ಟ್ವಿಟರ್ ಸ್ಟೇಟ್ | ಭಾರತೀಯ ಮಾಧ್ಯಮದ #MeTooಗೆ ಕೇಂದ್ರ ಸಚಿವ ಅಕ್ಬರ್ ಹೆಸರು ಸೇರ್ಪಡೆ

ಪ್ರಧಾನಿ ನರೇಂದ್ರ ಮೋದಿಯವರ ಸಚಿವ ಸಂಪುಟದಲ್ಲಿ ಸಚಿವರಾಗಿರುವ ಎಂ ಜೆ ಅಕ್ಬರ್ ಹೆಸರು ಈಗ ಟ್ವಿಟರ್‌ನ #MeToo ಹೋರಾಟದಲ್ಲಿ ಪ್ರಮುಖವಾಗಿ ಕೇಳಿಬರುತ್ತಿದೆ. ಹಲವು ಪತ್ರಕರ್ತೆಯರು ಅವರ ಜೊತೆಗಿನ ತಮ್ಮ ಕೆಟ್ಟ ಅನುಭವಗಳನ್ನು ಟ್ವಿಟರ್ ಮೂಲಕ ಬಹಿರಂಗಪಡಿಸುತ್ತಿದ್ದಾರೆ

ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರತೀಯ ಪತ್ರಕರ್ತೆಯರು #MeToo ಅಭಿಯಾನ ಆರಂಭಿಸಿ, ತಮ್ಮ ಮೇಲೆ ಹಿಂದೆ ನಡೆದಿದ್ದ ಲೈಂಗಿಕ ದೌರ್ಜನ್ಯಗಳ ಪ್ರಕರಣಗಳ ಬಗ್ಗೆ ಬಹಿರಂಗವಾಗಿ ಹಂಚಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಪತ್ರಕರ್ತೆಯರು ಹೇಳದೆ ಮೌನವಾಗಿಟ್ಟ ಹೆಸರೊಂದು ಈಗ ಬಹಿರಂಗವಾಗಿದೆ. ಮೊದಲನೆಯ ದಿನದಿಂದಲೇ ಪತ್ರಕರ್ತೆಯರ ವಲಯದಲ್ಲಿ ಈ ಹೆಸರು ಮಾಡಿರುವ ಅನಾಚಾರಗಳ ಬಗ್ಗೆ ಚರ್ಚೆಯಾಗುತ್ತಲೇ ಇತ್ತು. ಆದರೆ, ಬಹಿರಂಗವಾಗಿ ಹೆಸರು ಉಲ್ಲೇಖಿಸಲು ಯಾರೂ ಸಿದ್ಧರಿರಲಿಲ್ಲ. ಆ ಹೆಸರು ಕೇಂದ್ರ ಸಚಿವ ಎಂ ಜೆ ಅಕ್ಬರ್ ಅವರದು ಎಂಬುದು ಈಗ ಬೆಳಕಿಗೆ ಬಂದಿದೆ.

ಇಂಗ್ಲಿಷ್ ಮಾಧ್ಯಮಗಳಲ್ಲಿ ಜನಪ್ರಿಯರಾಗಿರುವ ಮಧುಮಿತಾ ಮಜುಂದಾರ್, ರೋಹಿಣಿ ಸಿಂಗ್, ರವಿಶಂಕರ್ ಮೊದಲಾದವರು ತಮ್ಮ ಟ್ವಿಟರ್ ಸಾಮಾಜಿಕ ಜಾಲತಾಣದಲ್ಲಿ ಕಳೆದ ಕೆಲವು ದಿನಗಳಿಂದ ಹಿರಿಯ ಪತ್ರಕರ್ತರೊಬ್ಬರ ಬಗ್ಗೆ ಇನ್ನೂ ಯಾರೂ ವಿವರ ಬಹಿರಂಗಪಡಿಸಿಲ್ಲ ಎಂದು ಟ್ವೀಟ್ ಮಾಡಿದ್ದರು. “ನನ್ನ ಸ್ನೇಹಿತೆಯ ಪರವಾಗಿ ನಾನು ಮಾತನಾಡುವುದು ಸಾಧ್ಯವಿಲ್ಲ. ಆದರೆ, ೧೬ರ ವಯಸ್ಸಿನ ಬಾಲಕಿಯ ಜೊತೆಗೆ ಈ ಹಿರಿಯ ಪತ್ರಕರ್ತ ನಡೆದುಕೊಂಡ ರೀತಿ ಅತಿ ಅಸಭ್ಯವಾಗಿತ್ತು. ಆದರೆ, ಆಕೆ ಮೌನವಾಗಿ ಅದನ್ನು ಸಹಿಸಿದ್ದಳು,” ಎಂದು ಶನಿವಾರ ಟ್ವೀಟ್ ಮಾಡಿದ್ದರು. ಸೋಹಿನಿ ಎನ್ನುವ ಕೋಲ್ಕತ್ತಾದ ಯುವತಿ ಟ್ವೀಟ್ ಮಾಡಿ, ಅದೇ ಹಿರಿಯ ಪತ್ರಕರ್ತನ ಬಗ್ಗೆ ಯಾವಾಗ ವಿವರ ಹೊರಬೀಳುತ್ತದೆ ಎಂದು ಪ್ರಶ್ನಿಸಿದ್ದರು.

ಲೇಖಕ ರವಿಶಂಕರ್ ಟ್ವೀಟ್ ಮಾಡಿ, “ಭಾರತೀಯ ಮಾಧ್ಯಮದ #MeToo ಪಟ್ಟಿ ಅಪೂರ್ಣವಾಗಿದೆ. ಅತಿ ಕ್ರೂರ, ಪ್ರಸಿದ್ಧ ಮಾಜಿ ಸಂಪಾದಕ ಹಲವು ಮಹಿಳೆಯರ ವೃತ್ತಿಜೀವನ ಹಾಳುಗೆಡವಿದ್ದಾರೆ. ಒಬ್ಬ ಮಹಿಳೆ ತಾನು ಗರ್ಭಪಾತ ಮಾಡಿಸಿಕೊಂಡ ಬಿಲ್ ಅನ್ನೂ ಸಂಸ್ಥೆಗೆ ಕಳುಹಿಸಿದ್ದರು. ಆ ಸಂಸ್ಥೆ ಆತನನ್ನು ರಕ್ಷಿಸಿತ್ತು,” ಎಂದು ವಿವರ ಹಂಚಿಕೊಂಡಿದ್ದರು. ಆದರೆ, ವ್ಯಕ್ತಿಯ ಹೆಸರನ್ನು ಬಹಿರಂಗಪಡಿಸಿರಲಿಲ್ಲ. ಈ ಟ್ವೀಟ್‌ಗೆ ಉತ್ತರಿಸಿದ ಬಹಳಷ್ಟು ಮಂದಿ, “ಆ ವ್ಯಕ್ತಿ ಎಂ ಜೆ ಅಕ್ಬರ್‌?” ಎಂದು ಪ್ರಶ್ನಿಸಿದ್ದರು.

ಲೇಖಕಿ ಗಜಾಲಾ ವಾಹಬ್ ಅವರೂ ಎಂ ಜೆ ಅಕ್ಬರ್ ಹೆಸರು #MeToo ಪಟ್ಟಿಯಲ್ಲಿ ಯಾವಾಗ ಬಹಿರಂಗಗೊಳ್ಳಲಿದೆ ಎಂದು ಪ್ರಶ್ನಿಸಿದ್ದರು. ಪತ್ರಕರ್ತೆ ರೋಹಿಣಿ ಸಿಂಗ್, “ಭಾರತೀಯ ಪತ್ರಿಕೋದ್ಯಮದ ಅತಿ ಹೆಚ್ಚು ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿ ಇಂದಿಗೂ ದೊಡ್ಡ ಅಧಿಕಾರದಲ್ಲಿ ಮುಂದುವರಿದಿದ್ದಾರೆ. ಇನ್ನೂ ಆತನ ಹೆಸರನ್ನು ಯಾರೂ ಏಕೆ ಬಹಿರಂಗಪಡಿಸಿಲ್ಲ?” ಎಂದು ಟ್ವೀಟ್ ಮಾಡಿದ್ದರು. ಇವರೆಲ್ಲರ ಟ್ವೀಟ್‌ಗಳಿಗೆ ಉತ್ತರಿಸಿದವರು ‘ಎಂ ಜೆ ಅಕ್ಬರ್‌’ ಬಗ್ಗೆ ಬರೆದಿದ್ದೀರಿ ಎಂದು ತಮ್ಮ ಊಹೆ ಹೇಳಿದ್ದರು. ಆದರೆ, ಯಾರೂ ಅವರ ಹೆಸರನ್ನು ಉಲ್ಲೇಖಿಸಿರಲಿಲ್ಲ. ಬಹಳಷ್ಟು ಮಂದಿ ಆ ವ್ಯಕ್ತಿ ‘ಅತಿ ದುರುಳ’ ಎಂದು ವಿಶ್ಲೇಷಿಸಿದ್ದರು.

ಇದನ್ನೂ ಓದಿ : ಟ್ವಿಟರ್ ಸ್ಟೇಟ್ | ಲೈಂಗಿಕ ದೌರ್ಜನ್ಯದ ಬಗ್ಗೆ ಧ್ವನಿ ಎತ್ತಿದ ಪತ್ರಕರ್ತೆಯರು

ಆದರೆ, ಸೋಮವಾರದಂದು ದೆಹಲಿ ಹೈಕೋರ್ಟ್ ನ್ಯಾಯವಾದಿ ಸಿದ್ ಅವರು ಕೆಲವು ಸ್ಕ್ರೀನ್ ಶಾಟ್‌ಗಳನ್ನು ಟ್ವಿಟರ್‌ನಲ್ಲಿ ಹಾಕುವ ಮೂಲಕ ಎಂ ಜೆ ಅಕ್ಬರ್ ಹೆಸರನ್ನು ಬಯಲಿಗೆಳೆದಿದ್ದಾರೆ. ಯುವತಿಯೊಬ್ಬಳು ವಾಟ್ಸಪ್‌ ಮೂಲಕ ತನ್ನ ಅನುಭವವನ್ನು ಸಿದ್ ಜೊತೆಗೆ ಹಂಚಿಕೊಂಡಿದ್ದಳು. ಆ ವಿವರವನ್ನು ಅವರು ಟ್ವಿಟರ್‌ನಲ್ಲಿ ಹಾಕಿ, “ಭಾರತದ ಪತ್ರಿಕೋದ್ಯಮದ ಅತಿ ದೊಡ್ಡ ಲೈಂಗಿಕ ದುರುಳ ಮೋದಿ ಸರ್ಕಾರದಲ್ಲಿ ಸಚಿವರಾಗಿರುವುದು ನಿಜವೇ? ಸಂಪಾದಕನಾಗಿ ಆತ ಹಲವು ಮಹಿಳೆಯರ ಜೀವನ ಹಾಳುಗೆಡವಿದ್ದಾರೆ. ಎಂ ಜೆ ಅಕ್ಬರ್ ಈ ವಿಚಾರವನ್ನು ದೃಢೀಕರಿಸುವರೇ? ಅವರು ತಕ್ಷಣವೇ ಅಧಿಕಾರದಿಂದ ಕೆಳಗಿಳಿಯಬೇಕು ಮತ್ತು ವಿಚಾರಣೆ ಎದುರಿಸಬೇಕಲ್ಲವೇ?” ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಿದ್ ಹಂಚಿಕೊಂಡಿರುವ ಸ್ಕ್ರೀನ್ ಶಾಟ್‌ನಲ್ಲಿ ಮಹಿಳೆಯೊಬ್ಬರು ಎಂ ಜೆ ಅಕ್ಬರ್ ಹೆಸರನ್ನು ಹೇಳಿ, ಅವರ ಬಗ್ಗೆ ಯಾರೂ ಬರೆಯುತ್ತಿಲ್ಲವೇಕೆ ಎಂದು ಪ್ರಶ್ನಿಸಿದ್ದರು. ಅಲ್ಲದೆ, “ಎಂ ಜೆ ಅಕ್ಬರ್ ಯುವ ಪತ್ರಕರ್ತೆಯರನ್ನು ಪ್ರಮುಖ ಕಾರ್ಯಕ್ರಮಗಳಿಗೆ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದರು. ನಂತರ ಅವರಿಗೆ ರಾತ್ರಿ ತಮ್ಮ ಕೋಣೆಗೆ ಬರುವಂತೆ ಕರೆಯುತ್ತಿದ್ದರು. ಅದಕ್ಕೆ ಒಪ್ಪದ ಪತ್ರಕರ್ತರ ವೃತ್ತಿಜೀವನ ಮುಗಿದುಹೋಗುತ್ತಿತ್ತು,” ಎಂದು ವಿವರಿಸಿದ್ದರು.

ಸಿದ್ ಅವರ ಟ್ವೀಟ್ ಹಿನ್ನೆಲೆಯಲ್ಲಿ ಎಂ ಜೆ ಅಕ್ಬರ್ ಅವರನ್ನು ಸಮರ್ಥಿಸುವ ಪ್ರಯತ್ನವೂ ನಡೆದಿದೆ. “ರಾತ್ರಿ ಅವರ ಕೋಣೆಗೆ ಹೋಗದೆ ಇದ್ದರೆ ಜೀವನ ಮುಗಿದುಹೋಗುತ್ತಿತ್ತು ಎಂದು ಹೇಳುವುದು ಎಷ್ಟು ಸರಿ? ಮಹಿಳೆಯರ ಬಳಿ ಯಾವಾಗಲೂ ಆಯ್ಕೆ ಇದ್ದೇ ಇರುತ್ತಿತ್ತು,” ಎಂದು ಪತ್ರಕರ್ತ ರೋಶನ್ ಚೆರಿಯನ್ ಅಭಿಪ್ರಾಯಪಟ್ಟಿದ್ದಾರೆ.

ಇದಕ್ಕೆ ಉತ್ತರಿಸಿರುವ ಪತ್ರಕರ್ತೆ ವಾಣಿ ಸರಸ್ವತಿ, “ಅದು ಹೇಳಿದಷ್ಟು ಸರಳವಲ್ಲ. ಅಂತಿಮವಾಗಿ ಲೈಂಗಿಕ ದುರುಳರ ವಿರುದ್ಧ ಸೆಟೆದು ನಿಲ್ಲುವ ಜಾಗೃತಿ, ಬೆಂಬಲ ಮತ್ತು ಅನುಭವ ಬೇಕಾಗುತ್ತದೆ. ನಿಮ್ಮ ಬಳಿ ಉದ್ಯೋಗಕ್ಕಾಗಿ ಬಹಳಷ್ಟು ಅವಕಾಶಗಳು ಇವೆ ಎಂದರೆ ನೀವು ಅಂತಹ ಧೈರ್ಯವನ್ನು ಪ್ರದರ್ಶಿಸಲು ಸಾಧ್ಯವಾಗುತ್ತದೆ,” ಎಂದು ಟ್ವೀಟ್ ಮಾಡಿದ್ದಾರೆ.

ಸಿದ್ ಟ್ವೀಟ್‌ಗೆ ಉತ್ತರಿಸಿದ ಮತ್ತೊಬ್ಬ ಪರ್ತಕರ್ತೆ ರೇಚಲ್ ಚಿತ್ರ, ಎಂ ಜೆ ಅಕ್ಬರ್ ಕುರಿತಂತೆ ಇನ್ನಷ್ಟು ಕೆಲವು ವಿವರಗಳನ್ನು ನೀಡಿದ್ದಾರೆ. “ನನ್ನ ಸ್ನೇಹಿತೆಯೊಬ್ಬರನ್ನು ಎಂ ಜೆ ಅಕ್ಬರ್ ಸಂದರ್ಶನ ನಡೆಸಿದ್ದರು. ಆದರೆ, ಸಂಪೂರ್ಣ ಸಂದರ್ಶನದ ಸಂದರ್ಭದಲ್ಲಿ ಆತ ಆಕೆಯ ಎದೆಯ ಕಡೆಗೇ ನೋಡುತ್ತಿದ್ದ ಅಸಹ್ಯಕರ ವರ್ತನೆಯನ್ನು ಆಕೆ ವಿವರಿಸಿದ್ದಳು. ಆಕೆಯ ಮುಂದೆ ಬಹಳ ಅನುಚಿತವಾಗಿ ನಡೆದುಕೊಂಡ ಬಗ್ಗೆ ಅಳುತ್ತ ವಿವರಿಸಿದ್ದಳು,” ಎಂದು ಸರಣಿ ಟ್ವೀಟ್‌ಗಳಲ್ಲಿ ವಿವರಿಸಿದ್ದಾರೆ ರೇಚಲ್ ಚಿತ್ರ.

ಎಂ ಜೆ ಅಕ್ಬರ್ ಬಗ್ಗೆ ವಿವರಗಳನ್ನು ಓದಿದ ಬಹಳಷ್ಟು ಮಂದಿ ಟ್ವೀಟ್‌ಗಳ ಮೂಲಕ ಆಘಾತ ವ್ಯಕ್ತಪಡಿಸಿದ್ದಾರೆ. ಅಂತಹ ಹಿರಿಯ ಪತ್ರಕರ್ತರಿಂದ ಇಂತಹ ವರ್ತನೆ ನಿರೀಕ್ಷಿಸಿರಲಿಲ್ಲ ಎಂದು ಹೇಳಿದ್ದಾರೆ.

ಪತ್ರಕರ್ತೆ ಪ್ರಿಯಾರಮಣಿ, ಲೈಂಗಿಕ ದುರುಳರೊಬ್ಬರು ತಮ್ಮ ಮನೆಗೆ ಉದ್ಯೋಗ ಸಂದರ್ಶನಕ್ಕೆ ಕರೆದ ಪ್ರಕರಣವನ್ನು ‘ವೋಗ್’ ಪತ್ರಿಕೆಯಲ್ಲಿ ಬರೆದಿದ್ದರು. ಹೇಗೆ ಹಲವು ತಂತ್ರಗಳ ಮೂಲಕ ತಮ್ಮ ಲೈಂಗಿಕ ಉದ್ದೇಶವನ್ನು ಉದ್ಯೋಗಾಕಾಂಕ್ಷಿ ಯುವತಿಯ ಮುಂದೆ ಆ ಸಂಪಾದಕರು ಇಟ್ಟಿದ್ದರು ಎಂದು ಅವರು ಲೇಖನದಲ್ಲಿ ವಿವರಿಸಿದ್ದರು. ಇದೀಗ #MeToo ಅಭಿಯಾನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಿಯಾರಮಣಿ ಟ್ವಿಟರ್ ಮೂಲಕ ಆ ವ್ಯಕ್ತಿಯ ಹೆಸರನ್ನು ಬಹಿರಂಗಪಡಿಸಿದ್ದಾರೆ. “ನಾನು ಎಂ ಜೆ ಅಕ್ಬರ್ ಬಗ್ಗೆ ಈ ಲೇಖನ ಬರೆದಿದ್ದೆ. ಆಗ ಆತ ಲೈಂಗಿಕ ಉದ್ದೇಶವನ್ನು ಮಾತ್ರ ಮುಂದಿಟ್ಟಿದ್ದರು, ನನ್ನೊಂದಿಗೆ ಅನುಚಿತವಾಗಿ ನಡೆದುಕೊಂಡಿರಲಿಲ್ಲ. ಹೀಗಾಗಿ, ಆ ಲೇಖನದಲ್ಲಿ ಆತನ ಹೆಸರನ್ನು ಎತ್ತಿರಲಿಲ್ಲ. ಆದರೆ, ಆ ವ್ಯಕ್ತಿಯಿಂದ ಬಹಳಷ್ಟು ಮಂದಿ ಅತಿ ಕೆಟ್ಟ ಅನುಭವವನ್ನು ಪಡೆದಿರುವ ಹಿನ್ನೆಲೆಯಲ್ಲಿ ಈಗ ನಾನು ಆತನ ಹೆಸರು ಬಹಿರಂಗಪಡಿಸುತ್ತಿದ್ದೇನೆ,” ಎಂದು ಪ್ರಿಯಾರಮಣಿ ಟ್ವೀಟ್ ಮಾಡಿದ್ದಾರೆ.

ಟ್ವಿಟರ್‌ನಲ್ಲಿ ಸದಾ ಸಕ್ರಿಯರಾಗಿರುವ ಎಂ ಜೆ ಅಕ್ಬರ್ ಅವರನ್ನು ಟ್ಯಾಗ್ ಮಾಡಿ ಈ ಎಲ್ಲ ಟ್ವೀಟ್‌ಗಳೂ ಹರಿದಾಡುತ್ತಿದ್ದರೂ ಅವರು ಈವರೆಗೆ ತುಟಿಬಿಚ್ಚಿಲ್ಲ. ಆರೋಪವನ್ನು ಒಪ್ಪಿಕೊಳ್ಳಲೂ ಹೋಗಿಲ್ಲ ಅಥವಾ ನಿರಾಕರಿಸಲೂ ಮುಂದಾಗಿಲ್ಲ. ಕೇಂದ್ರ ಸರ್ಕಾರವೂ ತಮ್ಮ ಸಂಪುಟದ ಸಚಿವರ ಬಗ್ಗೆ ಪತ್ರಿಕಾ ಹೇಳಿಕೆ ನೀಡಿಲ್ಲ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More