‘ನಕ್ಕೀರನ್’ ಪತ್ರಿಕೆ ಮೇಲೆ ಬಳಕೆಯಲ್ಲಿಲ್ಲದ ಸೆಕ್ಷನ್ 124 ಅಸ್ತ್ರ ಪ್ರಯೋಗ!

ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣಕ್ಕೆ ಸರ್ಕಾರಗಳು ಯತ್ನಿಸುತ್ತಲೇ ಇವೆ ಎನ್ನುವ ಆರೋಪ ಚಾಲ್ತಿಯಲ್ಲಿದೆ. ಇದೀಗ ‘ನಕ್ಕೀರನ್’ ಪತ್ರಿಕೆ ಸಂಪಾದಕ ರಾಜಗೋಪಾಲ್ ವಿರುದ್ದ ಐಪಿಸಿ ಸೆಕ್ಷನ್ 124ರಡಿಯಲ್ಲಿ ಪ್ರಕರಣ ದಾಖಲಿಸಿರುವ ಚೆನ್ನೈ ಪೊಲೀಸರ ಕ್ರಮಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ

ತಮಿಳುನಾಡು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ವಿರುದ್ಧ ಮಾನಹಾನಿ ಬರಹಗಳನ್ನು ಪ್ರಕಟಿಸಿದ ಹಿನ್ನೆಲೆಯಲ್ಲಿ ಹಿರಿಯ ಪತ್ರಕರ್ತ ಹಾಗೂ ‘ನಕ್ಕೀರನ್’ ಪತ್ರಿಕೆ ಪ್ರಕಾಶಕ ನಕ್ಕೀರನ್ ಗೋಪಾಲ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ತಮಿಳಿನ ಜನಪ್ರಿಯ ವಾರಪತ್ರಿಕೆ ‘ನಕ್ಕೀರನ್’ ಸಂಪಾದಕರಾಗಿರುವ ನಕ್ಕೀರನ್ ರಾಜಗೋಪಾಲ್, ಅವರನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಈ ನಡುವೆ, ಬಂಧಿತ ಗೋಪಾಲ್ ಅವರನ್ನು ತಮ್ಮ ವಶಕ್ಕೆ ನೀಡಬೇಕು ಎಂಬ ಪೊಲೀಸರ ಮನವಿಯನ್ನು ನ್ಯಾಯಾಲಯ ತೀರಸ್ಕರಿಸಿದ್ದು, ಇದಕ್ಕೆ ಹರ್ಷ ವ್ಯಕ್ತಪಡಿಸಿರುವ ಗೋಪಾಲ್, ಇದು ಸತ್ಯಕ್ಕೆ ಸಂದ ಜಯ ಎಂದಿದ್ದಾರೆ.

ಏನಿದು ಪ್ರಕರಣ?

ಮಧುರೈ ಕಾಮರಾಜ್ ವಿಶ್ವವಿದ್ಯಾಲಯದ ಸೆಕ್ಸ್ ಹಗರಣವೊಂದರಲ್ಲಿ ಬಂಧನಕ್ಕೊಳಗಾಗಿರುವ ಉಪನ್ಯಾಸಕಿ ನಿರ್ಮಲಾದೇವಿ, ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್‌ರನ್ನು ಭೇಟಿಯಾಗಿದ್ದರು. ಈ ಕುರಿತಂತೆ ಬಂಧನಕ್ಕೊಳಾಗಾಗಿರುವ ನಿರ್ಮಲಾ ದೇವಿ, ತಾವು ಕೆಲವು ಬಾರಿ ರಾಜ್ಯಪಾಲರನ್ನು ಭೇಟಿಯಾಗಿರುವುದಾಗಿ ಪೊಲೀಸ್ ವಿಚಾರಣೆ ವೇಳೆ ಹೇಳಿಕೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ರಾಜ್ಯಪಾಲ ಬನ್ವಾರಿಲಾಲ್ ಪುರೊಹಿತ್ ಅವರ ವಿಚಾರಣೆ ನಡೆಸಿಲ್ಲ ಎಂದು ಗೋಪಾಲ್ ತಮ್ಮ ಲೇಖನದಲ್ಲಿ ಬರೆದಿದ್ದರು. ಈ ಸಾಲುಗಳು ಮಾನಹಾನಿಕರ ಮತ್ತು ಅವಹೇಳನಕಾರಿಯಾಗಿವೆ ಎಂದು ರಾಜಭವನ ನೀಡಿರುವ ದೂರಿನ ಹಿನ್ನೆಲೆಯಲ್ಲಿ, ರಾಜಗೋಪಾಲ ಅವರನ್ನು ಐಪಿಸಿ ಸೆಕ್ಷನ್ 124 ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ಚೆನ್ನೈ ಪೊಲೀಸರು ತಿಳಿಸಿದ್ದಾರೆ.

ಈ ನಡುವೆ, ರಾಜಗೋಪಾಲ್ ಬಂಧನದ ಕುರಿತಂತೆ ಮಾಹಿತಿ ನೀಡಿರುವ ಗೋಪಾಲ್ ಅವರ ವಕೀಲ ಡಿ ರವಿಕುಮಾರ್, ಗೋಪಾಲ್ ಅವರ ಪ್ರಕರಣ ಸೆಕ್ಷನ್ 124ರಡಿಯಲ್ಲಿ ಬರುವುದಿಲ್ಲ. ಇದು ಅಭಿವ್ಯಕ್ತಿ ಸ್ವಾತಂಜತ್ರ್ಯಹರಣ ಎಂದಿದ್ದಾರೆ.

ದಂಡಸಂಹಿತೆ 124 ಏನು ಹೇಳುತ್ತದೆ?

ಭಾರತೀಯ ದಂಡಸಂಹಿತೆ 124, "ರಾಜ್ಯಪಾಲ ಹಾಗೂ ರಾಷ್ಟ್ರಪತಿಗಳಿಗೆ ವಿಶೇಷ ಅವಕಾಶವನ್ನು ನೀಡಿದ್ದು, ರಾಜ್ಯಪಾಲ ಅಥವಾ ರಾಷ್ಟ್ರಪತಿಗಳ ಮೇಲೆ ನಡೆಯುವ ದೈಹಿಕ ಹಲ್ಲೆ ಅಥವ ದಾಳಿ ಪ್ರಕರಣವನ್ನು ಈ ಸೆಕ್ಷನ್ ಅಡಿಯಲ್ಲಿ ದಾಖಲಿಸಬಹುದಾಗಿದೆ. ಆದರೆ, ಪತ್ರಕರ್ತ ರಾಜಗೋಪಾಲ್ ಅವರು ರಾಜ್ಯಪಾಲರ ಮೇಲೆ ಯಾವುದೇ ಹಲ್ಲೆ ನಡೆಸಿಲ್ಲ; ಬದಲಿಗೆ, ಲೇಖನ ಪ್ರಕಟಿಸಿದ್ದಾರಷ್ಟೆ. ಹೀಗಾಗಿ, ಈ ಸೆಕ್ಷನ್ ಅಡಿ ಅವರ ವಿರುದ್ಧ ಪ್ರಕರಣ ದಾಖಲಿಸಿರುವುದು ಸರಿಯಲ್ಲ. ಒಂದು ವೇಳೆ, ತಮ್ಮ ವಿರುದ್ಧ ಬರೆದ ಲೇಖನ ಮಾನಹಾನಿಕರ ಎಂದೆನಿಸಿದರೆ ರಾಜ್ಯಪಾಲರು ಮಾನನಷ್ಟ ಮೊಕದ್ದಮೆಯನ್ನಷ್ಟೇ ದಾಖಲಿಸಬಹುದಾಗಿದೆ. ಅಂದಹಾಗೆ, ಐಪಿಸಿ ಸೆಕ್ಷನ್ 124ರಡಿಯಲ್ಲಿ ದಾಖಲಾದ ಪ್ರಕರಣ ಸಾಬೀತಾದರೆ ಅಂತಹವರ ವಿರುದ್ಧ 7 ವರ್ಷಗಳ ಗರಿಷ್ಠ ಜೈಲುಶಿಕ್ಷೆ ಹಾಗೂ ದಂಡ ವಿಧಿಸಬಹುದಾಗಿದೆ. ಅಲ್ಲದೆ, ಇದು ಜಾಮೀನುರಹಿತ ಪ್ರಕರಣವಾಗಿದೆ.

ಆದರೆ, ‘ನಕ್ಕೀರನ್’ ಪ್ರಕರಣ ಇದರ ವ್ಯಾಪ್ತಿಗೆ ಬರುವುದಿಲ್ಲ. ಅವರು ಕೇವಲ ಲೇಖನ ಮಾತ್ರ ಪ್ರಕಟಿಸಿದ್ದಾರೆ. ದೈಹಿಕ ಹಲ್ಲೆಯಂತಹ ಪ್ರಕರಣ ಇಲ್ಲಿ ನಡೆದಿಲ್ಲ. ಹೀಗಾಗಿ, ಮೇಲ್ನೋಟಕ್ಕೆ ಸಾಬೀತಾಗುವಂತೆ ರಾಜಗೋಪಾಲ್ ಅವರನ್ನು ಉದ್ದೇಶಪೂರ್ವಕವಾಗಿ ಹಾಗೂ ಅವರಿಗೆ ಜಾಮೀನು ಸಿಗಬಾರದು ಎಂಬ ಕಾರಣಕ್ಕಾಗಿ ಐಪಿಸಿ ಸೆಕ್ಷನ್ 124ರಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂಬುದು ವಕೀಲ ಡಿ ರವಿಕುಮಾರ್ ಆರೋಪ.

ಅತಿ ಕಡಿಮೆ ಬಳಕೆಯಾದ ಸೆಕ್ಷನ್ 124

ಭಾರತದಲ್ಲಿ ಐಪಿಸಿ ಸೆಕ್ಷನ್ 124 ಬಳಕೆಯಾಗಿರುವುದು ತೀರಾ ವಿರಳ. ಅಂತಹ ಕೆಲವೇ ಕೆಲವು ಪ್ರಕರಣಗಳಲ್ಲಿ ಇದೀಗ ರಾಜಗೋಪಾಲ್ ಪ್ರಕರಣವೂ ಒಂದಾಗಿದೆ. ಅಧಿಕಾರಿಗಳ ಸಭೆಯಲ್ಲಿ ಅಡಚಣೆ ಉಂಟುಮಾಡುತ್ತಿರುವ ಡಿಎಂಕೆ ಪಕ್ಷದ ಸದಸ್ಯರನ್ನು ಹತ್ತಿಕ್ಕುವ ಸಲುವಾಗಿ ಸೆಕ್ಷನ್ 124 ರೀತಿಯ ಕ್ರಮ ಕೈಗೊಳ್ಳಲು ಚಿಂತನೆ ನಡೆಸುತ್ತಿರುವುದಾಗಿ ಕಳೆದ ವರ್ಷ ರಾಜ್ಯಪಾಲರು ಹೇಳಿದ್ದರು.

ರಾಜಗೋಪಾಲ್ ಬಂಧನಕ್ಕೆ ಡಿಎಂಕೆ ಪಕ್ಷದ ಮುಖ್ಯಸ್ಥ ಎಂ ಕೆ ಸ್ಟಾಲಿನ್ ಖಂಡನೆ ವ್ಯಕ್ತಪಡಿಸಿದ್ದು, “ಈ ಹಿಂದೆ ಪ್ರಚೋದನಕಾರಿ ಭಾಷಣ ಮಾಡಿದ ಬಿಜೆಪಿ ನಾಯಕ ಹೆಚ್ ರಾಜಾ ಅವರನ್ನು ಇದುವರೆಗೂ ಯಾಕೆ ಬಂಧಿಸಿಲ್ಲ? ಮಹಿಳಾ ಪತ್ರಕರ್ತರ ವಿರುದ್ಧ ಅವಹೇಳನಕಾರಿಯಾಗಿ ಮಾತಾಡಿದ್ದ ಬಿಜೆಪಿ ನಾಯಕ ಎಸ್ ವಿ ಇ ಶೇಖರ್ ಅವರನ್ನು ಯಾಕೆ ಇನ್ನೂ ಸುಮ್ಮನೆ ಬಿಟ್ಟಿದ್ದೀರಿ?” ಎಂದು ಪ್ರಶ್ನಿಸಿದ್ದಾರೆ.

ಅಂದಹಾಗೆ, ತಮಿಳುನಾಡು ಸರ್ಕಾರವು ಮಾಧ್ಯಮಗಳನ್ನು ಬೆದರಿಸುವ ಸಲುವಾಗಿ ಮಾನನಷ್ಟ ಮೊಕದ್ದಮೆಯನ್ನು ಅಸ್ತ್ರವನ್ನಾಗಿ ಬಳಸಿಕೊಂಡಿರುವ ಬಗ್ಗೆ ದೊಡ್ಡ ಇತಿಹಾಸವೇ ಇದೆ. ಜಯಲಲಿತಾ ಅವರು ಮುಖ್ಯಮಂತ್ರಿ ಆಗಿದ್ದಾಗ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳ ವಿರುದ್ಧ ನೂರಾರು ಪ್ರಕರಣಗಳನ್ನು ದಾಖಲಿಸಲಾಗಿತ್ತು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More