ಟ್ವಿಟರ್ ಸ್ಟೇಟ್ | ಲೈಂಗಿಕ ದೌರ್ಜನ್ಯದ ಬಗ್ಗೆ ಧ್ವನಿ ಎತ್ತಿದ ಪತ್ರಕರ್ತೆಯರು

ಕಾರ್ಯಕ್ಷೇತ್ರದಲ್ಲಿ ಹಿರಿಯ ಪತ್ರಕರ್ತರು ಲೈಂಗಿಕವಾಗಿ ಅನುಚಿತ ನಡವಳಿಕೆ ತೋರಿಸಿರುವ ಬಗ್ಗೆ ಮಹಿಳಾ ಪತ್ರಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ಮಹಿಳಾ ಪತ್ರಕರ್ತರ ಈ ಮೌನ ಮುರಿಯುವ ಹೋರಾಟದಲ್ಲಿ ಕಳೆದ ಎರಡು ದಿನಗಳಲ್ಲಿ ಹಲವರ ಬಣ್ಣ ಬಯಲಾಗಿದೆ

ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ವಿರುದ್ಧ ‘Me too’ ಅಭಿಯಾನ ಕಳೆದ ಒಂದು ವರ್ಷದಿಂದ ನಡೆಯುತ್ತಿದೆ. ಆದರೆ, ಹಾರ್ವೇ ವೇನ್‌ಸ್ಟೇನ್‌ ವಿರುದ್ಧ ಆರಂಭಿಸಿದ ಈ ಪ್ರಚಾರಾಭಿಯಾನ ಇಂದಿಗೂ ಜಾಗತಿಕವಾಗಿ ಪ್ರಬಲವಾಗಿ ಮುಂದುವರಿದಿದೆ. ಭಾರತದ ಪತ್ರಕರ್ತೆಯರು ಕಳೆದ ಕೆಲವು ದಿನಗಳಿಂದ ಈ ಅಭಿಯಾನ ನಡೆಸಿ ಬಹಳಷ್ಟು ‘ಗೌರವಾನ್ವಿತ’ ಸಂಪಾದಕರ ಮತ್ತೊಂದು ಮುಖವನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಮಾಜಿ ಬಾಲಿವುಡ್‌ ನಟಿ ತನುಶ್ರೀ ದತ್ತಾ ತಮ್ಮ ಅನುಭವವನ್ನು ಹಂಚಿಕೊಂಡಿರುವುದು ಪತ್ರಕರ್ತೆಯರ ಈ ಅಭಿಯಾನಕ್ಕೆ ಪ್ರೇರಣೆಯಾಗಿದೆ.

ಕಳೆದ ಕೆಲ ದಿನಗಳಲ್ಲಿ ದೇಶದ ಕೆಲವು ಪ್ರಮುಖ ಪತ್ರಕರ್ತರು ಮತ್ತು ಕಾದಂಬರಿಕಾರರ ಬಣ್ಣ ಬಯಲಾಗಿದೆ. ಅವರಲ್ಲಿ ಮುಖ್ಯವಾದವರು ‘ಟೈಮ್ಸ್‌ ಆಫ್ ಇಂಡಿಯಾ’ದ ಹೈದರಾಬಾದ್ ಸ್ಥಾನಿಕ ಸಂಪಾದಕ ಕೆ ಆರ್ ಶ್ರೀನಿವಾಸ್, ‘ಡಿಎನ್‌ಎ’ ಸಂಪಾದಕ ಗೌತಮ್ ಅಧಿಕಾರಿ, ‘ಹಿಂದೂಸ್ತಾನ್ ಟೈಮ್ಸ್’ ಸಹಾಯಕ ಸಂಪಾದಕರಾದ ಮನೋಜನ್ ರಾಮಚಂದ್ರನ್, ಕಾದಂಬರಿಕಾರರಾದ ಕಿರಣ್ ನಗರ್‌ಕರ್, ಸಂಗೀತ ದಿಗ್ಗಜರಾದ ಕೈಲಾಶ್ ಖೇರ್‌, ಹಾಸ್ಯನಟ ಉತ್ಸವ ಚಕ್ರವರ್ತಿ ಮೊದಲಾದವರು. ಈ ಸಾಲಿಗೆ ಇತ್ತೀಚೆಗಿನ ಸೇರ್ಪಡೆ ಎಂದರೆ ಚೇತನ್ ಭಗತ್‌.

ಶೀನಾ ಎನ್ನುವವರು ಜನಪ್ರಿಯ ಲೇಖಕ ಚೇತನ್ ಭಗತ್ ಮಹಿಳೆಯೊಬ್ಬರ ಜೊತೆಗೆ ಅನುಚಿತವಾಗಿ ಮಾತುಕತೆ ನಡೆಸಿರುವ ಸ್ಕ್ರೀನ್‌ ಶಾಟ್ ಟ್ವೀಟ್ ಮಾಡಿದ್ದಾರೆ. ನಂತರ ಈ ಮಾತುಕತೆ ನಡೆದದ್ದನ್ನು ಒಪ್ಪಿಕೊಂಡ ಚೇತನ್ ಭಗತ್ ಕ್ಷಮೆ ಯಾಚಿಸಿದ್ದಾರೆ. “ಸಾಮಾನ್ಯ ಎಂದು ತಮಾಷೆಗೆ ಆಡಿದ ಮಾತುಗಳು ಸಂಬಂಧಿತ ವ್ಯಕ್ತಿಗೆ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ,” ಎಂದು ಚೇತನ್ ಭಗತ್ ಹೇಳಿದ್ದಾರೆ.

ಪತ್ರಕರ್ತೆ ಸಂಧ್ಯಾ ಮೆನನ್ ಮೊದಲು ‘ಟೈಮ್ಸ್ ಆಫ್ ಇಂಡಿಯಾ’ದ ಹೈದರಾಬಾದ್‌ನ ಸ್ಥಾನಿಕ ಸಂಪಾದಕರಾದ ಕೆ ಆರ್ ಶ್ರೀನಿವಾಸ್ ಅವರ ಜೊತೆಗಿನ ಕೆಟ್ಟ ಅನುಭವವನ್ನು ಟ್ವಿಟರ್ ಮೂಲಕ ಹಂಚಿಕೊಂಡಿದ್ದರು. ೨೦೦೮ರಲ್ಲಿ ‘ಬೆಂಗಳೂರು ಮಿರರ್‌’ನಲ್ಲಿ ಜೊತೆಯಾಗಿ ಕೆಲಸ ಮಾಡುತ್ತಿದ್ದಾಗ ಸಂಧ್ಯಾ ಜೊತೆ ಶ್ರೀನಿವಾಸ್ ಅಹಿತಕರವಾಗಿ ನಡೆದುಕೊಂಡಿದ್ದರು. ಸಂಧ್ಯಾರನ್ನು ರಾತ್ರಿ ಮನೆಗೆ ಡ್ರಾಪ್ ಮಾಡುವಾಗ ಶ್ರೀನಿವಾಸ್ ಆಕೆಯ ತೊಡೆಯ ಮೇಲೆ ಕೈ ಹಾಕಿ, ತಮ್ಮ ಪತ್ನಿಯ ಜೊತೆಗೆ ಸಂಬಂಧ ಹದಗೆಟ್ಟಿರುವುದನ್ನು ಪ್ರಸ್ತಾಪಿಸಿದ್ದರು. ಸಂಧ್ಯಾ ಈ ನಡವಳಿಕೆಯನ್ನು ವಿರೋಧಿಸಿ, ಕೈ ತೆಗೆಯುವಂತೆ ಸೂಚಿಸಿ ಕಾರಿನಿಂದ ಇಳಿದುಹೋಗಿದ್ದರು. ಮರುದಿನ ಸಂಧ್ಯಾ, ಸಂಸ್ಥೆಯ ಮಾನವ ಸಂಪನ್ಮೂಲ ಅಧಿಕಾರಿಗೆ ಈ ಬಗ್ಗೆ ದೂರು ಕೊಟ್ಟರೂ ಪ್ರಯೋಜನವಾಗಿರಲಿಲ್ಲ. ಶ್ರೀನಿವಾಸ್ ಬಹಳ ಉತ್ತಮ ನಡವಳಿಕೆಯ ವ್ಯಕ್ತಿ ಎಂದೇ ಹಲವರು ಸಮರ್ಥಿಸಿಕೊಂಡು, ದೂರನ್ನು ಅಲಕ್ಷಿಸಿದ್ದರು.

ಆದರೆ, ಸಂಧ್ಯಾ ಟ್ವಿಟರ್‌ನಲ್ಲಿ ಶ್ರೀನಿವಾಸ್ ಬಗ್ಗೆ ದೂರು ನೀಡಿದ ನಂತರ ಹಲವು ಪತ್ರಕರ್ತೆಯರು ಅವರ ಜೊತೆಗಿನ ತಮ್ಮ ಕೆಟ್ಟ ಅನುಭವವನ್ನು ಹೇಳಿಕೊಂಡಿದ್ದಾರೆ. ಪತ್ರಕರ್ತೆ ಸೌಮ್ಯ, ಪತ್ರಕರ್ತೆ ವಾಣಿ ಸರಸ್ವತಿ ಇಂಟರ್ನ್ ಆಗಿ ಕೆಲಸ ಮಾಡುತ್ತಿದ್ದಾಗ ಶ್ರೀನಿವಾಸ್ ಜೊತೆಗಿನ ಕೆಟ್ಟ ಅನುಭವವನ್ನು ಟ್ವಿಟರ್‌ನಲ್ಲಿ ವಿವರಿಸಿದ್ದಾರೆ.

ತಮ್ಮ ಮೇಲಿನ ಆರೋಪಗಳಿಗೆ ಉತ್ತರಿಸಿರುವ ಕೆ ಆರ್ ಶ್ರೀನಿವಾಸ್, “ಟೈಮ್ಸ್ ಆಫ್ ಇಂಡಿಯಾ ನನ್ನ ಮೇಲಿನ ಆರೋಪಗಳ ವಿಚಾರಣೆ ನಡೆಸುವುದಾಗಿ ಹೇಳಿದೆ. ಇದಕ್ಕಾಗಿ ಒಂದು ಸಮಿತಿಯನ್ನೂ ರಚಿಸಿದೆ. ನಾನು ವಿಚಾರಣೆಗೆ ಸಿದ್ಧನಾಗಿದ್ದೇನೆ,” ಎಂದು ಟ್ವಿಟರ್‌ನಲ್ಲಿ ಹೇಳಿದ್ದಾರೆ.

ಸಂಧ್ಯಾರಿಗೆ ‘ಡಿಎನ್‌ಎ’ಯಲ್ಲಿ ಕೆಲಸ ಮಾಡುತ್ತಿದ್ದಾಗಲೂ ಇಂತಹುದೇ ಅನುಭವವಾಗಿತ್ತು. ‘ಡಿಎನ್‌ಎ’ ಮಾಜಿ ಸಂಪಾದಕ ಗೌತಮ್ ಅಧಿಕಾರಿ ಅವರೂ ಅಹಿತಕರವಾಗಿ ನಡೆದುಕೊಂಡಿರುವುದಾಗಿ ಆರೋಪಿಸಿದ್ದಾರೆ. ಗೌತಮ್ ಅಧಿಕಾರಿ ಅನಗತ್ಯವಾಗಿ ತಮ್ಮ ಕೆನ್ನೆಯನ್ನು ಚುಂಬಿಸಿದ ಪ್ರಕರಣವನ್ನು ಸಂಧ್ಯಾ ವಿವರಿಸಿದ್ದಾರೆ. ನಂತರ ಅವರ ಟ್ವೀಟ್‌ಗೆ ಉತ್ತರವಾಗಿ ಹಲವು ಮಂದಿ ಗೌತಮ್ ಅಧಿಕಾರಿ ತಮ್ಮೊಂದಿಗೆ ಅನುಚಿತವಾಗಿ ನಡೆದುಕೊಂಡಿರುವ ವಿವರಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : ತಮ್ಮ ಮೇಲೂ ಲೈಂಗಿಕ ದೌರ್ಜನ್ಯ ನಡೆದಿತ್ತು ಎಂದು ಬರೆದುಕೊಂಡ ನಟಿ ಸಪ್ನಾ ಪಬ್ಬಿ

‘ಹಿಂದೂಸ್ತಾನ್ ಟೈಮ್ಸ್’ ಸಹಾಯಕ ಸಂಪಾದಕರಾಗಿದ್ದ ಮನೋಜನ್ ರಾಮಚಂದ್ರನ್ ಅವರ ಬಗ್ಗೆಯೂ ಸಂಧ್ಯಾ ಮೆನನ್ ಅನುಚಿತ ನಡವಳಿಕೆಯ ಆರೋಪ ಹೊರಿಸಿದ್ದಾರೆ. ಕೆಟ್ಟ ಸಂದೇಶವನ್ನು ಕಳುಹಿಸಿದ ನಂತರ ‘ಪಾನಮತ್ತನಾಗಿ ಹಾಗೆ ಸಂದೇಶ ಕಳುಹಿಸಿದೆ’ ಎಂದು ಮರುದಿನ ಮನೋಜನ್ ಸಮಜಾಯಿಶಿ ನೀಡಿದ್ದರು.

ಸಂಧ್ಯಾ ಅವರು ತಮ್ಮ ಅನುಭವವನ್ನು ಟ್ವಿಟರ್ ಮೂಲಕ ಹಂಚಿಕೊಳ್ಳುತ್ತಿದ್ದಂತೆಯೇ ಬಹಳಷ್ಟು ಮಂದಿ ಹಲವು ಗಣ್ಯರ ಸಣ್ಣತನದ ನಡವಳಿಕೆ ಬಗ್ಗೆ ಟ್ವೀಟ್‌ ಮಾಡಿದ್ದಾರೆ. ಲೇಖಕ ಮತ್ತು ಪತ್ರಕರ್ತರಾದ ಕಿರಣ್ ನಗರ್‌ಕರ್ ಬಗ್ಗೆ ಬಹಳಷ್ಟು ಮಂದಿ ತಮ್ಮ ಅನುಭವವನ್ನು ಸಂಧ್ಯಾ ಅವರಿಗೆ ವಿವರಿಸಿದ್ದಾರೆ. ಆ ಟ್ವೀಟ್‌ಗಳನ್ನೂ ಸಂಧ್ಯಾ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಪತ್ರಕರ್ತೆ ಪೂರ್ವ ಜೋಶಿ ಮೊದಲಿಗೆ ಹೆಸರು ಹೇಳದೆ ಸಂಧ್ಯಾ ಜೊತೆಗೆ ತಮ್ಮ ಅನುಭವ ಹೇಳಿಕೊಂಡಿದ್ದರು. ಆದರೆ, ನಂತರ ಬಹಿರಂಗವಾಗಿ ಟ್ವೀಟ್ ಮಾಡಿ, ಕಿರಣ್ ನಗರ್‌ಕರ್ ತಮ್ಮ ಜೊತೆಗೆ ಅನುಚಿತವಾಗಿ ನಡೆದುಕೊಂಡಿದ್ದನ್ನು ಹೇಳಿದ್ದಾರೆ. ಕಿರಣ್ ನಗರ್‌ಕರ್ ಬಗ್ಗೆ ಸಂಧ್ಯಾ ಅವರ ಟ್ವೀಟ್‌ಗಳನ್ನು ಕಂಡು ಇನ್ನೂ ಹಲವು ಮಂದಿ ತಮಗೂ ಕೆಟ್ಟ ಅನುಭವವಾಗಿದೆ ಎಂದು ಹೇಳಿಕೊಂಡಿದ್ದಾರೆ.

ಮತ್ತೊಬ್ಬ ಪತ್ರಕರ್ತೆ ಅನೂ ಭುಯಾನ್ ಟ್ವಿಟರ್ ಮೂಲಕ ‘ಬಿಸಿನೆಸ್ ಸ್ಟಾಂಡರ್ಡ್’ ವರದಿಗಾರ ಮಾಯಾಂಕ್ ಜೈನ್ ಜೊತೆಗಿನ ಕೆಟ್ಟ ಅನುಭವವನ್ನು ವಿವರಿಸಿದ್ದಾರೆ. ಅನು ಅಭಿಪ್ರಾಯ ಟ್ವಿಟರ್‌ನಲ್ಲಿ ಕಂಡ ಕೂಡಲೇ ಪತ್ರಕರ್ತೆ ಪ್ರಿಯಾಂಕಾ ಬನ್ಸಲ್ ಅವರೂ ಮಾಯಾಂಕ್ ಜೈನ್ ತಮ್ಮ ಜೊತೆಗೆ ಅನುಚಿತವಾಗಿ ನಡೆದುಕೊಂಡಿದ್ದನ್ನು ವಿವರಿಸಿದ್ದಾರೆ. ಮಾಯಾಂಕ್ ಜೈನ್ ಮಾತ್ರವಲ್ಲದೆ, ಮತ್ತೊಬ್ಬ ಮಾಜಿ ಸಂಪಾದಕ ಅನುರಾಗ್ ವರ್ಮಾ ಕುರಿತಂತೆಯೂ ಪತ್ರಕರ್ತೆಯರು ಆರೋಪ ಹೊರಿಸಿದ್ದಾರೆ.‌

ಸಂಗೀತ ದಿಗ್ಗಜ ಕೈಲಾಶ್ ಖೇರ್ ಮತ್ತು ಹಾಸ್ಯನಟ ಉತ್ಸವ ಚಕ್ರವರ್ತಿ ಅವರ ಮೇಲೂ ಮಹಿಳೆಯರು ಇಂತಹುದೇ ಆರೋಪ ಹೊರಿಸಿದ್ದಾರೆ. ಮಸ್ಕಟ್‌ನ ಪತ್ರಕರ್ತೆಯೊಬ್ಬಳ ಜೊತೆಗೆ ಕೈಲಾಶ್ ಖೇರ್ ಅನುಚಿತವಾಗಿ ನಡೆದುಕೊಂಡ ಬಗ್ಗೆ ಆಕೆ ವಿವರಿಸಿದ್ದನ್ನು ಸಂಧ್ಯಾ ಮೆನನ್ ಟ್ವೀಟ್ ಮಾಡಿದ್ದಾರೆ. ಹಾಸ್ಯನಟ ಉತ್ಸವ್ ಟ್ವಿಟರ್ ಮೂಲಕವೇ ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ.

ತಮ್ಮ ಮೇಲೆ ಬಂದಿರುವ ಆರೋಪಗಳ ಬಗ್ಗೆ ಬಹಳಷ್ಟು ಪತ್ರಕರ್ತರು ಕ್ಷುಲ್ಲಕ ತಮಾಷೆ ಸಂದೇಶಗಳೆಂದೇ ತಳ್ಳಿಹಾಕಿದ್ದಾರೆ. ಅನುರಾಗ್ ವರ್ಮಾ ಕ್ಷಮೆ ಯಾಚಿಸಿ, “ತಮಾಷೆಗಾಗಿ ಮೀಮ್‌ಗಳನ್ನು ಕಳುಹಿಸಿದ್ದೇನೆಯೇ ವಿನಾ ನಗ್ನಚಿತ್ರಗಳನ್ನು ಕಳುಹಿಸುವಂತೆ ಕೇಳಿಕೊಂಡಿಲ್ಲ,” ಎಂದು ಸಮಜಾಯಿಶಿ ನೀಡಿದ್ದಾರೆ. ಮನೋಜ್ ರಾಮಚಂದ್ರನ್ ತಮ್ಮ ಟ್ವಿಟರ್ ಖಾತೆಯನ್ನೇ ರದ್ದು ಮಾಡಿದ್ದಾರೆ. ಗೌತಮ್ ಅಧಿಕಾರಿ, “ಅನುಚಿತವಾಗಿ ನಡೆದುಕೊಂಡ ಘಟನೆಗಳು ನೆನಪಿಲ್ಲ,” ಎಂದು ಉತ್ತರಿಸಿದ್ದಾರೆ. ಮಾಯಾಂಕ್ ಜೈನ್ ಯಾವುದೇ ವಿವರಣೆ ನೀಡದೆ ಮಾಧ್ಯಮಕ್ಕೆ ಸಂಬಂಧಿಸಿದ ವಾಟ್ಸಪ್‌ ಮತ್ತು ಟ್ವಿಟರ್ ಗ್ರೂಪ್‌ಗಳಿಂದ ಹೊರನಡೆದಿದ್ದಾರೆ. ಆದರೆ, ಈ ಪತ್ರಕರ್ತರು ಕೆಲಸ ಮಾಡುತ್ತಿರುವ ಬಹುತೇಕ ಸಂಸ್ಥೆಗಳು ಕ್ರಮ ಕೈಗೊಳ್ಳುವ ಭರವಸೆ ನೀಡಿವೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More