ಎಪಿಪಿ ನೇಮಕ ಹಗರಣ; ಆರೋಪಗಳಿಂದ ನುಣುಚಿಕೊಳ್ಳಲು ಪ್ರಮುಖ ಆರೋಪಿಗಳ ಯತ್ನ?

ಎಪಿಪಿಗಳ ನೇಮಕಾತಿ ಹಗರಣ ಮತ್ತೆ ಸದ್ದು ಮಾಡಿದೆ. ಈ ಹಗರಣದಲ್ಲಿ ಭಾಗಿ ಆಗಿದ್ದಾರೆ ಎನ್ನಲಾಗಿರುವ ಆರೋಪಿಗಳ ಪೈಕಿ ಕೆಲವರು ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಯತ್ನಿಸಿದ್ದಾರೆ. ಆರೋಪಗಳಿಂದ ಮುಕ್ತಗೊಳಿಸಿ ಎಂದು ಪ್ರಮುಖ ಆರೋಪಿಗಳಿಬ್ಬರು ನ್ಯಾಯಾಲಯದ ಮೊರೆ ಹೊಕ್ಕಿದ್ದಾರೆ

ಅಸಿಸ್ಟೆಂಟ್‌ ಪಬ್ಲಿಕ್‌ ಪ್ರಾಸಿಕ್ಯೂಟರ್ಸ್ ಮತ್ತು ಅಸಿಸ್ಟೆಂಟ್‌ ಗೌರ್ನ್‌ಮೆಂಟ್‌ ಪ್ಲೀಡರ್ಸ್‌ ನೇಮಕಾತಿ ಅಕ್ರಮಗಳಲ್ಲಿ ಭಾಗಿ ಆಗಿದ್ದಾರೆ ಎಂದು ದೋಷಾರೋಪಣೆ ಪಟ್ಟಿಯಲ್ಲಿ ಗುರುತಿಸಿರುವ ಪ್ರಮುಖ ಆರೋಪಿಗಳು, ತಮ್ಮನ್ನು ಆರೋಪದಿಂದ ಮುಕ್ತಗೊಳಿಸಿ ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ವಿಶೇಷವೆಂದರೆ, ತಲೆ ಬುರುಡೆಗೆ ಆದ ಗಾಯದಿಂದ ಬಳಲುವಿಕೆ ಮತ್ತು ಎಡ ಕಣ್ಣು ದೃಷ್ಟಿ ಕಳೆದುಕೊಂಡಿದ್ದ ಚಂದ್ರಶೇಖರ್ ಹಿರೇಮಠ್ ಅವರನ್ನೇ (ಒಂದನೇ ಆರೋಪಿ) ನೇಮಕಾತಿ ಪ್ರಾಧಿಕಾರಕ್ಕೆ ಸದಸ್ಯರನ್ನಾಗಿ ಸರ್ಕಾರ ನೇಮಿಸಿತ್ತು ಎಂಬ ಅಂಶವೂ ಇವರು ಸಲ್ಲಿಸಿದ್ದ ಅರ್ಜಿಯಿಂದ ತಿಳಿದು ಬಂದಿದೆ.

ಆರೋಪಿಗಳು ಸಿಆರ್‌ಪಿಸಿ ಸೆಕ್ಷನ್‌ ೨೨೭ ಅನ್ವಯ ೨೦೧೮ ಆಗಸ್ಟ್ ೧ರಂದು ಅರ್ಜಿ ಸಲ್ಲಿಸಿದ್ದಾರೆ. ನೇಮಕಾತಿಯಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮಗಳ ಕುರಿತು ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿ ಜಿ ಬೋಪಯ್ಯ ಅವರು ತನಿಖೆಗೆ ಆದೇಶಿಸಿದ್ದರ ಬಗ್ಗೆಯೂ ಅರ್ಜಿಯಲ್ಲಿ ಆಕ್ಷೇಪಿಸಿದ್ದಾರೆ.

ಅಕ್ರಮಗಳಿಗೆ ತಾವು ಹೊಣೆಗಾರರಲ್ಲ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲು ಹಲವು ಕಾರಣಗಳನ್ನು ನೀಡಿದ್ದಾರೆ. ಅಲ್ಲದೆ, ನೇಮಕಾತಿ ಪ್ರಾಧಿಕಾರದ ಅಧ್ಯಕ್ಷರಾದಿಯಾಗಿ ಉಳಿದ ಸದಸ್ಯರನ್ನು ಹೊರತುಪಡಿಸಿ ತಮ್ಮೊಬ್ಬರನ್ನೇ ಹೊಣೆಗಾರನ್ನಾಗಿಸಿರುವುದು ಎಷ್ಟರಮಟ್ಟಿಗೆ ಸರಿ ಎಂದು ಒಂದನೇ ಆರೋಪಿ ಚಂದ್ರಶೇಖರ ಹಿರೇಮಠ್ ಅವರು ಅರ್ಜಿಯಲ್ಲಿ ಪ್ರಶ್ನಿಸಿದ್ದಾರೆ. ಅದೇ ರೀತಿ ಎರಡನೇ ಆರೋಪಿ ನಾರಾಯಣಸ್ವಾಮಿ ಮತ್ತು ಎಪಿಪಿಯಾಗಿ ನೇಮಕವಾಗಿರುವ ತ್ರಿಶೂಲ ಸುಭಾಶ್‌ಚಂದ್ರ ಜೈನ್(೭ನೇ ಆರೋಪಿ)‌ಅವರೂ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಇದರಿಂದಾಗಿ ನೇಮಕಾತಿ ಪ್ರಾಧಿಕಾರದ ಅಧ್ಯಕ್ಷರೂ ಆಗಿದ್ದ ಗೃಹ ಇಲಾಖೆಯ ಅಂದಿನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾನೂನು ಇಲಾಖೆಯ ಪ್ರಧಾನಕಾರ್ಯದರ್ಶಿ, ಹೈಕೋರ್ಟ್(ನ್ಯಾಯಾಂಗ)ನ ರಿಜಿಸ್ಟ್ರಾರ್‌ ರ ಹೊಣೆಗಾರಿಕೆಯನ್ನು ಪ್ರಶ್ನಿಸಿದಂತಾಗಿದೆ. ನೇಮಕಾತಿ ನಡೆದಿದ್ದ ಅವಧಿಯಲ್ಲಿ ಗೃಹ ಇಲಾಖೆಯ ಅಂದಿನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ಎಸ್‌ ಕೆ ಪಟ್ಟನಾಯಕ್‌ ಅವರು ಈಗ ಕೇಂದ್ರ ಸರ್ಕಾರದ ಸೇವೆಯಲ್ಲಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಉಳಿದ ಆರೋಪಿಗಳು ಆರೋಪದಿಂದ ಮುಕ್ತಗೊಳಿಸಲು ಕೋರಿಕೆಯ ಅರ್ಜಿಗಳನ್ನು ೨೦೧೮ರ ನವೆಂಬರ್‌ ೩ರೊಳಗೆ ಸಲ್ಲಿಸಲು ನ್ಯಾಯಾಧೀಶರು ಅವಕಾಶ ಕಲ್ಪಿಸಿದ್ದಾರೆ. ಕೊನೆಯ ದಿನಾಂಕದ ನಂತರ ಬರುವ ಅರ್ಜಿಗಳನ್ನು ಪರಿಗಣಿಸುವುದಿಲ್ಲ ಎಂದೂ ಸೂಚಿಸಿದ್ದಾರೆ. ಈ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ವಿಶೇಷ ಸರ್ಕಾರಿ ಅಭಿಯೋಜಕ ರವೀಂದ್ರ ಅವರು ಒಟ್ಟಿಗೆ ತಕರಾರು ಅರ್ಜಿ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಚಂದ್ರಶೇಖರ್ ಹಿರೇಮಠ್ ರ ಅರ್ಜಿಯಲ್ಲೇನಿದೆ?

೧೯೭ ಎಪಿಪಿ ಹುದ್ದೆಗಳ ನೇಮಕಾತಿಗೆ ೨೦೧೨ರ ಮೇ ೧೬ರಂದು ಅಧಿಸೂಚನೆ ಹೊರಡಿಸಿತ್ತು. ಆ ಸಂದರ್ಭದಲ್ಲಿ ನೇಮಕಾತಿ ಪ್ರಾಧಿಕಾರ ರಚನೆಯಾಗಿತ್ತು. ರೇಣುಕಾ ಎಂಬುವರು ನೇಮಕಾತಿ ಪ್ರಾಧಿಕಾರದ ಸದಸ್ಯರಾಗಿದ್ದರು. ಆದರೆ ಅವರ ಅವಧಿಯಲ್ಲಿ ನೇಮಕಾತಿ ಪ್ರಕ್ರಿಯೆ ಪ್ರಗತಿಯಾಗಿರಲಿಲ್ಲ. ಹೀಗಾಗಿ ನೇಮಕಾತಿ ಪ್ರಾಧಿಕಾರಕ್ಕೆ ತಮ್ಮನ್ನು ೨೦೧೩ರ ಜನವರಿ ೩ರಂದು ಸದಸ್ಯರನ್ನಾಗಿ ಸರ್ಕಾರ ನೇಮಿಸಿತ್ತು. ಆದರೆ ಈ ಅವಧಿಯಲ್ಲಿ ಅವರ ತಲೆ ಬುರುಡೆಗೆ ಗಾಯವಾಗಿತ್ತಲ್ಲದೆ, ಎಡಕಣ್ಣು ದೃಷ್ಟಿ ಕಳೆದುಕೊಂಡಿತ್ತು. ಎರಡು ಬಾರಿ ಆಂಜಿಯೋಗ್ರಾಮ್‌ ಪರೀಕ್ಷೆಗೆ ಒಳಗಾಗಿದ್ದರು ಎಂಬ ಅಂಶವನ್ನು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

“ಅನಾರೋಗ್ಯದ ಕಾರಣ ತಾವು ಹೆಚ್ಚುವರಿ ಜವಾಬ್ದಾರಿ ವಹಿಸಿಕೊಳ್ಳಲು ಹಿಂದೇಟು ಹಾಕಿದ್ದೆ. ನೇಮಕಾತಿ ಪ್ರಾಧಿಕಾರ ಸಮಿತಿಯಿಂದ ತಮ್ಮನ್ನು ಕೈ ಬಿಡಲು ಕೋರಿದ್ದೆ. ಆದರೂ ತಮ್ಮ ಕೋರಿಕೆಯನ್ನು ನೇಮಕಾತಿ ಸಮಿತಿ ಪರಿಗಣಿಸಿರಲಿಲ್ಲ,” ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : ಎಪಿಪಿ ನೇಮಕ ಹಗರಣ; ಸರ್ಕಾರಿ ವಕೀಲರ ಕೊರತೆ ನೆಪದಲ್ಲಿ ಅಕ್ರಮ ಫಲಾನುಭವಿಗಳ ರಕ್ಷಣೆ!

ಅದೇ ರೀತಿ ನೇಮಕಾತಿ ಪ್ರಾಧಿಕಾರದ ಇತರ ಸದಸ್ಯರ ಹೊಣೆಗಾರಿಕೆ ಕುರಿತೂ ಚಂದ್ರಶೇಖರ್ ಹಿರೇಮಠ್‌ ಅವರು ಅರ್ಜಿಯಲ್ಲಿ ವಿವರಿಸಿದ್ದಾರೆ. ನೇಮಕಾತಿ ಪ್ರಾಧಿಕಾರದ ಅಧ್ಯಕ್ಷ ಮತ್ತು ಇತರ ಸದಸ್ಯರೊಂದಿಗೆ ಸಮನ್ವಯಕಾರರಾಗಿ ಸದಸ್ಯ ಕಾರ್ಯದರ್ಶಿ ಕಾರ್ಯನಿರ್ವಹಿಸಿದ್ದಾರೆ. ನೇಮಕಾತಿಗೆ ಸಂಬಂಧಿಸಿದಂತೆ ಕೈಗೊಂಡಿರುವ ಎಲ್ಲಾ ತೀರ್ಮಾನಗಳು ವೈಯಕ್ತಿಕವಲ್ಲ, ಬದಲಿಗೆ ಪ್ರಾಧಿಕಾರ ಒಟ್ಟಾಗಿ ಕೈಗೊಂಡಿತ್ತು ಎಂಬುದನ್ನು ಅರ್ಜಿಯಲ್ಲಿ ತಿಳಿಸಿದ್ದಾರೆ.

ಈ ನೇಮಕಾತಿಯಲ್ಲಿ ಸಾಕಷ್ಟು ಅಕ್ರಮಗಳು ನಡೆದಿವೆ ಎಂಬ ಕುರಿತು ತೀರ್ಥಹಳ್ಳಿ ಮೂಲದ ರವಿ ಎಂಬುವರು ಸಲ್ಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ್ದ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿ ಜಿ ಬೋಪಯ್ಯ ಅವರು ತನಿಖೆಗೆ ಆದೇಶಿಸಿದ್ದರು. ಆದರೆ ಚಂದ್ರಶೇಖರ್‌ ಹಿರೇಮಠ್‌ ಅವರು ಈ ಆದೇಶದ ಬಗ್ಗೆಯೇ ಅರ್ಜಿಯಲ್ಲಿ ತಕರಾರು ಎತ್ತಿದ್ದಾರೆ. ಎಪಿಪಿ ಹುದ್ದೆಗೆ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳ ಉತ್ತರ ಪತ್ರಿಕೆಯನ್ನು ವಿ ಜಿ ಬೋಪಯ್ಯ ಅವರೂ ಮೌಲ್ಯಮಾಪನ ಮಾಡಿದ್ದರು. ಹಾಗೆಯೇ ಈ ಪ್ರಕರಣದಲ್ಲಿ ಅವರು ಸಾಕ್ಷಿಯೂ ಹೌದು. ಹೀಗಾಗಿ ಪ್ರಕರಣ ಅವರ ಪೀಠದ ಮುಂದೆ ಬಂದ ಸಂದರ್ಭದಲ್ಲಿ ವಿಚಾರಣೆಯಿಂದ ಹಿಂದೆ ಸರಿಯಬೇಕಿತ್ತು. ಆದರೆ ಹಾಗೆ ಮಾಡದೇ ತನಿಖೆಗೆ ಆದೇಶಿಸಿದ್ದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿರುವುದು ಚಂದ್ರಶೇಖರ್‌ ಹಿರೇಮಠ್‌ ಅರ್ಜಿಯಿಂದ ಗೊತ್ತಾಗಿದೆ.

ಇನ್ನು, ಪ್ರಾಸಿಕ್ಯೂಷನ್‌ ವಿಭಾಗದ ಪ್ರಭಾರ ನಿರ್ದೇಶಕರಾಗಿದ್ದ ರಾಮಣ್ಣ(ಉಪ ನಿರ್ದೇಶಕ) ಅವರ ಹೆಸರನ್ನು ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿದೆ. “ರಾಮಣ್ಣ ಅವರು ತಮ್ಮನ್ನು ಹುದ್ದೆಯಿಂದ ಬಿಡುಗಡೆಗೊಳಿಸಲು ಯತ್ನಿಸಿದ್ದರು. ಆದರೆ ಯಶಸ್ವಿಯಾಗಿರಲಿಲ್ಲ. ಇದರಿಂದ ರಾಮಣ್ಣ ಅವರು ಸೇಡು ಮನೋಭಾವ ಹೊಂದಿದ್ದರು. ತಾವು ನಿವೃತ್ತರಾದ ನಂತರ ಅಂದರೆ ೨೦೧೪ರ ಜೂನ್ ೩೦ರಂದು ಅಧಿಕಾರ ಹಸ್ತಾಂತರಿಸಿದ್ದೆ. ಹೀಗಾಗಿ ದಾಖಲೆಗಳೆಲ್ಲವೂ ಅವರ ವಶದಲ್ಲಿದ್ದವು. ಇದನ್ನು ಬಳಸಿಕೊಂಡಿದ್ದ ರಾಮಣ್ಣ ಅವರು ದಾಖಲೆಗಳನ್ನು ತಿದ್ದಲಾಗಿದೆಯಲ್ಲದೆ, ತಮ್ಮ ಸ್ನೇಹಿತರಾಗಿದ್ದ ಎಚ್ ಟಿ ರವಿ ಎಂಬುವರಿಂದ ದೂರು ಕೊಡಿಸಿದ್ದಾರೆ,” ಎಂದು ಅರ್ಜಿಯಲ್ಲಿ ಆರೋಪಿಸಿದ್ದಾರೆ.

ನೇಮಕಾತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಪ್ರಾಧಿಕಾರದ ಸದಸ್ಯರೊಬ್ಬರು ಪರಿಶೀಲನೆ ನಡೆಸಿದ್ದರಲ್ಲದೆ, ಸಂದರ್ಶನ ನಡೆಯುವಾಗ ಯಾವ ದಾಖಲೆಯನ್ನೂ ತಿದ್ದಿರಲಿಲ್ಲ ಎಂದು ಆ ಸದಸ್ಯರೇ ವರದಿ ನೀಡಿದ್ದರು. ಹೀಗಾಗಿ ತಮ್ಮ ಅವಧಿಯಲ್ಲಿ ಯಾವುದೇ ಅಕ್ರಮಗಳು ನಡೆದಿಲ್ಲ ಎಂದು ಚಂದ್ರಶೇಖರ್‌ ಹಿರೇಮಠ್‌ ಅವರು ಸಮರ್ಥಿಸಿಕೊಂಡಿದ್ದಾರೆ.

ಚಂದ್ರಶೇಖರ್ ಹಿರೇಮಠ್‌ ಅವರು ಸರ್ಕಾರಿ ಅಭಿಯೋಜಕರಾಗಿದ್ದ ಸಂದರ್ಭದಲ್ಲಿ ೩,೦೦೦ಕ್ಕೂ ಹೆಚ್ಚು ಪ್ರಕರಣಗಳಲ್ಲಿ ವಾದಿಸಿದ್ದರು. ಇದರಲ್ಲಿ ದಂಡುಪಾಳ್ಯ, ಕಾಡುಗಳ್ಳ ವೀರಪ್ಪನ್‌ ಮತ್ತು ತೆಲಿಗಿ ಪ್ರಕರಣದಲ್ಲಿಯೂ ಸರ್ಕಾರವನ್ನು ಪ್ರತಿನಿಧಿಸಿದ್ದರಲ್ಲದೆ, ಆರೋಪಿಗಳಿಗೆ ಶಿಕ್ಷೆ ವಿಧಿಸಲು ಕಾರಣರಾಗಿದ್ದರು ಎಂಬುದನ್ನು ಅರ್ಜಿಯಲ್ಲಿ ವಿವರಿಸಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More