ಗುಜರಾತಿನಲ್ಲಿ ಪ್ರಾಣಭಯ ಎದುರಿಸುತ್ತಿರುವ ಉ.ಪ್ರದೇಶ, ಬಿಹಾರ ಮೂಲದ ಕಾರ್ಮಿಕರು

ಕಳೆದ ತಿಂಗಳು ಬಾಲಕಿ ಮೇಲೆ ಉ.ಪ್ರದೇಶ ಮೂಲದ ವ್ಯಕ್ತಿ ಅತ್ಯಾಚಾರಗೈದ ಘಟನೆ ನಂತರ ಗುಜರಾತಿನಲ್ಲಿ ವಲಸಿಗರ ಜೀವನವೇ ಬದಲಾಗಿದೆ. ಉ.ಪ್ರದೇಶ ಮೂಲದ ಕಾರ್ಮಿಕರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಈ ಕುರಿತ ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿಯ ಭಾವಾನುವಾದವಿದು

ಅಹಮದಾಬಾದ್‌ನ ಚಾಣಕ್ಯಪುರಿ ಫ್ಲೈಓವರ್ ಜನಜಂಗುಳಿಯಿಂದ ತುಂಬಿತ್ತು. ಕೈಯಲ್ಲಿ ಚೀಲಗಳು, ದೊಡ್ಡ ಬ್ಯಾಗ್‌ಗಳನ್ನು ಹೊತ್ತು ತಮ್ಮೂರಿಗೆ ಹೋಗುವ ಬಸ್ಸಿಗಾಗಿ ಕಾತರಿದಿಂದ ಕಾಯುತ್ತಿದ್ದ ಅವರ ಮೊಗದಲ್ಲಿ ಆತಂಕ, ಭಯ ಇತ್ತು. ಎಲ್ಲಿ ತಮ್ಮ ಮೇಲೆ ದಾಳಿ ನಡೆಯುತ್ತದೆಯೋ ಎಂಬ ಆತಂಕದಲ್ಲಿದ್ದ ವಲಸಿಗರು, ಸಿಕ್ಕ ಬಸ್ ಹತ್ತಿ ತಮ್ಮೂರಿಗೆ ಹೋಗುವ ತರಾತುರಿಯಲ್ಲಿದ್ದರು.

ಗುಜರಾತ್‌ನಲ್ಲಿ ಸೃಷ್ಟಿಯಾಗಿರುವ ಈ ಆತಂಕದ ವಾತಾವರಣಕ್ಕೆ ಕಾರಣ, 14 ತಿಂಗಳ ಮಗುವಿನ ಮೇಲೆ ನಡೆದ ಅತ್ಯಾಚಾರ ಪ್ರಕರಣ. ಸೆ.28ರಂದು ಗುಜರಾತ್‌ನ ಸಬರಕಾಂತ ಜಿಲ್ಲೆಯಲ್ಲಿ 14 ತಿಂಗಳ ಮಗುವಿನ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಬಿಹಾರದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದರು. ಈ ಘಟನೆಯ ಬಳಿಕ ಗುಜರಾತಿನಲ್ಲಿ ನೆಲೆಸಿರುವ ವಲಸಿಗರ ಮೇಲೆ ಹಲ್ಲೆಗಳು ಹೆಚ್ಚಾಗುತ್ತಿವೆ. ಹೊಟ್ಟೆಪಾಡಿಗಾಗಿ ಇತರೆಡೆಗಳಿಂದ ಗುಜರಾತ್‌ಗೆ ಬಂದು ಕೂಲಿ ಮಾಡಿಕೊಂಡು ಬದುಕು ಸಾಗಿಸುತ್ತಿದ್ದ ಇವರಿಗೆ ಪ್ರಾಣಭಯ ಉಂಟಾಗಿದೆ. ಹೀಗಾಗಿ ತಮ್ಮ ಊರಿಗೆ ಮರಳುವ ಸಿದ್ಧತೆಯಲ್ಲಿದ್ದಾರೆ.

ಗುಜರಾತ್ ಪೊಲೀಸರು ನೀಡಿದ ಮಾಹಿತಿಯನ್ವಯ ಬಿಹಾರ ಮತ್ತು ಉತ್ತರ ಪ್ರದೇಶದ ಜನರ ವಿರುದ್ಧ ಹಿಂಸಾಚಾರದ ಘಟನೆಗಳು ಆರಂಭವಾದ ಬಳಿಕ ಕಳೆದೊಂದು ವಾರದಲ್ಲಿ 150ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿದೆ. ಅತ್ಯಾಚಾರದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ವಲಸಿಗರ ವಿರುದ್ಧ ದ್ವೇಷ ಬಿತ್ತುವ ಸಂದೇಶಗಳು ಹರಿದಾಡುತ್ತಿವೆ. ವಲಸಿಗರ ವಿರುದ್ಧ ದಾಳಿಗಳು ಹೆಚ್ಚಾಗುತ್ತಿವೆ. “ನನ್ನ ಮಕ್ಕಳು ಮನೆಯ ಹೊರಗಡೆ ಆಟವಾಡುತ್ತಿದ್ದರು. ಈ ಸಂದರ್ಭ ಏಕಾಏಕಿ ಆಗಮಿಸಿದ ಪುಂಡರ ಗುಂಪೊಂದು ಕೆಲವರ ಮೇಲೆ ದಾಳಿ ನಡೆಸಿದೆ. ಘಟನೆಯನ್ನು ಕಣ್ಣಾರೆ ಕಂಡ ನನ್ನ ನಾಲ್ಕು ವರ್ಷದ ಮಗ ಆಘಾತಕ್ಕೊಳಗಾಗಿದ್ದಾನೆ. ಆತನನ್ನು ಸಹಜ ಸ್ಥಿತಿಗೆ ತರಲು ನಾವು ಹರಸಾಹಸಪಡುತ್ತಿದ್ದೇವೆ,” ಎಂದು ತಮ್ಮೂರಿಗೆ ವಾಪಸ್ ಹೋಗಲು ಬಸ್‌ಗಾಗಿ ಕಾಯುತ್ತಿದ್ದ ಮಧ್ಯಪ್ರದೇಶದ ಮಹಿಳೆ ರಾಜಕುಮಾರಿ ಜಾತವ್ ದುಃಖ ತೋಡಿಕೊಂಡರು.

ತಮ್ಮ ಮೂವರು ಮಕ್ಕಳು ಹಾಗೂ ಪತಿಯೊಂದಿಗೆ ಕಳೆದ 10 ವರ್ಷಗಳಿಂದ ಗುಜರಾತ್‌ನಲ್ಲಿ ವಾಸಿಸುತ್ತಿರುವ ರಾಜಕುಮಾರಿ, ಇಂತಹ ಆತಂಕದ ಪರಿಸ್ಥಿತಿ ಹಿಂದೆಂದೂ ಎದುರಿಸಿರಲಿಲ್ಲ. ಮಹಾದೇವ್ ನಗರದಲ್ಲಿ ನೆಲೆಸಿರುವ ರಾಜಕುಮಾರಿಯ ಪತಿ ಪೇಂಟಿಂಗ್ ವೃತ್ತಿಯಲ್ಲಿ ತೊಡಗಿದ್ದಾರೆ. ನೆರೆಹೊರೆಯವರು ಕೂಡ ವಲಸಿಗರೇ. “ನಾವೆಲ್ಲ ಭಯದಲ್ಲೇ ದಿನದೂಡುವಂತಾಗಿದೆ,” ಎನ್ನುತ್ತಾರೆ.

ಧರ್ಮೇಂದ್ರ ಕುಶ್ವಾಹಾ ಮಹಾದೇವ್ ನಗರ ಕಾಲೋನಿಯಲ್ಲಿ ವಾಸಿಸುತ್ತಿರುವ ಮತ್ತೊಬ್ಬ ವಲಸಿಗ. “ಉತ್ತರ ಪ್ರದೇಶ, ಬಿಹಾರ ಮತ್ತು ಮಧ್ಯಪ್ರದೇಶದಿಂದ ಬಂದು ಜೀವನ ಸಾಗಿಸುತ್ತಿರುವ 1,500ಕ್ಕೂ ಹೆಚ್ಚು ಮಂದಿ ನಮ್ಮ ಕಾಲನಿಯಲ್ಲಿದ್ದಾರೆ. ಇವರಲ್ಲಿ ಬಹುತೇಕ ವಲಸಿಗರು ತಮ್ಮೂರಿಗೆ ವಾಪಸಾಗುತ್ತಿದ್ದಾರೆ," ಎಂದು ಅವರು ತಿಳಿಸಿದರು.

ಕಳೆದ 10 ವರ್ಷಗಳಿಂದ ಪೇಟಿಂಗ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಧರ್ಮೇಂದ್ರ ತಮಗಾದ ಕಹಿ ಅನುಭವ ವಿವರಿಸಿದರು. “ಮುಖವಾಡ ಧರಿಸಿದ ವ್ಯಕ್ತಿ, ‘ಗುಜರಾತ್ ಬಿಟ್ಟು ಹೋಗು, ಇಲ್ಲದಿದ್ದರೆ ಕೊಲೆ ಮಾಡುತ್ತೇನೆ,” ಎಂದು ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ನಾವು ನಮ್ಮೂರಿಗೆ ವಾಪಸಾಗುತ್ತಿದ್ದೇವೆ," ಎಂದು ಹೇಳಿದರು.

“ಸಾಮಾನ್ಯವಾಗಿ ಗುಜರಾತ್‌ನಿಂದ, ಬಿಹಾರ ಮತ್ತು ಮಧ್ಯಪ್ರದೇಶಕ್ಕೆ ಎರಡು ದಿನಗಳಿಗೊಮ್ಮೆ ಬಸ್ ವ್ಯವಸ್ಥೆ ಇದೆ. ಇಷ್ಟಾದರೂ ಹೆಚ್ಚೆಂದರೆ ಬಸ್‌ನಲ್ಲಿ 25 ಮಂದಿ ಪ್ರಯಾಣಿಕರಿರುತ್ತಿದ್ದರು. ಆದರೆ, ಇದೀಗ ಪ್ರತಿದಿನ 20ಕ್ಕೂ ಅಧಿಕ ಬಸ್‌ಗಳು ಪ್ರಯಾಣಿಸುತ್ತಿದ್ದು, 80ರಿಂದ 90 ಮಂದಿ ಪ್ರಯಾಣಿಕರಿರುತ್ತಾರೆ,” ಎನ್ನುತ್ತಾರೆ ತೋಮರ್ ಟ್ರಾವೆಲ್ಸ್‌ನ ಪಿಂಟೂ ಸಿಂಗ್.

22 ವರ್ಷಗಳಿಂದ ಅಹಮದಾಬಾದ್‌ನಲ್ಲಿ ಹಳೇ ಕಟ್ಟಡ ನಿರ್ಮಾಣದ ಗುತ್ತಿಗೆದಾರಾಗಿ ಕೆಲಸ ಮಾಡುತ್ತಿರುವ 42ರ ಹರೆಯದ ಕೃಷ್ಣಚಂದ್ರ ಶರ್ಮಾ ಪ್ರಕಾರ, “ಗುಜರಾತ್‌ನಲ್ಲಿ ಈ ಹಿಂದೆ ಹಿಂದೂ-ಮುಸ್ಲಿಂ ಗಲಭೆಗಳು ನಡೆದಾಗಲೂ ಇಂತಹ ವಾತಾವರಣ ಯಾವತ್ತೂ ನಿರ್ಮಾಣವಾಗಿಲ್ಲ. ಆದರೆ, ಫೇಸ್‌ಬುಕ್ ಮತ್ತು ವಾಟ್ಸಾಪ್‌ಗಳಂತಹ ಸಾಮಾಜಿಕ ಜಾಲತಾಣಗಳಿಂದ ಇಂತಹ ಸುದ್ದಿಗಳು ಕಾಡ್ಗಿಚ್ಚಿನಂತೆ ಹಬ್ಬುತ್ತಿರುವುದೇ ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸಿದೆ.”

ಮಂಜು ಸಿಂಗ್ (27) ಗಾಂಧಿನಗರದಲ್ಲಿ ಪೇಂಟಿಂಗ್ ಮಾಡುವ ವೃತ್ತಿಯಲ್ಲಿ ತೊಡಗಿಕೊಂಡಿದ್ದಾರೆ. “ಗುರುವಾರ ನನ್ನ ಬೈಕ್ ಅನ್ನು 7 ಮಂದಿಯ ತಂಡ ತಡೆಯಿತು. ‘ನೀನು ಎಲ್ಲಿಯವನು’ ಎಂದು ಅವರು ಪ್ರಶ್ನಿಸಿದರು. ನಾನು ‘ರಾಜಸ್ಥಾನ’ ಎಂದು ಸುಳ್ಳು ಹೇಳಿದೆ. ಆದರೆ ಅನುಮಾನಗೊಂಡ ಅವರು ಇನ್ನಷ್ಟು ಪ್ರಶ್ನೆ ಕೇಳಿದರು. ನಾನು ರಾಜಸ್ಥಾನದ ಜಿಲ್ಲೆಯೊಂದರ ಹೆಸರು ಹೇಳಿದೆ. ನಾನು ಉತ್ತರ ಪ್ರದೇಶದವನಲ್ಲ ಎಂದುಕೊಂಡ ಬಳಿಕ ಅವರು ನನ್ನನ್ನು ಮುಂದೆ ಸಾಗಲು ದಾರಿ ಮಾಡಿಕೊಟ್ಟರು. ಇದಾದ ನಂತರ ಅದೇ ತಂಡ ನನ್ನ ಕಣ್ಣೆದುರೇ ಬೈಕೊಂದನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸುತ್ತಿದ್ದ ದೃಶ್ಯ ನೋಡಿ ಭಯವಾಗಿದೆ,” ಎಂದವರು ಹೇಳಿದರು.

ಮಧ್ಯಪ್ರದೇಶದಿಂದ ಗುಜರಾತ್‌ಗೆ ಬಂದು ಪೇಂಟಿಂಗ್ ವೃತ್ತಿ ಮಾಡಿಕೊಂಡಿದ್ದ ಮಂಜು ಸಿಂಗ್ ಹಾಗೂ ಇನ್ನಿತರರು ಇದೀಗ ತಮ್ಮೂರಿನತ್ತ ಮುಖ ಮಾಡಿದ್ದಾರೆ. ದೀಪಾವಳಿ ಹತ್ತಿರ ಬರುತ್ತಿರುವುದರಿಂದ ಸುಣ್ಣ-ಬಣ್ಣ ಬಳಿಯಲು ಉತ್ತಮ ಸೀಸನ್ ಆಗಿದ್ದರೂ, ಭೀತಿಯ ವಾತಾವರಣ ಇರುವುದರಿಂದ ಊರಿಗೆ ಮರಳುತ್ತಿರುವುದಾಗಿ ಅವರು ಹೇಳುತ್ತಾರೆ.

ಹೊರರಾಜ್ಯಗಳಿಂದ ಬಂದು, ಪಾನಿಪುರಿ ಮಾರಾಟ ಸೇರಿದಂತೆ ಇನ್ನಿತರ ಕೆಲಸ ಕಾರ್ಯ ಮಾಡುತ್ತಿರುವ ಮಂದಿಯದ್ದೂ ಇದೇ ಕತೆ. ಇವರೆಲ್ಲರೂ ಇದೀಗ ತಮ್ಮೂರಿಗೆ ಪಯಣ ಬೆಳೆಸುತ್ತಿದ್ದು, ಬದುಕುಳಿದರೆ ಸಾಕು ಎನ್ನುತ್ತಿದ್ದಾರೆ.

“14 ತಿಂಗಳ ಮಗುವಿನ ಮೇಲೆ ನಡೆದ ದಾಳಿ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವಲಸಿಗರ ವಿರುದ್ಧ ದ್ವೇಷ ಸಂದೇಶಗಳು ಹರಿದಾಡಿವೆ. ನಂತರ ಈ ದಾಳಿಗಳು ಆರಂಭಗೊಂಡಿವೆ. ಘಟನೆಗಳಿಗೆ ಸಂಬಂಧಿಸಿದಂತೆ 18 ಎಫ್‌ಐಆರ್‌ ದಾಖಲಾಗಿವೆ. ಇಂತಹ ಚಟುವಟಿಕೆಗಳಿಗೆ ಅವಕಾಶ ನೀಡಲಾಗುವುದಿಲ್ಲ. ಗುಜರಾತೇತರರು ಸಾಕಷ್ಟು ಸಂಖ್ಯೆಯಲ್ಲಿರುವ ಕಾರ್ಖಾನೆಗಳು ಮತ್ತು ವಸತಿ ಪ್ರದೇಶಗಳ ಮೇಲೆ ನಿಗಾ ಇರಿಸುವಂತೆ ಸ್ಥಳೀಯ ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ. ಸಾಮಾಜಿಕ ಮಾಧ್ಯಮಗಳ ಸಂದೇಶಗಳ ಮೇಲೂ ನಿಗಾ ಇಡಲಾಗಿದೆ,” ಎನ್ನುತ್ತಾರೆ ಡಿಜಿಪಿ ಶಿವಾನಂದ ಝಾ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More