೆಗೆ ಆರಂಭವಾಗಲಿರುವ ಪಂದ್ಯದಲ್ಲಿ ಕಾದಾಡಲಿದ್ದಾರೆ. ಮತ್ತೊಂದು ಸೆಮಿಫೈನಲ್‌ನಲ್ಲಿ ವಿಶ್ವದ ಎರಡನೇ ಶ್ರೇಯಾಂಕಿತ ಆಟಗಾರ್ತಿ ಕರೋಲಿನ್ ವೋಜ್ನಿಯಾಕಿ ಚೀನಾದ ಕಿಯಾಂಗ್ ವಾಂಗ್ ಎದುರು ಕಾದಾಡಲಿದ್ದಾರೆ. ಸಂಜೆ ೫.೦೦ ಗಂಟೆ ಸುಮಾರಿಗೆ ವೋಜ್ನಿಯಾಕಿ ಮತ್ತು ಕಿಯಾಂಗ್ ನಡುವಣದ ಪಂದ್ಯ ಆರಂಭವಾಗುವ ನಿರೀಕ್ಷೆ ಇದೆ. ಋತುವಿನ ಮೊದಲ ಗ್ರಾಂಡ್‌ಸ್ಲಾಮ್ ಆಸ್ಟ್ರೇಲಿಯನ್ ಓಪನ್ ಗೆದ್ದ ವೋಜ್ನಿಯಾಕಿ ಡಬ್ಲ್ಯೂಟಿಎ ಫೈನಲ್ಸ್‌ಗೂ ಮುನ್ನ ಚೀನಾ ಓಪನ್ ಗೆಲ್ಲುವ ಗುರಿ ಹೊತ್ತಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More