ಇಂದಿನ ಡೈಜೆಸ್ಟ್‌ | ನೀವು ಗಮನಿಸಲೇಬೇಕಾದ 8 ಪ್ರಮುಖ ಸುದ್ದಿಗಳು

ನೀವು ಗಮನಿಸಲೇಬೇಕಾದ ಇಂದಿನ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ನೋಟ

ಕಾಂಗ್ರೆಸ್ ಜೊತೆ ಮೈತ್ರಿ ಕಡಿದುಕೊಂಡ ಸಮಾಜವಾದಿ ಪಕ್ಷ

ಚತ್ತೀಸ್‌ಗಢ ಹಾಗೂ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಬಹುಜನ ಸಮಾಜವಾದಿ ಪಕ್ಷ ಹೇಳಿದ ಬೆನ್ನಲ್ಲೇ, ಇದೀಗ ಸಮಾಜವಾದಿ ಪಕ್ಷ ಕೂಡ ಇದೇ ನಿಲುವನ್ನು ವ್ಯಕ್ತಪಡಿಸಿದೆ. ಶನಿವಾರ ಈ ಕುರಿತಂತೆ ಮಾಧ್ಯಮಗಳಿಗೆ ವಿವರ ನೀಡಿರುವ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್, “ಬಿಎಸ್ ಪಿ ಜೊತೆ ಸೇರಿಕೊಂಡು ಒಟ್ಟಾಗಿ ಚುನಾವಣೆ ಎದುರಿಸುವ ಸಂಬಂಧ ಆ ಪಕ್ಷದೊಂದಿಗೆ ಮಾತುಕತೆ ನಡೆಸಲಾಗುವುದು. ಕಾಂಗ್ರೆಸ್ ಪಕ್ಷ ಈಗಾಗಲೇ ಸಾಕಷ್ಟು ಸಮಯವನ್ನು ಹಾಳುಮಾಡಿದೆ. ಚುನಾವಣಾ ದಿನಾಂಕ ಕೂಡ ಘೋಷಣೆ ಆಗಿರುವುದರಿಂದ ನಾವಿನ್ನು ಕಾಯಲು ಸಾಧ್ಯವಿಲ್ಲ,” ಎಂದು ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು.

ಬ್ಯಾಂಕ್ ಖಾತೆ, ಸಿಮ್‌ಗೆ ಆಧಾರ್ ಜೋಡಣೆ ಮುಂದುವರಿಯಲಿದೆ: ಅರುಣ್ ಜೇಟ್ಲಿ

“ಬ್ಯಾಂಕ್ ಖಾತೆ ಹಾಗೂ ಮೊಬೈಲ್ ಸಿಮ್‌ಗಳಿಗೆ ಆಧಾರ್ ಜೋಡಣೆ ನಿಯಮ ಕಡ್ಡಾಯವಾಗಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಸಂಸತ್ ನಲ್ಲಿ ಈ ನಿಯಮಕ್ಕೆ ಅನುಮೋದನೆ ದೊರಕಿದ್ದು, ಈ ಹಿಂದಿನಂತೆಯೇ ಈ ನಿಯಮ ಜಾರಿಯಲ್ಲಿರಲಿದೆ,” ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ. ಕಳೆದ ತಿಂಗಳು ಆಧಾರ್ ಸಾಂವಿಧಾನಿಕ ಮಾನ್ಯತೆ ಎತ್ತಿಹಿಡಿದಿದ್ದ ಸುಪ್ರೀಂ ಕೋರ್ಟ್, “ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಮಾತ್ರ ಆಧಾರ್ ಕಡ್ಡಾಯ; ಟೆಲಿಕಾಂ ಕಂಪನಿಗಳಿಗೆ ಮತ್ತು ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯವಲ್ಲ,” ಎಂದು ತೀರ್ಪು ನೀಡಿತ್ತು.

ಇಳಿಕೆ ನಂತರ ಮತ್ತೆ ಏರಿತು ಪೆಟ್ರೋಲ್ ಮತ್ತು ಡಿಸೇಲ್ ದರ

ಪೆಟ್ರೋಲ್ ಮತ್ತು ಡಿಸೇಲ್ ದರವನ್ನು ಕೇಂದ್ರ ಸರ್ಕಾರ 1.50 ರುಪಾಯಿ ಮತ್ತು ತೈಲ ಮಾರುಕಟ್ಟೆ ಕಂಪನಿಗಳು 1 ರುಪಾಯಿ ದರ ಕಡಿತ ಮಾಡಿದ ನಂತರ ಮತ್ತೆ ದರ ಏರಿಕೆ ಆರಂಭವಾಗಿದೆ. ಶನಿವಾರ ಪೆಟ್ರೋಲ್ 18 ಪೈಸೆ ಏರಿದರೆ ಡಿಸೇಲ್ 29 ಪೈಸೆ ಏರಿದೆ. ಕರ್ನಾಟಕದಲ್ಲಿ ಈ ಹಿಂದೆಯೇ 2 ರುಪಾಯಿ ತೆರಿಗೆ ಕಡಿತ ಮಾಡಲಾಗಿತ್ತು. ಆದರೆ, ಈ ಅವಧಿಯಲ್ಲಿ ತೆರಿಗೆ ಕಡಿತಪೂರ್ವದಲ್ಲಿದ್ದ ಮಟ್ಟಕ್ಕೆ ದರ ಏರಿದ್ದವು. ಮತ್ತೆ ಅಕ್ಟೋಬರ್ 5 ರಂದು 2.53 ರುಪಾಯಿ ಇಳಿದಿತ್ತು. ಈಗ ಮತ್ತೆ ಏರಿಕೆ ಆರಂಭವಾಗಿದ್ದು ಶನಿವಾರ ಬೆಂಗಳೂರಿನಲ್ಲಿ ಪೆಟ್ರೋಲ್ 82.32 ಮತ್ತು ಡಿಸೇಲ್ 73.61ಕ್ಕೆ ಏರಿದೆ.

ಚಾಲ್ತಿ ಖಾತೆ ಕೊರತೆ ತಗ್ಗಿಸಲು ಮತ್ತಷ್ಟು ಕ್ರಮ: ಅರುಣ್ ಜೇಟ್ಲಿ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆಯಿಂದ ಮತ್ತು ಡಾಲರ್ ವಿರುದ್ಧ ರುಪಾಯಿ ಮೌಲ್ಯ ಕುಸಿಯುತ್ತಿರುವುದರಿಂದ ಹಿಗ್ಗುತ್ತಿರುವ ಚಾಲ್ತಿ ಖಾತೆ ಕೊರತೆಯನ್ನು ತಗ್ಗಿಸಲು ಕೇಂದ್ರ ಸರ್ಕಾರ ಮತ್ತಷ್ಟು ಕ್ರಮ ಕೈಗೊಳ್ಳಲಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಎಚ್ಟಿ ಲೀಡರ್ಷಿಪ್ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಅವರು, ಕೇಂದ್ರ ಸರ್ಕಾರ ಈಗಾಗಲೇ ಮಾರುಕಟ್ಟೆಯಿಂದ ಪಡೆಯುವ ಸಾಲದ ಪ್ರಮಾಣವನ್ನು 70,000 ಕೋಟಿಗಳಷ್ಟು ತಗ್ಗಿಸಿದೆ. ಅನಾವಶ್ಯಕ ಮತ್ತು ಐಷಾರಾಮಿ ವಸ್ತುಗಳನ್ನು ಆಮದು ಮಾಡಿಕೊಳ್ಳುವುದರ ಮೇಲೆ ನಿರ್ಬಂಧ ಹೇರಿದೆ. ಈ ಕ್ರಮಗಳಿಂದಾಗಿ ಚಾಲ್ತಿ ಖಾತೆ ಕೊರತೆ ತಗ್ಗುತ್ತಿದೆ. ಈ ಹಂತದಲ್ಲಿ ಕೇಂದ್ರವು ಮತ್ತಷ್ಟು ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.

ಅಮೆರಿಕದಲ್ಲಿ ೨೦೦ ಜನರಿಗೆ ಒಬ್ಬ ವಕೀಲರಾದರೆ, ಭಾರತದಲ್ಲಿ ೧,೮೦೦ಮಂದಿಗೆ ಒಬ್ಬರು: ಗೊಗೊಯ್

ಭಾರತದಲ್ಲಿ ವಕೀಲರ ಜನಸಂಖ್ಯಾ ಪ್ರಮಾಣದ ವೃದ್ಧಿ ಕುರಿತು ಶನಿವಾರ ಮಾತಾಡಿದ ಸುಪ್ರೀಂ ಕೋರ್ಟ್ ನೂತನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, “ಅಮೆರಿಕದಲ್ಲಿ ೨೦೦ ಜನರಿಗೆ ಒಬ್ಬ ವಕೀಲರಾದರೆ ಭಾರತದಲ್ಲಿ ೧೮೦೦ ಒಬ್ಬ ವಕೀಲರಿದ್ದಾರೆ,” ಎಂದು ವಕೀಲರ ಗುಣಮಟ್ಟ ಹಾಗೂ ಕೊರತೆಯ ಬಗ್ಗೆ ಮಾತಾಡಿದ್ದಾರೆ. “ಭಾರತದಲ್ಲಿ ೭೬ ಪ್ರತಿಶತದಷ್ಟು ಜನ ಕೈದಿಗಳು ವಿಚಾರಣಾ ಹಂತದಲ್ಲಿದ್ದಾರೆ. ಈ ವಿಚಾರಣಾ ಹಂತದಲ್ಲಿರುವವರ ಪೈಕಿ ೪೭ ಪ್ರತಿಶತದಷ್ಟು ಜನರು ೧೮-೩೦ ವರ್ಷ ವಯಸ್ಸಿನ ಯುವ ಸಮುದಾಯವಾಗಿದೆ. ಇದರರ್ಥ, ಭಾರತದ ಬಹುಪಾಲು ಯುವ ಸಮುದಾಯ ವಿಚಾರಣಾ ಹಂತದಲ್ಲೇ ಇದೆ. ಹಾಗಾಗಿ ಕಾನೂನಿನ ನೆರವು ಅಗತ್ಯವಿದೆ,” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

‘ಬಾರ್ಬಿ’‌ ಸಿನಿಮಾದಲ್ಲಿ ಮಾರ್ಗಾಟ್‌ ರಾಬ್ಬಿ

ಜನಪ್ರಿಯ ಬಾರ್ಬಿ ಡಾಲ್‌ ಆಧರಿಸಿ ತಯಾರಾಗಲಿರುವ ಹಾಲಿವುಡ್ ಚಿತ್ರದ ಶೀರ್ಷಿಕೆ ಪಾತ್ರಕ್ಕೆ ಮಾರ್ಗಾಟ್‌ ರಾಬ್ಬಿ ಆಯ್ಕೆಯಾಗಿದ್ದಾರೆ. ನಾಲ್ಕು ವರ್ಷಗಳ ಹಿಂದೆಯೇ ಈ ಚಿತ್ರ ಸೆಟ್ಟೇರಬೇಕಿತ್ತು. ಆಗ ನಟಿ ಅಮಿ ಸ್ಕೂಮರ್‌ ಶೀರ್ಷಿಕೆ ಪಾತ್ರಕ್ಕೆ ಆಯ್ಕೆಯಾಗಿದ್ದರು. ಕಾರಣಾಂತರಗಳಿಂದ ಸಿನಿಮಾ ಸ್ಥಗಿತಗೊಂಡಿತು. ಸೋನಿ ನಿರ್ಮಿಸಬೇಕಿದ್ದ ಚಿತ್ರವೀಗ ವಾರ್ನರ್ ಬ್ರದರ್ಸ್‌ ಸಂಸ್ಥೆಯ ಪಾಲಾಗಿದೆ. ಆಸ್ಕರ್ ಪುರಸ್ಕೃತ ನಟಿ ಅನ್ನೇ ಹಾಥ್‌ವೇ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುವ ಸಾಧ್ಯತೆಗಳಿವೆ. ಪ್ಯಾಟಿ ಜೆನ್‌ಕಿನ್ಸ್‌ ನಿರ್ದೇಶಿಸಲಿರುವ ಸಿನಿಮಾ 2020 ಮೇ8ರಂದು ತೆರೆಕಾಣಲಿದೆ.

ಮನೆಯಂಗಣದಲ್ಲಿ ಶತಕದ ಸಿಹಿಯುಂಡ ವಿರಾಟ್ ಪಡೆ

ಇನ್ನೂ ಎರಡು ದಿನಗಳು ಬಾಕಿ ಇರುವಂತೆಯೇ ಪ್ರವಾಸಿ ವೆಸ್ಟ್ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಹಾಗೂ ೨೭೨ ರನ್ ಗೆಲುವು ಸಾಧಿಸಿದ ಭಾರತ ಕ್ರಿಕೆಟ್ ತಂಡ ತವರಿನಲ್ಲಿ ೧೦೦ ಟೆಸ್ಟ್ ಪಂದ್ಯಗಳ ಗೆಲುವಿನ ದಾಖಲೆ ಬರೆಯಿತು.ಆ ಮೂಲಕ ವಿಶ್ವ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ನಾಲ್ಕನೇ ತಂಡವೆನಿಸಿಕೊಂಡಿತು. ಈ ಮೊದಲು ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ೧೦೦ ಟೆಸ್ಟ್ ಪಂದ್ಯಗಳ ಗೆಲುವಿನ ದಾಖಲೆ ಬರೆದಿದ್ದವು. ಅಂದಹಾಗೆ ಭಾರತ ಕ್ರಿಕೆಟ್ ತಂಡ ೧೯೫೨ರಲ್ಲಿ ಭಾರತ ಪ್ರವಾಸ ಕೈಗೊಂಡಿದ್ದ ಇಂಗ್ಲೆಂಡ್ ವಿರುದ್ಧ ಭಾರತ ಕ್ರಿಕೆಟ್ ತಂಡ ಮೊದಲ ಗೆಲುವು ದಾಖಲಿಸಿತ್ತು. ಭಾರತ ತಂಡ ೧೦೦ ಟೆಸ್ಟ್ ಪಂದ್ಯಗಳ ಗೆಲುವಿನ ದಾಖಲೆ ಬರೆಯಲು ಬರೋಬ್ಬರಿ ೨೬೬ ಪಂದ್ಯಗಳನ್ನು ತೆಗೆದುಕೊಂಡಿತೆಂಬುದು ಗಮನಾರ್ಹ.

ಶಾಶ್ವತ ಬೆರಳ ನೋವಿನ ಭೀತಿಯಲ್ಲಿ ಆಲ್ರೌಂಡರ್ ಶಕೀಬ್

ಪ್ರತಿಷ್ಠಿತ ಏಷ್ಯಾ ಕಪ್ ಪಂದ್ಯಾವಳಿಯ ವೇಳೆ ಗಾಯಗೊಂಡಿದ್ದ ಬಾಂಗ್ಲಾದೇಶದ ಪ್ರತಿಭಾನ್ವಿತ ಆಲ್ರೌಂಡರ್ ಶಕೀಬ್ ಅಲ್ ಹಸನ್ ಇದೀಗ ಶಾಶ್ವತ ನೋವಿಗೆ ತುತ್ತಾಗುವ ಭೀತಿಯಲ್ಲಿದ್ದಾರೆ. ಬೆರಳಿಗೆ ತಗಲಿದ್ದ ಗಾಯದಿಂದಾಗಿ ಆಸ್ಟ್ರೇಲಿಯಾದಲ್ಲಿ ಇದೇ ತಿಂಗಳು ಎರಡು ಬಾರಿ ಶಸ್ತ್ರಚಿಕಿತ್ಸೆಗೆ ಗುರಿಯಾಗಿದ್ದ ಶಕೀಬ್, ಸಂಪೂರ್ಣ ಪ್ರಮಾಣದಲ್ಲಿ ಗುಣಮುಖವಾಗಿಲ್ಲ. ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆದ ಏಷ್ಯಾ ಕಪ್ ಪಂದ್ಯಾವಳಿಯ ವೇಳೆ ಗಾಯಗೊಂಡಿದ್ದ ಶಕೀಬ್ ಬೆರಳು ಬ್ಯಾಕ್ಟೀರಿಯಾ ಸೋಂಕಿಗೆ ಒಳಗಾಗಿತ್ತು. ಹೀಗಾಗಿ ಸೆಪ್ಟೆಂಬರ್ ೨೭ರಂದು ಢಾಕಾದಲ್ಲಿ ತುರ್ತು ಚಿಕಿತ್ಸೆ ಪಡೆದಿದ್ದ ಶಕೀಬ್, ಚಿಕಿತ್ಸೆಯಿಂದ ಯಾವುದೇ ಫಲ ಸಿಗದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೆ, ಶಾಶ್ವತ ಸೋಂಕಿನಿಂದಾಗಿ ತನ್ನ ಬೆರಳು ಗುಣವಾಗುವುದೇ ಅನುಮಾನ ಎಂದು ಶಕೀಬ್ ಕಳವಳ ವ್ಯಕ್ತಪಡಿಸಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More