ಮಾರ್ನಿಂಗ್ ಡೈಜೆಸ್ಟ್‌ | ಇಂದು ನೀವು ಗಮನಿಸಬೇಕಾದ 4 ಪ್ರಮುಖ ಸುದ್ದಿಗಳು

ನೀವು ಗಮನಿಸಲೇಬೇಕಾದ ಇಂದಿನ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ನೋಟ  

ಅಭ್ಯರ್ಥಿಗಳಿಗೆ ಹೊಸ ಪ್ರಮಾಣಪತ್ರ; ಕೇಂದ್ರದಿಂದ ಅಧಿಕೃತ ಮುದ್ರೆ?

ಮುಂಬರುವ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳಿಗೆ ಕೇಂದ್ರ ಚುನಾವಣಾ ಆಯೋಗವು ಹೊಸ ಪ್ರಮಾಣಪತ್ರ ಪರಿಚಯಿಸಲು ಸಿದ್ಧತೆ ನಡೆಸಿದ್ದು, ಕೇಂದ್ರ ಕಾನೂನು ಇಲಾಖೆಯು ಸೋಮವಾರ ಅಧಿಕೃತ ಮುದ್ರೆ ಒತ್ತುವ ಸಾಧ್ಯತೆಯಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಹೊಸ ಪ್ರಮಾಣಪತ್ರದಲ್ಲಿ ಅಭ್ಯರ್ಥಿಯ ಕ್ರಿಮಿನಲ್ ಹಿನ್ನೆಲೆ ದಾಖಲಿಸುವುದು ಕಡ್ಡಾಯವಾಗಲಿದೆ. ಇದರ ಜೊತೆಗೆ ಅಭ್ಯರ್ಥಿ ಪ್ರತಿನಿಧಿಸುವ ಪಕ್ಷವು ತನ್ನೆಲ್ಲ ಜಾಹೀರಾತುಗಳಲ್ಲಿ ಉಮೇದುವಾರರ ಕ್ರಿಮಿನಲ್ ಹಿನ್ನೆಲೆ ಪ್ರಕಟಿಸಬೇಕು. ಪಕ್ಷದ ವೆಬ್ಸೈಟ್ನಲ್ಲೂ ಅಭ್ಯರ್ಥಿಗಳ ವಿರುದ್ಧದ ಕ್ರಿಮಿನಲ್ ದೂರುಗಳ ವಿವರ ನೀಡಬೇಕಿದೆ. ಆ ಮೂಲಕ ರಾಜಕಾರಣದಲ್ಲಿ ಅಪರಾಧ ಹಿನ್ನೆಲೆ ಹೊಂದಿರುವವರನ್ನು ವ್ಯವಸ್ಥೆಯಿಂದ ದೂರ ಇಡುವ ಆಶಯ ಹೊಂದಲಾಗಿದೆ.

ಪ್ರಧಾನಿ ಮೋದಿ-ತಮಿಳನಾಡು ಸಿಎಂ ಪಳನಿಸ್ವಾಮಿ ಭೇಟಿ; ಗರಿಗೆದರಿದ ಮೈತ್ರಿ ಚರ್ಚೆ

ತಮಿಳುನಾಡಿನಲ್ಲಿ ಆಡಳಿತಾರೂಢ ಎಐಎಡಿಎಂಕೆ ಮತ್ತು ಬಿಜೆಪಿ ಮೈತ್ರಿ ಅಧಿಕೃತಗೊಳ್ಳುವ ಚರ್ಚೆ ಬಿರುಸು ಪಡೆದಿರುವ ನಡುವೆಯೇ, ಪ್ರಧಾನಿ ನರೇಂದ್ರ ಮೋದಿಯವರನ್ನು ಸಿಎಂ ಇ ಪಳನಿಸ್ವಾಮಿ ಸೋಮವಾರ ನವದೆಹಲಿಯಲ್ಲಿ ಭೇಟಿ ಮಾಡಲಿದ್ದಾರೆ. ಈಚೆಗೆ ತಿರುಪತಿಯಲ್ಲಿ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಹಾಗೂ ತಮಿಳುನಾಡು ಡಿಸಿಎಂ ಓ ಪನೀರ್ ಸೆಲ್ವಂ ಮೈತ್ರಿ ಸಂಬಂಧ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಆಫ್ಘನ್‌ನಲ್ಲಿ ಪಾಕ್ ಕಾನ್ಸುಲೇಟ್ ಪುನಾರಂಭ

ಭದ್ರತೆ ಕೊರತೆ ಹಿನ್ನೆಲೆಯಲ್ಲಿ ಆಫ್ಘಾನಿಸ್ತಾನದ ಜಲಾಲಬಾದ್‌ನಲ್ಲಿನ ತನ್ನ ಕಾನ್ಸುಲೇಟ್ ಕಚೇರಿಯಲ್ಲಿ ಎಲ್ಲ ರೀತಿಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದ್ದ ಪಾಕಿಸ್ತಾನವು ಸೋಮವಾರದಿಂದ ಪುನರಾರಂಭ ಮಾಡಲಿದೆ. ಅಫ್ಘನ್ ಸರ್ಕಾರವು ಅಗತ್ಯ ಭದ್ರತೆ ಒದಗಿಸುವ ಭರವಸೆ ನೀಡಿದೆ ಎಂದು ಪಾಕಿಸ್ತಾನದ ರಾಯಭಾರ ಕಚೇರಿ ತಿಳಿಸಿದ್ದು, ಎಂದಿನಂತೆ ವೀಸಾ ಮಂಜೂರು ಪ್ರಕ್ರಿಯೆ ನಡೆಯಲಿದೆ ಎಂದಿದೆ. ಆಗಸ್ಟ್ ೩೦ರಂದು ಅಫ್ಘನ್ ಭದ್ರತಾ ಪಡೆಗಳ ಹಸ್ತಕ್ಷೇಪದ ಹಿನ್ನೆಲೆಯಲ್ಲಿ ಪಾಕ್ ತನ್ನ ಕಾನ್ಸುಲೇಟ್ ಕಚೇರಿಯನ್ನು ಮುಚ್ಚಿತ್ತು.

ಪಿಬಿಎಲ್ ಹರಾಜು: ಸೈನಾ, ಸಿಂಧು ಪ್ರಮುಖ ಆಕರ್ಷಣೆ

ಒಲಿಂಪಿಕ್ಸ್ ಪದಕ ವಿಜೇತೆಯರಾದ ಸೈನಾ ನೆಹ್ವಾಲ್, ಪಿ ವಿ ಸಿಂಧು ಮತ್ತು ವಿಶ್ವ ಚಾಂಪಿಯನ್ ಕರೋಲಿನ್ ಮರಿನ್ ಇಂದು ನಡೆಯಲಿರುವ ನಾಲ್ಕನೇ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ (ಪಿಬಿಎಲ್) ಆಟಗಾರರ ಹರಾಜಿನಲ್ಲಿ ಪ್ರಮುಖ ಆಕರ್ಷಣೆಯಾಗಿದ್ದಾರೆ. ಲೀಗ್‌ನಲ್ಲಿರುವ ಎಲ್ಲ ಆಟಗಾರ್ತಿಯರೂ ೨೦೧೫ರ ನಂತರ ಪೂರ್ಣ ಪ್ರಮಾಣದಲ್ಲಿ ಹರಾಜಿನ ವ್ಯಾಪ್ತಿಯಲ್ಲಿದ್ದಾರೆ. ೨೩ ರಾಷ್ಟ್ರಗಳ ೧೪೫ ಬ್ಯಾಡ್ಮಿಂಟನ್ ಆಟಗಾರರು ಈ ಹರಾಜಿನಲ್ಲಿದ್ದಾರೆ. ಪುಣೆ ಫ್ರಾಂಚೈಸ್‌ನ ಸೇರ್ಪಡೆಯೊಂದಿಗೆ ಒಟ್ಟು ೯ ತಂಡಗಳು ಲೀಗ್‌ನಲ್ಲಿವೆ. ಪ್ರತೀ ತಂಡ ಆಟಗಾರರಿಗಾಗಿ ₹ ೨.೬ ಕೋಟಿ ಪಡೆಯಬಹುದಾಗಿದೆ. ಈ ಬಾರಿಯ ಪಿಬಿಎಲ್ ಡಿಸೆಂಬರ್ ೨೩ರಿಂದ ಜನವರಿ ೧೩ರವರೆಗೆ ನಡೆಯಲಿದೆ

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More