ಕೋಟಿ ಸಬ್‌ಸ್ಕ್ರೈಬರ್‌ ಗಳಿಸಿದ ಮೊದಲ ಭಾರತೀಯ ಯೂಟ್ಯೂಬ್‌ ಸ್ಟಾರ್‌ ಬಿಬಿ

ಯೂಟ್ಯೂಬ್‌ನಿಂದಾಗಿ ಅನೇಕ ಗಾಯನ, ನಟನೆ, ಸಂಗೀತ, ಹಾಸ್ಯ ಪ್ರತಿಭೆಗಳು ಅವಕಾಶಗಳನ್ನು ಪಡೆದುಕೊಂಡಿವೆ, ಬೆಳೆದಿವೆ. ಅಂಥ ಸಾಲಿಗೆ ಸೇರುವ ಪ್ರತಿಭೆ ಇವರು. ಹೆಸರು ಭುವನ್‌ ಬಮ್‌. ಹಾಸ್ಯ ಕಲಾವಿದ. ೧ ಕೋಟಿ ಸಬ್‌ಸ್ಕ್ರೈಬರ್‌ಗಳನ್ನು ಗಳಿಸಿದ ಕಲಾವಿದ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ

ದೆಹಲಿಯ 23 ವರ್ಷದ ಯುವಕ ಭುವನ್‌ ಬಮ್‌. ಹಿಂದೂಸ್ತಾನಿ ಸಂಗೀತ ಕಲಿತಿರುವ ಈತ ಈಗ ಯೂಟ್ಯೂಬ್‌ ಸ್ಟಾರ್‌. ಆದರೆ, ತನ್ನ ಹಾಡುಗಾರಿಕೆಯಿಂದ ಅಲ್ಲ, ಕಾಮಿಡಿ ವಿಡಿಯೋಗಳಿಂದ!

ಕಾಲೇಜು ದಿನಗಳಲ್ಲಿ ಹಾಡಿನ ಹುಚ್ಚಿಗಾಗಿ ದೆಹಲಿಯ ಮೋತಿ ಮಹಲ್‌ ಡಿಲಕ್ಸ್‌ ರೆಸ್ಟೊರಂಟ್‌ನಲ್ಲಿ ಹಾಡಲಾರಂಭಿಸಿದ ಬಮ್‌, ಅದರಿಂದ ಹೆಚ್ಚೇನೂ ಗಳಿಸಲಿಲ್ಲ. ಆದರೆ, ಜನಪ್ರಿಯ ಸಿನಿಮಾ ಗೀತೆಗಳನ್ನು ಹಾಡುವುದರ ಜೊತೆಗೆ ಆಗಾಗ ತಾನೂ ಬರೆದು, ಸಂಗೀತ ಸಂಯೋಜಿಸಿದ ಹಾಡುಗಳನ್ನೂ ಹಾಡುತ್ತಿದ್ದರಂತೆ. ಆದರೂ ಅದು ಭುವನ್‌ಗೆ ಜನಪ್ರಿಯತೆ ತರಲಿಲ್ಲ. ಜನಪ್ರಿಯತೆ ತಂದಿದ್ದು ಯೂಟ್ಯೂಬ್‌ನಲ್ಲಿನ ವಿಡಿಯೋ ಬ್ಲಾಗ್‌.

ಅದು ಶುರುವಾಗಿದ್ದು ೨೦೧೪ರಲ್ಲಿ ಕಾಶ್ಮೀರದಲ್ಲಿ ಆದ ಪ್ರವಾಹದಿಂದಾಗಿ. ತಾಯಿಯೊಬ್ಬಳು ತನ್ನ ಮಗು ಕಣ್ಮರೆಯಾದ ಆತಂಕದಲ್ಲಿ ಕಣ್ಣೀರು ಹಾಕುತ್ತಿದ್ದಾಗ ಸುದ್ದಿವಾಹಿನಿ ವರದಿಗಾರನೊಬ್ಬ ಮೈಕ್‌ ಹಿಡಿದು ಆಕೆಯ ಮುಂದೆ ನಿಂತಿದ್ದು ಭುವನ್‌ಗೆ ಸಿಟ್ಟು ತರಿಸಿತ್ತು. ಕೂಡಲೇ ವ್ಯಂಗ್ಯವಾಗಿ ೧೨ ಸೆಕೆಂಡ್‌ಗಳ ವಿಡಿಯೋ ಸಿದ್ಧಮಾಡಿ ಫೇಸ್‌ಬುಕ್‌ನಲ್ಲಿ ಪ್ರಕಟಿಸಿದರು. ಆ ವಿಡಿಯೋ ವೈರಲ್‌ ಆಯಿತು.

ಹೀಗೆ ಶುರುವಾದ ವಿಡಿಯೋ ಸರಣಿ ಫೇಸ್‌ಬುಕ್‌ನಿಂದ ಯೂಟ್ಯೂಬ್‌ಗೆ ವರ್ಗವಾಯಿತು. ವ್ಯಂಗ್ಯ, ಹಾಸ್ಯ, ವಿಡಂಬನೆಯ ವಿಡಿಯೋಗಳನ್ನು ಯೂಟ್ಯೂಬ್‌ಗೆ ಅಪ್‌ಲೋಡ್‌ ಮಾಡಿದ ಭುವನ್‌ ಬಮ್‌, ಸ್ಟಾರ್‌ ಆಗಿಹೋದರು. 'ಬಿಬಿ ಕಿ ವೈನ್ಸ್‌' ಹೆಸರಿನ ಯೂಟ್ಯೂಬ್‌ ಚಾನೆಲ್‌ನಲ್ಲಿ ಭುವನ್‌ ತಮ್ಮ ವಿಡಿಯೋಗಳನ್ನು ಪ್ರಕಟಿಸಲಾರಂಭಿಸಿದರು. ಇದುವರೆಗೂ ೧೨೮ ವಿಡಿಯೋಗಳನ್ನು ಪ್ರಕಟಿಸಿದ್ದಾರೆ. ಪ್ರತಿ ವಿಡಿಯೋ ಸರಾಸರಿ ೧೨ ಲಕ್ಷ ಬಾರಿ ವೀಕ್ಷಣೆ ಕಂಡಿದೆ.

ಕೇವಲ ಕಾಮಿಡಿ ವಿಡಿಯೋಗಳಷ್ಟೇ ಅಲ್ಲ; ತಾವೇ ಬರೆದು, ಸಂಗೀತ ಸಂಯೋಜಿಸಿ ನಿರ್ಮಿಸಿದ ಮ್ಯೂಸಿಕ್‌ ವಿಡಿಯೋ; ನಟಿಸಿ, ನಿರ್ದೇಶಿಸಿದ ಶಾರ್ಟ್‌ ಫಿಲ್ಮ್‌ಗಳನ್ನೂ ಪ್ರಕಟಿಸಿದ್ದಾರೆ. ತಾವೇ ಬರೆದು, ನಟಿಸಿ, ರೆಕಾರ್ಡ್‌ ಮಾಡಿ, ಅದನ್ನು ಎಡಿಟ್‌ ಮಾಡಿ, ಸಿದ್ಧಪಡಿಸುತ್ತಾರೆ. ಸಮಕಾಲೀನ ವಿಷಯಗಳಿಗೆ ಸ್ಪಂದಿಸುವ ಜೊತೆಗೆ, ದೈನಂದಿನ ಬದುಕಿನ ಸಣ್ಣ ಸಂಗತಿಗಳನ್ನು ಆಧರಿಸಿ ಕಾಮಿಡಿ ವಿಡಿಯೋ ಸಿದ್ಧಪಡಿಸುತ್ತಾರೆ. ಈ ಕಾರಣಕ್ಕೇ ಅಪಾರ ಜನಪ್ರಿಯತೆ ಗಳಿಸಿದ್ದಾರೆ. ಭುವನ್‌ ಸಿದ್ಧಪಡಿಸಿರುವ ಕಾಮಿಡಿ ವಿಡಿಯೋ, ಮ್ಯೂಸಿಕ್‌ ವಿಡಿಯೋ ಹಾಗೂ ಒಂದು ಶಾರ್ಟ್ ಫಿಲ್ಮ್‌ ಇಲ್ಲಿವೆ:

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More