ಐಎಎಸ್‌ ಅಧಿಕಾರಿ ಪ್ರಕರಣ; ಖಾಸಗಿ ಆಸ್ಪತ್ರೆಗೆ ಬಿಸಿ ಮುಟ್ಟಿಸದೆ ಕೈಚೆಲ್ಲಿದ ಬೆಂಗಳೂರು ಜಿಲ್ಲಾಡಳಿತ

ಮಹಿಳಾ ಐಎಎಸ್‌ ಅಧಿಕಾರಿ ಪಲ್ಲವಿ ಅಕುರಾತಿ ಅವರ ದೂರು ಆಧರಿಸಿ ತನಿಖೆ ನಡೆಸಿದ್ದ ತಜ್ಞರ ತಂಡ ವಸ್ತು ನಿಷ್ಠ ವರದಿ ನೀಡುವಲ್ಲಿ ವಿಫಲವಾಗಿದೆ. ಆರೋಪಕ್ಕೆ ಗುರಿಯಾಗಿರುವ ಖಾಸಗಿ ಆಸ್ಪತ್ರೆ ವಿರುದ್ಧ ಬೆಂಗಳೂರು ನಗರ ಜಿಲ್ಲಾಡಳಿತ ಮತ್ತೊಂದು ಮೆಮೋ ನೀಡಿ ತಿಪ್ಪೆ ಸಾರಿಸಲು ಮುಂದಾಗಿದೆ

ಐಎಎಸ್ ಅಧಿಕಾರಿ ಪಲ್ಲವಿ ಅಕುರಾತಿ ಅವರ ನವಜಾತ ಶಿಶುವಿನ ಚಿಕಿತ್ಸೆ ಮತ್ತು ಆರೈಕೆ ವಿಚಾರದಲ್ಲಿ ತೀವ್ರ ಅಸಡ್ಡೆಯಿಂದ ವರ್ತಿಸಿದ್ದ ಖಾಸಗಿ ಆಸ್ಪತ್ರೆಗೆ ಬಿಸಿ ಮುಟ್ಟಿಸಲು ಬೆಂಗಳೂರು ನಗರ ಜಿಲ್ಲಾಡಳಿತ ಹಿಂದೇಟು ಹಾಕಿದೆ. ಆಸ್ಪತ್ರೆ ಸೇರಿದಂತೆ ವೈದ್ಯರು ಮತ್ತು ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಮುಂದಾಗಿಲ್ಲ. ಹಾಗಾಗಿ, ಎಂದಿನಂತೆ ಈ ಪ್ರಕರಣದಲ್ಲಿಯೂ ಖಾಸಗಿ ಆಸ್ಪತ್ರೆಯೇ ಮೇಲುಗೈ ಸಾಧಿಸಿದಂತಾಗಿದೆ.

ಈ ನಡುವೆ, ಬೆಂಗಳೂರು ನಗರ ಜಿಲ್ಲಾ ಆರೋಗ್ಯಾಧಿಕಾರಿ ನೇಮಿಸಿದ್ದ ತಜ್ಞರ ತಂಡ ೨೦೧೮ರ ಸೆ.೧೫ರಂದು ಸಲ್ಲಿಸಿದ್ದ ವರದಿಯೂ ವಸ್ತುನಿಷ್ಠವಾಗಿಲ್ಲ ಹಾಗೂ ಹಲವು ಲೋಪಗಳಿವೆ ಎಂದು ತಿಳಿದುಬಂದಿದೆ. ತಜ್ಞರ ತಂಡ ನೀಡಿದ್ದ ವರದಿ ಆಧರಿಸಿ ಬೆಂಗಳೂರು ನಗರ ಜಿಲ್ಲಾಧಿಕಾರಿ ವಿಜಯಶಂಕರ್‌, ೨೦೧೮ರ ಸೆ.೨೮ರಂದು ಕ್ರಮ ಕೈಗೊಳ್ಳಲು ಸೂಚಿಸಿದ್ದಾರಾದರೂ ಆಸ್ಪತ್ರೆ ವಿರುದ್ಧ ಯಾವುದೇ ಕಠಿಣ ಕ್ರಮಕ್ಕೆ ಶಿಫಾರಸು ಮಾಡಿಲ್ಲ ಎಂದು ಗೊತ್ತಾಗಿದೆ. “ಕರ್ನಾಟಕ ಖಾಸಗಿ ವೈದ್ಯಕೀಯ ವಿಧೇಯಕ, ನಿಯಮಾವಳಿಗಳ ಅನ್ವಯ ಕ್ರಮ ವಹಿಸುವುದು,” ಎಂದಷ್ಟೇ ಟಿಪ್ಪಣಿಯಲ್ಲಿ ನಮೂದಿಸಿ ಕಡತವನ್ನು ಬೆಂಗಳೂರು ನಗರ ಜಿಲ್ಲಾ ಆರೋಗ್ಯಾಧಿಕಾರಿಗೆ ಹಿಂದಿರುಗಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಕಚೇರಿ ಮೂಲಗಳು ತಿಳಿಸಿವೆ. ಜಿಲ್ಲಾಧಿಕಾರಿ ಸೂಚನೆಯಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಆಸ್ಪತ್ರೆಗೆ ಮತ್ತೊಂದು ‘ಮೆಮೋ’ ನೀಡಿ ಕೈ ತೊಳೆದುಕೊಳ್ಳಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

“ಈ ಪ್ರಕರಣದಲ್ಲಿ ಖಾಸಗಿ ಆಸ್ಪತ್ರೆಯಿಂದ ಯಾವುದೇ ಗಂಭೀರ ಸ್ವರೂಪದ ಲೋಪಗಳಾಗಿಲ್ಲ,” ಎಂದು ತಜ್ಞರ ತಂಡ ವರದಿಯಲ್ಲಿ ಹೇಳಿದೆ ಎಂದು ಗೊತ್ತಾಗಿದೆ. ಹೀಗಾಗಿ, ಆಸ್ಪತ್ರೆಯ ಪರವಾನಗಿಯನ್ನು ರದ್ದುಗೊಳಿಸುವಂತಹ ಕಠಿಣ ಕ್ರಮ ಜರುಗಿಸುವುದು ಅನುಮಾನ,” ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ‘ದಿ ಸ್ಟೇಟ್‌’ಗೆ ತಿಳಿಸಿದ್ದಾರೆ.

ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ಯಾತನೆ ಮತ್ತು ನವಜಾತ ಶಿಶು ಚಿತ್ರಹಿಂಸೆ ಅನುಭವಿಸಿದ ಕುರಿತು ಖುದ್ದು ಮಹಿಳಾ ಐಎಎಸ್‌ ಅಧಿಕಾರಿ ಪಲ್ಲವಿ ಅಕುರಾತಿ ದೂರು ಸಲ್ಲಿಸಿದ್ದರು. ದೂರಿನ ಮೇರೆಗೆ ಬೆಂಗಳೂರಿನ ಇಂದಿರಾ ನಗರದಲ್ಲಿರುವ ‘ಲೈಫ್‌ ಫ್ಲಸ್‌’ ಖಾಸಗಿ ಆಸ್ಪತ್ರೆಗೆ ತನಿಖಾ ತಂಡ ಭೇಟಿ ನೀಡಿ ವಿಚಾರಣೆ ನಡೆಸಿತ್ತು. ತಜ್ಞರ ತನಿಖಾ ತಂಡ ಮತ್ತು ಬೆಂಗಳೂರು ನಗರ ಜಿಲ್ಲಾಡಳಿತ ಇದನ್ನು ಗಂಭೀರವಾಗಿ ಪರಿಗಣಿಸದೆಯೇ ಅತ್ಯಂತ ಸರಳ ಪ್ರಕರಣ ಎಂದು ತಿಪ್ಪೆ ಸಾರಿಸಿದೆ.

ಇದನ್ನೂ ಓದಿ : ಐಎಎಸ್‌ ಅಧಿಕಾರಿಯ ನವಜಾತ ಶಿಶುವಿಗೆ ಚಿತ್ರಹಿಂಸೆ; ಖಾಸಗಿ ನರ್ಸಿಂಗ್‌ ಹೋಂ ವಿರುದ್ಧ ದೂರು

ವರದಿಯಲ್ಲೂ ಲೋಪ?: ತಜ್ಞರ ತನಿಖಾ ತಂಡ ಆಸ್ಪತ್ರೆಗೆ ಪೂರಕವಾಗಿ ವರದಿ ನೀಡಿದೆ ಎನ್ನಲಾಗಿದೆ. ಈ ಆಸ್ಪತ್ರೆಯಲ್ಲಿ ದಿನಕ್ಕೆ ೩ರಿಂದ ೫ ಹೆರಿಗೆ ಆಗುತ್ತಿದ್ದರೂ ತಿಂಗಳಿಗೆ ಕೇವಲ ೫ ಹೆರಿಗೆ ಆಗುತ್ತಿವೆ ಎಂದು ವರದಿ ನೀಡಿದ್ದಾರೆ ಎಂದು ಹೇಳಲಾಗಿದೆ. ತನಿಖಾ ತಂಡ ನೀಡಿರುವ ಈ ವರದಿಗೆ ಪಲ್ಲವಿ ಅಕುರಾತಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ‘ದಿ ಸ್ಟೇಟ್’ಗೆ ತಿಳಿಸಿವೆ.

ಆಸ್ಪತ್ರೆಯಲ್ಲಿ ಜನಿಸುತ್ತಿರುವ ಮಕ್ಕಳ ಸಂಖ್ಯೆ ಮತ್ತು ವಿವರಗಳನ್ನು ಬಿಬಿಎಂಪಿಯಲ್ಲಿ ದಾಖಲಿಸಬೇಕು. ಆದರೆ, ತನಿಖಾ ತಂಡ, ಆಸ್ಪತ್ರೆ ಸಿಬ್ಬಂದಿ ನೀಡಿದ್ದ ಅಂಕಿ-ಅಂಶಗಳನ್ನು ಪರಿಶೀಲಿಸುವ ಗೋಜಿಗೆ ಹೋಗಿಲ್ಲ. ಹಾಗೆಯೇ, ಘಟನೆ ಸಂಭವಿಸಿದ ತಿಂಗಳಲ್ಲಿ ಬಿಬಿಎಂಪಿ ವಿತರಿಸಿರುವ ಜನನ ಪ್ರಮಾಣಪತ್ರಗಳ ವಿವರಗಳನ್ನು ಕಲೆಹಾಕಿಲ್ಲ. ಆಸ್ಪತ್ರೆ ನೀಡಿರುವ ಅಂಕಿ-ಅಂಶವನ್ನೇ ವರದಿಯಲ್ಲಿ ದಾಖಲಿಸಿ ಕೈತೊಳೆದುಕೊಂಡಿದೆ ಎಂದು ತಿಳಿದುಬಂದಿದೆ.

ಆದರೆ, ಬೆಂಗಳೂರು ನಗರ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಶ್ರೀನಿವಾಸ್‌ (ಪ್ರಭಾರ) ಈ ಆರೋಪವನ್ನು ತಳ್ಳಿಹಾಕಿದ್ದಾರೆ. “ವರದಿ ನೀಡಿರುವ ಅಧಿಕಾರಿಗಳ ಮೇಲೆ ನಂಬಿಕೆ ಇದೆ. ವರದಿಯೂ ಸಮಂಜಸವಾಗಿದೆ. ಅಲ್ಲದೆ, ವರದಿಯಲ್ಲಿ ಯಾವುದೇ ಲೋಪವಿಲ್ಲ. ಆಸ್ಪತ್ರೆಯಲ್ಲಿ ಜನಿಸುವ ನವಜಾತ ಶಿಶುಗಳ ಬಗ್ಗೆ ಫಾರ್ಚುರೇಷನ್ ಹೆಸರಿನ ಪುಸ್ತಕದಲ್ಲಿ ವಿವರಗಳನ್ನು ನಮೂದಿಸಲಾಗುತ್ತದೆ. ಇದೇ ಪುಸ್ತಕವನ್ನು ಬಿಬಿಎಂಪಿಗೆ ಕಳಿಸಲಾಗುತ್ತದೆ. ಇದನ್ನಾಧರಿಸಿ ಬಿಬಿಎಂಪಿ ಜನನ ಪ್ರಮಾಣಪತ್ರಗಳನ್ನು ವಿತರಿಸುತ್ತದೆ,” ಎಂದು ಡಾ.ಶ್ರೀನಿವಾಸ್‌ ‘ದಿ ಸ್ಟೇಟ್‌’ಗೆ ಪ್ರತಿಕ್ರಿಯೆ ನೀಡಿದ್ದಾರೆ.

‘ಲೈಫ್‌ ಫ್ಲಸ್‌’ ಆಸ್ಪತ್ರೆಗೆ ದಾಖಲಾಗಿದ್ದ ಪಲ್ಲವಿ ಅಕುರಾತಿ ಅವರು, ೨೦೧೮ರ ಜುಲೈ ೧೮ರಂದು ಮಗುವಿಗೆ ಜನ್ಮ ನೀಡಿದ್ದರು. ಈ ಆಸ್ಪತ್ರೆಯಲ್ಲಿ ದಾಖಲಾಗುವ ಗರ್ಭೀಣಿಯರಿಗೆ ಸಹಜ ಹೆರಿಗೆ ಮಾಡುವ ಬದಲು ಸಿಜೇರಿಯನ್‌ ಮಾಡಿಸುತ್ತಿದ್ದಾರೆ ಎಂದು ಅವರು ದೂರಿನಲ್ಲಿ ವಿವರಿಸಿದ್ದರು. ಹಾಗೆಯೇ, ಐಎಎಸ್‌ ಅಧಿಕಾರಿಗೆ ಇಂತಹ ಅನುಭವ ಆಗಿದೆ ಎಂದರೆ ಅನಕ್ಷರಸ್ಥ ಮಂದಿಗೆ ಇಂತಹ ಆಸ್ಪತ್ರೆಗಳಲ್ಲಿ ಎಷ್ಟರಮಟ್ಟಿಗೆ ಚಿಕಿತ್ಸೆ ದೊರೆಯಲಿದೆ ಎಂದೂ ದೂರಿನಲ್ಲಿ ಪ್ರಶ್ನಿಸಿದ್ದರು.

ಆದರೆ, ಐಎಎಸ್‌ ಅಧಿಕಾರಿಯೊಬ್ಬರು ದೂರು ನೀಡಿದರೂ ಯಾವುದೇ ಕ್ರಮ ಸಾಧ್ಯವಿಲ್ಲ ಎಂದಾದರೆ, ಸರ್ಕಾರದ ಮೇಲೆ ಖಾಸಗಿ ಆಸ್ಪತ್ರೆಗಳ ಹಿಡಿತ ಎಷ್ಟಿದೆ ಎಂಬುದನ್ನು ಯಾರಾದರೂ ಊಹಿಸಬಹುದು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More