ರುಪಾಯಿ 75ಕ್ಕೆ ಕುಸಿಯಲು 60 ಪೈಸೆ ಬಾಕಿ! 4 ದಿನದಲ್ಲಿ ಡಿಸೇಲ್ 116 ಪೈಸೆ ಏರಿಕೆ

ರುಪಾಯಿ ಕುಸಿತ ಮುಂದುವರಿದಿದೆ. ಮಂಗಳವಾರದ ವಹಿವಾಟಿನಲ್ಲಿ 74.40ಕ್ಕೆ ಕುಸಿದಿದೆ. ಆಘಾತದ ಸಂಗತಿ ಎಂದರೆ, ನಾಲ್ಕೇ ದಿನದಲ್ಲಿ ಡಿಸೇಲ್ ದರ 1.16 ರುಪಾಯಿ ಏರಿದೆ. ಇಳಿಕೆ ಮಾಡಿದ ದರವನ್ನು ತ್ವರಿತವಾಗಿ ಗ್ರಾಹಕರಿಂದ ಕಿತ್ತುಕೊಳ್ಳಲು ಯತ್ನಿಸುತ್ತಿದೆಯೇ ಮೋದಿ ಸರ್ಕಾರ?

ಅಮೆರಿಕ ಡಾಲರ್ ವಿರುದ್ಧ ಸತತ ಕುಸಿಯುತ್ತಿರುವ ರುಪಾಯಿ, ಸೋಮವಾರದ ವಹಿವಾಟಿನಲ್ಲಿ 74ರ ಗಡಿ ದಾಟಿತ್ತು. ಮಂಗಳವಾರ ಮತ್ತಷ್ಟು ಕುಸಿತ ದಾಖಲಿಸಿ, 74.40ರ ಮಟ್ಟಕ್ಕೆ ಕುಸಿದು, ಮತ್ತೊಂದು ಸಾರ್ವಕಾಲಿಕ ಕನಿಷ್ಠ ಮಟ್ಟ ದಾಖಲಿಸಿದೆ. ರುಪಾಯಿಯು ನಾವು ಅಂದಾಜಿಸಿರುವುದಕ್ಕಿಂತಲೂ ತ್ವರಿತವಾಗಿ 75ರ ಗಡಿ ಸಮೀಪಿಸುತ್ತಿದೆ. ಇನ್ನೂ 60 ಪೈಸೆ ಕುಸಿದರೆ ಈ ನಿರ್ಣಾಯಕ ಮಟ್ಟಕ್ಕೆ ರುಪಾಯಿ ಕುಸಿಯುತ್ತದೆ.

ಅತ್ತ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರುತ್ತಿದ್ದರೆ, ಇತ್ತ ರುಪಾಯಿ ಕುಸಿಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಪ್ರಸಕ್ತ ವರ್ಷದಲ್ಲಿ ವಿತ್ತೀಯ ಕೊರತೆ ಮಿತಿಯನ್ನು ಕಾಯ್ದುಕೊಳ್ಳುವುದು ದೊಡ್ಡ ಸವಾಲಾಗಿದೆ. ಅಲ್ಲದೆ, ಈಗಾಗಲೇ ಚಾಲ್ತಿ ಖಾತೆ ಕೊರತೆ ಹಿಗ್ಗಿರುವುದು ಮತ್ತಷ್ಟು ಸಮಸ್ಯೆಗೆ ಕಾರಣವಾಗಲಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ದ್ವೈಮಾಸಿಕ ಹಣಕಾಸು ಪರಾಮರ್ಶೆ ವೇಳೆ ಬಡ್ಡಿದರ ಯಥಾಸ್ಥಿತಿ ಕಾಯ್ದುಕೊಂಡು ಇಡೀ ಬಂಡವಾಳ ಮಾರುಕಟ್ಟೆಗೆ ಅಚ್ಚರಿ ಮತ್ತು ಆಘಾತ ಮೂಡಿಸಿತ್ತು. ರಿಸರ್ವ್ ಬ್ಯಾಂಕಿನ ಕರ್ತವ್ಯ ಹಣದುಬ್ಬರ ನಿಯಂತ್ರಣದಲ್ಲಿಡುವುದೇ ಹೊರತು ರುಪಾಯಿ ಸ್ಥಿರತೆ ಕಾಯ್ದುಕೊಳ್ಳುವುದಲ್ಲ. ರುಪಾಯಿ ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ತನ್ನ ಮೌಲ್ಯವನ್ನು ತಾನೇ ಕಂಡುಕೊಳ್ಳುತ್ತದೆ ಎಂದು ಹೇಳಿತ್ತು.

ಆರ್ಬಿಐನ ಈ ಹೇಳಿಕೆಯು ರುಪಾಯಿಯ ಮತ್ತಷ್ಟು ಕುಸಿತಕ್ಕೆ ಪ್ರೇರೇಪಿಸಿದಂತಿದೆ. ಅದು ಮಾರುಕಟ್ಟೆಯಲ್ಲೂ ಪ್ರತಿಬಿಂಬಿತವಾಗಿದೆ. ಮಂಗಳವಾರದ ವಹಿವಾಟಿನಲ್ಲಿ ಒಂದು ಹಂತದಲ್ಲಿ 73.86ಕ್ಕೆ ಏರಿ ಚೇತರಿಸಿಕೊಂಡಿದ್ದ ರುಪಾಯಿ, ನಂತರದ ವಹಿವಾಟಿನಲ್ಲಿ 74.40ಕ್ಕೆ ಕುಸಿಯಿತು. ದಿನವಿಡೀ ಅದೇ ಮಟ್ಟದಲ್ಲಿ ವಹಿವಾಟಾಗಿ ಸ್ಥಿರವಾಗಿದೆ.

52 ವಾರಗಳ ಗರಿಷ್ಠ ಮಟ್ಟ 63.37ಕ್ಕೆ ಹೋಲಿಸಿದರೆ, 74.40 ಈ ಅವಧಿಯಲ್ಲಿ 11.0.3 ರುಪಾಯಿಗಳಷ್ಟು ಕುಸಿತ ದಾಖಲಿಸಿದೆ. ಅಂದರೆ, ಶೇ.17.40ರಷ್ಟು ಕುಸಿದಿದೆ. 2018ರಲ್ಲಿ ಕುಸಿತದ ಪ್ರಮಾಣವು ಶೇ.16ರಷ್ಟಾಗಿದೆ. ಹಿಂದಿನ ವರ್ಷಗಳಲ್ಲಿನ ರುಪಾಯಿ ಮೌಲ್ಯವನ್ನು ಗಮನಿಸಿದರೆ, ಏಷ್ಯಾ ಸೇರಿದಂತೆ ಎಲ್ಲ ಉದಯಿಸುತ್ತಿರುವ ಮಾರುಕಟ್ಟೆಗಳಿಗೆ ಹೋಲಿಸಿದರೆ ಭಾರತದ ರುಪಾಯಿಗೆ ಹೆಚ್ಚು ಕುಸಿತ ದಾಖಲಿಸಿದಂತಾಗಿದೆ.

ಅಕ್ಟೋಬರ್ 3ರಂದು 86 ಡಾಲರ್ ಗಡಿ ದಾಟಿದ್ದ ಬ್ರೆಂಟ್ ಕ್ರೂಡ್ ಕೊಂಚ ಇಳಿದು, 84-85ರ ಡಾಲರ್ ಆಜುಬಾಜಿನಲ್ಲಿ ವಹಿವಾಟಾಗುತ್ತಿದೆ. ಈ ಇಳಿಕೆ ತಾತ್ಕಾಲಿಕವಾಗಿದ್ದು, ಮತ್ತೆ ಬ್ರೆಂಡ್ ಕ್ರೂಡ್ ತ್ವರಿತವಾಗಿ 90 ಡಾಲರ್ ಮುಟ್ಟುವ ಅಂದಾಜು ಮಾರುಕಟ್ಟೆ ತಜ್ಞರಲ್ಲಿದೆ. ಆಗ ಕುಸಿಯುತ್ತಿರುವ ರುಪಾಯಿ 75ರ ಮಟ್ಟವನ್ನು ದಾಟಿ 76-77ರ ವರೆಗೂ ಕುಸಿಯುವ ಸಾಧ್ಯತೆ ಇದೆ. ಈ ನಡುವೆ, ಭಾರತೀಯ ರಿಸರ್ವ್ ಬ್ಯಾಂಕ್ ಡಾಲರ್ ಬೇಡಿಕೆ ತಗ್ಗಿಸಲು ಪರ್ಯಾಯ ಕ್ರಮ ಕೈಗೊಂಡರೆ ಮಾತ್ರ ರುಪಾಯಿ ಕುಸಿತ ತಡೆಯಲು ಸಾಧ್ಯವಾಗಬಹುದು. ಮುಖ್ಯ ಪ್ರಶ್ನೆ ಎಂದರೆ, ಬ್ರೆಂಟ್ ಕ್ರೂಡ್ 90ರ ಆಜುಬಾಜಿಗೆ ಸಾಗಿದರೆ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ದರ ಎಲ್ಲಿಗೆ ಮುಟ್ಟಬಹುದು?

ಕೇಂದ್ರ ಸರ್ಕಾರ 1.50 ರುಪಾಯಿ ಮತ್ತು ತೈಲ ಮಾರಾಟ ಕಂಪನಿಗಳು 1 ರುಪಾಯಿ, ಒಟ್ಟು 2.50 ರುಪಾಯಿ ಪೆಟ್ರೋಲ್ ಮತ್ತು ಡಿಸೇಲ್ ದರ ಇಳಿಕೆಯ ನಂತರ ಮತ್ತೆ ಏರುಹಾದಿಯಲ್ಲಿ ಸಾಗಿದೆ. ಮಂಗಳವಾರ ಪೆಟ್ರೋಲ್ 23 ಪೈಸೆ ಮತ್ತು ಡಿಸೇಲ್ 29 ಪೈಸೆ ಏರಿಕೆ ಮಾಡಲಾಗಿದೆ.

ಈಗಾಗಲೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರಿಳಿತ ಇದ್ದಾಗಲೂ ಏಕಮುಖವಾಗಿ ದೇಶೀಯ ಮಾರುಕಟ್ಟೆಯಲ್ಲಿ ದರ ಏರುತ್ತಲೇ ಇದೆ. ಉದಾಹಣೆಗೆ, ಅಕ್ಟೋಬರ್ 3ರಂದು ಬ್ರೆಂಟ್ ಕ್ರೂಡ್ 86.29ಕ್ಕೆ ಜಿಗಿದಿತ್ತು. ಅಕ್ಟೋಬರ್ 8ರಂದು 83.91ಕ್ಕೆ ಕುಸಿಯಿತು. ಆದರೆ, ಈ ಹಂತದಲ್ಲಿ ಭಾರತದ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ದರ ಕುಸಿಯಲಿಲ್ಲ, ಬದಲಿಗೆ ಏರುಹಾದಿಯಲ್ಲಿಯೇ ಸಾಗಿವೆ.

ಇದನ್ನೂ ಓದಿ : ಮೋದಿ ಸರ್ಕಾರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ ಎಂಬುದಕ್ಕೆ ಇಲ್ಲಿದೆ ಪುರಾವೆ!

ಅಕ್ಟೋಬರ್ 5ರಂದು ಒಟ್ಟಾರೆ ಕಡಿತವಾಗಿದ್ದು 2.50 ರುಪಾಯಿ. ಅಕ್ಟೋಬರ್ 6ರಿಂದ 9ರವರೆಗೆ ನಾಲ್ಕು ದಿನಗಳಲ್ಲಿ ಡಿಸೇಲ್ ದರವನ್ನು ಪ್ರತಿನಿತ್ಯ ಸರಾಸರಿ 29 ಪೈಸೆಯಂತೆ ಏರಿಕೆ ಮಾಡಲಾಗಿದ್ದು, ನಾಲ್ಕು ದಿನಗಳ ಒಟ್ಟು ಏರಿಕೆ 1.16 ರುಪಾಯಿಗಳಾಗಿದೆ. ಇಡೀ ದೇಶವೇ ದರ ಕುಸಿತಕ್ಕಾಗಿ ಬೇಡಿಕೆ ಇಟ್ಟು ಹೋರಾಟ ಮಾಡಿ ರಾಷ್ಟ್ರವ್ಯಾಪಿ ಬಂದ್ ಮಾಡಿದರೂ ಕೇಂದ್ರ ತಗ್ಗಿಸಿದ್ದು 1.50 ರುಪಾಯಿ. ತೈಲ ಕಂಪನಿಗಳು ತಗ್ಗಿಸಿದ್ದು 1 ರುಪಾಯಿ.

ಈಗಾಗಲೇ ತೈಲ ಕಂಪನಿಗಳು ತಗ್ಗಿಸಿದ್ದ 1 ರುಪಾಯಿ ನಷ್ಟವನ್ನು ತುಂಬಿಕೊಂಡಿವೆ. ಏಕೆಂದರೆ ನಾಲ್ಕೇ ದಿನದಲ್ಲಿ 1.16 ಪೈಸೆ ಏರಿಕೆ ಆಗಿದೆ. ದರ ಏರಿಕೆ ಈಗಿನ ಪ್ರಮಾಣದಲ್ಲಿ ಮುಂದುವರಿದರೆ ಕೇಂದ್ರ ಸರ್ಕಾರ ಇಳಿಸಿದ 1.50 ರುಪಾಯಿ ಸಹ ಏಳು ವಹಿವಾಟು ದಿನಗಳಲ್ಲಿ ವಾಪಸು ಬರಲಿದೆ.

ಅಂದರೆ, ಕೇಂದ್ರ ಸರ್ಕಾರವು ಬಲಗೈಲಿ ಕೊಟ್ಟಂತೆ ಮಾಡಿ ಎಡಗೈಲಿ ಕಿತ್ತುಕೊಂಡಿದೆ. ಸಾಮಾನ್ಯವಾಗಿ ನಿತ್ಯದ ಡಿಸೇಲ್ ಏರಿಕೆ ಪ್ರಮಾಣವು 8ರಿಂದ 12 ಪೈಸೆ ಇರುತ್ತಿತ್ತು. ಕೇಂದ್ರ ಸರ್ಕಾರ ದರ ಇಳಿಕ ಮಾಡಿದ ನಂತರ ನಿತ್ಯವೂ 29 ಪೈಸೆ ಏರಿಕೆ ಮಾಡಲಾಗುತ್ತಿದೆ. ಗ್ರಾಹಕರಿಗೆ ಹೊರೆಯಾದರೂ ಪರವಾಗಿಲ್ಲ, ತ್ವರಿತವಾಗಿ ಬೊಕ್ಕಸ ತುಂಬಿಸಿಕೊಳ್ಳುವ ಅತಿಯಾಸೆ ಸರ್ಕಾರಕ್ಕೆ ಇದ್ದಂತಿದೆ!

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More