ವಿರೋಧಿಸಿದರೆ ಕೇಳಲಿಲ್ಲ, ಬಾಂಬ್‌ ಹಾಕಿದೆವು; ಸನಾತನ ಸಂಸ್ಥೆ ಸದಸ್ಯರ ಉಗ್ರವಾದ!

ಸೋಮವಾರ ಸಂಜೆ ‘ಇಂಡಿಯಾ ಟುಡೇ’ ಪ್ರಸಾರ ಮಾಡಿದ ಸ್ಟಿಂಗ್‌ ಆಪರೇಷನ್‌ ದೇಶವನ್ನೇ ಬೆಚ್ಚಿಬೀಳಿಸಿದೆ. ಚಿಂತಕರ ಹತ್ಯೆಯಲ್ಲಿ ಕೈವಾಡವಿದೆ ಎಂಬ ಆರೋಪ ಎದುರಿಸುತ್ತಿರುವ ಸನಾತನ ಸಂಸ್ಥೆ ಮುಂಬೈನ ೨೦೦೮ರ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿತ್ತು ಎಂಬುದನ್ನು ಈ ಸ್ಟಿಂಗ್‌ ಬಯಲು ಮಾಡಿದೆ!

ಸನ್ನಡತೆ, ದೈವೀಕತೆಗಳನ್ನು ಒಳಗೊಂಡ ಅಧ್ಯಾತ್ಮಿಕತೆಯನ್ನು ಬೋಧಿಸಿ ಮೋಕ್ಷದತ್ತ ಒಯ್ಯುವುದು ತನ್ನ ಗುರಿ ಎಂದು ಸನಾತನ ಸಂಸ್ಥೆ ಎಂಬ ಹಿಂದೂ ಸಂಘಟನೆ ಹೇಳಿಕೊಳ್ಳುತ್ತದೆ. ಎರಡು ದಶಕಗಳಿಗೂ ಹೆಚ್ಚು ಕಾಲದ ಇತಿಹಾಸವಿರುವ ಈ ಸಂಸ್ಥೆ ಕಳೆದೊಂದು ವರ್ಷದಿಂದ ದೇಶದ ಪ್ರಮುಖ ಚಿಂತಕರು, ಹೋರಾಟಗಾರರನ್ನು ಕೊಂದ ಆರೋಪವನ್ನು ಎದುರಿಸುತ್ತಿದೆ. ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕಗಳಲ್ಲಿ ಇದು ನಡೆಸಿರುವ ಚಟುವಟಿಕೆಗಳು ಆತಂಕ ಹುಟ್ಟಿಸುತ್ತಲೇ ಬಂದಿವೆ.

ಮಹಾರಾಷ್ಟ್ರದ ವಿಚಾರವಂತರಾದ ದಾಬೋಲ್ಕರ್‌, ಪನ್ಸಾರೆ, ಕರ್ನಾಟಕದ ಎಂ ಎಂ ಕಲಬುರ್ಗಿ ಹಾಗೂ ಪತ್ರಕರ್ತೆ ಗೌರಿ ಲಂಕೇಶ್‌ ಅವರ ಹತ್ಯೆಯಲ್ಲೂ ಈ ಸಂಸ್ಥೆ ಹೆಸರು ಕೇಳಿಬಂದಿದೆ. ಈ ಸಂಘಟನೆಯ ಸದಸ್ಯರು ಆರೋಪಿಗಳಾಗಿ ಬಂಧಿತರಾಗಿದ್ದಾರೆ. ಈ ಸಂಸ್ಥೆ ೨೦೦೮ರಲ್ಲಿ ಮುಂಬೈನ ಪನ್‌ವೇಲ್‌ ಥಿಯೇಟರ್‌ ಮತ್ತು ಥಾಣೆಯಲ್ಲಿ ನಡೆದ ಬಾಂಬ್‌ ಸ್ಫೋಟದಲ್ಲಿ ಪಾಲ್ಗೊಂಡಿತ್ತು ಎಂಬುದನ್ನು ಸೋಮವಾರ ‘ಇಂಡಿಯಾ ಟುಡೇ’ ಪ್ರಸಾರ ಮಾಡಿದ ಸ್ಟಿಂಗ್‌ ಆಪರೇಷನ್‌ ಬಯಲು ಮಾಡಿದೆ. ಈ ಮೂಲಕ, ಸನಾತನ ಹಿಂದೂ ಸಂಸ್ಥೆ ಆಧ್ಯಾತ್ಮಿಕ ಚಟುವಟಿಕೆಗಳ ಸೋಗಿನಲ್ಲಿ ಉಗ್ರವಾದಿ ಚಟುವಟಿಕೆಗಳನ್ನು ನಡೆಸುತ್ತಿದೆಯೇ ಎಂಬ ಅನುಮಾನವನ್ನು ಬಲವಾಗಿಸಿದೆ.

ಮುಂಬೈನ ಥಿಯೇಟರ್‌ವೊಂದರಲ್ಲಿ ೨೦೦೮ರಲ್ಲಿ ಬಾಂಬ್‌ ಸ್ಫೋಟ ನಡೆದಿದ್ದು ನೆನಪಿರಬಹುದು. ಮೆಟ್ರೊ ಸಿನಿಮಾ ಹಾಲ್‌ ಹೊರಗೆ ಬಾಂಬ್‌ ಸ್ಫೋಟಿಸಲು ಕಾರಣವಾಗಿದ್ದ ಇಬ್ಬರು ಸನಾತನ ಸಂಸ್ಥೆಯ ಸದಸ್ಯರು ಕ್ಯಾಮೆರಾ ಎದುರು ತಮ್ಮ ಪಾಲ್ಗೊಳ್ಳುವಿಕೆಯನ್ನು ಹಂಚಿಕೊಂಡಿದ್ದಾರೆ.

ಹಿಂದೂ ಧರ್ಮಕ್ಕೆ ವಿರೋಧಿಯಾದ ವಿಚಾರಗಳನ್ನು ಬಿತ್ತರಿಸುತ್ತಿದ್ದ ಸಿನಿಮಾ ಹಾಗೂ ನಾಟಕಗಳನ್ನು ವಿರೋಧಿಸಿ ಈ ಬಾಂಬ್‌ ಸ್ಫೋಟಿಸಲಾಗಿತ್ತು ಎಂದು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ ಅಂದೇ ಸನಾತನ ಧರ್ಮದ ವಿರುದ್ಧ ಚಾರ್ಜ್‌ ಶೀಟ್‌ ದಾಖಲಿಸಿತ್ತು. ಆದರೆ ಸನಾತನ ಸಂಸ್ಥೆ ಇದನ್ನು ನಿರಾಕರಿಸುತ್ತಲೇ ಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸನಾತನ ಸಂಸ್ಥೆಯ ೪೫ ವರ್ಷದ ಮಂಗೇಶ್‌ ದಿನಕರ್‌ ನಿಕಮ್‌ ಎಂಬಾತನನ್ನು ಬಂಧಿಸಲಾಗಿತ್ತಾದರೂ ಟ್ರಯಲ್‌ ಕೋರ್ಟ್‌ ನಿರ್ದೋಷಿ ಎಂದು ಹೇಳಿತ್ತು. ಇದೇ ಪ್ರಕರಣದಲ್ಲಿ ಕೇಳಿಬಂದಿದ್ದ ಮತ್ತೊಂದು ಹೆಸರು, ೫೮ ವರ್ಷದ ಹರಿಬಾವು ಕೃಷ್ಣಾ ದಿವೇಕರ್‌.

ಈ ಇಬ್ಬರ ಪಾಲ್ಗೊಳ್ಳುವಿಕೆಯನ್ನು ಆಗ ಸಾಬೀತು ಮಾಡಲಾಗಿರಲಿಲ್ಲ. ಆದರೆ ‘ಇಂಡಿಯಾ ಟುಡೆ’ಯ ಈ ಸ್ಟಿಂಗ್‌ನಲ್ಲಿ ಈ ಇಬ್ಬರು ಮುಂಬೈ ಬಾಂಬ್‌ ಸ್ಫೋಟದಲ್ಲಿ ಸಕ್ರಿಯವಾಗಿದ್ದನ್ನು ಸ್ವತಃ ಒಪ್ಪಿಕೊಂಡಿದ್ದಾರೆ.

ಮಂಗೇಶ್‌ ದಿನಕರ್‌ ನಿಕಮ್‌ ಹೇಳಿರುವ ಮಾತುಗಳಿವು

  • ವಾಶಿಯಲ್ಲಿ ಬಾಂಬ್‌ ಇಟ್ಟು ಬಂದಿದ್ದು ನಾನೇ.
  • ವಾಶಿಯಲ್ಲಿ ನಾಟಕ ಮಾಡುತ್ತಿದ್ದ ಜನ ನಮ್ಮ ದೇವ-ದೇವತೆಯರನ್ನು ಅಪಮಾನ ಮಾಡುತ್ತಿದ್ದರು. ಅದನ್ನು ನಿಲ್ಲಿಸಬೇಕಿತ್ತು. ಅದಕ್ಕಾಗಿ ನಾವೀ ಪ್ರಯತ್ನ ಮಾಡಿದೆವು. ಅದರಾಚೆಗೆ ಏನೂ ಇಲ್ಲ. ಈ ಘಟನೆಯಲ್ಲಿ ನಾನು ಭಾಗಿಯಾಗಿದ್ದೆ.
  • ನಾವು ನಾಟಕವನ್ನು ವಿರೋಧಿಸಿದೆವು. ಅದರಿಂದ ಏನೂ ಆಗಲಿಲ್ಲ. ಅವರನ್ನು ಹೆದರಿಸಿ ನಾಟಕವನ್ನು ನಿಲ್ಲಿಸುವ ಪ್ರಯತ್ನವನ್ನು ಮಾಡಿದೆವು. ಅದಕ್ಕಾಗಿ ಹೀಗೆ ಮಾಡಿದೆವು.
  • ಪನವೆಲ್‌ ಆಶ್ರಮಕ್ಕೆ ಆಗಾಗ ಬಂದುಹೋಗುತ್ತಿದ್ದೆ. ನಾನು ಮನೆಯಲ್ಲೇ ವಾಸ ಮಾಡುತ್ತಿದ್ದೆ. ಆದರೆ ಆಶ್ರಮದಲ್ಲಿ ಹೊಸಬರ ಪರಿಚವಾಯಿತು.

ಹೀಗೆ ಹೇಳುವ ಮಂಗೇಶ್‌ ದಿನಕರ್‌ ನಿಕಮ್‌, ೨೦೦೦ ಇಸವಿಯಿಂದ ಸನಾತನ ಸಂಸ್ಥೆಯ ಅನುಯಾಯಿ. ತನ್ನನ್ನು ಸನಾತನ ಸಂಸ್ಥೆಯ ಸಾಧಕ ಎಂದು ಹೇಳಿಕೊಳ್ಳುತ್ತಾರೆ.

ಹರಿಬಾವು ಹೇಳಿದ ಮಾತುಗಳು

ನಿಕಮ್‌ನಂತೆಯೇ ಬಾಂಬ್‌ ಸ್ಫೋಟದ ಸಂಚಿನಲ್ಲಿ ಭಾಗಿಯಾದ ಇನ್ನೊಬ್ಬ ಸನಾತನ ಸಂಸ್ಥೆಯ ಅನುಯಾಯಿ ಹರಿಬಾವು ಕೃಷ್ಣ ದಿವೇಕರ್‌. ನಿಕಮ್‌ ಅವರಿಂಗಿಂತ ಮುಖ್ಯಪಾತ್ರವನ್ನೇ ನಿರ್ವಹಿಸಿದ್ದಾಗಿ ಹೇಳಿಕೊಂಡಿದ್ದಾರೆ. ಆದರೆ ಇವರ ಭಾಗಿದಾರಿಕೆಯನ್ನು ತನಿಖಾ ಸಂಸ್ಥೆಗಳನ್ನು ಸಾಬೀತು ಮಾಡಲು ಸೋತಿವೆ ಎಂಬುದನ್ನೂ ಸ್ವತಃ ದಿವೇಕರ್‌ ಹೇಳಿಕೊಂಡಿದ್ದಾರೆ.

  • ಪೊಲೀಸರು ನಮ್ಮ ಮನೆಗೆ ಪರಿಶೀಲನೆಗೆ ಬಂದಿದ್ದರು. ಆಗ ನನ್ನ ಹತ್ತಿರ ಇದ್ದುದೆಲ್ಲವನ್ನೂ ಕೊಟ್ಟೆ.
  • ನನ್ನ ಬಳಿ ಒಂದೆರಡು ರಿವೋಲ್ವರ್‌ಗಳಿದ್ದವು, ೨೦ ಜಿಲೆಟಿನ್‌ ಕಡ್ಡಿಗಳು ಮತ್ತು ಡಿಜಿಟಲ್‌ ಮೀಟರ್‌ಗಳಿದ್ದವು. ಕೊಟ್ಟುಬಿಟ್ಟೆ. ೨೩ ಸ್ಫೋಟಕಗಳೂ ಇದ್ದವು.
  • ೫-೬ ದಿನ ನಾವೇ ಸ್ಫೋಟಕಗಳನ್ನು ಇಟ್ಟುಕೊಂಡಿದ್ದವು.

ಈ ಸಂಚಿನಲ್ಲಿ ರಮೇಶ್‌ ಹನುಮಂತ್‌ ಗಡಕರಿ, ಮಂಗೇಶ್‌ ದಿನಕರ್‌ ನಿಕಮ್‌, ವಿಕ್ರಮ್‌ ವಿನಯ್‌ ಭಾವೆ, ಸಂತೋಷ್‌ ಸೀತಾರಾಮ್‌ ಅಂಗರೆ, ಹರಿಬಾವು ಕೃಷ್ಣ ದಿವೇಕರ್‌ ಮತ್ತು ಹೇಮಂತ್ ತುಕಾರಾಮ್‌ ಚಾಲ್‌ಕೆ ಪಾಲ್ಗೊಂಡಿದ್ದರು ಎಂಬುದು ಸ್ಟಿಂಗ್‌ನಿಂದ ತಿಳಿದುಬರುತ್ತದೆ. ಆದರೆ ಈ ಪೈಕಿ, ಗಡಕರಿ ಮತ್ತು ಭಾವೆ ದೋಷಿ ಎಂದು ಟ್ರಯಲ್‌ ಕೋರ್ಟ್‌ ತೀರ್ಪು ನೀಡಿ, ಉಳಿದವರನ್ನು ನಿರ್ದೋಷಿ ಎಂದಿತ್ತು.

ಈ ವಿಶೇಷ ಸುದ್ದಿ ಪ್ರಕಟಣೆ ವಿಷಯದಲ್ಲೂ ಸನಾತನ ಸಂಸ್ಥೆಯಿಂದ ‘ಇಂಡಿಯಾ ಟುಡೆ’ ಬೆದರಿಕೆ ಎದುರಿಸಿದ್ದನ್ನು ವಾಹಿನಿಯ ಹಿರಿಯ ಸಂಪಾದಕ ರಾಹುಲ್‌ ಕನ್ವಾಲ್‌ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ನಿಷೇಧಕ್ಕೆ ಹೆಚ್ಚಿದ ಒತ್ತಡ

ಸನಾತನ ಸಂಸ್ಥೆಯು ಚಿಂತಕರು, ವಿಚಾರವಾದಿಗಳ ಕೊಲೆ, ಹಲ್ಲೆಗಳನ್ನು ನಡೆಸುತ್ತಿರುವುದು, ಭಯೋತ್ಪಾದನೆ ಹರಡುವ ಕೆಲಸದಲ್ಲಿ ತೊಡಗಿರುವುದನ್ನು ವಿರೋಧಿಸಿ, ಭಾರತ್‌ ಬಚಾವೋ ಆಂದೋಲನ ಸೇರಿದಂತೆ ಹಲವು ಸಂಘಟನೆಗಳು ಶಾಶ್ವತ ನಿಷೇಧಕ್ಕೆ ಆಗ್ರಹಿಸಿದ್ದವು. ಬಲಪಂಥೀಯ ಉಗ್ರವಾದ ತೀವ್ರವಾಗುತ್ತಿದ್ದು, ಕೇಂದ್ರ ಸರ್ಕಾರ ಸನಾತನ ಸಂಸ್ಥೆಯ ನಿಷೇಧಕ್ಕೆ ಮುಂದಾಗಬೇಕು ಎಂದು ಒತ್ತಾಯ ಮಾಡಲಾಗಿತ್ತು.

ಕಳೆದ ಆಗಸ್ಟ್‌ನಲ್ಲಿ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷ, ಕಾಂಗ್ರೆಸ್‌ ಪಕ್ಷಗಳು ಹೋರಾಟಗಾರರೊಂದಿಗೆ ದನಿಗೂಡಿಸಿದ್ದವು. ಮಹಾರಾಷ್ಟ್ರ ಗೃಹ ಮಂತ್ರಿ ದೀಪಕ್‌ ಕೇಸರ್‌ಕರ್‌ ಕೇಂದ್ರ ಸರ್ಕಾರಕ್ಕೆ ಸನಾತನ ಸಂಸ್ಥೆಯ ನಿಷೇಧಕ್ಕೆ ಶಿಫಾರಸು ಮಾಡಿ ಪ್ರಸ್ತಾವನೆ ಕಳಿಸುವುದಾಗಿಯೂ ಆಶ್ವಾಸನೆ ನೀಡಿದ್ದರು.

ಇದನ್ನೂ ಓದಿ : ದೈವ ಸಾಮ್ರಾಜ್ಯದ ಕನಸು ಕಾಣುತ್ತಿರುವ ಉಗ್ರ ಹಿಂದು ಸಂಘಟನೆ ಸನಾತನ ಸಂಸ್ಥೆ

‘ಇಂಡಿಯಾ ಟುಡೇ’ ಸ್ಟಿಂಗ್‌ ವಿಡಿಯೋಗಳು ಬಯಲಾಗುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್‌ ಚೌಹಾಣ್ ಕೂಡ, "ಈ ಸಂಘಟನೆಗೆ ರಾಜಕೀಯ ಪೋಷಣೆ ಇದೆ. ನಾಲ್ಕು ಕೊಲೆಗಳನ್ನು ಮಾಡಿರುವ, ಥಾಣೆ ಜಿಲ್ಲೆಯಲ್ಲಿ ಬಾಂಬ್‌ ಕಾರ್ಖಾನೆಯನ್ನು ಹೊಂದಿರುವ, ಗೋವಾದಲ್ಲಿ ಬಾಂಬ್‌ಗಳನ್ನು ತಯಾರು ಮಾಡಿರುವ ಹಿನ್ನೆಲೆಯನ್ನು ಈ ಸಂಸ್ಥೆ ಹೊಂದಿದೆ. ಇದನ್ನು ಕೂಡಲೇ ನಿಷೇಧಿಸಬೇಕು,'' ಎಂದು ಆಗ್ರಹಿಸಿದ್ದಾರೆ. "ಈ ಸಂಘಟನೆಗಳು-ಗೌಪ್ಯ ಹತ್ಯಾ ಸಮಾಜಗಳು- ಹೇಗೆ ಅಸ್ತಿತ್ವದಲ್ಲಿವೆ ಎಂದು ಅಚ್ಚರಿಯಾಗುತ್ತಿದೆ! ಯಾರು ಸಂಘಟನೆಗಳನ್ನು ರಕ್ಷಿಸುತ್ತಿದ್ದಾರೆ?'' ಎಂದು ಚೌಹಾಣ್ ಪ್ರಶ್ನಿಸಿದ್ದಾರೆ. ಗೋವಾ ಸರ್ಕಾರ ಕೂಡ ಸನಾತನ ಸಂಸ್ಥೆಯ ನಿಷೇಧಕ್ಕೆ ಮಂಗಳವಾರ ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.

ಪ್ರಧಾನಿ ನರೇಂದ್ರ ಮೋದಿ ಮುಂದಿರುವ ಅತಿದೊಡ್ಡ ಸವಾಲು ಯಾವುದು ಗೊತ್ತೇ?
ಶ್ರೀಸಾಮಾನ್ಯರ ಸ್ವಾಮೀಜಿ ಎಂದೆನಿಸಿಕೊಂಡ ತೋಂಟದಾರ್ಯ ಶ್ರೀಗಳು ಇನ್ನಿಲ್ಲ
ಸೂಪರ್ಟೆಕ್ ₹600 ಕೋಟಿ ಸಾಲ ಮರುಪಾವತಿ ವೈಫಲ್ಯ; ಕಾದಿದೆ ಮತ್ತಷ್ಟು ಸಂಕಷ್ಟ?
Editor’s Pick More