ಟ್ವಿಟರ್ ಸ್ಟೇಟ್ | ಲೈಂಗಿಕ ದುರುಳರನ್ನು ಕಾಡುತ್ತಿರುವ #MeToo ಬಾಣ

ಕಳೆದ ಒಂದು ವಾರದಲ್ಲಿ ಹಲವು ಮಹಿಳೆಯರು ಮೌನ ಮುರಿದು, ಈ ಹಿಂದೆ ಸಹೋದ್ಯೋಗಿಗಳೇ ತಮ್ಮ ಮೇಲೆ ನಡೆಸಿದ ಲೈಂಗಿಕ ದುರುಳತನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿವರ ಪ್ರಕಟಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಹಲವು ದುರುಳರ ವೃತ್ತಿಜೀವನ ಸಂಕಷ್ಟಕ್ಕೆ ಸಿಲುಕಿದೆ

ಉನ್ನತ ಸ್ಥಾನಗಳಲ್ಲಿ ಕುಳಿತು ಕಿರಿಯ ಸಹೋದ್ಯೋಗಿಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವವರ ಹೆಸರನ್ನು ಬಹಿರಂಗಪಡಿಸಿ ಅವರಿಗೆ ಅವಹೇಳನ ಉಂಟುಮಾಡುವ ಉದ್ದೇಶದ #MeToo ಹೋರಾಟ ಭಾರತೀಯ ಮಾಧ್ಯಮ ಲೋಕದಲ್ಲಿ ದೊಡ್ಡ ಅಲೆಯನ್ನೇ ಎಬ್ಬಿಸಿದೆ. ಕಳೆದ ಒಂದು ವಾರದಿಂದ ಹಲವು ಹಿರಿಯ ಪತ್ರಕರ್ತರು ಮತ್ತು ಇತರ ಕ್ಷೇತ್ರಗಳ ಗೌರವಾನ್ವಿತ ಎಂದು ತಿಳಿಯಲಾದ ವ್ಯಕ್ತಿಗಳ ಮೇಲೆ ‘ಲೈಂಗಿಕ ದುರುಳತನ’ ತೋರಿಸಿದ ಆರೋಪವನ್ನು ಪತ್ರಕರ್ತೆಯರು ಹೊರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದುರುಳರು ತಡವಾಗಿಯಾದರೂ ತಮ್ಮ ತಪ್ಪಿಗೆ ಶಿಕ್ಷೆ ಅನುಭವಿಸುವಂತಾಗಿದೆ.

ಪ್ರಶಾಂತ್ ಝಾ

‘ಹಿಂದೂಸ್ತಾನ್ ಟೈಮ್ಸ್’ ರಾಜಕೀಯ ಸಂಪಾದಕ ಪ್ರಶಾಂತ್ ಝಾ ಅವರ ಮೇಲೆ ಲೈಂಗಿಕ ದುರುಳತನ ತೋರಿದ ಆರೋಪ ಬಂದಿರುವ ಹಿನ್ನೆಲೆಯಲ್ಲಿ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ‘ಹಿಂದೂಸ್ತಾನ್ ಟೈಮ್ಸ್‌’ನ ಮಾಜಿ ಸಿಬ್ಬಂದಿಯೊಬ್ಬರು ಶುಕ್ರವಾರ ಅವರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ಪತ್ರಿಕೆಯ ಆಡಳಿತ ಮಂಡಳಿಗೆ ಕಳುಹಿಸಿದ ಇಮೇಲ್‌ನಲ್ಲಿ ಪ್ರಶಾಂತ್ ಝಾ, ತಮ್ಮ ಮೇಲಿನ ಆರೋಪ ತಮ್ಮ ನಡವಳಿಕೆಯ ಮೇಲೆ ನೈತಿಕ ಪ್ರಶ್ನೆಗಳನ್ನು ಎತ್ತಿರುವ ಹಿನ್ನೆಲೆಯಲ್ಲಿ ರಾಜಿನಾಮೆ ನೀಡುತ್ತಿರುವುದಾಗಿ ಹೇಳಿದ್ದಾರೆ.

ಕೆ ಆರ್ ಶ್ರೀನಿವಾಸ್

‘ಟೈಮ್ಸ್ ಆಫ್ ಇಂಡಿಯಾ’ದ ಹೈದರಾಬಾದ್‌ನ ಸ್ಥಾನಿಕ ಸಂಪಾದಕರಾದ ಕೆ ಆರ್ ಶ್ರೀನಿವಾಸ್ ಅವರ ಮೇಲೆ ಏಳು ಮಂದಿ ಮಹಿಳೆಯರು ಲೈಂಗಿಕ ದುರುಳುತನ ಪ್ರದರ್ಶಿಸಿರುವ ಆರೋಪ ಹೊರಿಸಿರುವ ಕಾರಣ ಅವರನ್ನು ಆಡಳಿತಾತ್ಮಕ ರಜಾ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಕೆ ಆರ್ ಶ್ರೀನಿವಾಸ್ ಅವರ ವಿಚಾರಣೆ ಮುಗಿಯುವವರೆಗೆ ಅವರು ರಜಾದಲ್ಲಿರುತ್ತಾರೆ ಎಂದು ಟೈಮ್ಸ್ ಆಡಳಿತ ತಿಳಿಸಿದೆ. “ಟೈಮ್ಸ್ ಆಡಳಿತ ಎಲ್ಲ ಸಹೋದ್ಯೋಗಿಗಳಿಗೂ ಲೈಂಗಿಕ ದೌರ್ಜನ್ಯ ಮುಕ್ತ ಸುರಕ್ಷಿತ ಕಾರ್ಯ ಪರಿಸರ ನೀಡುವ ಭರವಸೆ ನೀಡಲಿದೆ. ಈ ಬದ್ಧತೆಯ ಹಿನ್ನೆಲೆಯಲ್ಲಿ ಆಂತರಿಕ ದೂರುಗಳನ್ನು ಸ್ವೀಕರಿಸಲು ಸಮಿತಿಯನ್ನು ರಚಿಸಲಾಗಿದೆ. ಪಾರದರ್ಶಕ ತನಿಖೆ ಸಾಧ್ಯವಾಗುವಂತೆ ಕೆ ಆರ್ ಶ್ರೀನಿವಾಸ್ ಅವರಿಗೆ ಆಡಳಿತಾತ್ಮಕ ರಜಾ ನೀಡಲಾಗಿದೆ,” ಎಂದು ಟೈಮ್ಸ್ ಸಂಸ್ಥೆ ತಮ್ಮ ಸಿಬ್ಬಂದಿಗೆ ಇಮೇಲ್ ಕಳುಹಿಸಿದೆ.

ತನ್ಮಯ್ ಭಟ್, ಗುರ್‌ಸಿಮ್ರಾನ್ ಖಾಂಬ, ಉತ್ಸವ್ ಚಕ್ರವರ್ತಿ

ವಯಸ್ಕ ಹಾಸ್ಯ ಕಾರ್ಯಕ್ರಮವಾದ ‘ಎಐಬಿ ಬಕ್‌ಚೋಡ್‌’ನ ಸಹಸಂಸ್ಥಾಪಕರಾದ ತನ್ಮಯ್ ಭಟ್ ಮತ್ತು ಗುರ್‌ಸಿಮ್ರಾನ್ ಖಾಂಬ ಅವರ ಮೇಲೆ ಎಐಬಿ ಹಾಸ್ಯ ಕಾರ್ಯಕ್ರಮದ ಸಂಯೋಜಕರು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ತನ್ಮಯ್ ಭಟ್ ತಕ್ಷಣವೇ ರಾಜಿನಾಮೆ ನೀಡಲಿದ್ದಾರೆ ಮತ್ತು ಗುರುಸಿಮ್ರಾನ್ ಖಾಂಬ ತಾತ್ಕಾಲಿಕ ರಜಾ ತೆಗೆದುಕೊಳ್ಳಲಿದ್ದಾರೆ ಎಂದು ಎಐಬಿ ಹೇಳಿದೆ. ಈ ನಡುವೆ, ಎಐಬಿಯನ್ನು ಪ್ರಸಾರ ಮಾಡುತ್ತಿದ್ದ ‘ಹಾಟ್‌ ಸ್ಟಾರ್‌’ ಸಂಸ್ಥೆ ಕಾರ್ಯಕ್ರಮದ ಮೂರನೇ ಸೀಸನ್‌ ಪ್ರಸಾರ ಮಾಡದಿರಲು ನಿರ್ಧರಿಸಿದೆ. ಈ ಬಗ್ಗೆ ಹಾಟ್‌ಸ್ಟಾರ್ ತನ್ನ ಟ್ವಿಟರ್ ಖಾತೆಯಲ್ಲಿ ಸ್ಪಷ್ಟಪಡಿಸಿದೆ.

ಎಐಬಿ ಸಂಸ್ಥೆಯ ಹಾಸ್ಯ ಕಾರ್ಯಕ್ರಮವಾದ ‘ಆನ್ ಏರ್ ವಿತ್ ಎಐಬಿ’ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗುತ್ತಿತ್ತು. ಆದರೆ, ಕಾರ್ಯಕ್ರಮದ ನಟರ ಮೇಲೆ ಮಹಿಳೆಯರು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿರುವ ಹಿನ್ನೆಲೆಯಲ್ಲಿ ಈಗ ಮುಂದಿನ ಸೀಸನ್ ಪ್ರಸಾರ ಮಾಡದೆ ಇರಲು ಹಾಟ್‌ಸ್ಟಾರ್ ನಿರ್ಧರಿಸಿದೆ. ಎಐಬಿಯ ನಟ ಉತ್ಸವ್ ಚಕ್ರವರ್ತಿ ಬಗ್ಗೆಯೂ ಗುರುತರ ಆರೋಪಗಳನ್ನು ಮಹಿಳೆಯರು ಟ್ವಿಟರ್ ಮೂಲಕ ಹಂಚಿಕೊಂಡಿದ್ದರು.

ವಿಕಾಸ್ ಬೆಹ್ಲ್

ಸಿನಿಮಾ ರಂಗದಲ್ಲಿಯೂ #MeToo ಹೋರಾಟ ನಡೆಯುತ್ತಿದೆ. ನಟಿ ಕಂಗನಾ ರನೌತ್ ಅವರು ನಿರ್ದೇಶಕ ವಿಕಾಸ್ ಬೆಹ್ಲ್ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ಆ ನಂತರ ‘ಕ್ವೀನ್’ ನಟಿ ನಯನಿ ದೀಕ್ಷಿತ್ ಸೇರಿದಂತೆ ಹಲವರು ಟ್ವಿಟರ್ ಮೂಲಕ ಆರೋಪ ಹೊರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತೀಯ ಸಿನಿಮಾ ಮತ್ತು ಟಿವಿ ನಿರ್ದೇಶಕರ ಸಂಘಟನೆ ವಿಕಾಸ್ ಬೆಹ್ಲ್‌ಗೆ ಶೋಕಾಸ್ ನೋಟಿಸ್ ಕಳುಹಿಸಿದೆ. ಸದ್ಯ ವಿಕಾಸ್ ಬೆಹ್ಲ್‌ ಅವರು ನಟ ಹೃತಿಕ್‌ ರೋಶನ್ ಅವರ ‘ಸೂಪರ್ ೩೦’ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಲೈಂಗಿಕ ಆರೋಪದ ಹಿನ್ನೆಲೆಯಲ್ಲಿ ನಿರ್ದೇಶಕರನ್ನು ಬದಲಿಸುವಂತೆ ಹೃತಿಕ್ ರೋಶನ್ ನಿರ್ಮಾಪಕರನ್ನು ಕೇಳಿಕೊಂಡಿದ್ದಾರೆ.

ಇದನ್ನೂ ಓದಿ : ಟ್ವಿಟರ್ ಸ್ಟೇಟ್ | ಭಾರತೀಯ ಮಾಧ್ಯಮದ #MeTooಗೆ ಕೇಂದ್ರ ಸಚಿವ ಅಕ್ಬರ್ ಹೆಸರು ಸೇರ್ಪಡೆ

ಸುದೀಪ್ ಸೇನ್

ಸಾಹಿತ್ಯ ವಿಚಾರಗಳ ಸಂಪಾದಕರಾದ ಸುದೀಪ್ ಸೇನ್ ಮೇಲೂ ಟ್ವಿಟರ್‌ನಲ್ಲಿ ಲೈಂಗಿಕ ಆರೋಪ ವ್ಯಕ್ತವಾಗಿದೆ. ಹೀಗಾಗಿ, ೧೨ ಮಂದಿ ಕವಿಗಳು ಅವರ ‘ಸಂಚಯ ಪುಸ್ತಕ’ದಿಂದ ಹೊರಬರಲು ನಿರ್ಧರಿಸಿದ್ದಾರೆ. ಸುದೀಪ್ ಸೇನ್ ಅವರ ಸಂಪಾದಕತ್ವದಲ್ಲಿ ಸಾಹಿತ್ಯ ಅಕಾಡೆಮಿ ಈ ಪುಸ್ತಕವನ್ನು ಪ್ರಕಟಿಸಬೇಕಾಗಿತ್ತು. ಸಾಹಿತ್ಯ ಅಕಾಡೆಮಿ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡದಿದ್ದರೂ, ಕವಿಗಳು ಪತ್ರವೊಂದರಲ್ಲಿ ಸಹಿ ಹಾಕಿ ‘ಸಂಚಯ ಪುಸ್ತಕ’ದಿಂದ ಹೊರಬರುವ ನಿರ್ಧಾರವನ್ನು ಬಹಿರಂಗಪಡಿಸಿದ್ದಾರೆ.

ಎಂ ಜೆ ಅಕ್ಬರ್

ಕೇಂದ್ರ ಸಚಿವ ಎಂ ಜೆ ಅಕ್ಬರ್ ಮೇಲೆ ಹಲವು ಮಹಿಳೆಯರು ಟ್ವಿಟರ್‌ನಲ್ಲಿ ಆರೋಪಿಸಿದರೂ ಕೇಂದ್ರ ಸರ್ಕಾರ ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ. ಮಾಧ್ಯಮಗಳು ಪ್ರಯತ್ನಿಸಿದರೂ ಸ್ವತಃ ಅಕ್ಬರ್ ಈ ಬಗ್ಗೆ ಅಭಿಪ್ರಾಯ ನೀಡಲು ನಿರಾಕರಿಸಿದ್ದಾರೆ. ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರಾಗಿರುವ ಅಕ್ಬರ್ ಪತ್ರಕರ್ತರಾಗಿದ್ದ ಸಂದರ್ಭದಲ್ಲಿ ತಮ್ಮ ಸಿಬ್ಬಂದಿಯೊಂದಿಗೆ ಲೈಂಗಿಕ ದುರುಳತನ ಪ್ರದರ್ಶಿಸಿದ ಆರೋಪ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಮಾಧ್ಯಮಗಳು ಸಂಪರ್ಕಿಸಿದರೂ, ಅವರು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ಈವರೆಗೂ ಕನ್ನಡ ಮಾಧ್ಯಮ ಲೋಕದಲ್ಲಿ ಈ ಬಗೆಯ ಆರೋಪಗಳು ಎಲ್ಲೂ ಕೇಳಿಬಂದಿಲ್ಲ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More