ಇಂದಿನ ಡೈಜೆಸ್ಟ್ | ಇಂದು ಗಮನಿಸಬೇಕಾದ 7 ಪ್ರಮುಖ ಸುದ್ದಿಗಳು

ಇಂದು ಓದಲೇಬೇಕಾದ ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳು

ಪ್ರಧಾನಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

“ಪ್ರಧಾನಿ ಮೋದಿ ಅವರು ಕಳೆದ ನಾಲ್ಕೂವರೆ ವರ್ಷಗಳಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದುಕೊಂಡು ಮಾಡಿದ್ದೇನು? ದೇಶದ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂ.ಗಳನ್ನು ವಂಚಿಸಿ ವಿದೇಶಕ್ಕೆ ಪಲಾಯನ ಮಾಡಿರುವ ನೀರವ್‌ ಮೋದಿ, ಮೆಹುಲ್‌ ಚೋಕ್ಸಿ, ವಿಜಯ್‌ ಮಲ್ಯ, ಲಲಿತ್‌ ಮೋದಿ, ಕಾರ್ಪೋರೇಟ್ ಕಂಪೆನಿಗಳ ಸಾಲ ಮನ್ನಾ ಮಾಡಿದ್ದು ಬಿಟ್ಟರೆ, ದೇಶದ ಬಡರೈತರಿಗೆ ಹಾಗೂ ಯುವಕರಿಗೆ ಯಾವುದೇ ರೀತಿಯ ನೆರವು ನೀಡಿಲ್ಲ,” ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ದೂರಿದ್ದಾರೆ. ರಾಜಸ್ಥಾನದಲ್ಲಿ ನಡೆದ ಚುನಾವಣಾ ಪ್ರಚಾರ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್, "ಪ್ರಧಾನಿ ಮೋದಿ ಅವರು ದಿನದ 24 ತಾಸು ಕೂಡ ಟಿವಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ; ಎಲ್ಲೆಂದರಲ್ಲಿ ಅವರ ಪೋಸ್ಟರ್‌ಗಳು ಕಂಡುಬರುತ್ತಿವೆ. ಇವೆಲ್ಲವೂ ಉಚಿತವಾಗಿ ನಡೆಯುತ್ತಿಲ್ಲ. ಬದಲಿಗೆ, ಪ್ರಧಾನಿಯವರು ಇದಕ್ಕಾಗಿ ಕೋಟ್ಯಂತರ ರೂಪಾಯಿ ವ್ಯಯ ಮಾಡುತ್ತಾರೆ,” ಎಂದು ದೂರಿದ್ದಾರೆ.

ಉಪಚುನಾವಣೆಗೆ ಬಿಜೆಪಿಯಿಂದ ಬಿ ವೈ ರಾಘವೇಂದ್ರ, ಜಿ ಶಾಂತಾ, ಶ್ರೀಕಾಂತ ಕುಲಕರ್ಣಿ ಅಂತಿಮ

ಸಂಘಟನಾ ದೃಷ್ಟಿಯಿಂದ ಹಳೆಯ ಮೈಸೂರು ಭಾಗದಲ್ಲಿ ದುರ್ಬಲವಾಗಿರುವ ಬಿಜೆಪಿಯು ಮಂಡ್ಯ ಲೋಕಸಭೆ ಮತ್ತು ರಾಮನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಿಸದೆ ಶಿವಮೊಗ್ಗ ಮತ್ತು ಬಳ್ಳಾರಿ ಲೋಕಸಭಾ ಮತ್ತು ಜಮಖಂಡಿ ವಿಧಾನಸಭಾ ಕ್ಷೇತ್ರಗಳಿಗೆ ಹುರಿಯಾಳುಗಳನ್ನು ಘೋಷಿಸಿದೆ. ನಿರೀಕ್ಷೆಯಂತೆ ಶಿವಮೊಗ್ಗಕ್ಕೆ ಬಿ ಎಸ್‌ ಯಡಿಯೂರಪ್ಪ ಪುತ್ರ ಬಿ ವೈ ರಾಘವೇಂದ್ರ, ಬಳ್ಳಾರಿ ಕ್ಷೇತ್ರಕ್ಕೆ ಶಾಸಕ ಶ್ರೀರಾಮುಲು ಸಹೋದರಿ ಜಿ ಶಾಂತಾ, ಜಮಖಂಡಿಗೆ ಕಳೆದ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಶ್ರೀಕಾಂತ ಕುಲಕರ್ಣಿ ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ಈ ಮೂವರ ಹೆಸರುಗಳನ್ನು ಮಂಗಳವಾರ ಕೇಂದ್ರ ಚುನಾವಣಾ ಸಮಿತಿಯ ಒಪ್ಪಿಗೆಗೆ ಕಳುಹಿಸಿಕೊಡಲಾಗಿದೆ. ರಾಮನಗರ ಮತ್ತು ಮಂಡ್ಯ ಕ್ಷೇತ್ರಗಳಲ್ಲಿನ ರಾಜಕೀಯ ಬೆಳವಣಿಗೆಗಳನ್ನು ಕಾಯ್ದು ನೋಡಲು ನಿರ್ಧರಿಸಿರುವ ಬಿಜೆಪಿಯು ಕಾಂಗ್ರೆಸ್‌-ಜೆಡಿಎಸ್‌ ದೋಸ್ತಿಯೊಳಗಿನ ಅಸಮಾಧಾನಗಳ ಲಾಭದ ಲೆಕ್ಕಾಚಾರದಲ್ಲಿದೆ. ಉಳಿದಂತೆ ಐದು ಕ್ಷೇತ್ರಗಳಿಗೆ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ.

ವಿಜಯ, ದೇನಾ ಮತ್ತು ಬ್ಯಾಂಕ್ ಆಫ್ ಬರೋಡ ವಿಲೀನಕ್ಕೆ ಹಸಿರು ನಿಶಾನೆ

ಕೇಂದ್ರ ಸರ್ಕಾರದ ಉದ್ದೇಶಿತ ಬ್ಯಾಂಕುಗಳ ವಿಲೀನ ಯೋಜನೆಗೆ ವಿಜಯಾ ಬ್ಯಾಂಕ್, ದೇನಾ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡ ಆಡಳಿತ ಮಂಡಳಿಗಳು ಹಸಿರು ನಿಶಾನೆ ತೋರಿಸಿವೆ. ಪ್ರತ್ಯೇಕವಾಗಿ ಸಭೆ ಸೇರಿದ್ದ ಆಡಳಿತ ಮಂಡಳಿಗಳು ವಿಲೀನ ಪ್ರಕ್ರಿಯೆಗೆ ಔಪಚಾರಿಕವಾಗಿ ಒಪ್ಪಿಗೆ ನೀಡಿವೆ. ತಮ್ಮ ಒಪ್ಪಿಗೆಯನ್ನು ಕೇಂದ್ರ ಸರ್ಕಾರಕ್ಕೆ ರವಾನಿಸಿವೆ. ಮುಂದಿನ ಹಂತದಲ್ಲಿ ಕೇಂದ್ರ ಸರ್ಕಾರ ಔಪಚಾರಿಕ ಪ್ರಕ್ರಿಯೆಗಳನ್ನೂ ಪೂರೈಸಬೇಕಿದೆ. ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಒಪ್ಪಿಗೆ ನೀಡಿದ ನಂತರ, ಕೇಂದ್ರ ಸಂಪುಟ ಅನುಮೋದಿಸುತ್ತದೆ. ಸೆಪ್ಟೆಂಬರ್ 17ರಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಈ ಮೂರು ಬ್ಯಾಂಕುಗಳ ವಿಲೀನಗೊಳಿಸುವುದಾಗಿ ಪ್ರಕಟಿಸಿದ್ದರು.

ಡಬಲ್ ಪ್ಯಾರಾಲಿಂಪಿಕ್ಸ್ ಸ್ವರ್ಣ ವಿಜೇತ ದೇವೇಂದ್ರ ಜಜಾರಿಯಾ ನಿವೃತ್ತಿ

ಭುಜದ ನೋವಿನಿಂದ ಚೇತರಿಸಿಕೊಳ್ಳಲಾಗದ ದೇವೇಂದ್ರ ಜಜಾರಿಯಾ ವೃತ್ತಿಬದುಕಿಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ. ಪ್ರಸಕ್ತ ಜಕಾರ್ತದಲ್ಲಿ ನಡೆಯುತ್ತಿರುವ ಪ್ಯಾರಾ ಏಷ್ಯಾಡ್‌ನಲ್ಲಿ ಪುರುಷರ ಎಫ್‌ ೪೬ ವಿಭಾಗದ ಜಾವೆಲಿನ್ ಎಸೆತದಲ್ಲಿ ಸ್ಪರ್ಧಿಸಲಿರುವ ಜಜಾರಿಯಾ, ತಮ್ಮ ಹದಿನಾರು ವರ್ಷಗಳ ವೃತ್ತಿಬದುಕಿಗೆ ವಿದಾಯ ಹೇಳಲಿದ್ದಾರೆ. ಪದ್ಮಶ್ರೀ, ರಾಜೀವ್‌ಗಾಂಧಿ ಖೇಲ್‌ರತ್ನ ಹಾಗೂ ಅರ್ಜುನ ಕ್ರೀಡಾ ಪ್ರಶಸ್ತಿ ಪುರಸ್ಕೃತರಾದ ದೇವೇಂದ್ರ, ಹಲವಾರು ಅಂತಾರಾಷ್ಟ್ರೀಯ ಕೂಟಗಳಲ್ಲಿ ಪದಕ ಗೆದ್ದವರು. ೨೦೦೪ರ ಅಥೆನ್ಸ್ ಪ್ಯಾರಾಲಿಂಪಿಕ್ಸ್ ಕೂಟದಲ್ಲಿ ಎಫ್‌೪೪/೪೬ ವಿಭಾಗದಲ್ಲಿ ಚಿನ್ನ ಗೆದ್ದ ದೇವೇಂದ್ರ, ೨೦೧೬ರ ರಿಯೋ ಪ್ಯಾರಾಲಿಂಪಿಕ್ಸ್‌ನ ಎಫ್ ೪೬ ವಿಭಾಗದಲ್ಲಿ ಚಿನ್ನದ ಸಾಧನೆ ಮಾಡಿದ್ದರು. ಪ್ಯಾರಾಲಿಂಪಿಕ್ಸ್ ಕೂಟದಲ್ಲಿ ಎರಡು ಚಿನ್ನದ ಪದಕ ಗೆದ್ದ ಏಕೈಕ ಭಾರತೀಯ ಪ್ಯಾರಾಲಿಂಪಿಯನ್ ಜಜಾರಿಯಾ.

‘ಸೆಲೆಕ್ಷನ್ ಡೇ’ ವೆಬ್ ಸರಣಿ ಡಿ.28ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರ

ಬೂಕರ್ ಪ್ರಶಸ್ತಿ ವಿಜೇತ ಅರವಿಂದ ಅಡಿಗರ ‘ಸೆಲೆಕ್ಷನ್ ಡೇ’ ಕಾದಂಬರಿ ವೆಬ್ ಸರಣಿಯಾಗಿ ಮೂಡಿಬರುತ್ತಿದ್ದು, ನೆಟ್‌ಫ್ಲಿಕ್ಸ್‌ ಸ್ಟ್ರೀಮಿಂಗ್ನಲ್ಲಿ ಕಾದಂಬರಿಯ ಮೂಲ ಶೀರ್ಷಿಕೆಯ ಹೆಸರಿನಲ್ಲೇ ಪ್ರಸಾರವಾಗಲಿದೆ. ರಾಧಾ ಮತ್ತು ಮಂಜು ಎಂಬಿಬ್ಬರು ಸಹೋದರರ ಬಾಲ್ಯ ಹಾಗೂ ಅವರ ಕ್ರಿಕೇಟ್ ಬದುಕಿನ ಯಶೋಗಾಥೆಯ ಸುತ್ತ ಹೆಣೆದಿರುವ ಈ ಕಥೆಯಲ್ಲಿ ಯುವ ಬಾಲನಟರಾದ ಯಶ್ ಧೋಲ್ಯೆ ಹಾಗೂ ಮೊಹಮ್ಮದ್ ಸಮದ್, ರಾಧಾ ಮತ್ತು ಮಂಜು ಕುಮಾರ್ ಪಾತ್ರದಲ್ಲಿ ನಟಿಸಿದ್ದಾರೆ. ಹಿರಿಯ ಕಲಾವಿದರಾದ ಮಹೇಶ್ ಮಾಂಜ್ರೇಕರ್, ರತ್ನಾ ಪಥಕ್ ಶಾ ‘ಸೆಲೆಕ್ಷನ್ ಡೇ’ ನಲ್ಲಿ ಕಾಣಿಸಿಕೊಳ್ಳಲಿದ್ದು, ಸರಣಿ ಡಿಸೆಂಬರ್ 28ರಿಂದ ಪ್ರಸಾರವಾಗಲಿದೆ.

ಅತ್ಯಾಚಾರಗೈದು ಬಲ್ಗೇರಿಯಾ ಪತ್ರಕರ್ತೆ ಕೊಲೆ

ಬಲ್ಗೇರಿಯಾದ ಟಿವಿಎನ್ ಮಾಧ್ಯಮದ ತನಿಖಾ ಪತ್ರಕರ್ತೆ ವಿಕ್ಟೋರಿಯಾ ಮಾರಿನೋವಾಳನ್ನು ಅಪರಿಚಿತರು ಅತ್ಯಾಚಾರ ಮಾಡಿ ಕೊಲೆ ಮಾಡಿದ ಘಟನೆ ವರದಿಯಾಗಿದೆ. ಇತ್ತೀಚೆಗೆ ಆರಂಭವಾದ ತನ್ನ ‘ಡಿಟೆಕ್ಟರ್’ ಟಿವಿ ಕಾರ್ಯಕ್ರಮದಲ್ಲಿ, ಯುರೋಪ್ ಒಕ್ಕೂಟದಲ್ಲಿ ನಡೆದ ಅವ್ಯವಹಾರವನ್ನು ಬಯಲಿಗೆಳೆದಿದ್ದರು ಎಂದು ಹೀಗೆ ಮಾಡಲಾಗಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.

ಕುಸಿದ ಕಾಂಗರೂ; ಪಾಕ್ ಹಿಡಿತದಲ್ಲಿ ಮೊದಲ ಟೆಸ್ಟ್

ಆರಂಭಿಕರಾದ ಉಸ್ಮಾನ್ ಖವಾಜ (೮೫) ಮತ್ತು ಏರಾನ್ ಫಿಂಚ್ (೬೨) ದಾಖಲಿಸಿದ ಅರ್ಧಶತಕಗಳನ್ನು ಹೊರತುಪಡಿಸಿ ಮಿಕ್ಕವರ ಬ್ಯಾಟಿಂಗ್ ವೈಫಲ್ಯದಿಂದಾಗಿ ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನ ಪ್ರಭುತ್ವ ಮೆರೆದಿದೆ. ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನಾಂತ್ಯಕ್ಕೆ ಪಾಕಿಸ್ತಾನ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ ೩ ವಿಕೆಟ್ ನಷ್ಟಕ್ಕೆ ೪೫ ರನ್ ಗಳಿಸಿ ಆ ಮೂಲಕ ೩೨೫ ರನ್ ಮುನ್ನಡೆ ಸಾಧಿಸಿದೆ. ಮೊದಲ ವಿಕೆಟ್‌ಗೆ ೧೪೨ ರನ್ ಗಳಿಸಿ ಅಮೋಘ ಆರಂಭ ಕಂಡಿದ್ದ ಆಸೀಸ್ ತದನಂತರದಲ್ಲಿ ಬಿಲಾಲ್ ಆಸೀಫ್ (೩೬ಕ್ಕೆ ೬) ಮತ್ತು ವೇಗಿ ಮೊಹಮದ್ ಅಬ್ಬಾಸ್ (೨೯ಕ್ಕೆ ೪) ಪರಿಣಾಮಕಾರಿ ಬೌಲಿಂಗ್‌ಗೆ ಕಂಗೆಟ್ಟು ೨೦೨ ರನ್‌ಗಳಿಗೆ ಆಲೌಟ್ ಆಯಿತು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಪಾಕ್‌ಗೆ ತಿರುಗೇಟು ನೀಡುವ ಸುಳಿವು ನೀಡಿರುವ ಆಸೀಸ್ ಮುಂದೆ ಕಠಿಣ ಸವಾಲು ಎದುರಾಗಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More