ಶೌಚಾಲಯ ನಿರ್ಮಾಣಕ್ಕೆ ಸೀಮಿತವಾಯಿತೇ ಕೇಂದ್ರ ಸರ್ಕಾರದ ಸ್ಪಚ್ಛ ಭಾರತ ಯೋಜನೆ?

ಸೆಪ್ಟೆಂಬರ್ ತಿಂಗಳ ಕೊನೆಯ ವಾರವದು, ಲಕ್ನೋ ಜಿಲ್ಲೆಯ ವಿಕಾಸ್ ಭವನದ ಎರಡನೇ ಮಹಡಿಯ ಕೊಠಡಿಯೊಂದು ದೀಪಾಲಂಕಾರದಿಂದ ಕಂಗೊಳಿಸುತ್ತಿತ್ತು. ಕೊಠಡಿಗೆ ಹಾಕಲಾಗಿದ್ದ ಪೋಸ್ಟರ್‌ನಲ್ಲಿ ಗಾಂಧಿ ಫೋಟೋ ಮತ್ತು ಅದರ ಮೇಲೆ ‘ODF WAR ROOM’ ಎಂದು ಬರೆಯಲಾಗಿತ್ತು!

ಅದು ಸೆಪ್ಟೆಂಬರ್ ತಿಂಗಳ ಕೊನೆಯ ವಾರ. ಲಕ್ನೋ ಜಿಲ್ಲೆಯ ಗ್ರಾಮಾಭಿವೃದ್ಧಿ ಅಧಿಕಾರಿಗಳ ಮೊಗದಲ್ಲಿ ಆತಂಕ, ಒತ್ತಡ ಎದ್ದು ಕಾಣುತ್ತಿತ್ತು. ಬಿಡುವಲ್ಲದ ಕೆಲಸ, ಪದೇಪದೇ ಮೇಲಾಧಿಕಾರಿಗಳ ಕರೆ ಸ್ವೀಕರಿಸಿ ಬಸವಳಿದಿದ್ದ ಗ್ರಾಮಾಭಿವೃದ್ಧಿ ಅಧಿಕಾರಿಗಳು ಗ್ರಾಮದ ಮುಖ್ಯಸ್ಥರಿಗೆ ಒಂದೇ ಸಮನೆ ಕರೆ ಮಾಡುವುದರಲ್ಲಿ ನಿರತರಾಗಿದ್ದರು. ಅಷ್ಟಕ್ಕೂ ಇಷ್ಟೊಂದು ಆತಂಕ, ತರಾತುರಿಯ ಕೆಲಸ ಸಾಗುತ್ತಿದ್ದದ್ದು ಬಯಲು ಶೌಚ ಮುಕ್ತ ಪ್ರದೇಶ ನಿರ್ಮಾಣದ ಗುರಿಗಾಗಿ. ವಿಪರ್ಯಾಸವೆಂದರೆ, ಮೇಲಾಧಿಕಾರಿಗಳ ಒತ್ತಡ ಹಾಗೂ ಶೌಚಾಲಯ ನಿರ್ಮಾಣದ ಸಂಖ್ಯೆ ಹೆಚ್ಚಿಸುವ ಸಲುವಾಗಿ ಕೆಳಹಂತದ ಅಧಿಕಾರಿಗಳು ಕೆಲಸ ಮಾಡಿಸುತ್ತಿದ್ದರೇ ಹೊರತು, ಇಲ್ಲಿ ಸ್ಪಚ್ಛ ಭಾರತದ ಕಲ್ಪನೆ ಇರಲಿಲ್ಲ ಎಂಬುದು ಲಕ್ನೋದ ಪ್ರತಿ ಜಿಲ್ಲೆಗೆ ಭೇಟಿ ನೀಡಿದ ಬಳಿಕ ತಿಳಿದ ಸತ್ಯ. ಅ.2ರೊಳಗೆ ಲಕ್ನೋವನ್ನು ಬಯಲು ಶೌಚ ಮುಕ್ತ ಜಿಲ್ಲೆಯನ್ನಾಗಿ ಘೋಷಿಸುವ ಸರ್ಕಾರದ ಕ್ರಮದ ಕುರಿತಂತೆ ವರದಿ ಮಾಡಲು, ಲಕ್ನೋ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಭೇಟಿ ಮಾಡಿದ ‘ದಿ ವೈರ್’ ಸುದ್ದಿತಂಡ, ಅಲ್ಲಿನ ಸ್ಥಿತಿಗತಿಗಳ ಕುರಿತಂತೆ ವರದಿ ಮಾಡಿದೆ.

ಸೆಪ್ಟೆಂಬರ್ ತಿಂಗಳ ಕೊನೆಯ ವಾರವದು, ಲಕ್ನೋ ಜಿಲ್ಲೆಯ ವಿಕಾಸ್ ಭವನದ ಎರಡನೇ ಮಹಡಿಯ ಕೊಠಡಿಯೊಂದು ದೀಪಾಲಂಕಾರದಿಂದ ಕಂಗೊಳಿಸುತ್ತಿತ್ತು. ನೋಡಿದಾಕ್ಷಣ ಪಕ್ಕಾ ಸರ್ಕಾರಿ ಕಾರ್ಯಕ್ರಮಕ್ಕೆ ಸಿದ್ಧವಾದಂತೆ ಆ ಕೋಣೆಯನ್ನು ಸಿದ್ಧಪಡಿಸಲಾಗಿತ್ತು. ಕೊಠಡಿಗೆ ಹಾಕಲಾಗಿದ್ದ ಪೋಸ್ಟರ್‌ನಲ್ಲಿ ಗಾಂಧಿ ಫೋಟೋ ಮತ್ತು ಅದರ ಮೇಲೆ ODF WAR ROOM ಎಂದು ಬರೆಯಲಾಗಿತ್ತು. ಅಂದಹಾಗೆ, ಉತ್ತರ ಪ್ರದೇಶದ ಬಹುತೇಕ ಜಿಲ್ಲೆಗಳಲ್ಲಿ ಇಂತಹ ವಾರ್ ರೂಮ್‌ಗಳನ್ನು ಸ್ಥಾಪಿಸಲಾಗಿದೆ.

ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಸ್ಪಚ್ಛ ಭಾರತ್ ಯೋಜನೆಯಡಿಯಲ್ಲಿ (ಎಸ್‌ಬಿಎಂ), ಲಕ್ನೋವನ್ನು ಅಕ್ಟೋಬರ್ 2ರೊಳಗೆ ಬಯಲು ಶೌಚ ಮುಕ್ತ ಜಿಲ್ಲೆಯನ್ನಾಗಿ (ಓಡಿಎಫ್) ಘೋಷಿಸುವ ಇಂತಹ ಒಡಿಎಫ್ ವಾರ್ ರೂಮ್‌ಗಳು ಉತ್ತರ ಪ್ರದೇಶ ಪ್ರತಿ ಜಿಲ್ಲೆಗಳಲ್ಲೂ ತಲೆ ಎತ್ತಿವೆ.

ಹೀಗಾಗಿ, ಪ್ರತಿ ಜಿಲ್ಲೆಗಳಲ್ಲಿ ತೆರೆಯಲಾದ ಓಡಿಎಫ್ ವಾರ್ ರೂಮ್‌ನಲ್ಲಿ ಒಂದು ರೀತಿಯ ತರಾತುರಿ ಎದ್ದುಕಾಣುತ್ತಿತ್ತು. ಪ್ರತಿ ಗ್ರಾಮಗಳಲ್ಲಿ ನಿರ್ಮಾಣವಾದ ಶೌಚಾಲಯ, ನಿರ್ಮಾಣವಾಗಬೇಕಿದ್ದ ಶೌಚಾಲಯಗಳ ಬಗ್ಗೆ ಗ್ರಾಮಾಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಮದ ಮುಖ್ಯಸ್ಥರ ಜೊತೆಗೆ ಚರ್ಚಿಸಲಾಗುತ್ತಿತ್ತು. ಈ ಕುರಿತಂತೆ ‘ದಿ ವೈರ್’ ವರದಿಗಾರರಿಗೆ ಮಾಹಿತಿ ನೀಡಿದ ಜಿಲ್ಲಾ ಉಸ್ತುವಾರಿ ಅಧಿಕಾರಿ ಅಭಿನವ್ ತ್ರಿವೇದಿ ಅಕ್ಟೋಬರ್ 2ರ ಹೊತ್ತಿಗೆ ನಿಗದಿಯಾಗಿರುವಂತೆ ಪ್ರತಿ ಗ್ರಾಮದಲ್ಲೂ ಎಷ್ಟು ಸಂಖ್ಯೆಯ ಶೌಚಾಲಯ ನಿರ್ಮಾಣವಾಗಿದೆ ಎಂಬುದನ್ನು ಒಡಿಎಫ್ ವಾರ್ ರೂಮ್‌ನಲ್ಲಿ ನಿಯೋಜನೆಗೊಂಡಿರುವ ಅಧಿಕಾರಿಗಳು ಖಚಿತಪಡಿಸಿಕೊಳ್ಳುತ್ತಿದ್ದಾರೆ. ಒಂದು ವೇಳೆ, ಈಗಾಗಲೇ ನಿಗದಿಯಾಗಿರುವ ಸಂಖ್ಯೆಯಷ್ಟು ಶೌಚಾಲಯಗಳು ನಿರ್ಮಾಣವಾದರೆ, ಲಕ್ನೋವನ್ನು ಬಯಲುಶೌಚ ಮುಕ್ತ ರಾಜ್ಯವನ್ನಾಗಿ ಘೋಷಿಸಬಹುದಾಗಿದೆ ಎಂದವರು ವಿವರಿಸಿದರು.

ಏನಿದು ಒಡಿಎಫ್?

2012ರಲ್ಲಿ ಕೇಂದ್ರ ಸರ್ಕಾರವು ಶೌಚಾಲಯವಿಲ್ಲದ ಗ್ರಾಮೀಣ ಭಾರತದ ಕುಟುಂಬಗಳ ಸಂಖ್ಯೆಯನ್ನು ಗುರುತಿಸುವ ಸಲುವಾಗಿ ದೇಶಾದ್ಯಂತ ಬೇಸ್‌ಲೇನ್ ಸರ್ವೆ ಕೈಗೊಂಡಿತ್ತು. ಎಸ್‌ಬಿಎಂ ಮಾರ್ಗದರ್ಶನದಂತೆ ಸಮೀಕ್ಷೆ ನಡೆಸಿದ ಗ್ರಾಮ ಪಂಚಾಯತ್ ಗಳು ಕೇಂದ್ರಕ್ಕೆ ವರದಿಯನ್ನೂ ಸಲ್ಲಿಸಿದ್ದವು. 2012ರ ಸರ್ವೆಯಲ್ಲಿ ನೀಡಿದ್ದ ವರದಿಯಂತೆ, ಇದೀಗ ಒಂದು ಗ್ರಾಮಕ್ಕೆ ಎಷ್ಟು ಶೌಚಾಲಯದ ಅಗತ್ಯವಿದೆಯೋ ಅಷ್ಟು ಸಂಖ್ಯೆಯ ಶೌಚಾಲಯ ನಿರ್ಮಿಸಿರುವ ಅಧಿಕಾರಿಗಳು, ಅಂತಹ ಗ್ರಾಮಗಳನ್ನು ಯಲು ಶೌಚ ಮುಕ್ತ ಗ್ರಾಮ ಎಂದು ಘೋಷಿಸುತ್ತಿದ್ದಾರೆ.

ಎಸ್‌ಬಿಎಂ ಮಾರ್ಗದರ್ಶಿ ಹೇಳುವುದೇನು?

ಸ್ಪಚ್ಛ ಭಾರತ್ ಯೋಜನೆಯ (ಎಸ್ ಬಿಎಂ) ಮಾರ್ಗದರ್ಶನ ಸಂಪೂರ್ಣ ವಿಭಿನ್ನವಾಗಿದ್ದು, ಒಡಿಎಫ್ (ಬಯಲು ಶೌಚ ಮುಕ್ತ ) ಗ್ರಾಮ ಎಂದು ಘೋಷಿಸಬೇಕಾದರೆ, ಆ ಗ್ರಾಮದಲ್ಲಿ ತೆರೆದ ತ್ಯಾಜ್ಯ ನೀರು ಹರಿಸುವ ವ್ಯವಸ್ಥೆ ಇರುವಂತಿಲ್ಲ. ಪ್ರತಿ ಮನೆ, ಸಮುದಾಯ ಸಂಸ್ಥೆಗಳು ತ್ಯಾಜ್ಯ ವಿಲೇವಾರಿ ಮಾಡಲು ಸುರಕ್ಷಿತ ತಂತ್ರಜ್ಞಾನ ಹೊಂದಿರಬೇಕು. ಯಾವುದೇ ಗೋಚರ ಕೊಳವೆಗಳು ಇರಬಾರದು, ಪ್ರತಿ ಮನೆ, ಸಮುದಾಯ ಸಂಸ್ಥೆಗಳು ತ್ಯಾಜ್ಯ ವಿಲೇವಾರಿ ಮಾಡಲು, ಸುರಕ್ಷಿತ ತಂತ್ರಜ್ಞಾನ ಹೊಂದಿರಬೇಕು.

ಆ ಗ್ರಾಮದಲ್ಲಿ ತ್ಯಾಜ್ಯ ವಿಲೇವಾರಿಗೆ ಬಳಸುವ ತಂತ್ರಜ್ಞಾನಗಳು ಮಣ್ಣಿನ ಮೇಲ್ಮೈ, ಅಂತರ್ಜಲ ಅಥವಾ ಭೂಮಿಯ ಮೇಲ್ಪದರದಲ್ಲಿರುವ ನೀರು ಅಥವಾ ಪ್ರಾಣಿಗಳಿಗೆ ಹಾನಿ ಆಗುವಂತಿರಬಾರದು. ಅಲ್ಲದೆ, ದುರ್ವಾಸನೆ ಅಥವಾ ಅಸಹ್ಯ ಎನಿಸುವ ಸ್ಥಿತಿಯನ್ನು ನಿರ್ಮಾಣ ಮಾಡುವಂತಿರಬಾರದು. ಇಷ್ಟೆಲ್ಲ ಮಾರ್ಗದರ್ಶನಗಳನ್ನು ಒಂದು ಗ್ರಾಮ ಹೊಂದಿದ್ದರೆ ಮಾತ್ರ ಆ ಗ್ರಾಮವನ್ನು ಒಡಿಎಫ್ (ಬಯಲುಶೌಚ ಮುಕ್ತ) ಗ್ರಾಮ ಎಂದು ಘೋಷಿಸಬಹುದಾಗಿದೆ.

ಆದರೆ, ಲಕ್ನೋದ ಓಡಿಎಫ್ ವಾರ್ ರೂಂನಲ್ಲಿ ಅಧಿಕಾರಿಗಳು ಕೇವಲ ಶೌಚಾಲಯದ ಸಂಖ್ಯೆಗಳತ್ತ ಮಾತ್ರ ಗಮನ ಹರಿಸುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿತ್ತು ಎಂದು 'ದಿ ವೈರ್' ತನ್ನ ವರದಿಯಲ್ಲಿ ಹೇಳಿದ್ದು, ಅಕ್ಟೋಬರ್ 2ರೊಳಗೆ ಉತ್ತರ ಪ್ರದೇಶದ ಎಲ್ಲ ಜಿಲ್ಲೆಗಳನ್ನು ಬಯಲು ಶೌಚಮುಕ್ತ ರಾಜ್ಯವನ್ನಾಗಿ ಘೋಷಿಸುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗಡುವು ವಿಧಿಸಿದ್ದರಿಂದ, ಗ್ರಾಮಾಭಿವೃದ್ಧಿ ಅಧಿಕಾರಿಗಳಲ್ಲಿ ಒತ್ತಡ ಹೆಚ್ಚಿತ್ತು.

ಉತ್ತರ ಪ್ರದೇಶದ ಸ್ಪಚ್ಛ ಭಾರತ್ ಕಾರ್ಯಾಚರಣೆಯಲ್ಲಿ ಕೈಜೋಡಿಸಿರುವ ಹಿರಿಯ ಅಧಿಕಾರಿಯೊಬ್ಬರು 'ದಿ ವೈರ್' ವರದಿಗಾರರೊಂದಿಗೆ ಮಾತನಾಡುತ್ತ, “ಗ್ರಾಮದ ಪ್ರಧಾನ ವ್ಯಕ್ತಿ, ತನ್ನ ಗ್ರಾಮದ ಫಲಾನುಭವಿಗಳನ್ನು ಗುರುತಿಸಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು. ಬಳಿಕ ಅಧಿಕಾರಿಗಳು ಈ ಬಗ್ಗೆ ಪರಿಶೀಲಿನೆ ನಡೆಸಿ ಪ್ರತಿ ಮನೆಗೂ 12 ಸಾವಿರ ರುಪಾಯಿಯನ್ನು ವಿತರಿಸುತ್ತಾರೆ,” ಎಂದು ಮಾಹಿತಿ ನೀಡಿದರು.

ಆದರೆ, ಈ ಬಾರಿ ಅಕ್ಟೋಬರ್ 2ರ ಗಡುವು ಇದ್ದಿದ್ದರಿಂದ, ಯಾವೊಬ್ಬ ಅಧಿಕಾರಿಯೂ ಪರಿಶೀಲನೆಗೆಂದು ಗ್ರಾಮಗಳಿಗೆ ಭೇಟಿ ನೀಡದೆ, ಗ್ರಾಮದ ಪ್ರಧಾನ್ ನೀಡಿದ ಮಾಹಿತಿಯನ್ವಯ, ಲಕ್ನೋದ ಕೆಲವು ಗ್ರಾಮಗಳನ್ನು ಬಯಲು ಶೌಚಮುಕ್ತ ಗ್ರಾಮ ಎಂದು ಘೋಷಿಸಿದ್ದಾರೆ.

ಸೆಪ್ಟೆಂಬರ್ 18ರ ವೇಳೆಗೆ ‘ದಿ ವೈರ್' ತಂಡ, ಲಕ್ನೋದ 805 ಗ್ರಾಮಗಳನ್ನು ಒಳಗೊಂಡ ಒಡಿಎಫ್ ವಾರ್ ರೂಂಗೆ ಭೇಟಿ ನೀಡಿದಾಗ, 410 ಗ್ರಾಮಗಳನ್ನು ಅದಾಗಲೇ ಬಯಲು ಶೌಚ ಮುಕ್ತ ಗ್ರಾಮ ಎಂದು ಘೋಷಿಸಲಾಗಿತ್ತು. ಉಳಿದ 395 ಗ್ರಾಮಗಳನ್ನು 13 ದಿನದ ಒಳಗಾಗಿ ಬಯಲುಶೌಚ ಮುಕ್ತ ಗ್ರಾಮವನನ್ನಾಗಿ ಘೋಷಿಸುವ ಒತ್ತಡ ಅಧಿಕಾರಿಗಳ ಮೇಲಿತ್ತು. ದಿನಕ್ಕೆ 30 ಗ್ರಾಮಗಳಂತೆ ಕೆಲಸ ಮಾಡಿದರೆ, ಅಕ್ಟೋಬರ್ 2ರ ಹೊತ್ತಿಗೆ ಶೇಕಡ 100ರಷ್ಟು ಬಯಲು ಶೌಚಮುಕ್ತ ಗ್ರಾಮ ಸಾಧಿಸಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಅಧಿಕಾರಿ ಅಭಿನವ್ ತ್ರಿವೇದಿ 'ದಿ ವೈರ್'ಗೆ ವಿವರಿಸಿದ್ದರು.

ವಿಪರ್ಯಾಸವೆಂದರೆ, ಎಸ್‌ಬಿಎಂ ಮಾರ್ಗಸೂಚಿಯಂತೆ, ಒಂದು ರಾಜ್ಯ ಬಯಲು ಶೌಚಮುಕ್ತ ಎಂದು ಘೋಷಿಸಿಕೊಳ್ಳುವ ಮೊದಲು, ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ವಿವಿಧ ರೀತಿಯಲ್ಲಿ ಪರಿಶೀಲನೆ ನಡೆಸಬೇಕು. ಗ್ರಾಮದಲ್ಲಿ ಸುರಕ್ಷಿತ ತ್ಯಾಜ್ಯ ವಿಲೇವಾರಿ ಸೇರಿದಂತೆ ಹಲವಾರು ಮಾನದಂಡಗಳಲ್ಲಿ ಪರಿಶೀಲನೆ ನಡೆಸುವ ಅಗತ್ಯವಿದೆ. ಆದರೆ, ಲಕ್ನೋದಲ್ಲಿ ಇದೀಗ ಘೋಷಿಸಲ್ಪಟ್ಟ ಯಾವುದೇ ಗ್ರಾಮದಲ್ಲಿ ಈ ಮಾನದಂಡಗಳನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ.

ಜಿಲ್ಲೆಯಲ್ಲಿ ಸೆಪ್ಟೆಂಬರ್ 18ರ ವೇಳೆಗೆ ಬಹಿರ್ದೆಸೆಮುಕ್ತ ಗ್ರಾಮಗಳು ಎಂದು ಸ್ವಯಂ ಘೋಷಿಸಿಕೊಂಡ 410 ಗ್ರಾಮಗಳ ಪೈಕಿ ಕೇವಲ 280 ಗ್ರಾಮಗಳನ್ನು ಮಾತ್ರ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಆದರೆ, ಇದಾವುದೂ ಎಸ್ ಬಿಎಂ ಮಾರ್ಗಸೂಚಿಗಳ ಅನ್ವಯ ಇಲ್ಲ ಎಂಬುದನ್ನು ‘ದಿ ವೈರ್’ ವರದಿ ಮಾಡಿದೆ.

ಇನ್ನೊಂದು ವಿಚಾರವೆಂದರೆ, ಒಂದು ಗ್ರಾಮವನ್ನು ಒಡಿಎಫ್ ಎಂದು ಜಿಲ್ಲಾಡಳಿತ ಘೋಷಿಸುವಂತಿಲ್ಲ. ಬದಲಿಗೆ, ಭಾರತ ಸರ್ಕಾರವೇ ಸ್ಥಾಪಿಸಿರುವ ಸ್ವಾಯತ್ತ ಸಂಸ್ಥೆಯಾದ ಭಾರತೀಯ ಗುಣಮಟ್ಟ ಸಮಿತಿ (QCI)ಯ ಅಧ್ಯಕ್ಷರು ಸಾಂದರ್ಭಿಕವಾಗಿ ಗ್ರಾಮಗಳಲ್ಲಿ ಸಮೀಕ್ಷೆ ನಡೆಸಿ ಘೋಷಿಸಬೇಕು. ಸುಲ್ತಾನ್‌ಪುರ ಮತ್ತು ಬಾರಾಬಂಕಿ ಗ್ರಾಮಗಳಿಗೆ ಭೇಟಿ ನೀಡಿದ ಕ್ಯೂಸಿಐ ತಂಡಕ್ಕೆ ಅಲ್ಲಿನ ವಾಸ್ತವ ಕಂಡು ಅಚ್ಚರಿಯಾಯಿತು. ಒಡಿಎಫ್ ಎಂದು ಸ್ವಯಂಘೋಷಿತ ಗ್ರಾಮಗಳಲ್ಲಿ ಹೆಚ್ಚಿನ ಶೌಚಾಲಯಗಳು ಪೂರ್ಣನಿರ್ಮಾಣವಾಗಿರಲಿಲ್ಲ, ಅಲ್ಲದೆ, ಕೊಳಚೆ ನೀರು ಹರಿಯುವ ವ್ಯವಸ್ಥೆಯು ಇಲ್ಲದೆ ಇರುವುದು ಕಂಡುಬಂತು ಎಂದು ‘ದಿ ವೈರ್’ ವರದಿಗಾರ ತಮ್ಮ ಲೇಖನದಲ್ಲಿ ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡುವ ಅಧಿಕಾರಿಗಳು, “ಮೇಲಾಕಾರಿಗಳ ಒತ್ತಡ ಹೆಚ್ಚಾಗುತ್ತಿದ್ದು, ಬಯಲುಮುಕ್ತ ಶೌಚ ನಿರ್ಮಾಣಕ್ಕೆ ಅಕ್ಟೋಬರ್ 2ರ ಗಡುವು ನೀಡಿರುವುರಿಂದ, ಸಂಖ್ಯೆಯನ್ನು ಟಾರ್ಗೆಟ್ ಮಾಡಿಕೊಂಡು ಕೆಲಸ ಮಾಡಲಾಗುತ್ತಿದೆ. ಅಲ್ಲದೆ, ಕೆಲಸಕ್ಕೆ ಸರಿಯಾಗಿ ಜನರು ಕೂಡ ಸಿಗುತ್ತಿಲ್ಲ,” ಎನ್ನುತ್ತಾರೆ.

ಅಂದಹಾಗೆ, ಜಿಲ್ಲಾಧಿಕಾರಿಗಳಿಗೆ ಒತ್ತಡ ಬರುತ್ತಿರುವುದು ನೇರವಾಗಿ ಪ್ರಧಾನಿ ನರೇಂದ್ರ ಮೋದಿಯಿಂದ. ಕಾಲಕಾಲಕ್ಕೆ ಜಿಲ್ಲಾಡಳಿತದೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡುವ ಪ್ರಧಾನಿ ಮೋದಿ, ಶೌಚಾಲಯದ ಸಂಖ್ಯೆಯ ಗುರಿ ಹೊಂದದ ಜಿಲ್ಲೆಯ ಅಧಿಕಾರಿಗಳ ಕಾರ್ಯವನ್ನು ಖಂಡಿಸುತ್ತಾರೆ. ಯಾವ ಜಿಲ್ಲಾಡಳಿತವೂ ಪ್ರಧಾನಿಯಿಂದ ಖಂಡನೆಗೊಳಪಡಲು ಇಚ್ಛಿಸುವುದಿಲ್ಲ. ಹೀಗಾಗಿ ಕೆಳಗಿನ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಾರೆ. ಅಲ್ಲದೆ, ಗ್ರಾಮದ ಮುಖ್ಯಸ್ಥರನ್ನು ತರಾಟೆಗೆ ತೆಗೆದುಕೊಂಡು, ಶೌಚಾಲಯಗಳ ಸಂಖ್ಯೆ ಹೆಚ್ಚಳಕ್ಕೆ ಒತ್ತಡ ಹಾಕುತ್ತಾರೆ.

ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಬಾರಬಂಕಿ ಗ್ರಾಮದ ಪ್ರಧಾನ್ ಒಬ್ಬರು, “ಪ್ರತಿದಿನವೂ ನಾನು ಜಿಲ್ಲಾ ಕಚೇರಿಯಿಂದ ಕರೆಗಳನ್ನು ಸ್ವೀಕರಿಸುತ್ತಲೇ ಇದ್ದು, ಪ್ರತಿದಿನ ಅಧಿಕಾರಿಗಳು ಕರೆ ಮಾಡಿ ಅಪ್ಡೇಟ್ ಕೇಳುತ್ತಾರೆ. ಅದರಲ್ಲಿ ಕೆಲವರಂತೂ ನನಗೆ ಬೆದರಿಕೆಯನ್ನೇ ಹಾಕುತ್ತಾರೆ. ಗಂಟೆಗಳಲ್ಲಿ ಶೌಚಾಲಯವನ್ನು ನಿರ್ಮಿಸಲು ಸಾಧ್ಯವಿಲ್ಲ ಎಂಬ ವಾಸ್ತವವನ್ನು ಅಧಿಕಾರಿಗಳು ಅರ್ಥ ಮಾಡಿಕೊಳ್ಳುತ್ತಿಲ್ಲ,” ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

"ಇವತ್ತು ಮೇಲಾಧಿಕಾರಿಯೊಬ್ಬರು ಕರೆ ಮಾಡಿ, ನಾಳೆಯೊಳಗಾಗಿ ಉಳಿದ 280 ಶೌಚಾಲಯವನ್ನು ಪೂರ್ಣಗೊಳಿಸಬೇಕು ಎಂದು ಎಚ್ಚರಿಕೆ ನೀಡಿದ್ದಾರೆ. ನಿಮಗೂ ಗೊತ್ತು, ಇದೆಲ್ಲ ಸಾಧ್ಯವೇ ಇಲ್ಲ," ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ ಬಹುತೇಕ ಪ್ರಧಾನ್‌ಗಳು.

ದೆಹಲಿ ಮೂಲದ ಪಾಲಿಸಿ ರಿಸರ್ಚ್ (ಸಿಪಿಆರ್) ನಿರ್ದೇಶಕರಾದ ಅವನಿ ಕಪೂರ್ ಗ್ರಾಮೀಣ ಭಾರತದಲ್ಲಿ ಬಯಲು ಶೌಚದ ಸ್ಥಿತಿಯ ಕುರಿತಂತೆ ಅಧ್ಯಯನ ನಡೆಸಿದ್ದು, ಅವರು ಹೇಳುವ ಪ್ರಕಾರ, “ಪ್ರತಿಯೊಂದು ಮನೆಯೂ ಶೌಚಾಲಯ ಹೊಂದಿದ ಮಾತ್ರಕ್ಕೆ ಆ ಗ್ರಾಮವನ್ನು ಒಡಿಎಫ್ ಎಂದು ಘೋಷಿಸಲು ಸಾಧ್ಯವೇ ಇಲ್ಲ. ಒಡಿಎಫ್ ಗ್ರಾಮ ಎಂದು ಘೋಷಿಸಬೇಕಾದರೆ, ಕೇವಲ ಶೌಚಾಲಯ ನಿರ್ಮಾಣ ಮಾತ್ರವಲ್ಲ, ಅದಕ್ಕಿಂತಲೂ ಹೆಚ್ಚಿನದ್ದೂ ಸಾಧಿಸುವುದಿದೆ. ನೀರಿನ ಲಭ್ಯತೆ, ಗುಣಮಟ್ಟ ಮತ್ತು ಶೌಚಾಲಯ ಸಂಪೂರ್ಣತೆ, ತ್ಯಾಜ್ಯ ವಿಲೇವಾರಿ ಮಾಡುವ ವಿಧಾನ, ಈ ಎಲ್ಲ ವಿಚಾರಗಳನ್ನು ಒಳಗೊಂಡಿರಬೇಕು. ಈ ಎಲ್ಲ ವಿಷಯಗಳ ಬಗ್ಗೆ ಕೆಲಸ ಮಾಡಲು ಒಂದು ಸಮಗ್ರ ದೀರ್ಘಾವಧಿ ವಿಧಾನದ ಅಗತ್ಯವೂ ಇದೆ.”

ಒಟ್ಟಾರೆ ಪ್ರಧಾನಿ ನರೇಂದ್ರ ಮೋದಿಯವರ ಸ್ಪಚ್ಛ ಭಾರತ್ ಯೋಜನೆ ತನ್ನ ಮಾರ್ಗಸೂಚಿಗಳನ್ನು ಮರೆತಂತಿದ್ದು, ಸ್ಪಚ್ಛ ಭಾರತ ಕೇವಲ ಶೌಚಾಲಯ ನಿರ್ಮಾಣಕ್ಕೆ ಮಾತ್ರ ಮೀಸಲಾಗಿರುವಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More