ಇಂದಿನ ಡೈಜೆಸ್ಟ್‌ | ನೀವು ಗಮನಿಸಲೇಬೇಕಾದ ಇತರ 8 ಪ್ರಮುಖ ಸುದ್ದಿಗಳು  

ನೀವು ಗಮನಿಸಲೇಬೇಕಾದ ಇಂದಿನ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ನೋಟ

ಮಂಗಳೂರಿನಲ್ಲಿ ಮೋದಿ ಸ್ಪರ್ಧೆ ಮಾಡುವುದಿಲ್ಲ: ಬಿಎಸ್‌ವೈ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಮಂಗಳೂರಿನಿಂದ ಸ್ಫರ್ಧೆ ಮಾಡಲಿದ್ದಾರೆ ಎಂಬ ವರದಿ ಸುಳ್ಳು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ ಎಸ್‌ ಯಡಿಯೂರಪ್ಪ ಹೇಳಿದ್ದಾರೆ. ಉತ್ತರ ಪ್ರದೇಶದಲ್ಲಿ ವಿರೋಧ ಪಕ್ಷಗಳು ಒಟ್ಟಾಗಿ ಸ್ಪರ್ಧೆ ಮಾಡುವುದರಿಂದ ಬಿಜೆಪಿ ಸಾಕಷ್ಟು ಸೀಟು ಕಳೆದುಕೊಳ್ಳಲಿದೆ. ಇವುಗಳನ್ನು ತುಂಬಿಕೊಳ್ಳುವ ಉದ್ದೇಶದಿಂದ ದಕ್ಷಿಣ ಭಾರತದಲ್ಲಿ ಒಂದು ಕಡೆ, ಅದರಲ್ಲೂ ಬಿಜೆಪಿಯ ಭದ್ರಕೋಟೆ ಎನ್ನಲಾಗುವ ಕರಾವಳಿಯಲ್ಲಿ ಸ್ಪರ್ಧೆ ಮಾಡಲಿದ್ದಾರೆ ಎನ್ನಲಾಗಿತ್ತು.

ಪಾಕಿಸ್ತಾನಕ್ಕೆ ಬ್ರಹ್ಮೋಸ್ ಕ್ಷಿಪಣಿ ಮಾಹಿತಿ ಸೋರಿಕೆ; ಶಂಕಿತನ ಬಂಧನ

ಮಿಲಿಟರಿ ಇಂಟಿಲೆಜೆನ್ಸ್ ಹಾಗೂ ಉತ್ತರ ಪ್ರದೇಶ ಪೊಲೀಸರು ಜಂಟಿಯಾಗಿ ನಡೆಸಿದ ತನಿಖೆಯಲ್ಲಿ ಬ್ರಹ್ಮೋಸ್ ಕ್ಷಿಪಣಿಗೆ ಸಂಬಂಧಿಸಿದಂತೆ ಪಾಕಿಸ್ತಾನಕ್ಕೆ ಮಾಹಿತಿ ಸೋರಿಕೆ ಮಾಡಿದ್ದಾರೆ ಎನ್ನಲಾದ ಶಂಕಿತ ಐಎಎಸ್ ಏಜೆಂಟ್‌ನನ್ನು ಸೋಮವಾರ ನಾಗ್ಪುರದಲ್ಲಿ ಬಂಧಿಸಲಾಗಿದೆ. ಬಂಧಿತನನ್ನು ನಿಶಾಂತ್ ಅಗರ್ವಾಲ್ ಎಂದು ಗುರುತಿಸಿದ್ದು, ನಾಗ್ಪುರದಲ್ಲಿನ ಬ್ರಹ್ಮೋಸ್ ಏರೋಸ್ಪೇಸ್ ಘಟಕದಲ್ಲಿ ಈತ ಕಳೆದ ನಾಲ್ಕು ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದ ಎನ್ನಲಾಗಿದೆ. ವರದಿಗಳ ಪ್ರಕಾರ ಅಗರ್ವಾಲ್, ಪಾಕಿಸ್ತಾನದ ಗೂಢಚಾರ ಸಂಸ್ಥೆಯಾದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್‌ನ (ಐಎಸ್ಐ) ಶಂಕಿತ ಸದಸ್ಯನಾಗಿದ್ದಾನೆ.

ಬ್ರೆಜಿಲ್ ಅಧ್ಯಕ್ಷೀಯ ಚುನಾವಣೆ; ಬಲಪಂಥೀಯ ಜೈರ್ ಬೊಲ್ಸಾರೋರೋಗೆ ಜಯ

ಬ್ರೆಜಿಲ್‌ನ ಸೋಶಿಯಲ್ ಲಿಬರಲ್ ಪಕ್ಷದ ಅಭ್ಯರ್ಥಿ ಜೈರ್ ಬೊಲ್ಸಾರೋರೋ ಅವರು ಸೋಮವಾರ ನಡೆದ ಅಧ್ಯಕ್ಷೀಯ ಚುನಾವಣೆಯ ಮೊದಲ ಸುತ್ತಿನಲ್ಲಿ ಭಾರಿ ಅಂತರದಲ್ಲಿ ಜಯ ಸಾಧಿಸಿದ್ದಾರೆ. ಪ್ರಬಲ ಅಭ್ಯರ್ಥಿಯಾದ ವರ್ಕರ್ಸ್ ಪಕ್ಷದ ಅಭ್ಯರ್ಥಿ ಫರ್ನಾಂಡೋ ಹಡ್ಡಾದ್ ಎದುರು ಜಯ ಸಾಧಿಸಿ ೪೬ ಪ್ರತಿಶತದಷ್ಟು ಮತ ಗಳಿಸಿದ್ದಾರೆ. ಗೆಲ್ಲಲು ಅಗತ್ಯವಾದ ಮತಗಳನ್ನು ಗಳಿಸದ ಹಡ್ಡಾದ್ ಅವರು, ೨೯ ಪ್ರತಿಶತದಷ್ಟು ಮತ ಗಳಿಸಿದ್ದಾರೆ.

2030ರಿಂದ 2052ರ ನಡುವೆ ಜಾಗತಿಕ ತಾಪಮಾನ ಅತಿರೇಕಕ್ಕೆ ಏರಲಿದೆ: ವಿಶ್ವಸಂಸ್ಥೆ

2030ರಿಂದ 2052ರ ನಡುವೆ ಜಾಗತಿಕ ತಾಪಮಾನವು 1.5 ಸೆಲ್ಶಿಯಸ್‌ಗಿಂತ ಹೆಚ್ಚಾಗಬಹುದು, ಇದು ಅಪಾಯಕ್ಕೆ ಕಾರಣವಾಗುವಂಥ ಬದಲಾವಣೆ ಉಂಟುಮಾಡಬಹುದು ಎಂದು ವಿಶ್ವಸಂಸ್ಥೆಯ ಜಾಗತಿಕ ತಾಪಮಾನ ವೇದಿಕೆಯು ಸೋಮವಾರ ವರದಿಯೊಂದನ್ನು ಬಿಡುಗಡೆ ಮಾಡಿದೆ. 1.5 ಸೆಲ್ಶಿಯಸ್‌ಗೆ ಏರುವ ತಾಪಮಾನವನ್ನು ಇಳಿಸಲು, ಹಸಿರುಮನೆ ಅನಿಲ ಹೊರಸೂಸುವಿಕೆಯು ಶೇ.45ರಷ್ಟು ಇಳಿಕೆ ಆಗಬೇಕಾಗುತ್ತದೆ ಎಂದು ವರದಿಯಲ್ಲಿ ಎಚ್ಚರಿಸಲಾಗಿದೆ.

ಸೋನಂ ಕಪೂರ್ ಮೇಲೆ ಕಂಗನಾ ರನಾವತ್ ಕಿಡಿ

ಬಾಲಿವುಡ್‌ ನಿರ್ದೇಶಕ ವಿಕಾಸ್ ಬೆಹ್ಲ್ ಅವರ ವಿರುದ್ಧ ನಟಿ ಕಂಗನಾ ರನಾವತ್‌ ಲೈಂಗಿಕ ಶೋಷಣೆಯ ಆರೋಪ ಮಾಡಿದ್ದರು. ಈ ಬಗೆಗಿನ ಪ್ರಶ್ನೆಗೆ ನಟಿ ಸೋನಂ ಪ್ರತಿಕ್ರಿಯಿಸುತ್ತ, “ಕಂಗನಾ ಅವರನ್ನು ನಂಬುವುದು ಕಷ್ಟ,” ಎಂದಿದ್ದರು. ಇದರಿಂದ ಕುಪಿತರಾಗಿರುವ ಕಂಗನಾ, “ಅವರು ಹೇಳಿರುವುದರ ಅರ್ಥವೇನು? ನನ್ನ ಆರೋಪದ ಬಗ್ಗೆ ಅವರು ಅನುಮಾನ ವ್ಯಕ್ತಪಡಿಸುವುದು ಸರಿಯಲ್ಲ. ನನ್ನನ್ನು ಜಡ್ಜ್ ಮಾಡಲು ಅವರಿಗೇನು ಹಕ್ಕು ಇದೆ? ತಂದೆಯಿಂದಾಗಿ ಉದ್ಯಮದಲ್ಲಿ ನಾನು ಗುರುತಿಸಿಕೊಂಡಿಲ್ಲ. ದಶಕಗಳ ಕಾಲದ ಪರಿಶ್ರಮದಿಂದ ನಾನು ಉದ್ಯಮದಲ್ಲಿ ಗೌರವ, ಅಭಿಮಾನ ಸಂಪಾದಿಸಿದ್ದೇನೆ. ಸೋನಂ ಉತ್ತಮ ನಟಿಯಲ್ಲ, ಉತ್ತಮ ಮಾತುಗಾರ್ತಿಯೂ ಅಲ್ಲ,” ಎಂದು ಸೋನಂ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಅಮೆರಿಕದ ಇಬ್ಬರಿಗೆ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿ

ಅಮೆರಿಕದ ಅರ್ಥಶಾಸ್ತ್ರಜ್ಞರಾದ ವಿಲಿಯಂ ನೋರ್ದಸ್ ಹಾಗೂ ಪೌಲ್ ರೋಮರ್‌ ಅವರಿಗೆ ರಾಯಲ್ ಸ್ವೀಡಿಶ್ ಅಕಾಡೆಮಿ ಆಫ್ ಸೈನ್ಸ್ ಈ ಬಾರಿಯ ನೊಬೆಲ್ ಪ್ರಶಸ್ತಿ ಘೋಷಿಸಿದೆ. ಸಮಗ್ರ ಆರ್ಥಿಕ ವಿಶ್ಲೇಷಣೆಗೆ ಹವಾಮಾನ ಬದಲಾವಣೆ ಮತ್ತು ನೂತನ ತಾಂತ್ರಿಕ ಅನ್ವೇಷಣೆಗಳನ್ನು ಸಂಯೋಜಿಸುವುದು ಹೇಗೆ ಎಂಬುದಕ್ಕೆ ಉತ್ತರ ಕಂಡುಕೊಂಡ ಕಾರಣಕ್ಕಾಗಿ ಈ ಇಬ್ಬರಿಗೂ ಈ ಬಾರಿಯ ನೊಬೆಲ್ ಸಮ್ಮಾನ ನೀಡಲಾಗಿದೆ.

ವಿಶ್ವ ಕುಸ್ತಿ ಚಾಂಪಿಯನ್‌ಶಿಪ್: ಭಾರತಕ್ಕೆ ಬಜರಂಗ್ ಸಾರಥ್ಯ

ಇದೇ ಅಕ್ಟೋಬರ್ ೨೦ರಿಂದ ೨೮ರವರೆಗೆ ಹಂಗೆರಿಯ ಬುಡಾಪೆಸ್ಟ್‌ನಲ್ಲಿ ನಡೆಯಲಿರುವ ಪ್ರತಿಷ್ಠಿತ ವಿಶ್ವ ರೆಸ್ಲಿಂಗ್ ಚಾಂಪಿಯನ್‌ಶಿಪ್ ಸ್ಪರ್ಧಾವಳಿಗೆ ೩೦ ಮಂದಿ ಕುಸ್ತಿಪಟುಗಳ ಭಾರತ ತಂಡಕ್ಕೆ ಬಜರಂಗ್ ಪುನಿಯಾ ಸಾರಥ್ಯ ವಹಿಸಿದ್ದಾರೆ. ಒಲಿಂಪಿಕ್ಸ್ ಪದಕ ವಿಜೇತೆ ಸಾಕ್ಷಿ ಮಲಿಕ್ ಕೂಡ ತಂಡದಲ್ಲಿನ ವನಿತೆಯರನ್ನು ಮುನ್ನಡೆಸಲಿದ್ದಾರೆ. ರೆಸ್ಲಿಂಗ್ ಫೆಡರೇಷನ್ ಆಫ್ ಇಂಡಿಯಾ (ಡಬ್ಲ್ಯೂಎಫ್‌ಐ) ಫ್ರೀ ಸ್ಟೈಲ್ ಮತ್ತು ಗ್ರೀಕೊ ರೋಮನ್ ವಿಭಾಗದಲ್ಲಿ ತಲಾ ಐವರಂತೆ ಹತ್ತು ಮಂದಿ ಸದಸ್ಯರನ್ನು ಆರಿಸಿದೆ. ಬಜರಂಗ್ (೬೫ ಕೆಜಿ), ಫ್ರೀಸ್ಟೈಲ್ ವಿಭಾಗದಲ್ಲಿ ಬಲಿಷ್ಠವಾಗಿದ್ದರೆ, ಸಾಕ್ಷಿ ಮಲಿಕ್ (೬೨ ಕೆಜಿ) ಮತ್ತು ಕಾಮನ್ವೆಲ್ತ್ ಗೇಮ್ಸ್ ಸ್ವರ್ಣ ವಿಜೇತೆ ಪೂಜಾ ಧಂಡಾ (೫೭ ಕೆಜಿ) ಮಹಿಳಾ ವಿಭಾಗದಲ್ಲಿರುವ ಪ್ರಮುಖ ಪಟುಗಳು.

ಹಾಕಿ: ಏಷ್ಯಾ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತಕ್ಕೆ ಕಠಿಣ ಸವಾಲು

ಹಾಲಿ ಚಾಂಪಿಯನ್ ಭಾರತ ಹಾಕಿ ತಂಡ, ಈ ಬಾರಿಯ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಕಠಿಣ ಸವಾಲಿಗೆ ಗುರಿಯಾಗಲಿದೆ. ಜಪಾನ್, ಪಾಕಿಸ್ತಾನ ಹಾಗೂ ಕೊರಿಯಾ ತಂಡಗಳಿರುವ ಬಲಿಷ್ಠ ತಂಡಗಳ ವಿರುದ್ಧ ಭಾರತ ಕಾದಾಡಲಿದೆ. ಅಕ್ಟೋಬರ್ ೧೮ರಿಂದ ಮಸ್ಕಟ್‌ನಲ್ಲಿ ಶುರುವಾಗಲಿರುವ ಟೂರ್ನಿ ಐದನೇ ಆವೃತ್ತಿಯಾಗಿದೆ. ವಿಶ್ವ ಹಾಕಿ ತಂಡಗಳ ಶ್ರೇಯಾಂಕ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರುವ ಭಾರತ ತಂಡ, ಅಗ್ರ ತಂಡವಾಗಿದೆ. ಜಪಾನ್ (೧೬ನೇ ಶ್ರೇಯಾಂಕ), ಮಲೇಷ್ಯಾ (೧೨ನೇ ಶ್ರೇಯಾಂಕ), ಪಾಕಿಸ್ತಾನ (೧೩ನೇ ಶ್ರೇಯಾಂಕ), ಕೊರಿಯಾ ವಿಶ್ವದ ೧೪ನೇ ಶ್ರೇಯಾಂಕಿತ ತಂಡವಾಗಿದೆ. ಚೊಚ್ಚಲ ಆವೃತ್ತಿಯಲ್ಲಿ ಭಾರತ ಚಾಂಪಿಯನ್ ಆದರೆ, ಪಾಕಿಸ್ತಾನ ಎರಡು ಬಾರಿ (೨೦೧೨, ೨೦೧೩) ಚಾಂಪಿಯನ್ ಆಗಿತ್ತು. ೨೦೧೬ರಂದು ಭಾರತ ಮತ್ತೆ ಚಾಂಪಿಯನ್ ಆಗಿತ್ತು.

ಪ್ರಧಾನಿ ನರೇಂದ್ರ ಮೋದಿ ಮುಂದಿರುವ ಅತಿದೊಡ್ಡ ಸವಾಲು ಯಾವುದು ಗೊತ್ತೇ?
ಶ್ರೀಸಾಮಾನ್ಯರ ಸ್ವಾಮೀಜಿ ಎಂದೆನಿಸಿಕೊಂಡ ತೋಂಟದಾರ್ಯ ಶ್ರೀಗಳು ಇನ್ನಿಲ್ಲ
ಸೂಪರ್ಟೆಕ್ ₹600 ಕೋಟಿ ಸಾಲ ಮರುಪಾವತಿ ವೈಫಲ್ಯ; ಕಾದಿದೆ ಮತ್ತಷ್ಟು ಸಂಕಷ್ಟ?
Editor’s Pick More