ಕೆಎಎಸ್‌ ಅಕ್ರಮ ನೇಮಕಾತಿ; ಉಲ್ಟಾ ಹೊಡೆದ ಅರ್ಜಿದಾರ ಅಧಿಕಾರಿಗಳು!

ಕೆಪಿಎಸ್ಸಿ ಅಕ್ರಮ ನೇಮಕಾತಿ ಕುರಿತ ವಿಚಾರಣೆಗಳು ಈಗಲೂ ನಡೆಯುತ್ತಿವೆ. ಆದರೆ, ಅಸಿಸ್ಟೆಂಟ್ ಕಮಿಷನರ್ ಹುದ್ದೆಯಿಂದ ವಂಚಿತರಾದವರು ಸಿಐಡಿ ಪೊಲೀಸರಿಗೆ ನೀಡಿರುವ ಹೇಳಿಕೆ, ಕೆಎಟಿಗೆ ಸಲ್ಲಿಸಿರುವ ಅರ್ಜಿಯಲ್ಲಿ ನೀಡಿರುವ ವಿವರಣೆ, ಪಾಟಿ ಸವಾಲಿಗೆ ನೀಡುತ್ತಿರುವ ಉತ್ತರಗಳು ತದ್ವಿರುದ್ಧವಾಗಿವೆ

ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ೧೯೯೮ರಲ್ಲಿ ನಡೆಸಿದ್ದ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯಲ್ಲಿನ ಅಕ್ರಮಗಳ ಕುರಿತು ಈ ಹಿಂದೆ ದೂರು ನೀಡಿದ್ದ ಅಧಿಕಾರಿಗಳು ಈಗ ಯೂಟರ್ನ್ ಹೊಡೆದಿದ್ದಾರೆ. ಆಯೋಗದ ಅಂದಿನ ಅಧ್ಯಕ್ಷ ಎಚ್‌ ಎನ್ ಕೃಷ್ಣ ಅವರ ವಿರುದ್ಧ ಕರ್ನಾಟಕ ಆಡಳಿತ ನ್ಯಾಯಮಂಡಳಿಗೆ ಸಲ್ಲಿಸಿದ್ದ ಅರ್ಜಿಯಲ್ಲಿ ನೀಡಿದ್ದ ವಿವರಣೆಗೆ ತದ್ವಿರುದ್ಧವಾಗಿ ಕೆಳಹಂತದ ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದಿರುವುದು ಇದೀಗ ಬಹಿರಂಗವಾಗಿದೆ.

೧೯೯೮ರ ನೇಮಕಾತಿ ಪ್ರಕರಣ ಕುರಿತು ಒಂದನೇ ಹೆಚ್ಚುವರಿ ನ್ಯಾಯಾಲಯದಲ್ಲಿ ಮುಖ್ಯ ವಿಚಾರಣೆ ತ್ವರಿತಗತಿಯಲ್ಲಿ ನಡೆಯುತ್ತಿದೆ. ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರು ನಡೆಸಿದ್ದ ಪಾಟಿ ಸವಾಲಿನ ವೇಳೆಯಲ್ಲಿ ನುಡಿದಿರುವ ಸಾಕ್ಷಿಗಳು ತದ್ವಿರುದ್ಧವಾಗಿವೆ ಎಂಬ ವಿಚಾರ ದಾಖಲೆಗಳಿಂದ ತಿಳಿದುಬಂದಿದೆ. ಈ ಸಂಬಂಧ ‘ದಿ ಸ್ಟೇಟ್‌’ಗೆ ಕೆಲ ದಾಖಲೆಗಳು ಲಭ್ಯವಾಗಿವೆ.

ತದ್ವಿರುದ್ಧ ಸಾಕ್ಷಿ ನುಡಿದಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವುದು ಗ್ರಾಮೀಣ ಅಭಿವೃದ್ಧಿ ಆಯುಕ್ತಾಲಯದ ಮುಖ್ಯ ಆರ್ಥಿಕ ಸಲಹೆಗಾರರಾದ ಟಿ ಎಸ್‌ ಹನುಮಂತೇ ಗೌಡ. ಕರ್ನಾಟಕ ಆಡಳಿತ ನ್ಯಾಯ ಮಂಡಳಿಯಲ್ಲಿ ಸಲ್ಲಿಸಿದ್ದ ಅರ್ಜಿ ನೀಡಿದ್ದ ವಿವರಣೆ, ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರ ಮುಂದೆ ನೀಡಿದ್ದ ಸಾಕ್ಷಿಗಳು ಭಿನ್ನವಾಗಿರುವುದು ಕಂಡುಬಂದಿವೆ. ಹೀಗಾಗಿ, ಹನುಮಂತೇ ಗೌಡ ಅವರನ್ನು ಪ್ರತಿಕೂಲ ಸಾಕ್ಷಿ ಎಂದು ಪರಿಗಣಿಸಲಾಗಿತ್ತು ಎಂಬುದು ಕೋರ್ಟ್ ದಾಖಲೆಯಿಂದ ತಿಳಿದುಬಂದಿದೆ.

ಕೆಎಟಿಯಲ್ಲಿ ಹೇಳಿದ್ದೇನು?: ಇದೇ ಅಧಿಕಾರಿ, ನೇಮಕಾತಿ ವೇಳೆಯಲ್ಲಿ ತಮಗೆ ಅನ್ಯಾಯವಾಗಿದೆ ಎಂದು ಕರ್ನಾಟಕ ಆಡಳಿತ ಮಂಡಳಿಯಲ್ಲಿ ೨೦೦೭ರಲ್ಲಿ ಸರ್ಕಾರದ ವಿರುದ್ಧ ತಡವಾಗಿ ಕರ್ನಾಟಕ ಆಡಳಿತ ನ್ಯಾಯಮಂಡಳಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಆಯೋಗದ ಅಧ್ಯಕ್ಷ ಎಚ್‌ ಎನ್ ಕೃಷ್ಣ ಅವರು ತಮ್ಮ ವೃತ್ತಿಜೀವನವನ್ನು ಹಾಳುಗೆಡಹುವ ಸಾಧ್ಯತೆ ಇತ್ತು. ಹೀಗಾಗಿ, ಅವರು ಆಯೋಗದ ಅಧ್ಯಕ್ಷ ಹುದ್ದೆಯಿಂದ ನಿವೃತ್ತರಾದ ನಂತರ ತಡವಾಗಿ ಅರ್ಜಿ ಸಲ್ಲಿಸಲಾಗಿದೆ ಎಂದು ೨೦೦೭ರಲ್ಲಿ ಸಲ್ಲಿಸಿದ್ದ ಅರ್ಜಿಯಲ್ಲಿ ಹನುಮಂತೇಗೌಡ ಅವರು ತಿಳಿಸಿದ್ದರು.

ಅಲ್ಲದೆ, “ಸಂದರ್ಶನ ಮುಗಿಸಿಕೊಂಡು ಹೊರಬಂದಾಗ ಆಯೋಗದ ಅಧ್ಯಕ್ಷ ಎಚ್‌ ಎನ್ ಕೃಷ್ಣ ಅವರು ತಮ್ಮ ಕಚೇರಿಗೆ ಬರಲು ಹೇಳಿದ್ದರು. ಹಿಂದುಳಿದ ವರ್ಗದ ೩ಎ ಮೀಸಲಾತಿ ಪ್ರಮಾಣಪತ್ರ ಕಳೆದುಹೋಗಿದೆ ಎಂದು ಬರೆದುಕೊಡಲು ತಿಳಿಸಿದ್ದರು. ಹೀಗೆ ಬರೆದುಕೊಟ್ಟಲ್ಲಿ ಆಯೋಗದ ಜಾಹೀರಾತಿನಲ್ಲಿ ಉಲ್ಲೇಖಿಸಿದ್ದ ಬೇರೊಂದು ಹುದ್ದೆಗೆ ಪರಿಗಣಿಸುವುದಾಗಿ ಮೌಖಿಕವಾಗಿ ಹೇಳಿದ್ದರು,” ಎಂದು ಕೆಎಟಿಗೆ ಸಲ್ಲಿಸಿದ್ದ ಅರ್ಜಿಯಲ್ಲಿ ವಿವರಿಸಿದ್ದರು.

ಮೀಸಲಾತಿ ಪ್ರಮಾಣಪತ್ರಕ್ಕೆ ಸಂಬಂಧಿಸಿದಂತೆ ಕೆಎಟಿಯಲ್ಲಿ ಸಲ್ಲಿಸಿರುವ ಅರ್ಜಿಯ ಪ್ರತಿ

ನ್ಯಾಯಾಲಯದಲ್ಲಿ ನುಡಿದಿದ್ದು ಹೀಗೆ: ಆದರೆ, ಇದೇ ಪ್ರಕರಣ ಕುರಿತು ಒಂದನೇ ಹೆಚ್ಚುವರಿ ನ್ಯಾಯಾಲಯದಲ್ಲಿ (೨೦೧೭ರ ಜೂನ್ ೨೯) ಪಾಟಿ ಸವಾಲಿಗೆ ಸಾಕ್ಷಿ ನುಡಿಯುವಾಗ ಇದೇ ಅಧಿಕಾರಿ ಯೂಟರ್ನ್ ಹೊಡೆದಿದ್ದಾರೆ. “ಸಂದರ್ಶನವನ್ನು ಮುಗಿಸಿಕೊಂಡು ಹೊರಬಂದಾಗ ಸಿಬ್ಬಂದಿಯವರು, ಅಧ್ಯಕ್ಷರನ್ನು ಭೇಟಿ ಮಾಡಬೇಕು, ಇಲ್ಲಿಯೇ ಇರಬೇಕು ಎಂದು ತಿಳಿಸಿರುತ್ತಾರೆ ಎಂದರೆ ಸರಿಯಲ್ಲ. ನಂತರ ನಾನು ಅಧ್ಯಕ್ಷರ ಕೋಣೆಗೆ ಹೋಗಿ ಅವರನ್ನು ಭೇಟಿ ಮಾಡಿದಾಗ ಅವರು ಬರೆದುಕೊಟ್ಟು ಹೋಗು ಎಂದು ಅಧಿಕಾರಯುತವಾಗಿ ಹೇಳಿದ್ದರು ಎಂದರೆ ಸರಿಯಲ್ಲ. ಅಧ್ಯಕ್ಷರ ಆಪ್ತ ಸಹಾಯಕರಾಗಿದ್ದ ರೇವಣಸಿದ್ದಯ್ಯ ಅವರು ಹೇಳಿದಂತೆ ಇಂಗ್ಲೀಷ್‌ನಲ್ಲಿ ಪ್ಲೀಸ್‌ ಕನ್ಸಿಡರ್ ಮೈ ಕ್ಯಾಂಡಿಡೇಟರ್ ಅಂಡರ್‌ ಜನರಲ್ ಮೆರೀಟ್‌ ಇನ್ಸಿಟೆಡ್‌ ಆಫ್‌ ಕ್ಯಾಟಗರಿ ೩ಎ ಆಸ್‌ ಐ ಯಾವ್‌ ಲಾಸ್ಟ್‌ ದ ಸೇಮ್‌ ಇನ್ ಟ್ರಾನ್ಸಿಟ್‌ ಎಂದು ಬರೆದು ಸಹಿ ಮಾಡಿಕೊಟ್ಟಿರುತ್ತೇನೆ ಎಂದರೆ ಸರಿಯಲ್ಲ,” ಎಂದು ಪಾಟಿ ಸವಾಲಿನ ಸಂದರ್ಭದಲ್ಲಿ ಸಾಕ್ಷಿ ನುಡಿದಿದ್ದಾರೆ.

ನ್ಯಾಯಾಲಯದಲ್ಲಿ ನೀಡಿರುವ ಸಾಕ್ಷಿಯ ಪ್ರತಿ
ಇದನ್ನೂ ಓದಿ : ಕೆಪಿಎಸ್ಸಿ ಅಕ್ರಮ: ತೀರ್ಪು ಪಾಲಿಸದ ರಾಜ್ಯ ಸರ್ಕಾರದಿಂದ ಮುಂದೂಡಿಕೆ ತಂತ್ರ?

ಇದಷ್ಟೇ ಅಲ್ಲ, ಕೆಎಟಿಯಲ್ಲಿ ಸಲ್ಲಿಸಿದ್ದ ಅರ್ಜಿಯಲ್ಲಿ ೪ನೇ ಪ್ರತಿವಾದಿಯಾಗಿರುವ ಕರೀಗೌಡ (ಈಗ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ) ಅವರು ಪರೀಕ್ಷೆಯಲ್ಲಿ ೧,೦೮೭ ಅಂಕ ಪಡೆದಿದ್ದರು. ಇವರನ್ನು ಹಿಂದುಳಿದ ಪ್ರವರ್ಗ ೩ಎ ಮೀಸಲಾತಿ ಪ್ರಕಾರ, ಇವರಿಗೆ ಅಸಿಸ್ಟೆಂಟ್‌ ಕಮಿಷನರ್‌ ಹುದ್ದೆ ಹಂಚಿಕೆಯಾಗಿತ್ತು. ಇದಕ್ಕೆ ಹನುಮಂತೇಗೌಡ ಅವರು ಅರ್ಜಿಯಲ್ಲಿ ತಕರಾರು ಎತ್ತಿದ್ದರು. “ತಾವು ೧,೧೪೭ ಅಂಕ ಪಡೆದಿದ್ದರೂ ತಮಗೆ ಸಾಮಾನ್ಯ ವರ್ಗದಡಿಯಲ್ಲಿ ಅಸಿಸ್ಟೆಂಟ್‌ ಕಂಟ್ರೋಲರ್‌ ಹುದ್ದೆಯನ್ನು ೨೦೦೬ರ ಏಪ್ರಿಲ್ ೨೮ರಂದು ನೀಡಲಾಗಿತ್ತು. ತಮಗೆ ಸಿಗಬೇಕಿದ್ದ ಹುದ್ದೆಯನ್ನು ಮತ್ತೊಬ್ಬರಿಗೆ ನೀಡಿರುವುದರ ಹಿಂದೆ ಸ್ವಜನಪಕ್ಷಪಾತವಿತ್ತು,” ಎಂದು ಮಧ್ಯಂತರ ಅರ್ಜಿಯಲ್ಲಿ ದೂರಿದ್ದರು.

ಕರೀಗೌಡ ಎಂಬ ಅಧಿಕಾರಿಯ ಹೆಸರನ್ನು ಪ್ರಸ್ತಾಪಿಸಿರುವ ಪ್ರತಿ

ಇನ್ನು, ಹನುಮಂತೇಗೌಡ ಅವರು ಅರ್ಹತಾ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಇವರು ೩ಎ ವಿಭಾಗದಲ್ಲಿ ಮೀಸಲಾತಿ ಕೋರಿದ್ದರು. ಆದರೆ, ವ್ಯಕ್ತಿತ್ವ ಸಂದರ್ಶನಕ್ಕೆ ಹಾಜರಾದ ಸಂದರ್ಭದಲ್ಲಿ ಮೂಲ ಜಾತಿ ಪ್ರಮಾಣಪತ್ರ ನೀಡಿರಲಿಲ್ಲ. ಪ್ರಯಾಣ ಮಾಡುವಾಗ ಮೂಲ ದಾಖಲೆ ಕಳೆದುಕೊಂಡಿದ್ದರಿಂದ ಸಮಯಕ್ಕೆ ಸರಿಯಾಗಿ ಹೊಸ ದಾಖಲೆಯನ್ನು ಸಂಬಂಧಪಟ್ಟ ಪ್ರಾಧಿಕಾರದಿಂದ ಪಡೆದಿರಲಿಲ್ಲ. ಸಂದರ್ಶನಕ್ಕೆ ಹಾಜರಾದ ಸಂದರ್ಭದಲ್ಲಿ ಮೂಲ ಜಾತಿ ಪ್ರಮಾಣಪತ್ರ ಇಲ್ಲದ ಕಾರಣ ಸಾಮಾನ್ಯ ವರ್ಗದಲ್ಲಿ ಪರಿಗಣಿಸಬೇಕು ಎಂದು ಕೆಪಿಎಸ್‌ಸಿಗೆ ಲಿಖಿತವಾಗಿ ಕೋರಿದ್ದರು ಎಂಬ ಸಂಗತಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರಿಗೆ ನೀಡಿರುವ ಉತ್ತರದಿಂದ ತಿಳಿದುಬಂದಿದೆ.

ಒಟ್ಟಾರೆ, ೧೯೯೮ರ ನೇಮಕಾತಿ ಸಂದರ್ಭದಲ್ಲಿ ಮೀಸಲಾತಿ ಕುರಿತಂತೆ ಸಿಐಡಿ ತನಿಖಾಧಿಕಾರಿಗಳ ಮುಂದೆ ಹಲವು ಅಭ್ಯರ್ಥಿಗಳು ವಿವಿಧ ಲೋಪಗಳ ಕುರಿತು ಹೇಳಿಕೆ ನೀಡಿದ್ದರು. ಆ ಪೈಕಿ ಬಹುತೇಕರು ಸಿಐಡಿ ತನಿಖಾಧಿಕಾರಿಗಳ ಮುಂದೆ ನೀಡಿದ್ದ ಹೇಳಿಕೆಗೆ ತದ್ವಿರುದ್ಧವಾಗಿ ಕೆಳಹಂತದ ನ್ಯಾಯಾಲಯದಲ್ಲಿ ಸಾಕ್ಷಿ ನುಡಿದಿದ್ದಾರೆ ಎಂಬ ಬಲವಾದ ಆರೋಪಗಳು ಕೇಳಿಬಂದಿವೆ. ತದ್ವಿರುದ್ಧ ಹೇಳಿಕೆಗಳನ್ನು ನೀಡುತ್ತಿರುವ ಅಧಿಕಾರಿಗಳು, ಕೆಲ ಅಭ್ಯರ್ಥಿಗಳು ಪ್ರಭಾವಕ್ಕೆ ಒಳಗಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಪ್ರಧಾನಿ ನರೇಂದ್ರ ಮೋದಿ ಮುಂದಿರುವ ಅತಿದೊಡ್ಡ ಸವಾಲು ಯಾವುದು ಗೊತ್ತೇ?
ಶ್ರೀಸಾಮಾನ್ಯರ ಸ್ವಾಮೀಜಿ ಎಂದೆನಿಸಿಕೊಂಡ ತೋಂಟದಾರ್ಯ ಶ್ರೀಗಳು ಇನ್ನಿಲ್ಲ
ಸೂಪರ್ಟೆಕ್ ₹600 ಕೋಟಿ ಸಾಲ ಮರುಪಾವತಿ ವೈಫಲ್ಯ; ಕಾದಿದೆ ಮತ್ತಷ್ಟು ಸಂಕಷ್ಟ?
Editor’s Pick More