ಇಂದಿನ ಡೈಜೆಸ್ಟ್‌ | ನೀವು ಗಮನಿಸಲೇಬೇಕಾದ ಇತರ 10 ಪ್ರಮುಖ ಸುದ್ದಿಗಳು

ನೀವು ಗಮನಿಸಲೇಬೇಕಾದ ಇಂದಿನ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ನೋಟ

ಶಿವಮೊಗ್ಗ ಲೋಕಸಭಾ ಉಪಚುನಾವಣೆ; ಬಿ ವೈ ರಾಘವೇಂದ್ರ ಬಿಜೆಪಿ ಅಭ್ಯರ್ಥಿ

ಪಂಚರಾಜ್ಯ ವಿಧಾನಸಭಾ ಚುನಾವಣೆಯ ಜೊತೆಗೆ ರಾಜ್ಯದ ಮೂರು ಲೋಕಸಭೆ ಮತ್ತು ಎರಡು ವಿಧಾನಸಭೆಗಳಿಗೆ ಉಪಚುನಾವಣೆ ಘೋಷಣೆಯಾಗಿರುವ ಬೆನ್ನಲ್ಲೇ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪುತ್ರ ಬಿ ವೈ ರಾಘವೇಂದ್ರ ಸ್ಪರ್ಧಿಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ ಎಸ್‌ ಯಡಿಯೂರಪ್ಪ ಹೇಳಿದ್ದಾರೆ. “ನವೆಂಬರ್ ೩ರಂದು ನಡೆಯಲಿರುವ ಚುನಾವಣೆಯಲ್ಲಿ ಶಿವಮೊಗ್ಗ ಮತ್ತು ಬಳ್ಳಾರಿ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಭಾರಿ ಅಂತರದಿಂದ ಗೆಲ್ಲಲಿದ್ದಾರೆ. ಮಂಡ್ಯದಲ್ಲಿ ಸಮರ್ಥ ಅಭ್ಯರ್ಥಿಗಾಗಿ ಹುಡುಕಾಟ ನಡೆದಿದೆ,” ಎಂದು ಯಡಿಯೂರಪ್ಪ ಹೇಳಿದ್ದಾರೆ.

ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಲಿದ್ದಾರೆ: ಜಮೀರ್‌

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಬಹುಮತ ಪಡೆಯಲಿದ್ದು, ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಹೇಳಿದ್ದಾರೆ. “ಸಿದ್ದರಾಮಯ್ಯ ಅವರ ಮೇಲೆ ಅಲ್ಪಸಂಖ್ಯಾತ ಸಮುದಾಯದ ಜನರಿಗೆ ವಿಶೇಷ ಪ್ರೀತಿಯಿದೆ. ತಮ್ಮ ಅವಧಿಯಲ್ಲಿ ಸಿದ್ದರಾಮಯ್ಯ ಅವರು ಮುಸ್ಲಿಂ ಸಮುದಾಯದ ಕಲ್ಯಾಣಕ್ಕೆ ೩,೧೦೦ ಕೋಟಿ ರುಪಾಯಿ ನೀಡಿದ್ದರು. ಮತ್ತೊಮ್ಮೆ ಮುಖ್ಯಮಂತ್ರಿಯಾಗಿದ್ದರೆ ಖಂಡಿತವಾಗಿಯೂ ೧೦ ಸಾವಿರ ಕೋಟಿ ರುಪಾಯಿ ನೀಡುವ ಮೂಲಕ ಸಮಾಜದ ಏಳ್ಗೆಗೆ ಶ್ರಮಿಸುತ್ತಿದ್ದರು,” ಎಂದಿದ್ದಾರೆ. ಇದೇ ಸಂದರ್ಭದಲ್ಲಿ, “ಎಚ್‌ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಐದು ವರ್ಷ ಪೂರ್ಣಗೊಳಿಸಲಿದ್ದಾರೆ,” ಎಂದೂ ಹೇಳಿದ್ದಾರೆ.

ಶಬರಿಮಲೆಗೆ ಬರುವ ಮಹಿಳಾ ಭಕ್ತರಿಗೆ ವಿಶೇಷ ಸೌಕರ್ಯ

ಶಬರಿಮಲೆ ದರ್ಶನಕ್ಕೆ ಬರುವ ಮಹಿಳಾ ಭಕ್ತರಿಗಾಗಿ ಸನ್ನಿಧಿಯಲ್ಲಿ ಪ್ರತ್ಯೇಕ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ದೇವಸ್ವಂ ಕಮಿಷನರ್ ಎನ್ ವಾಸು ಹೇಳಿದ್ದಾರೆ. “ಪಂಪಾ ನದಿ ಹಾಗೂ ಸುತ್ತಲಿನ ಪ್ರದೇಶದಲ್ಲಿ ಹೆಚ್ಚಿನ ವಿದ್ಯುದ್ದೀಪಗಳ ವ್ಯವಸ್ಥೆ ಮಾಡಲಾಗುತ್ತಿದ್ದು, ಈಗಿರುವ ಶೌಚಾಲಯ ಹಾಗೂ ಸ್ನಾನಗೃಹಗಳಲ್ಲಿ ಕೆಲವನ್ನು ಮಹಿಳೆಯರಿಗಾಗಿ ಮೀಸಲಿಡುತ್ತಿದ್ದು, ಸ್ನಾನಗೃಹಗಳ ಸಂಖ್ಯೆ ಹೆಚ್ಚಿಸಲಿದ್ದೇವೆ. ಸುಪ್ರೀಂ ಕೋರ್ಟ್ ತೀರ್ಪನ್ನು ಪಾಲಿಸಲಿದ್ದೇವೆ. ಹದಿನೆಂಟು ಮೆಟ್ಟಿಲು ಹತ್ತುವ ವಿಷಯದ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ನಂತರವೇ ಈ ಬಗ್ಗೆ ತೀರ್ಮಾನಿಸಲಾಗುವುದು,” ಎಂದಿದ್ದಾರೆ.

ದಸರಾ ವಿಶೇಷ; ತೆರೆದ ಬಸ್‌ನಲ್ಲಿ ಪ್ರವಾಸಿಗರಿಗೆ ನಗರ ದರ್ಶನ

ನಾಡಹಬ್ಬ ದಸರಾಗೆ ಅರಮನೆ ನಗರಿ ಸಜ್ಜಾಗುತ್ತಿದೆ. ಮೈಸೂರು ಜಿಲ್ಲಾಡಳಿತವು ಈ ಬಾರಿಯ ದಸರಾ ಹಬ್ಬದ ಆಚರಣೆಗಾಗಿ ಮೈಸೂರಿಗೆ ಆಗಮಿಸುವ ಪ್ರವಾಸಿಗರಿಗೆ ನಗರದಲ್ಲಿ ತೆರೆದ ಬಸ್‌ನಲ್ಲಿ ಪ್ರಯಾಣಿಸುವ ಹಾಗೂ ದಸರೆಯ ವೈಭವವನ್ನು ಕಣ್ತುಂಬಿಕೊಳ್ಳುವ ವಿಶೇಷ ಸೌಲಭ್ಯವನ್ನು ಕಲ್ಪಿಸಿದ್ದು. ಈ ಸೇವೆ ಇಂದಿನಿಂದ ಅ.20ರವರೆಗೆ ಪ್ರವಾಸಿಗರಿಗೆ ಲಭ್ಯವಿರಲಿದ್ದು, ತೆರೆದ ಬಸ್‌ನಲ್ಲಿ ನಗರ ಪ್ರವಾಸದ ಅವಧಿ ಒಂದೂವರೆ ಗಂಟೆಗಳಿಗೆ ನಿಗದಿಯಾಗಿದೆ. ಮೈಸೂರು ನಗರಾದ್ಯಂತ 15ಕ್ಕೂ ಹೆಚ್ಚು ಪ್ರವಾಸಿ ತಾಣಗಳನ್ನು ಪ್ರಯಾಣದಲ್ಲಿ ಕಣ್ತುಂಬಿಕೊಳ್ಳಬಹುದಾಗಿದೆ.

ನ್ಯಾ.ಕ್ಯಾವನೊವ್ ಆಯ್ಕೆ; ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಂಭ್ರಮ

ಲೈಂಗಿಕ ದೌರ್ಜನ್ಯ ಆರೋಪಕ್ಕೆ ಗುರಿಯಾಗಿ ಜಗತ್ತಿನ ಗಮನ ಸೆಳೆದಿದ್ದ ನ್ಯಾಯಮೂರ್ತಿ ಬ್ರೆಟ್ ಕ್ಯಾವನೊವ್ ಪ್ರಕರಣಕ್ಕೆ ಸದ್ಯಕ್ಕೆ ತೆರೆಬಿದ್ದಿದೆ. ಈ ಕುರಿತ ಸುದ್ದಿ ತಿಳಿಯುತ್ತಿದ್ದಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಂಭ್ರಮಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಟ್ರಂಪ್, “ಪ್ರಕರಣದಲ್ಲಿ ಡೆಮಾಕ್ರಾಟ್ ಪಕ್ಷದವರ ನಡೆ ಹೀನವಾದುದು ಮತ್ತು ಚಾರಿತ್ರ್ಯಹರಣ ಮಾಡುವಂಥದ್ದು,” ಎಂದು ಹರಿಹಾಯ್ದಿದ್ದಾರೆ. ಈ ಮಧ್ಯೆ, ಶನಿವಾರ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಕ್ಯಾವನೊವ್ ವಾಷಿಂಗ್ಟನ್‌ನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಇದೇ ವೇಳೆ, ಕ್ಯಾವನೊವ್ ವಿರುದ್ಧ ಅಬ್ಬರದ ಪ್ರತಿಭಟನೆ ಕೂಡ ನಡೆಯಿತು.

ಹುಲಿ ಕೊಲ್ಲಲು ನೇಮಿಸಿದ್ದ ಶಾರ್ಪ್‌ ಶೂಟರ್‌ನನ್ನು ಹಿಂಪಡೆದ ಮಹಾ ಸರ್ಕಾರ

ಮನುಷ್ಯರನ್ನು ತಿನ್ನುತ್ತಿದೆ ಎನ್ನಲಾದ ಹುಲಿಯೊಂದನ್ನು ಕೊಲ್ಲಲು ಮಹಾರಾಷ್ಟ್ರ ಅರಣ್ಯ ಇಲಾಖೆ ನೇಮಿಸಿದ್ದ ಶಾರ್ಪ್ ಶೂಟರ್‌ನನ್ನು ಸದ್ಯ ಹಿಂದಕ್ಕೆ ಕರೆಯಲಾಗಿದೆ. ಸಾವರ್ಖೇಡ ಅರಣ್ಯ ಪ್ರದೇಶದ ಹಳ್ಳಿಗಳಲ್ಲಿ ಹುಲಿಯ ಉಪಟಳ ಹೆಚ್ಚಾಗಿದ್ದರಿಂದ ಹೈದರಾಬಾದಿನ ಶಾರ್ಪ್ ಶೂಟರ್ ಶಫತ್ ಅಲಿ ಖಾನ್ ಎಂಬುವರನ್ನು ಹುಲಿಬೇಟೆಗೆ ನೇಮಿಸಲಾಗಿತ್ತು. ಆದರೆ, ಪರಿಸರವಾದಿಗಳ ತೀವ್ರ ಟೀಕೆ ಹಾಗೂ ಹುಲಿಗೆ ಮಂಪರು ಚುಚ್ಚುಮದ್ದು ನೀಡಲಾಗದು, ಅದನ್ನು ಕೊಲ್ಲುವುದಷ್ಟೇ ಒಂದು ದಾರಿ ಎಂಬ ಶಾರ್ಪ್ ಶೂಟರ್ ಹೇಳಿಕೆಯಿಂದ ಸಂಕಷ್ಟಕ್ಕೆ ಸಿಲುಕಿದ ಇಲಾಖೆ ಕಾರ್ಯಾಚರಣೆ ರದ್ದು ಮಾಡಿದೆ.

ಕಾಂಗ್ರೆಸ್ ಸರ್ಕಾರ ರಚನೆಯಾದರೆ ಬಿಜೆಪಿ ಯೋಜನೆಗಳನ್ನು ಕೈಬಿಡುವುದಿಲ್ಲ: ಅಶೋಕ್ ಗೆಹ್ಲೋಟ್

ತಮ್ಮ ಪಕ್ಷ ಸರ್ಕಾರ ರಚನೆ ಮಾಡುವ ಸಂದರ್ಭದಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್ ತಿಳಿಸಿದ್ದಾರೆ. “ಹಿಂದಿನ ಸರ್ಕಾರದ ಯೋಜನೆಗಳನ್ನು ಮುಂದುವರಿಸಲು ನಾವೂ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಏಕೆಂದರೆ ನಮ್ಮ ಪಕ್ಷ ಜನರ ಹಿತಕ್ಕಾಗಿ ಮಾತ್ರವೇ ಕೆಲಸ ಮಾಡುತ್ತದೆ. ಹಾಗಾಗಿ ನಮಗೆ ಹಿಂದಿನ ಸರ್ಕಾರದ ಮೇಲಿನ ಅಸಮಾಧಾನವನ್ನು ಜನರ ಮೇಲೆ ಹೇರಲು ಇಷ್ಟವಿಲ್ಲ,” ಎಂದಿದ್ದಾರೆ.

ಕೀ ನಿಶಿಕೊರಿಗೆ ಆಘಾತ ನೀಡಿದ ಡ್ಯಾನಿಲ್‌ಗೆ ಜಪಾನ್ ಓಪನ್

ರಷ್ಯಾದ ಅರ್ಹತಾ ಆಟಗಾರ ಡ್ಯಾನಿಲ್ ಮೆಡ್ವೆದೆವ್ ಸ್ಥಳೀಯ ಫೇವರಿಟ್ ಕೀ ನಿಶಿಕೊರಿಯನ್ನು ಮಣಿಸಿ ಜಪಾನ್ ಓಪನ್ ಕಿರೀಟ ಧರಿಸಿದರು. ಇಂದು ನಡೆದ ಪುರುಷರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಸುತ್ತಿನ ಸೆಣಸಾಟದಲ್ಲಿ ಆಕ್ರಮಣಕಾರಿ ಆಟವಾಡಿದ ಡ್ಯಾನಿಲ್ ೬-೨, ೬-೪ ಎರಡು ನೇರ ಸೆಟ್‌ಗಳಲ್ಲಿ ನಿಶಿಕೊರಿಗೆ ಸೋಲುಣಿಸಿ ಪ್ರಶಸ್ತಿ ಜಯಿಸಿದರು. ವಿಶ್ವದ ೧೨ನೇ ಶ್ರೇಯಾಂಕಿತ ನಿಶಿಕೊರಿ ಮೊದಲ ಸೆಟ್‌ನಲ್ಲಿ ೧೧ ಬಾರಿ ಅನಗತ್ಯ ತಪ್ಪು ಹೊಡೆತಗಳಿಂದ ಡ್ಯಾನಿಲ್‌ ಗೆಲುವಿಗೆ ರಹದಾರಿ ನಿರ್ಮಿಸಿಕೊಟ್ಟರು. ಕೇವಲ ೨೫ ನಿಮಿಷಗಳ ಅಂತರದಲ್ಲಿ ಮೊದಲ ಸೆಟ್ ಅನ್ನು ರಷ್ಯನ್ ಆಟಕ್ಕೆ ವಶಪಡಿಸಿಕೊಂಡರು. ೨೦೧೬ರ ಫೆಬ್ರವರಿಯಲ್ಲಿ ಮೆಂಫಿಸ್ ಓಪನ್‌ನಲ್ಲಿ ಪ್ರಶಸ್ತಿ ಗೆದ್ದ ಬಳಿಕ ಎಂಟು ಎಟಿಪಿ ಟೂರ್ನಿಗಳ ಪ್ರಶಸ್ತಿ ಸುತ್ತಿನಲ್ಲಿ ನಿಶಿಕೊರಿ ಎಡವಿರುವುದು ಗಮನಾರ್ಹ.

ಕರೋಲಿನ್ ವೋಜ್ನಿಯಾಕಿ ಚಾಂಪಿಯನ್

ಡೆನ್ಮಾರ್ಕ್ ಆಟಗಾರ್ತಿ ಹಾಗೂ ವಿಶ್ವದ ಎರಡನೇ ಶ್ರೇಯಾಂಕಿತೆ ಕರೋಲಿನ್ ವೋಜ್ನಿಯಾಕಿ ವೃತ್ತಿಬದುಕಿನ ೩೦ನೇ ಡಬ್ಲ್ಯೂಟಿಎ ಪ್ರಶಸ್ತಿ ಜಯಿಸಿದರು. ಇಂದು ಮುಕ್ತಾಯ ಕಂಡ ಚೀನಾ ಓಪನ್ ಟೆನಿಸ್ ಪಂದ್ಯಾವಳಿಯ ಅಂತಿಮ ಸುತ್ತಿನಲ್ಲಿ ಲಾಟ್ವಿಯಾದ ಅನಸ್ಟಾಸಿಯಾ ಸೆವಾಸ್ಟೋವಾ ವಿರುದ್ಧ ವೋಜ್ನಿಯಾಕಿ ೬-೩, ೬-೩ ಎರಡು ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ೨೮ರ ಹರೆಯದ ವೋಜ್ನಿಯಾಕಿ ಈ ಋತುವಿನ ಆರಂಭವನ್ನು ಆಸ್ಟ್ರೇಲಿಯನ್ ಓಪನ್ ಗೆಲ್ಲುವುದರೊಂದಿಗೆ ಆರಂಭಿಸಿದ್ದರು. ಆದಾಗ್ಯೂ, ಆನಂತರದ ಮೂರೂ ಗ್ರಾಂಡ್‌ಸ್ಲಾಮ್ ಪಂದ್ಯಾವಳಿಗಳಲ್ಲಿ ಅಸ್ಥಿರ ಆಟವಾಡಿದ ಆಕೆ ಒಂದರಲ್ಲಿಯೂ ಯಶಸ್ವಿಯಾಗಿರಲಿಲ್ಲ. ಚೀನಾ ಓಪನ್ ಜಯಿಸುವುದರೊಂದಿಗೆ ವೋಜ್ನಿಯಾಕಿ ಇದೀಗ ಸಿಂಗಪುರದಲ್ಲಿ ನಡೆಯಲಿರುವ ಡಬ್ಲ್ಯೂಟಿಎ ಫೈನಲ್‌ನತ್ತ ಗಮನ ಹರಿಸಿದ್ದಾರೆ

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More