ಹಕ್ಕಿಪಿಕ್ಕಿ ಸಮುದಾಯದ ಮೂರು ಮಂದಿಗೆ ಮೊಜಾಂಬಿಕ್‌ನಲ್ಲಿ ಗೃಹಬಂಧನ

ಕರ್ನಾಟಕದ ಹಕ್ಕಿಪಿಕ್ಕಿ ಸಮುದಾಯದ ಮೂರು ಮಂದಿಯನ್ನು ಅಕ್ರಮವಾಗಿ ದೇಶದಲ್ಲಿ ನೆಲೆಸುವ ಪ್ರಯತ್ನ ನಡೆಸಿದ ಹಿನ್ನೆಲೆಯಲ್ಲಿ ಮೊಜಾಂಬಿಕ್ ಆಡಳಿತ ವಿಚಾರಣೆ ನಡೆಸುತ್ತಿದೆ. ಭಾರತ ಅವರನ್ನು ದೇಶಕ್ಕೆ ವಾಪಸು ಕರೆತರುವ ಪ್ರಯತ್ನದಲ್ಲಿದೆ. ಈ ಕುರಿತ ‘ದಿ ಹಿಂದೂ’ ವರದಿಯ ಭಾವಾನುವಾದವಿದು

ಮೈಸೂರು ಜಿಲ್ಲೆಯ ಹಕ್ಕಿಪಿಕ್ಕಿ ಬುಡಕಟ್ಟು ಜನಾಂಗಕ್ಕೆ ಸೇರಿದ ಮೂರು ಮಂದಿ ಕಳೆದ ಮೂರು ತಿಂಗಳಿನಿಂದ ಮೊಜಾಂಬಿಕ್‌ನ ನಾಂಪುಲದಲ್ಲಿ ಸಿಕ್ಕಿಬಿದ್ದಿದ್ದಾರೆ. ಮೊಜಾಂಬಿಕ್‌ನ ಸ್ಥಳೀಯ ಆಡಳಿತ ಅವರನ್ನು ದೇಶ ಬಿಟ್ಟು ಹೋಗದಂತೆ ತಡೆದಿದೆ.

ಸುಮಾರು ೩೦ರ ಆಸುಪಾಸಿನ ವಯಸ್ಸಿನವರಾದ ಸೈಜು, ಮಧು ಚಂದನ್ ಮತ್ತು ಪ್ರವೀಣ್ ದೇಶದಲ್ಲಿ ನಿಗದಿತ ಅವಧಿಯನ್ನು ಮೀರಿ ಇರಲು ಸ್ಥಳೀಯ ಆಡಳಿತಕ್ಕೆ ಲಂಚ ಕೊಟ್ಟಿರುವ ಆರೋಪವನ್ನು ಎದುರಿಸುತ್ತಿದ್ದಾರೆ. ಮೊಜಾಂಬಿಕ್‌ನ ಭ್ರಷ್ಟಾಚಾರ ವಿರೋಧಿ ಇಲಾಖೆಯು ಈ ನಿಟ್ಟಿನಲ್ಲಿ ವಿಚಾರಣೆ ನಡೆಸುತ್ತಿದೆ. ಈ ಪ್ರಕರಣದ ವಿಚಾರಣೆ ಪೂರ್ಣಗೊಳ್ಳುವವರೆಗೂ ಮೂರೂ ಮಂದಿಯನ್ನು ದೇಶ ಬಿಟ್ಟು ಹೋಗದಂತೆ ಹೇಳಲಾಗಿದೆ.

ಮಪುಟೊದ ಭಾರತೀಯ ರಾಯಭಾರಿ ಕಚೇರಿಯ ಮುಖ್ಯಸ್ಥರಾದ ಅನಿಲ್ ಕುಮಾರ್ ಅವರು ಈ ವಿಚಾರವನ್ನು ದೃಢೀಕರಿಸಿದ್ದಾರೆ. “ಅವರನ್ನು ಬಂಧಿಸುವುದು ಅಥವಾ ವಶಕ್ಕೆ ತೆಗೆದುಕೊಂಡಿಲ್ಲ. ಆದರೆ ದೇಶ ಬಿಟ್ಟು ಹೋಗದಂತೆ ತಿಳಿಸಲಾಗಿದೆ. ಅವರು ತವರಿಗೆ ಹೋಗಲು ಎಲ್ಲಾ ಸಹಕಾರವನ್ನೂ ನಾವು ನೀಡಲಿದ್ದೇವೆ,” ಎಂದು ಅನಿಲ್ ಕುಮಾರ್ ಹೇಳಿದ್ದಾರೆ.

ಹಕ್ಕಿಪಿಕ್ಕಿ ಸಮುದಾಯದ ೧೬ ಮಂದಿಯ ತಂಡವು ಉದ್ಯೋಗದ ಹುಡುಕಾಟದಲ್ಲಿ ಮೊಜಾಂಬಿಕ್‌ಗೆ ಹೋಗಿದ್ದರು. ಇವರಲ್ಲಿ ಒಂಬತ್ತು ಮಂದಿ ಮಹಿಳೆಯರೂ ಸೇರಿದ್ದಾರೆ. ಗಿಡಮೂಲಿಕೆಗಳ ಉತ್ಪನ್ನಗಳನ್ನು ಮಾರುವುದು ಮತ್ತು ಮಸಾಜ್ ಸೇವೆಗಳನ್ನು ನೀಡುವ ಉದ್ಯೋಗಾವಕಾಶಗಳನ್ನು ಆ ದೇಶದಲ್ಲಿ ಹಕ್ಕಿಪಿಕ್ಕಿ ಜನಾಂಗ ಬಯಸಿದ್ದರು. ಆದರೆ, ಮೂರು ತಿಂಗಳ ವೀಸಾ ಮುಗಿದ ನಂತರವೂ ಆ ದೇಶದಲ್ಲಿ ತಮ್ಮ ನಿವಾಸವನ್ನು ವಿಸ್ತರಿಸುವಂತೆ ಸಮುದಾಯದ ಜನರು ಬೇಡಿಕೆ ಇಟ್ಟಿದ್ದರು.

ಅವರು ಭಾರತೀಯ ಕರೆನ್ಸಿ ೪೦,೦೦೦ ರು.ಗಳನ್ನು ಪ್ರತಿ ಪಾಸ್‌ಪೋರ್ಟ್‌ಗೆ ನೀಡಿ ಅನಧಿಕೃತವಾಗಿ ನೆಲೆಸುವ ಅವಕಾಶವನ್ನು ಪಡೆದುಕೊಂಡಿದ್ದರು. ಪ್ರತೀ ಪಾಸ್‌ಪೋರ್ಟ್‌ಗೆ ರು. ೧೬,೦೦೦ದ ರಶೀದಿ ಪಡೆದಿದ್ದರು. ಉಳಿದದ್ದನ್ನು ಲಂಚವಾಗಿ ಕೊಟ್ಟಿದ್ದರು. ತಮ್ಮ ಈ ಪ್ರಯಾಣದ ದಾಖಲೆಗಳನ್ನು ಮುಂದಿಟ್ಟು ದೇಶದಲ್ಲಿ ನೆಲೆಸುವ ಅವಕಾಶಕ್ಕಾಗಿ ಪ್ರಯತ್ನಿಸುತ್ತಿದ್ದಾಗ ಇವರು ಸ್ಥಳೀಯ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಅಕ್ರಮವಾಗಿ ದೇಶದಲ್ಲಿ ನೆಲೆಸಲು ಪ್ರಯತ್ನಿಸಿರುವುದು ಅರಿವಾದಾಗ ಮೊಕದ್ದಮೆ ದಾಖಲಾಗಿದೆ.

ಇದನ್ನೂ ಓದಿ : ಕುಹೂ ಕುಹೂ ಹಕ್ಕಿ ಭಾಷೆ ಮಾತನಾಡುವ ಕುಷ್ಕೋಯ್ ಗ್ರಾಮದ ಜನತೆ

ಜುಲೈ ೧೭ರಂದು ಈ ಪ್ರಕರಣದ ವಿವರ ಭಾರತೀಯ ರಾಯಭಾರಕ್ಕೆ ತಿಳಿದುಬಂದಿತ್ತು. ಅಧಿಕಾರಿಗಳು ಸ್ಥಳೀಯ ಅಧಿಕಾರಿಗಳ ಜೊತೆಗೆ ಸಂಪರ್ಕ ಹೊಂದಿ ಮಾತುಕತೆ ನಡೆಸಿದ ನಂತರ ಹಕ್ಕಿಪಿಕ್ಕಿ ಸಮುದಾಯದ ೧೩ ಮಂದಿಯನ್ನು ಕಳೆದ ಆಗಸ್ಟ್‌ ಮೊದಲ ವಾರದಲ್ಲಿ ಭಾರತಕ್ಕೆ ಕಳುಹಿಸಿದ್ದಾರೆ. “ಆದರೆ, ಸದ್ಯ ಮೊಜಾಂಬಿಕ್‌ನಲ್ಲಿ ಸಿಕ್ಕಿಹಾಕಿಕೊಂಡಿರುವ ಮೂರು ಮಂದಿ, ಸ್ಥಳೀಯ ಆಡಳಿತಕ್ಕೆ ಲಂಚ ನೀಡಿರುವ ಆರೋಪ ಹೊತ್ತಿದ್ದಾರೆ. ಹೀಗಾಗಿ, ಅವರನ್ನು ತವರಿಗೆ ಕಳುಹಿಸಲು ಮೊಜಾಂಬಿಕ್ ಆಡಳಿತ ಒಪ್ಪಿಲ್ಲ. ಈ ಮೂವರು ಹಿಂದೆಯೇ ಮೊಜಾಂಬಿಕ್‌ಗೆ ಭೇಟಿ ನೀಡಿದ್ದರು. ಕಳೆದ ವರ್ಷ ಸೈಜು ಮತ್ತು ಅವರ ಪತ್ನಿ ಇದೇ ರೀತಿ ಅಕ್ರಮವಾಗಿ ಮೊಜಾಂಬಿಕ್‌ನಲ್ಲಿ ನೆಲೆಸಲು ಅವಕಾಶ ಪಡೆದುಕೊಂಡಿದ್ದರು," ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತೀಯ ರಾಯಭಾರಿ ಕಚೇರಿಯು ನಂಪುಳದಲ್ಲಿ ಅವರ ವಸತಿಯನ್ನು ನೀಡಿದೆ ಮತ್ತು ಅನಾರೋಗ್ಯ ಸಮಸ್ಯೆ ಇರುವ ಒಬ್ಬ ವ್ಯಕ್ತಿಗೆ ಚಿಕಿತ್ಸೆಯ ಸೌಕರ್ಯವನ್ನೂ ಕಲ್ಪಿಸಿಕೊಟ್ಟಿದೆ. “ನಾವು ಮೂವರ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಭಾರತದಲ್ಲಿರುವ ಅವರ ಕುಟುಂಬ ಸದಸ್ಯರಿಗೂ ಈ ಬೆಳವಣಿಗೆಗಳ ಬಗ್ಗೆ ಅರಿವಿದೆ. ಭಾರತೀಯ ರಾಯಭಾರ ಕಚೇರಿ ಮೊಜಾಂಬಿಕ್‌ನ ಸ್ಥಳೀಯ ಸಚಿವರ ಜೊತೆಗೆ ಮಾತುಕತೆ ನಡೆಸಿದೆ. ಭಾರತದ ವಿದೇಶಾಂಗ ಸಚಿವರಿಗೂ ಈ ವಿಚಾರದ ಬಗ್ಗೆ ಮಾಹಿತಿ ನೀಡಲಾಗಿ,ದೆ” ಎಂದು ಅನಿಲ್ ಕುಮಾರ್ ತಿಳಿಸಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More