ಪ್ರಧಾನಿ ವಿರುದ್ಧ ಸಿಬಿಐಗೆ ದೂರು; ದಿನೇದಿನೇ ಮೊನಚಾಗುತ್ತಿದೆ ರಫೇಲ್ ಹಕ್ಕಿ ಕೊಕ್ಕು

ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ರಫೇಲ್ ವಿವಾದ ಬಿಜೆಪಿ ಪಾಲಿಗೆ ನುಂಗಲಾರದ ತುತ್ತಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಇದನ್ನು ಬಿಜೆಪಿ ಹೇಗೆ ಎದುರಿಸಲಿದೆ ಎಂಬುದು ಸದ್ಯದ ಕುತೂಹಲ. ಈ ಕುರಿತು ‘ದಿ ವೈರ್’ ಪ್ರಕಟಿಸಿದ ಲೇಖನದ ಭಾವಾನುವಾದ ಇಲ್ಲಿದೆ

‘ರಫೇಲ್’ ಎಂಬ ಫ್ರಾನ್ಸಿನ ಸಮರಪಕ್ಷಿ ಮತ್ತೆ-ಮತ್ತೆ ಕೇಂದ್ರ ಸರ್ಕಾರದ ಮೇಲೆ ಎರಗುತ್ತಲೇ ಇದೆ. ಈ ಬಾರಿ ಅದು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಎಂಬ ಚೂಪು ಕೊಕ್ಕಿನ ಮೂಲಕ ಕುಟುಕಲು ಆರಂಭಿಸಿದೆ. ಸದ್ಯ ಅದರ ಗುರಿ ಪ್ರಧಾನಿ ಮೋದಿ ಮತ್ತು ಮಾಜಿ ರಕ್ಷಣಾ ಸಚಿವ ಮನೋಹರ್ ಪರ್ರಿಕರ್. ಹಕ್ಕಿಯನ್ನು ಹಾರಿಬಿಟ್ಟವರು ಮಾಜಿ ಕೇಂದ್ರ ಸಚಿವರಾದ ಬಿಜೆಪಿಯ ಯಶವಂತ ಸಿನ್ಹಾ, ಅರುಣ್ ಶೌರಿ ಹಾಗೂ ಪ್ರಶಾಂತ್ ಭೂಷಣ್ ಎಂಬ ಹಿರಿಯ ವಕೀಲರು.

ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ‘ಅಧಿಕಾರ ದುರ್ಬಳಕೆ’ ವಿಧಿಯನ್ನು ಉಲ್ಲೇಖಿಸುತ್ತ ಕೇಂದ್ರ ಸರ್ಕಾರ ತಪ್ಪೆಸಗಿದೆ ಎಂದು ಸಿಬಿಐಗೆ ಈ ಮೂವರೂ ದೂರು ಸಲ್ಲಿಸಿದ್ದಾರೆ. ಕೋಟ್ಯಧಿಪತಿ, ರಿಲಯನ್ಸ್ ಡಿಫೆನ್ಸ್ ಲಿಮಿಟೆಡ್ (ಆರ್ ಡಿ ಎಲ್) ಮಾಲೀಕ ಅನಿಲ್ ಅಂಬಾನಿ ಅವರಿಗೆ ಇದು ‘ಅನಗತ್ಯ ಪ್ರಯೋಜನ’ ಕಲ್ಪಿಸಲಿದೆ ಎಂಬುದು ಅವರ ಪ್ರಮುಖ ಆರೋಪ. ಇದರೊಂದಿಗೆ ರಫೇಲ್ ಯುದ್ಧವಿಮಾನ ಖರೀದಿಯಲ್ಲಿ ಸುಮಾರು 60,000 ಕೋಟಿ ರುಪಾಯಿಯಷ್ಟು ಅವ್ಯವಹಾರ ನಡೆದಿದೆ ಎಂದು ಕಳೆದ ಕೆಲ ತಿಂಗಳಿನಿಂದ ಎದ್ದಿದ್ದ ವಿವಾದ ಸಿಬಿಐ ಅಂಗಳಕ್ಕೆ ಬಂದು ನಿಂತಿದೆ.

ಹೀಗೆ ಈ ಮೂವರೂ ಆರೋಪ ಮಾಡುತ್ತಿರುವುದು ಇದು ಮೊದಲ ಬಾರಿಯೇನೂ ಅಲ್ಲ. ಕಾಂಗ್ರೆಸ್ ಹೊರತುಪಡಿಸಿದರೆ ರಫೇಲ್ ವಿವಾದದಲ್ಲಿ ಬಿಜೆಪಿಯ ವಿರುದ್ಧ ಅತಿ ಹೆಚ್ಚು ಬಾರಿ ಸಿಡಿದೆದ್ದವರು ಈ ಮೂವರು. ವಿವಾದದ ಬಗ್ಗೆ ಉಳಿದ ವಿರೋಧ ಪಕ್ಷಗಳು ಸೊಲ್ಲೆತ್ತದ ಸಂದರ್ಭದಲ್ಲಿ ಮಾಜಿ ಕೇಂದ್ರ ಸಚಿವರಿಬ್ಬರು ಆಡಳಿತ ವ್ಯವಸ್ಥೆಯ ವಿರುದ್ಧ ಬೆಟ್ಟು ಮಾಡಿದ್ದು ಸಹಜವಾಗಿಯೇ ಕುತೂಹಲ ಕೆರಳಿಸಿತ್ತು. ಅದರಲ್ಲಿಯೂ ಅವರು ವಿವಾದದಲ್ಲಿ ಪ್ರಧಾನಿ ಹೆಸರನ್ನು ಪ್ರಸ್ತಾಪಿಸಿದ್ದು ಆಳುವ ಪಕ್ಷಕ್ಕೆ ಮುಜಗರ ತರುವಂತಹ ವಿಚಾರವಾಗಿತ್ತು. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ವಿವಿಧ ಪತ್ರಿಕಾಗೋಷ್ಠಿಗಳ ಮೂಲಕ ಅವರು ರಫೇಲ್ ವಿವಾದದ ಆಳ, ಅಗಲವನ್ನು ಜನತೆಯ ಮುಂದಿಟ್ಟಿದ್ದರು. “ಫ್ರಾನ್ಸ್ ಮತ್ತು ಕೇಂದ್ರ ಸರ್ಕಾರದ ನಡುವೆ ನಡೆದಿರುವ ಈ ಒಪ್ಪಂದ ಬೋಫೋರ್ಸ್ ಹಗರಣಕ್ಕಿಂತಲೂ ದೊಡ್ಡದು,” ಎಂದು ಬಣ್ಣಿಸಿದ್ದರು. “ಮೂಲ ಒಪ್ಪಂದದಂತೆ ಫ್ರಾನ್ಸ್ ಯುದ್ಧವಿಮಾನ ತಯಾರಿಕಾ ಕಂಪೆನಿ ಡಸಾಲ್ಟ್ ಏವಿಯೇಷನ್‌ನಿಂದ 126 ಯುದ್ಧವಿಮಾನಗಳನ್ನು ಖರೀದಿಸಬೇಕಿತ್ತು. ಆದರೆ, ಸರ್ಕಾರ ರಿಲಯನ್ಸ್ ಡಿಫೆನ್ಸ್‌ಗೆ 30,000 ಕೋಟಿ ರೂಪಾಯಿ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಅದನ್ನು ಡಸಾಲ್ಟ್‌ನ ಸಹ ಪಾಲುದಾರನನ್ನಾಗಿ ಮಾಡಿತು,” ಎಂದು ಆರೋಪಿಸಿದ್ದರು.

“ಯುಪಿಎ ಅವಧಿಯಲ್ಲಿ ಆದ ಒಪ್ಪಂದದಂತೆ ಸಾರ್ವಜನಿಕ ಉದ್ಯಮವಾದ ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) 108 ರಫೇಲ್ ವಿಮಾನಗಳನ್ನು ದೇಶೀಯವಾಗಿ ತಯಾರಿಸಬೇಕಿತ್ತು. ಆದರೆ, ಆರ್‌ಡಿಎಲ್‌ಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಮೋದಿ ಎಚ್ ಎ ಎಲ್ ಅನ್ನು ಬದಿಗೊತ್ತಿ ಡಸಾಲ್ಟ್ ಜೊತೆ ಒಪ್ಪಂದ ಮಾಡಿಕೊಂಡರು,” ಎಂದು ಈ ಮೂವರೂ ಆರೋಪಿಸುತ್ತಿದ್ದಾರೆ.

ಫ್ರಾನ್ಸ್ ಮಾಜಿ ಅಧ್ಯಕ್ಷ ಹೊಲಾಂದ್ ಅವರು ಇತ್ತೀಚೆಗೆ ನೀಡಿದ ಹೇಳಿಕೆಯಲ್ಲಿ, “ಸಹಪಾಲುದಾರನನ್ನಾಗಿ ಆರ್‌ಡಿಎಲ್‌ ಆಯ್ದುಕೊಳ್ಳುವಲ್ಲಿ ತಮ್ಮ ಪಾತ್ರವೇನೂ ಇರಲಿಲ್ಲ. ಆರ್‌ಡಿಎಲ್‌ ಹೆಸರನ್ನು ಕೇಂದ್ರ ಸರ್ಕಾರವೇ ಶಿಫಾರಸು ಮಾಡಿತ್ತು,” ಎಂದು ಹೇಳುವ ಮೂಲಕ ವಿವಾದ ಗಂಭೀರ ಸ್ವರೂಪ ಪಡೆಯಿತು. ಇದು ವಿರೋಧ ಪಕ್ಷಗಳಿಗೆ ಹೊಸ ಅಸ್ತ್ರ ಒದಗಿಸಿತು. ದೇಶದ ಅತಿದೊಡ್ಡ ರಕ್ಷಣಾ ಹಗರಣ ಎಂಬ ಆರೋಪಗಳು ಕೇಳಿಬಂದವು.

1988ರ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅನ್ವಯ ಪ್ರಧಾನಿ ಅಧಿಕಾರ ದುರುಪಯೋಗ ಮಾಡಿದ್ದಾರೆ. ಸಿಬಿಐ ಮೋದಿ ಮತ್ತು ಪರಿಕ್ಕರ್ ವಿರುದ್ಧ ಕ್ರಮ ಕೈಗೊಳ್ಳಲು ಇದಿಷ್ಟೇ ಸಾಕು ಎಂದು ಅವರು ತನಿಖಾ ಸಂಸ್ಥೆಗೆ ನೀಡಿರುವ ದೂರಿನಲ್ಲಿ ಪ್ರತಿಪಾದಿಸಿದ್ದಾರೆ.

ಮೂವರು ಪ್ರಮುಖರು ಮಾಡಿರುವ ಮುಖ್ಯ ಆರೋಪಗಳು

  • ಅನಿಲ್ ಅಂಬಾನಿ ಕಂಪನಿಗಳು ದಿವಾಳಿ ಅಂಚಿನಲ್ಲಿದ್ದವು. ಬಾಕಿ ಪಾವತಿಸುವಂತೆ ಸಾಲಗಾರರು ಈ ಕಂಪನಿಗಳ ಮೇಲೆ ಮುಗಿಬಿದ್ದಿದ್ದರು. ಸಾಲ ಪಾವತಿಗೆಂದು ರಿಲಯನ್ಸ್ ಎಡಿಎ ಸಂಸ್ಥೆಯ ಅಮೂಲ್ಯ ಆಸ್ತಿಯನ್ನು ಮಾರಾಟ ಮಾಡಲು ನಿರ್ಧರಿಸಲಾಗಿತ್ತು. ಈ ಸಂದರ್ಭದಲ್ಲಿ ಅನಿಲ್ ಅಂಬಾನಿ ಮತ್ತು ಮೋದಿ ಸಂಚೊಂದನ್ನು ರೂಪಿಸಿದರು. ಅದರಂತೆ, ಡಸಾಲ್ಟ್ ಮೂಲಕ ‘ಅನಗತ್ಯ ಪ್ರಯೋಜನ’ವನ್ನು ರಿಲಯನ್ಸ್‌ಗೆ ಮೋದಿ ಒದಗಿಸಿಕೊಟ್ಟರು. ಇದಕ್ಕಾಗಿ ಪ್ರಧಾನಿ ಕಚೇರಿಯ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡರು. ಅಲ್ಲದೆ, ಸಾರ್ವಜನಿಕ ಸೇವೆಯಲ್ಲಿ ಅಪ್ರಾಮಾಣಿಕತೆ ಮೆರೆದರು.
  • ಮೋದಿ ಪರಮಾಪ್ತ ಅನಿಲ್ ಅಂಬಾನಿ ಅನಗತ್ಯ ಪ್ರಯೋಜನದ ಲಾಭ ಪಡೆದರು. ಮೋದಿ ಅಧಿಕಾರ ದುರುಪಯೋಗ ಮತ್ತು ಸಾರ್ವಜನಿಕ ಸೇವೆಯಲ್ಲಿ ಅಪ್ರಾಮಾಣಿಕತೆಯಿಂದ ನಡೆದು ಅನಿಲ್‌ಗೆ ಮಾಡಿಕೊಟ್ಟ ಲಾಭದಿಂದಾಗಿ ರಿಲಯನ್ಸ್‌ಗೆ ಮುಂದಿನ 40 ವರ್ಷಗಳ ಕಾಲ ಪ್ರಯೋಜನವಾಗಲಿದೆ.
  • 2015ರ ಮಾರ್ಚ್ 3ರಂದು ಮೋದಿ ಮತ್ತು ಅನಿಲ್ ಅಂಬಾನಿ ನಡುವೆ ಸಭೆ ನಡೆದಿತ್ತು. ಆ ಬಳಿಕ ಸುದ್ದಿಗೋಷ್ಠಿ ನಡೆಸಿದ ಅನಿಲ್, "ರಕ್ಷಣಾ ಕ್ಷೇತ್ರ ಪ್ರವೇಶಿಸುವಂತೆ ಮನವಿ ಮಾಡಿದ್ದಾರೆ,” ಎಂಬುದನ್ನು ತಿಳಿಸಿದ್ದರು.
  • 2ಜಿ ತರಂಗಾತರ ಹಗರಣದಲ್ಲಿ ಲಂಚ ನೀಡಿದ ಆರೋಪ ಎದುರಿಸುತ್ತಿದ್ದ ಅನಿಲ್ ಅಂಬಾನಿ ಅವರನ್ನೇ ಅತಿ ಸೂಕ್ಷ್ಮವಾದ ಸೇನಾ ನಿರ್ಮಾಣ ಕ್ಷೇತ್ರಕ್ಕೆ ಮೋದಿ ಆಹ್ವಾನಿಸಿದ್ದು ಏಕೆ ಎಂಬ ಪ್ರಶ್ನೆ ಎದ್ದಿದೆ. ಆ ಸಂದರ್ಭದಲ್ಲಿ ರಕ್ಷಣಾ ಕ್ಷೇತ್ರಕ್ಕೆ ಬರಲು ಅನಿಲ್ ಅವರಿಗೆ ಆಸಕ್ತಿಯೂ ಇರಲಿಲ್ಲ, ಬಂಡವಾಳವೂ ಇರಲಿಲ್ಲ.
  • ಆರ್ ಡಿ ಎಲ್ ಸ್ಥಾಪನೆಯಾದ ಕೇವಲ 12 ದಿನಗಳಲ್ಲಿ ಮಹತ್ವದ ರಫೇಲ್ ಒಪ್ಪಂದವನ್ನು ತನ್ನದಾಗಿಸಿಕೊಂಡಿತು. ಆದರೆ, ರಕ್ಷಣಾ ಕ್ಷೇತ್ರದಲ್ಲಿ 50 ವರ್ಷಗಳಿಗೂ ಹೆಚ್ಚಿನ ಅನುಭವ ಹೊಂದಿದ ಎಚ್ ಎ ಎಲ್ ಅನ್ನು ಕಡೆಗಣಿಸಲಾಯಿತು.
  • ಒಪ್ಪಂದ ಏರ್ಪಡಲೇಬೇಕೆಂದಿದ್ದರೆ ಡಸಾಲ್ಟ್ ತನ್ನ ಸಹಪಾಲುದಾರನನ್ನಾಗಿ ರಿಲಯನ್ಸ್ ಕಂಪನಿಯನ್ನು ಒಪ್ಪಿಕೊಳ್ಳಬೇಕು ಎಂದು ಮೋದಿ ಡಸಾಲ್ಟ್‌ಗೆ ಸೂಚಿಸಿದ್ದರು.
  • 126 ಯುದ್ಧವಿಮಾನಗಳನ್ನು ಖರೀದಿಸುವ ಮೊದಲ ಒಪ್ಪಂದ ಅಂತಿಮ ಹಂತದಲ್ಲಿದ್ದಾಗ ಮೋದಿ ಹೊಸ ಒಪ್ಪಂದಕ್ಕೆ ಸಹಿ ಹಾಕಿದರು.

ಸದ್ಯ ಚೆಂಡು ಸಿಬಿಐ ಅಂಗಳದಲ್ಲಿದೆ. ದೂರನ್ನು ಆಧರಿಸಿ ಅದು ಹೇಗೆ ಮುಂದುವರಿಯಲಿದೆ ಎಂಬುದು ಗಮನಾರ್ಹ. ಸಿಬಿಐ ಖಾಸಗಿ ವ್ಯಕ್ತಿಗಳ ವಿರುದ್ಧ ಹೇಗೆ ಕ್ರಮ ಕೈಗೊಳ್ಳಬಹುದು ಎಂಬುದನ್ನು ಇನ್ನಷ್ಟೇ ಕಾದುನೋಡಬೇಕಿದೆ. ಆದರೆ, ಸಾರ್ವಜನಿಕ ಸೇವೆಯಲ್ಲಿ ತೊಡಗಿರುವ ರಾಜಕಾರಣಿಗಳ ಪಾತ್ರವೂ ಇರುವುದರಿಂದ ವಿವಾದ ಮುಂದಿನ ದಿನಗಳಲ್ಲಿ ಮತ್ತಷ್ಟು ಬಿರುಸುಗೊಳ್ಳುವ ಸಾಧ್ಯತೆ ಇದೆ. ತಮ್ಮ ಮೇಲೆಯೇ ನೇರ ಆರೋಪಗಳು ಕೇಳಿಬಂದರೂ ಪ್ರಧಾನಿ ಮೋದಿ ಯಾವುದೇ ಸ್ಪಷ್ಟನೆ ನೀಡದೆ ಇರುವುದು ಸಾರ್ವಜನಿಕರಲ್ಲಿ ಹಲವು ಅನುಮಾನಗಳನ್ನು ಮೂಡಿಸಿದೆ. ಮತ್ತೊಂದೆಡೆ, ಹೊಲಾಂದ್ ಹೇಳಿಕೆಯನ್ನು ಆಧರಿಸಿ ಫ್ರಾನ್ಸ್ ಯಾವ ರೀತಿಯ ಕ್ರಮಕ್ಕೆ ಮುಂದಾಗಲಿದೆ ಎಂಬ ಕುತೂಹಲವಿದೆ. ರಫೇಲ್ ಒಪ್ಪಂದದ ಬಳಿಕ ಅವರ ಸಂಗಾತಿ ನಟಿ ಜ್ಯೂಲಿ ಗಯೇ ಅವರ ಸಿನಿಮಾವೊಂದಕ್ಕೆ ರಿಲಯನ್ಸ್ ಎಂಟರ್ಟೇನ್ಮೆಂಟ್ ಬಂಡವಾಳ ಹೂಡಿತ್ತು. ಹೀಗಾಗಿ, ಹೊಲಾಂದ್ ವಿವಾದದ ಕುಣಿಕೆಯಿಂದ ತಪ್ಪಿಸಿಕೊಳ್ಳುವುದು ಸುಲಭವಲ್ಲ. ಫ್ರಾನ್ಸ್ ಸರ್ಕಾರ ಹೊಲಾಂದ್ ವಿರುದ್ಧ ಕಠಿಣ ಕ್ರಮ ಕೈಗೊಂಡರೆ ಸಹಜವಾಗಿಯೇ ಅದರ ಪರಿಣಾಮ ಮೋದಿ ಸರ್ಕಾರದ ಮೇಲೆ ಆಗಲಿದೆ.

ಪ್ರಧಾನಿ ನರೇಂದ್ರ ಮೋದಿ ಮುಂದಿರುವ ಅತಿದೊಡ್ಡ ಸವಾಲು ಯಾವುದು ಗೊತ್ತೇ?
ಶ್ರೀಸಾಮಾನ್ಯರ ಸ್ವಾಮೀಜಿ ಎಂದೆನಿಸಿಕೊಂಡ ತೋಂಟದಾರ್ಯ ಶ್ರೀಗಳು ಇನ್ನಿಲ್ಲ
ಸೂಪರ್ಟೆಕ್ ₹600 ಕೋಟಿ ಸಾಲ ಮರುಪಾವತಿ ವೈಫಲ್ಯ; ಕಾದಿದೆ ಮತ್ತಷ್ಟು ಸಂಕಷ್ಟ?
Editor’s Pick More