ಆರು ಮಂದಿ ಮಾಜಿ ಸಿಎಂ ಒಳಗೊಂಡು 194 ರಾಜಕಾರಣಿಗಳಿಂದ ನಕಲಿ ಪ್ಯಾನ್‌ ಸಲ್ಲಿಕೆ!

ತೆರಿಗೆ ವಂಚನೆ ಮತ್ತಿತರ ಉದ್ದೇಶದಿಂದ ದೇಶದ ೧೯೪ ರಾಜಕಾರಣಿಗಳು ಚುನಾವಣಾ ಆಯೋಗಕ್ಕೆ ನಕಲಿ ಪ್ಯಾನ್‌ ಕಾರ್ಡ್ ಸಲ್ಲಿಸಿದ್ದಾರೆ. ಕಾಂಗ್ರೆಸ್‌ನ ೭೨, ಬಿಜೆಪಿಯ ೪೧ ನಾಯಕರು ಈ ಪಟ್ಟಿಯಲ್ಲಿದ್ದಾರೆ. ೨ ಸಾವಿರಕ್ಕೂ ಅಧಿಕ ದಾಖಲೆ ವಿಶ್ಲೇಷಿಸಿ ‘ಕೋಬ್ರಾ ಪೋಸ್ಟ್’ ಇದನ್ನು ಬಹಿರಂಗಪಡಿಸಿದೆ 

ಕೆಲವು ಮಾಧ್ಯಮಗಳು ಹಣಕ್ಕಾಗಿ ಹಿಂದುತ್ವ ವಿಚಾರಧಾರೆಗಳನ್ನು ವ್ಯಾಪಕವಾಗಿ ಪ್ರಚಾರ ಮಾಡುವಲ್ಲಿ ತೊಡಗಿವೆ ಎಂಬುದನ್ನು ವಿಡಿಯೋದಲ್ಲಿ ಸೆರೆಹಿಡಿಯುವ ಮೂಲಕ ಸಂಚಲನ ಸೃಷ್ಟಿಸಿದ್ದ ತನಿಖಾ ವರದಿಗಳ ವೆಬ್‌ಸೈಟ್‌ ‘ಕೋಬ್ರಾ ಪೋಸ್ಟ್‌’, ದೇಶದ ೧೯೪ ರಾಜಕಾರಣಿಗಳು ಕೇಂದ್ರ ಚುನಾವಣಾ ಆಯೋಗಕ್ಕೆ ನಕಲಿ ಪ್ಯಾನ್ ಸಂಖ್ಯೆ (ಶಾಶ್ವತ ಖಾತೆ ಸಂಖ್ಯೆ) ಸಲ್ಲಿಸಿದ್ದಾರೆ ಎಂಬ ವರದಿ ಪ್ರಕಟಿಸುವ ಮೂಲಕ ದೇಶದ ಗಮನ ಸೆಳೆದಿದೆ. ರಾಜಕಾರಣಿಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ೨ ಸಾವಿರ ಪ್ರಮಾಣಪತ್ರಗಳ ವಿಶ್ಲೇಷಣೆ ನಡೆಸಿರುವ ‘ಕೋಬ್ರಾ ಪೋಸ್ಟ್‌’ ವರದಿ ಪ್ರಕಟಿಸಿದೆ.

೨೦೦೬-೨೦೧೬ರ ಅವಧಿಯಲ್ಲಿ ೨೩ ರಾಜ್ಯಗಳ ರಾಜಕಾರಣಿಗಳು ಸಲ್ಲಿಸಿರುವ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿರುವ ‘ಕೋಬ್ರಾ ಪೋಸ್ಟ್‌’, ೧೯೪ ಪ್ಯಾನ್‌ ಕಾರ್ಡ್‌ಗಳು ನಕಲಿ ಎಂದಿದೆ. ಈ ಪೈಕಿ ಕಾಂಗ್ರೆಸ್‌ನ ೭೨ ರಾಜಕಾರಣಿಗಳಿದ್ದು, ಬಿಜೆಪಿಯ ೪೧ ನಾಯಕರು ನಕಲಿ ಪ್ಯಾನ್‌ ಕಾರ್ಡ್‌ ಸಲ್ಲಿಸಿದ್ದಾರೆ. ಉಳಿದಂತೆ ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷ, ಎನ್‌ಸಿಪಿ, ಜೆಡಿಯು ಸೇರಿದಂತೆ ೨೯ ಸಣ್ಣ ಮತ್ತು ದೊಡ್ಡ ಪಕ್ಷಗಳ ನಾಯಕರು ನಕಲಿ ಪ್ಯಾನ್‌ ಕಾರ್ಡ್‌ ಸಲ್ಲಿಸಿದ್ದಾರೆ. ಆರು ಮಂದಿ ಮಾಜಿ ಮುಖ್ಯಮಂತ್ರಿಗಳು, ೧೦ ಮಂದಿ ಹಾಲಿ ಸಚಿವರು, ಎಂಟು ಮಾಜಿ ಸಚಿವರು, ೫೪ ಶಾಸಕರು ಹಾಗೂ ೧೦೨ ಮಾಜಿ ಶಾಸಕರು ಚುನಾವಣಾ ಆಯೋಗಕ್ಕೆ ನಕಲಿ ಪ್ಯಾನ್‌‌ ಕಾರ್ಡ್‌ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ಕಾಂಗ್ರೆಸ್‌ ನಾಯಕ ಹಾಗೂ ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್‌ ಗೊಗೊಯ್‌, ಭುಮಿಧರ್‌ ಬರ್ಮನ್‌, ಬಿಹಾರ ಮಾಜಿ ಮುಖ್ಯಮಂತ್ರಿ ಜಿತಿನ್‌ ರಾಂ ಮಾಂಝಿ, ಹಿಮಾಚಲ ಮಾಜಿ ಮುಖ್ಯಮಂತ್ರಿಗಳಾದ ಕಾಂಗ್ರೆಸ್‌ನ ವೀರಭದ್ರ ಸಿಂಗ್‌, ಬಿಜೆಪಿಯ ಪ್ರೇಮ್‌ ಕುಮಾರ್‌ ಧುಮಾಲ್‌ ನಕಲಿ ಪ್ಯಾನ್‌ ಕಾರ್ಡ್‌ ಸಲ್ಲಿಸಿದ್ದು, ರಾಜಸ್ಥಾನದ ಸಚಿವ ಬಿನಾ ಕಾಕ್, ಬಿಹಾರದ ಕ್ಯಾಬಿನೆಟ್‌ ಸಚಿವ ನಂದಕಿಶೋರ್‌ ಯಾದವ್‌, ಮಹಾರಾಷ್ಟ್ರ ಸಚಿವ ವಿಜಯಕುಮಾರ್‌ ದೇಶಮುಖ್‌, ಹರ್ಯಾಣ ಸಚಿವೆ ಕವಿತಾ ಜೈನ್ ಮತ್ತು ಹಿಮಾಚಲ ಪ್ರದೇಶದ ಸಚಿವ ಕಿಶನ್‌ ಕಪೂರ್ ಹೆಸರೂ ಪಟ್ಟಿಯಲ್ಲಿದೆ. ರಾಜ್ಯಗಳ ಪೈಕಿ ಉತ್ತರ ಪ್ರದೇಶದ ಅಗ್ರಸ್ಥಾನ ಪಡೆದಿದ್ದು, ೨೬ ಪ್ರಕರಣಗಳು ಬೆಳಕಿಗೆ ಬಂದಿವೆ. ಆನಂತರ ಮಧ್ಯಪ್ರದೇಶ (೧೭), ಬಿಹಾರ (೧೫), ಉತ್ತರಾಖಂಡ (೧೪), ಅಸ್ಸಾಂ (೧೩), ಹಿಮಾಚಲ ಪ್ರದೇಶ (೧೨) ಮತ್ತು ರಾಜಸ್ಥಾನದ (೧೧) ರಾಜಕಾರಣಿಗಳು ನಕಲಿ ಪ್ಯಾನ್ ಕಾರ್ಡ್ ಸಲ್ಲಿಸುವ ಮೂಲಕ ಸ್ಥಾನ ಪಡೆದಿದ್ದಾರೆ.

ಒಂದು ಚುನಾವಣೆಯಿಂದ ಮತ್ತೊಂದು ಚುನಾವಣೆ ವೇಳೆಗೆ ಆದಾಯದಲ್ಲಿ ಭಾರಿ ಹೆಚ್ಚಳವಾಗಿರುವುದನ್ನು ಮರೆಮಾಚುವುದು ಹಾಗೂ ತೆರಿಗೆ ವಂಚನೆ ಉದ್ದೇಶದಿಂದ ರಾಜಕಾರಣಿಗಳು ನಕಲಿ ಪ್ಯಾನ್‌ ಸಂಖ್ಯೆ ಸಲ್ಲಿಸಿದ್ದು, ಇದು ಆತಂಕಕಾರಿ ಬೆಳವಣಿಗೆ ಎಂದು ‘ಕೋಬ್ರಾ ಪೋಸ್ಟ್‌’ ಹೇಳಿದೆ. ನಕಲಿ ಪ್ಯಾನ್ ಬಳಕೆ ಮಾಡುವ ಮೂಲಕ ಚುನಾವಣಾ ಪ್ರಚಾರಕ್ಕೆ ಅಕ್ರಮವಾಗಿ ಹಣ ಹೊಂದಿಸುವ ಶಂಕೆ ವ್ಯಕ್ತಪಡಿಸಲಾಗಿದೆ. ಆದಾಯ ತೆರಿಗೆ ಇಲಾಖೆ ಕಾನೂನಿನ ಪ್ರಕಾರ, ಅಭ್ಯರ್ಥಿಗಳು ತಮ್ಮ ಆದಾಯ ಮತ್ತು ಸಂಪತ್ತಿನ ವಿವರದ ಜೊತೆಗೆ ಪ್ಯಾನ್‌ ನಂಬರ್‌ ಸಲ್ಲಿಸಬೇಕಿದೆ. ತಪ್ಪಿದ್ದಲ್ಲಿ ಜನಪ್ರತಿನಿಧಿ ಕಾಯ್ದೆಯಡಿ ಚುನಾಯಿತರನ್ನು ಅನರ್ಹಗೊಳಿಸಲು ಅವಕಾಶವಿದೆ. ಇದರ ಜೊತೆಗೆ, ಒಮ್ಮೆ ಪ್ಯಾನ್‌ ಕಾರ್ಡ್ ಪಡೆದವರು ಮತ್ತೊಂದು ಪ್ಯಾನ್‌ ಕಾರ್ಡ್‌ ಪಡೆಯಲು ಅವಕಾಶವಿಲ್ಲ ಎಂದು ‘ಕೋಬ್ರಾ ಪೋಸ್ಟ್‌’ ಹೇಳಿದೆ. ಚುನಾವಣಾ ಆಯೋಗದ ಸಲಹೆಯಂತೆ ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ೧೦೦ ಜನಪ್ರತಿನಿಧಿಗಳ ದಾಖಲೆಗಳ ಶೋಧ ನಡೆಸುತ್ತಿದೆ. “ರಾಜಕಾರಣಿಗಳು ಸೇರಿದಂತೆ ಲಕ್ಷಾಂತರ ಜನರು ನಕಲಿ ಪ್ಯಾನ್‌ ಕಾರ್ಡ್‌ ಹೊಂದಿರುವುದರ ಬಗ್ಗೆ ಸುಪ್ರೀಂ ಕೋರ್ಟ್ ಆತಂಕ ವ್ಯಕ್ತಪಡಿಸಿದೆ,” ಎಂದೂ ವರದಿಯಲ್ಲಿ ಹೇಳಲಾಗಿದೆ.

ರಾಜಕೀಯದಲ್ಲಿ ಕ್ರಿಮಿನಲ್‌ ಹಿನ್ನೆಲೆ ಹೊಂದಿರುವವರನ್ನು ವ್ಯವಸ್ಥೆಯಿಂದ ಹೊರಗಿಡುವ ಸಂಬಂಧ ಸಮಾಜದ ವಿವಿಧ ನೆಲೆಗಳಿಂದ ಒತ್ತಡ ಬಂದರೂ ಆಯೋಗವು ಪ್ಯಾನ್‌ ಕಾರ್ಡ್‌ ಸತ್ಯಾಸತ್ಯತೆಯನ್ನು ವಿಶ್ಲೇಷಿಸುವ ಗೋಜಿಗೆ ಹೋಗಿಲ್ಲ. ಈ ಸಂಬಂಧ ಪ್ರತಿಕ್ರಿಯಿಸಿರುವ ಪ್ರಜಾಸತ್ತೀಯ ಸುಧಾರಣಾ ಸಂಸ್ಥೆಯ (ಎಡಿಆರ್‌) ಸಂಸ್ಥಾಪಕ ಸದಸ್ಯ ಜಗದೀಪ್‌ ಚೊಕ್ಕರ್, “ಜನಪ್ರತಿನಿಧಿಗಳು ನಕಲಿ ಪ್ಯಾನ್‌ ಕಾರ್ಡ್‌ ಸಲ್ಲಿಸಿದ್ದಾರೆ ಎಂಬುದು ಗಾಬರಿಗೊಳ್ಳುವಂಥ ಬೆಳವಣಿಗೆ. ಆದರೆ, ಆಶ್ಚರ್ಯ ಉಂಟುಮಾಡುವಂಥದ್ದಲ್ಲ. ಚುನಾವಣಾ ಆಯೋಗವು ರಾಜಕಾರಣಿಗಳು ನೀಡುವ ನಕಲಿ ಪ್ಯಾನ್‌ ಕಾರ್ಡ್‌ಗಳನ್ನು ಪರಿಶೀಲಿಸುವುದಿಲ್ಲ ಎನ್ನುವುದು ಸ್ಪಷ್ಟವಾಗಿದೆ,” ಎಂದಿದ್ದಾರೆ. “ಚುನಾಯಿತರಾದ ಆರು ತಿಂಗಳ ಒಳಗೆ ಶಾಸಕ ಅಥವಾ ಸಂಸದರ ಹಣಕಾಸು ದಾಖಲೆಗಳನ್ನು ಪರಿಶೀಲಿಸಬೇಕು ಎಂದು ಎಡಿಆರ್ ಮೂಲಕ ಆಯೋಗಕ್ಕೆ ಹಲವು ವರ್ಷಗಳಿಂದ ಒತ್ತಾಯ ಮಾಡುತ್ತಲೇ ಬಂದಿದ್ದೇವೆ. ಆಯೋಗವು ರಾಜಕಾರಣಿ ಸಲ್ಲಿಸಿದ ದಾಖಲೆಯನ್ನು ಪರಿಶೀಲಿಸಲಿಲ್ಲ ಎಂದಾದರೆ ಅವರನ್ನು ಶಿಕ್ಷೆಗೆ ಗುರಿಪಡಿಸುವುದು ಹೇಗೆ?” ಎಂದು ಚೊಕ್ಕರ್‌ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ : ಸ್ಟೇಟ್ ಆಫ್ ದಿ ನೇಶನ್ | ದತ್ತಾಂಶ ಕಳ್ಳತನ ಅಂದಾಕ್ಷಣ ಬಿಜೆಪಿ ಹೆಗಲು ಮುಟ್ಟಿಕೊಂಡಿದ್ದರ ಗುಟ್ಟು

ಇದಕ್ಕೆ ಭಿನ್ನ ಪ್ರತಿಕ್ರಿಯೆ ನೀಡಿರುವ ಕೇಂದ್ರ ಚುನಾವಣಾ ಆಯುಕ್ತ ಸುನಿಲ್‌ ಅರೋರಾ, “ಅಭ್ಯರ್ಥಿಗಳು ನೀಡಿದ ದಾಖಲೆಗಳನ್ನು ಪರಿಶೀಲಿಸುವುದು ಆಯೋಗದ ಕೆಲಸವಲ್ಲ. ಅಭ್ಯರ್ಥಿಗಳು ನೀಡಿದ ದಾಖಲೆಗಳನ್ನು ಸಾರ್ವಜನಿಕಗೊಳಿಸುವ ಮೂಲಕ ವಿವಿಧ ಏಜೆನ್ಸಿಗಳು ಅಥವಾ ವ್ಯಕ್ತಿಗಳು ಅವುಗಳನ್ನು ಪರಿಶೀಲಿಸಲು ಅವಕಾಶ ಮಾಡಿಕೊಡಲಾಗಿದೆ,” ಎಂದಿದ್ದಾರೆ. ೨೦೧೦ರಲ್ಲಿ ಆಯೋಗದಲ್ಲಿ ಚುನಾವಣಾ ವೆಚ್ಚ ವಿಭಾಗ ತೆರೆಯುವ ಮೂಲಕ ಪಾರದರ್ಶಕತೆಗೆ ಮುನ್ನುಡಿ ಬರೆದಿದ್ದ ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್‌ ವೈ ಖುರೇಷಿ, “ಪ್ಯಾನ್‌ ದಾಖಲೆ ಪರಿಶೀಲಿಸಲು ಆಯೋಗವು ವಿಶೇಷ ವ್ಯವಸ್ಥೆ ಮಾಡಬೇಕಿದೆ. ಸಿಬಿಡಿಟಿ ಅಗತ್ಯ ಕ್ರಮ ಕೈಗೊಳ್ಳಬೇಕು,” ಎಂದು ಹೇಳಿದ್ದಾರೆ.

ಕ್ರಿಮಿನಲ್‌ ಆರೋಪಗಳನ್ನು ಹೊತ್ತಿರುವ ಹಲವು ರಾಜಕಾರಣಿಗಳು ನಕಲಿ ದಾಖಲೆ ಸೃಷ್ಟಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ ಎನ್ನಲಾಗಿದ್ದು, ಮೂರು ಬಾರಿ ಅಸ್ಸಾಂ ಮುಖ್ಯಮಂತ್ರಿ ಹಾಗೂ ಆರು ಬಾರಿ ಲೋಕಸಭಾ ಸದಸ್ಯರಾದ ತರುಣ್‌ ಗೊಗೊಯ್‌ ಎರಡು ಪ್ಯಾನ್‌ ನಂಬರ್ ಸಲ್ಲಿಸಿದ್ದಾರೆ. ೨೦೦೬ರಲ್ಲಿ ಆಯೋಗಕ್ಕೆ ಸಲ್ಲಿಸಿದ ದಾಖಲೆಯಲ್ಲಿ ಗೊಗೊಯ್‌ ಒಂದು ಪ್ಯಾನ್‌ ನೀಡಿದ್ದು, ಈಗ ಅದು ಅಸ್ತಿತ್ವದಲ್ಲಿಲ್ಲ. ೨೦೧೧ರ ಚುನಾವಣೆಯಲ್ಲಿ ಮತ್ತೊಂದು ಪ್ಯಾನ್ ನೀಡಿದ್ದಾರೆ. ಈ ಸಂದರ್ಭದಲ್ಲಿ ಗೊಗೊಯ್‌ ಸಂಪತ್ತಿನಲ್ಲಿ ಭಾರಿ ಏರಿಕೆಯಾಗಿದೆ. ಇದೇ ತಂತ್ರವನ್ನು ಬಿಜೆಪಿ ನಾಯಕ ಪ್ರೇಮ್‌ಕುಮಾರ್ ಧುಮಾಲ್‌ ಅನುಸರಿಸಿದ್ದಾರೆ. ಹಲವು ಸಚಿವರು ಅಸ್ತಿತ್ವದಲ್ಲಿಲ್ಲದ ಪ್ಯಾನ್‌ ಸಂಖ್ಯೆಗಳನ್ನು ಸಲ್ಲಿಕೆ ಮಾಡಿದ್ದಾರೆ ಎಂದು ‘ಕೋಬ್ರಾ ಪೋಸ್ಟ್‌’ ವರದಿ ಹೇಳಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More