ಆ ಪ್ರಕರಣವನ್ನು ಪ್ರಜಾಪ್ರಭುತ್ವದ ‘ಮದರ್ ಬೋರ್ಡ್’ ಎನ್ನುವುದೇಕೆ ಗೊತ್ತೇ?

ಇತ್ತೀಚೆಗೆ ಕಾಸರಗೋಡಿನ ಎಡನೀರು ಮಠಕ್ಕೆ ಭೇಟಿ ನೀಡಿದ್ದ ಕೇರಳ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ, ‘ಶ್ರೀಮಠಕ್ಕೆ ರಾಷ್ಟ್ರ ಆಭಾರಿ ಆಗಿರಬೇಕು’ ಎಂದರು. ಮಠದಿಂದ ಅಂಥ ಯಾವ ಕೆಲಸ ನಡೆದಿದೆ ಎಂದು ಹುಡುಕಿದಾಗ ತೆರೆದುಕೊಂಡದ್ದೇ ಸುಪ್ರಸಿದ್ಧ ಕೇಶವಾನಂದ ಭಾರತಿ ಕೇಸ್

ಕೇಶವಾನಂದ ಭಾರತಿ ಸ್ವಾಮೀಜಿಗಳ ಜನ್ಮದಿನದ ಅಂಗವಾಗಿ ಅ.6ರಂದು ಕಾಸರಗೋಡಿನ ಎಡನೀರು ಮಠಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದ ಕೇರಳ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಹೃಷಿಕೇಶ್ ರಾಯ್, “ಸಂವಿಧಾನದ ಮೂಲತತ್ವಗಳಿಗೆ ಯಾವ ಕಾಲಕ್ಕೂ ಚ್ಯುತಿಯಾಗಬಾರದು ಎಂದು ಸುಪ್ರೀಂ ಕೋರ್ಟ್ ಅಂತಿಮ ತೀರ್ಪು ನೀಡುವಲ್ಲಿ ಶ್ರೀಗಳ ದಾವೆ ಕಾರಣ. ಹೀಗಾಗಿ, ಎಡನೀರು ಮಠಕ್ಕೆ ರಾಷ್ಟ್ರ ಎಂದೂ ಅಭಾರಿ ಆಗಿರಬೇಕು,” ಎಂದಿದ್ದಾರೆ.

ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಕಾಯಿಲೆಗೆ ಹೇಗೆ ಹೊಸ ಔಷಧಗಳನ್ನು ಕಂಡುಹಿಡಿಯಲಾಗುತ್ತದೆಯೋ ಹಾಗೆಯೇ ಕಾನೂನು ವಲಯ ಕೂಡ ಹೊಸ ಸಮಸ್ಯೆಗೆ ಹೊಸ ಪರಿಹಾರ ಕಂಡುಕೊಳ್ಳುತ್ತದೆ. ಅಂಥದ್ದೇ ಒಂದು ಅಪರೂಪದ ಪ್ರಕರಣ ಕೇಶವಾನಂದ ಭಾರತಿ ಸ್ವಾಮೀಜಿ ವರ್ಸಸ್ ಕೇರಳ ಸರ್ಕಾರದ ಪ್ರಕರಣ.

ಸಮಾನತೆಯ ಹಕ್ಕು, ಸ್ವಾತಂತ್ರ್ಯದ ಹಕ್ಕು, ಶೋಷಣೆಯ ವಿರುದ್ಧದ ಹಕ್ಕು, ಧಾರ್ಮಿಕ ಹಕ್ಕು, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕು, ಸಂವಿಧಾನಾತ್ಮಕ ಪರಿಹಾರಗಳ ಹಕ್ಕು ಎಂಬ ಆರು ಮೂಲಭೂತ ಹಕ್ಕುಗಳ ಜೊತೆಗೆ 1973ಕ್ಕೂ ಮೊದಲು ಆಸ್ತಿಯನ್ನು ಹೊಂದುವ ಹಕ್ಕು ಎಂಬ ಹಕ್ಕೊಂದು ಜಾರಿಯಲ್ಲಿತ್ತು. ಸಂವಿಧಾನ ಶಿಲ್ಪಿಗಳು ಎಲ್ಲರಿಗೂ ಆಸ್ತಿ ದೊರೆಯಲಿ ಎಂಬ ಉದಾತ್ತ ಉದ್ದೇಶದಿಂದ ಭೂ ಸಮಾನತೆಯನ್ನೂ ಜಾರಿಗೆ ತರುವ ಸಲುವಾಗಿ ಕಲ್ಪಿಸಿದ್ದ ಹಕ್ಕು ಅದು.

ಎಪ್ಪತ್ತರ ದಶಕದಲ್ಲಿ ಕೇರಳ ಸರ್ಕಾರ ಭೂಸುಧಾರಣೆ ಕಾಯ್ದೆ ಜಾರಿಗೆ ತಂದಿತು. ಪರಿಣಾಮವಾಗಿ, ಎಡನೀರು ಮಠದ ಸಾವಿರಾರು ಎಕರೆ ಆಸ್ತಿ ಸರ್ಕಾರದ ಪಾಲಾಗುವ ಆತಂಕ ಆಗಿನ ಕೇಶವಾನಂದ ಭಾರತಿ ಸ್ವಾಮೀಜಿ ಅವರಿಗೆ ಎದುರಾಯಿತು. ಆದರೆ, ಈ ಕಾಯ್ದೆಯಲ್ಲಿ ಸಣ್ಣದೊಂದು ತೊಡಕಿತ್ತು. ಅದು ಸಂವಿಧಾನದತ್ತವಾಗಿದ್ದ ಆಸ್ತಿಯನ್ನು ಹೊಂದುವ ಹಕ್ಕಿಗೆ ವಿರುದ್ಧವಾಗಿತ್ತು. ಅದೇ ಎಳೆಯನ್ನು ಹಿಡಿದು ಸ್ವಾಮೀಜಿ ಕೋರ್ಟಿನಲ್ಲಿ ದಾವೆ ಹೂಡಿದರು. ಒಂದೆಡೆ ಭೂ ಸುಧಾರಣೆಯಂತಹ ಮಹತ್ವದ ಕಾಯ್ದೆ, ಮತ್ತೊಂದೆಡೆ ಆಸ್ತಿಯನ್ನು ಹೊಂದುವ ಮೂಲಭೂತ ಹಕ್ಕು ಎದುರು-ಬದರು ನಿಂತವು. ಅಲ್ಲದೆ, ಧಾರ್ಮಿಕ ಹಕ್ಕು, ಮಠಗಳನ್ನು ನಡೆಸಲು ಇರುವ ಹಕ್ಕು, ಸಮಾನತೆಯ ಹಕ್ಕುಗಳ ಪ್ರಶ್ನೆಯೂ ಎದುರಾಯಿತು. ಸಂವಿಧಾನದ ಅಡಿಗಲ್ಲುಗಳೇ ಅಲುಗಾಡುವಂತಹ ಸ್ಥಿತಿ ನಿರ್ಮಾಣವಾಯಿತು. ಸಹಜವಾಗಿಯೇ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು. ನಾನಾಭಾಯ್ ಪಾಲ್ಕಿವಾಲ, ಫಾಲಿ ನಾರಿಮನ್ ರೀತಿಯ ಘಟಾನುಘಟಿ ವಕೀಲರು ಕೇಶವಾನಂದ ಸ್ವಾಮೀಜಿ ಪರವಾಗಿ ವಕಾಲತ್ತು ವಹಿಸಿದ್ದರು. ಪ್ರಕರಣದ ತೀರ್ಪು ನೀಡಲೆಂದೇ 13 ನ್ಯಾಯಮೂರ್ತಿಗಳು ನೇಮಕವಾದರು. ಇದು ಸುಪ್ರೀಂ ಕೋರ್ಟ್ ಇತಿಹಾಸದಲ್ಲಿಯೇ ಅತಿ ಹೆಚ್ಚು ನ್ಯಾಯಮೂರ್ತಿಗಳು ವಿಚಾರಣೆ ನಡೆಸಿದ ಪ್ರಕರಣ ಎಂದು ಕೂಡ ಹೆಸರಾಯಿತು. ಐದು ತಿಂಗಳ ಕಾಲ ವಿಚಾರಣೆ ನಡೆಯಿತು. ಒಟ್ಟು 62 ದಿನಗಳ ಕಾಲ ಪ್ರಕರಣವನ್ನು ಆಲಿಸಲಾಯಿತು.

ಈ ಪ್ರಕರಣ ಆಸ್ತಿ ಹಕ್ಕಿನ ವಿಚಾರಣೆಯ ಆಚೆಗೆ ಚಾಚಿಕೊಂಡಿದ್ದು ವಿಶೇಷ. ಸಂಸತ್ತಿನ ಸಾಂವಿಧಾನಿಕ ತಿದ್ದುಪಡಿಗಳು ಸಂವಿಧಾನದ ಮೂಲ ಆಶಯಗಳಿಗೆ ಧಕ್ಕೆ ತರುವಂತಿಲ್ಲ. ಸಾಂವಿಧಾನಿಕ ತಿದ್ದುಪಡಿಗಳು ನಡೆದರೂ ಅದು ಸಂವಿಧಾನದ ಮೂಲ ಸ್ವಭಾವವನ್ನು ಬದಲಿಸಬಾರದು ಎಂದು ಹೇಳಿತು. ಈ ನೆಲೆಯಲ್ಲಿಯೇ ಕೇರಳ ಹೈಕೋರ್ಟಿನ ಈಗಿನ ಮುಖ್ಯ ನ್ಯಾಯಮೂರ್ತಿಗಳು ‘ಎಡನೀರು ಮಠಕ್ಕೆ ರಾಷ್ಟ್ರ ಅಭಾರಿ ಆಗಿರಬೇಕು,’ ಎಂದಿರುವುದು.

ಇದನ್ನೂ ಓದಿ : ಜನಮಾನಸದಲ್ಲಿ 2018ರ ಸೆಪ್ಟೆಂಬರ್ ತಿಂಗಳನ್ನು ಹಸಿರಾಗಿಸಿದ ಸುಪ್ರೀಂ ಕೋರ್ಟ್

ಸಂಸತ್ತು ತನ್ನ ಸಾಂವಿಧಾನಿಕ ಅಧಿಕಾರ ಬಳಸಿ ಸಂವಿಧಾನದ ಮೂಲ ಸ್ವಭಾವಕ್ಕೆ ಕುಂದುಂಟು ಮಾಡುವ ಕಾಯ್ದೆ ಜಾರಿಗೆ ತರಲು ಶಾಸಕಾಂಗಕ್ಕೆ ಅವಕಾಶ ನೀಡಬಾರದು ಎಂದಿತ್ತು ನ್ಯಾಯಾಲಯ. ಸಂವಿಧಾನ ಶ್ರೇಷ್ಠವೋ ಸರ್ಕಾರ ಶ್ರೇಷ್ಠವೋ ಎಂಬ ಪ್ರಶ್ನೆ ಉದ್ಭವವಾಯಿತು. ಸರ್ಕಾರ ಕೂಡ ಸಂವಿಧಾನದ ಭಾಗ, ಜನತೆಯ ಪ್ರತಿನಿಧಿ ಎಂಬ ಚರ್ಚೆಗಳು ನಡೆದವು. ಆದರೆ, ಸಂವಿಧಾನವೂ ಅಷ್ಟೇ ಪ್ರಮುಖವಾದುದು ಎಂಬ ವಾದ ಎದ್ದಿತು. ಅಂದಿನ ಮುಖ್ಯ ನ್ಯಾಯಮೂರ್ತಿ ಎಸ್ ಎಂ ಸಿಕ್ರಿ, ನ್ಯಾಯಮೂರ್ತಿಗಳಾದ ಕೆ ಎಸ್ ಹೆಗ್ಡೆ (ನ್ಯಾ. ಸಂತೋಷ್ ಹೆಗ್ಡೆ ಅವರ ತಂದೆ), ಜೆ ಎಂ ಶೇಲಟ್ ಸೇರಿದಂತೆ 9 ನ್ಯಾಯಮೂರ್ತಿಗಳು ತೀರ್ಪಿನ ಪರವಾಗಿ ನಿಂತರು. ಉಳಿದ ನ್ಯಾಯಮೂರ್ತಿಗಳಾದ ಅಜಿತ್ ನಾಥ್ ರೇ, ಕೆ ಕೆ ಮ್ಯಾಥ್ಯೂ, ಎಂ ಎಚ್ ಬೇಗ್ ಹಾಗೂ ಎಸ್ ಎನ್ ದ್ವಿವೇದಿ ತೀರ್ಪಿನ ಪರವಾಗಿ ಸಹಿ ಹಾಕಲಿಲ್ಲ. ತೀರ್ಪಿನ ಬಳಿಕ 24ನೇ ಸಾಂವಿಧಾನಿಕ ತಿದ್ದುಪಡಿ ಜಾರಿಗೆ ಬಂದು, ಸಂವಿಧಾನದ ಶಾಸನಾತ್ಮಕ ಅಧಿಕಾರ ಬಳಸಿ ತಿದ್ದುಪಡಿ ತರುವ ಉಳಿದ ಪ್ರಕರಣಗಳೂ ಅನೂರ್ಜಿತಗೊಂಡವು.

ಹೀಗೆ, ಶಾಸಕಾಂಗದ ಅಧಿಕಾರಕ್ಕೆ ಕೊಕ್ಕೆ ಹಾಕಿದ್ದು ಅಂದಿನ ಕೇಂದ್ರ ಸರ್ಕಾರಕ್ಕೆ ಇರುಸುಮುರುಸು ಉಂಟುಮಾಡಿತು. ಇಂದಿರಾ ಗಾಂಧಿ ಸರ್ಕಾರ ಹಿರಿತನದ ಆಧಾರದಲ್ಲಿ ಕೆ ಎಸ್ ಹೆಗ್ಡೆ, ಶೇಲಟ್ ಹಾಗೂ ಗ್ರೋವರ್ ಅವರನ್ನು ಮುಖ್ಯ ನ್ಯಾಯಮೂರ್ತಿಗಳನ್ನಾಗಿ ಮಾಡುವ ಬದಲು (ತೀರ್ಪಿನ ವಿರುದ್ಧ ನಿಲುವು ತಳೆದಿದ್ದ) ಅಜಿತ್ ನಾಥ್ ರೇ ಅವರಿಗೆ ಮಣೆ ಹಾಕಲು ಪ್ರಕರಣ ಪರೋಕ್ಷವಾಗಿ ಕಾರಣವಾಯಿತು ಎಂಬ ಮಾತುಗಳಿವೆ. ಸರ್ಕಾರದ ನಿರ್ಧಾರ ಸಾರ್ವಜನಿಕ ವಲಯದಲ್ಲಿ ಟೀಕೆಗೆ ಒಳಗಾಯಿತು. ಇದು ತುರ್ತು ಪರಿಸ್ಥಿತಿ ಜಾರಿಗೆ ಬರುವ ಮುನ್ನ ನಡೆದ ಪ್ರಕರಣ ಎಂಬುದೂ ಗಮನಾರ್ಹ.

ಕಾನೂನು ಕಾಲೇಜುಗಳಲ್ಲಿ…

ಭಾರತೀಯ ಕಾನೂನು ಅಧ್ಯಯನದಲ್ಲಿ ಕೇಶವಾನಂದ ಭಾರತಿ ಪ್ರಕರಣಕ್ಕೆ ವಿಶಿಷ್ಟ ಸ್ಥಾನಮಾನವಿದೆ. “ಪ್ರತಿಯೊಬ್ಬ ಕಾನೂನು ವಿದ್ಯಾರ್ಥಿಯೂ ಕೇಶವಾನಂದ ಭಾರತಿ ಪ್ರಕರಣವನ್ನು ಓದಿಯೇ ಓದುತ್ತಾರೆ. ಸಂವಿಧಾನದ ಮೂಲಭೂತ ಹಕ್ಕುಗಳಿಗೆ ತಿದ್ದುಪಡಿ ತರಬೇಕೇ ಬೇಡವೇ ಎಂಬ ಚರ್ಚೆಗೆ ಮುನ್ನುಡಿ ಬರೆದ ಪ್ರಕರಣ ಇದು,” ಎನ್ನುತ್ತಾರೆ ‘ದಿ ಸ್ಟೇಟ್’ನೊಂದಿಗೆ ಮಾತನಾಡಿದ ಮೈಸೂರಿನ ವಿಶ್ವವಿದ್ಯಾಲಯದ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಕೆ ಎಲ್ ಚಂದ್ರಶೇಖರ ಐಜೂರ್.

“ಕೇಶವಾನಂದ ಸ್ವಾಮೀಜಿ ಪ್ರಕರಣ ಒಂದು ರೀತಿ ಸಂವಿಧಾನದ ಮದರ್ ಬೋರ್ಡ್ ಇದ್ದಂತೆ,” ಎನ್ನುತ್ತಾರೆ ಮಂಗಳೂರಿನ ವಕೀಲ, ಚಿಂತಕ ಪುನೀತ್ ಅಪ್ಪು. “ಅದನ್ನು ನಾವು ಸಂವಿಧಾನದ ಹೊಸ ಆ್ಯಪ್ ಎಂದೂ ಕರೆಯಬಹುದು. ಇತ್ತೀಚೆಗೆ ಕಾನೂನು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಪ್ರಜಾಪ್ರಭುತ್ವವನ್ನು ಉಳಿಸಿದ್ದೇ ಕೇಶವಾನಂದ ಭಾರತಿ ಸ್ವಾಮೀಜಿ ಪ್ರಕರಣ ಎಂದಿದ್ದೆ. ತುರ್ತು ಪರಿಸ್ಥಿತಿ ವೇಳೆ ಸಂವಿಧಾನದ ಮೂಲಭೂತ ಹಕ್ಕನ್ನು ಅನೂರ್ಜಿತಗೊಳಿಸಲಾಗುತ್ತದೆ. ಆಗ ಸುಪ್ರೀಂ ಕೋರ್ಟ್ ಅದನ್ನು ಕಿತ್ತುಹಾಕಲು ನೆರವಾದದ್ದು ಇದೇ ಪ್ರಕರಣ,” ಎಂದು ಹೇಳುತ್ತಾರೆ.

‘ಲೈವ್ ಲಾ’ ಜಾಲತಾಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಆಸಕ್ತಿಕರ ಸಂಗತಿಗಳನ್ನು ಪ್ರಕಟಿಸಿದೆ. “ಜಸ್ಟೀಸ್ ಬೇಗ್ ಅವರ ಅನಾರೋಗ್ಯ ಮತ್ತು ಮುಖ್ಯನ್ಯಾಯಮೂರ್ತಿ ಸಿಖ್ರಿ ಅವರ ವಿದೇಶ ಪ್ರವಾಸದಿಂದಾಗಿ ಐದು ತಿಂಗಳ ಸುದೀರ್ಘ ಕಾಲ ವಿಚಾರಣೆ ನಡೆಯಿತು. ಕೇಶವಾನಂದ ಭಾರತಿ ಶ್ರೀಪಾದಂಗಳ್ ಅವರು ಎಂದಿಗೂ ತಮ್ಮ ಪರ ವಾದಿಸಿದ್ದ ಹಿರಿಯ ವಕೀಲ ಪಾಲ್ಕಿವಾಲ ಅವರನ್ನು ಭೇಟಿಯಾಗಲೇ ಇಲ್ಲ. ವಕೀಲರು ಬರಬಹುದು ಹೋಗಬಹುದು; ನ್ಯಾಯಮೂರ್ತಿಗಳು ಕೂಡ ಬಂದು ಹೋಗಬಹುದು. ಆದರೆ, ದಂತಕತೆಯಾದ ‘ಕೇಶವಾನಂದ ಭಾರತಿ’ ಪ್ರಕರಣ ಚಿರಸ್ಥಾಯಿಯಾಗಿ ಉಳಿಯಲಿದೆ,” ಎಂದು ಅದು ಬಣ್ಣಿಸಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More