ಮೇಲ್ವರ್ಗದ ಹಿಡಿತದಲ್ಲಿ ಅಮ್ನೆಸ್ಟಿ ಇಂಡಿಯಾ; ಮಾಜಿ ಉದ್ಯೋಗಿ ತೆರೆದಿಟ್ಟ ಸತ್ಯ

ಮಾನವ ಹಕ್ಕುಗಳ ರಕ್ಷಣೆಗಾಗಿ ಹೋರಾಡುವ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಸಂಸ್ಥೆಯ ಭಾರತೀಯ ಕಚೇರಿ ತಾರತಮ್ಯಗಳನ್ನು ಪೋಷಿಸುತ್ತಿದೆ ಎಂಬ ಅಂಶವನ್ನು ಅಲ್ಲಿ ಕಾರ್ಯನಿರ್ವಹಿಸಿದ ಮರಿಯಾ ಸಲೀಂ ಹೊರಹಾಕಿದ್ದಾರೆ. ಅವರ ಸುದೀರ್ಘ ಲೇಖನದ ಭಾವಾನುವಾದ ಇಲ್ಲಿದೆ

"ಇಲ್ಲಿ ಯಾರಿಗೆಲ್ಲ, ನಮ್ಮ ಹೌಸ್‌ಕೀಪಿಂಗ್ ಸ್ಟಾಫ್ ಸಹ ನಮ್ಮಂತೆ ತಾವು ತೊಡುವ ಬಟ್ಟೆ ಕುರಿತು ಆಯ್ಕೆಯ ಹಕ್ಕು ಉಳ್ಳವರು ಎಂದು ಅನ್ನಿಸುತ್ತದೋ, ದಯವಿಟ್ಟು ಅವರೆಲ್ಲ ತಮ್ಮ ಕೈ ಎತ್ತಿ. ಅವರು ಆ ಅಸಹ್ಯವಾದ ಸಮವಸ್ತ್ರ ತೊಡುವಂತೆ ಅವರನ್ನು ಒತ್ತಾಯಪಡಿಸುವುದು ತಪ್ಪು ಎಂದು ನಿಮಗೆ ಅನ್ನಿಸಿದಲ್ಲಿ ದಯವಿಟ್ಟು ಕೈ ಎತ್ತಿ. ಈ ಕುರಿತಾಗಿ ಅವರು ಕನಿಷ್ಠ ನಮ್ಮೊಳಗಿನ ಐದು ಮಂದಿಯ ಬಳಿ ಹೇಳಿಕೊಂಡಿದ್ದಾರೆ ಮತ್ತು ನಾವು ಈ ಕುರಿತು ಮೇಲಿನ ಅಧಿಕಾರಿಗಳಿಗೆ ತಿಳಿಸಿದ್ದೇವೆ," ಎಂದು ನಾನು ಹೇಳಿದ್ದು ಆಗಸ್ಟ್‌ ಒಂದರ ಅಮ್ನೆಸ್ಟಿ ಇಂಟರ್ನ್ಯಾಷನಲ್ ಇಂಡಿಯಾದ ಮೀಟಿಂಗಿನಲ್ಲಿ. ಅಲ್ಲಿ ಎಲ್ಲ ಸ್ಥರದ ನೌಕರರೂ ಹಾಜರಿದ್ದರು. ಅವರಲ್ಲಿ ಶೇ.೯೦ ಮಂದಿ ನನ್ನ ಮಾತಿಗೆ ಸಮ್ಮತಿ ಸೂಚಿಸಿದ್ದರು. ಇದಕ್ಕೆ ಹೊರತಾಗಿದ್ದದ್ದು ಹೌಸ್ ಕೀಪಿಂಗ್ ಸ್ಟಾಫ್ ಮೇಲೆ ತಮ್ಮ ನಿರ್ಧಾರ ಹೇರಿದ ಹಿರಿಯ ಅಧಿಕಾರಿಗಳು. ಕೊನೆಗೆ ಆ ಸಮವಸ್ತ್ರ ಪದ್ಧತಿಯನ್ನು ಕನಿಷ್ಠ ಆರು ತಿಂಗಳ ತನಕ ಮುಂದುವರಿಸಲು ನಿರ್ಧರಿಸಲಾಯಿತು!

ತುಳಿತಕ್ಕೊಳಗಾದ, ನಿರ್ಲಕ್ಷಕ್ಕೊಳಗಾದ ಜನರ ಹಕ್ಕುಗಳಿಗಾಗಿ ಕೆಲಸ ಮಾಡುವ ಸಂಸ್ಥೆಯಲ್ಲಿ ಅಂಚಿನಲ್ಲಿರುವ ಸಮುದಾಯದ ಹೆಂಗಸರು ಯಾವ ಬಟ್ಟೆ ತೊಡಬೇಕು ಎಂದು ನಿರ್ಧರಿಸುವ ಹಕ್ಕು ಮೇಲ್ಜಾತಿ ಮೇಲ್ವರ್ಗದ ಗಂಡಸರಿಗೆ ಇರುವುದು ಯುಕ್ತವೇ? ನನಗೆ ಹಾಗನ್ನಿಸುವುದಿಲ್ಲ.

ಜಗತ್ತಿನ ಅತಿ ದೊಡ್ಡ ಮಾನವ ಹಕ್ಕುಗಳ ಸಂಸ್ಥೆಯಾದ ಅಮ್ನೆಸ್ಟಿ ಇಂಟರ್ನ್ಯಾಷನಲ್‌ಗೆ ಕಳೆದ ವಾರ ರಾಜಿನಾಮೆ ನೀಡಿ ಹೊರಬರಲು ನನಗಿದ್ದ ಅನೇಕ ಕಾರಣಗಳಲ್ಲಿ ಮೇಲೆ ಉದಾಹರಿಸಿದ ಸಂಗತಿಯೂ ಒಂದು. ಮುಝಫ್ಫರ್‌ ನಗರ ದಂಗೆಯಲ್ಲಿ ಅತ್ಯಾಚಾರಕ್ಕೆ ಒಳಗಾದವರ ಕುರಿತು ವರದಿ ಮಾಡುವ ಮೂಲಕ ಅಮ್ನೆಸ್ಟಿ ಇಂಟರ್ನ್ಯಾಷನಲ್ ಸಂಸ್ಥೆಯನ್ನು ೨೦೧೬ರಲ್ಲಿ ಸಲಹಾಗಾರ್ತಿಯಾಗಿ ಸೇರಿದ ನಾನು , ಸಂಪೂರ್ಣಾವಧಿ ಕೆಲಸಕ್ಕೆ ಸೇರಿದ ಕೇವಲ ಎಂಟು ತಿಂಗಳಲ್ಲಿ ರಾಜಿನಾಮೆ ನೀಡಿ ಹೊರಬರಬೇಕಾಗುವ ಸಂದರ್ಭ ಎದುರಾಗಬಹುದು ಎಂದು ಊಹಿಸಿರಲಿಲ್ಲ.

ತಾರತಮ್ಯ, ನಿರ್ಲಕ್ಷ್ಯ ಇವುಗಳ ಕುರಿತು ಮಿತವಾದ ತಿಳಿವಳಿಕೆ ಉಳ್ಳ ಮತ್ತು ಹಕ್ಕು ಕಳೆದುಕೊಂಡ ಸಮುದಾಯಗಳೊಂದಿಗೆ ನಿರಂತರ ಜೀವಂತ ಸಂಬಂಧ ಇರಿಸಿಕೊಳ್ಳದ ವರಿಷ್ಠಾಧಿಕಾರಿಗಳಿದ್ದ ಕಚೇರಿಯನ್ನು, ಕಾರ್ಯಕ್ಷೇತ್ರವನ್ನು ನಾನು ಪ್ರವೇಶಿಸಿದ್ದೆ. ಈ ಉನ್ನತಾಧಿಕಾರಿಗಳು ನನ್ನ೦ತೆ ಭಿನ್ನ ಹಿನ್ನಲೆಯಿಂದ ಬಂದ ಸಹೋದ್ಯೋಗಿಗಳ ಜೊತೆ ವ್ಯವಹರಿಸುತ್ತಿದ್ದ ರೀತಿಯಲ್ಲಿ ಒಂದು ಬಗೆಯ ಅಸಡ್ಡೆ ಇರುತ್ತಿತ್ತು. ಸದ್ಯ ನಿರುದ್ಯೋಗಿ ಆಗಿರುವ ನಾನು ಇದನ್ನು ಬರೆಯುವ ಹೊತ್ತಿಗೆ ನನ್ನ ಖೇದವೆಂದರೆ, ನಾನು ಮೊದಲೇ ರಾಜಿನಾಮೆ ಯಾಕೆ ನೀಡಲಿಲ್ಲ ಎಂಬುದು. ನನ್ನ ರಾಜಿನಾಮೆ ಪತ್ರದಲ್ಲಿ ಬರೆದ ಕೆಲವು ಸಾಲುಗಳನ್ನು ಇಲ್ಲಿ ಎತ್ತಿಕೊಡುತ್ತಿದ್ದೇನೆ:

"ನಾನು ತಾರತಮ್ಯ ಅನುಭವಿಸಿ ಅವಮಾನಕ್ಕೆ ಒಳಗಾಗಿ ಕೆಲವು ಅವಕಾಶಗಳಿಂದ ವಂಚಿತಳಾಗಿದ್ದೇನೆ. ಮಾನವ ಹಕ್ಕುಗಳ ಹೋರಾಟಗಾರ್ತಿಯಾಗಿ ಕ್ಷೇತ್ರಕಾರ್ಯದ ಅನುಭವವಿರುವ ನಾನು, ಸಮುದಾಯಗಳೊಂದಿಗೆ ಮತ್ತು ಅಂಚಿನಲ್ಲಿ ಬದುಕುತ್ತಿರುವ ಅನೇಕರೊಂದಿಗೆ ಜೀವಂತ ಸಂಬಂಧ ಹೊಂದಿದ ನಾನು, ಈ ರೀತಿಯಾಗಿ ಪೂರ್ವಗ್ರಹಪೀಡಿತ ನಡವಳಿಕೆಗೆ ಗುರಿಯಾಗುವುದನ್ನು ಸಹಿಸಿಸಿಕೊಳ್ಳಲಾರೆ. ಅದು ನನಗೆ ಒಪ್ಪಿತವಾಗದು."

ನನ್ನ ಅಭಿಪ್ರಾಯದಲ್ಲಿ ಮೇಲ್ಜಾತಿ ಮೇಲ್ವರ್ಗದ ಜನರಿಂದ ತುಂಬಿದ ಅಮ್ನೆಸ್ಟಿ ಇಂಡಿಯಾದ ಆಡಳಿತ ಮಂಡಳಿ ಅಮ್ನೆಸ್ಟಿ ಇಂಟರ್ನ್ಯಾಷನಲ್ ಪ್ರತಿಪಾದಿಸುವ ಮೌಲ್ಯಗಳಿಗೆ ವ್ಯತಿರಿಕ್ತವಾಗಿದೆ. ಬಹಳಷ್ಟು ಘಟನೆಗಳನ್ನು ನೆನಪಿಸಿಕೊಳ್ಳಬಹುದು. ಅವುಗಳೆಲ್ಲ ಸಾಕ್ಷ್ಯಾಧಾರ ಹೊಂದಿವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಹಂಚಿಕೊಳ್ಳುತ್ತೇನೆ. ಕಳೆದ ಒಂದೂವರೆ ವರ್ಷ ಮುಸ್ಲಿಂ ಮತ್ತು ದಲಿತರಿಗೆ, ಅವರಲ್ಲಿಯೂ ಮುಖ್ಯವಾಗಿ ಮಹಿಳೆಯರಿಗೆ, ಕೆಲಸ ಮಾಡಲು ಬಹಳಷ್ಟು ಕಷ್ಟವಾಗುವ ವಾತಾವರಣ ಉಂಟಾಗಿದೆ. ಹಲವರು ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗಳ ವಿರುದ್ಧ ತಾರತಮ್ಯ (ಜಾತ್ಯಾಧಾರಿತ) ಮತ್ತು ಪೀಡನೆಯ ವಿಷಯವಾಗಿ ದೂರು ಸಲ್ಲಿಸಿರುತ್ತಾರೆ. ಈ ದೂರುಗಳಲ್ಲಿ ಹಲವು ಅಧಿಕೃತ ದೂರುಗಳಾಗಿದ್ದು, ಕೆಲವು ಅನಧಿಕೃತ ದೂರುಗಳಾಗಿರುತ್ತವೆ. (ಎಚ್ ಆರ್‌ನ ಇಬ್ಬರನ್ನು ಒಳಗೊಂಡ, ಯಾವುದೇ ತಜ್ಞರಿಲ್ಲದ ಸಮಿತಿ, ಈ ಎಲ್ಲ ದೂರುಗಳಲ್ಲಿ ವಿವರಿಸಲಾಗಿರುವ ಸಂದರ್ಭದಲ್ಲಿ ಹೆಚ್ಚಿನ ಪ್ರಸಂಗಗಳು ತಾರತಮ್ಯ ಮಾಡುತ್ತಿಲ್ಲ ಎಂದು ಪ್ರಥಮ ಹಂತದ ವಿಚಾರಣೆಯಲ್ಲಿ ಹೇಳಿದೆ.)

ಕೇರಳ ಮೂಲದ ಓರ್ವ ಹಿರಿಯ ದಲಿತ ಹೋರಾಟಗಾರರು, ಲಿಂಗ ತಾರತಮ್ಯದ ವಿಚಾರಗಳಿಗೆ ಉಸ್ತುವಾರಿಯಾಗಿದ್ದು, ನಾನು ಅಮ್ನೆಸ್ಟಿ ಸೇರಿದ ಮೊದಲ ಮೂರು ತಿಂಗಳ ಕಾಲ ನನ್ನ ಮ್ಯಾನೇಜರ್ ಸಹ ಆಗಿದ್ದರು. ಅವರು ೨೦೧೮ರ ಮಾರ್ಚ್ ತಿಂಗಳಲ್ಲಿ ರಾಜಿನಾಮೆ ನೀಡುವ ಸಂದರ್ಭದ್ಲಲಿ ತಮ್ಮ ಪತ್ರದಲ್ಲಿ, ‘ಮಾನಸಿಕ ಕಿರುಕುಳ ಮತ್ತು ಪೀಡನೆ’ಯನ್ನು ಮೇಲಾಡಳಿತ ಅಸ್ತ್ರದಂತೆ ತನ್ನ ವಿರುದ್ಧ ಬಳಸುತ್ತತ್ತಿದೆ ಎಂದು ಬರೆದಿದ್ದರು. ಅವರು ಇಂಥ ನಡವಳಿಕೆಯನ್ನು ಪಿಒಎ ಆಕ್ಟ್ ಪ್ರಕಾರ ತಾರತಮ್ಯ ಮತ್ತು ಹಿಂಸೆ ಎಂದು ಪರಿಗಣಿಸಲಾಗುತ್ತದೆ ಎಂದು ಹೇಳಿದ್ದರು. ಅವರು ರಾಜಿನಾಮೆ ಪತ್ರ ನೀಡಿದ ಅರ್ಧ ಗಂಟೆಯಲ್ಲಿ ಮ್ಯಾನೇಜರ್ ಅದನ್ನು ಮರುಮಾತಿಲ್ಲದೆ ಅಂಗೀಕರಿಸಿದ್ದಕ್ಕೆ ನಾನು ಸಾಕ್ಷಿಯಾಗಿದ್ದೆ.

ಆಗಸ್ಟ್ ೨೦೧೮ರಲ್ಲಿ ಕರ್ನಾಟಕ ಮೂಲದ, 60 ವಯಸ್ಸು ದಾಟಿದ್ದ ಓರ್ವ ಹೋರಾಟಗಾರರು ಸಂಸ್ಥೆಯಿಂದ ಹೊರನೆಡೆದರು. ಅದಕ್ಕೆ ಕಾರಣ, ಅವರ ಕಾಂಟ್ರಾಕ್ಟ್ ಅನ್ನು ನವೀಕರಿಸುವ ಸಂದರ್ಭದಲ್ಲಿ ಹಿಂದೆ ಮಾತನಾಡಿಕೊಂಡ ಆರ್ಥಿಕ ಕರಾರನ್ನು ಮುರಿಯಲಾಗಿತ್ತು. ಅದಕ್ಕೆ ಹಿರಿಯ ಅಧಿಕಾರಿ ಒಬ್ಬರಿಗೆ ಇವರ ಕಾರ್ಯಕ್ಷಮತೆ ಕುರಿತಾಗಿ ಇದ್ದ ಸಂಶಯವೇ ಕಾರಣವಾಗಿತ್ತು. "ಇರಲಿ. ನನ್ನ ಇಂಗ್ಲಿಷ್ ಭಾಷೆ ಅಮ್ನೆಸ್ಟಿ ಬಯಸುವ ಮಟ್ಟದ್ದಾಗಿರಲಿಕ್ಕಿಲ್ಲ ಮತ್ತು ಅವರಂತೆ ನಾನು ಮೇಲುವರ್ಗಕ್ಕೆ ಸೇರಿದಾಕೆಯೂ ಅಲ್ಲ. ಇವರು ಐದು ಸಾವಿರ ರೂಪಾಯಿ ಕಡಿಮೆ ಕೊಡುತ್ತಾರೆ ಅನ್ನುವುದಕ್ಕಿಂತ ಹೆಚ್ಚಾಗಿ ನನ್ನನ್ನು ಅಗೌರವದಿಂದ ನೆಡೆಸಿಕೊಳ್ಳುತ್ತಾರೆ ಎಂಬುದು ಕಾಡುವ ಸಂಗತಿ,” ಎಂದು ಅವರು ತಮ್ಮ ಕೆಲಸದ ಕೊನೆಯ ದಿನ ನಾಲ್ಕು ಜನ ಸಹೋದ್ಯೋಗಿಗಳ ಬಳಿ ಹೇಳಿಕೊಂಡರು. ಇಪ್ಪತ್ತೈದು ವರ್ಷಗಳ ಅನುಭವ ಹೊಂದಿದ್ದ ಅವರನ್ನು ಬೇರೆ ಯಾವುದೇ ಸಂಸ್ಥೆ ಆಸ್ತಿಯಂತೆ ಕಾಪಾಡಿಕೊಳ್ಳುತ್ತಿತ್ತು. ಆದರೆ, ಇಲ್ಲಿ ಅವರ ಬದಲಿಗೆ ನುರಿತ ಇಂಗ್ಲಿಷ್ ಬರುತ್ತಿದ್ದ ವ್ಯಕ್ತಿಯನ್ನು ಹೆಚ್ಚಿನ ಸಂಬಳಕ್ಕೆ ಸಮಾಲೋಚಕ ಹುದ್ದೆಗೆ ಸೇರಿಸಿಕೊಂಡರು.

ನನ್ನ ಇನ್ನೊಬ್ಬರು ಸಹೋದ್ಯೋಗಿ, ಜೆಎನ್‌ಯುನಿಂದ ಪಿ.ಎಚ್‌ಡಿ ಪಡೆದವರಾಗಿದ್ದಿದ್ದು ಮಾತ್ರವಲ್ಲ, ಬಾಪ್ಸಗೆ ಬುನಾದಿ ಹಾಕಿದವರಲ್ಲಿ ಒಬ್ಬರಾಗಿದ್ದರು. ಅದರ ಸ್ಥಾಪಕ ಸದಸ್ಯರು. ಅವರು ಸಹ ಈ ಸಂಸ್ಥೆಯಲ್ಲಿ ಬಹಳಷ್ಟು ಪೀಡನೆ ಮತ್ತು ತಾರತಮ್ಯಕ್ಕೆ ಒಳಗಾದರು. ತಮ್ಮ ರಾಜಿನಾಮೆ ಪತ್ರದಲ್ಲಿ ಅವರು, ಜಾತ್ಯಾಧಾರಿತ ತಾರತಮ್ಯ ತನ್ನ ರಾಜಿನಾಮೆಗೆ ಕಾರಣ ಎಂದು ಹೇಳಿದ್ದರು ಮತ್ತು ನನ್ನ ಬಳಿ ಅದನ್ನು ಸಮರ್ಥಿಸಿಕೊಳ್ಳಲು ಅವರು ಉದಾಹರಿಸಿದ ಘಟನೆಯನ್ನು ಹೇಳಿಕೊಂಡರು. ಆದಿವಾಸಿಗಳ ಹಕ್ಕಿನ ಕುರಿತಾದ ಒಂದು ಕೆಲಸಕ್ಕೆ ಆದಿವಾಸಿ ಸಮುದಾಯದಿಂದಲೇ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಆಕೆಯ ಸಲಹೆಗೆ ಬಂದ ಉತ್ತರ: "ಅಗತ್ಯವಿಲ್ಲ. ಯಾಕೆಂದರೆ, ಪ್ರಾಣಿಗಳ ಹಕ್ಕಿನ ಕೆಲಸಕ್ಕೆ ಪ್ರಾಣಿಗಳನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಿಲ್ಲವಲ್ಲ, ಹಾಗೆಯೇ ಇದು." ಅವರ ದೂರನ್ನು ಅಧಿಕಾರದಲ್ಲಿರುವವರು ತಿರಸ್ಕರಿಸಿದ್ದಾರೆ. ಹಾಗಾಗಿ, ಅವರು ಎಕ್ಸ್‌ಕ್ಯೂಟಿವ್ ಡೈರೆಕ್ಟರ್ ಅವರಿಗೆ ಪತ್ರ ಬರೆದಿದ್ದಾರೆ.

ಪರದೆಯ ಹಿಂದೆ

ಈ ತಿಂಗಳ ಆರಂಭದಲ್ಲಿ ಚಂದ್ರಶೇಖರ್ ಆಜಾದ್ ಅವರ ಬಿಡುಗಡೆಯನ್ನು ಸ್ವಾಗತಿಸುವುದರಲ್ಲಿ ಅಮ್ನೆಸ್ಟಿ ಇಂಡಿಯಾ ಒಂದಿಷ್ಟೂ ತಡಮಾಡಲಿಲ್ಲ. ಆದರೆ, ಆಜಾದ್ ಅವರನ್ನೂ ಒಳಗೊಂಡಂತೆ ಯಾರಿಗೂ ಅಮ್ನೆಸ್ಟಿ ಇಂಡಿಯಾ ಯಾಕೆ ಆಜಾದ್ ಅವರ ಪರವಾಗಿ ಕ್ಯಾಂಪೇನ್ ಮಾಡಿತು ಎಂಬುದು ತಿಳಿದಿಲ್ಲ.

ಅಮ್ನೆಸ್ಟಿ ಇಂಟರ್ನ್ಯಾಷನಲ್ ಈ ವರ್ಷಾವಧಿಯ ಕೊನೆಯೊಳಗೆ ೭ ಲಕ್ಷಕ್ಕೂ ಹೆಚ್ಚು ಹೊಸ ಸದಸ್ಯರನ್ನು ತಯಾರಿಸಬೇಕು ಎಂಬ ಗುರಿಯನ್ನು ಅಮ್ನೆಸ್ಟಿ ಇಂಡಿಯಾದ ಮುಂದಿಟ್ಟಿದೆ. ಸದಸ್ಯತ್ವವನ್ನೇ ಅವಲಂಬಿಸಿರುವ ಅಮ್ನೆಸ್ಟಿ, ಹಲವು ಬಗೆಯ ಕ್ಯಾಂಪೇನ್ ನಡೆಸುವುದರ ಮೂಲಕ ಹೊಸ ಸದಸ್ಯರನ್ನು ತಯಾರಿಸುತ್ತದೆ.

ನಾನು ಅಮ್ನೆಸ್ಟಿ ಸೇರಿದ ದಿನದಿಂದಲೂ ಯಾವ ಕ್ಯಾಂಪೇನ್ ಎಷ್ಟು ಮಿಸ್ಸ್ಡ್ ಕಾಲ್ ತಂದುಕೊಟ್ಟಿತು ಅಥವಾ ಸಹಿ ಸಂಗ್ರಹಿಸಿಕೊಟ್ಟಿತು ಎಂಬುದರ ಸುತ್ತಲೇ ಚರ್ಚೆಗಳನ್ನು ಕೇಳುತ್ತ ಬಂದಿದ್ದೇನೆ. ಆಜಾದ್ ಪರ ಕ್ಯಾಂಪೇನ್ ನೆಡೆಸಲು ಕಾರಣ ಅವರ ಹೆಸರು ಮತ್ತು ವ್ಯಕ್ತಿತ್ವ ತಂದುಕೊಡಬಹುದಾದ ಹೊಸ ಸದಸ್ಯತ್ವದ ಲೆಕ್ಕದೆಣಿಕೆ. ಇದನ್ನು ಅರಿಯದ ಭೀಮ್ ಆರ್ಮಿ ಸದಸ್ಯರು, ತಾವೇ ಮುಂದೆಬಿದ್ದು, ಒಂದೇ ಒಂದು ವಾರದಲ್ಲಿ ಸುಮಾರು ಒಂದೂವರೆ ಲಕ್ಷ ಮಿಸ್ಸ್ಡ್ ಕಾಲ್ ಅಮ್ನೆಸ್ಟಿ ಇಂಡಿಯಾಕ್ಕೆ ಸಿಗುವಂತೆ ಮಾಡಿದರು. ಇದೆಲ್ಲ ನಡೆದದ್ದು ಮೂರು ತಿಂಗಳ ಹಿಂದೆ.

ಈ ಮಿಸ್ಸ್ಡ್ ಕಾಲ್ ಲೆಕ್ಕವನ್ನು 'ಬೆಳವಣಿಗೆ ಮತ್ತು ಸಂಘಟನೆ ಕಾರ್ಯ’ ಎಂದು ಎಲ್ಲೆಂದರಲ್ಲಿ ಹೇಳಿಕೊಂಡಿದ್ದಲ್ಲದೆ, ಬೇರೆ ಏನನ್ನು ಮಾಡಿದೆ ಎಂದು ಈ ಸಂಸ್ಥೆಯನ್ನು ಕೇಳಬೇಕಾಗಿದೆ ಅಥವಾ ರೋಹಿಂಗ್ಯಾ ವಿಷಯವಾಗಿ ನೆಡೆಸಿದ ಕ್ಯಾಂಪೇನ್‌ನಲ್ಲಿ ಬಂದ ಏಳು ಲಕ್ಷಕ್ಕೂ ಮಿಕ್ಕ ಮಿಸ್ಸ್ಡ್ ಕಾಲ್ ಇಟ್ಟುಕೊಂಡು ಸಾಧಿಸಿದ್ದಾದರೂ ಏನು ಎಂದು ಕೇಳಬೇಕು. ಇಷ್ಟೆಲ್ಲ ಮಿಸ್ಸ್ಡ್ಕಾಕಾಲ್ ಸರಕಾರದ ಮೇಲೆ ಒತ್ತಡ ಹಾಕಲು ಉಪಯೋಗಿಸಲಾಗುತ್ತದೆ ಎಂದು ಹಲವರು ನಂಬಿರಬಹುದು. ಆದರೆ, ಮಿನಿಸ್ಟ್ರಿ ಗೆ ಪತ್ರ ಬರೆಯುವುದಕ್ಕಿಂತ ಹೆಚ್ಚೇನೂ ಮಾಡಲಾಗಲಿಲ್ಲ.

ಇಡೀ ಸಂಸ್ಥೆ ಮತ್ತು ಅದರ ಕಾರ್ಯಕಾರಿ ನಿರ್ದೇಶಕರು ಸದ್ಯ ಯಾರ ಮೇಲೆ ಜಾತ್ಯಾಧಾರಿತ ತಾರತಮ್ಯದ ಕುರಿತು ವಿಚಾರಣೆಗೆ ಒಳಗಾಗುತ್ತಿರುವರೋ ಅದೇ ನಿರ್ದೇಶಕರು ಆಜಾದ್ ಪರವಾದ ಪತ್ರಿಕಾಗೋಷ್ಠಿ ನೆಡೆಸಲು ಅನುಮತಿ ನೀಡಿದರು. ಆಕೆ ಅಮ್ನೆಸ್ಟಿ ಇಂಡಿಯಾದ ಪರವಾಗಿ ಒಂದಿಡೀ ಸಮುದಾಯ ಎದುರಿಸುವ ತಾರತಮ್ಯ ಮತ್ತು ತುಳಿತದ ಕುರಿತಾಗಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಅಷ್ಟೇ ಅಲ್ಲದೆ, ಆಕೆಯ ವಿರುದ್ಧ ವಿಚಾರಣೆ ನೆಡೆಯುತ್ತಿದ್ದರೂ ಕಾರ್ಯಕಾರಿ ನಿರ್ದೇಶಕರು ಆಕೆಯೊಂದಿಗೆ ಫೋಟೋ ತೆಗೆಸಿಕೊಂಡು ಟ್ವಿಟ್ಟರ್ ಅಲ್ಲಿ ಹಂಚಿಕೊಂಡರು ಸಹ.

ಡಾ.ಸಿಲ್ವಿಯಾ ಕರ್ಪಗಂ ಎಂಬ ಸರ್ಕಾರಿ ವೈದ್ಯರು ಮತ್ತು ಸಂಶೋಧಕರು ಆರು ತಿಂಗಳ ಕಾಲ ಅಮ್ನೆಸ್ಟಿ ಇಂಡಿಯಾ ಜೊತೆ ಕೆಲಸ ಮಾಡಿ, ಸಂಸ್ಥೆ ಜಾತಿ ವ್ಯವಸ್ಥೆಯನ್ನು ಗುರುತಿಸಿ ಅದನ್ನು ಎದುರಿಸಲು ಹಿಂಜರಿಯುತ್ತದೆ ಎಂಬ ಕಾರಣಕ್ಕೆ ರಾಜಿನಾಮೆ ನೀಡಿದರು. ಆ ಬಳಿಕ ತಮ್ಮ ಒಂದು ಲೇಖನದಲ್ಲಿ ಅವರು ಹೀಗೆ ಬರೆದುಕೊಂಡರು: "ಅಮ್ನೆಸ್ಟಿ ನೌಕರರು ಆದಿವಾಸಿಗಳೊಂದಿಗೆ ಸೆಲ್ಫಿ ತೆಗೆದುಕೊಂಡು 'ಆದಿವಾಸಿಗಳೊಂದಿಗೆ ನಾನು' ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಾರೆ ಮತ್ತು ಅವರೇ ಜಾತಿ ಪದ್ಧತಿ ಮತ್ತು ಅದರ ಹಿಂಸೆಯ ಕುರಿತು ಯಾರೇ ಮಾತನಾಡಿದರೂ ಅವರನ್ನು 'ಬಹುಜನ ಬಜರಂಗದಳ' ಎಂದು ಕರೆಯುತ್ತಾರೆ. ಸಮುದಾಯಗಳನ್ನು ತಮ್ಮ ಉಪಯೋಗಕ್ಕೆ ಬಳಸಿಕೊಂಡು ನಂತರದಲ್ಲಿ ಅವರನ್ನೇ ಅವಮಾನಿಸುವುದು ಮತ್ತು ಅವರ ಸಮಸ್ಯೆಗಳನ್ನೇ ಅಲ್ಪಗೊಳಿಸುವುದು ಇವುಗಳ ವಿರೋಧಾಭಾಸದ ಅರಿವೂ ಇಲ್ಲದವರಾಗಿದ್ದರೇ ಇವರುಗಳು!

ಅಂಚಿನ ಸಮುದಾಯದಿಂದ ಬಂದ ಮಹಿಳೆಯರ ಜೊತೆ ಯಾವ ರೀತಿ ವ್ಯವಹರಿಸಬೇಕು, ಅವರೊಂದಿಗೆ ಹೇಗೆ ವರ್ತಿಸಬೇಕು ಎಂಬ ಕನಿಷ್ಠ ತಿಳಿವೂ ಅಮ್ನೆಸ್ಟಿ ಇಂಡಿಯಾದ ಆಡಳಿತ ಮಂಡಳಿಗೆ ಇಲ್ಲವೆಂಬುದ್ದಕ್ಕೆ ಒಂದು ಘಟನೆ ನೆನಪಿಸಿಕೊಳ್ಳುತ್ತೇನೆ. ಸದ್ಯ ಮಹಿಳಾ ಹಕ್ಕುಗಳ ವಿಷಯವನ್ನು ಮುನ್ನಡೆಸುವ ಮತ್ತು ಐ.ಸಿ ಸದಸ್ಯರಾಗಿರುವ ಓರ್ವ ವ್ಯಕ್ತಿ, ಲೆಂಗಿಕ ಕಿರುಕುಳ ಎದುರಿಸುತ್ತಿದ್ದ ಓರ್ವ ದಲಿತ ಸಹೋದ್ಯೋಗಿ ಬಳಿ, "ಒಂದೇ ಕೈಯಿಂದ ಚಪ್ಪಾಳೆ ತಟ್ಟಲಿಕ್ಕಾಗುವುದಿಲ್ಲ," ಎಂದು ಹೇಳಿದ್ದರು. ನನ್ನ ಸಹೋದ್ಯೋಗಿ ಈ ಸಂಭಾಷಣೆಯ ಬಳಿಕ ಕಣ್ಣೀರಿಟ್ಟಿದ್ದಳು.

ಸಂಸ್ಥೆ ಮಾಡಿದ ಮತ್ತು ಮಾಡುತ್ತಿರುವ ಅಗತ್ಯದ ಮತ್ತು ಪ್ರಭಾವ ಬೀರುವಂಥ ಒಳ್ಳೆಯ ಕೆಲಸಗಳನ್ನು ನಾ ಅಲ್ಲಗಳೆಯುವುದಿಲ್ಲ. ಮಹತ್ವದ ವಿಷಯಗಳ ಕುರಿತಾಗಿ ತಾನು ಮಾಡುತ್ತಿರುವ ಕೆಲಸವನ್ನು ಸಂಸ್ಥೆ ಮುಂದುವರಿಸಬೇಕು. ದಲಿತರು ಮತ್ತು ಅಂಚಿಗೆ ತಳ್ಳಲ್ಪಟ್ಟವರ ಮೇಲಾಗುವ ಹಿಂಸೆ ಮತ್ತು ಅನ್ಯಾಯದ ದಾಖಲೀಕರಣ ಮಾಡುವುದು ಎಷ್ಟು ಮುಖ್ಯವೋ, ಆ ಹಿಂಸೆ ಮತ್ತು ಅನ್ಯಾಯ ಕೊನೆಗೊಳಿಸಲು ಬೇಕಾದ ಅಗತ್ಯದ ಕೆಲಸಗಳನ್ನು ಮಾಡುವುದೂ ಅಷ್ಟೇ ಮುಖ್ಯ. ಸುಮ್ಮನೆ ಟ್ವೀಟ್ ಮಾಡುವುದು ಮತ್ತು ಹೇಳಿಕೆಗಳನ್ನು ಕೊಡುವುದಕ್ಕಷ್ಟಕ್ಕೇ ಸೀಮಿತವಾದರೆ ಮಾಧ್ಯಮಕ್ಕೂ ಮಾನವ ಹಕ್ಕುಗಳ ಸಂಸ್ಥೆಗೂ ಏನೇನೂ ವ್ಯತ್ಯಾಸ ಉಳಿಯುವುದಿಲ್ಲ. ಈ ಹೇಳಿಕೆಗಳನ್ನು ಮಾಧ್ಯಮ ಹೇಗೆ ಎತ್ತಿಕೊಂಡಿತು ಮತ್ತು ಅದು ಹೆಚ್ಚಿನ ಪ್ರಭಾವ ಹೇಗೆ ಬೀರಿತು ಎಂದು ವಾದ ಮಾಡುವವರು ಇರಬಹುದು. ಆದರೆ, ಹೇಳಿಕೆ ಕೊಟ್ಟ ವಿಷಯಗಳ ಜೊತೆ ಯಾವ ರೀತಿಯಲ್ಲಿ ಭಾಗಿಯಾಗಿ ಕೆಲಸ ಮಾಡಿದೆವು ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕಲ್ಲವೇ? ಈ ಟ್ವೀಟ್ ಸಂಭ್ರಮದಲ್ಲಿ ನಾನು ಸಹ ಭಾಗಿ ಆಗಿದ್ದೆ ಎಂಬುದರ ಬಗ್ಗೆ ನನಗೆ ವಿಷಾದವಿದೆ. ಸಂಸ್ಥೆಗೆ ನನ್ನ ಬೆಲೆ ಏನೆಂದು ಸಾಬೀತುಪಡಿಸಲು ಅದು ನಿರೀಕ್ಷಿಸುವ ಇಂಥ ಕೆಲಸಗಳನ್ನು ನಾನು ಮಾಡಬೇಕಾಗಿ ಬಂತು. ಮೀಟಿಂಗುಗಳಲ್ಲಿ ನೇರವಾಗಿ ಮಾಡಿದ ಕೆಲಸಗಳಿಗಿಂತ ಹೆಚ್ಚಾಗಿ ಮಾಧ್ಯಮ ಎತ್ತಿಕೊಂಡ ಹೇಳಿಕಗಳ ಕುರಿತಾಗಿಯೇ ಹೆಚ್ಚು ಚರ್ಚೆ ನಡೆಯುತ್ತಿದ್ದವು.

ಇದನ್ನೂ ಓದಿ : ಮಾನವ ಹಕ್ಕು ಹೋರಾಟಗಾರರ ಬಂಧನ: ಅಪಮಾನಕರ ರಾಷ್ಟ್ರಗಳ ಪಟ್ಟಿಗೆ ಸೇರಿದ ಭಾರತ

ಹೆಚ್ಚಿನ ಸಂಬಳ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರ ಇರುವ ಸ್ಥರದಲ್ಲಿ ಮುಸಲ್ಮಾನ ಸಮುದಾಯದ ಒಬ್ಬರೂ ಇಲ್ಲ; ಬೋರ್ಡ್ ಸ್ಥರದಲ್ಲಿಯೂ, ವರಿಷ್ಠ ಆಡಳಿತ ಮಂಡಳಿಯಲ್ಲಿಯೂ, ಪ್ರೋಗ್ರಾಮ್ ಮ್ಯಾನೇಜ್ಮೆಂಟ್ ಸ್ಥರದಲ್ಲಿಯೂ. ಕಾರ್ಯಕಾರಿ ನಿರ್ದೇಶಕರು ತಮಗಿರುವ ಮುಸ್ಲಿಂ ಮತ್ತು ದಲಿತ ಕಾಳಜಿ ಕುರಿತಾಗಿ ಲೇಖನಗಳನ್ನು ಬರೆಯುತ್ತಾರೆ. ಆದರೆ, ಆ ಸಮುದಾಯಗಳಿಂದ ಬಂದ ವ್ಯಕ್ತಿಗಳನ್ನು ಸಂಸ್ಥೆಯ ಮೀಟಿಂಗ್‌ಗಳಲ್ಲಿ ಚರ್ಚೆಯ ಭಾಗಿ ಆಗಿಸುವುದಿಲ್ಲ ಎನ್ನುವುದು ಬೇರೆ ಏನನ್ನೋ ಸೂಚಿಸುತ್ತದೆ. ನಮ್ಮ ಮುಂದಿರುವ ಮೈಕನ್ನು ತಮ್ಮ ಮುಂದಿಟ್ಟುಕೊಳ್ಳುವ ಈ ಜನರು ನಮ್ಮ ದನಿಗಿಂತ ಹೆಚ್ಚಾಗಿ ತಮ್ಮ ದನಿಯನ್ನೇ ಲೋಕಕ್ಕೆ ಕೇಳಿಸ ಬಯಸುತ್ತಾರೆ. ಇದರಿಂದ ನಮಗೆ ಯಾವ ಉಪಕಾರವೂ ಆಗುವುದಿಲ್ಲ.

ಅಮ್ನೆಸ್ಟಿ ಇಂಟರ್ನ್ಯಾಷನಲ್ ಪ್ರತಿಪಾದಿಸುವ ಮೌಲ್ಯಗಳ ಬಗ್ಗೆ ನನಗೆ ಗೌರವ ಇದೆ ಮತ್ತು ಆ ಮೌಲ್ಯಗಳಿಗೆ ನಾನು ಬಧ್ದಳಾಗಿದ್ದೇನೆ. ಆದರೆ ಮೇಲ್ಜಾತಿ, ಮೇಲ್ವರ್ಗದ ಅಮ್ನೆಸ್ಟಿ ಇಂಡಿಯಾ ತಮ್ಮ ಕಾರ್ಯವೈಖರಿ ಮೂಲಕ ಪ್ರತಿಪಾದಿಸುವ ಮೌಲ್ಯಗಳನ್ನು ಖಂಡಿಸುತ್ತೇನೆ. ಅನ್ಯಾಯವಾದಾಗ ಅದನ್ನು ನಿರ್ಲಿಪ್ತವಾಗಿ ನೋಡದಿರಬೇಕು ಎಂಬುದು ಅಮ್ನೆಸ್ಟಿ ಇಂಟರ್ನ್ಯಾಷನಲ್ ಮೌಲ್ಯದ ಮುಖ್ಯ ಅಂಶ. ಈ ಲೇಖನ ಬರೆಯುವ ಹೊತ್ತಿಗೆ ನನ್ನ ಕೈಯಲ್ಲಿ ಉದ್ಯೋಗ ಇದ್ದಿರುವುದಿಲ್ಲ. ಆದರೆ, ನನ್ನ ರಾಜಿನಾಮೆ ನನ್ನ ಘನತೆ ಮತ್ತು ಮಾನವ ಹಕ್ಕುಗಳ ಬಗೆಗೆ ನನಗಿರುವ ನಂಬಿಕೆಯನ್ನು ಅಲುಗಾಡದಂತೆ ನೋಡಿಕೊಂಡಿದೆ.

ಅನುವಾದ: ಸಂವರ್ಥ ಸಾಹಿಲ್‌

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More